ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಳ ನಿರೀಕ್ಷೆಗಳ ಹೊಸ ವರ್ಷ

Last Updated 31 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನನ್ನ ಈ ಅಂಕಣದ ಓದುಗರಿಗೆಲ್ಲ 2014ನೇ ವರ್ಷವು ಅದ್ಭುತವಾಗಿರಲಿ ಎಂದು ನಾನು ಶುಭ ಹಾರೈ­ಸುವೆ. ಹೊಸ ವರ್ಷದ ಹೊಸ್ತಿಲಲ್ಲಿ ನಾವೆಲ್ಲ ನಿನ್ನೆಯಷ್ಟೇ ತೆರೆಮರೆಗೆ ಸರಿದಿರುವ ಹಳೆ ವರ್ಷದ ಕಹಿ ನೆನಪುಗಳನ್ನೆಲ್ಲ ಮರೆಯೋಣ. ಹಲ­ವಾರು ಕಾರಣಗಳಿಗಾಗಿ ಅದೊಂದು ಕೆಟ್ಟ ಕನಸೆಂದು ಭಾವಿಸಿ ಮರೆತು ಮುಂದು­ವರೆ­ಯೋಣ.

ಪ್ರತಿಯೊಬ್ಬರೂ ಭವಿಷ್ಯವನ್ನು ಹೊಸ ನಿರೀಕ್ಷೆಗಳೊಂದಿಗೆ ಎದುರು ನೋಡುವುದು ಸಹಜ­ವಾದದ್ದು. ಇಂತಹ ಆಸೆ ಮತ್ತು ಆಕಾಂಕ್ಷೆಗಳೇ ಜನ ಸಾಮಾನ್ಯರನ್ನು ದಣಿವರಿ­ಯದಂತೆ ದುಡಿಯಲು ಪ್ರೇರೆಪಿಸುತ್ತವೆ. ಉದ್ಯಮಿ­ಗಳಂತೂ ಸಹಜವಾಗಿಯೇ ಷೇರು ಮಾರು­ಕಟ್ಟೆಯಂತೆ ಸದಾ ಆಶಾವಾದಿ­ಯಾಗಿಯೇ ಇರುತ್ತಾರೆ. ಅವರೂ ಕೂಡ 2014ನೇ ವರ್ಷವನ್ನು ಅದೇ ಹೊಸ ಉತ್ಸಾಹ­ದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ.

ಮೊದಲಿಗೆ ನಾವು ಜಾಗತಿಕ ಆರ್ಥಿಕ ವಿದ್ಯ­ಮಾನ­ಗಳ ಮುನ್ನೋಟದತ್ತ ಗಮನ ಹರಿಸಿದ ನಂತರ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಆರ್ಥಿಕ ಚಟುವಟಿಕೆಗಳನ್ನು ವಿಮರ್ಶಿಸೋಣ,ಜಾಗತಿಕವಾಗಿ 2013ನೇ ವರ್ಷವನ್ನು ಆರ್ಥಿಕ ಚೇತರಿಕೆಯ ವರ್ಷ ಎಂದೇ ಪರಿಗಣಿ­ಸ­ಬೇಕಾಗುತ್ತದೆ. ಹಣಕಾಸು ಬಿಕ್ಕಟ್ಟಿನ ಗಾಯಗಳು ಒಂದೊಂದಾಗಿ ವಾಸಿಯಾದವು. ಅರ್ಥ­ವ್ಯವಸ್ಥೆಯು ತನ್ನ ಮೊದಲಿನ ಖದರಿಗೆ ಮರಳಿ ಆರೋಗ್ಯ­ಕರ ಮಟ್ಟದ ಆರ್ಥಿಕ ವೃದ್ಧಿ ಕಂಡಿತು. ಕೆಲ ಆರಂಭಿಕ ಲಕ್ಷಣಗಳೂ ನನ್ನಲ್ಲಿ ಹೊಸ ವರ್ಷ­ದಲ್ಲಿ ಈ ಪರಿಸ್ಥಿತಿ ಇನ್ನಷ್ಟು ಸುಧಾರಣೆಯಾಗುವ ಬಗ್ಗೆ ನನ್ನ್ನಲ್ಲಿ ಆಶಾವಾದ ಮೂಡಿಸಿವೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್, ಪ್ರತಿ ತಿಂಗಳ ಬಾಂಡ್ ಖರೀದಿ ಪ್ರಮಾಣವನ್ನು 85 ಶತ­ಕೋಟಿ ಡಾಲರ್ ಗಳಿಂದ 75 ಶತಕೋಟಿ ಡಾಲರ್ ಗಳಿಗೆ (ರೂ 5,10,000 ಕೋಟಿ­ಗಳಿಂದ ರೂ 4,50,000 ಕೋಟಿಗಳಿಗೆ) ಕಡಿಮೆ ಮಾಡಿ­ರು­ವುದಾಗಿ ಪ್ರಕಟಿಸಿದೆ.   ಅಮೆರಿಕದ ಅರ್ಥ­ ವ್ಯವಸ್ಥೆಗೆ ಆತ್ಮವಿಶ್ವಾಸ ತುಂಬುವ ಕ್ರಮ ಇದಾಗಿದೆ. ಈ ಹಿಂದಿನಂತೆ ಹಣಕಾಸು ಮಾರು­ಕಟ್ಟೆಗೆ ಸರ್ಕಾರದ ಬೆಂಬಲದ ಅಗತ್ಯ ಇಲ್ಲ ಎಂದು ಕೇಂದ್ರೀಯ ಬ್ಯಾಂಕ್ ನಂಬಿದೆ.

ವಿಶ್ವದಲ್ಲಿಯೇ ಅತಿದೊಡ್ಡ ಅರ್ಥ ವ್ಯವಸ್ಥೆ­ಯಾಗಿರುವ ಅಮೆರಿಕದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಮೂರನೆ ತ್ರೈಮಾಸಿಕದಲ್ಲಿ ಶೇ 4.1ರಷ್ಟು ವೃದ್ಧಿ ದಾಖಲಿಸಿದೆ. ಜಾಗತಿಕ  ಅರ್ಥ ವ್ಯವಸ್ಥೆಯೂ ಇದೇ ಬಗೆಯ ಬೆಳವಣಿಗೆ ದಾಖ­ಲಿಸುವ ಬಗ್ಗೆ ಇದೊಂದು ಅತ್ಯುತ್ತಮ ಸಂಕೇತವಾಗಿದೆ.

ಅಮೆರಿಕ­ವೊಂದೆ ಅಲ್ಲದೇ, ಜಪಾನ್ ಮತ್ತು ಜರ್ಮನಿ ದೇಶಗಳ ಆರ್ಥಿಕತೆಗಳೂ ಇತ್ತೀಚೆಗೆ ಉತ್ತಮ ಸಾಧನೆ ತೋರಿಸಿವೆ. ಅಮೆರಿಕವು ಚೇತ­ರಿಕೆಯ ಹಾದಿಗೆ ಮರಳುತ್ತಿರುವಂತೆ, ಪೂರ್ವ ಏಷ್ಯಾ ದೇಶಗಳೂ ಅದೇ ಹಾದಿಯಲ್ಲಿ ಸಾಗಿವೆ. ಐರೋಪ್ಯ ಒಕ್ಕೂಟದ ಸ್ಥಿತಿಗತಿ ಏನಾಗುತ್ತಿದೆ ಎನ್ನುವು­ದರತ್ತಲೇ ಈಗ ಎಲ್ಲರೂ ಗಮನ ಹರಿಸಿ­ದ್ದಾರೆ. 2014ರಲ್ಲಿ ಜಾಗತಿಕ ಅರ್ಥ ವ್ಯವಸ್ಥೆಗೆ ಯೂರೋಪ್ ಒಕ್ಕೂಟವು ಮಹತ್ವದ ಕೊಡುಗೆ ನೀಡ­ಬೇಕಾಗಿದೆ. ಇರಾನ್ ಜತೆಗಿನ ಉದ್ವಿಗ್ನ ಪರಿಸ್ಥಿತಿ ತಿಳಿಯಾಗಿರುವುದು ಮತ್ತು ಆ ದೇಶದ ವಿರುದ್ಧದ ಆರ್ಥಿಕ ದಿಗ್ಬಂಧನಗಳಲ್ಲಿ ಸಡಿಲಿಕೆ ಮಾಡಿ­ರು­ವುದು ಕೂಡ ಸಕಾರಾತ್ಮಕ ಬೆಳವಣಿಗೆ­ಯಾಗಿದೆ. ಇದರಿಂದ ಜಾಗತಿಕ ಮಾರು­ಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಕಡಿಮೆ­ಯಾಗುವ ಸಾಧ್ಯತೆಗಳು ಇವೆ.

ರಾಷ್ಟ್ರೀಯ ಮಟ್ಟದಲ್ಲಿ 2013ನೆ ವರ್ಷವನ್ನು ಖಂಡಿತವಾಗಿಯೂ ನೆನಪಿನಲ್ಲಿ ಇಟ್ಟು­­ಕೊಳ್ಳಲು ಮನಸ್ಸು ಬರುವುದಿಲ್ಲ. ದೇಶದ ಆರ್ಥಿಕ  ವೃದ್ಧಿ ದರವು (ಜಿಡಿಪಿ) ದಿಗಿಲು ಮೂಡಿ­ಸು­ತ್ತದೆ. `ಜಿಡಿಪಿ' ದರವು ಇತ್ತೀಚಿನ ವರ್ಷ­ಗಳಲ್ಲೇ ಅತ್ಯಂತ ಕಳಪೆ ಮಟ್ಟದಲ್ಲಿ ದಾಖ­ಲಾಗಿತ್ತು. ಜತೆಗೆ, ಸಕಾಲಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳದ ಸರ್ಕಾರದ ನಿರ್ಲಕ್ಷ್ಯವೂ ನಿರಾಶಾ­ದಾಯಕ ಪರಿಸ್ಥಿತಿಗೆ ಸಾಕಷ್ಟು ಪುಷ್ಟಿ ನೀಡಿತ್ತು.
ನಮ್ಮದು ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆಯಾಗಿದ್ದು, ಈ ಹಂತದಲ್ಲಿ ದಾಪು­ಗಾಲಿನ ಬೆಳವಣಿಗೆಯನ್ನೇ ದಾಖಲಿಸ­ಬೇಕಾಗಿತ್ತು. ಆದರೆ, ವಸ್ತುಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗಿದೆ.  ನಮ್ಮ ಅರ್ಥ ವ್ಯವಸ್ಥೆಯು ಬಸವನ­ಹುಳುವಿನಂತೆ ನಿಧಾನವಾಗಿ ತೆವಳುತ್ತಿದೆ.

ಅರ್ಥ ವ್ಯವಸ್ಥೆಗೆ ಅಗತ್ಯವಾದ ಶಕ್ತಿ ತುಂಬುವಲ್ಲಿ ಕೇಂದ್ರದಲ್ಲಿನ ಆಡಳಿತಾರೂಢ `ಯುಪಿಎ-2' ಸರ್ಕಾರದ ಸಾಮರ್ಥ್ಯವೆಲ್ಲ ಉಡುಗಿ ಹೋಗಿದ್ದು, ಅಧಿಕಾರಾವಧಿಯ ಕೊನೆ­ಯಲ್ಲಿ ತೆವಳಲೂ ಏದುಸಿರು ಬಿಡುತ್ತಿದೆ.  ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ `ಯುಪಿಎ' ಸರ್ಕಾರದ ಪರಿಸ್ಥಿತಿಯು ಗಾಯ­ಗೊಂಡ ಹೆಳವನಂತೆ ಆಗಿದೆ. ಇಂತಹ ಪರಿಸ್ಥಿತಿ­ಯಲ್ಲಿ ದೇಶ ಬಾಂಧವರಲ್ಲಿ ಬದಲಾವಣೆಯ ಹಸಿವು ಹೆಚ್ಚಿದೆ.

ಅಂತಹ ಬದಲಾವಣೆಯು 2014ರಲ್ಲಿ ನಿಜವಾಗುವ ಸಾಧ್ಯತೆ ಇದೆ. ವರ್ಷದ ಮೊದ­ಲಾರ್ಧ­ದಲ್ಲಿ ಸಾರ್ವತ್ರಿಕ ಚುನಾವಣೆ  ನಡೆಯಲಿದ್ದು, ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಪರ ನಿರ್ಣಾಯಕ ತೀರ್ಪು ಹೊರ­ಬೀಳುವ ಬಗ್ಗೆ ಸ್ಪಷ್ಟ ಸಂಕೇತಗಳು ಕಂಡು ಬರುತ್ತಿವೆ. ಇಂತಹ ನಿರೀಕ್ಷೆಯನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಮಾತ್ರ ಹಾಳು ಮಾಡುವ ಸಾಧ್ಯತೆ­ಗಳೂ ಇವೆ. ದೆಹಲಿ  ಸಾಧನೆಯ ಮಾಂತ್ರಿಕತೆ­ಯನ್ನು ರಾಷ್ಟ್ರೀಯ ಮಟ್ಟದಲ್ಲೂ  `ಎಎಪಿ' ಸಾಧಿಸಿ ತೋರಿಸಿದರೆ ಎನ್ ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಕ್ಷೀಣಿಸಲಿವೆ.

ಮೋದಿ ನಾಯಕತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳು ಅನೇಕರ ಪಾಲಿಗೆ ಅತ್ಯಾ­­ಕರ್ಷಕ­ವಾಗಿ ಕಾಣುತ್ತಿದೆ. ಒಂದು ವೇಳೆ ಮೋದಿ ಪ್ರಧಾನಿಯಾದರೆ ವಿದೇಶಿ ಬಂಡವಾಳ ಹರಿವು ಹೆಚ್ಚಬಹುದು, ರಾಜಕೀಯ ಸ್ಥಿರತೆ ಕಂಡು­ಬರಬಹುದು, ಅರ್ಥ ವ್ಯವಸ್ಥೆಯ ಪ್ರಮುಖ ವಲಯಗಳಲ್ಲಿ ರಚನಾತ್ಮಕ ಹೊಸ ಯೋಜನೆಗಳು ಕಾರ್ಯಗತಗೊಳ್ಳಬಹುದು. ಇದರ ಒಟ್ಟಾರೆ ಪರಿಣಾಮವಾಗಿ ದೇಶದ ಅರ್ಥ ವ್ಯವಸ್ಥೆ­ಯು ತನ್ನ ಈ ಮೊದಲಿನ ಆಕ್ರಮಣಕಾರಿ ಬೆಳ­ವಣಿಗೆ ಪಥಕ್ಕೆ ಮರಳಬಹುದು ಎಂದು ಅನೇಕರು ನಿರೀಕ್ಷಿಸುತ್ತಿದ್ದಾರೆ.
ನಾನು ಇನ್ನೊಂದು ಮಹತ್ವಾಕಾಂಕ್ಷೆಯ ಆಸೆ ಹೊಂದಿದ್ದೇನೆ. 2014ರಲ್ಲಿ ಭ್ರಷ್ಟಾಚಾರವು ಮತ್ತೆ ಕೇಂದ್ರ ಬಿಂದುವಾಗಿ ಗಮನ ಸೆಳೆಯ­ಲಿದ್ದು, ವ್ಯವಸ್ಥೆಯನ್ನು ಶುದ್ಧಗೊಳಿಸುವ ಪ್ರಕ್ರಿಯೆ ಚುರುಕಾಗಲಿದೆ ಎಂದೂ ನಾನು ಆಶಿಸಿರುವೆ.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಮತ್ತು ರಾಜಕೀಯ ಪಕ್ಷಗಳಿಗೆ ತಗುಲಿರುವ ಭ್ರಷ್ಟಾಚಾರದ ಸೋಂಕು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ­ಯಾಗ­ಬಹುದು ಎನ್ನುವುದು ನನ್ನ ನಿರೀಕ್ಷೆ­ಯಾಗಿದೆ. ಮಹಾರಾಷ್ಟ್ರದ ಆದರ್ಶ ಹೌಸಿಂಗ್ ಸೊಸೈಟಿ ಹಗರಣಕ್ಕೆ ರಾಹುಲ್ ಗಾಂಧಿ ನೀಡಿದ ಪ್ರತಿಕ್ರಿಯೆ ಮತ್ತು ಹಣದುಬ್ಬರ ನಿಗ್ರಹಿಸಲು ನೀಡಿದ ಗಡುವಿಗೆ, ದೇಶಿ ರಾಜಕೀಯದಲ್ಲಿ ಆಮ್ ಆದ್ಮಿ ಪಕ್ಷ ಬೀರಿದ ಪ್ರಭಾವವೇ ಮುಖ್ಯ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ದೆಹಲಿಯಲ್ಲಿ ಹೊಸ ಮುಖ್ಯಮಂತ್ರಿಯಾಗುತ್ತಿದ್ದಂತೆ
ಅರ­ವಿಂದ್ ಕೇಜ್ರಿವಾಲ್ ಅವರು ಬದಲಾವಣೆಗೆ ಬೀಸು­ತ್ತಿರುವ ಚಾಟಿ, ಹೊಸ ಭರವಸೆ ಮೂಡಿ­ಸಿವೆ. ಭ್ರಷ್ಟಾಚಾರವು ಇತರ ಎಲ್ಲ ಪಕ್ಷಗಳಲ್ಲಿ ಸಾಕಷ್ಟು ಭೀತಿ ಮೂಡಿಸಿದ್ದು, ಅಧಿಕಾರಕ್ಕೆ ಎರವಾಗುವ ಆತಂಕವನ್ನೂ ಮೂಡಿಸಿದೆ.  ಆಮ್ ಆದ್ಮಿ ಪಕ್ಷದ ಪ್ರಭಾವದಲ್ಲಿ ಇತರ
ರಾಜ­ಕೀಯ ಪಕ್ಷಗಳ ಸಾಧನೆ ಮಸುಕಾಗುವ ಸಾಧ್ಯತೆಗಳೂ ಇವೆ.

ಇನ್ನು, ರಾಜ್ಯದ ವಿಷಯಕ್ಕೆ ಬಂದರೆ, 2013ನೆ ವರ್ಷವು, ರಾಜ್ಯದ ಜನತೆಗೆ ಸಮ್ಮಿಶ್ರ ಫಲ ನೀಡಿದೆ. ಕಾಂಗ್ರೆಸ್ ಪಕ್ಷದ ಪರ ಮತದಾರರು ಸ್ಪಷ್ಟ ಜನಾಭಿಪ್ರಾಯ ನೀಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಮರಳಿರುವುದು ಮತ್ತು 5 ವರ್ಷಗಳ ಕಾಲ ಅಧಿಕಾರದಲ್ಲಿ ಇರುವುದು ರಾಜ್ಯದ ಪಾಲಿಗೆ ಪ್ರಮುಖ ಸಕಾರಾತ್ಮಕ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಕೊನೆಗೂ ರಾಜಕೀಯ ಸ್ಥಿರತೆ ನೆಲೆಗೊಂಡಿದೆ.

2008-13ರ ಅವಧಿಯಲ್ಲಿ ಬಿಜೆಪಿ ಸರ್ಕಾರದ ಮೂವರು ಮುಖ್ಯಮಂತ್ರಿಗಳು ಬದ­ಲಾ­ದರು. ರಾಜಕೀಯ ಪಕ್ಷಗಳು ಹೋಳಾದವು. ಇಂತಹ ರಾಜಕೀಯ ಅನಿಶ್ಚಿತತೆಯ ಫಲವಾಗಿ ನಮ್ಮ ಜನರು ಸಾಕಷ್ಟು ನಲುಗಿದರು. ಕೈಗಾ­ರಿಕೆಗಳೂ ಸಂಕಷ್ಟದ ಪರಿಸ್ಥಿತಿ ಎದುರಿಸು­ವಂತಾಯಿತು. ಅದೆಲ್ಲ ಈಗ ಇತಿಹಾಸ ಬಿಡಿ.

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರಂಭದ ದಿನದಿಂದಲೇ ಉತ್ತಮ ಆಡಳಿತ ನೀಡಲಿದೆ ಎಂದು ನಾನು ಆಶಿಸಿದ್ದೆ. ಸರ್ಕಾರದ ಇದುವರೆಗಿನ ಸಾಧನೆ ಕಂಡು ನನಗೆ ನಿರಾಶೆಯಾಗಿದೆ. ಸಿದ್ಧರಾಮಯ್ಯ ಅವರಲ್ಲಿ ಈ ಹಿಂದೆ ಇದ್ದ ಚುರುಕು, ಉತ್ಸಾಹದ ಗುಣಗಳು ನನಗೆ ಈಗ ಕಾಣುತ್ತಿಲ್ಲ. ಅವರಲ್ಲಿದ್ದ ಇಂತಹ ಗುಣಗಳೇ ನನ್ನ ನಿರೀಕ್ಷೆಗಳು ಗರಿಗೆದರುವಂತೆ ಮಾಡಿದ್ದವು.  ಹಲವಾರು ವಲಯಗಳಲ್ಲಿನ ಚಟುವಟಿಕೆಗಳು ಕುಂಠಿ­ತ­ಗೊಂಡಿದ್ದು, 2014ರಲ್ಲಿ ಮಾತ್ರ ರಾಜ್ಯವು ಉತ್ತಮ ದಿನಗಳನ್ನು ಕಂಡೀತು ಎಂದು ಆಶಿಸ­ಬಹುದು.

ನಾನು 1960ರಿಂದಲೇ ಬೆಂಗಳೂರಿನ ನಿವಾಸಿ­ಯಾಗಿದ್ದು, ಈ ಅದ್ಭುತ ನಗರದಲ್ಲಿಯೇ ಬೆಳೆದು ದೊಡ್ಡವನಾಗಿರುವೆ. ಅನೇಕ ಸರ್ಕಾರ­ಗಳು ಬಂದು ಹೋಗಿವೆ, ಮುಖ್ಯಮಂತ್ರಿಗಳು ಬದಲಾಗಿದ್ದಾರೆ, ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಅನೇಕ ಕಮಿಷನರ್ ಗಳು ಬಂದು ಹೋಗಿದ್ದಾರೆ. ಅವರಿಂದ ಬೆಂಗಳೂರು ಮಹಾನಗರಕ್ಕೆ ಹೆಚ್ಚಿನ ಒಳಿತೇನೂ ಆಗಿಲ್ಲ.

ಬೆಂಗಳೂರಿನ ಮೂಲ ಸೌಕರ್ಯಗಳು ಇಷ್ಟು ಹದಗೆಟ್ಟ ಪರಿಸ್ಥಿತಿಯಲ್ಲಿ ಇದ್ದಿರಲಿಲ್ಲ.  2013­ರಲ್ಲಿ ಬೆಂಗಳೂರು ಮಹಾನಗರದ ರಸ್ತೆಗಳು ಹಿಂದೆಂದೂ ಇಲ್ಲದಷ್ಟು ಹದಗೆಟ್ಟು ಹಳ್ಳ ಹಿಡಿ­ದಿವೆ. ಓದುಗರೂ ನನ್ನ ಅನಿಸಿಕೆಗೆ ಸಮ್ಮತಿ ಸೂಚಿ­ಸು­ವಿರಿ ಎನ್ನುವುದನ್ನು ನಾನು ಬಲ್ಲೆ. ರಸ್ತೆಗಳ ಗುಂಡಿ ಮುಚ್ಚಿ, ದುರಸ್ತಿ ಮಾಡಲು ಮರೆಯ­ಬೇಡಿ ಎಂದು ನಾನು ಈ ಅಂಕಣದ ಮೂಲಕ ಸಂಬಂ­ಧಿ­ಸಿದ ಅಧಿಕಾರಿಗಳಿಗೆ ಮನವಿ ಮಾಡಿ­ಕೊಳ್ಳುವೆ. ತೆರಿಗೆ ಹಣದಲ್ಲಿ ಅಧಿಕಾರಿ­ಗಳು ಮಾಡ­ಬಹುದಾದ ಕನಿಷ್ಠ ಕೆಲಸ ಇದಾಗಿದೆ.

 ಪರಸ್ಪರ ಸಂಪರ್ಕ ಹೊಂದಿರುವ ಆಧುನಿಕ ಜಗತ್ತಿನಲ್ಲಿ  ಸಣ್ಣ ಪುಟ್ಟ ಸಂಗತಿಗಳೂ ಇಡೀ ಉತ್ಸಾಹ­­ವನ್ನೇ ಉಡುಗಿಸಬಲ್ಲವು. ನಾನು ಮಾತ್ರ ಆಶಾವಾದಿಯಾಗಿರುವೆ. ಹೊಸ ವರುಷ­ದಲ್ಲಿ ನಿರೀಕ್ಷಿಸಿದ ಬದಲಾವಣೆಗಳು ಘಟಿಸಲಿ ಎಂದು ಆಶಿಸುತ್ತ ಇನ್ನೊಮ್ಮೆ ನನ್ನ ಓದುಗರಿಗೆ ಹೊಸ ವರ್ಷದ ಶುಭಾಶಯ ಕೋರುವೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT