ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶದಲ್ಲಿ ಜನಜಾಗೃತಿಯ ಸಿಂಚನ...

Last Updated 19 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಅಂದು ನನಗೆ ಢಾಕಾ ಎಂದರೆ ಭಾರತದ ಭೂಪಟದಲ್ಲಿ ನನ್ನೂರಿನಿಂದ ಬಲು ದೂರ ಇರುವ ಒಂದು `ಚುಕ್ಕಿ' ಅಷ್ಟೇ. ಎಳವೆಯಲ್ಲಿ ನಾನು ಸಿಯಾಲ್‌ಕೋಟ್ ಎಂಬ ಊರಲ್ಲಿ ಕುಳಿತು ಭೂಪಟದಲ್ಲೇ ಜಗತ್ತನ್ನು ಕಾಣುತ್ತಾ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದೆ. ಆದರೆ ಸ್ವಾತಂತ್ರ್ಯ ಸಿಕ್ಕಿದ ಒಡನೆ ಭಾರತ-ಪಾಕಿಸ್ತಾನ ವಿಭಜನೆಯಾದಾಗ ಪಾಕ್‌ನೊಳಗೆ ಸೇರಿ ಹೋದ ಸಿಯಾಲ್‌ಕೋಟ್ ಎಂಬ `ನನ್ನ ಊರು' ತೊರೆದು ದೆಹಲಿ ಸೇರಿದೆ. ಹೀಗಾಗಿ ಭೂಪಟದಲ್ಲಿನ ಆ `ಚುಕ್ಕಿ' ಇದೆಯಲ್ಲಾ ಅಲ್ಲಿಗೆ ನಾನು ಇನ್ನಷ್ಟೂ ಹತ್ತಿರದವನಾದೆ ಎಂದು ಭಾವಿಸಿದ್ದೆ !

ವಿಮೋಚನೆಗೊಂಡ ಬಾಂಗ್ಲಾ ದೇಶಕ್ಕೆ ಅದೊಂದು ದಿನ ಹೋಗಿ ಬರುವ ಅವಕಾಶ ನನಗೆ ಒದಗಿ ಬಂದಿತ್ತು. ನನ್ನನ್ನು ಬಾಲ್ಯಕಾಲದಿಂದಲೂ ಕಾಡುತ್ತಿದ್ದ ಆ `ಚುಕ್ಕಿ'ಯಂತಹ ಢಾಕಾ ನಗರಕ್ಕೆ ನಾನು ದೆಹಲಿಯಿಂದ ವಿಮಾನ ಹತ್ತಿದ್ದೆ. ಬಾಂಗ್ಲಾ ವಿಮೋಚನೆಗೊಂಡು ಹೆಚ್ಚು ದಿನಗಳಾಗಿರಲಿಲ್ಲ. ನಾನು ಅಲ್ಲಿ ಕಾಲಿಟ್ಟಾಗ 'ಜಯ್ ಬಾಂಗ್ಲಾ..' ಜಯಘೋಷ ಮೊಳಗುತಿತ್ತು. ಅದು ಕೆಲವೊಮ್ಮೆ ಘೋಷಣೆಯಂತೆ ಇನ್ನೊಮ್ಮೆ ಪ್ರಾರ್ಥನೆಯಂತೆ ಕೇಳಿ ಬರುತಿತ್ತು.

ಅಂದು ವಿಮಾನ ನಿಲ್ದಾಣದಲ್ಲೆಲ್ಲಾ ಜನ ಕಿಕ್ಕಿರಿದಿದ್ದರು. ಎಲ್ಲೆಲ್ಲಿಂದಲೋ ಬಂಗಾಳಿಗಳು ವಿಮೋಚನೆಗೊಂಡ ಬಾಂಗ್ಲಾ ನೆಲದತ್ತ ಓಡೋಡಿ ಬಂದಿದ್ದರು. ಆ ನೆಲದಲ್ಲಿ ನೂರಾರು ಮಂದಿ ಮಾಡಿರುವ ಬಲಿದಾನ, ತ್ಯಾಗದ ಫಲವಾಗಿ ಸಿಕ್ಕಿರುವ ಸ್ವಾತಂತ್ರ್ಯವನ್ನು ಅರ್ಥಪೂರ್ಣಗೊಳಿಸುವ ಹೆಗ್ಗನಸು ಅಲ್ಲಿ ಕಿಕ್ಕಿರಿದಿದ್ದ ಎಲ್ಲರ ಮೊಗದಲ್ಲೂ ಎದ್ದು ಕಾಣುತಿತ್ತು.

ಆ ಘಟನೆ ನಡೆದು ಇದೀಗ ಸುಮಾರು ನಾಲ್ಕು ದಶಕಗಳು ಉರುಳಿವೆ. ಆ ನಂತರ ಆ ನಗರಕ್ಕೆ ನಾನು ಹಲವು ಬಾರಿ ಹೋಗಿ ಬಂದಿದ್ದೇನೆ. ಸ್ವಾತಂತ್ರ್ಯ ಸಿಕ್ಕಿದ ದಿನದಂದು ಜನಮಾನಸದಲ್ಲಿ ಕಂಡು ಬಂದಿದ್ದ ಆ ಸ್ಫೂರ್ತಿಯ ಮಾತುಗಳು, ಲವಲವಿಕೆಯನ್ನು ಮತ್ತೆ ಕಾಣಲು ಸಾಧ್ಯವಾ ಎಂದು ನಿರೀಕ್ಷಿಸಿದ್ದೇನೆ. ಆದರೆ ಈಚೆಗಿನ ದಿನಗಳಲ್ಲಿ ಅದೇ `ಜಯ್ ಬಾಂಗ್ಲಾ...' ಭಾವ ಸಂಭ್ರಮ ಮತ್ತೆ ಕಾಣತೊಡಗಿದೆ.

ಸುಮಾರು 18 ಕೋಟಿಗೂ ಹೆಚ್ಚಿನ ಜನರು ಮತ್ತೆ ಧ್ವನಿ ಏರಿಸಿದ್ದಾರೆ. ತಮ್ಮಲ್ಲಿನ್ನೂ ಆ ಹಿಂದಿನ ಮೌಲ್ಯಗಳು ಜೀವಂತ ಇವೆ ಎಂಬುದನ್ನು ಹೆಮ್ಮೆಯಿಂದ ಎದೆ ತಟ್ಟಿ ಹೇಳಿದ್ದಾರೆ. ನಲ್ವತ್ತು ವರ್ಷಗಳ ಹಿಂದೆ ಪಶ್ಚಿಮ ಪಾಕಿಸ್ತಾನದ ವಿರುದ್ಧ ಸಿಡಿದು ನಿಂತು, ಪ್ರತ್ಯೇಕ ಬಾಂಗ್ಲಾದೇಶದ ರೂಪದಲ್ಲಿ ಆ ಪ್ರದೇಶದ ಜನ ಎದ್ದು ನಿಂತಿದ್ದಾಗ ಕಂಡು ಬಂದಿದ್ದ ವಿಚಾರಗಳು ಕಳೆದುಹೋಗಿಲ್ಲ, ಆ ನೆಲದಲ್ಲಿನ್ನೂ ಅದು ಅಂತರವಾಹಿನಿಯಂತಿದೆ ಎಂಬುದನ್ನು ಮೊನ್ನೆ ಅಲ್ಲಿನ  ಮಂದಿ ಸಾಬೀತು ಪಡಿಸಿದ್ದಾರೆ. ಈಚೆಗೆ ಮೂರು ವಾರಗಳ ಕಾಲ ನಡೆದ ಮುಷ್ಕರದ ವೇಳೆ ಮೂಲಭೂತವಾದಿಗಳ ವಿರುದ್ಧ ಭಾರಿ ಜನಾಭಿಪ್ರಾಯ ಕಂಡು ಬಂದಿತು. ಬಾಂಗ್ಲಾ ಸರಿದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಭಾವ ನನ್ನಲ್ಲಿ ಮೂಡಿತ್ತು.

ಅಲ್ಲಿ ಜಮಾತ್ ಎ ಇಸ್ಲಾಮಿ ಸಂಘಟನೆಯು ಜಾತ್ಯತೀತ ವಿಚಾರಧಾರೆಯನ್ನು ತೀವ್ರವಾಗಿ ವಿರೋಧಿಸುತ್ತಲೇ ಇದೆ. ಆ ಸಂಘಟನೆಗೆ ಪ್ರಜಾಸತ್ತೆಯಲ್ಲಿ ನಂಬಿಕೆ ಇಲ್ಲದಿರುವುದರಿಂದ ಅದರ ಈ ಧೋರಣೆ ಒಂದಿನಿತೂ ಅಚ್ಚರಿ ಉಂಟು ಮಾಡುವುದಿಲ್ಲ. ಆದರೆ ಆ ಸಂಘಟನೆಯ ರಕ್ತಸಿಕ್ತ ಹೆಜ್ಜೆ ಗುರುತುಗಳು ಆ ದೇಶದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತಹ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು  ತಿರಸ್ಕರಿಸಿದ ಕಥೆಗಳನ್ನೇ ಹೇಳುತ್ತಾ ಬಂದಿವೆ.

ಬಾಂಗ್ಲಾ ದೇಶದ ವಿಮೋಚನಾ ಚಳವಳಿ ಎಂದರೆ ಅದು ಪಶ್ಚಿಮ ಪಾಕಿಸ್ತಾನ ಎಂಬ `ಸಾಮ್ರಾಜ್ಯಶಾಹಿ'ಯ ವಿರುದ್ಧದ ಜನಾಂದೋಲನದ ಕಥೆಯೇ ಆಗಿದೆ.  ಎರಡು ದಶಕಕ್ಕೂ ಹೆಚ್ಚು ಕಾಲ ಪಶ್ಚಿಮ ಪಾಕಿಸ್ತಾನದ ಆಡಳಿತಗಾರರು ಬಾಂಗ್ಲಾ ನೆಲದಲ್ಲಿ ನಡೆಸಿದ ಅಟ್ಟಹಾಸ, ದೌರ್ಜನ್ಯದ ವಿರುದ್ಧ ಜನ ಒಗ್ಗೂಡಿ ಸಿಡಿದೆದ್ದ ಕಥೆಯೂ ಹೌದು. ಸ್ವತಂತ್ರ ಬಾಂಗ್ಲಾದೇಶ ಉದಯವಾದಾಗ ಧಾರ್ಮಿಕ ಮೌಲ್ಯಗಳೇ ಪ್ರಧಾನವಾಗಿರುವ ಪಾಕಿಸ್ತಾನದಿಂದಲೂ ಜನ ಬಾಂಗ್ಲಾದತ್ತ ನಡೆದಿದ್ದರು. ಈ ನಡುವೆ ನಾವು ಒಂದು ಸತ್ಯವನ್ನು ಮನಗಾಣಬೇಕು. ಧರ್ಮಗಳು ದೇಶವನ್ನು ಕಟ್ಟುವುದಿಲ್ಲ. ಆದರೆ ದೇಶಗಳೇ ಧರ್ಮಗಳ ಕೇಂದ್ರಗಳಾಗಿವೆ, ಧರ್ಮಗಳಿಗೆ ಅಡಿಪಾಯ ಕಟ್ಟಿವೆ.

ಎಪ್ಪತ್ತರ ದಶಕದ ಆರಂಭದವರೆಗೆ ಬಾಂಗ್ಲಾ ನೆಲದಲ್ಲಿ ಪಾಕ್ ನಡೆಸಿದ್ದ ದೌರ್ಜನ್ಯಗಳ ಬಗ್ಗೆ ಜನ ನಿಧಾನವಾಗಿ ಮರೆತು ಹೋಗಿರಲೂ ಬಹುದು. ಆದರೆ ಆ ನಂತರ ಪಾಕ್‌ನ `ಕಾಣದ ಕೈ'ಗಳು ಬಾಂಗ್ಲಾದೊಳಗೆ ನಡೆಸಿದೆ ಎನ್ನಲಾದ ಪಿತೂರಿ, ಹಿಂಸಾಚಾರಗಳನ್ನು ಜನರಿಗೆ ಮರೆಯಲು ಸಾಧ್ಯವಾದಂತಿಲ್ಲ. ಹೀಗಾಗಿ ಬಾಂಗ್ಲಾ ಮಂದಿ  ಆ ದೇಶದಲ್ಲಿ ಅದೆಂತಹ ಬದಲಾವಣೆಗಳು ನಡೆದರೂ ತಮ್ಮ ಮೂರು ಬೇಡಿಕೆಗಳನ್ನು ಮುಂದಿಡುತ್ತಲೇ ಇದ್ದಾರೆ.

1971ರ ವಿಮೋಚನಾ ಚಳವಳಿಯ ಸಂದರ್ಭದಲ್ಲಿ ಹಲವು ಜನನಾಯಕರ ಕಗ್ಗೊಲೆಗೆ ಕಾರಣವಾದವರಿಗೆ ಮರಣ ದಂಡನೆ ವಿಧಿಸಬೇಕು ಎಂಬ ಬೇಡಿಕೆ ಜೀವಂತವಿದೆ. ಜಮಾತ್ ಎ ಇಸ್ಲಾಮಿ ಮತ್ತು ಅದರ ವಿದ್ಯಾರ್ಥಿ ಸಂಘಟನೆಯಾದ ಇಸ್ಲಾಮಿ ಚತ್ತರ್ ಶಿವಿರ್ ಅನ್ನು ನಿಷೇಧಿಸಬೇಕೆನ್ನುವುದು ಇನ್ನೊಂದು ಬೇಡಿಕೆಯಾಗಿದೆ. ಸಮರದ ಸಂದರ್ಭದಲ್ಲಿ ಈ ಎರಡೂ ಸಂಘಟನೆಗಳು ಬಂಗಾಳಿ ಜನರ ಮೇಲೆ ವ್ಯಾಪಕವಾದ ದೌರ್ಜನ್ಯ ನಡೆಸಿದ್ದವೆಂದೂ ಬಾಂಗ್ಲಾದಾದ್ಯಂತ ಜನ ಇವತ್ತಿಗೂ ಆರೋಪಿಸುತ್ತಾರೆ. ಇಂತಹ ಜಮಾತ್‌ನ ನಿಯಂತ್ರಣದಲ್ಲಿರುವ ಕಂಪೆನಿಗಳನ್ನು ಬಹಿಷ್ಕರಿಸಬೇಕೆಂಬ ಬೇಡಿಕೆಯೂ ಈಗ ವ್ಯಾಪಕವಾಗಿದೆ.

ಢಾಕಾ ವಿಶ್ವವಿದ್ಯಾಲಯ ಆವರಣದಲ್ಲಿ 1952ರಲ್ಲಿ ನಡೆದ ಘಟನೆಯೊಂದನ್ನು ಬಾಂಗ್ಲಾ ಮಂದಿ ಯಾವತ್ತೂ ಮರೆಯುವುದಿಲ್ಲ. ಆ ಘಟನೆ ಆ ಭೂಪ್ರದೇಶದ ಜನರ ಚಿಂತನೆಯ ಮೇಲೆ ಬಲು ದೊಡ್ಡ ಪ್ರಭಾವವನ್ನೇ ಬೀರಿತು ಎನ್ನುವುದೂ ನಿಜ. ಉರ್ದು ಭಾಷೆಯನ್ನು ಆಗಿನ `ಪೂರ್ವ ಪಾಕಿಸ್ತಾನ'ದಲ್ಲಿ ಕಡ್ಡಾಯಗೊಳಿಸುವ ಪಾಕ್ ಸರ್ಕಾರದ ನಿರ್ಧಾರವನ್ನು ಖಂಡಿಸಿ ಢಾಕಾ ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸೈನಿಕರು ಗುಂಡು ಹಾರಿಸಿದರು.

ಆಗ ಏಳು ಮಂದಿ ಸಾವನ್ನಪ್ಪಿದ್ದರು. ಆ ದಿನದಿಂದ ಬಾಂಗ್ಲಾದಾದ್ಯಂತ ಭಾಷೆ, ಸಂಸ್ಕೃತಿ ಮತ್ತು ಜನಾಂಗೀಯ ಪ್ರತ್ಯೇಕ ಭಾವನೆ ಮತ್ತು ಚಿಂತನೆ  ಹೊಸ ಆಯಾಮ ಪಡೆದುಕೊಂಡವು. `ಶಾಭಾಗ್ ಚೌಕ'ದಲ್ಲಿ 1971ರಲ್ಲಿ ಷೇಕ್ ಮುಜಿಬರ್ ರೆಹಮಾನ್ ಅವರು ಪಾಕ್‌ನಿಂದ ಪ್ರತ್ಯೇಕಗೊಂಡ `ಪೂರ್ವ ಬಂಗಾಳ'ದ ಘೋಷಣೆ ಮಾಡಿದ್ದರು ತಾನೆ. ಒಂದು ರೀತಿಯಲ್ಲಿ ಹೇಳುವುದಿದ್ದರೆ 1952ರ ಫೆಬ್ರುವರಿ 21ರಂದು ಢಾಕಾ ವಿವಿ ಆವರಣದಲ್ಲಿ ನಡೆದ ಆ ಹಿಂಸಾಚಾರ, ಗದ್ದಲವೇ ಬಾಂಗ್ಲಾ ಘೋಷಣೆಯ ಮೊದಲ `ಶಾಭಾಗ್ ಚೌಕ' ಎನ್ನಬಹುದೇನೊ. ಆ ನಂತರ ಬ್ರಹ್ಮಪುತ್ರಾದಲ್ಲಿ ಸಾಕಷ್ಟು ನೀರು ಹರಿದಿದೆ. ಆ `ಪೂರ್ವ ಬಂಗಾಳ' ಇವತ್ತಿನ ಬಾಂಗ್ಲಾದೇಶವಾಗಿದೆ. ಪಾಕಿಸ್ತಾನವು `ಬಾಂಗ್ಲಾ'ವನ್ನಾದರೂ ಬಿಡಬಹುದೇನೊ, ಆದರೆ ಉರ್ದು `ಹೆಗ್ಗಳಿಕೆ'ಯನ್ನು ಬಿಡಲಾರದು ಎಂದು ಮುಜಿಬರ್ ರೆಹಮಾನ್ ಅವರು ಆ ದಿನಗಳಲ್ಲಿ ಹೇಳಿದ್ದಂತೆಯೇ ಕೊನೆಗೂ ಘಟನೆಗಳು ನಡೆದು ಹೋದವು.

ವಿಮೋಚನೆಯ ಹೆಸರಲ್ಲಿ, ಸ್ವಾತಂತ್ರ್ಯದ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಅಧಿಕಾರದ ಗದ್ದುಗೆ ಏರಿದ ಕೆಲವು ಅವಕಾಶವಾದಿಗಳು ನಡೆದುಕೊಂಡ ರೀತಿಯನ್ನು ಗಮನದಲ್ಲಿಟ್ಟುಕೊಂಡು, ಅಂತಹವರಿಗೆ ಶಿಕ್ಷೆಯಾದರೆ ಮಾತ್ರ ಆ ನೆಲದಲ್ಲಿ ಜಾತ್ಯತೀತ ಮೌಲ್ಯಗಳು ಗಟ್ಟಿಯಾಗಿ ಉಳಿಯಲು ಸಾಧ್ಯ ಎಂಬ ಸತ್ಯ ಬಹಳ ತಡವಾಗಿಯಾದರೂ ಆ ದೇಶಕ್ಕೆ ಅರ್ಥವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಚೆಗೆ ಯುವಜನರು ಜನಾಭಿಪ್ರಾಯ ಮೂಡಿಸುತ್ತಿದ್ದಾರೆ.

ಇದೀಗ ಅಲ್ಲಿ ನಡೆಯುತ್ತಿರುವ ಜನಾಂದೋಲನದ ಮುಂಚೂಣಿಯಲ್ಲಿಯೂ ಯುವಜನರೇ ತುಂಬಿದ್ದಾರೆ. ವಿಮೋಚನಾ ಚಳವಳಿಯಲ್ಲಿ ಹೋರಾಡಿದವರೇ ಬೇರೆ, ಲಾಭ ಪಡೆದವರೇ ಬೇರೆ ಎಂಬ ಸತ್ಯವನ್ನೂ ಈಗ ಜನರಿಗೆ ತಿಳಿಸಲಾಗುತ್ತಿದೆ. ಹಿಂದೆ ಬಾಂಗ್ಲಾ ವಿಮೋಚನಾ ಚಳವಳಿಯ ವಿರೋಧಿಗಳಾಗಿದ್ದವರೇ ನಂತರ ಅಧಿಕಾರದ ಗದ್ದುಗೆ ಏರಿ ಕುಳಿತರು. ಅಂತಹವರೇ ಮತ್ತೆ ರಾಜಕಾರಣದೊಳಗೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗೆ `ಧರ್ಮ'ವನ್ನು ಬೆರೆಸಿ ರಾಜಕೀಯ ನಡೆಸತೊಡಗಿದರು. ಖಲೀದಾ ಜಿಯಾ ಅವರ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ (ಬಿಎನ್‌ಪಿ) ಮತ್ತು ಜಮಾತ್‌ನಂತಹ ಸಂಘಟನೆಗಳು ಮಾಡಿದ್ದಾದರೂ ಇನ್ನೇನು ?

ಆಗಿನ `ಪೂರ್ವ ಪಾಕಿಸ್ತಾನ'ದಲ್ಲಿ ಸ್ವಾಂತಂತ್ರ್ಯಾಂದೋಲನ ನಡೆಯುತ್ತಿದ್ದಾಗ ಪಶ್ಚಿಮ ಪಾಕಿಸ್ತಾನದ ಯೋಧರೊಡನೆ ಕೈಜೋಡಿಸಿ ವಿಮೋಚನಾ ಹೋರಾಟಗಾರರ ವಿರುದ್ಧವೇ ಸಂಚು ನಡೆಸಿದವರೇ ನಂತರದ ದಿನಗಳಲ್ಲಿ `ವಿಮೋಚನೆಯ ಹೋರಾಟಗಾರರು' ಎಂಬ ಹಣೆಪಟ್ಟಿ ಇಟ್ಟುಕೊಂಡು ಜನಮನ್ನಣೆ ಪಡೆದಿದ್ದ ಸಂಗತಿಗಳೆಲ್ಲಾ ಈಚೆಗೆ ಬಯಲುಗೊಳ್ಳತೊಡಗಿವೆ. ಆಗಿನ ಪಾಕಿಸ್ತಾನದ ಸೇನೆಯ ಭಾಗವೇ ಆಗಿದ್ದ ರಜಾಕಾರರೊಡನೆ ಸೇರಿಕೊಂಡಿದ್ದ ಜಮಾತ್‌ನವರು ಅಂದು ಹೋರಾಟಗಾರರ ವಿರುದ್ಧವೇ ಶಸ್ತ್ರಾಸ್ತ್ರ ಬಳಸಿದ್ದರು.

ಇಂತಹ ಜಮಾತ್‌ನವರು ಪ್ರಸಕ್ತ ರಾಜಕಾರಣ, ಆರ್ಥಿಕ ಕ್ಷೇತ್ರ ಮತ್ತು ಸಮಾಜದ ಪ್ರಮುಖ ವಲಯಗಳಲ್ಲಿ ತಮ್ಮ ಹಿಡಿತ ಹೊಂದಿದ್ದಾರೆ. ಈ ಸಂಘಟನೆಯ ಇಂತಹ ಹಿಡಿತವನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಸಕ್ತ ಯುವಹೋರಾಟಗಾರರು ಅತೀವ ಆಸಕ್ತಿ ಹೊಂದಿದ್ದಾರೆ.

ಆದರೆ ಇಂತಹದ್ದೊಂದು ಸದುದ್ದೇಶದ ಚಳವಳಿಯ ಹಾದಿ ಸುಗಮವಾಗೇನೂ ಇಲ್ಲ. ಜಮಾತ್‌ನ ತಿಜೋರಿಗೆ ಭಾರಿ ಹಣ ಎಲ್ಲೆಲ್ಲಿಂದಲೋ ಹರಿಯುತ್ತಿದೆ. ಬಾಂಗ್ಲಾದ ಪ್ರಬಲ ವಿರೋಧ ಪಕ್ಷವಾಗಿರುವ ಬಿಎನ್‌ಪಿಯು ಮೂಲಭೂತವಾದಿಗಳೊಂದಿಗೆ ಕೈಜೋಡಿಸಿದೆ. ಇಂತಹ ಹಿನ್ನಲೆಯಿಂದಲೇ ಬಿಎನ್‌ಪಿಯ ಬೇಗಮ್ ಖಲೀದಾ ಜಿಯಾ ಅವರು ಈಚೆಗೆ ಢಾಕಾ ನಗರಕ್ಕೆ ಭೇಟಿ ನೀಡಿದ್ದ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿಯಾಗುವ ತಮ್ಮ ಕಾರ್ಯಕ್ರಮವನ್ನೇ ರದ್ದುಗೊಳಿಸಿದ್ದು ತಾನೆ. ಜಮಾತ್ ವಿರುದ್ಧದ ಹೋರಾಟಕ್ಕೆ `ದೆಹಲಿ' ಮಂದಿಯ ಕೃಪಾಕಟಾಕ್ಷವಿದ್ದು, ಅದು ತಮಗೆ ಅಸಮಾಧಾನ ಉಂಟು ಮಾಡಿದೆ ಎಂಬ ಸಂದೇಶವನ್ನು ಅವರು ಈ ಮೂಲಕ  ನೀಡಿದಂತಿದೆ. ಮುಂದಿನ ಕೆಲವೇ ತಿಂಗಳಲ್ಲಿ ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅದರಲ್ಲಿ ತಮ್ಮ ಪಕ್ಷ ಮೇಲುಗೈ ಸಾಧಿಸುವುದಕ್ಕಾಗಿ ಖಲೀದಾ ಅವರು ಜಮಾತ್‌ನ ಜತೆಗೆ ಕೈಜೋಡಿಸಿರುವುದೂ ಸ್ಪಷ್ಟವಾಗಿದೆ.

ಇಂತಹ ಸಂಗತಿಗಳೇನೇ ಇರಬಹುದು. ಅಂದು ವಿಮೋಚನಾ ವಿರೋಧಿಗಳಾಗಿದ್ದು ನಂತರ ಅಧಿಕಾರದ ಸ್ಥಾನಗಳಲ್ಲಿ ಏರಿ ಕುಳಿತಿದ್ದವರನ್ನು ಗುರುತಿಸಿ ಅಂತಹವರಿಗೆ ಮರಣ ದಂಡನೆ ನೀಡಬೇಕೆನ್ನುವವರಿಗಂತೂ ಭಾರತ ಯಾವುದೇ ಕಾರಣಕ್ಕೂ ಪ್ರೋತ್ಸಾಹ ನೀಡಲು ಸಾಧ್ಯವೇ ಇಲ್ಲ ಎಂಬ ಸತ್ಯವನ್ನು ಜಮಾತ್‌ನಂತಹವರು ಅರಿತುಕೊಳ್ಳಬೇಕಿದೆ. ಅಲ್ಲಿ ಹೊರಗಿನ ಯಾವುದೇ ಬೆಂಬಲದಿಂದ ಆಂದೋಲನ ನಡೆಯುತ್ತಿರುವುದಲ್ಲ. ಅಲ್ಲಿ ಹೊಸ ಚಿಂತನೆಯ ಸಿಂಚನವಾಗುತ್ತಿದೆ. ಬಾಂಗ್ಲಾದಾದ್ಯಂತ ಜನ ಜಾಗೃತರಾಗುತ್ತಿದ್ದಾರೆ. ಇದು ಅಲ್ಲಿನ ವಾಸ್ತವ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT