ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿನ ಕೊಡುವ ಕಾಲದಲ್ಲಿ ಬರ ಬಿದ್ದು...

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ಅದೃಷ್ಟ ಎಂದರೆ ಇದು. ಆಕಾಶದಿಂದ ಒದ್ದುಕೊಂಡು ಬಂದು ಜಗದೀಶ ಶೆಟ್ಟರ್ ಅವರ ಕಾಲಬುಡದಲ್ಲಿ ಬಿದ್ದಿದೆ. ಕೇವಲ ಮೂರು ನಾಲ್ಕು ತಿಂಗಳ ಹಿಂದೆ ಶೆಟ್ಟರು ಮುಖ್ಯಮಂತ್ರಿ ಆಗುತ್ತಾರೆ ಎಂದರೆ ಯಾರೂ ನಂಬುತ್ತಿರಲಿಲ್ಲ. ಮನುಷ್ಯನ ಭಾಗ್ಯ ಹೇಗಿರುತ್ತದೆ ಎಂದು ಆತನಿಗೇ ಗೊತ್ತಿರುವುದಿಲ್ಲ.

ಶೆಟ್ಟರು ಈಗ ಕರ್ನಾಟಕದ ಮುಖ್ಯಮಂತ್ರಿ. ಅದು ಅವರಿಗೆ ಒದಗಿ ಬಂದಿರುವ ಭಾಗ್ಯ. ಎಲ್ಲರಿಗೂ ಆ ಭಾಗ್ಯ ಇರುವುದಿಲ್ಲ. ಉತ್ತರ ಕರ್ನಾಟಕದ ಲಿಂಗಾಯತರಿಗೆ ಮತ್ತೆ ಮುಖ್ಯಮಂತ್ರಿ ಪದವಿ ದೊರೆಯಲು ಇಪ್ಪತ್ತೊಂದು ವರ್ಷಗಳೇ ಬೇಕಾದುವು. ಹಾಗೆಂದು ಇದು ಸಂಭ್ರಮಿಸುವ ಕಾಲವೇ? ಇಡೀ ಕರ್ನಾಟಕ ಕಷ್ಟದಲ್ಲಿ ಇದೆ.

ನೀರಾವರಿ ಸೌಲಭ್ಯ ಸಾಕಷ್ಟು ಇರುವ ದಕ್ಷಿಣ ಕರ್ನಾಟಕವೇ ಬರದ ಬವಣೆಯಲ್ಲಿ ಒದ್ದಾಡುತ್ತಿದೆ. ಉತ್ತರ ಕರ್ನಾಟಕದ ಪಾಡು ಕೇಳುವುದೇ ಬೇಡ. ಜನರು ಕಷ್ಟದಲ್ಲಿ ಇರುವಾಗ ಅವರ ಅಪೇಕ್ಷೆಗಳು ಜಾಸ್ತಿ. ಮುಖ್ಯಮಂತ್ರಿಯ ಪ್ರಮಾಣ ವಚನದ ಸಂಭ್ರಮ ಬಹಳ ಹೊತ್ತು ಇರುವುದಿಲ್ಲ. ಪ್ರಮಾಣ ವಚನ ನೋಡಲು ಬಸ್ಸು ಮಾಡಿಕೊಂಡು ಅರಮನೆ ಮೈದಾನಕ್ಕೆ ಬಂದವರ ಸಂಭ್ರಮವೂ ಬಹಳ ಹೊತ್ತು ಇರುವುದಿಲ್ಲ.

ಮುಖ್ಯಮಂತ್ರಿಗಳು ಮೊದಲ ದಿನದಿಂದಲೇ ಕೆಲಸ ಮಾಡಲು ಕೂಡಬೇಕಾಗುತ್ತದೆ. ಮನುಷ್ಯ ಪ್ರಯತ್ನಕ್ಕೆ ಸಿಗುವಂಥ ಕೆಲಸ ಇದ್ದರೆ ಖಂಡಿತ ಮಾಡಬಹುದು. ಆದರೆ, ನಿಸರ್ಗ ಮುನಿಸಿಕೊಂಡಾಗ ಏನು ಮಾಡಿದರೂ ಸಾಲದು ಎಂದು ಅನಿಸಬಹುದು. ಅದೃಷ್ಟ ಕೈ ಕೊಡುವುದು ಎಂದರೆ ಇದೇ.

ಮುಖ್ಯಮಂತ್ರಿ ಯಾರೇ ಆಗಿರಲಿ. ಜುಲೈ ತಿಂಗಳಲ್ಲಿ ತುಂಬಿದ ಜಲಾಶಯಗಳಿಗೆ ಬಾಗಿನ ಅರ್ಪಿಸಲು ಹೆಂಡತಿ ಕರೆದುಕೊಂಡು ಜಲಾಶಯಗಳಿಗೆ ಹೋಗುವ ಕಾಲ. ಈ ವೇಳೆಗೆ ಕೇರಳದಲ್ಲಿ ಜೋರು ಮಳೆ ಬಿದ್ದು ಕಬಿನಿ ತುಂಬಿರುತ್ತಿತ್ತು. ಕೊಡಗಿನಲ್ಲಿ ಮಳೆ ಬಿದ್ದು ಹಾರಂಗಿ ತುಂಬಿರುತ್ತಿತ್ತು. ಹಾರಂಗಿ ನೀರು ಕೃಷ್ಣರಾಜಸಾಗರಕ್ಕೆ ಬಂದು ಬೆಂಗಳೂರಿನ ದಾಹ ತಣಿಸುತ್ತಿತ್ತು.

ಕಬಿನಿಯಿಂದ ಹೊರಬಿಟ್ಟ ನೀರು ತಮಿಳುನಾಡಿನ ಸಿಟ್ಟು ಸಮಾಧಾನ ಮಾಡುತ್ತಿತ್ತು. ಉತ್ತರ ಕರ್ನಾಟಕದಲ್ಲಿ ಮಳೆ ಬೀಳದಿದ್ದರೂ ಮಹಾರಾಷ್ಟ್ರದಲ್ಲಿ ಜೋರು ಮಳೆ ಬಿದ್ದು ಘಟಪ್ರಭೆಗೆ ನೀರು ಹರಿದು ಬರುತ್ತಿತ್ತು. ಕೃಷ್ಣೆ ಮೈತುಂಬಿ ಮಹಾಪೂರ ಆಗುತ್ತಿದ್ದಳು. ಈಗ ಎಲ್ಲಿಯೂ ಮಳೆ ಇಲ್ಲ. ಎಲ್ಲರ ಹಣೆಯ ಮೇಲೆ ಬೆವರ ಹನಿಗಳು ಮಾತ್ರ ಇವೆ. ಮೊದಲೇ ನೆರಿಗೆ ಬಿದ್ದ ಶೆಟ್ಟರ್ ಮುಖದ ಮೇಲೆ ಇನ್ನಷ್ಟು ನೆರಿಗೆ ಆಳವಾಗಲು ಇದು ಒಂದೇ ಚಿಂತೆ ಸಾಕು.

ಸದಾನಂದಗೌಡರ ನೇತೃತ್ವದ ಸರ್ಕಾರ ಈ ಮುಂಗಾರಿನ ಬರವನ್ನು ಎದುರಿಸಲು ಯಾವ ಸಿದ್ಧತೆಯನ್ನೂ ಶೆಟ್ಟರ್ ಅವರಿಗೆ ಮಾಡಿಟ್ಟು ಹೋಗಿಲ್ಲ, ಅಲ್ಲಿಂದ ಮುಂದೆ ಶುರು ಮಾಡೋಣ ಎಂದರೆ. ಈಗ ಶೆಟ್ಟರು ಮೊದಲ ದಿನದಿಂದಲೇ ಬರದ ಬವಣೆ ನೀಗಿಸಲು ಸನ್ನದ್ಧರಾಗಬೇಕು. ಮುಂದಿನ ಕೆಲವು ದಿನಗಳಲ್ಲಿ ಮಳೆ ಬಿದ್ದು ಕುಡಿಯುವ ನೀರಿನ ಸಮಸ್ಯೆಯಾದರೂ ನೀಗಿದರೆ ಅವರು ಬಚಾವು.

ಇಲ್ಲವಾದರೆ ಜನ ಹಾಹಾಕಾರ ಮಾಡುತ್ತಾರೆ. ಅವರ ಪಕ್ಷಕ್ಕೆ ಇದು ಚುನಾವಣೆ ವರ್ಷ. ಒಬ್ಬ ಮುಖ್ಯಮಂತ್ರಿಯ ಮುಂದೆ ಮೂರು ಮುಖ್ಯ ಸವಾಲುಗಳು ಇರುತ್ತವೆ : ಒಂದು, ವೈಯಕ್ತಿಕ ವರ್ಚಸ್ಸನ್ನು ಬೆಳೆಸಿಕೊಳ್ಳುವುದು. ಎರಡು, ಆಡಳಿತವನ್ನು ಸರಿದಾರಿಗೆ ತರುವುದು. ಮೂರು, ತನ್ನ ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವುದು. ಆತನ ಆಡಳಿತದ ಮೇಲೆಯೇ ಮುಂದಿನ ಚುನಾವಣೆಯಲ್ಲಿ ಆ ಪಕ್ಷದ ಸೋಲು-ಗೆಲುವು ತೀರ್ಮಾನವಾಗುತ್ತದೆ.

ಶೆಟ್ಟರು ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಬೇಕಾದರೆ ಮೊದಲು ಆಡಳಿತವನ್ನು ಸರಿದಾರಿಗೆ ತರಬೇಕು. ಕರ್ನಾಟಕ ಹಿಂದೆ ಎಂದೂ ಹೀಗೆ ಜಾತಿ ಜಾತಿಗಳ ನಡುವೆ ಹರಿದು ಹಂಚಿ ಹೋಗಿರಲಿಲ್ಲ. ರಾಜಕಾರಣಿಗಳು ತಿಳಿದೋ ತಿಳಿಯದೆಯೋ ಜನರನ್ನು ಮಾತ್ರ ಒಡೆದಿಲ್ಲ, ಸರ್ಕಾರಿ ನೌಕರರನ್ನೂ ಒಡೆದು ಬಿಟ್ಟಿದ್ದಾರೆ.
 
ಅವರೂ `ಜನರೇ~ ಅಲ್ಲವೇ? ಯಡಿಯೂರಪ್ಪನವರು ಜಾತಿಯ ವಿಷಬೀಜ ಬಿತ್ತಿದರು ಎಂದು ಹೇಳಿಬಿಡಬಹುದು. ಅದು ಅವರಿಗೆ ಅಗತ್ಯವೂ ಆಗಿರಬಹುದು. ಆದರೆ, ಸದಾನಂದಗೌಡರು ಒಕ್ಕಲಿಗರ ಸಮಾವೇಶವನ್ನು ಸಂಘಟಿಸಲಿಲ್ಲವೇ? ಒಕ್ಕಲಿಗರಿಂದಲೇ ತಾವು ಮುಖ್ಯಮಂತ್ರಿಯಾದುದು ಎಂದು ಹೇಳಿಬಿಟ್ಟರಲ್ಲವೇ? ಈಗ ಗೌಡರು ಅಧಿಕಾರ ಕಳೆದುಕೊಂಡು ಶೆಟ್ಟರು ಮುಖ್ಯಮಂತ್ರಿಯಾದ ನಂತರ ಒಕ್ಕಲಿಗರು ಮತ್ತು ಲಿಂಗಾಯತರು ಮುಖಾಮುಖಿಯಾಗಿ ಯುದ್ಧಭೂಮಿಯಲ್ಲಿಯೇ ನಿಂತಂತೆ ಕಾಣುತ್ತಿದೆ.
 
ಎರಡು ದೊಡ್ಡ ಜಾತಿಗಳೇ ಹೀಗೆ ಎದುರುಬದುರು ನಿಂತು ಬಡಿದಾಡುತ್ತಿದ್ದರೆ ಅದು ಇತರ ಸಮುದಾಯಗಳ ನೌಕರಶಾಹಿಯ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಂಬುವುದು ಕೇವಲ ಅಮಾಯಕತೆ. ಬರೀ ವಿಧಾನಸೌಧ ಮಾತ್ರವಲ್ಲ, ಒಂದು ತಹಶೀಲ್ ಕಚೇರಿಯಲ್ಲಿಯೂ ಜಾತಿ ಬೇರುಗಳು ಆಳವಾಗಿ ಊರಿ ನಿಂತುಬಿಟ್ಟಿವೆ.

ಸದಾನಂದಗೌಡರು ಅಧಿಕಾರ ಬಿಟ್ಟುಕೊಡುವುದಕ್ಕಿಂತ ಮುಂಚೆ ಅವರ ಆಪ್ತ ಸಿಬ್ಬಂದಿ ತಮಗೆ ಬೇಕಾದ ಹುದ್ದೆಗಳಿಗೆ ವರ್ಗ ಮಾಡಿಸಿಕೊಂಡ ಒಂದೇ ಉದಾಹರಣೆ ಸಾಕು, ಆಡಳಿತದಲ್ಲಿ ಜಾತಿ ಹೇಗೆ ಬೇರು ಬಿಟ್ಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು. ಹಿಂದೆ ಯಾವ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳುವುದಕ್ಕಿಂತಲೂ ಮುಂಚೆ ಇಂಥ ಘಟನೆ ನಡೆದಿರಲಿಲ್ಲ.

ಆಡಳಿತವನ್ನು ಸರಿದಾರಿಗೆ ತರಲು ರಾಜಕೀಯ ಸ್ಥಿರತೆ ಇರಬೇಕಾಗುತ್ತದೆ. ಶೆಟ್ಟರ್ ಅವರಿಗೆ ಇರುವ ಒಂದು ಅನುಕೂಲ ಎಂದರೆ ಅವರಿಗೆ ಪೂರ್ಣ ಸಂಪುಟ ರಚಿಸಲು ಸಾಧ್ಯವಾಗಿದೆ. ಆದರೆ, ಅದರ ಪೂರ್ಣ ಮನಸ್ಸು ಅವರ ಬೆಂಬಲಕ್ಕೆ ಇದೆಯೇ ಇಲ್ಲವೇ ಎಂದು ಈಗಲೇ ಹೇಳುವುದು ಕಷ್ಟ.

ಸದಾನಂದಗೌಡರಿಗೆ ಅವರ ಸಂಪುಟದಲ್ಲಿ ಇದ್ದವರು ಪೂರ್ಣ ಮನಸ್ಸಿನ ಬೆಂಬಲ ಕೊಟ್ಟಿರಲಿಲ್ಲ. ಸ್ವತಃ ಶೆಟ್ಟರ್ ಅವರೇ ಗೌಡರ ಬೆಂಬಲಕ್ಕೆ ನಿಂತಿರಲಿಲ್ಲ. ಇಂಥ ಮಾಯದ ವ್ರಣಗಳು ಎಲ್ಲರ ಮೈಮೇಲೂ ಇವೆ. ಮುಂದಿನ ದಿನಗಳಲ್ಲಿ ಈ ವ್ರಣಗಳು ಹೇಗೆ ಬಾಯಿ ತೆರೆದುಕೊಳ್ಳುತ್ತವೆ ಗೊತ್ತಿಲ್ಲ.

ಏಕೆಂದರೆ ವಿಧಾನಸೌಧದ ಆಡಳಿತಕ್ಕೆ ಕೇಂದ್ರೀಕೃತ ಮನಸ್ಸು ಬರಬೇಕಾದರೆ ಹೊರಗಡೆ ರಾಜಕೀಯ ಸಮಸ್ಯೆಗಳು ಇರಬಾರದು. ಶೆಟ್ಟರ್ ಅವರನ್ನು ಅಧಿಕಾರದಲ್ಲಿ ಕೂಡ್ರಿಸಿದ ಯಡಿಯೂರಪ್ಪನವರ ಅಪೇಕ್ಷೆಗಳು ಏನು ಎಂದೂ ಗೊತ್ತಿಲ್ಲ.

ಸದಾನಂದಗೌಡರ ಕೈ ಕಟ್ಟಿ ಹಾಕಿದ ಸಂದರ್ಭಗಳು ಶೆಟ್ಟರ್ ಅವರನ್ನೂ ಕಾಡಬಹುದು. ಹಾಗೆಂದು ಅವರು ನೆಪ ಹೇಳಲು ಆಗದು. ಮುಖ್ಯಮಂತ್ರಿಯಾದವರು ನೆಪಗಳ ಅಡಿಯಲ್ಲಿ ರಕ್ಷಣೆ ಪಡೆಯಲೂ ಆಗದು.

ರಾಜ್ಯದಲ್ಲಿ ಮೊದಲ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರು, `ನಾಯಕನಾದವನು ಬಹಳಷ್ಟು ಕಷ್ಟಗಳನ್ನು ನುಂಗುತ್ತ, ಮೌನವಾಗಿ ನೋವು ಅನುಭವಿಸುತ್ತ ಇರಬೇಕಾಗುತ್ತದೆ~ ಎಂದು ಮತ್ತೆ ಮತ್ತೆ ಹೇಳುತ್ತಿದ್ದರು. ಇದು ಏಕಪಕ್ಷದ ಸರ್ಕಾರವಾದರೂ ಸಮ್ಮಿಶ್ರ ಸರ್ಕಾರಕ್ಕಿಂತ ಹೆಚ್ಚಿನ ಹಗ್ಗಜಗ್ಗಾಟಗಳು, ಎಳೆದಾಟಗಳು ಇಲ್ಲಿ ಇರುವುದರಿಂದ ಸದಾನಂದಗೌಡರು ಇಂಥ ನೂರೆಂಟು ನೋವುಗಳನ್ನು ನಿತ್ಯ ನುಂಗಿರಬಹುದು. ಶೆಟ್ಟರ್ ಅವರಿಗೂ ಅದೇ ಗಳಿಗೆಗಳು ಕಾದಿರಬಹುದು.

ಆದರೂ ಅವರು ಉಳಿದ ಹತ್ತು ತಿಂಗಳ ಅವಧಿಗೆ ಸರ್ಕಾರವನ್ನು ಸಮರ್ಥವಾಗಿ ನಡೆಸಿಕೊಂಡು ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಜಯದ ಹೊಸ್ತಿಲಿಗೂ ತೆಗೆದುಕೊಂಡು ಹೋಗಬೇಕು. ರಾಜಕೀಯ ಅಸ್ಥಿರತೆ ಕಾಡಿದಾಗಲೆಲ್ಲ ನಾಯಕರು ಜನರ ಬಳಿಗೆ ಹೋಗುತ್ತಾರೆ. ಯಡಿಯೂರಪ್ಪನವರು ಮತ್ತೆ ಮತ್ತೆ ಜನರ ಬಳಿಗೆ ಹೋಗುತ್ತೇನೆ ಎಂದು ಹೇಳುತ್ತಿದ್ದುದು ಇಂಥ ಅಸ್ಥಿರತೆಯ ಸಂದರ್ಭದಲ್ಲಿಯೇ.

ತಾನೇ ಸೇರಿಸಿದ ಜನರ ದಂಡನ್ನು ನೋಡಿ ನಾಯಕನಾದವನು ಮತ್ತೆ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುತ್ತಾನೆ. ತನ್ನಲ್ಲಿಯೇ ನಂಬಿಕೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಶೆಟ್ಟರು ಹೀಗೆ ಜನರ ಬಳಿಗೆ ಹೋಗುವ ಸ್ಥಿತಿಯಲ್ಲಿಯೂ ಇಲ್ಲ. ಜನರ ಬಳಿಗೆ ನಾನು ಹೋಗುತ್ತೇನೆ ಎಂದು ಯಡಿಯೂರಪ್ಪ ಹೇಳಿದರೂ ಹೇಳಬಹುದು! ಶೆಟ್ಟರಿಗೆ ವಿಧಾನಸೌಧದಲ್ಲಿಯೇ ಮಾಡಲು ಬೇಕಾದಷ್ಟು ಕೆಲಸವಿದೆ.

ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಿ ಅವರು ತನ್ನ ಪ್ರತಿನಿಧಿಯ ಹಾಗೆ ಅಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳುವಲ್ಲಿಯೇ ಶೆಟ್ಟರ್ ಅವರ ಯಶಸ್ಸು ಅಡಗಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರಯೋಗ ಮಾಡಿದ್ದರು. ಕೃಷ್ಣ ಅವರಿಗೆ ರಾಜಕೀಯ ಅಸ್ಥಿರತೆ ಕಾಡಿರಲೇ ಇಲ್ಲ. ನಂತರ ಬಂದ ಮುಖ್ಯಮಂತ್ರಿಗಳು ಅವರ ಹಾಗೆ ಪ್ರಶ್ನಾತೀತ ನಾಯಕ ಅನಿಸಲಿಲ್ಲ.

ಶೆಟ್ಟರ್ ಅವರೂ ಪ್ರಶ್ನಾತೀತ ನಾಯಕ ಅಲ್ಲ. ಅವರು ಮುಖ್ಯಮಂತ್ರಿಯಾಗಿರುವುದು ಪಕ್ಷದಲ್ಲಿನ ಒಂದು ಬಲಾಢ್ಯ ಗುಂಪಿನ ಬೆಂಬಲದಿಂದ. ಅವರು ಜಿಲ್ಲೆಗೆ ಒಬ್ಬ ಸಚಿವರನ್ನು ನೇಮಿಸಿ `ನನ್ನ ಪ್ರತಿನಿಧಿಯಾಗಿ ಅಲ್ಲಿ ಕೆಲಸ ಮಾಡು~ ಎಂದು ಹೇಳುವ ಸ್ಥಿತಿಯಲ್ಲಿ ಇದ್ದಾರೆಯೇ? ಗೊತ್ತಿಲ್ಲ.

ಆಡಳಿತಗಾರರಿಗೆ ಮುಖ್ಯವಾಗಿ ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಮನಸ್ಸು ಇರಬೇಕು. ಅಧಿಕಾರ ಎಂಬುದು ಆಡಂಬರಕ್ಕಾಗಿ ಅಲ್ಲ ಎಂದು ಗೊತ್ತಿರಬೇಕು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರಮಾಣ ವಚನ ವಹಿಸಿಕೊಳ್ಳುವುದನ್ನು ನೋಡಲು ಹುಬ್ಬಳ್ಳಿಯಿಂದ 150, ಶಿವಮೊಗ್ಗದಿಂದ 120 ಬಸ್ಸುಗಳಲ್ಲಿ ಜನ ಬರುವುದೇ ಅಧಿಕಾರ ಎಂಬುದು ಒಂದು ಆಡಂಬರ ಎಂಬುದಕ್ಕೆ ನಿದರ್ಶನ.

ಕರ್ನಾಟಕಕ್ಕೆ ಬರ ಹೊಸದಲ್ಲ. ಆದರೆ, ಈಗಿನಷ್ಟು ತೀವ್ರ ಬರ ಈಚಿನ ವರ್ಷಗಳಲ್ಲಿ ಬಿದ್ದ ನೆನಪು ಯಾರಿಗೂ ಇಲ್ಲ. ಇಂಥ ಸಂದರ್ಭದಲ್ಲಿ ಸಚಿವರ ವೈಭವಗಳು ಅಧಿಕಾರದ ಠೇಂಕಾರದಂತೆ ಸಾಮಾನ್ಯ ಜನರಿಗೆ ಕಾಣಬಹುದು. ಅಧಿಕಾರ ಎಂಬುದು ತಂತಿಯ ಮೇಲಿನ ನಡಿಗೆ. ಮುಳ್ಳಿನ ಹಾಸಿಗೆ.

ಅಧಿಕಾರದ ಕುರ್ಚಿಯ ಮೇಲೆ ಕುಳಿತು `ಭಲೆ~ ಎನಿಸಿಕೊಂಡು ಹೋದವರು ಕಡಿಮೆ. ಮನಮೋಹನ್‌ಸಿಂಗ್ ಅವರಂಥ ಸಜ್ಜನ, ಜಾಣ ಮತ್ತು ಪ್ರಾಮಾಣಿಕ ಪ್ರಧಾನಿಯೇ `ಅಂಡರ್ ಪರ್‌ಫಾರ್ಮರ್~ ಎಂಬ ಬಿರುದು ಪಡೆಯಬೇಕಾಯಿತು. ಜಗದೀಶ್ ಶೆಟ್ಟರ್ ಅವರೂ ಸಜ್ಜನ. ಅವರು `ಪರ್‌ಫಾರ್ಮರ್~ ಎಂಬ ಬಿರುದು ಪಡೆಯಲಿ. ಏಕೆಂದರೆ ಅವರು `ಪರ್‌ಫಾರ್ಮ್~ ಮಾಡುವುದು ಕರ್ನಾಟಕಕ್ಕೆ ಬಹಳ ಅಗತ್ಯವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT