ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲು ನಿರಾಕರಿಸಿದ ವಿರೂಪಾಕ್ಷಪ್ಪ ಅಬ್ಬಿಗೇರಿ

Last Updated 28 ಮೇ 2011, 19:30 IST
ಅಕ್ಷರ ಗಾತ್ರ

ಹೋದವರ್ಷ, ಆಗಸ್ಟ್ ತಿಂಗಳ ಒಂದುದಿನ, ಅಬ್ಬಿಗೇರಿಯವರ (1924-2010) ಸಾವಿನ ಸುದ್ದಿ ಬಂದು ಬಡಿಯಿತು. 86 ವರ್ಷದವರಾಗಿದ್ದು, ವಯೋಸಹಜ ಕಾಯಿಲೆಗಳಿಂದ ಮೆತ್ತಗಾಗಿದ್ದ ಅವರ ಸಾವು ಅನಿರೀಕ್ಷಿತವೇನಾಗಿರಲಿಲ್ಲ. ಆದರೂ ವಿವರಿಸಲಾಗದ ಶೂನ್ಯಭಾವವೊಂದು ಮನಸ್ಸನ್ನು ಆವರಿಸಿತು.
 
ಕರ್ನಾಟಕದ ಸಮಾಜವಾದಿ ಚಳವಳಿಯಲ್ಲಿ ಅವಕಾಶವಾದಿಗಳಾಗಿ ಎಲ್ಲೆಲ್ಲೋ ಕಳೆದುಹೋದ ಜನರಿದ್ದಾರೆ; ಹಾಗೆಯೇ ಆದರ್ಶವಾದಿಗಳಾಗಿ ಬವಣೆಯ ಹಾದಿಹಿಡಿದು ನಡೆದವರೂ ಇದ್ದಾರೆ. ಎರಡನೇ ಮಾದರಿಗೆ ಥಟ್ಟನೆ ನೆನಪಾಗುವವರು- ವಿರೂಪಾಕ್ಷಪ್ಪ ಅಬ್ಬಿಗೇರಿ, ನೀಲಗಂಗಯ್ಯ ಪೂಜಾರ, ಕಡಿದಾಳು ಶಾಮಣ್ಣ ಮುಂತಾದವರು. ಇವರಲ್ಲಿ ಒಂದು ಕೊಂಡಿ ಕಳಚಿತು ಎಂದುಕೊಂಡೆ.

ಅಬ್ಬಿಗೇರಿ ಅವರನ್ನು ನಾನು ಮೊದಲು ಕಂಡಿದ್ದು ಕನ್ನಡ ವಿಶ್ವವಿದ್ಯಾಲಯದಲ್ಲಿ.ಲೋಹಿಯಾ ಪೀಠದ ಕಾರ್ಯಕ್ರಮಕ್ಕೆಂದು ಬಂದಿದ್ದರು. ತೆಳ್ಳಗೆ ಉದ್ದಕ್ಕಿದ್ದ ಅವರು ನೆಟ್ಟಗೆ ನಡೆಯುತ್ತಿದ್ದರು. ಹೊಲಗೆಲಸವನ್ನು ಅರ್ಧಕ್ಕೆ ಬಿಟ್ಟುಬಂದ ರೈತನಂತೆ, ಕಚ್ಚೆಪಂಚೆಯುಟ್ಟು ಹಳತಾದ ಜುಬ್ಬ ತೊಟ್ಟಿದ್ದರು.

ಪಂಚೆಯೊಳಗಿನ ಅವರ ಬತ್ತಿದ ಕಾಲುಗಳು ಕೊಳವೆಗಳಂತೆ ಕಾಣುತ್ತಿದ್ದವು. ಹವಾಯಿ ಚಪ್ಪಲಿ ಹಾಕಿಕೊಂಡಿದ್ದರು.  ಅವರು ಅಂದು ಚೆನ್ನಾಗಿ ಮಾತಾಡಿದರು. ತಾವು ವಾಸವಾಗಿರುವ ಗದಗ ಜಿಲ್ಲೆಯ ಸೂಡಿ ಗ್ರಾಮಕ್ಕೆ ಲೋಹಿಯಾ ಅವರು ಬಂದು, ಭಾಷಣ ಮಾಡಿದ ಹಾಗೂ ಅಡುಗೆ ಮನೆಯಲ್ಲಿ ಕುಳಿತು ಊಟ ಮಾಡಿದ ಪ್ರಸ್ತಾಪ ಮಾಡಿದರು. ಲೋಹಿಯಾ ಭೇಟಿಯ ನೆನಪನ್ನು ತಮ್ಮ ಬಾಳಿನ ಅತ್ಯಮೂಲ್ಯ ನಿಧಿಯೆಂಬಂತೆ ಕಾಪಿಟ್ಟುಕೊಂಡಿದ್ದ ಅವರು, ಇದನ್ನು ಹೇಳುವಾಗ, ಭಾವುಕರಾದರು.

ಹಳಗಾಲದ ಸ್ಮೃತಿಗಳಲ್ಲಿ ಬದುಕುತ್ತಿರುವಂತೆ ತೋರುವ ಈ ಹಿರಿಯ ಜೀವ, ವರ್ತಮಾನದ ಸಾಮಾಜಿಕ ರಾಜಕೀಯ ಬೆಳವಣಿಗೆಗಳ ಮೇಲೆ ಆಕ್ರೋಶದಿಂದಲೂ ಅಸಹಾಯಕತೆಯಿಂದಲೂ ಕುದಿಯುತ್ತಿರುವಂತೆ ಸಹ ತೋರಿತು.
 
ಅವರ ಮಾತಿನೊಳಗಿನ ಪ್ರಾಮಾಣಿಕತೆ, ದಿಟ್ಟತನ ಮತ್ತು ಆರ್ತತೆ ನನ್ನನ್ನು ವಿಚಲಿತಗೊಳಿಸಿದವು. ನಂತರ ಅವರ ಸಂಪರ್ಕಕ್ಕೆ ಸಿಲುಕಿದೆ. ಅವರ ಪ್ರೀತಿಯನ್ನು ಪಡೆದೆ. ಆದರೆ ಸೂಡಿಗೆ ಹೋಗಿ, ಅವರೊಡನೆ ಚರ್ಚಿಸುತ್ತ ಇಡೀದಿನ ಕಳೆಯಬೇಕೆಂಬ ನನ್ನಾಸೆ ಮಾತ್ರ ಹಾಗೇ ಉಳಿದುಬಿಟ್ಟಿತು.

ಈಚೆಗೆ ಅಬ್ಬಿಗೇರಿಯವರ ಬಂಧುಗಳು, ಶಿಷ್ಯರು, ಗೆಳೆಯರನ್ನು ಭೇಟಿಮಾಡಲೆಂದು ಸೂಡಿಗೆ ಹೋದೆ. ಹೋದೊಡನೆ, ಸಂಗಮೇಶ, ತಮ್ಮ ತಂದೆಯಿರುತ್ತಿದ್ದ ಮಣ್ಣಿನ ಮಾಳಿಗೆಯ ಚಿಕ್ಕಮನೆಗೆ ಕರೆದೊಯ್ದರು. ಗೋಡೆಯ ಮೇಲೆ ವಿವೇಕಾನಂದ, ಬಸವಣ್ಣ ಹಾಗೂ `ಶಲ್ ಬ್ರೆಕ್, ಬಟ್ ನಾಟ್ ಬೆಂಡ್~ ಎಂಬ ಅಡಿಬರೆಹವಿರುವ ಸ್ವಾಮಿ ರಮಾನಂದತೀರ್ಥರ ಪಟಗಳಿದ್ದವು. ಮನೆತುಂಬ ರಾಶಿರಾಶಿ ಪುಸ್ತಕ.
 
ಹಲಗೆ, ಅಟ್ಟ, ಕಪಾಟು ಸಾಲದೆ, ನೆಲದ ಮೇಲೆ ಕೂಡ ಒಟ್ಟಲಾಗಿತ್ತು. ದೂಳುಹಿಡಿದ ಅವುಗಳನ್ನು ಹುಷಾರಾಗಿ ತೆಗೆದು ನೋಡಿದೆ: ನಾರ್ಲಾರ `ದಿ ಟ್ರೂತ್ ಅಬೌಟ್ ದಿ ಗೀತಾ ; ಲೋಹಿಯಾರ `25000/= ಎ ಡೆ~ ; ಸುರ್ಜಿತ್ ದಾಸಗುಪ್ತಾರ `ಭಾರತೀಯ ಮುಸಲ್ಮಾನದಾರ್ ಸಂಕಟ್~ ; ಸಿಗ್ಮಂಡ್ ಫ್ರಾಯ್ಡನ `ಸೈಕೋ ಅನಾಲಿಸಿಸ್~ ; ಲಂಕೇಶರ `ಹುಳಿಮಾವಿನ ಮರ~ ; ಗೋವಿಂದಪೈರ `ಸಂಶೋಧನ ಸಂಪುಟ~ ; ಪಾಟಣಕರ್ ಅವರ `ಸೌಂದರ್ಯ ಮೀಮಾಂಸಾ~ ; ಎಂ.ಎಂ.ಕಾಳೆಯವರ `ಧರ್ಮಶಾಸ್ತ್ರಾ ಚ ಇತಿಹಾಸ್~ ; ರವೀಂದ್ರರ `ಗೀತಾಂಜಲಿ~ ; ಫ್ಲಾಬೋನ `ಮೇಡಂ ಬೊವೆರಿ~ - ಎಷ್ಟೊಂದು ಬಗೆಯ ಪುಸ್ತಕಗಳು.

ಪ್ರತಿಪುಸ್ತಕದ ಮೊದಲ ಪುಟದಲ್ಲೂ ಎಲ್ಲಿಂದ ಯಾವಾಗ ತರಿಸಿಕೊಂಡಿದ್ದು ಎಂಬುದನ್ನು ಬರೆದು ಸಹಿಮಾಡಲಾಗಿತ್ತು. ವಿಶೇಷವೆಂದರೆ, ಹೆಚ್ಚಿನ ಪುಸ್ತಕಗಳು ಬಂಗಾಳಿ ಮತ್ತು ಮರಾಠಿಯವು. ಹಳ್ಳಿಯಲ್ಲಿದ್ದ ಶಾಲಾ ಮಾಸ್ತರರೊಬ್ಬರ ಜ್ಞಾನದಾಹ ಅಚ್ಚರಿ ಮೂಡಿಸಿತು. ಅಬ್ಬಿಗೇರಿಯವರು ಈ ಕೃತಿಗಳನ್ನೆಲ್ಲ ಓದುತ್ತಿದ್ದರು ಮಾತ್ರವಲ್ಲ, ಓದಿದ ಕೂಡಲೇ ಪ್ರತಿಕ್ರಿಯೆಯನ್ನು ಬರೆದಿಡುತ್ತಿದ್ದರು.
 
`ಮೇಡಂ ಬೊವೆರಿ~ ಕಾದಂಬರಿ ಕುರಿತು ಅವರ ಡೈರಿಯಲ್ಲಿರುವ ಟಿಪ್ಪಣಿಯು, ಬೊವೆರಿಯ ಅದಮ್ಯ ಪ್ರೇಮಕ್ಕೂ ಅವಳ ಸಾವಿಗೂ ಕರಗಿಹೋದ ಭಾವುಕ ಓದುಗನೊಬ್ಬನ ಪ್ರತಿಬಿಂಬದಂತಿತ್ತು. ಅಬ್ಬಿಗೇರಿಯವರ ಶಿಷ್ಯ ಮಹಾಲಿಂಗಪ್ಪ ಬಾದವಾಡಗಿಯವರು ಹೇಳಿದ್ದು ನಿಜ: `ಅವರು ತೀರ್ಕೊಂಡು ನಮ್ಮೂರ ಸರಸ್ವತಿ ಭಂಡಾರವೇ ಕಳೆದುಹೋದಂಗ ಆಗೇದರಿ!~.

ಮೂಲತಃ ಚಳವಳಿಗಾರರಾಗಿದ್ದ ಅಬ್ಬಿಗೇರಿಯವರ ಬಂಡುಕೋರತನ ಶಾಲಾ ಬಾಲಕನಿರುವಾಗಲೇ ಪ್ರಕಟವಾಯಿತು. 1942ರಲ್ಲಿ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಜೈಲಿಗೆ ಹೋದರು. ಬಳಿಕ ಲೋಹಿಯಾ ಭೇಟಿಯು ಅವರ ಬಂಡುಕೋರತನಕ್ಕೆ ಸಮಾಜವಾದಿ ಆದರ್ಶಗಳ ಕ್ರಿಯಾಶೀಲ ದೀಕ್ಷೆಯನ್ನು ಒದಗಿಸಿತು. ಇದಕ್ಕೆ ಕೊಂಚ ಹೊಂದಾಣಿಕೆಯಾಗುವ ಸಂಗಾತಿಗಳನ್ನೂ ಅವರು ಕಟ್ಟಿಕೊಂಡರು.

ನಿದರ್ಶನಕ್ಕೆ ಅಬ್ಬಿಗೇರಿಯವರು ತುಂಬ ಗೌರವಿಸುತ್ತಿದ್ದ ಗದಗ ಸೀಮೆಯ ರಾಜಕಾರಣಿ ಅಂದಾನಪ್ಪ ದೊಡ್ಡಮೇಟಿಯವರು ಸಾಂಸ್ಕೃತಿಕ ವ್ಯಕ್ತಿತ್ವ ಇದ್ದವರು; ಅವರ ಪ್ರೀತಿಯ ಮಿತ್ರರಾದ ಬಸವರಾಜ ಕಟ್ಟೀಮನಿಯವರು ಬರೆಹದಷ್ಟೇ ತೀವ್ರವಾಗಿ ರಾಜಕಾರಣದಲ್ಲಿದ್ದವರು. ಅಬ್ಬಿಗೇರಿಯವರ ವ್ಯಕ್ತಿತ್ವದಲ್ಲಿ ಹೋರಾಟದ ಕೆಚ್ಚು, ಆದರ್ಶವಾದ, ಭಾವುಕತೆ, ಹಟಮಾರಿತನ ಹಾಗೂ ಸಾಹಿತ್ಯಾಭಿರುಚಿಗಳು ಹೀಗೆ ಪರಸ್ಪರ ಪೂರಕವಾಗಿದ್ದವು.  

ಅಬ್ಬಿಗೇರಿಯವರಲ್ಲಿ ತಾವು ಒಪ್ಪಿಕೊಂಡ ವ್ಯಕ್ತಿತ್ವವನ್ನು ಜೀವಮಾನವಿಡೀ ಪ್ರೀತಿಸುವ ಮತ್ತು ಆರಾಧಿಸುವ ನಿಷ್ಠೆಯಿತ್ತು. ಲೋಹಿಯಾ, ಗಾಂಧಿ ಅವರ ಪ್ರಿಯ ವ್ಯಕ್ತಿತ್ವಗಳು.

ಲೋಹಿಯಾ ಹೆಸರು ಬಂದರೆ, ಅವರಲ್ಲಿ ಶಕ್ತಿಯೊಂದರ ಆವಾಹನೆಯಾದಂತೆ ಆಗುತ್ತಿತ್ತು. ಅವರು ದೇವರಾಜ ಅರಸು ತೀರಿಕೊಂಡಾಗ ಬರೆದ ಶ್ರದ್ಧಾಂಜಲಿ ಕವನವಿರಲಿ, ದೊಡ್ಡಮೇಟಿಯವರು ನಿಧನರಾದಾಗ ಬರೆದ ಲೇಖನವಿರಲಿ- ಎಲ್ಲ ಕಡೆ ಅವರ ಈ ವ್ಯಕ್ತಿಯಾರಾಧನೆಯ ಗುಣವನ್ನು ಕಾಣಬಹುದು.

ದೊಡ್ಡಮೇಟಿಯವರ ವರ್ಣನೆಯೊಂದರ ಭಾಗ ಹೀಗಿದೆ: `ಕೃತಿಧೀರತೆಯಲ್ಲಿ ಕರ್ಣ, ಜನತೆಯ ಹೃದಯವನ್ನು ಗೆದ್ದುಕೊಳ್ಳುವಲ್ಲಿ ಅಜಾತಶತ್ರು, ದಾನಮಾಡುವಲ್ಲಿ ಬಲಿ ಚಕ್ರವರ್ತಿ, ಭಣಿತೆಯಲ್ಲಿ ಡೆಮೋಸ್ತೆನೀಸ್, ಸಮರ್ಪಣ ಭಾವದಲ್ಲಿ ರಂತಿದೇವ, ಹುಸ್ನಬಾನು~. ಇತಿಹಾಸ, ಪುರಾಣ, ಪ್ರಾಚೀನ ಕನ್ನಡ ಕಾವ್ಯಪರಂಪರೆಯನ್ನು ಚೆನ್ನಾಗಿ ಅಧ್ಯಯನ ಮಾಡಿದ್ದ ಅಬ್ಬಿಗೇರಿಯವರ ಬರೆಹದಲ್ಲಿ, ವಾಗಾಡಂಬರವೆನಿಸುವ ವಿಶೇಷಣಗಳ ಮತ್ತು ರೂಪಕಗಳ ಬಳಕೆ ಕಾಣುತ್ತದೆ. ಆದರದು ಕೃತಕವೆನಿಸುವುದಿಲ್ಲ; ಅವರ ಭಾವುಕ ಸಹಜ ಸ್ವಭಾವದ ದ್ಯೋತಕವೆನಿಸುತ್ತದೆ.

ಅಬ್ಬಿಗೇರಿಯವರ ಆದರ್ಶವಾದದ ಇನ್ನೊಂದು ಮುಖವೆಂದರೆ, ಹರಿತವಾದ ನೈತಿಕಪ್ರಜ್ಞೆ. ತನಗೆ ಸರಿಯೆನಿಸಿದ್ದನ್ನು ಧೈರ್ಯವಾಗಿ ಹೇಳುವ ಮತ್ತು ಮಾಡುವ ಗುಣ. ದಲಿತರ ಮೇಲಿನ ಭೂಮಾಲೀಕ ಸವರ್ಣೀಯರ ದಬ್ಬಾಳಿಕೆಯನ್ನು ಸದಾ ವಿರೋಧಿಸುತ್ತಿದ್ದ ಅವರು, ಊರಿನ ಉಳ್ಳವರ ಜತೆ ನಿಷ್ಠೂರ ಕಟ್ಟಿಕೊಂಡಿದ್ದರು.

ಊರವರು ಹಮ್ಮಿಕೊಂಡಿದ್ದ ಮಠಾಧೀಶರ ಅಡ್ಡಪಲ್ಲಕ್ಕಿ ಉತ್ಸವವನ್ನು ವಿರೋಧಿಸಿ ನಿಲ್ಲಿಸಿದರು. ಮುರಾರ್ಜಿ ದೇಸಾಯಿಯವರ ಭೆಯಲ್ಲಿ ಎದ್ದುನಿಂತು, ನೆಹರೂ ಸರ್ಕಾರದ ಆಹಾರ ರಫ್ತುನೀತಿಯನ್ನು ಖಂಡಿಸಿದರು; ಅಂದಾನಪ್ಪ ನಿಷ್ಕ್ರಿಯಯರಾದಾಗ `ದೊಟ್ಟಮೇಟಿಯವರ ದೊಡ್ಡದೊಡ್ಡ ಮಾತುಗಳು~ ಎಂಬ ಲೇಖನ ಬರೆದು ಎಚ್ಚರಿಸಿದರು.

ನಾಡಿನ ಬಗ್ಗೆ ಅಪಾರ ಕಳಕಳಿಯಿದ್ದ ಕಾರಣದಿಂದಲೇ ಹುಟ್ಟಿದ ಖಂಡಿತಗುಣವಿದು. ಅದರಲ್ಲೂ ಭ್ರಷ್ಟ ರಾಜಕಾರಣಿಗಳ ಬಗ್ಗೆ ಅವರಿಗೆ ಬಹಳ ಕೋಪವಿತ್ತು. `ಬದ್ಮಾಶ್~ ಎಂಬುದು ಅವರು ಸದಾ ಬಳಸುತ್ತಿದ್ದ ಬೈಗುಳವಾಗಿತ್ತು. ಅವರ ಉರಿಯ ನಾಲಗೆಗೆ ಅಂಜಿ ಅನೇಕ ರಾಜಕಾರಣಿಗಳು ಅವರನ್ನು ಭೇಟಿಮಾಡಲು ಅಳುಕುತ್ತಿದ್ದರು.

ಪ್ರಜ್ಞಾವಂತರು ತಾವು ಹುಟ್ಟಿದ ಹಳ್ಳಿಗಳಲ್ಲೇ ಇದ್ದು ಅವನ್ನು ಸುಧಾರಿಸಬೇಕು ಎಂಬ ಗಾಂಧಿಯವರ ಕರೆಯನ್ನು ಪಾಲಿಸಿದವರಲ್ಲಿ ಅಬ್ಬಿಗೇರಿಯವರೂ ಒಬ್ಬರು. ಹೀಗಾಗಿಯೇ ಅವರ ಚಿಂತನೆ ಮತ್ತು ಕ್ರಿಯಾಶೀಲತೆ ಸ್ಥಳೀಯತೆಯಲ್ಲಿ ಆಳವಾಗಿ ಬೇರುತಳೆಯಿತು.

ನೀಲಗಂಗಯ್ಯ ಪೂಜಾರ, ಗಣಪತಿಯಪ್ಪ, ದೊಡ್ಡಮೇಟಿ ಮುಂತಾದವರೆಲ್ಲ, ಸ್ಥಳೀಯ ಸಮಸ್ಯೆಗಳನ್ನು ಕೈಗೆತ್ತಿಕೊಂಡು, ತಾವು ವಾಸಿಸುವ ಊರು ಅಥವಾ ಪ್ರದೇಶವನ್ನೇ ಪ್ರಯೋಗಶಾಲೆ ಮಾಡಿಕೊಂಡು ಕೆಲಸ ಮಾಡಿದವರೇ. ಆದರೆ ಈ ಕೆಲವರಲ್ಲಿ ಕಾಣದ ಅಂತರರಾಷ್ಟ್ರೀಯ ರಾಜಕೀಯ ಪ್ರಜ್ಞೆ ಅಬ್ಬಿಗೇರಿಯವರಲ್ಲಿ, ತುಸು ಹೆಚ್ಚೆನಿಸುವಷ್ಟೇ, ಇತ್ತು. ಅವರು ಜಗತ್ತಿನ ಮಹತ್ವದ ವಿದ್ಯಮಾನಗಳಿಗೆ ಸದಾ ತೆರೆದುಕೊಂಡಿದ್ದರು.

ಇದಕ್ಕೆ ಸಾಕ್ಷಿ, ಬೆಲ್ಜಿಯಂ ಸಾಮ್ರೋಜ್ಯಶಾಹಿಗೆ ಎದುರು ಹೋರಾಡುತ್ತ ಕೊಲೆಯಾದ ಕಾಂಗೊ ಬುಡಕಟ್ಟಿನ ನೇತಾರ ಲುಮಾಂಬ ಅವರ ಕೊಲೆಗೆ ಸೂಡಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿದ್ದು.

ಅಬ್ಬಿಗೇರಿಯವರ ಗೆಳೆಯರು ಲುಮಾಂಬ ಕಾರ್ಯಕ್ರಮ ಜರುಗಿದ ಪರಿಯನ್ನು ನೆನಪಿಸಿಕೊಂಡರು. ಅಬ್ಬಿಗೇರಿಯವರು ತಗಡಿನ ಲಾಲಿಕೆಯಂತಹ ಧ್ವನಿವರ್ಧಕ ಹಿಡಿದು, ಲುಮಾಂಬ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಜನ ಬರಬೇಕೆಂದು ಸೂಡಿಯ ಬೀದಿಗಳಲ್ಲಿ ಕರೆಗೊಡುತ್ತ ಹೋದರಂತೆ.
 
ಸ್ಥಳೀಯ ರಾಜಕಾರಣಿಯೊಬ್ಬರು ಈ ಕಾರ್ಯಕ್ರಮ ಮಾಡಿದರೆ ನಿನಗೆ ಪೆಟ್ಟು ಎಂದು ಧಮಕಿ ಹಾಕಿದರಂತೆ. ಆದರೂ ಅಬ್ಬಿಗೇರಿಯವರು ಛಲಬಿಡದೆ 16 ಜನರನ್ನು ಊರಮಧ್ಯೆ ಸೇರಿಸಿದರಂತೆ. ಕಾರ್ಯಕ್ರಮ ಹಾಳುಮಾಡುವ ಜನರು  ಬರುತ್ತಿದ್ದಂತೆ 10 ಜನ ಕಾಣೆಯಾಗಿ, ಉಳಿದವರು 6 ಜನ. ಆಗ ಅಬ್ಬಿಗೇರಿಯವರು, ನನ್ನ ಕೊಂದರೂ ಚಿಂಯಿಲ್ಲ, ನಾನು ಭಾಷಣ ಮಾಡುವವನೇ ಎಂದು, `ಈ ತುಂಬಿದ ಸಭೆಯಲ್ಲಿರುವ ಅಬ್ಬಿಗೇರಿ ಮಹಾಜನರೇ~ ಎಂದು ಮೂರು ತಾಸು ಮಾತಾಡಿದರಂತೆ.
ಅಬ್ಬಿಗೇರಿಯವರು ಹಳ್ಳಿಯೊಂದರಲ್ಲಿದ್ದು ಮಾಡಿದ ಸುಧಾರಣೆಗಿಂತ ಬಲಿಷ್ಠರನ್ನು ಎದುರುಹಾಕಿಕೊಂಡು ಮಾಡಿದ ಸಂಘರ್ಷಗಳೇ ಹೆಚ್ಚು. ಜಾತಿ, ಆಸ್ತಿ, ಪುರುಷಪ್ರಧಾನತೆ, ಅಸ್ಪೃಶ್ಯತೆಗಳಿರುವ ಸಾಂಪ್ರದಾಯಕ ಹಳ್ಳಿಯಲ್ಲಿ ತಮ್ಮ ಕ್ರಾಂತಿಕಾರಕ ಚಿಂತನೆ ಮತ್ತು ನಡವಳಿಕೆಯಿಂದ ಅವರು ಏಕಾಂಗಿಯಾಗಿದ್ದರು.

ಆಡಂಬರದ ಮದುವೆಗಳಿಗೆ ಅವರು ಹೋಗುತ್ತಿರಲಿಲ್ಲ. ಊರೊಟ್ಟಿನ ಹಬ್ಬಗಳ ಬದಲು, `ಪಂದ್ರಾ ಆಗಸ್ಟ್~, `ಗಾಂಧಿಜಯಂತಿ~ ಮುಂತಾದ ರಾಷ್ಟ್ರೀಯ ಹಬ್ಬಗಳನ್ನಷ್ಟೇ ಮಾಡುತ್ತಿದ್ದರು. ಭಿಕ್ಷೆಬೇಡಲು ಬರುವ ಕಲಾವಿದರನ್ನು ಕೂರಿಸಿಕೊಂಡು ಗಂಟೆಗಟ್ಟಲೆ ಚರ್ಚೆ ಮಾಡುತ್ತಿದ್ದರು.

ದಲಿತಕೇರಿಗೆ ಹೋಗಿ `ಅಂಬೇಡ್ಕರ್ ಜಯಂತಿ~ ಏರ್ಪಡಿಸಿ, ಸರ್ವಣೀಯರ ದಮನದ ವಿರುದ್ಧ ಹೋರಾಟಕ್ಕೆ ಕರೆಗೊಡುತಿದ್ದರು. ಆದರೆ ಈ  ಸಮಾಜವಾದಿ ಪ್ರಜ್ಞೆಯ ಕಾರ್ಯಕ್ರಮಗಳು ಸಾಮುದಾಯಕ ಚಳವಳಿಯ ರೂಪತಾಳುತ್ತಿರಲಿಲ್ಲ; ಬದಲಿಗೆ ಅವರೂ ಅವರ ಕೆಲವು ಸಂಗಾತಿಗಳು ಹಟದಿಂದ ಮಾಡುತ್ತಿದ್ದ ಕಾರ್ಯಕ್ರಮಗಳಾಗಿ ಉಳಿದವು. ಬೆರಳೆಣಿಕೆಯ ಜನರ ಸಭೆಗೆ ಅಬ್ಬಿಗೇರಿಯವರು ಗಂಟೆಗಟ್ಟಲೆ ಮಾತಾಡುವುದು ನಗೆಪಾಟಲಿಗೆ ಈಡಾಗುತ್ತಿತ್ತು.

ಆದರೆ ಅಬ್ಬಿಗೇರಿಯವರು ಲೆಕ್ಕಿಸುತ್ತಿರಲಿಲ್ಲ. `ಒಳ್ಳೆಯ ಕೆಲಸಕ್ಕೆ ಎಷ್ಟು ಜನರು ಸೇರುತ್ತಾರೆ ಎಂಬುದು ಮುಖ್ಯವಲ್ಲ. ಯಾರೂ ಬರದಿದ್ದರೆ ಬಾವುಟದ ಕಂಬಕ್ಕಾದರೂ ಭಾಷಣ ಮಾಡುತ್ತೇನೆ~ ಎಂದು ಅವರು ಹೇಳುತ್ತಿದ್ದರಂತೆ. ಅವರ ಬಗ್ಗೆ ಗೌರವವಿದ್ದ ಜನ ಕೂಡ `ಈ ದೊಡ್ಡಪ್ಪ ಆಡೋ ಮಾತು ನಮಗ ತಿಳಿಯೋದಿಲ್ಲ~ ಎಂದು ಎದ್ದು ಹೋಗುತ್ತಿದ್ದರಂತೆ.

ಅಬ್ಬಿಗೇರಿಯವರ ಗೆಳೆಯ ಗವಿಸಿದ್ಧಪ್ಪ ಮಲ್ಲಾಪುರ ದುಗುಡದಿಂದ ಹೇಳಿದರು: `ಖರವೇಂದ್ರ ವಿರೂಪಾಕ್ಷಪ್ಪ, ನೀ ಭಾಳ ನಿರ್ಭಾಗ್ಯವಂತ. ಎಂಥಾ ಊರಾಗ ಹುಟ್ಟೀಯೋ ಮಾರಾಯ? ಇಲ್ಲಿ ನಿನ್ನ ಆಲೋಚನೆಯನ್ನ ಅರ್ಥಮಾಡಿಕೊಳ್ಳೋರಿಲ್ಲ.

ಅವಕ್ಕ ಚಾಲನೆ ಕೊಡೋರಿಲ್ಲ~- ಹೀಗೆ ಹೇಳುತ್ತ ಅವರ ಕಣ್ಣು ಒದ್ದೆಯಾದವು.
ಕಾಂಗ್ರೆಸ್ಸಿನವರು, ಸಮಾಜವಾದಿಗಳು, ಕಮ್ಯುನಿಸ್ಟರು- ಐವತ್ತರ ದಶಕದ ನಂತರದ ದಿನಮಾನದಲ್ಲಿ, ರಾಜಕೀಯವಾಗಿ ಸೈದ್ಧಾಂತಿಕವಾಗಿ ಪರಸ್ಪರ ಎದುರಾಳಿಗಳಾಗಿ ಸಾಕಷ್ಟು ಕಾದಾಡಿದರಷ್ಟೆ.

ಆದರೆ ಅಬ್ಬಿಗೇರಿಯವರು ವಿವೇಕಾನಂದ, ವಿನೋಬಾ ಭಾವೆ, ಗಾಂಧಿ, ಲೋಹಿಯಾ ಚಿಂತನೆಗಳ ಮೇಲೂ, ಕಾಂಗ್ರೆಸ್ಸಿನ ದೇವರಾಜ ಅರಸು, ಅಂದಾನಪ್ಪ ದೊಡ್ಡಮೇಟಿ, ನೆಲ್ಲೂರ ಶಿವಪ್ಪ, ಕಮ್ಯುನಿಸ್ಟರ ನಂಬೂದರಿಪಾಡ್ ಮುಂತಾದವರ ರಾಜಕಾರಣದ ಮೇಲೂ ಇರಿಸಿಕೊಂಡಿದ್ದ ಆದರ ಕಂಡರೆ, ಅವರು ಪಕ್ಷ ಮತ್ತು ಸಿದ್ಧಾಂತಗಳಾಚೆ ಹೋಗಿ, ತಮಗೆ ಪ್ರಿಯವಾದ ಎಲ್ಲವನ್ನು ಒಳಗೊಳ್ಳುತ್ತಿದ್ದ ಉದಾರಿ ಅನಿಸುತ್ತದೆ.

`ಮನುಕುಲದ ಮೇಲೆ ಗಾಢಪ್ರಭಾವ ಬೀರಿದ ಇಬ್ಬರು ವ್ಯಕ್ತಿಗಳೆಂದರೆ, ಗಾಂಧಿ ಮತ್ತು ಮಾರ್ಕ್ಸ್~ ಎಂಬ ಅವರ ಬರೆಹಗಳಲ್ಲಿ ಬರುವ ಹೇಳಿಕೆಯನ್ನು ಗಮನಿಸಬೇಕು. ಅವರ ಗ್ರಂಥಾಲಯದಲ್ಲಿ ಕೂಡ ಜಗತ್ತಿನ ಎಲ್ಲ ದೊಡ್ಡ ಚಿಂತಕರ ಸಂಪುಟಗಳು ತುಂಬಿಕೊಂಡಿವೆ.

ಸೈದ್ಧಾಂತಿಕವಾಗಿ ಉದಾರವಾದ ಮನೋಭಾವವಿದ್ದ ಕಾರಣದಿಂದಲೇ, ಅವರು ನಾಡಿನ ಅನೇಕ ಬಗೆಯ ಜನಪರ ಚಳವಳಿಗಳಲ್ಲಿ ತಾತ್ವಿಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತೆನಿಸುತ್ತದೆ.

ಅಬ್ಬಿಗೇರಿಯವರು ಒಬ್ಬ ಕಥೆಗಾರ ಹಾಗೂ ಕವಿ ಕೂಡ. ಅವರು ತಮ್ಮ ಬರೆಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದೇ ಇರುವುದರಿಂದ ಅವು ಹೆಚ್ಚು ಚರ್ಚೆಗೆ ಬರಲಿಲ್ಲ. ಬಡವರ, ಮುಖ್ಯವಾಗಿ ಮಹಿಳೆಯರ ಅಸಹಾಯಕತೆಯನ್ನೇ ಅನುಕಂಪದಿಂದ ಚಿತ್ರಿಸುವ ಅವರ ಕಥೆಗಳಲ್ಲಿ ಪ್ರಗತಿಶೀಲರ ಪ್ರಭಾವವೂ; ನಿಸರ್ಗ ಸೌಂದರ್ಯದಲ್ಲಿ ಮೈಮರೆತು ಬಣ್ಣಿಸುವ ಅವರ ಕವನಗಳಲ್ಲಿ ಕುವೆಂಪು ಪ್ರಭಾವವೂ ಇದ್ದಂತಿದೆ.

ಅಬ್ಬಿಗೇರಿಯವರು ಹುಟ್ಟಿ ಬೆಳೆದ ಕಾಲಸಂದರ್ಭವೊ, ಅವರಲ್ಲಿದ್ದ ಭಾವನಾತ್ಮಕತೆಯೊ ಕಾರಣವಾಗಿ, ಅವರೊಬ್ಬ ರಮ್ಯ ಮತ್ತು ಪ್ರಗತಿಶೀಲ ಮನೋಭಾವಗಳು ಸಂಗಮಿಸಿದ ಲೇಖಕರಾಗಿದ್ದರು. ಈ ಮನೋಭಾವವನ್ನು ಅವರು ಪತ್ರಿಕಾ ಸಂಪಾದಕರಿಗೂ, ಗೆಳೆಯರಿಗೂ, ಶಿಷ್ಯರಿಗೂ  ಬರೆಯುತ್ತಿದ್ದ ಸುದೀರ್ಘ ಪತ್ರಗಳಲ್ಲಿ ಸಹ ನೋಡಬಹುದು.
 
ಅವರ `ಮುಳ್ಳಿನ ಪೊದೆಯಲ್ಲಿ ಗುಲಾಬಿ~ ಹಾಗೂ `ಕಂಬನಿಯ ಮಂಜಿನಲ್ಲಿ ಮರೆಯಾದ ಹಂಪೆ~ ಎಂಬ ಎರಡು ಲೇಖನಗಳು ವಿಶಿಷ್ಟವಾಗಿವೆ. ಮೊದಲನೆಯದರಲ್ಲಿ, ಜನರಲ್ಲಿ ರಾಜಕೀಯ ಎಚ್ಚರವನ್ನು ಮೂಡಿಸಲೆಂದು ಅಬ್ಬಿಗೇರಿಯವರೂ ಅವರ ಸಂಗಾತಿಗಳೂ ಹಳ್ಳಿಗಳಿಗೆ ಹೋದಾಗಿನ ಅನುಭವವಿದೆ.

ನಿತ್ಯದ ಕಷ್ಟಸುಖಗಳಲ್ಲಿ ತೊಳಲಾಡುವ ಜನ, ತಮ್ಮನ್ನು ಬದಲಿಸಲೆಂದು ದಿಢೀರನೇ ಇಳಿದುಬಿಡುವ ಆದರ್ಶವಾದಿಗಳ ಬೋಧನೆಯನ್ನು ತಿರಸ್ಕರಿಸುತ್ತಾರೆ. ಈ ಲೇಖನ ಆದರ್ಶಗಳಿಗೆ ಕಠೋರವಾದ ವಾಸ್ತವತೆಯು ಢಿಕ್ಕಿಹೊಡೆಯುವುದನ್ನು ಪ್ರಾಮಾಣಿಕವಾಗಿ ದಾಖಲಿಸುತ್ತದೆ; ಎರಡನೆಯ ಲೇಖನವು ಹಂಪಿಗೆ ಹೋದಾಗಿನ ಅನುಭವವನ್ನು ಒಳಗೊಂಡಿದೆ.

ಇದರಲ್ಲಿ ಹಂಪಿ ಪ್ರವಾಸಿಗ ಬರೆಹಗಳಲ್ಲಿ ಸಾಮಾನ್ಯವಾಗಿ ಕಾಣುವ, ಗತಕಾಲದ ವೈಭವದ ಹಳಹಳಿಕೆಯಿಲ್ಲ. ಬದಲಿಗೆ ಹಂಪಿಯಲ್ಲಿ ಭೇಟಿಯಾದ ಇಬ್ಬರು ಭಿಕ್ಷುಕಸಾಧುಗಳು ತೋರಿದ ಪ್ರೀತಿ ವಿಶ್ವಾಸದ ಚಿತ್ರಣವಿದೆ.

`ನಮ್ಮ ದೇಶದ ತರುಣರಿಗೆ ವೈಚಾರಿಕ ಪ್ರಜ್ಞೆಯಿಲ್ಲ. ಕನಸಿಲ್ಲ. ಇದನ್ನು ಕಂಡು ನನ್ನ ಜೀವ ತಳಮಳಿಸುತ್ತಿದೆ. ಅವರಿಗೆ ಆದರ್ಶ ಕಟ್ಟಿಕೊಡುವವರು ಯಾರು? ಭ್ರಷ್ಟ ರಾಜಕಾರಣಿಗಳಿಂದಲಂತೂ ಸಾಧ್ಯವಿಲ್ಲ. ಬುದ್ಧಿಜೀವಿಗಳಾದವರು ತರುಣರಿಗೆ ಯಾವ ಸ್ಫೂರ್ತಿಯನ್ನು ಕೊಡಲಾಗದಂತೆ ಅನೈತಿಕವಾಗಿದ್ದಾರೆ.

ಇದನ್ನು ಕಂಡು ನನ್ನ ಜೀವ ತಳಮಳಿಸುತ್ತಿದೆ~ ಎಂದು ಅಪ್ಪ ಒಬ್ಬರೇ ನೋವುಣ್ಣುತ್ತಿದ್ದರು ಎಂದು ಸಂಗಮೇಶ ಹೇಳಿದರು. ಭಾರತದ ಬದಲಾದ ಸನ್ನಿವೇಶಗಳು ಅನೇಕ ಆದರ್ಶವಾದಿಗಳನ್ನು ರಾಜಿಗಳಿಗೊ, ಅನೈತಿಕ ಆಯ್ಕೆಗಳಿಗೊ, ಹಳೆಯ ಆದರ್ಶಗಳನ್ನು ನೆನೆದು ಹಳಹಳಿಸುತ್ತ ವರ್ತಮಾನವನ್ನು ತೆಗಳುವ ಸಿನಿಕತೆಗೊ ಕರೆದೊಯ್ದಿವೆ.

ಅಬ್ಬಿಗೇರಿಯವರಲ್ಲಿ ದೇಶದ ಈಚಿನ ವಿದ್ಯಮಾನಗಳಿಂದ ಹತಾಶಭಾವ ಮೂಡಿತ್ತು, ನಿಜ. ಆದರೂ ಹೊಸಸಮಾಜ ಕಟ್ಟುವ ಚಿಂತನೆ ಮತ್ತು ಕ್ರಿಯಾಶೀಲತೆಗಳು ತಮ್ಮ ತಲೆಮಾರಿಗೇ ಮುಗಿದುಹೋದವು ಎಂಬ ಸಿನಿಕತೆ ಬಂದಿರಲಿಲ್ಲ. ಅವರು ತಮ್ಮನ್ನು ಭೇಟಿಯಾಗಲು ಬರುವ ತರುಣರ ಜತೆ ಬಹಳ ಶ್ರದ್ಧೆಯಿಂದ ಸಂವಾದದಲ್ಲಿ ತೊಡಗುತ್ತಿದ್ದರು.

ಸೂಡಿಯ ದಲಿತ ಕೇರಿಗೆ ಹೋಗಿ, ಅವರಿಂದ ಪ್ರಭಾವಿತರಾದ ಕೆಲವು ತರುಣರ ಜತೆ ಮಾತಾಡಿದೆ. ಬಸವರಾಜ ಕಡುಬಿನವರ್ ಎಂಬ ತರುಣ- `ಅವರಿಗೆ ನಮ್ಮಂತ ಬಡವರ ಮ್ಯಾಲ ಪ್ರೀತಿ ಭಾಳ. ನಮ್ಮ ಕೇರಿಗ ಬರ್ತಿದ್ದರಿ. ನಮ್ಮನ್ಯಾಗ ನೀರುಕುಡೀತಿದ್ದರಿ. ತಾಸಗಟ್ಟಲೆ ಮಾತಾಡಿದ್ದರಿ. ಅವರಿಂದ ಆರ್ಥಿಕವಾಗಿ ಏನೂ ಸಹಾಯ ಆಗಿಲ್ಲ. ಆದರೆ ಮಾನಸಿಕವಾಗಿ ಭಾಳ ಧೈರ್ಯ ಸಿಕ್ಕದ.

ಬಾಬಾಸಾಹೇಬರ ದಾರ‌್ಯಾಗ ಹೆಂಗ ಹೋಗಬೇಕು. ಸ್ವಾಭಿಮಾನದಿಂದ ಹೆಂಗ ಬಾಳೇವು ಮಾಡಬೇಕು ಅಂತ ಹೇಳ್ಕೊಟ್ಟಾರ‌್ರಿ~ ಎಂದು ಹೇಳಿದ. ಹಾಗೆ ಹೇಳುವಾಗ ಅವನ ಕಣ್ಣುಗಳು ಸೂಸುತ್ತಿದ್ದ ಮಿಂಚು, ಮಾತುಗಳು ಹೇಳಲಾರದ ಭಾವವನ್ನು ವ್ಯಕ್ತಪಡಿಸುತ್ತಿತ್ತು.

ಈ ನಾಡಿನ ತರುಣರ ಚೈತನ್ಯದಲ್ಲಿ ಭರವಸೆಯಿಟ್ಟಿದ್ದ, ಚರಿತ್ರೆಯ ನಿರಂತರತೆಯಲ್ಲಿ ನಂಬಿಕೆಯಿದ್ದ ಅಬ್ಬಿಗೇರಿಯವರ ಸಾವನ್ನು `ಕೊಂಡಿ ಕಳಚಿತು~ ಎಂಬ ಕ್ಲೀಷೆಯ ರೂಪಕದಲ್ಲಿ ಬಣ್ಣಿಸುವುದೇ ಉಚಿತವಲ್ಲ. ಆದರೂ ಒಂದು ಪ್ರಶ್ನೆ ಕಾಡುತ್ತದೆ:

ಒಬ್ಬ ಪ್ರಾಮಾಣಿಕ ಚಳವಳಿಗಾರನ ನೈತಿಕತೆ, ಆದರ್ಶವಾದ, ಜ್ಞಾನ, ಅಂತರರಾಷ್ಟ್ರೀಯ ಪ್ರಜ್ಞೆಗಳು, ಸ್ಥಳೀಯ ಜನರೊಡನೆ ಅರ್ಥಪೂರ್ಣ ಸಂವಾದ ಸ್ಥಾಪಿಸಿಕೊಳ್ಳಲು ಯಾಕೆ ಸಾಧ್ಯವಾಗಲಿಲ್ಲ? ಇದು ಸುಲಭಕ್ಕೆ ಬದಲಾಗಲೊಲ್ಲದ ನಮ್ಮ ಸಾಂಪ್ರದಾಯಕ ಹಳ್ಳಿಗಳ ಜಿಗುಟುತನವೊ, ಅಬ್ಬಿಗೇರಿಯವರ ವೈಯಕ್ತಿಕ ಸೋಲೋ? ಇದಕ್ಕೆ ಉತ್ತರ  ಸುಲಭವಲ್ಲ.

ಆದರ್ಶಗಳು ಆಚರಣೆಗೆ ಬಾರದೆಹೋದುದಕ್ಕೆ ಅಬ್ಬಿಗೇರಿಯವರು ವಿಚಿತ್ರ ನೋವು ಮತ್ತು ಒಂಟಿತನ ಅನುಭವಿಸಿದರು. ಈ ಒಂಟಿತನ ಅವರನ್ನು ಮತ್ತಷ್ಟು ಹಟಕ್ಕೆ ಕರೆದೊಯ್ದಿತು. ಅವರು ಮುರಿದುಹೋಗಲು ಸಿದ್ಧರಾಗಿದ್ದರು. ಆದರೆ ಬಾಗಲು ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT