ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹ ನಿಷೇಧ-ಆಗದಿರಲಿ ಅಲಂಕಾರಿಕ ಅಸ್ತ್ರ

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಕಳೆದ ಕೆಲ ವಾರಗಳಿಂದ ಮೈಸೂರು, ಚಾಮರಾಜನಗರ ಮತ್ತು ಕುಣಿಗಲ್ ತಾಲೂಕುಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ವಿವಾಹಗಳನ್ನು (ಎಂದರೆ ನಿಗದಿತವಾಗಿರುವ 18ನೇ ವಯಸ್ಸಿಗೂ ಮೊದಲು ನಡೆಸಲು ಉದ್ದೇಶಿಸಲಾಗಿದ್ದ) ಜಿಲ್ಲಾಡಳಿತ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರತಿನಿಧಿಗಳು ತಡೆಗಟ್ಟಿದ ಪ್ರಸಂಗಗಳು ವರದಿಯಾಗಿವೆ.

ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ವಿವಾಹವನ್ನು ನಿಷೇಧಿಸುವ ಕಾಯಿದೆಗೆ 80 ವರ್ಷಗಳಿಗೂ ಮೇಲ್ಪಟ್ಟ ಇತಿಹಾಸವೇ ಇದ್ದರೂ ದಿನನಿತ್ಯ ಕಾನೂನು ಬಾಹಿರವಾದ ವಿವಾಹಗಳು ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಲೇ ಇರುವುದರಿಂದ ಈ ದೇಶದಲ್ಲಿ  ಬಾಲ್ಯ ವಿವಾಹಗಳು ದೊಡ್ಡ ಸ್ದ್ದುದಿಯೇನಲ್ಲ.

ಆದರೆ ಅಂಥ ವಿವಾಹಗಳನ್ನು ತಡೆಗಟ್ಟಲು ಕಾನೂನು ಪಾಲನಾ ವ್ಯವಸ್ಥೆ ಮುಂದಾದದ್ದು ಮನಸ್ಸಿಗೆ ಒಂದು ಥರಾ ಸಂತೋಷವನ್ನು ನೀಡಿದರೂ ಎಲ್ಲೋ ಒಂದೆಡೆ ಆಶ್ಚರ್ಯವೂ ಆಗದಿರಲಿಲ್ಲ. ಇದ್ದಕ್ಕಿದ್ದ ಹಾಗೆ ಸರ್ಕಾರಿ ವಲಯದಲ್ಲಿ ಮೂಡಿದ ಜಾಗೃತಿಯನ್ನು ಕುರಿತಂತೆ ಸಹಜವಾಗಿಯೇ ಹತ್ತು-ಹಲವಾರು ಅನುಮಾನಗಳೂ ವ್ಯಕ್ತವಾಗುತ್ತಿವೆ.

ಎಲ್ಲೋ ಅಲ್ಲೊಮ್ಮೆ-ಇಲ್ಲೊಮ್ಮೆ ಒಂದೆರಡು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ವಿವಾಹಗಳನ್ನು ತಡೆಗಟ್ಟಿ ಬಿಟ್ಟರೆ ಈ ದೇಶದಲ್ಲಿ ಒಂದು ಬೃಹತ್ ಸಾಮಾಜಿಕ ಪಿಡುಗಾಗಿ ಬೆಳೆದಿರುವ ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನ ಮಾಡಲು ಸಾಧ್ಯವೇ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹಾಗೆ ನೋಡಿದರೆ ವಿವಾಹ ಎನ್ನುವ ಸಂಸ್ಥೆಗೆ ಈ ಸಮಾಜದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಸ್ವೀಕೃತಿಯಿದೆ.
ಭಾರತೀಯ ಮನಃಸ್ಥಿತಿಯಲ್ಲಿ ವಿವಾಹಕ್ಕೆ ಒಂದು ವಿಶೇಷ ಸ್ಥಾನವಿದೆ. ಇದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಸುಮಾರು ಐದು ವರ್ಷಗಳ ಹಿಂದೆ ಕೂಡ, ಹದಿನಾರು ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ವಿವಾಹದ ಪ್ರಕರಣ ತನ್ನ ಮೆಟ್ಟಿಲೇರಿದಾಗ ದೆಹಲಿಯ ಉಚ್ಚನ್ಯಾಯಾಲಯ ಕೂಡ ಈ ವಿವಾಹಗಳು ಕಾನೂನು ಬಾಹಿರವಲ್ಲ ಎಂಬ ತೀರ್ಪನ್ನು ನೀಡಿತ್ತು!
ತಮ್ಮ ಸ್ವಂತ ಇಚ್ಛೆಯಿಂದ ಈ ಇಬ್ಬರು ಹೆಣ್ಣು ಮಕ್ಕಳು ವಿವಾಹಕ್ಕೆ ಸಮ್ಮತಿಯನ್ನು ನೀಡಿದ್ದು, ಬದಲಾಗುತ್ತಿರುವ ಸಾಮಾಜಿಕ ಸಂದರ್ಭಗಳಲ್ಲಿ ಮಕ್ಕಳಿಗೆ 15 ವರ್ಷ ವಯಸ್ಸಾಗುವ ವೇಳೆಗೆ ವಿವೇಚನಾ ಶಕ್ತಿ ಬಂದಿರುತ್ತದೆ ಎಂದಿದ್ದ ನ್ಯಾಯಾಲಯ ಪ್ರೀತಿ-ಪ್ರೇಮಕ್ಕಾಗಿ ವಿವೇಚನೆಯನ್ನು ಕಳೆದುಕೊಂಡರೂ ಪರವಾಗಿಲ್ಲ ಎಂಬ ನಿಲುವನ್ನು ತಾಳಿತ್ತು.

ಪ್ರಕರಣವನ್ನು ನ್ಯಾಯಾಲಯದವರೆಗೆ ತಂದ ಮಹಿಳಾ ಸಂಘಟನೆಗೇ ಛೀಮಾರಿ ಹಾಕಿ, ಆಗಿ ಹೋಗಿರುವ ವಿವಾಹವನ್ನು ಮುರಿಯುವ ಪಾಪದ ಕೆಲಸ ಮಾಡಬಾರದು ಎಂಬ ಬುದ್ಧಿವಾದವನ್ನು ನ್ಯಾಯಮೂರ್ತಿಗಳು ಹೇಳಿದ್ದರಂತೆ! ಸ್ವತಃ ನ್ಯಾಯಾಲಯವೇ ಇಂಥ ಧೋರಣೆಯನ್ನು ತಳೆದಾಗ ಬೇರೆಯವರ ಪಾಡೇನು?

ಮೊನ್ನೆ ಮೊನ್ನೆ ತಾನೇ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳೊಬ್ಬಳ ವಿವಾಹವನ್ನು ಜಿಲ್ಲಾಡಳಿತ ತಡೆದಾಗ, ಆ ಕ್ರಮವನ್ನು ಬೆಂಬಲಿಸಿದವರಿಗಿಂತ ವಿರೋಧಿಸಿದವರ ಸಂಖ್ಯೆಯೇ ಹೆಚ್ಚು. ಹಿಂದಿನ ದಿನ ಅದ್ಧೂರಿಯಾಗಿ ಆರತಕ್ಷತೆಯೂ ನಡೆದು ಹೋಗಿದ್ದರಿಂದ ಬಹುಜನರ ಧೋರಣೆ ಏನಿತ್ತೆಂದರೆ `ಅಯ್ಯೋಪಾಪ, ಯಾರೋ ಆಗದವರು ದೂರು ನೀಡಿದ್ದಾರೆ ನೋಡಿ, ಈ ಮದುವೆ ನಿಲ್ಲಿಸಿ ಏನು ಖುಷಿ ಸಿಕ್ತೋ?~ ಎನ್ನುವುದು.

ಭಾರತೀಯ ಸಮಾಜದಲ್ಲಿ ಅನೇಕ ಸಂದರ್ಭಗಳಲ್ಲಿ ಕಾನೂನಿಗಿಂತ ರೂಢಿ-ರಿವಾಜುಗಳಿಗೇ (ಅವು ಕಾನೂನು ಬಾಹಿರವಾಗಿದ್ದರೂ) ಶಾಶ್ವತತೆ ಇರುವುದು.ಅದರಲ್ಲೂ ವಿವಾಹ ಸಂಬಂಧಗಳನ್ನು ಭಾವನಾತ್ಮಕವಾದ ದೃಷ್ಟಿಯಿಂದ ನೋಡುವವರಿಗೆ ಕಾನೂನು ಉಲ್ಲಂಘನೆಯಾಯಿತಲ್ಲ ಎನ್ನುವುದಕ್ಕಿಂತ ವಿವಾಹ ನಿಂತು ಹೋಯ್ತಲ್ಲ ಎನ್ನುವುದರ ಬಗ್ಗೆಯೇ ಹೆಚ್ಚು ಚಿಂತೆ.

ವಿವಾಹಕ್ಕೆ ಸೂಕ್ತವಾದ ವಯಸ್ಸನ್ನು ನಿಗದಿಪಡಿಸಬೇಕೆನ್ನುವ ಚಿಂತನೆಗೆ ಕಾನೂನಿನ ಸ್ವೀಕೃತಿಯನ್ನು ಪಡೆಯಬೇಕಾದರೆ ಈ ದೇಶದಲ್ಲಿ ಒಂದು ದೊಡ್ಡ ಹೋರಾಟವನ್ನೇ ನಡೆಸಬೇಕಾಯ್ತು.

ತೊಟ್ಟಿಲ ಮಕ್ಕಳಿಗೇ ತಾಳಿ ಕಟ್ಟುವಂಥ ವ್ಯವಸ್ಥೆಯಿದ್ದಂಥ ಭಾರತೀಯ ಸಮಾಜದಲ್ಲಿ ಹೆಣ್ಣು ಪ್ರಾಪ್ತ ವಯಸ್ಕಳಾಗುವವರೆಗೆ, ಆಕೆಯನ್ನು ಮದುವೆಯೆಂಬ ಬಂಧನಕ್ಕೆ ಸಿಲುಕಿಸಬಾರದು ಎಂಬ ಅಭಿಪ್ರಾಯಕ್ಕೆ ತೀವ್ರವಾದ ವಿರೋಧ ಸಂಪ್ರದಾಯವಾದಿಗಳಿಂದ ವ್ಯಕ್ತವಾಗಿತ್ತು.

ಋತುಮತಿಯಾಗುವ ಮೊದಲೇ ಹೆಣ್ಣನ್ನು ತವರು ಮನೆಯ ಹೊಸಿಲು ದಾಟಿಸದಿದ್ದಲ್ಲಿ ತಂದೆಯಾದವನಿಗೆ ಘೋರವಾದ ಜೀವನ ಎದುರಾಗುತ್ತದೆ ಎಂಬ ಭಯದಲ್ಲಿ ಸಮಾಜವನ್ನು ಸಿಲುಕಿಸಿದ್ದ ಪುರೋಹಿತಶಾಹಿ ವರ್ಗ ಹೆಣ್ಣು ಮಕ್ಕಳ ಬದುಕಿನಲ್ಲಿ ಬಹುದೊಡ್ಡ ಕುತ್ತಾಗಿ ಪರಿಣಮಿಸಿತು.

ಸ್ವತಃ ಶಾಸ್ತ್ರ ಜ್ಞಾನವಿಲ್ಲದವರು ಇವರು ಹೇಳಿದ್ದನ್ನೇ ಸರಿ ಎಂದು ನಂಬಿ ತಮ್ಮ ಹೆಣ್ಣು ಮಕ್ಕಳ ಜೀವನವನ್ನೇ ಒತ್ತೆಯಿಡುತ್ತಿದ್ದು, ಅವರಿಗಿಂತ ವಯಸ್ಸಿನಲ್ಲಿ ಹತ್ತು ಪಟ್ಟು ಹಿರಿಯರಾಗಿದ್ದ ಪುರುಷರಿಂದ ಹಿಡಿದು, ಆಟ ಆಡುವ ಬಾಲಕರವರೆಗೆ ಯಾರೊಡನೆಯಾದರೂ ವಿವಾಹ ಸಂಬಂಧಗಳನ್ನು ಏರ್ಪಡಿಸುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು.

ಸ್ತ್ರೀ ಸಮಾನತೆಯ ಹೋರಾಟಕ್ಕೆ ಪ್ರಮುಖ ಸವಾಲಾಗಿದ್ದ ಬಾಲ್ಯವಿವಾಹದ ಪಿಡುಗನ್ನು ನಿಷೇಧಿಸಲು ಸಮಾಜ ಸುಧಾರಕರು ಹಾಗೂ ಮಹಿಳಾ ಸಂಘಟನೆಗಳು ಬ್ರಿಟಿಷ್ ಸರ್ಕಾರದ ಮೇಲೆ ತೀವ್ರ ಒತ್ತಡವನ್ನು ಹೇರಿದ ಮೇಲೆ, 1929ನೇ ವರ್ಷದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟುವ ಕಾಯಿದೆ ಅಸ್ತಿತ್ವಕ್ಕೆ ಬಂದಿತು. ಈ ಹೋರಾಟದಲ್ಲಿ ಪ್ರಧಾನ ಪಾತ್ರವನ್ನು ವಹಿಸಿದ ಹರ್‌ಬಿಲ್‌ದಾಸ್ ಸರ್‌ದಾ ಅವರ ನೆನಪಿನಲ್ಲಿ ಈ ಕಾಯಿದೆಯನ್ನು ಸರ್‌ದಾ ಕಾಯಿದೆ ಎಂದೂ ಗುರುತಿಸಲಾಗುತ್ತಿದೆ.

ಈ ಕಾಯಿದೆಯ ಅನ್ವಯ ವಿವಾಹಕ್ಕೆ ಸಮ್ಮತಿ ನೀಡುವ ವಯಸ್ಸನ್ನು ಹೆಣ್ಣಿಗೆ 14 ವರ್ಷಗಳು ಹಾಗೂ ಗಂಡಿಗೆ 18 ಎಂದು ನಿಗದಿ ಪಡಿಸಲಾಯ್ತು. ಆದರೆ ಈ ಕಾನೂನನ್ನು ಉಲ್ಲಂಘಿಸಿದವರಿಗೆ ಯಾವುದೇ ಶಿಕ್ಷೆಯನ್ನು ವಿಧಿಸುವುದಕ್ಕಾಗಲಿ, ನಡೆದು ಹೋದ ಅಪ್ರಾಪ್ತ ವಯಸ್ಕರ ವಿವಾಹಗಳನ್ನು ನಿಷಿದ್ಧ ಎಂದು ಘೋಷಿಸಲಾಗಲಿ ಈ ಕಾಯಿದೆಯಲ್ಲಿ ಅವಕಾಶವಿರಲಿಲ್ಲ.
 
ಆದುದರಿಂದ ಬಾಲ್ಯ ವಿವಾಹಗಳು ಅವ್ಯಾಹತವಾಗಿ ನಡೆದು, ಈ ಕಾಯಿದೆ ಒಂದು ಅಲಂಕಾರ ವಸ್ತುವಾಯಿತೇ ಹೊರತು ಪರಿಸ್ಥಿತಿಗಳಲ್ಲಿ ಯಾವ ಬದಲಾವಣೆಗಳೂ ಉಂಟಾಗಲಿಲ್ಲ.

ಸ್ವಾತಂತ್ರ್ಯ ಪೂರ್ವದ ಸಂದರ್ಭದಲ್ಲಿ ಬಾಲ್ಯ ವಿವಾಹ ನಿಯಂತ್ರಣಾ ಕಾಯಿದೆ ಹೆಚ್ಚು-ಕಡಿಮೆ ನಿಷ್ಕ್ರಿಯವಾಗಿತ್ತು. ಆದರೆ ಸ್ವಾತಂತ್ರಾನಂತರದಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ: 1978ನೇ ಇಸವಿಯಲ್ಲಿ ಸರ್‌ದಾ ಕಾಯಿದೆಗೆ ತಿದ್ದುಪಡಿಯನ್ನು ತರಲಾಗಿದ್ದು, ಹೆಣ್ಣಿಗೆ 18 ಮತ್ತು ಗಂಡಿಗೆ 21 ಎಂದು ವಿವಾಹದ ವಯಸ್ಸನ್ನು ಏರಿಸಲಾಯ್ತು.
 
ಅಂದಿನಿಂದ ಇಂದಿನವರೆಗೂ ಇದೇ ವಯೋಮಿತಿ ಜಾರಿಯಲ್ಲಿದ್ದರೂ ದೇಶದ ಎಲ್ಲ ಭಾಗಗಳಲ್ಲೂ ಬಾಲಕ-ಬಾಲಕಿಯರ ವಿವಾಹಗಳು ನಡೆಯುತ್ತಲೇ ಇವೆ. ಅನೇಕ ಸಂದರ್ಭಗಳಲ್ಲಂತೂ ಸಚಿವರು, ಪೊಲೀಸ್ ಅಧಿಕಾರಿಗಳು ಹಾಗೂ ನ್ಯಾಯಾಧೀಶರ ಸಮ್ಮುಖದಲ್ಲೇ ಬಾಲ್ಯ ವಿವಾಹಗಳು ನಡೆದು ಹೋಗುತ್ತವೆ.

ಆಡಳಿತಾರೂಢ ವ್ಯವಸ್ಥೆಯೇ ಇಂಥ ಕಾನೂನು ಬಾಹಿರವಾದ ಕೃತ್ಯಗಳಲ್ಲಿ ಬಹಿರಂಗವಾಗಿಯೇ ಭಾಗವಹಿಸುವಾಗ ಈ ಪಿಡುಗು ಕೊನೆಯಾಗಬಹುದೆಂಬ ಭರವಸೆಯನ್ನು ತಾನೇ ಹೇಗೆ ಇಟ್ಟುಕೊಳ್ಳವುದು?

ವಿವಾಹದ ವಯಸ್ಸನ್ನು ಕುರಿತು ಆಗಿಂದಾಗ್ಗೆ ಬಿಡುಗಡೆಯಾಗುವ ಅಂಕಿ-ಅಂಶಗಳು ಭಾರತದಲ್ಲಿ ಹೆಣ್ಣು ಮಕ್ಕಳ ಸರಾಸರಿ ವಿವಾಹದ ವಯಸ್ಸು 18 ವರ್ಷಗಳು ಎಂದು ಸೂಚಿಸಿದರೂ, ನಂಬಲರ್ಹ ಮಾಹಿತಿಯ ಪ್ರಕಾರ ಇಂದಿಗೂ ಶೇಕಡ ನಲವತ್ತರಷ್ಟು (40) ಹೆಣ್ಣು ಮಕ್ಕಳ ವಿವಾಹಗಳು 18 ವರ್ಷಗಳನ್ನು ತಲುಪುವ ಮುನ್ನವೇ ನಡೆಯುತ್ತವೆ.

ಇತ್ತೀಚೆಗೆ, ಎಂದರೆ 2006ರಲ್ಲಿ ಬಾಲ್ಯ ವಿವಾಹ ನಿಯಂತ್ರಣಾ ಕಾಯಿದೆಗೆ ಮತ್ತೊಂದು ಹೊಸ ರೂಪ ದೊರೆತು ಅದರ ಶೀರ್ಷಿಕೆಯನ್ನು ಬಾಲ್ಯ ವಿವಾಹವನ್ನು ನಿಷೇಧಿಸುವ ಕಾಯಿದೆ ಎಂದು ಬದಲಾಯಿಸಲಾಯ್ತು.

ಈ ಕಾಯಿದೆಯನ್ವಯ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ವಿವಾಹವಾಗುವ ಪುರುಷರಿಗೆ ಹಾಗೂ ಇಂಥ ವಿವಾಹಗಳನ್ನು ಏರ್ಪಡಿಸುವವರಿಗೆ 2 ವರ್ಷದ ಕಠಿಣ ಸಜೆ ಅಥವಾ ಒಂದು ಅಥವಾ ಒಂದುವರೆ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲು ಸಾಧ್ಯವಿದೆ.
 
ಇಂಥ ವಿವಾಹಗಳನ್ನು ನಿಷೇಧಿಸುವ ಅಥವಾ ತಡೆಗಟ್ಟುವ ಅಧಿಕಾರವನ್ನು ಹೊಂದಿರುವ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ನೇಮಕಕ್ಕೂ 2006ರ ಕಾಯಿದೆ ಅವಕಾಶವನ್ನು ಕಲ್ಪಿಸಿದ್ದೇ ಅಲ್ಲದೆ, ಇಂಥ ವಿವಾಹಗಳು ಅಧಿಕ ಸಂಖ್ಯೆಯಲ್ಲಿ ನಡೆಯುವ ಅಕ್ಷಯ ತೃತೀಯದಂಥ ಸಂದರ್ಭಗಳಲ್ಲಿ ಅವುಗಳನ್ನು ತಡೆಗಟ್ಟಲು ಜಿಲ್ಲಾ ನ್ಯಾಯಾಧೀಶರಿಗೆ ವಿಶೇಷ ಅಧಿಕಾರವನ್ನು ನೀಡಬೇಕೆಂಬ ಆದೇಶವನ್ನೂ ಹೊರಡಿಸಿತ್ತು.

ಬಾಲ್ಯ ವಿವಾಹವನ್ನು ನಿಷೇಧಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವೂ ಒಂದು ಹೆಜ್ಚೆಯನ್ನು ಮುಂದಿಟ್ಟಿದ್ದು ಬಾಲ್ಯ ವಿವಾಹ ನಿಷೇಧ ಸಮಿತಿಯನ್ನು ರಚಿಸಿದೆ. ಬಾಲ್ಯ ವಿವಾಹ ತಂದೊಡ್ಡುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಜೊತೆಗೆ, 2006ರ ಬಾಲ್ಯ ವಿವಾಹ ನಿಷೇಧ ಕಾಯಿದೆಯ ಬಿಗಿ ಅನುಷ್ಠಾನವನ್ನು ಕುರಿತಂತೆ ಕ್ರಮವನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡುವ ಉದ್ದೇಶವನ್ನು ಕೂಡ ಹೊಂದಿರುವ ಈ ಸಮಿತಿ ಇತ್ತೀಚೆಗೆ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿಯನ್ನು ನೀಡುತ್ತಿದೆ.

ವಿಶೇಷವಾಗಿ ಸಾಮೂಹಿಕ ವಿವಾಹಗಳ ಸಂದರ್ಭದಲ್ಲಿ ಅಧಿಕಾರಿಗಳು ನಿಗಾವಹಿಸಬೇಕೆಂಬುದು ಸಮಿತಿಯ ಆದೇಶವಾಗಿದ್ದು, ಅವರು ಸಣ್ಣ ವಯಸ್ಸಿನ ಜೋಡಿಗಳ ಜನನ ಪ್ರಮಾಣಪತ್ರವನ್ನು ಪರಿಶೀಲಿಸಬೇಕೆಂದು ಕೂಡ ಸೂಚಿಸಲಾಗಿದೆ.

ಕಾಯಿದೆಗಳು, ತಿದ್ದುಪಡಿಗಳು, ಸಮಿತಿಗಳು-ಇವುಗಳಿಗೆ ಯಾವ ಪ್ರಸ್ತುತತೆಯೂ ಇಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಎಲ್ಲಿಯವರೆಗೂ ಕಾನೂನನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯಾಗುವುದಿಲ್ಲವೋ ಅಲ್ಲಿಯವರೆಗೂ ಜನರಲ್ಲಿ ಭಯ ಮೂಡಲು ಸಾಧ್ಯವೇ ಇಲ್ಲ.
 
ಒಂದು ವೇಳೆ ಕಾನೂನು ಬಾಹಿರ ವಿವಾಹಗಳನ್ನು ತಡೆಗಟ್ಟಿದರೂ ಸಂಬಂಧ ಪಟ್ಟ ಕುಟುಂಬಗಳ ವಿರುದ್ಧ ಯಾವ ಬಿಗಿ ಕ್ರಮಗಳನ್ನೂ ಜರುಗಿಸಿದ ನಿದರ್ಶನಗಳು ನಮ್ಮ ಮುಂದಿಲ್ಲ. ಹೆಚ್ಚೆಂದರೆ ಅವರನ್ನು ಕರೆದು ಸಲಹೆ-ಸೂಚನೆಗಳನ್ನು ನೀಡಲಾಗುತ್ತದೆ.

ಎಲ್ಲಕ್ಕಿಂತ ಮಿಗಿಲಾಗಿ ಹಾಗೆ ಸಾರ್ವಜನಿಕವಾಗಿ ತಡೆಯೊಡ್ಡಿದ ವಿವಾಹಗಳನ್ನು ಗೋಪ್ಯ ಸ್ಥಳಗಳಲ್ಲಿ ಮಾಡುತ್ತಿಲ್ಲ ಎಂಬ ಖಾತ್ರಿಯಾದರೂ ಏನು? ಸಾರ್ವಜನಿಕ ನೆನಪುಗಳು ಬಹು ಬೇಗ ಮಾಸುವುದರಿಂದ ಕುಟುಂಬಗಳ ಮೇಲೆ ನಿರಂತರವಾಗಿ ಕಣ್ಣಿಡುವವರು ಯಾರು?

ಒಂದು ವೇಳೆ ನಿಯಮೋಲ್ಲಂಘನೆಗಳು ಗಮನಕ್ಕೆ ಬಂದರೂ ಅದನ್ನು  ವರದಿ ಮಾಡಬೇಕೆನ್ನುವಷ್ಟು ಮಟ್ಟಿಗೆ ಸಾಮಾಜಿಕ ಸಾಕ್ಷಿ ಜಾಗೃತವಾಗಿದೆಯೇ? ಇಂಥ ಪ್ರಶ್ನೆಗಳನ್ನು ಕೇಳುತ್ತಾ ಹೋದಾಗ ಈ ಸಮಾಜದ ಹತಾಶ ಸ್ಥಿತಿ ಎಷ್ಟೆಂಬುದು ನಮಗೆ ಅರಿವಾಗುತ್ತದೆ.

ಬಾಲ್ಯ ವಿವಾಹದಂಥ ಅನಿಷ್ಟ ಪಿಡುಗಿಗೆ ತಡೆಯೊಡ್ಡಬೇಕಾದರೆ ಅಧಿಕಾರ ವರ್ಗ, ಆರಕ್ಷಕ ಠಾಣೆಗಳು ಮತ್ತು ನ್ಯಾಯಾಲಯಗಳು-ಈ ಮೂರು ವ್ಯವಸ್ಥೆಗಳಲ್ಲೂ ಲಿಂಗ ಸೂಕ್ಷ್ಮ ಧೋರಣೆಗಳು ಜಾಗೃತವಾಗಬೇಕು.

ಅದರ ಜೊತೆಜೊತೆಗೆ ಪೋಷಕರಲ್ಲಿ ಅರಿವನ್ನು ಮೂಡಿಸಿ, ಹೆಣ್ಣು ಮಕ್ಕಳಿಗೆ ಸ್ವಾಸ್ಥ್ಯ ಹಾಗೂ ಸುರಕ್ಷಿತ ಬದುಕನ್ನು ನಡೆಸಲು ಅಗತ್ಯವಾದ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೂಡ ನೆರೆಹೊರೆಗಳು ಸನ್ನದ್ಧರಾಗಬೇಕು. ಹಾಗಾದಲ್ಲಿ ಮಾತ್ರ ಬಾಲ್ಯ ವಿವಾಹದಂಥ ಸಮಾಜ ಕಂಟಕ ಪದ್ಧತಿಗಳಿಗೆ ತಡೆಯೊಡ್ಡಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT