ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲದೀಪ ನಯ್ಯರ್ ಬರಹ | ಬಾಂಗ್ಲಾ ಬಗ್ಗೆ ಗೊತ್ತಿಲ್ಲದ ಸಂಗತಿಗಳೇ ಹೆಚ್ಚು...

Last Updated 16 ಡಿಸೆಂಬರ್ 2019, 5:10 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ವಿಮೋಚನಾ ಹೋರಾಟ ನಡೆದು ನಾಲ್ಕು ದಶಕಗಳು ಉರುಳಿವೆಯಾದರೂ, ಬಾಂಗ್ಲಾದೇಶದಲ್ಲಿ ಇವತ್ತಿಗೂ ಅಂತಹದ್ದೊಂದು ಆಂದೋಲನದ ಅಗತ್ಯ ಕಂಡು ಬರುತ್ತಿದೆ. ಅಂದರೆ ಆ ಹೋರಾಟದ ಆಶಯ ಸರಿದಿಕ್ಕಿನಲ್ಲಿ ನಡೆದಿಲ್ಲ ಎಂದರ್ಥ ತಾನೆ. ನಲ್ವತ್ತು ವರ್ಷಗಳ ಹಿಂದೆ ನಡೆಯುತ್ತಿದ್ದಂತಹ ಹರತಾಳ, ಪ್ರತಿಭಟನೆಗಳು ನಡೆಯುತ್ತಲೇ ಇವೆ ಎಂದರೆ ವ್ಯವಸ್ಥೆಯ ಮೇಲೆ ಮಂಕು ಕವಿದಿದೆ ಎನ್ನಬಹುದಲ್ಲ. ಬಾಂಗ್ಲಾದೇಶದಲ್ಲಿ ಇವತ್ತು ಈ ಪರಿಸ್ಥಿತಿ ಇದೆ.

ಆ ದೇಶದ ವಿದೇಶಾಂಗ ಇಲಾಖೆಯ ಮೊದಲ ಸಚಿವ ಕಮಲ್ ಹುಸೇನ್ ಬರೆದಿರುವ ಪುಸ್ತಕದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚಿಸಿದ್ದಾರೆ. ಬಾಂಗ್ಲಾದೇಶ ಹುಟ್ಟು ಪಡೆದ ಬಗ್ಗೆ ಅವರು ಬಹಳಷ್ಟು ಬರೆದಿದ್ದಾರೆ, ಜತೆಗೆ ಆ ಸಂದರ್ಭದ ಸುಖೀ ಸಮಾಜದ ಪರಿಕಲ್ಪನೆ, ಜಾತ್ಯತೀತ ಪ್ರಜಾಸತ್ತೆಯ ಕನಸುಗಳು ನನಸಾಗದ ಬಗ್ಗೆಯೂ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಅದು ಆ ಕಾಲದ ಮಟ್ಟಿಗೆ ಬಲು ದೊಡ್ಡ ಕ್ರಾಂತಿಯೇ ನಿಜ. ಮತೀಯ ದುರಭಿಮಾನ, ಪ್ರಾದೇಶಿಕ ಸಂಕುಚಿತ ಮನೋಭಾವ ಇತ್ಯಾದಿಗಳ ವಿರುದ್ಧ ಪ್ರಜಾಸತ್ತಾತ್ಮಕ ನೆಲೆಯಲ್ಲಿ ನಡೆದಿದ್ದ ಆ ಹೋರಾಟದ ಬೆನ್ನಲ್ಲಿ ಯಾವುದೇ ಧರ್ಮದ ಒತ್ತಡವೂ ಇರಲಿಲ್ಲ ಎನ್ನುವುದೊಂದು ವಿಶೇಷ. ಮತೀಯ ಉಗ್ರವಾದಿಗಳ ಭಯಾನಕ ವಾತಾವರಣವಿದ್ದರೂ ಆ ದೇಶ ಧರ್ಮಾಂಧರ ವಿರುದ್ಧವೂ ಸಮರ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಕಮಲ್ ಹುಸೇನ್ ಹೆಚ್ಚಿನ ವಿವರಗಳನ್ನು ನೀಡಿಲ್ಲ ಎನ್ನುವುದೂ ಸ್ಪಷ್ಟ.

ಇದೇನು ಬಹಳ ಹಿಂದಿನ ಕಥೆ ಏನಲ್ಲ. ಪಾಕಿಸ್ತಾನದ ಆಳ್ವಿಕೆಗೆ ಒಳಪಟ್ಟಿದ್ದ `ಪೂರ್ವ ಪಾಕಿಸ್ತಾನ'ದಲ್ಲಿ 1970ರಲ್ಲಿ ಪಾಕ್ ವಿರೋಧಿ ಆಂದೋಲನ ತಾರಕಕ್ಕೇರಿತ್ತು. ಕೊನೆಗೆ ಬಾಂಗ್ಲಾ ದೇಶ ಹುಟ್ಟು ಪಡೆಯಿತು. ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಆ ಪ್ರದೇಶದಲ್ಲಿ ಇಸ್ಲಾಂ ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಮನವಿ ಸಲ್ಲಿಸಿದವರೂ ಬದಿಗೆ ಸರಿಯುವಂತಾಗಿತ್ತು.

ದುರದೃಷ್ಟವಶಾತ್, ಬಾಂಗ್ಲಾದೇಶ `ಮತೀಯವಾದಿಗಳ ಎದುರಿನ ಯುದ್ಧ'ದಲ್ಲಿ, ಸಂಕುಚಿತ ಚಿಂತನೆಯ ಜನರ ಎದುರು ಸೋಲನುಭವಿಸಿದೆ. ಮತೀಯವಾದವೇ ಮೇಲುಗೈ ಸಾಧಿಸಿದ್ದು, ಜಾತ್ಯತೀತವಾದ ಮೂಲೆಗುಂಪಾಗಿದೆ. ವಿಮೋಚನೆಯ ಆಶಯಗಳು ಮಣ್ಣುಪಾಲಾಗಿವೆ. ಇವತ್ತಿನ ಬಾಂಗ್ಲಾದೇಶದಲ್ಲಿ ಮತೀಯ ಉಗ್ರವಾದ ಆಳವಾಗಿ ಬೇರುಬಿಟ್ಟಿದ್ದು, ಅದರ ವಿರುದ್ಧ ಕೇವಲ ಕೆಲವೇ ಧ್ವನಿ ಕೇಳಿಸುತ್ತಿವೆ ಅಷ್ಟೆ.

ಅಂದು ನಡೆದ ಆಂದೋಲನ ಶ್ಲಾಘನಾರ್ಹ. ಅದು ಬಾಂಗ್ಲಾ ಜನಸಮುದಾಯದ ಬಗ್ಗೆ ಪೂರ್ವಗ್ರಹ ಪೀಡಿತರಾದವರ ವಿರುದ್ಧ ನಡೆದ ಸಮರದ ಗೆಲುವಾಗಿತ್ತು. ಸಂಕುಚಿತವಾದಿಗಳ ವಿರುದ್ಧ ರೂಪುಗೊಂಡ ತಾತ್ವಿಕ ಸಂಘರ್ಷ ಅದಾಗಿತ್ತು. ಅದು ದೂರದ ರಾವಲ್ಪಿಂಡಿಯಲ್ಲಿ ಕುಳಿತವರ ವಿರುದ್ಧವಷ್ಟೇ ನಡೆದ ಸ್ವಾತಂತ್ರ್ಯ ಸಂಗ್ರಾಮವಾಗಿರಲಿಲ್ಲ ಎಂಬ ಸತ್ಯವನ್ನೂ ನಾವು ಅರಿತುಕೊಳ್ಳಬೇಕಿದೆ.

ಆ ಪ್ರದೇಶದಲ್ಲಿ ಸಮಸಮಾಜದ ಕನಸು ಕಂಡವರು ಒಗ್ಗೂಡಿ ಎದ್ದು ನಿಂತ ಕಥೆ ಅದು ಎಂಬುದನ್ನು ನಾವು ಮರೆಯುವಂತಿಲ್ಲ. ಧಾರ್ಮಿಕ ವಿಭಜನೆಗಳು, ಅದೇ ನೆಲೆಯ ಗುಂಪುಗಾರಿಕೆಗಳ ವಿರುದ್ಧವೂ ಜನ ಅಂದು ಧ್ವನಿ ಎತ್ತಿದ್ದೂ ನಿಜ. ಆ ಒಂಬತ್ತು ತಿಂಗಳ ಕಾಲಘಟ್ಟದಲ್ಲಿ ಪಾಕ್ ಸೇನೆಯು ಅಲ್ಲಿನ ಆಡಳಿತಾಂಗದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು ಸರ್ವಾಧಿಕಾರ ಮೆರೆದಿತ್ತು. ಆ ದಿನಗಳಲ್ಲಿ ಬಾಂಗ್ಲಾದೇಶದ ದುರ್ಬಲ ಮತ್ತು ಬಡ ಜನರು ಅನುಭವಿಸಿದ ಯಾತನೆ ಪದಗಳಿಗೆ ನಿಲುಕುವಂತಹದ್ದಲ್ಲ. ಅಂದು ಆ ಬಡವರಿಗೆ ಪ್ರತಿಭಟನೆಯೊಂದೇ ಅಂತಿಮ ಮಾರ್ಗವಾಗಿತ್ತು.

ಹೌದು, ಅಂದು ಪಾಕಿಸ್ತಾನ ಸರ್ಕಾರದ ವಿರುದ್ಧ ಷೇಕ್ ಮುಜಿಬರ್ ರೆಹಮಾನ್ ಎತ್ತಿದ ಧ್ವನಿ `ಪೂರ್ವ ಪಾಕಿಸ್ತಾನ'ದ ದುಡಿಯವ ವರ್ಗದವರನ್ನು ಜಾಗೃತಗೊಳಿಸಿತ್ತು. “ಪಾಕ್ ಸರ್ಕಾರ ಪ್ರತಿ ಬಂಗಾಳಿಯನ್ನೂ ಕೊಲ್ಲುವ ಹುನ್ನಾರದಲ್ಲಿದೆ. `ಬಾಂಗ್ಲಾದೇಶ' ಪ್ರದೇಶವನ್ನೆ ಸಂಪೂರ್ಣ ನಾಶ ಮಾಡಲು ಹಾತೊರೆಯುತ್ತಿದೆ. ಈ ಪ್ರದೇಶದ 14 ದಶಲಕ್ಷ ರೈತರಲ್ಲಿ 2.44 ಲಕ್ಷ ರೈತರ ಬದುಕು ನಾಶವಾಗಿದೆ. ಉಳಿದವರು ಎತ್ತುಗಳನ್ನು, ನೇಗಿಲು, ಬಿತ್ತನೆ ಬೀಜಗಳೇನೂ ಇಲ್ಲದೆ ತಲೆಯ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ.

ಲಕ್ಷಾಂತರ ಗುಡಿಸಿಲುಗಳು ಪಾಕ್ ಸೈನಿಕರಿಗೆ ಬಲಿಯಾಗಿವೆ. ಪಾಕ್ ಯೋಧರು ಈ ಪ್ರದೇಶದಲ್ಲಿದ್ದ ಸುಮಾರು 18 ಸಾವಿರ ಟ್ರಕ್‌ಗಳಲ್ಲಿ 12 ಸಾವಿರ ಟ್ರಕ್‌ಗಳನ್ನು ನಾಶ ಪಡಿಸಿದ್ದಾರೆ. ನಮ್ಮ ಕರೆನ್ಸಿ ನೋಟುಗಳನ್ನು ಸುಟ್ಟು ಹಾಕಿದ್ದಾರೆ. ಆಹಾರ ಸಂಗ್ರಹಿಸಿಟ್ಟಿದ್ದ ಉಗ್ರಾಣಗಳು ಸೈನಿಕರ ಕ್ರೌರ್ಯಕ್ಕೆ ಬಲಿಯಾಗಿವೆ...” ಎಂದು ಆ ದಿನಗಳಲ್ಲಿ ಮುಜಿಬರ್ ರೆಹಮಾನ್ ಸಾಹೇಬರು ಎತ್ತಿದ ಜಾಗೃತಿಯ ಧ್ವನಿಗೆ, ಕ್ರಾಂತಿಯ ಕರೆಗೆ ಬಾಂಗ್ಲಾ ಮಂದಿ ಓಗೊಟ್ಟಿದ್ದರು.

ಆದರೆ ಬಾಂಗ್ಲಾ ವಿಮೋಚನೆಯ ನಂತರ ಮುಜಿಬರ್ ರೆಹಮಾನ್ ಅವರು ಅಧಿಕಾರದ ಗದ್ದುಗೆ ಏರಿದಾಗ ಆ ದೇಶದ ಸ್ಥಿತಿ ದಯನೀಯವಾಗಿತ್ತು. ಜನಜೀವನವನ್ನು ಸಾಮಾನ್ಯ ಸ್ಥಿತಿಗೆ ತರಲು ಕೆಲವೇ ತಿಂಗಳಲ್ಲಿ ಅಸಾಧ್ಯ ಎನ್ನುವಂತಹ ಪರಿಸ್ಥಿತಿಯನ್ನು ಪಾಕ್ ಯೋಧರು ನಿರ್ಮಿಸಿಬಿಟ್ಟಿದ್ದರು. ಪರಿಸ್ಥಿತಿಯನ್ನು ಸುಧಾರಿಸಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಮುಜಿಬರ್ ರೆಹಮಾನ್ ಅಂದು ಜನರ ಬಳಿ ಪರಿಪರಿಯಾಗಿ ಹೇಳಿಕೊಂಡಿದ್ದರು. ಆದರೆ ಜನರಿಗೆ ಕ್ರಾಂತಿಯ ಫಲ ಆ ಕ್ಷಣದಲ್ಲಿಯೇ ಸಿಗಬೇಕೆಂಬ ಕಾತರ ಇದ್ದಂತಿತ್ತು.

ಮುಜಿಬರ್ ಸಾಹೇಬರ ತಾಳ್ಮೆಯ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನವೇ ಜನಸಾಮಾನ್ಯರಿಗೆ ಇದ್ದಂತಿರಲಿಲ್ಲ. ಜನರು `ವಿಮೋಚನೆ'ಯ ಪವಾಡ ಕಂಡಿದ್ದರು ತಾನೆ. `ಆರ್ಥಿಕ ಪ್ರಗತಿ'ಯ ಪವಾಡವೂ ಅಷ್ಟೇ ವೇಗದಲ್ಲಿರುತ್ತದೆ ಎಂದು ಜನ ಕನಸು ಕಂಡಿದ್ದರೆನಿಸುತ್ತದೆ. ಕಟ್ಟುವ ಕೆಲಸಕ್ಕೆ ಹೆಚ್ಚು ಕಾಲ ಬೇಕು ಎಂಬ ಸತ್ಯ ಅವರಿಗೆ ಅರ್ಥವಾಗುತ್ತಿರಲಿಲ್ಲ. ಸ್ವಾತಂತ್ರ್ಯಾಂದೋಲನದ ಸಂದರ್ಭದಲ್ಲಿದ್ದ ಜಾಗೃತಿಯ ಜ್ಯೋತಿ ದಿನ ಕಳೆದಂತೆ ಜನಸಾಮಾನ್ಯರ ಮನದಲ್ಲಿ ಪ್ರಖರತೆ ಕಳೆದುಕೊಳ್ಳುತ್ತಾ ಬಂದಿತು. ಹಿಂದೆ ವಿಮೋಚನೆಯ ವಿರೋಧಿಗಳಾಗಿದ್ದವರು ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಜನರ ನಡುವೆ ತಮ್ಮ ಬೇಳೆ ಬೇಯಿಸಿಕೊಳ್ಳಲೆತ್ನಿಸಿದರು. ಆವರೆಗೆ ಮೂಲೆಗುಂಪಾಗಿದ್ದ ಅವರು ಜನರನ್ನು ಮರಳು ಮಾಡುವ ಮಾತಿಗೆ ತೊಡಗಿದರು.

ವಿಮೋಚನೆಯ ಹೋರಾಟದಲ್ಲಿದ್ದವರು ಕೂಡಾ ತಕ್ಷಣದ ಆರ್ಥಿಕಾಭಿವೃದ್ಧಿಗೆ ಅಧಿಕಾರದಲ್ಲಿದ್ದವರನ್ನು ಆಗ್ರಹಿಸತೊಡಗಿದರು. ಆಡಳಿತಗಾರರ ಮೇಲೆ ಅಸಹನೀಯ ಒತ್ತಡ ಉಂಟಾಗಿತ್ತು.

ಅಂತಹ ಸಂದಿಗ್ಧದಲ್ಲಿ ಸರ್ಕಾರದತ್ತ ಹಲವು `ಫಿರಂಗಿ'ಗಳು ಗುರಿ ಇಟ್ಟಿದ್ದವು. ವಿವಿಧ ರಾಜಕೀಯ ಸಿದ್ಧಾಂತಗಳ ಮಂದಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ ಎತ್ತಿತೋರಿಸತೊಡಗಿದ್ದರು. ವಿಮೋಚನಾ ಚಳವಳಿಯ ವೇಳೆ ಜನರು ಹಿಡಿದಿದ್ದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬಂದೂಕುಗಳು ಕ್ರಾಂತಿಯ ನಂತರವೂ ಜನರ ಬಳಿಯೇ ಉಳಿದಿದ್ದವು. ಅವುಗಳನ್ನು ಅವರು ಸರ್ಕಾರಕ್ಕೆ ಒಪ್ಪಿಸಿರಲಿಲ್ಲ. ಜನಸಾಮಾನ್ಯರಲ್ಲಿ ಗುಪ್ತವಾಗಿದ್ದ ವೈಯಕ್ತಿಕ ದ್ವೇಷ, ಸೇಡಿನ ಆಕಾಂಕ್ಷೆಗಳು ಇಂತಹ ಬಂದೂಕುಗಳ ಮೂಲಕ ಬಯಲುಗೊಳ್ಳತೊಡಗಿದವು. ಆಡಳಿತಗಾರರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಇವುಗಳೆಲ್ಲದರ ನಡುವೆ ಆ ದಿನಗಳಲ್ಲಿಯೇ ಭಾರತ ವಿರೋಧಿ ಭಾವನೆಯು ಬಾಂಗ್ಲಾದಾದ್ಯಂತ ಮೊಳಕೆಯೊಡೆಯುತ್ತಿದ್ದುದು ಆಡಳಿತಗಾರರಿಗೆ ದೊಡ್ಡ ಸಮಸ್ಯೆಯಾಗಿ ಕಾಡತೊಡಗಿತ್ತು. ಬಾಂಗ್ಲಾದೇಶ ಹುಟ್ಟು ಪಡೆಯಲು ಭಾರತ ನೀಡಿದ ನೆರವು ಅನನ್ಯ.

ಆರಂಭದಲ್ಲಿ ಬಾಂಗ್ಲಾದೇಶದ ಸರ್ವತೋಮುಖ ಅಭಿವೃದ್ಧಿಗೆ ಭಾರತ ನೀಡಿದ ಕೊಡುಗೆಯನ್ನೂ ಮರೆಯುವಂತಿಲ್ಲ. ಹಾಗಿದ್ದೂ ಭಾರತದ ಬಗ್ಗೆ ಅಲ್ಲಲ್ಲಿ ಕಂಡು ಬರುತ್ತಿದ್ದ ಅಸಹನೆ ಅಲ್ಲಿನ ಅಂದಿನ ಆಡಳಿತಗಾರರನ್ನು ಚಿಂತೆಗೀಡು ಮಾಡಿತ್ತು. “ಭಾರತ ಮತ್ತು ಬಾಂಗ್ಲಾದೇಶ ನಡುವೆ ಸಂಬಂಧ ಇಂದು ಅತ್ಯಂತ ಮಧುರವಾಗಿದೆ. ಇವತ್ತೇ ನಾನು ಸತ್ತು ಹೋದರೆ ನನಗೆ ಅದು ಸುಖದ ಸಾವಾಗುತ್ತದೆ. ಏಕೆಂದರೆ ಮುಂದೊಂದು ದಿನ ಭಾರತ ಮತ್ತು ಬಾಂಗ್ಲಾ ನಡುವಣ ಸಂಬಂಧ ಕೆಟ್ಟು ಹೋಗಿರುವುದನ್ನು ನೋಡುವುದಕ್ಕಿಂತ ಇದು ಉತ್ತಮ ತಾನೆ” ಎಂದು ಹಿಂದೆ ಅಲ್ಲಿನ ಪ್ರಧಾನಿಯಾಗಿದ್ದ ತಾಜುದ್ದೀನ್ ನನ್ನೊಡನೆ ಹೇಳಿದ್ದು ಇವತ್ತಿಗೂ ನನ್ನ ಸ್ಮೃತಿಪಟಲದಲ್ಲಿ ಉಳಿದುಕೊಂಡಿದೆ.

ಈ ಬಗ್ಗೆ ಬಾಂಗ್ಲಾದೇಶದ ರಾಷ್ಟ್ರಪಿತ ಮುಜಿಬರ್ ರೆಹಮಾನ್ ಒಂದಿನಿತೂ ವಿಚಲಿತರಾಗಿರಲಿಲ್ಲ ಎಂಬುದು ನಾನು ಅವರನ್ನು ಭೇಟಿಯಾಗಿದ್ದಾಗ ಸ್ಪಷ್ಟವಾಗಿತ್ತು. ಅಂದು ಅವರು ನನ್ನೊಡನೆ ಮಾತನಾಡುತ್ತಾ “ಇಲ್ಲಿ ಒಂದಷ್ಟು ಗುಂಪುಗಳು ಕೆಲವು ವಿದೇಶಿ ಶಕ್ತಿಗಳ ತಾಳಕ್ಕೆ ಕುಣಿಯುತ್ತಾ ಭಾರತದ ವಿರುದ್ಧ ವದಂತಿಗಳನ್ನು ಹರಿಯಬಿಡುವ ಕೆಲಸದಲ್ಲಿ ತೊಡಗಿವೆ. ಆದರೆ ಇಂತಹ ಸಂಕುಚಿತ ಮನೋಭಾವದ ಜನರು ಭಾರತ ಮತ್ತು ಬಾಂಗ್ಲಾದೇಶದ ಜನರ ನಡುವಣ ಮಧುರ ಬಾಂಧವ್ಯಕ್ಕೆ ಹುಳಿ ಹಿಂಡಲು ಸಾಧ್ಯವೇ ಇಲ್ಲ ಬಿಡಿ. ತನಗೆ ಕುಡಿಯಲು ಒಂದು ಲೋಟ ನೀರು ಕೊಟ್ಟವನನ್ನು ಬಂಗಾಳಿಯೊಬ್ಬ ಯಾವತ್ತೂ ಮರೆಯಲಾರ.

ಆದರೆ ಈ ದೇಶ ಕಟ್ಟಲು ಭಾರತದ ಹಲವು ಯೋಧರು ತಮ್ಮ ಪ್ರಾಣ ತೆತ್ತಿದ್ದಾರೆ ಎಂಬ ಸಂಗತಿ ಪ್ರತಿಯೊಬ್ಬ ಬಂಗಾಳಿಯ ಎದೆಯಾಳದಲ್ಲಿ ಸದಾ ಜೀವಂತವಿರುತ್ತದೆ. ಈ ದೇಶ ಕಟ್ಟಲು ಭಾರತೀಯರು ಮಾಡಿದ ತ್ಯಾಗವನ್ನು ನಾವು ಹೇಗೆ ಮರೆಯಲು ಸಾಧ್ಯ ಹೇಳಿ?” ಎಂದು ನನ್ನನ್ನು ಪ್ರಶ್ನಿಸಿದ್ದರು.

“ಅಂದು ಭಾರತದ ಜನ ಈ ನೆಲದ ಸುಮಾರು ಹತ್ತು ದಶಲಕ್ಷಕ್ಕೂ ಹೆಚ್ಚು ನಿರಾಶ್ರಿತರಿಗೆ ಅನ್ನ ಹಾಲು ಕೊಟ್ಟು ಹತ್ತು ತಿಂಗಳಿಗೂ ಹೆಚ್ಚು ಕಾಲ ಸಲಹಿದ್ದರು. ಪ್ರೀತಿಯಿಂದ ಕಂಡಿದ್ದರು. ವಿಮೋಚನೆಯ ನಂತರವೂ ನಮಗೆ ಅಪಾರ ಪ್ರಮಾಣದ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುತ್ತಿದ್ದೀರಿ. ನಮ್ಮ ಜನರಿಗೆ ಅಪಾರ ಆಹಾರ ಧಾನ್ಯಗಳನ್ನು ಕಳುಹಿಸುತ್ತಿದ್ದೀರಿ. ನನ್ನ ಜನರು ಇಂತಹ ಉಪಕಾರವನ್ನು ಮರೆಯುವಷ್ಟು ಕೃತಘ್ನರಂತೂ ಅಲ್ಲವೇ ಅಲ್ಲ ಎಂಬುದನ್ನು ನಾನು ನಿಮಗೆ ನನ್ನ ಎದೆ ಮುಟ್ಟಿ ಹೇಳಬಲ್ಲೆ. ಹೀಗಾಗಿ ಇದೀಗ ಭಾರತದ ವಿರುದ್ಧ ವದಂತಿಗಳನ್ನು ಹರಿಯಬಿಡುತ್ತಿರುವವರಿಗೆ ಮುಂದೊಂದು ದಿನ ನಿರಾಸೆ ಕಾದಿರುತ್ತದೆ ಅಷ್ಟೇ...” ಎಂದೂ ಮುಜಿಬರ್ ಅಂದು ನನ್ನೊಡನೆ ದೃಢವಾಗಿ ಹೇಳಿದ್ದರು.

ಆ ಸಂದರ್ಭದಲ್ಲಿ ಬಾಂಗ್ಲಾದೇಶದ ವಿದೇಶಾಂಗ ನೀತಿ ಎಂದರೆ ಅದು `ನವದೆಹಲಿಯ ವಿದೇಶಾಂಗ ನೀತಿಯ ಪಡಿಯಚ್ಚು' ಎಂಬ ಮಾತುಗಳು ಅಂತರರಾಷ್ಟ್ರೀಯ ರಾಜತಾಂತ್ರಿಕ ವಲಯಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಿದ್ದವು. ಆದರೆ ಬಾಂಗ್ಲಾದೇಶದೊಳಗೆ ಅಧಿಕಾರಿಗಳು, ನೌಕರರ ಮನಸ್ಥಿತಿಗಳೇ ಬೇರೆಯೇ ಇದ್ದವು. ತಮ್ಮದು ತೀರಾ ಸಣ್ಣ ದೇಶ ಎಂಬ ಕೀಳರಿಮೆ ಅವರಲ್ಲಿ ಕಾಡುತಿತ್ತಲ್ಲದೆ, ಭಾರತೀಯರು ಸಿಕ್ಕಿದರೆ `ನಿಮ್ಮದು ಬಹಳ ದೊಡ್ಡ ದೇಶ ನೋಡಿ...' ಎಂದು ಅಸೂಯೆಯ ಅನಿಸಿಕೆಗಳನ್ನೂ ವ್ಯಕ್ತ ಪಡಿಸುತ್ತಿದ್ದರೆನ್ನುವುದು ನನಗೆ ಗೊತ್ತು. ಈ ರೀತಿ ಸರ್ಕಾರಿ ನೌಕರರ ವಲಯದಲ್ಲಿಯೂ ಭಾರತ ವಿರೋಧಿ ಭಾವನೆ ಕುಡಿಯೊಡೆಯುತ್ತಿತ್ತು.

ಕಮಲ್ ಹುಸೇನ್ ಅವರ ಕೃತಿಯಲ್ಲಿ ಇಂತಹ ಬಹಳಷ್ಟು ಸೂಕ್ಷ್ಮ ಸಂಗತಿಗಳು ಕಂಡು ಬರುವುದಿಲ್ಲ. ಹೀಗಾಗಿ ಈ ಪುಸ್ತಕದಲ್ಲಿ ನಾವು ಏನನ್ನು ನಿರೀಕ್ಷಿಸಿದ್ದೆವೋ ಅದಿಲ್ಲ. ಹುಸೇನ್ ಅವರು ಮುಜಿಬರ್ ರೆಹಮಾನ್ ಅವರ ಬಗ್ಗೆ ಬಹಳಷ್ಟು ಬರೆದಿದ್ದಾರೆ, ನಿಜ.

ಆದರೆ ಒಬ್ಬ ಆಡಳಿತಗಾರನಾಗಿ ಮುಜಿಬರ್ ಎಲ್ಲಿ ಎಡವಿದರು, ಆ ದಿಸೆಯಲ್ಲಿ ಅವರ ದೌರ್ಬಲ್ಯಗಳ ಬಗ್ಗೆ ಕಮಲ್ ಹೆಚ್ಚು ಆಳಕ್ಕಿಳಿಯುವುದೇ ಇಲ್ಲ. ಆ ದಿನಗಳಲ್ಲಿ ಪಾಕಿಸ್ತಾನದ ಸೇನಾಡಳಿತಗಾರರು ಮುಜಿಬರ್ ರೆಹಮಾನ್ ಅವರಿಗೆ ಗಲ್ಲು ಶಿಕ್ಷೆಯನ್ನು ಪ್ರಕಟಿಸಿದ್ದರಾದರೂ, ಆಗಿನ ಜನಪ್ರಿಯ ನಾಯಕ ಜುಲ್ಫಿಕರ್ ಅಲಿ ಭುಟ್ಟೊ ಅವರು ಮಧ್ಯ ಪ್ರವೇಶಿಸಿ ಮುಜಿಬರ್ ಅವರನ್ನು ಪಾರು ಮಾಡಿದರೆಂಬ ವ್ಯಾಪಕ ವದಂತಿ ಹರಡಿತ್ತು. ಆದರೆ ಹುಸೇನ್ ತಮ್ಮ ಕೃತಿಯಲ್ಲಿ ಆ ಬಗ್ಗೆ ಏನನ್ನೂ ಬರೆಯುವುದಿಲ್ಲ. ಬಹುಶಃ ಕಮಲ್ ಹುಸೇನ್ ಅವರು ಬಾಂಗ್ಲಾದೇಶದ ಬಗ್ಗೆ ಇಂತಹ ಯಾರಿಗೂ ಗೊತ್ತಿರದ ಅನೇಕ ಸಂಗತಿಗಳನ್ನು ಒಳಗೊಂಡ ಇನ್ನೊಂದು ಕೃತಿ ರಚಿಸಬಹುದೆಂದು ನಾವು ನಂಬೋಣ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT