ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಾರಿದವರ ‘ಒಂದು ಕೊಡ ನೀರಿನ ಕತೆ’

Last Updated 5 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಆ ಮನೆಯಲ್ಲಿ ಪ್ರತಿಯೊಬ್ಬರದೂ ಒಂದೊಂದು ಚಿಂತೆ! ಯಜಮಾನಿ ಸ್ನಾನ ಮಾಡಿ ವಾರವಾಗಿತ್ತು. ಯಜಮಾನ ಮತ್ತು ಆತನ ಮಗ ಎತ್ತುಗಳಿಗೆ ದಾಹ ಇಂಗುವಷ್ಟು ನೀರು ಕೊಟ್ಟು ತಿಂಗಳಾಗಿತ್ತು. ಸೊಸೆ ಮತ್ತು ಮಗಳಿಗೆ ಸಂಜೆ ಎಲ್ಲಿಂದ ನೀರು ಹೊತ್ತು ತರುವುದು ಎನ್ನುವ ಚಿಂತೆಯಾಗಿತ್ತು.

ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಸೀಡ್ಸ್‌ ಫಾರಂ ತಾಂಡಾದ ಚಂದೂಬಾಯಿ ಜಾಧವ್‌ ಅವರ ಮನೆಯ ಕತೆಯಿದು. ಸುಡುಬಿಸಿಲಿನಲ್ಲೂ ಚಂದೂಬಾಯಿ ಸೊಸೆ ಶಿಲ್ಪಾ ಜಾಧವ್‌ ತಲೆ ಮೇಲೆ ಕೊಡ ಹೊತ್ತು ತಂದರು. ಅವರಿಗೆ ವಿಪರೀತ ಆಯಾಸವಾಗಿತ್ತು. ಕೊಡವನ್ನು ಇಟ್ಟವರು ಬೆವರು ಒರೆಸಿಕೊಳ್ಳುತ್ತಿದ್ದರು.

‘ಟ್ಯಾಂಕರ್‌ನಿಂದ ನೀರು ತಂದಿರಾ?’ ಎಂದು ಕೇಳಿದೆ.

‘ಹೊಲದ ಬಾವಿಯಿಂದ’ ಎಂದು ಚುಟುಕಾಗಿಯೇ ಉತ್ತರಿಸಿದರು.

‘ಹೊಲದ ಬಾವಿ ಎಷ್ಟು ದೂರ?’ ನಾನು ಕೇಳಿದೆ.

‘ಒಂದೂವರೆ ಕಿಲೋಮೀಟರ್‌’ ಎಂದರು.

‘ಅಲ್ಲಿಂದ ನೀರು ತಂದಿರಾ?’ ಆಶ್ಚರ್ಯದಿಂದ ಕೇಳಿದೆ.

ಅಷ್ಟರಲ್ಲಿ ಆಕೆಯ ಅತ್ತೆ ಮಾತಿಗೆ ನಿಂತವರು ‘ನೀರಿನ ಕತಿ ಯಾಕ್‌ ಕೇಳ್ತೀರಿ. ನಮ್ಮ ಕಣ್ಣಾಗ ನೀರ್‌ ಬರತೈತಿ. ಮನ್ಯಾಗ ಹನ್ನೆರಡು ಮಂದಿ ಇದಿವಿ. ಟ್ಯಾಂಕರ್‌ದಿಂದ ದಿನಕ್ಕ ಹತ್ತು ಕೊಡಾ ಅಷ್ಟ ನೀರು ಸಿಗತೈತಿ. ಆ ನೀರು ನಮ್ಮ ಎತ್ತುಗಳಿಗೇ ಸಾಲಾಂಗಿಲ್ಲ. ನಾನು ಮೈತೊಳಕೊಂಡು ಒಂದ್‌ ವಾರ ಆತು’ ಎಂದು ಸಂಕೋಚದಿಂದಲೇ ಹೇಳಿದರು.

ಆ ತಾಂಡಾದ ಮಹಿಳೆಯರ ನಿತ್ಯದ ಕೆಲಸ ನೀರು ತರುವುದು. ಒಂದು ಕೊಡ ನೀರು ತರಬೇಕು ಎಂದರೆ ಹೋಗಿ–ಬರುವ ದಾರಿ ಸೇರಿ ಮೂರು ಕಿಲೋಮೀಟರ್‌ ನಡೆಯಬೇಕು. ‘ನೀರ ಹೊತ್ತು, ಹೊತ್ತು ಇಡೀ ಶರೀರ ನೂಸಾಕ್‌ ಹತೈತಿ. ಯಾಕಾದ್ರೂ ಬೆಳಗಾಗತೈತೋ ಅನಿಸೈತಿ’ ಎಂದು ಶಿಲ್ಪಾ ಜಾಧವ್‌ ಖಿನ್ನ ಮುಖಭಾವದೊಂದಿಗೆ ಹೇಳಿದರು.

ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನಲ್ಲಿ 116 ಜನವಸತಿಗಳಿಗೆ ನಿತ್ಯ ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುತ್ತಿದೆ! ಇದೇ ತಾಲ್ಲೂಕಿಗೆ ಸೇರಿದ ಧುತ್ತರಗಾಂವದಲ್ಲಿಯೂ ಟ್ಯಾಂಕರ್‌ ನೀರು ಪೂರೈಸುತ್ತಿತ್ತು. ಅಲ್ಲಿ ಮಹಿಳೆಯೊಬ್ಬರನ್ನು ಮಾತನಾಡಿಸಲು ಯತ್ನಿಸಿದೆ. ಅವರು ನನ್ನತ್ತ ಕಣ್ಣೆತ್ತಿಯೂ ನೋಡಲಿಲ್ಲ. ಅವಸರದಿಂದ ಕೊಡಕ್ಕೆ ನೀರು ತುಂಬಿಕೊಳ್ಳಲು ನುಗ್ಗಿದರು.

ಆ ಊರಿನ ಪ್ರತಿ ರಸ್ತೆಯಲ್ಲೂ ಕೊಡಗಳ ಸಾಲು. ಜನರು ‘ನೀರು..ನೀರು...’ ಎಂದು ಕನವರಿಸುತ್ತಿದ್ದರು. ಅಲ್ಲಿದ್ದವರ ಕಣ್ಣುಗಳಲ್ಲಿ ನೀರಿನ ನಿರೀಕ್ಷೆಯನ್ನು ಕಂಡೆ. ಅದೇ ಊರಿನ ಅಂಗಡಿಗಳಲ್ಲಿ ಮಿನರಲ್‌ ವಾಟರ್‌  ಬಾಟಲ್‌ಗಳನ್ನು ಮಾರಾಟ ಮಾಡುವುದನ್ನೂ ನೋಡಿದೆ!

ಪ್ರತಿ ಬೇಸಿಗೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಇರುತ್ತದೆ. ಆದರೆ ಈ ವರ್ಷ ಹೆಚ್ಚಾಗಿದೆ. ಏಕೆಂದರೆ ಬರ ಮತ್ತು ಬೇಸಿಗೆ ಒಟ್ಟಾಗಿವೆ. ಹೈದರಾಬಾದ್‌ ಕರ್ನಾಟಕದ ಬಹುತೇಕ ತೊರೆ, ಹಳ್ಳ, ನದಿ, ಜಲಾಶಯ, ಕೆರೆ, ಕಟ್ಟೆ, ಬಾವಿ, ಕೊಳವೆಬಾವಿಗಳು ಒಣಗಿವೆ. ಅವುಗಳೇ ಬಾಯಾರಿದ ಮೇಲೆ ಜನರ ದಾಹ ನೀಗುವುದು ಎಲ್ಲಿಂದ?

ಈ ಪ್ರದೇಶದ ಬಹುತೇಕ ಗ್ರಾಮಗಳು ಕುಡಿಯುವ ನೀರಿಗಾಗಿ ಅಂತರ್ಜಲವನ್ನೇ ಅವಲಂಬಿಸಿವೆ. ಬಳಸಿದಷ್ಟೂ ಅಂತರ್ಜಲ ಕೆಳಮುಖವಾಗುತ್ತಲೇ ಇದೆ. ಅಂತರ್ಜಲ ಆಳಕ್ಕೆ ಹೋದಷ್ಟೂ ಕಲುಷಿತ ನೀರು ಬರುತ್ತದೆ. ಆದ್ದರಿಂದ ಈ ಭಾಗದಲ್ಲಿ ಜೀವಜಲ ವಿಷವಾಗಿದೆ.

ಇಲ್ಲಿನ ಬಾವಿಗಳು, ಕೊಳವೆಬಾವಿಗಳ ನೀರಿನಲ್ಲಿ ರಾಸಾಯನಿಕಯುಕ್ತ ಆರ್ಸೆನಿಕ್‌ ಇರುವುದು ಪತ್ತೆಯಾಗಿದೆ. ಸರ್ಕಾರ ಅಂಥ ಜಲಮೂಲಗಳನ್ನು ಗುರುತಿಸಿ ಎಚ್ಚರಿಕೆ ನೀಡಿದೆ. ಆದರೆ, ಬೇರೆ ದಾರಿ ಇಲ್ಲದೆ ಜನರು ಅದೇ ನೀರನ್ನು ಕುಡಿಯುತ್ತಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಕಲ್ಲದೇವನಹಳ್ಳಿ ಇದೆ. ಆ ಊರಿಗೆ ಹೋಗುವ ನೆಂಟರು ಅಲ್ಲಿ ಗುಟುಕು ನೀರನ್ನೂ ಕುಡಿಯುವುದಿಲ್ಲ. ಏಕೆಂದರೆ ಆ ಊರಿನ ನೀರಿನಲ್ಲಿ ಫ್ಲೋರೈಡ್‌ ಅಧಿಕವಾಗಿದೆ.

‘ಭೂಗರ್ಭದ ಮೂರು ಪದರಗಳಲ್ಲಿ ನೀರು ಸಿಗುತ್ತದೆ. ಮೊದಲ ಪದರದ ನೀರು ಕುಡಿಯಲು ಯೋಗ್ಯ. ಉಳಿದ ಎರಡು ಪದರಗಳಲ್ಲಿ ಗಡಸು, ಫ್ಲೋರೈಡ್, ಆರ್ಸೆನಿಕ್‌ನಂತಹ ರಾಸಾಯನಿಕಯುಕ್ತ ನೀರು ಇರುತ್ತದೆ. ಈ ಭಾಗದಲ್ಲಿ ಬಹುತೇಕ ಕಡೆ ಈಗಾಗಲೇ ಎರಡನೇ ಪದರದ ನೀರು ಬಳಕೆಯಲ್ಲಿದೆ’ ಎಂದು ಭೂಗರ್ಭಶಾಸ್ತ್ರಜ್ಞರೊಬ್ಬರು ಹೇಳುತ್ತಾರೆ.

ರಾಜ್ಯ ಸರ್ಕಾರವು ಕುಡಿಯುವ ನೀರಿನ ಬವಣೆ ತಪ್ಪಿಸಲು ‘ಶುದ್ಧ ಕುಡಿಯುವ ನೀರಿನ ಘಟಕ’ಗಳನ್ನು ಕೆಲವೆಡೆ ಸ್ಥಾಪಿಸಿದೆ. ಆದರೆ, ಅವುಗಳಲ್ಲಿ ಎಷ್ಟು ಕೆಲಸ ಮಾಡುತ್ತಿವೆ. ಎಷ್ಟು ಸ್ಥಗಿತಗೊಂಡಿವೆ. ಎಷ್ಟು ವಿದ್ಯುತ್‌ ಸಂಪರ್ಕಕ್ಕಾಗಿ ಕಾಯ್ದಿವೆ. ಎಷ್ಟು ಶಾಶ್ವತವಾಗಿ ಮುಚ್ಚಿವೆ ಎನ್ನುವ ಬಗ್ಗೆಯೂ ಸರ್ಕಾರ ‘ವಾಸ್ತವಿಕ ವರದಿ’ಯನ್ನು ತರಿಸಿಕೊಳ್ಳುವುದು ಒಳಿತು.

ಯಾವುದೇ ಯೋಜನೆಯ ಸಮರ್ಥ ಅನುಷ್ಠಾನವೂ ಮುಖ್ಯ. ಸರ್ಕಾರವು ತನ್ನ ಸಾಧನೆ ಪಟ್ಟಿಗೆ ಸೇರಿಸಿಕೊಳ್ಳಲು ಯೋಜನೆಯನ್ನು ಕೈಗೊಂಡಿದ್ದರೆ ಜನರಿಗೆ ಆಗುವ ಲಾಭವೇನು? ಆಗುವುದಾದರೆ ಅದು ಏಜೆನ್ಸಿ ಮತ್ತು ಅಧಿಕಾರಿಗಳಿಗೆ ಮಾತ್ರ.

ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ‘ನಾವು ಚಿಕ್ಕವರಾಗಿದ್ದಾಗ ಕುಡಿಯುವ ನೀರಿಗಾಗಿ ಬಾವಿ, ಕೆರೆಗಳನ್ನು ಆಶ್ರಯಿಸುತ್ತಿದ್ದೆವು’ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ಹೇಳಿರುವುದು ನಿಜ. ಈಗಲೂ ಜನರು ಬಾವಿ, ಕೆರೆಗಳಿಗೆ ಬಣ್ಣ ಬಣ್ಣದ ಕೊಡಗಳನ್ನು ಹಿಡಿದು ಮೆರವಣಿಗೆ ಹೊರಡಲು ಸಿದ್ಧ. ಆದರೇನು ಮಾಡುವುದು? ಅವುಗಳಲ್ಲಿ ಹನಿ ನೀರೂ ಇಲ್ಲ.

ಭಾರತದಲ್ಲಿ ಈಗಲೂ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎನ್ನುವುದು ‘ಉದಾತ್ತ ಚಿಂತನೆ’ಯ ಮಟ್ಟದಲ್ಲೇ ಉಳಿದಿದೆ. ನಲ್ಲಿ ತಿರುಗಿಸಲಿ, ಕೈ ಸೋಲುವಷ್ಟು ಹೊತ್ತು ಹ್ಯಾಂಡ್‌ ಪಂಪ್‌ ಒತ್ತಲಿ, ರಟ್ಟೆ ಸೋಲುವಷ್ಟು ಹಗ್ಗ ಎಳೆಯಲಿ ನೀರು ಮಾತ್ರ ಬರುತ್ತಿಲ್ಲ. ಇನ್ನು, ನದಿಗಳು ಚರಂಡಿಗಳಾಗಿವೆ.

ಹೆಚ್ಚುತ್ತಿರುವ ಜನಸಂಖ್ಯೆ, ಕಳಪೆ ನೀರು ನಿರ್ವಹಣೆ, ಇಳಿಮುಖವಾಗುತ್ತಿರುವ ಮಳೆ ಪ್ರಮಾಣ ಹಾಗೂ ಜನರ ಹೊಣೆಗೇಡಿತನ ಕುಡಿಯುವ ನೀರಿನ ಸಮಸ್ಯೆಗೆ ಮುಖ್ಯ ಕಾರಣಗಳು.

‘ಆಶ್ರಯ ಮನೆ ಹೊಂದಿರುವವರೂ ತಮ್ಮ ಮಾಳಿಗೆಯ ಮಳೆನೀರನ್ನು ತಾವೇ ಸಂಗ್ರಹಿಸಿಕೊಳ್ಳಬೇಕು. ಪ್ರತಿ ಹಳ್ಳಿಗಳಲ್ಲೂ ಅಂಥ ಮಾದರಿಗಳಿಗೆ ಸರ್ಕಾರ ಉತ್ತೇಜನ ನೀಡಬೇಕು’ ಎಂದು ಭೂಗರ್ಭಶಾಸ್ತ್ರಜ್ಞ ಎನ್‌.ದೇವರಾಜ ರೆಡ್ಡಿ ಹೇಳುತ್ತಾರೆ.

ಸರ್ಕಾರಕ್ಕೆ ಯಾವಾಗಲೂ ಮುಂದಾಲೋಚನೆ ಇರಬೇಕಾಗುತ್ತದೆ. ಮುಂದಿನ ಬೇಸಿಗೆಯ ಬಗ್ಗೆ ಈಗಲೇ ದಿಗಿಲುಗೊಳ್ಳಬೇಕು. ಆಗ ಮಾತ್ರ ಗಂಭೀರವಾಗಿ ಪರಿಹಾರ ಕುರಿತು ಯೋಚಿಸಲು ಸಾಧ್ಯವಾಗುತ್ತದೆ.

‘ಹಿಂದೆ ಕೆರೆ, ಕಟ್ಟೆ, ಬಾವಿಗಳಲ್ಲಿ ನೀರು ಕಣ್ಣಿಗೆ ಕಾಣಿಸುತ್ತಿತ್ತು. ನೀರು ಕಡಿಮೆ ಆಗುತ್ತಿದ್ದಂತೆಯೇ ಜನರು ಮಿತ ಬಳಕೆಗೆ ಮುಂದಾಗುತ್ತಿದ್ದರು. ಕೊಳವೆಬಾವಿ ಒಳಗೆ ನೀರು ಎಷ್ಟಿದೆ ಎನ್ನುವುದೇ ತಿಳಿಯುವುದಿಲ್ಲ. ನೀರು ಖಾಲಿಯಾಗಬಹುದು ಎನ್ನುವ ಭಯವೇ ಇಲ್ಲದೆ ಎತ್ತುತ್ತಲೇ ಇದ್ದೇವೆ. ಇದರಿಂದ ಗಂಡಾಂತರ ಖಚಿತ’ ಎಂದು ಜಲತಜ್ಞ ಶಿವಾನಂದ ಕಳವೆ ಎಚ್ಚರಿಸುತ್ತಾರೆ.

ಕನಿಷ್ಠ ಕುಡಿಯುವ ನೀರನ್ನಾದರೂ ಪೂರೈಸುವಷ್ಟು ನೀರನ್ನು ಸಂಗ್ರಹಿಸಲು  ಸರ್ಕಾರ ಮಳೆನೀರು, ಪ್ರವಾಹದಲ್ಲಿ ಹರಿದುಹೋಗುವ ನೀರನ್ನು ಹಿಡಿದು ಕೆರೆ, ಕಟ್ಟೆಗಳನ್ನು ತುಂಬಿಸಬೇಕು. ಜತೆಗೆ ಜನ ಸಮುದಾಯವು ಜೀವಜಲ ನಮ್ಮದು ಎನ್ನುವ ಪ್ರೀತಿ ಹೊಂದಬೇಕು. ಆಗ ಮಾತ್ರ ಚಂದೂಬಾಯಿ ಅಂಥ ಕುಟುಂಬದವರ ಮುಖದ ಮೇಲೆ ನಗು ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT