ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್ ಸ್ಫೋಟ: ಸತ್ಪ್ರಜೆಗಳ ಜವಾಬ್ದಾರಿಗಳು...

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ದೆಹಲಿಯಲ್ಲಿ ಇತ್ತೀಚೆಗೆ ಸ್ಫೋಟ ಸಂಭವಿಸಿತು. ಮುಂಬೈ ಕೂಡ ಇಂಥ ಭಯೋತ್ಪಾದಕ ಕೃತ್ಯಗಳಿಗೆ ಸಾಕ್ಷಿಯಾಗಿದೆ. ಪದೇಪದೇ ಇಂಥ ಅವಘಡಗಳು ಸಂಭವಿಸುತ್ತಲೇ ಇವೆ. ಗುಪ್ತಚರ ಇಲಾಖೆ ಭಯೋತ್ಪಾದಕರ ಟಾರ್ಗೆಟ್‌ನಲ್ಲಿ ಇದು ಇತ್ತೆಂಬುದು ತನಗೆ ಗೊತ್ತಿತ್ತು ಎಂದು ಹೇಳುವುದು ಕೂಡ ಸಾಮಾನ್ಯವಾಗಿಬಿಟ್ಟಿದೆ.

ಆದರೂ ದುರಂತವನ್ನು ತಪ್ಪಿಸಲು ಮಾತ್ರ ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಜನ ಇಡೀ ಭದ್ರತಾ ವ್ಯವಸ್ಥೆಯ ವೈಫಲ್ಯದ ಕುರಿತು ವಿಸ್ತೃತವಾಗಿ ಮಾತನಾಡುತ್ತಾ ಪೊಲೀಸರ ಮೇಲೆಯೇ ಗೂಬೆ ಕೂರಿಸುತ್ತಾರೆ. `ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ~ ಎಂಬಂಥ ಧೋರಣೆ ಇದು. ಕೇಂದ್ರ ಸರ್ಕಾರದವರು ರಾಜ್ಯಗಳತ್ತ ಬೆಟ್ಟು ತೋರುತ್ತಾರೆ. ರಾಜ್ಯ ಸರ್ಕಾರದ ಗದ್ದುಗೆ ಮೇಲೆ ಕೂತವರು ಕೇಂದ್ರದವರನ್ನು ದೂರುತ್ತಾ ಕೈತೊಳೆದುಕೊಳ್ಳುತ್ತಾರೆ. 

ಇನ್ನು ದುರಂತಗಳು ನಡೆದ ನಂತರ ರಾಜಕೀಯ ಪಕ್ಷಗಳು ಆಡುವ ಮಾತುಗಳು ಸಮಾಜಮುಖಿಯಾಗದೆ ಸ್ವಹಿತಾಸಕ್ತಿ ಕಾಪಾಡಿಕೊಳ್ಳುವ ಮಾರ್ಗದಲ್ಲಿ ಸಾಗುತ್ತವೆ.

ಸಮಾಜದ `ಸೆಕ್ಯುಲರ್~ ಪದರವು ತೆಳುವಾಗುವುದೇ ರಾಜಕೀಯ ಪಕ್ಷಗಳ ಇಂಥ ಹೇಳಿಕೆಗಳಿಂದ. ಭಯೋತ್ಪಾದಕರ ನೆಲೆವೀಡೆನಿಸಿದ ಪಾಕಿಸ್ತಾನ, ಉಗ್ರರ ಗಣಿ ಎಂದೇ ಕುಖ್ಯಾತಿಗೊಳಗಾಗಿರುವ ಆಫ್ಘಾನಿಸ್ತಾನ, ಅತ್ತ ಬಾಂಗ್ಲಾ, `ಎಲ್‌ಟಿಟಿಇ~ ಅಟ್ಟಹಾಸ ಕಂಡ ಶ್ರೀಲಂಕಾ, ಈಚೀಚೆಗೆ ಭಾರತದ ದೊಡ್ಡ ಶತ್ರು ಎಂದೆನಿಸಿಕೊಳ್ಳುತ್ತಿರುವ ಚೀನಾ ಇವೆಲ್ಲವೂ ಒಡ್ಡುವ ಭಯದ ಸವಾಲುಗಳ ಜೊತೆಗೆ ಆಂತರಿಕವಾಗಿ ಇರುವ ಭಯೋತ್ಪಾದನೆಯ ಹೆಡೆ ನಿರಂತರವಾಗಿ ಆಡುತ್ತಲೇ ಇದೆ.

ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದದ ಕೂಗು ತಣ್ಣಗಾಗಿಯೇ ಇಲ್ಲ. ಭಾರತದ ಪೂರ್ವ ಭಾಗದ ಗಡಿಗಳಲ್ಲಿನ ಕಾಡುಗಳಲ್ಲಿ ಅನೇಕರು ಸಂಘಟನೆಗಳನ್ನು ಕಟ್ಟಿಕೊಂಡು ಹಿಂಸಾಮಾರ್ಗದಲ್ಲಿ ನಡೆಯುತ್ತಿರುವ ಉದಾಹರಣೆಗಳು ಕಣ್ಣಮುಂದಿವೆ.

ಭಯೋತ್ಪಾದನೆ ಎಂಬುದು ನಮ್ಮ ದೇಶದ ಮಟ್ಟಿಗೆ ಸಂಕೀರ್ಣವಾದ ಸಮಸ್ಯೆ. ಅದನ್ನು ತಡೆಯಲು, ಮಟ್ಟಹಾಕಲು ಸರ್ಕಾರ, ಪೊಲೀಸ್ ಇಲಾಖೆಗಳು, ಬೇಹುಗಾರಿಕಾ ದಳ- ಇವುಗಳಿಂದಷ್ಟೆ ಸಾಧ್ಯವಿಲ್ಲ. ಸಮಾಜದ ಪ್ರತಿ ನಾಗರಿಕನ ಪಾತ್ರ ತುಂಬಾ ಮುಖ್ಯವಾದ್ದ್ದದು. ಪೊಲೀಸ್ ಇಲಾಖೆಗೆ ಸಹಕಾರ ಕೊಡಬೇಕೆಂಬ ಜವಾಬ್ದಾರಿಯ ಅರಿವು ಇರಬೇಕಾಗುತ್ತದೆ.

ಅಮೆರಿಕದಲ್ಲಿ ಹತ್ತು ವರ್ಷಗಳಿಂದ ಯಾವುದೇ ಉಗ್ರರ ದಾಳಿ ನಡೆದಿಲ್ಲ ಎಂದು ವಾದಿಸುವುದು, ಇಂಗ್ಲೆಂಡ್‌ನಲ್ಲಿ ಪರಿಸ್ಥಿತಿ ತುಂಬಾ ಸುರಕ್ಷಿತವಾಗಿದೆ ಎನ್ನುತ್ತಾ ಅಲ್ಲಿನ ಪರಿಸ್ಥಿತಿಯನ್ನು ಭಾರತಕ್ಕೆ ಹೋಲಿಸಿ ಮಾತನಾಡುವುದನ್ನು ಕೆಲವು ಮಂದಿ ಮಾಡುತ್ತಾರೆ. ನನ್ನ ಪ್ರಕಾರ ಈ ಹೋಲಿಕೆಗಳೇ ಬಾಲಿಶ. ನಮ್ಮ ವ್ಯವಸ್ಥೆ, ಪರಿಸ್ಥಿತಿ ಆ ದೇಶಗಳಿಗಿಂತ ಸಂಪೂರ್ಣ ಭಿನ್ನ.

ಬೆಂಗಳೂರಿನಲ್ಲಿ `ಎಲ್‌ಟಿಟಿಇ~ಗೆ ಸೇರಿದವರು, ಉಲ್ಫಾ ಭಯೋತ್ಪಾದಕರು ಸಿಕ್ಕಿದ್ದಾರೆ. ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದವರು ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಬೆಂಗಳೂರಿನಲ್ಲಿ ತಂಗಿರುವುದಕ್ಕೂ ಪುರಾವೆಗಳು ಸಿಕ್ಕಿವೆ. ಇಂಥವರ ಬಗ್ಗೆ ನಮ್ಮ ನಾಗರಿಕರಲ್ಲೇ ಕೆಲವರಿಗೆ ಅನುಕಂಪವಿದೆ. ಇವರ ವಿಚಾರ, ಸಿದ್ಧಾಂತಗಳ ಕುರಿತು ಸಹಮತವಿದೆ.

ಹಿಂಸೆ ಆಧರಿಸಿದ ಹೋರಾಟ ಯಾವುದೇ ಸಮಾಜಕ್ಕೂ ಅಪಾಯಕಾರಿ. ಅದನ್ನು ಅರಿತವನೇ ಸತ್ಪ್ರಜೆ. ಅದು ಬಿಟ್ಟು ಹಿಂಸೆಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲಿಸುವುದು ಆಂತರಿಕ ಸುರಕ್ಷತೆಯ ಪರಿಧಿ ಸಡಿಲವಾಗಲು ಕಾರಣವಾಗುತ್ತದೆ. ಇಷ್ಟೆಲ್ಲಾ ವೈಪರೀತ್ಯಗಳ ನಡುವೆಯೇ ಭಯೋತ್ಪಾದನೆಯನ್ನು ತಡೆಗಟ್ಟಬೇಕಾದ ಸವಾಲು ಎದುರಲ್ಲಿದೆ.

ಜಾಫ್ನಾದಲ್ಲಿ ಯುದ್ಧ  ನಡೆದಾಗ ಅಲ್ಲಿ ಗಾಯಗೊಂಡ ಎಲ್‌ಟಿಟಿಇ ಬೆಂಬಲಿಗರು ತಿರುಚ್ಚಿ ತಲುಪಿ, ಅಲ್ಲಿಂದ ಬೆಂಗಳೂರಿಗೆ ಬಂದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ರಾಜೀವ್ ಗಾಂಧಿಯವರ ಹತ್ಯೆ ನಡೆದ ನಂತರವಂತೂ ದೇಶದ ಉದ್ದುಗಲಕ್ಕೂ ಜನ ಹಾಗೂ ಸಮೂಹ ಮಾಧ್ಯಮ ಭಯೋತ್ಪಾದನೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸತೊಡಗಿದ್ದವು.

ಶಿವರಾಸನ್ ತಂಡ ತಂಗಿದ್ದ ಮನೆಯ ಎದುರೇ ಪೊಲೀಸ್ ಅಧಿಕಾರಿಯೊಬ್ಬರ ಮನೆಯಿತ್ತು. ಅವರಿಗಾದರೂ ಈ ತಂಡದ ಬಗ್ಗೆ ಯಾಕೆ ಅನುಮಾನ ಬರಲಿಲ್ಲ ಎಂದು ನಾವೆಲ್ಲಾ ಮಾತಾಡಿಕೊಂಡಿದ್ದೆವು. ಆ ಅಧಿಕಾರಿ ಕೂಡ ಅಷ್ಟು ಧೈರ್ಯಸ್ಥರಾಗಿರಲಿಲ್ಲ.
ಅದಕ್ಕೂ ಮೊದಲು ಎಲ್‌ಟಿಟಿಇ ತಂಡ ತಂಗಿದ್ದ ಪುಟ್ಟೇನಹಳ್ಳಿಯ ಮನೆ ಕಾಂಗ್ರೆಸ್ ಕಾರ್ಯಕರ್ತನಿಗೆ ಸೇರಿದ್ದಾಗಿತ್ತು.

ರಾಜೀವ್‌ಗಾಂಧಿ ಹತ್ಯೆಗೆ ಸಮಾನವಾದ  ಘಟನೆ ಬೇರೆ ದೇಶದಲ್ಲಿ ನಡೆದರೆ ಅಲ್ಲಿನ ಜನ ಎಚ್ಚೆತ್ತುಕೊಳ್ಳುತ್ತಾರೆ. ಆದರೆ, ನಮ್ಮ ದೇಶದ ನಗರಗಳಲ್ಲಿ ಜನರದ್ದು ಈ ವಿಷಯದಲ್ಲಿ ಉದಾಸೀನ ಧೋರಣೆ. ಬೆಂಗಳೂರಿನಲ್ಲಂತೂ ಅಕ್ಕ-ಪಕ್ಕದವರ ಬಗ್ಗೆ ಜನರಿಗೆ ಅರಿವೇ ಇರುವುದಿಲ್ಲ.

ಪಂಜಾಬ್‌ನಲ್ಲಿ ಖಲಿಸ್ತಾನ್ ಚಳವಳಿ ಉತ್ತುಂಗದಲ್ಲಿದ್ದಾಗ, ಜಮ್ಮು-ಕಾಶ್ಮೀರದ ಕೆಲವು ಬಂಡುಕೋರರು ದೇಶದ ವಿವಿಧೆಡೆ ಹಬ್ಬಿದ್ದಾರೆಂಬ ಅನುಮಾನ ಬಂದ ಸಂದರ್ಭದಲ್ಲಿ ಹಾಗೂ ರಾಜೀವ್‌ಗಾಂಧಿ ಹತ್ಯೆಯಾದ ನಂತರ `ನೆರೆಯವರ ಕಾವಲು ಸಮಿತಿ~, `ರಾತ್ರಿ ಗಸ್ತಿನ ತಂಡ~ಗಳನ್ನು ಪೊಲೀಸ್ ಇಲಾಖೆಯೇ ರಚಿಸಿತು. ಅದರಲ್ಲಿ ಸಾರ್ವಜನಿಕರು ಭಾಗಿಯಾಗುವಂತೆ ನೋಡಿಕೊಂಡಿದ್ದೇ ಅಲ್ಲದೆ ಮಾಧ್ಯಮದಲ್ಲೂ ಆ ಬಗ್ಗೆ ಪ್ರಕಟಣೆ ನೀಡಿತು.

ಇಷ್ಟೆಲ್ಲಾ ಮಾಡಿದರೂ ಜನ ಜಾಗರೂಕರಾಗಿದ್ದು ಕಡಿಮೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರ ಮನೆಯ ಆಸುಪಾಸಿನ ಮನೆಯಲ್ಲೇ ಉಗ್ರರು, ಎಲ್‌ಟಿಟಿಇ ಬೆಂಬಲಿಗರು ತಂಗಿದ್ದರೂ ಗೊತ್ತಾಗದೇ ಹೋದದ್ದು ಹೇಗೆ? ಇದನ್ನು ಜನರ ಉದಾಸೀನ ಎನ್ನಲೇಬೇಕಲ್ಲವೇ?

ಕೆಲವು ಬುದ್ಧಿಜೀವಿಗಳು, ಮಾನವ ಹಕ್ಕುಗಳ ರಕ್ಷಣೆಯ ಹೋರಾಟಗಾರರು, ಕಾನೂನು ರಕ್ಷಕರು ಪೊಲೀಸ್ ವೈಫಲ್ಯದ ಕುರಿತಷ್ಟೆ ಮಾತನಾಡುತ್ತಾರೆ. ತಮ್ಮ ಜವಾಬ್ದಾರಿಯ ಬಗ್ಗೆ ಮಾತಾಡುವುದಿಲ್ಲ.`ಎಲ್‌ಟಿಟಿಇ~ಗೆ ಸಂಬಂಧಿಸಿದ ಕೆಲವರು 20 ವರ್ಷಗಳಿಂದ ಸೆರೆಮನೆ ಅತಿಥಿಗಳಾಗಿದ್ದರು. ಅವರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬೇಕು ಎಂದಾಗಿತ್ತು.

ಇಂಥವರ ಪರ ವಾದ ಮಾಡುವ ವಕೀಲರು ಅಫ್ಜಲ್ ಗುರು ಪರವಾಗಿಯೂ ವಾದ ಮಾಡಿರುವುದುಂಟು. ಕರ್ನಾಟಕದಲ್ಲಿ ಭ್ರಷ್ಟ ರಾಜಕಾರಣಿಗಳ ಪರವಾಗಿ ಕೂಡ ಅವರೇ ವಾದಿಸಲು ಬಂದು ನಿಂತರು. ಈ ವಿಷಯವಾಗಿ ಪ್ರಶ್ನಿಸಿದರೆ ಅದು ವೃತ್ತಿ ಧರ್ಮ ಎನ್ನುತ್ತಾರೆ. ದೇಶದ ಏಕತೆಯನ್ನು ಲೆಕ್ಕಿಸದ ವೃತ್ತಿ ಧರ್ಮ ಸರಿಯೇ ಎಂದು ಅಂಥವರು ಆತ್ಮವಿಮರ್ಶೆ ಮಾಡಿಕೊಳ್ಳುವುದೇ ಇಲ್ಲ.

ರಾಜಕಾರಣಿಗಳು ಕೂಡ ದೇಶದ ಒಗ್ಗಟ್ಟಿನ ಯೋಚನೆ ಮಾಡಿ ಪಕ್ಷಭೇದ ಮರೆತು ವರ್ತಿಸಬೇಕು. ಅದು ಬಿಟ್ಟು ಉಗ್ರರ ದಾಳಿಗಳು, ಅವರಿಂದ ನಡೆಯುವ ಹತ್ಯೆಗಳನ್ನೇ ತಮ್ಮ ಬೇಳೆ ಬೇಯಿಸಿಕೊಳ್ಳುವ ವಿವಾದಗಳನ್ನಾಗಿ ಮಾರ್ಪಡಿಸುವುದು ಸಾಮಾನ್ಯವಾಗಿದೆ.

ದೇಶದ ಏಕತೆಯನ್ನು ನಿರ್ಲಕ್ಷಿಸುವ ಇಂಥವರನ್ನು ಎಲ್ಲಾ ಕಾಲದಲ್ಲೂ ಕಾಣುತ್ತಾ ಬಂದಿದ್ದೇವೆ. ಹೀಗಾಗಿಯೇ ಉಗ್ರರ ದಾಳಿಗಳು, ಭಯೋತ್ಪಾದಕರ ಅಟ್ಟಹಾಸ ನಿರಂತರವಾಗಿ ನಡೆದುಕೊಂಡೇ ಬಂದಿದೆ. ಪೊಲೀಸರು ತಮ್ಮ ಕೈಮೀರಿ ಯತ್ನಿಸಿದರೂ ಈ ಸಮಸ್ಯೆಗಳ ಬುಡ ಅಲ್ಲಾಡಿಸಲು ಆಗುತ್ತಿಲ್ಲ.

ವಾರಸುದಾರರಿಲ್ಲದ ಟಿಫನ್ ಟ್ರಾನ್‌ಸಿಸ್ಟರ್‌ಗಳು, ಕ್ಯಾರಿಯರ್‌ಗಳು, ಸೂಟ್‌ಕೇಸ್‌ಗಳು, ನೀರಿನ ಬಾಟಲಿಗಳು ಮೊದಲಾದ ವಸ್ತುಗಳನ್ನು ಕಂಡಲ್ಲಿ ಪೊಲೀಸರಿಗೆ ತಿಳಿಸಬೇಕು ಎಂದು ಪದೇಪದೇ ಪೊಲೀಸ್ ಇಲಾಖೆ ಪ್ರಕಟಣೆ ನೀಡುತ್ತಲೇ ಇದೆ.

ಅನುಮಾನಾಸ್ಪದವಾಗಿ ಓಡಾಡುವವರು, ಎಲ್ಲರೂ ಮಲಗಿದ ನಂತರ ರಾತ್ರಿಯಲ್ಲಿ ಕದ್ದುಮುಚ್ಚಿ ಯಾರಾದರೂ ಚಟುವಟಿಕೆ ನಡೆಸುತ್ತಿದ್ದಾರೆಂಬ ಅನುಮಾನ ಬಂದರೆ ಆ ವಿಷಯವನ್ನೂಪೊಲೀಸರಿಗೆ ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಕೆಲವರು ಕಿಟಕಿಯ ಗಾಜುಗಳಿಗೆ ಕಪ್ಪು ಪೇಪರ್ ಮೆತ್ತಿ ರಾತ್ರಿಯಲ್ಲಿ ದೀಪ ಹಾಕಿಕೊಂಡು ಯಾರಿಗೂ ಗೊತ್ತಿಲ್ಲದಂತೆ ಏನೋ ಮಾಡುತ್ತಿರುತ್ತಾರೆ ಎಂದಿಟ್ಟುಕೊಳ್ಳೋಣ. ಇಂಥ ಘಟನೆಯ ಅನುಮಾನ ಬಂದರೂ ಪೊಲೀಸರಿಗೆ ತಿಳಿಸಬೇಕು. ತಮ್ಮದೇ ಲೋಕದಲ್ಲಿ ಕಳೆದುಹೋಗಿರುವ ಜನರಿಗೆ ಇದು ಮುಖ್ಯ ಎನ್ನಿಸಿಯೇ ಇಲ್ಲ.

ಈ ಕಾಲಮಾನದಲ್ಲಿ ಜನರನ್ನು ಆಕರ್ಷಿಸುತ್ತಿರುವ ಮಾಲ್‌ಗಳ ಸುರಕ್ಷತೆಯ ಕುರಿತೂ ಜಿಜ್ಞಾಸೆ ಇದೆ. ಬಾಗಿಲಲ್ಲಿ ಮೆಟಲ್ ಡಿಟೆಕ್ಟರ್ ಹಿಡಿದು ಪರೀಕ್ಷಿಸಿ, ಬ್ಯಾಗೇಜ್‌ಗಳನ್ನು ತೆರೆದು ನೋಡಿ ಒಳಬಿಡುವ ವ್ಯವಸ್ಥೆ ಇದೆ. ಕೆಲವು ಮಾಲ್‌ಗಳಲ್ಲಿ ಅದೂ ಇಲ್ಲ.

ವಿಮಾನ ನಿಲ್ದಾಣದಲ್ಲಿ ಇರುವಂತೆ ಇಡೀ ಬ್ಯಾಗನ್ನು ಸ್ಕ್ಯಾನ್ ಮಾಡುವ ವ್ಯವಸ್ಥೆ ಬಹುತೇಕ ಮಾಲ್‌ಗಳಲ್ಲಿ ಇಲ್ಲ. ಮಾಲ್‌ಗಳ ರಚನೆಯಲ್ಲಿನ ಸಂಕೀರ್ಣತೆಯಿಂದಾಗಿ ಒಂದು ವೇಳೆ ಅವಘಡ ಸಂಭವಿಸಿದರೆ ಜನ ನುಗ್ಗಿ ಪಾರಾಗುವುದೂ ಅಸಾಧ್ಯವೆನಿಸಿದೆ. ಯಾಕೆಂದರೆ, ಬಹು ವಿಸ್ತಾರವಾದ ಮಾಲ್‌ಗಳಲ್ಲಿ ಒಟ್ಟೊಟ್ಟಿಗೆ ಜನ ನುಗ್ಗಿದರೆ ಕಾಲ್ತುಳಿತಕ್ಕೆ ಈಡಾಗಿಯೇ ಅನೇಕರು ಮೃತಪಡುವ ಸಾಧ್ಯತೆ ಇದೆ. ಕೇವಲ ಕೆಲವು `ಸಿಸಿಟಿವಿ~ಗಳಿಂದ ದುಷ್ಕೃತ್ಯಗಳನ್ನು ತಪ್ಪಿಸಲು ಸಾಧ್ಯವಿಲ್ಲ.

ನಮ್ಮ ದೇಶದ ಬಹುಪಾಲು ರಾಜ್ಯಗಳಲ್ಲಿ ಇತ್ತೀಚಿನ ವರ್ಷಗಳ ಹಿಂದೆಯೂ ಆರ್‌ಡಿಎಕ್ಸ್ ಪತ್ತೆಮಾಡುವ ಶ್ವಾನದಳ ಇರಲಿಲ್ಲ. ದೆಹಲಿ, ಮುಂಬೈ, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಮಾತ್ರ ಇತ್ತೆಂದು ಕಾಣುತ್ತದೆ. ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ವಶಪಡಿಸಿಕೊಂಡ ಆರ್‌ಡಿಎಕ್ಸ್ ನೀಡಿ ಶ್ವಾನದಳವನ್ನು ತರಬೇತಿಗೊಳಿಸಬೇಕು ಎಂದು ಕೆಲವು ವರ್ಷಗಳ ಹಿಂದೆಯೇ ನಿರ್ಧರಿಸಲಾಗಿತ್ತು.

ನಾಯಿಗಳಿಗೆ ಅದರ ವಾಸನೆ ಪತ್ತೆಮಾಡುವಂತೆ ಸಜ್ಜುಗೊಳಿಸಬೇಕಿತ್ತು. ಆದರೆ, ಎಷ್ಟೋ ರಾಜ್ಯಗಳಿಗೆ ತರಬೇತಿಗೆಂದು ಆರ್‌ಡಿಎಕ್ಸ್ ವಿತರಣೆಯನ್ನೇ ಮಾಡಲಿಲ್ಲ. ಆಗ ಈ ವಿಷಯವಾಗಿ ಚರ್ಚೆಗಳು ನಡೆದಿದ್ದವು.

ಬಸ್ ನಿಲ್ದಾಣ, ರೈಲು ನಿಲ್ದಾಣಗಳಂತೆಯೇ ವಿಮಾನ ನಿಲ್ದಾಣಗಳೂ ಈಗ ಗಿಜಿಗುಡತೊಡಗಿವೆ. ಸಂಚರಿಸುವ ಪ್ರತಿ ವ್ಯಕ್ತಿಯನ್ನು ಗಮನಿಸುವುದು ಪೊಲೀಸರಿಗೆ ಅಸಾಧ್ಯ. ಹಾಗಾಗಿ ನಾಗರಿಕರು ಯಾವಾಗಲೂ ಜಾಗ್ರತೆಯಿಂದ ಇರಬೇಕು.

ತಮ್ಮದಲ್ಲದ ವಸ್ತುವನ್ನು ಕಂಡ ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಬೇಕು. ಎಷ್ಟೋ ಹುಸಿ ಬಾಂಬ್ ಕರೆಗಳಿಗೇ ಸ್ಪಂದಿಸುವ ಇಲಾಖೆಗೆ ಪ್ರತಿಯೊಬ್ಬರ ದೂರೂ ಮುಖ್ಯವಾಗಿರುತ್ತದೆ. ಸುಮ್ಮನೆ ಪೊಲೀಸ್ ಇಲಾಖೆಯೊಂದನ್ನೇ ದೂರುತ್ತಾ ಕೂರುವುದರಲ್ಲಿ ಯಾವ ಅರ್ಥವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT