ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿಯಾ: ಬರಹ ಧರ್ಮ ದಂಗೆ

Last Updated 15 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಬಹಿಯಾ- ಬ್ರೆಜಿಲ್‌ನ ಅಟ್ಲಾಂಟಿಕ್ ಕರಾವಳಿಯ ಪ್ರಾಂತ್ಯ. ಅಲ್ಲಿ ನಡೆದ ಗುಲಾಮರ ದಂಗೆ ವಿಶೇಷವಾದ ಅಧ್ಯಯನಗಳಿಗೆ ಗುರಿಯಾಗಿದೆ.ಕೊಲಂಬಸ್ 1492ರಲ್ಲಿ `ಹೊಸ ಜಗತ್ತ~ನ್ನು ಕಂಡುಹಿಡಿದಿದ್ದ. ಬಿಳಿಯ ಜನ ಗೆಲ್ಲಬೇಕಾದ, ತಮ್ಮದು ಮಾಡಿಕೊಳ್ಳಬೇಕಾದ ಲೋಕ ಅನಾವರಣಗೊಂಡಿತ್ತು. 1495ರ ತನ್ನ ಎರಡನೆಯ ಪ್ರಯಾಣದಲ್ಲಿ ಕೊಲಂಬಸ್ ಇಬ್ಬರು ಆಫ್ರಿಕನ್ ಗುಲಾಮರನ್ನು ಕರೆತಂದ. ಬಲವಂತದ ವಲಸೆ, ವಸಾಹತೀಕರಣ ಆರಂಭವಾಗಿತ್ತು.

ಆಫ್ರಿಕದ ಪಶ್ಚಿಮ ಕರಾವಳಿಯಿಂದ ಗುಲಾಮರನ್ನು ಕರೆತರುವುದು ಶುರುವಾಯಿತು. ಹೊಸ ಜಗತ್ತಿನ ಗುಲಾಮರನ್ನು ಮೊದಲು ಸ್ಪೇನಿನಿಂದ ಆಮದು ಮಾಡಿಕೊಳ್ಳುತಿದ್ದರು, ಆದರೆ ನೇರವಾಗಿ ಆಫ್ರಿಕದಿಂದ ಗುಲಾಮರನ್ನು ಒದಗಿಸುತಿದ್ದವರು ಪೋರ್ಚುಗೀಸರು. ಕೊಲಂಬಿಯದ ಕ್ಯಾರಿಬಿಯನ್ ದಂಡೆಗೆ ಕರೆದೊಯ್ದು ಅವರನ್ನು ಸ್ಪೇನಿನವರಿಗೆ ಮಾರುತಿದ್ದರು. ಅಂಗೋಲದಿಂದ ತಂದ ಗುಲಾಮರನ್ನು ಬಲುಮಟ್ಟಿಗೆ ಬ್ರೆಝಿಲ್‌ನ ಪೋರ್ಚುಗೀಸ್ ಕಾಲನಿಗೆ ಕಳಿಸುತಿದ್ದರು.

ಹಡಗು ಹತ್ತಿಸುವ ಮುನ್ನ ಅಂಗೋಲದ ಗುಲಾಮರನ್ನು ಹತ್ತಿರದ ಚರ್ಚಿನಲ್ಲಿ, ಅಥವ ಬಂದರಿನ ಮುಖ್ಯ ಸರ್ಕಲಿನಲ್ಲಿ ಗುಂಪುಗೂಡಿಸುತಿದ್ದರು. ಅಲ್ಲಿ ಅವರನ್ನು ಕ್ರಿಶ್ಚಿಯನ್‌ಗೊಳಿಸುತಿದ್ದರು. ಯಾಕೆಂದರೆ ಗುಲಾಮರ ವ್ಯಾಪಾರದಿಂದ ಕ್ರಿಶ್ಚಿಯನ್ ಧರ್ಮದ ಪ್ರಸಾರವಾಗುತ್ತದೆ ಅನ್ನುವ ಕಾರಣಕ್ಕೆ ಚರ್ಚು ಗುಲಾಮಗಿರಿಯನ್ನು ಸಮರ್ಥಿಸುತಿತ್ತು. 

ಗುಲಾಮ ಸೆರೆಯಾಳುಗಳ ನಡುವೆ ನಡೆಯುತ್ತ ಅವರ ಪಾದ್ರಿ ಬಾಯಿಗೆ ಉಪ್ಪಿನ ಹರಳು ಹಾಕುತಿದ್ದ; ಆಮೇಲೆ ಅವರ ಭುಜಕ್ಕೆ, ಎದೆಗೆ ಎಣ್ಣೆ ಸವರಿ ಕಾಯಿಸಿದ ಕಬ್ಬಿಣದಿಂದ ಮುದ್ರೆ ಒತ್ತುತಿದ್ದರು. ರಾಜಮುದ್ರಿಕೆ, ಶಿಲುಬೆಯ ಮುದ್ರಿಕೆ ಅಥವಾ ಖರೀದಿಸಿದ ಯಜಮಾನನ ಮುದ್ರಿಕೆ; ಕೆಲವೊಮ್ಮೆ ಅವರು ಪ್ರಯಾಣಮಾಡಿ ಬಂದ ಹಡಗಿನ ಹೆಸರು ಕೂಡ ಇರುತಿತ್ತು. ಪಾದ್ರಿ ಅವರಿಗೆಲ್ಲ ಹೊಸ ಕ್ರಿಶ್ಚಿಯನ್ ಹೆಸರು ಬರೆದಿದ್ದ ಚೀಟಿ ನೀಡುತಿದ್ದ.

ನಿಮ್ಮೂರು ಮರೆತುಬಿಡಿ, ಪೋರ್ಚುಗೀಸಿಗೆ ಹೋಗುತಿದ್ದೀರಿ; ಹೊಸ ಧರ್ಮಕ್ಕೆ ಸೇರಿದವರು ನೀವು; ನಾಯಿ, ಇಲಿ, ಕುದುರೆ ತಿನ್ನಬೇಡಿ; ಸಮಾಧಾನವಾಗಿರಿ ಅಂತ ಉಪದೇಶ ಮಾಡುತಿದ್ದ. ಸ್ವತಂತ್ರರಾಗಿದ್ದ ಆಫ್ರಿಕನ್ನರು ಕ್ರಿಶ್ಚಿಯನ್ನರೂ ಗುಲಾಮರೂ ಆಗುತಿದ್ದರು. ಸ್ವಾತಂತ್ರ್ಯ ನಾಶಕ್ಕೆ ಮಂತ್ರದ ಬೆಂಬಲ, ಬರಹದ ಬೆಂಬಲ, ಹೊಸ ಹೆಸರಿನ ಬೆಂಬಲ.

ವ್ಯಕ್ತಿಯ ಚಹರೆಯನ್ನು ಭಾಷೆ ಮೂಲಕ ತಿದ್ದುಪಡಿ ಮಾಡುವ ಪ್ರಯತ್ನ ಈ ದೀಕ್ಷಾವಿಧಿ.
19ನೇ ಶತಮಾನದ ಮೊದಲಲ್ಲಿ ಈಗಿರುವಂತೆಯೇ ಅಟ್ಲಾಂಟಿಕ್ ಸಾಗರದೊತ್ತಿನ ದಕ್ಷಿಣ ಅಮೆರಿಕದ ಟ್ರಾಪಿಕಲ್ ದೇಶಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಸಂಖ್ಯೆ ಕರಿಯರದ್ದೇ ಆಗಿತ್ತು. 1817ರಲ್ಲಿ ಬ್ರೆಜಿಲಿನ ಜನಸಂಖ್ಯೆ 3,817,000. ಇದರಲ್ಲಿ 2,55,0000 ಪ್ರೆಟೋ ಅಥವ ಕರಿಯರು, ಮತ್ತು ಪಾರ್ಡೊ (ಸಂಕರವರ್ಣದವರು).

ಗುಲಾಮಗಿರಿಯ ವಿರುದ್ಧದ ಮೊದಮೊದಲ ಪ್ರತಿಭಟನೆ ಪಲಾಯನದ ರೂಪ ಪಡೆಯುತಿತ್ತು. ಓಡಿ ಹೋದವರದ್ದೇ ತಾತ್ಕಾಲಿಕ ವಸತಿಗಳು ಹುಟ್ಟಿಕೊಳ್ಳುತಿದ್ದವು. ಅವು ದುರ್ಗಮವಾದ, ತಲುಪಲು ಕಷ್ಟವಾದ ಜಾಗಗಳಲ್ಲಿರುತಿದ್ದವು. ಇವುಗಳಲ್ಲಿ ಪಾಮರ್ಸ್‌ ಸಮುದಾಯ ಪ್ರಸಿದ್ಧವಾದದ್ದು. ಸುಮಾರು 5 ಸಾವಿರ ತಲೆತಪ್ಪಿಸಿಕೊಂಡ ಗುಲಾಮರು, ಕರಿಯರು, ಇಂಡಿಯನ್ನರು, ಮುಲಾತೊಗಳು, ಪೋರ್ಚುಗೀಸ್ ಸೈನ್ಯ ತೊರೆದುಬಂದವರು ಎಲ್ಲ ಇದ್ದರು. ಇದು ಸುಮಾರು 70 ವರ್ಷ ಕಾಲ ಉಳಿದಿತ್ತು.

ಪಲಾಯನದ ಜೊತೆಗೇ ದಂಗೆ ಕೂಡ ಪ್ರತಿಭಟನೆಯದೊಂದು ರೂಪವಾಗಿತ್ತು. ಗುಲಾಮ ಸೈನ್ಯಗಳು ರೂಪತಳೆದವು. ಒಡೆಯರ ಕುಟುಂಬಗಳ ನಡುವಿನ ಜಗಳದಲ್ಲಿ ಪಾಲ್ಗೊಳ್ಳುತಿದ್ದರು. ಕ್ರಮೇಣ ಆಳುವ ಬಿಳಿಯರ ವಿರುದ್ಧ ಸಣ್ಣಪುಟ್ಟ ದಂಗೆಗಳು ಶುರುವಾದವು. ಬಹಿಯಾದಲ್ಲಿ, ಸಾಓ ಸಾಲ್ವಡಾರ್ ನಗರದಲ್ಲಿ ನಡೆದದ್ದು ತೀರ ಗಂಭೀರವಾದ ದಂಗೆ.

ಕರಿಯರ ಸಂಖ್ಯೆ ಹೆಚ್ಚುವುದು ಅಪಾಯ ಎಂದು ಗೊತ್ತಿದ್ದರೂ ಕಾಫಿ ಪ್ಲಾಂಟೇಶನುಗಳಲ್ಲಿ ದುಡಿಯಲು ಹೊಸಬ ಗುಲಾಮರು ಬೇಕಾಗಿದ್ದರು. ಹೀಗೆ ಬಂದವರಲ್ಲಿ ಬಹಳಷ್ಟು ಜನ ಯೋರುಬಾ ಮೂಲದವರು. ಅವರ ಭಾಷೆಯೇ ಬಹಿಯಾ ಆಫ್ರಿಕನ್ನರ ರಾಷ್ಟ್ರಭಾಷೆಯಾಯಿತು. ಸ್ವತಂತ್ರರಾದ ಗುಲಾಮರು ಮತ್ತು ಪ್ಲಾಂಟೇಶನ್ ಅಲ್ಲದೆ ಮಿಕ್ಕ ವ್ಯಾಪಾರ ಮತ್ತು ಕಸುಬುಗಳಲ್ಲಿ ತೊಡಗಿದ್ದ ಮುಲಟ್ಟೋಗಳು (ಕರಿಯ ಮತ್ತು ಬಿಳಿಯ ತಂದೆತಾಯಿಗಳ ಮಕ್ಕಳು) 1835ರ ಪ್ರತಿಭಟನೆಯ ಮುಖಂಡರಾಗಿದ್ದರು.

ದಂಗೆಯನ್ನು ವಿವರವಾಗಿ ಯೋಜಿಸಿದ್ದರು. ನಗರದಲ್ಲಿ ಎಲ್ಲ್ಲ್ಲೆಲಿ ಬೆಂಕಿ ಹಚ್ಚಬೇಕು, ಅರಮನೆಯ ಕಾವಲಿನವರ ಮೇಲೆ, ಅಶ್ವದಳದ ಲಾಯದ ಮೇಲೆ, ತೋಪುಖಾನೆಗಳ ಉಗ್ರಾಣಗಳ ಮೇಲೆ, ಮುನಿಸಿಪಲ್ ಪೋಲೀಸರ ಮೇಲೆ ಯಾವತ್ತು, ಎಷ್ಟು ಹೊತ್ತಿಗೆ ದಾಳಿ ನಡೆಯಬೇಕು ಅನ್ನುವ ವಿವರವಾದ ಯೋಜನೆ ಸಿದ್ಧವಾಗಿತ್ತು.
 
ಅಂದು ಭಾನುವಾರ ಬೆಳಗ್ಗೆ ಮನೆಯ ಗುಲಾಮರು ನೀರು ತರಲು ಹೋಗಿದ್ದಾಗ, ಒಡೆಯರು ಚರ್ಚಿನ ಕೆಲಸ, ಪೂಜೆಗಳಲ್ಲಿ ಮುಳುಗಿದ್ದಾಗ ದಾಳಿ ನಡೆಯಬೇಕಿತ್ತು. ದಂಗೆಯ ಹಿಂದಿನ ದಿನ ಇಬ್ಬರು ಯೋರುಬ ಮಾಜಿ ಗುಲಾಮ ಹೆಂಗಸರು ದಂಗೆ ಬಗ್ಗೆ ಅಧಿಕಾರಿಗಳಿಗೆ ಸುಳಿವು ನೀಡಿದ್ದರು. ದಂಗೆಯ ಮುಖಂಡರು ಬೆಲ್‌ಕಾಯರ್ ಮತ್ತು ಕ್ಯಾಸ್ಪರ್ ಬಳಸುತಿದ್ದ ಎರಡು ಕಟ್ಟಡಗಳ ಮೇಲೆ ಸೈನಿಕರು ದಾಳಿಮಾಡಿದರು.
 
ಎರಡೂ ಎಡೆಗಳಲ್ಲಿ ಮುಸ್ಲಿಂ ಧರ್ಮ ಗುರುಗಳಿದ್ದರು- ಇಂಗ್ಲಿಷರ ಮನೆಗಳಲ್ಲಿ ದುಡಿಯುತಿದ್ದ ಗುಲಾಮರಿಗಾಗಿ ಧರ್ಮಬೋಧನೆಯ ಪಾಠಶಾಲೆ ಅಲ್ಲಿ ನಡೆಯುತಿತ್ತು. ದಂಗೆಯಲ್ಲಿ ಸುಮಾರು 800 ಜನ ಪಾಲ್ಗೊಂಡಿದ್ದರು. 14 ಸಾವು, 326 ಬಂಧನ, ಅದರಲ್ಲಿ 26 ಹೆಂಗಸರು 286 ಜನ ಒಂಬತ್ತು ವರ್ಷ ನಡೆದ ವಿಚಾರಣೆ ಎದುರಿಸಿದರು, ಗುಲಾಮರಿಗೆ ನೂರು ಚಡಿ ಏಟು ಶಿಕ್ಷೆ- ಇವು ಸ್ಥೂಲವಿವರಗಳು, ಅಕ್ಷರಬಲ್ಲವರನ್ನೆಲ್ಲ ಗಡೀಪಾರು ಮಾಡಿದ್ದು ಭವಿಷ್ಯದ ಸುರಕ್ಷಾ ಕ್ರಮ.

1835ರಲ್ಲಿ ನಡೆದ ದಂಗೆ ವಿಫಲವಾದರೂ ಯಾಕೆ ಮುಖ್ಯ? ಬ್ರೆಸಿಲ್‌ನಲ್ಲಿದ್ದಂಥದೇ ಪರಿಸ್ಥಿತಿ ಆಫ್ರಿಕದ ಕೆಲವು ರಾಜ್ಯಗಳಲ್ಲಿದ್ದರೂ ಅಲ್ಲಿ ಯಾಕೆ ಗುಲಾಮರ ದಂಗೆ ನಡೆಯಲಿಲ್ಲ?
ಬರಹಕ್ಕೊಳಗಾದ `ಗ್ರಂಥ~ವನ್ನು ಆಧರಿಸಿದ ಧರ್ಮ ದಮನಕ್ಕೆ ಕಾರಣವಾಗುವಂತೆ ಬಿಡುಗಡೆಯ ಪ್ರಚೋದನೆಗೂ ಕಾರಣವಾಗುತ್ತದೆ; ದಕ್ಷಿಣ ಆಫ್ರಿಕದ ದಮನಿತರು ನುಡಿಯೊಳಗಷ್ಟೇ ಬದುಕಿದ್ದ ಸಮೂಹಗಳು, ದಂಗೆಗೆ ಪ್ರಚೋದಿಸುವ, ಪ್ರೋತ್ಸಾಹಿಸುವ ಗ್ರಂಥ ಅವರಿಗೆ ಇರಲಿಲ್ಲ ಅನ್ನುವುದು ಒಂದು ಸಂಭವನೀಯ ಉತ್ತರ.

ಬ್ರೆಜಿಲ್‌ನಲ್ಲಿದ್ದ ಗುಲಾಮರು ಅನಾಗರಿಕರಲ್ಲ, ಅರಾಬಿಕ್ ಓದು ಬರಹ ಗೊತ್ತಿದ್ದ ಯೋಧ ಕುಲದವರು. ಕುರಾನ್ ಓದುವ ಕ್ಲಬ್ ಸ್ಥಾಪಿಸಿದ್ದರು. ಆಗಿನ ಬ್ರೆಸಿಲ್‌ನಲ್ಲಿ ಅಕ್ಷರಸ್ಥ ಮುಸ್ಲಿಮರು ಹೆಚ್ಚಿದ್ದರು, ಬಿಳಿಯ ಒಡೆಯರು ಅನಕ್ಷರಸ್ಥರು, ಅಥವಾ ಅರೆಅಕ್ಷರಸ್ಥರಾಗಿದ್ದರು. ನೀರು ಮಾರುವವರು, ಗೇಣಿ, ದರ್ಜಿ, ಸುಣ್ಣ ತಯಾರಿ, ಕಮ್ಮಾರ, ಕಟುಕ- ಇವರು ಯಾರೂ ಅನಕ್ಷರಸ್ಥ ಪ್ಲಾಂಟೇಶನ್ ಕೆಲಸಗಾರರಲ್ಲ. ಅವರದ್ದೇ ಒಂದು ಥರ ಸಹಕಾರ ಸಂಘವಿತ್ತು. ಬ್ರೆಸಿಲ್‌ನಲ್ಲಿದ್ದ ಗುಲಾಮರಿಗೂ ಆಫ್ರಿಕದ ನೆಲಕ್ಕೂ ಸಂಪರ್ಕ ಇತ್ತು. ಇಸ್ಲಾಂ ಜಗತ್ತಿನೊಡನೆಯೂ ಸಂಪರ್ಕವಿತ್ತು.

ಬ್ರೆಜಿಲ್ ಗುಲಾಮರು ಕೋಟುಗಳ ಮೇಲೆ ಲೆದರ್ ಪೌಚುಗಳೊಳಗೆ ಸೂರಾಗಳನ್ನು ಬರೆಸಿಕೊಳ್ಳುತಿದ್ದರು. ಶಬ್ದಕ್ಕೆ (ಮತ್ತು ಗ್ರಂಥಕ್ಕೆ) ಮಂತ್ರ ಶಕ್ತಿ ಇದೆ ಅನ್ನುವ ನಂಬಿಕೆ ಇದಕ್ಕೆ ಕಾರಣ. ಸೂರಾಗಳನ್ನು ಬರೆದ ಹಲಗೆಯನ್ನು ತೊಳೆದ ನೀರನ್ನು ಕುಡಿಯುವ ಸಂಪ್ರದಾಯವೂ ಇತ್ತು. ಅಕ್ಷರ ಸತ್ಯವನ್ನು ಒಳಗುಮಾಡಿಕೊಳ್ಳುವ ಬಯಕೆಯದೊಂದು ರೂಪ ಇದು.

ಲಿಖಿತ ರೂಪದ ಇಸ್ಲಾಂ ದಂಗೆಗೆ ಒಂದು ಥರದ ವೈಚಾರಿಕ ಬೆಂಬಲ ನೀಡಿತು. ಬಿಳಿಯರು ಸಾಯಲಿ ಅನ್ನುವ ಐಡಿಯಾ ಆಫ್ರಿಕನ್ ಗುಲಾಮರ ಪ್ರತಿಭಟನೆಗಳ ಒಂದು ಲಕ್ಷಣ. ಅಷ್ಟೇ ಅಲ್ಲ ಪಶ್ಚಿಮ ಆಫ್ರಿಕದಲ್ಲೂ. ಅಲ್ಲಿ ಬಿಳಿಯರು ಅನ್ನುವುದಕ್ಕೆ ಬಳಸುವ ಪದ `ನಸಲ~. ಅದು ಕ್ರಿಶ್ಚಿಯನ್ ಅನ್ನುವ ಅರ್ಥದ ಅರಾಬಿಕ್ ಪದ `ನಝರೀನ್~ನಿಂದ ಬಂದದ್ದು. ಬಹಾಯ್ ದಂಗೆಯ ಶಕ್ತಿ ಇದ್ದದ್ದು ಧರ್ಮ ವ್ಯವಸ್ಥೆಯಲ್ಲಿ; ಧರ್ಮ ಬೋಧನೆಗಳ ಪ್ರಚಾರದಲ್ಲಿ. ಕ್ರಿಶ್ಚಿಯನ್ ಬಿಳಿಯರ ಪ್ರಾಧಾನ್ಯವನ್ನು ಪ್ರತಿರೋಧಿಸುವುದಕ್ಕೆ ವೈಚಾರಿಕ ಕೇಂದ್ರ ದೊರೆತದ್ದು ಆಫ್ರಿಕದ ಇಸ್ಲಾಂ ಧರ್ಮದಿಂದ. 

ಹದಿನೆಂಟನೆಯ ಶತಮಾನದ ಕೊನೆಯಲ್ಲಿ ನಡೆದ ಫ್ರೆಂಚ್ ಕ್ರಾಂತಿಯ `ಎಲ್ಲ ಮನುಷ್ಯರೂ ಸಮಾನರು, ಸ್ವತಂತ್ರರು, ಸಹೋದರರು~ ಅನ್ನುವ ಸರಳೀಕೃತ, ಸಾಮಾನ್ಯರೂಪದ ಘೋಷಣೆ ದಮನಿತರ ಅಪೇಕ್ಷೆಗಳ ಮಟ್ಟಕ್ಕೆ ಬಾರದ ಸಾಮಾಜಿಕ ವ್ಯವಸ್ಥೆಯನ್ನು ನಾಶಮಾಡಲು ಅಗತ್ಯವಾದ ಸ್ಪಷ್ಟ ವೈಚಾರಿಕತೆಯನ್ನು ಒದಗಿಸಿತ್ತು.

ಬ್ರೆಜಿಲ್‌ನ ಗುಲಾಮರ ದಂಗೆಯಲ್ಲೂ ಇಸ್ಲಾಂ ಅಂಥದೇ ಪಾತ್ರ ವಹಿಸಿತ್ತು. ಬಹಳಷ್ಟು ಮುಖ್ಯ ದಂಗೆಗಳಲ್ಲಿ ಆಗುವಂತೆ ಬ್ರೆಜಿಲ್‌ನಲ್ಲೂ ಕ್ರಾಂತಿಯ ಮುಖಂಡರು ಅಕ್ಷರಸ್ಥರು, ಭಾಗವಹಿಸಿದ ಅನೇಕರು ಅಲ್ಲ. ಇಸ್ಲಾಂ ಪ್ರೇರಿತ ದಂಗೆಯಲ್ಲೂ ಸಾಕ್ಷರತೆಯ ಪ್ರಭಾವವಿತ್ತು. ಅದು ಮತ್ತೊಂದು `ಪುಸ್ತಕ~ವನ್ನು ಅನುಸರಿಸುವರ ಆಳ್ವಿಕೆಯನ್ನು ಧಿಕ್ಕರಿಸುವ ಐಡಿಯಾಲಜಿಯಾಗಿ ವ್ಯಕ್ತವಾಯಿತು.

ಪುಸ್ತಕಗೊಂಡ ಧರ್ಮಗಳು ನುಡಿಧರ್ಮಗಳಿಗಿಂತ ಭಿನ್ನ. ನುಡಿಯೊಳಾಗದ ಸಂಸ್ಕೃತಿಯಲ್ಲಿ ಧರ್ಮ ಅನ್ನುವುದು ಜನಸಂಖ್ಯಾ ಗಡಿಗೆ ಮಿತವಾದದ್ದು; ಆಯಾ ಗುಂಪು ಆಯಾ ಕಾಲ, ದೇಶದಲ್ಲಿ ಪಾಲನೆಯಾಗುವ ಪದ್ಧತಿ ಸಮೂಹ. ಬರಹಗೊಂಡ ಧರ್ಮಗಳು ಬುಡಕಟ್ಟಿನ ಅಥವ ರಾಷ್ಟ್ರೀಯ ಗಡಿಗಳನ್ನು ಮೀರಿ ವಿಶ್ವಾತ್ಮಕವಾಗಲು ಬಯಸುತ್ತವೆ.

ನುಡಿಮಾತ್ರವಾಗಿರುವ ಧರ್ಮ ಪದ್ಧತಿ ದಿನನಿತ್ಯದ ಚಟುವಟಿಕೆಗೆ ನಿಕಟವಾಗಿರುತ್ತವೆ, ಸಾಂದರ್ಭಿಕಕ್ಕೆ ಬದ್ಧವಾಗಿರುತ್ತವೆ, ಸತ್ಯವು ಯಾವುದೋ ಅನುಲ್ಲಂಘನೀಯ ಪಠ್ಯದಲ್ಲಿ ವಾಸಮಾಡುತಿರುವುದಲ್ಲ, ಅದಕ್ಕಾಗಿ ನಿತ್ಯದ ಬದುಕಿನಲ್ಲೇ ನಿರಂತರ ಹುಡುಕಾಟ, ಅನ್ವೇಷಣೆ, ಹಳೆಯ ಪ್ರಶ್ನೆಗಳಿಗೆ ಹೊಸ ಅಗತ್ಯ ಎಂದು ಭಾವಿಸುತ್ತವೆ. ಆಕಾಶ, ಭೂಮಿ, ಹಿರೀಕರು ಅನ್ನುವ ಸ್ಥಿರ ಬಿಂದುಗಳೊಡನೆ ಚಿಕ್ಕಪುಟ್ಟ ದೇವತೆಗಳು, ಗುಡಿಗಳು ಕೂಡ ಇರುತ್ತವೆ. ಹೊಸ ದೇವರುಗಳೂ ಸೃಷ್ಟಿಯಾದಾವು.

ಅಕ್ಷರಸ್ಥ ಜನಕ್ಕೆ ಬರಹರೂಪಕ್ಕಿಳಿದ ಪಠ್ಯ ಅಧಿಕೃತವಾಗುತ್ತದೆ. ಉಕ್ತಿಗೆ ಹೋಲಿಸಿದರೆ ಬರಹ ಸಂಪ್ರದಾಯನಿಷ್ಠ. ನುಡಿಯ ಯಾವ ಒಂದು ಆವೃತ್ತಿಗೂ ಇಲ್ಲದ ಪ್ರಮಾಣಗುಣ ಬರಹದ ಆವೃತ್ತಿಗೆ ಪ್ರಾಪ್ತ. ಬರಹಗೊಂಡದ್ದು ಏಕದೇವ ಅಲ್ಲದಿದ್ದರೂ ಒಬ್ಬ ದೇವ ಮುಖ್ಯನಾಗಿರುವ ವಿಶ್ವದತ್ತ ಮುಖಮಾಡಿರುತ್ತದೆ.

ಅಸಹನೆಗೂ ವಿಶ್ವಾತ್ಮಕತೆಗೂ ಸಂಬಂಧವಿದೆ. ಎಲ್ಲ ಅಕ್ಷರಸ್ಥ ಧರ್ಮಗಳೂ ವಿಶ್ವಾತ್ಮಕವಲ್ಲದಿದ್ದರೂ ಅತ್ತ ಒಲುಮೆ ಇರುವಂಥವು; ಆದ್ದರಿಂದಲೇ ಅವು ಸಂದರ್ಭ- ಅತೀತ ನುಡಿಗಟ್ಟಿನಲ್ಲಿ ಮಾತಾಡುತ್ತವೆ. ಅದು ವಿಶ್ವಾತ್ಮಕತೆಯ ಹಾದಿ. ಬರಹಗೊಂಡ ಮತಧರ್ಮಶಾಸ್ತ್ರದಿಂದ, ಪಠ್ಯದಿಂದ, ಬರವಣಿಗೆಯಿಂದ ನಿರ್ವಚನಗೊಳ್ಳುತ್ತದೆ.

ಈ ನಿರ್ವಚನವು ವೈರುಧ್ಯಗಳಲ್ಲಿ ವ್ಯಕ್ತವಾಗುತ್ತದೆ. ಜ್ಯೂ-ಜೆಂಟೈಲ್, ಮುಸ್ಲಿಂ-ಕಾಫಿರ್, ಕ್ರಿಶ್ಚಿಯನ್-ಪಾಗನ್ ಇಂಥ ವಿರುದ್ಧ ಧ್ರುವಗಳನ್ನು ಗಟ್ಟಿಗೊಳಿಸುತ್ತವೆ. ತಮ್ಮ ಧರ್ಮದವರನ್ನುಳಿದು ಉಳಿದವರೆಲ್ಲ ಅಸಹ್ಯಕ್ಕೆ ತಕ್ಕವರು, ತಿರಸ್ಕಾರಕ್ಕೆ ಯೋಗ್ಯರು, ಮತಾಂತರಗೊಳ್ಳಲು ಒಪ್ಪದಿದ್ದರೆ ಅವರು ಕೊಲೆಯಾಗಬೇಕಾದವರು ಅನ್ನುವ ಅತಿರೇಕವೂ ಹುಟ್ಟುತ್ತದೆ.

ಕೇವಲ ನುಡಿರೂಪದ ಧರ್ಮಕ್ಕೆ ಮತಾಂತರಗೊಳ್ಳಲು ಸಾಧ್ಯವಿಲ್ಲ. ಹೆಚ್ಚೆಂದರೆ ನಿಮಗೆ ಪ್ರಿಯವಾದ ಬುಡಕಟ್ಟಿನ ರಾಜಕೀಯ ವ್ಯವಸ್ಥೆಯ ಸದಸ್ಯರಾಗಬಹುದು. ಆ ಗುಂಪಿನ ನಂಬಿಕೆಗಳನ್ನು ಹೆಚ್ಚೋ ಕಡಮೆಯೋ ನಂಬುವವರಾಗಬಹುದು. ಮತಾಂತರ ಅನ್ನುವುದು ಧರ್ಮ ಅನ್ನುವುದರ ಬೇರೆಯೇ ನಿರ್ವಚನವನ್ನು ಬಯಸುತ್ತದೆ. ಸ್ಥಿರ ಪಠ್ಯವೊಂದಕ್ಕೆ (ನಂಬಿಕೆ ಅಥವ ಆಚರಣೆಗಳಿಗೆ) ಬದ್ಧತೆಯನ್ನು ಬಯಸುತ್ತದೆ. ಒಂದು ಥರದ ಆಚರಣೆಗಳನ್ನು, ನಂಬಿಕೆಗಳನ್ನು ಕೈಬಿಟ್ಟು ಮತ್ತೊಂದು ಥರದವನ್ನು ಒಪ್ಪಬೇಕೆಂದು ಬಯಸುತ್ತದೆ.

ಹೀಗಾಗಿ ಇಸ್ಲಾಂ ಮತ್ತು ಕ್ರಿಶ್ಚಿಯನ್‌ನಂಥ ಧರ್ಮಗಳು ಬರಹಗೊಂಡು, ಬುಡಕಟ್ಟು ಮಿತಿಗಳನ್ನು ಮೀರಿ, ದಮನಕ್ಕೆ, ಮತಾಂತರಕ್ಕೆ, ಹಾಗೆಯೇ ಪ್ರತಿಭಟನೆಗೂ ಆಕರಗಳಾಗಿ ಬಳಕೆಯಾಗುವುದು ಸಾಧ್ಯವಾಯಿತು.

ಇವೆಲ್ಲ ವ್ಯಾಪಕವಾದ ಚರ್ಚೆಯನ್ನು ಬಯಸುವ ಸಂಗತಿಗಳು. ಆಸಕ್ತರು ಜಾಕ್ ಗೂಡಿ ಬರೆದಿರುವ `ದಿ ಪವರ್ ಆಫ್ ರಿಟನ್ ಟ್ರೆಡಿಶನ್~ಪುಸ್ತಕ ನೋಡಬಹುದು.  

olnswamy@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT