ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶದಲ್ಲಿ ಹೊಸ ರಾಷ್ಟ್ರದ ನಿರ್ಮಾಣ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಈಗೇನು ಮೇಲೇರುವ ಪೈಪೋಟಿ ಜೋರಾಗಿಯೇ ಇದೆ. ರಷ್ಯ, ಅಮೆರಿಕ, ಐರೋಪ್ಯ ಸಂಘ, ಜಪಾನ್, ಚೀನಾ, ಭಾರತ ಅಷ್ಟೇಕೆ, ಈಲಾನ್ ಮಸ್ಕ್‌ನಂಥವರ ಖಾಸಗಿ ಶಕ್ತಿಗಳೂ ಬಾಹ್ಯಾಕಾಶಕ್ಕೆ ಲಗ್ಗೆ ಹಾಕಲು ಹೊರಟಾಗಿದೆ. ಕಕ್ಷೆಗೇರುವ ತಂತ್ರಜ್ಞಾನ ಅಷ್ಟು ಸಲೀಸಾಗಿರುವಾಗ ಅಲ್ಲೇ ಒಂದು ಸ್ವತಂತ್ರ ರಾಷ್ಟ್ರವನ್ನು ಕಟ್ಟಿದರೆ ಹೇಗೆ?

ಹಗುರವಾಗಿ ಪರಿಗಣಿಸಬೇಡಿ. ಅಂಥದ್ದೊಂದು ‘ಬಾಹ್ಯಾಕಾಶ ದೇಶ’ವನ್ನು ಕಟ್ಟುವ ವಿಚಾರಕ್ಕೆ ಗಂಭೀರ ಚಾಲನೆ ಸಿಕ್ಕಿದೆ. ವಿಶ್ವಸಂಸ್ಥೆಯ ಯುನೆಸ್ಕೊ ಘಟಕದ ಬಾಹ್ಯಾಕಾಶ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಕೆಲವು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಅಂಥದ್ದೊಂದು ಹೊಸ ದೇಶದ ನೀಲನಕ್ಷೆಯನ್ನು ರೂಪಿಸಿದ್ದಾರೆ. ಆ ಬಾಹ್ಯದೇಶಕ್ಕೆ ‘ಅಸ್ಗಾರ್ಡಿಯಾ’ ಎಂದು ನಾಮಕರಣವನ್ನೂ ಮಾಡಿಯಾಗಿದೆ. ಆ ಹೆಸರಿನ ಮಜ್ಕೂರು ಇಷ್ಟೆ: ನಮ್ಮ ಪುರಾಣಕಥೆಗಳಲ್ಲಿ ಬರುವ ಇಂದ್ರಪ್ರಸ್ಥದ ಹಾಗೆ ಜರ್ಮನಿಯ ನೋರ್ಸ್ ಪುರಾಣದ ಪ್ರಕಾರ ದೇವತೆಗಳು ವಾಸಿಸುವ ನಗರಕ್ಕೆ ಅಸ್ಗಾರ್ಡಿಯಾ ಎಂಬ ಹೆಸರಿದೆ.

ಶಾಂತಿ, ಸಂಯಮ, ವಿವೇಕ, ನ್ಯಾಯ-ಧರ್ಮಗಳೆಲ್ಲ ಸದಾ ಅಲ್ಲಿ ವ್ಯವಸ್ಥಿತ ಸ್ಥಿತಿಯಲ್ಲಿರುತ್ತವೆ. ಮನುಷ್ಯನಿಗೂ ಅಂಥದ್ದೊಂದು ಆದರ್ಶ ನೆಲೆ ಬೇಕಲ್ಲವೆ?
ಈ ಪ್ರಪಂಚದ ಬಹುತೇಕ ಜೀವಿಗಳು ತಮ್ಮ ನೆಲೆಯಿಂದ ದೂರ ಕದಲುವುದಿಲ್ಲ. ಹೆಚ್ಚೆಂದರೆ ಲೋಲಕದ ಹಾಗೆ ಆಚೆ ವಲಸೆ ಹೋಗಿ ಮತ್ತೆ ತಾಯ್ನೆಲೆಗೆ ಮರಳಿ ಬರುತ್ತವೆ. ಆದರೆ ಮನುಷ್ಯ ಹಾಗಲ್ಲ. ಹೊಸ ಪ್ರದೇಶದ ಅನ್ವೇಷಣೆಗಾಗಿ ಆತನ ಮನಸ್ಸು ಸದಾ ತುಡಿಯುತ್ತಿರುತ್ತದೆ.

ತನಗಿದ್ದ ಅದಮ್ಯ ಕುತೂಹಲದಿಂದಾಗಿಯೇ ಆತ ವಿಕಾಸಪಥದಲ್ಲಿ ತುಂಬ ದೂರ ಸಾಗುತ್ತ ಪೃಥ್ವಿಯ ಎಲ್ಲ ಎಲ್ಲೆಗಳಲ್ಲೂ ಹೆಜ್ಜೆಯೂರಿ, ಚಂದ್ರ, ಮಂಗಳ, ಶನಿ, ಪ್ಲೂಟೊ ಅದರಾಚಿನ ಗೆಲಾಕ್ಸಿಗಳ ಕಡೆಗೂ ಚಿತ್ತ ಹರಿಸಿದ್ದಾನೆ. ಅವನಲ್ಲಿ ಸದಾ ಜಾಗೃತವಾಗಿರುವ ಆ ತುಡಿತವೇ ಹೊಸದೊಂದು ಲೋಕವನ್ನು ನಿರ್ಮಿಸಲು ಪ್ರೇರಣೆ ಕೊಡುತ್ತಿದೆ ಎಂದು ಅಸ್ಗಾರ್ಡಿಯಾ ಸಂಘಟಕರು ಹೇಳುತ್ತಾರೆ.

ಅದೆಲ್ಲ ಸರಿ, ದೇಶ ಕಟ್ಟುವುದೆಂದರೆ ಏನು? ಬಾಹ್ಯಾಕಾಶದಲ್ಲಿ ಒಂದು ಅಟ್ಟಣಿಗೆಯನ್ನು ನಿರ್ಮಾಣ ಮಾಡುವುದು ತಾನೆ? ಅಂಥ ಅಟ್ಟಣಿಗೆಯಲ್ಲಿ ಹೊಸದೇನಿದೆ? 1973ರಲ್ಲೇ ಸೋವಿಯತ್ ರಷ್ಯನ್ನರು ‘ಸಲ್ಯೂತ್ ಟು’ ಹೆಸರಿನ ಮಿಲಿಟರಿ ಉದ್ದೇಶದ ಅಟ್ಟಣಿಗೆಯನ್ನು ಅಲ್ಲಿ ನಿರ್ಮಿಸಿದ್ದರು. ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆ ತಾನೇನು ಕಮ್ಮಿ ಎಂದು ‘ಸ್ಕೈಲ್ಯಾಬ್’ ಹೆಸರಿನ ನಿಲ್ದಾಣವನ್ನು ಕಕ್ಷೆಗೆ ಏರಿಸಿತ್ತು. ಅದರ ನಂತರ ಸೋವಿಯತ್ ಸಂಘ ‘ಮೀರ್’ ಹೆಸರಿನ ನಾಗರಿಕ ಅಟ್ಟಣಿಗೆಯನ್ನು ನಿರ್ಮಿಸಿ ವರ್ಷಗಟ್ಟಲೆ ಗಗನಯಾತ್ರಿಗಳನ್ನು ಅಲ್ಲಿ ವಾಸಕ್ಕೆ ಏರಿಸುತ್ತಿತ್ತು (ಸೋವಿಯತ್ ಸಂಘ ಹೋಳಾದಾಗ ಮೀರ್ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳು ಕೂತಲ್ಲೇ ಪರದೇಶಿಗಳಾಗಿದ್ದರು.

ತಾವು ಯಾವ ದೇಶದ ಪ್ರಜೆಯಾಗಿದ್ದೇವೆ ಎಂಬುದೇ ಗೊತ್ತಿರಲಿಲ್ಲ!) ಅದರ ನಂತರ ಹದಿನಾರು ದೇಶಗಳು ಸೇರಿ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ (ಐಎಸ್‌ಎಸ್) ಎಂಬ ಅಟ್ಟಣಿಗೆಯನ್ನು ನಿರ್ಮಿಸಿಕೊಂಡು ಈಗಲೂ ಮೂವರು ಅಲ್ಲಿ ವಾಸ ಮಾಡುತ್ತಿದ್ದಾರೆ. 2007ರಲ್ಲಿ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅಲ್ಲಿದ್ದುಕೊಂಡೇ ಪ್ರತಿ ಆರು ಗಂಟೆಗೆ ಭೂಪ್ರದಕ್ಷಿಣೆ ಮಾಡುತ್ತ, ವ್ಯಾಯಾಮದ ಯಂತ್ರದ ಮೇಲೆ ನಿಂತಲ್ಲೇ ಓಡುತ್ತ ಬಾಸ್ಟನ್ ಮೆರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದನ್ನು ಈ ಅಂಕಣದಲ್ಲಿ ಚರ್ಚಿಸಲಾಗಿತ್ತು. 2024ರ ಹೊತ್ತಿಗೆ ಅಂ.ಬಾ.ನಿ.ಯ ಅವಧಿಯೂ ಮುಗಿಯಲಿದೆ. ಅದರ ಸ್ಥಾನವನ್ನು ತುಂಬಲೆಂಬಂತೆ ಮೊನ್ನೆ ಚೀನಾ ತನ್ನದೇ ‘ಟಿಯಾಂಗಾಂಗ್-ಟು’ ಹೆಸರಿನ ಬಾಹ್ಯಾಕಾಶ ಅಟ್ಟಣಿಗೆಯ ಮೊದಲ ಭಾಗವನ್ನು ಇಬ್ಬರು ಖೇಚರರೊಂದಿಗೆ ಕಕ್ಷೆಗೆ ಕಳಿಸಿದೆ. ಅಂದಮೇಲೆ ಇನ್ನೊಂದು ಅಟ್ಟಣಿಗೆ ಬೇಕೆ?

ಹೌದು, ಬೇಕು. ಇದುವರೆಗಿನ ಅಟ್ಟಣಿಗೆಗಳೆಲ್ಲ ಯಾವುದೋ ಒಂದು ದೇಶಕ್ಕೆ ಅಧೀನವಾಗಿವೆ. ಬಾಹ್ಯಾಕಾಶ ಕುರಿತ ಈಗಿರುವ ಕಾನೂನುಗಳ ಪ್ರಕಾರ, ಕಕ್ಷೆಯಲ್ಲಿ ಅಟ್ಟಣಿಗೆ ಕಟ್ಟಬೇಕೆಂದರೆ ನಿರ್ದಿಷ್ಟ ಸರ್ಕಾರದ ಅಧಿಕೃತ ಅನುಮತಿ ಇರಬೇಕು. ಆ ಸರ್ಕಾರವೇ ಎಲ್ಲ ವ್ಯವಸ್ಥೆಗಳ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಅದು ವಾಣಿಜ್ಯ ಉದ್ದೇಶದ್ದಾದರೂ ಅಷ್ಟೆ, ಖಾಸಗಿ ಸಂಸ್ಥೆಯದಾದರೂ ಅಷ್ಟೆ. ಮಿಲಿಟರಿ ನಿಲ್ದಾಣಕ್ಕಂತೂ ಬೇರೆ ಮಾತೇ ಇಲ್ಲ. ಕಾನೂನಿನ ಈ ಅಡಚಣೆಯನ್ನು ದಾಟಬೇಕೆಂದರೆ ಪ್ರತ್ಯೇಕ ಒಂದು ರಾಷ್ಟ್ರವೇ ಅಸ್ತಿತ್ವಕ್ಕೆ ಬರಬೇಕು. ಆ ರಾಷ್ಟ್ರವೇ ಬಾಹ್ಯಾಕಾಶದಲ್ಲಿ ಮನೆಯನ್ನು ಕಟ್ಟಬೇಕು.

ರಷ್ಯ ಮೂಲದ ವಿಜ್ಞಾನಿಯೂ ಆಗಿರುವ ಯುನೆಸ್ಕೊ ಅಧಿಕಾರಿ ಡಾ. ಐಗೊರ್ ಅಶುರ್ಬೇಲಿ ಈ ಯೋಜನೆಯ ರೂವಾರಿಯಾಗಿದ್ದು ಯಾವುದೇ ದೇಶದ ನಿಯಂತ್ರಣಕ್ಕೆ ಒಳಪಡದ ಹಾಗೆ ಕಕ್ಷೆಯಲ್ಲಿ ಅಟ್ಟಣಿಗೆ ನಿರ್ಮಿಸಲು ಬುನಾದಿ ಹಾಕುತ್ತಿದ್ದಾರೆ. ಕೆಲವು ಪ್ರತಿಷ್ಠಿತ ವಿಜ್ಞಾನಿಗಳ ಹಾಗೂ ಕಾನೂನು ತಜ್ಞರ ಸಮ್ಮುಖದಲ್ಲಿ ಕಳೆದ ವಾರ ‘asgardia.space’ ಹೆಸರಿನ ಅಂತರ್ಜಾಲ ತಾಣವನ್ನು ಲೋಕಾರ್ಪಣೆ ಮಾಡಲಾಗಿದೆ. ವಯಸ್ಸು 18 ಮೀರಿದ ಯಾರು ಬೇಕಾದರೂ ಜಾಲತಾಣಕ್ಕೆ ಹೋಗಿ ಅಸ್ಗಾರ್ಡಿಯಾ ದೇಶದ ನಾಗರಿಕರಾಗಲು ನೋಂದಣಿ ಮಾಡಿಕೊಳ್ಳಬಹುದು.

ಒಂದು ಲಕ್ಷ ಜನರ ಸೇರ್ಪಡೆ ಆಗುತ್ತಿದ್ದಂತೆ ನೋಂದಣಿ ಸದ್ಯಕ್ಕೆ ಮುಗಿಯುತ್ತದೆ. ಆಗ ವಿಶ್ವಸಂಸ್ಥೆಯ ಸದಸ್ಯತ್ವಕ್ಕೆ ಅರ್ಜಿ ಹಾಕಬಹುದು. ಅದಕ್ಕಿಂತ ಮುಂಚೆ ಈ ಹೊಸ ದೇಶಕ್ಕೆ ಒಂದು ರಾಷ್ಟ್ರಧ್ವಜ, ರಾಷ್ಟ್ರಲಾಂಛನ ಮತ್ತು ರಾಷ್ಟ್ರಗೀತೆ ಸೃಷ್ಟಿಯಾಗಬೇಕಿದೆ. ಅದನ್ನು ಯಾರು ಬೇಕಾದರೂ ಸೃಷ್ಟಿ ಮಾಡಿ ಮುಂದಿನ ಜನವರಿ 20ರೊಳಗೆ ಜಾಲತಾಣಕ್ಕೆ ಸಲ್ಲಿಸಬಹುದು. ನಂತರ ಹೊಸ ನಾಗರಿಕರು ಮತ ಹಾಕಿ, ರಾಷ್ಟ್ರಚಿಹ್ನೆಗಳು ಯಾವುದಿರಬೇಕೆಂದು ನಿರ್ಧರಿಸುತ್ತಾರೆ. ಆ ಬಳಿಕ ಪೌರತ್ವದ ನೋಂದಣಿ ಕಿಟಕಿ ಮತ್ತೆ ತೆರೆದುಕೊಳ್ಳುತ್ತದೆ.

ಬಾಹ್ಯಾಕಾಶಕ್ಕೆ ಮೊದಲ ಕೃತಕ ಉಪಗ್ರಹವನ್ನು ರವಾನಿಸಿದ 60ನೇ ವರ್ಷದ ನೆನಪಿನಲ್ಲಿ 2017-18ರಲ್ಲಿ ಅಸ್ಗಾರ್ಡಿಯಾ ಅಟ್ಟಣಿಗೆ ಮೇಲಕ್ಕೇರಲಿದೆ. ಅದು ಹಂತಹಂತವಾಗಿ ನಿರ್ಮಾಣಗೊಳ್ಳುತ್ತ ಹೋಗುತ್ತ ವಾಸಯೋಗ್ಯ ಎನ್ನಿಸುವವರೆಗೆ ಅದರ ನಾಗರಿಕರು ನೆಲದ ಮೇಲೆ, ತಂತಮ್ಮ ಮೂಲ ದೇಶದಲ್ಲೇ ಇರುತ್ತಾರೆ. ಮುಂದೆ ಹೊಸ ರಾಷ್ಟ್ರ ವಿಸ್ತರಿಸುತ್ತ ಹೋದಂತೆ ನಾಗರಿಕಯಾನ ಆರಂಭವಾಗುತ್ತದೆ.

ಈ ವೈಜ್ಞಾನಿಕ ಕಲ್ಪನಾಕಥನ ಸೊಗಸಾಗಿದೆ ನಿಜ. ಆದರೆ ಅದೆಲ್ಲ ಹೇಳಿದಷ್ಟು ಸುಲಭವೆ? ಬಾಹ್ಯಾಕಾಶ ಅಟ್ಟಣಿಗೆಯನ್ನು ನಿರ್ಮಿಸಬೇಕೆಂದರೆ ಒಂದೆರಡು ಲಕ್ಷ ಡಾಲರುಗಳಿದ್ದರೆ ಸಾಲದು. ಅದರ ಕಂಬ, ತೊಲೆ, ಬಾಗಿಲು, ವಿಕಿರಣ ನಿರೋಧಕ ಕಿಟಕಿಗಳನ್ನು ನಿರ್ಮಿಸಿ ರಾಕೆಟ್ ಮೂಲಕ ಅಂತರಿಕ್ಷಕ್ಕೆ ಕೊಂಡೊಯ್ದು ಸ್ಥಾಪಿಸಲು ಶತಕೋಟಿಗಟ್ಟಲೆ ಡಾಲರ್ ಬೇಕಾಗುತ್ತದೆ. ಅಶುರ್ಬೇಲಿ ರಷ್ಯದ ಸರ್ವೋಚ್ಚ ತಂತ್ರಜ್ಞಾನ ಪ್ರಶಸ್ತಿ ಪಡೆದ ಎಂಜಿನಿಯರ್ ಹೌದು.

ವಿಯೆನ್ನಾದಲ್ಲಿ ವಿಶ್ವಸಂಸ್ಥೆಯ ಕಚೇರಿಯ ಬಳಿಯೇ ಇವರ ನಿರ್ದೇಶನದ ಅಂತಾರಾಷ್ಟ್ರೀಯ ಬಾಹ್ಯಂತರಿಕ್ಷ ಸಂಶೋಧನಾ ಕೇಂದ್ರವೂ ಇದೆ ನಿಜ. ರಷ್ಯದ ಆರು ನಗರಗಳಲ್ಲಿ ಇವರ 30 ಕಂಪನಿಗಳ ಆರು ಸಾವಿರ ಸಿಬ್ಬಂದಿ ಎಂಜಿನಿಯರಿಂಗ್ ಕೆಲಸ ಮಾಡುತ್ತಿದ್ದಾರಂತೆ- ಅದೂ ನಿಜವಿದ್ದೀತು. ಇವರ ಕನಸಿನ ದೇಶದ ನಿರ್ಮಾಣಕ್ಕೆ ಕೈಜೋಡಿಸಲು ಇತರ ದೇಶಗಳ ಉದ್ಯಮಿಗಳು ಬಂಡವಾಳ ಕೂಡ ಹಾಕಲು ಸಿದ್ಧವಾಗಿದ್ದಾರೆ ಅನ್ನೋಣ. ಆದರೂ ಹಾಕಿದ ಬಂಡವಾಳಕ್ಕೆ ಪ್ರತಿಫಲ ಏನು? ಲಾಭಾಂಶ ಇಲ್ಲದೆ ಕೇವಲ ಲೋಕಕಲ್ಯಾಣಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಎಂದಾದರೂ ಕೆಲಸ ಮಾಡಿದ್ದಿದೆಯೆ? ಅದೂ ಪರಲೋಕ ಕಲ್ಯಾಣಕ್ಕಾಗಿ? ಇದರ ಹಿಂದೆ ಬೇರೇನಾದರೂ ಸಂಚು ಇದೆಯೆ?

ನಾವು ಊಹಿಸಬಹುದಾದ ಸಂಚು ಒಂದೇ: ಸ್ವಾರ್ಥ ಮನುಷ್ಯರು ಪೃಥ್ವಿಯನ್ನು ಕರಾಳ ಭವಿಷ್ಯದತ್ತ ನೂಕುತ್ತಿದ್ದಾರೆ. ಜನಸಂಖ್ಯೆಯ ನಿರಂತರ ಹೆಚ್ಚಳ, ಅರಣ್ಯ ಮತ್ತು ನದಿಮೂಲಗಳ ಸತತ ನಾಶ, ಮಾಲಿನ್ಯದ ನಿರಂತರ ಹೆಚ್ಚಳ, ಬಾಂಬ್ ಹಿಡಿದವರ ನಿರಂತರ ಜಗಳ- ಸಮಸ್ಯೆಗಳು ಒಂದೆ ಎರಡೆ? ಅಕಸ್ಮಾತ್ ಬಿಸಿಭೂಮಿಯ ಸಮಸ್ಯೆ ತೀರ ಉಲ್ಬಣಗೊಂಡರೆ ಪಾರಾಗಿ ಹೋಗಲು ಒಂದು ಆಶ್ರಯತಾಣ ಬೇಕಲ್ಲ? ಇಲ್ಲಿನ ಇಡೀ ಜೀವಸಂಕುಲವೇ ನಾಶವಾದ ಮೇಲೂ ಬದುಕುಳಿಯಲೆಂದೇ ಹೊಸ ನೆಲೆಯನ್ನು ಕಟ್ಟಲು ಇವರು ಹೊರಟಿದ್ದಾರೆಯೆ?

ಅಸ್ಗಾರ್ಡಿಯಾ ರೂವಾರಿಗಳ ಪ್ರಕಾರ ಭೂಮಿಯ ಸಂಕಷ್ಟಗಳಿಂದ ಪಾರಾಗಿ ಹೋಗಿ ಆಚೆ ವಾಸಿಸುವುದು ಈ ತ್ರಿಶಂಕು ಸ್ವರ್ಗದ ಉದ್ದೇಶ ಅಲ್ಲವೇ ಅಲ್ಲ; ಬದಲಿಗೆ ಭೂಮಿಯನ್ನು ರಕ್ಷಿಸುವುದು ಹೊಸ ದೇಶದ ಮೊದಲ ಆದ್ಯತೆ ಆಗಿರುತ್ತದೆ. ಹೊರಜಗತ್ತಿನಿಂದ ಕ್ಷುದ್ರಗ್ರಹಗಳು ಅಪ್ಪಳಿಸದ ಹಾಗೆ ಕಣ್ಗಾವಲು ಇಡುವುದು; ಅಲ್ಲಿ ಸುತ್ತುತ್ತಿರುವ ನಮ್ಮದೇ ತಿಪ್ಪೆರಾಶಿಯನ್ನು ಸಂಗ್ರಹಿಸಿ ಮರುಬಳಕೆ ಮಾಡುವುದು; ಘಾತುಕ ವಿಶ್ವಕಿರಣಗಳು ಮತ್ತು ಸೌರ ಸುಂಟರಗಾಳಿ ಭೂಮಿಗೆ ಬೀಸಿ ಬಾರದ ಹಾಗೆ ತಡೆ ಒಡ್ಡುವುದು-  ಹೀಗೆ ಭೂಮಿಯ ಭದ್ರತೆಯೇ ಇದರ ಪ್ರಮುಖ ಉದ್ದೇಶವಾಗಿರುತ್ತದೆ. ಇದರ ಆಚೆ ಇನ್ನೊಂದು ಉದಾತ್ತ ಸಮಕಲ್ಯಾಣ ಯೋಜನೆಯೂ ಇದರಲ್ಲಿದೆ: ಭೂಮಿಯ ಮೇಲಿನ 200 ದೇಶಗಳ ಪೈಕಿ ಕೇವಲ 20  ರಾಷ್ಟ್ರಗಳು ಬಾಹ್ಯಾಕಾಶಕ್ಕೆ ಲಗ್ಗೆ ಇಟ್ಟಿವೆ.

ನಾಳಿನ ಪೀಳಿಗೆಗೆ ಬೇಕಾದ ಇಂಧನ, ಖನಿಜಗಳನ್ನು ಕ್ಷುದ್ರಗ್ರಹಗಳಿಂದ ಗಣಿಗಾರಿಕೆ ನಡೆಸಿದರೆ ಅವೆಲ್ಲ ಈ ಕೆಲವು ದೇಶಗಳ ಪಾಲಾಗುತ್ತವೆ ವಿನಾ ಇತರ 180 ದೇಶಗಳಿಗೆ ಅವಕಾಶವೇ ಇಲ್ಲವಾಗಿದೆ. ಬಾಹ್ಯಲೋಕದಲ್ಲಿ ಯಾರ ಹಂಗೂ ಇಲ್ಲದ ದೇಶವೊಂದು ಸ್ಥಾಪಿತವಾದರೆ ಅದು ಒಂದು ರೀತಿಯಲ್ಲಿ ಕಕ್ಷೆಯಲ್ಲಿನ ವಿಶ್ವಸಂಸ್ಥೆಯಾಗಿ, ಹೊಸ ತಂತ್ರಜ್ಞಾನಗಳ ಲಾಭಗಳೆಲ್ಲ ಎಲ್ಲ ದೇಶಗಳಿಗೂ ಸಮಾನವಾಗಿ ದಕ್ಕುವಂತೆ ಮಾಡಲು ಶ್ರಮಿಸುತ್ತದೆ. ಅಂಥ ಹೊಸ ದೇಶದಿಂದ ಬೇರೆ ಗ್ರಹಗಳಿಗೆ ನೌಕೆಗಳನ್ನು ರವಾನಿಸಬಹುದು. ಭೂಮಿಯ ಮೇಲಿನ ಯಾವ ದೇಶವಾದರೂ ಈ ಅಟ್ಟಣಿಗೆಯನ್ನು ಬಾಡಿಗೆಗೆ ಪಡೆದು ಸಲೀಸಾಗಿ ಹೊಗೆ ಚಿಮ್ಮಿಸದೆ ಬಾಹ್ಯಾಕಾಶ ನೌಕೆಗಳ ಉಡಾವಣೆ ಮಾಡಬಹುದು. ಮೇಲಾಗಿ ಪ್ರವಾಸೋದ್ಯಮ...

ಬಂಡವಾಳ ಹಾಕಬಲ್ಲ ಉದ್ಯಮಿಗಳಿಗೆ ಲಾಭದ ಅವಕಾಶ ಎಲ್ಲೆಲ್ಲಿದೆ ಎನ್ನುವುದು ‘ಮೇಲ್ನೋಟ’ಕ್ಕೇ ಗೊತ್ತಾಯಿತಲ್ಲ ಈಗ? ಅದರೊಟ್ಟಿಗೆ ಒಂದಿಷ್ಟು ಭೂಕಲ್ಯಾಣದ ಕೆಲಸಗಳನ್ನು ನಡೆಸಿ ಭೇಷ್ ಎನ್ನಿಸಿಕೊಳ್ಳಲೂ ಸಾಧ್ಯವಿದೆ. ಆದರೂ ಅಸ್ಗಾರ್ಡಿಯಾ ಒಂದು ನಿರಂಕುಶ ದೇಶ ಆಗದೆಂಬ ಗ್ಯಾರಂಟಿ ಏನೂ ಇಲ್ಲ. ಕಾನೂನೇ ಇಲ್ಲದ ದೇಶವೊಂದನ್ನು ನಿರ್ಮಿಸಿಕೊಂಡು ಇವರು ತಮಗಿಷ್ಟ ಬಂದ ಕೃತ್ಯಗಳಲ್ಲಿ ತೊಡಗಿದರೆ ಅವರ ಮೇಲೆ ನಿಗಾ ಇಡುವವರೇ ಅಲ್ಲಿ ಇರುವುದಿಲ್ಲ. ಹಿಂದೆ 1986ರಲ್ಲಿ ಇಟಲಿಯ ಸೆವೆರಿನೊ ಆಂಟಿನೊರಿ ಎಂಬ ಪ್ರಸೂತಿ ತಜ್ಞನೊಬ್ಬ ಎಲ್ಲ ದೇಶಗಳ ಕಾನೂನನ್ನು ಧಿಕ್ಕರಿಸಿ ತಾನು ತದ್ರೂಪಿ ಶಿಶುಗಳನ್ನು ಸೃಷ್ಟಿಸುತ್ತಿದ್ದೇನೆ ಎಂದು ಧಮಕಿ ಹಾಕಿದ್ದ. ಯಾವ ದೇಶದ ಕಾನೂನೂ ತನಗೆ ಅನ್ವಯ ಆಗದ ಹಾಗೆ ಸಮುದ್ರದ ನಡುವೆ ಹಡಗಿನಲ್ಲೇ ಪ್ರಯೋಗಾಲಯ ಸ್ಥಾಪಿಸುವುದಾಗಿ ಹೇಳಿದ್ದ (ಕಳೆದ ಮೇ ತಿಂಗಳಲ್ಲಿ ಯುವತಿಯೊಬ್ಬಳನ್ನು ಅಪಹರಿಸಿ ಅವಳ ಅಂಡಾಣುಗಳನ್ನು ದೋಚಿದ ಅಪರಾಧಕ್ಕೆ ಅವನ ಬಂಧನವಾಗಿದೆ).

ಕಾನೂನಿನ ನಿರ್ಬಂಧಗಳೇ ಇಲ್ಲದ ಜಾಗದಲ್ಲಿ ಹೊಸ ಹೊಸ ಪ್ರಯೋಗ ಮಾಡಲು ಅನೇಕ ವಿಜ್ಞಾನಿಗಳು, ಟೆಕ್ನೋದ್ಯಮಿಗಳು, ವೈದ್ಯಪುಂಗವರು ಈಗಂತೂ ತುದಿಗಾಲಲ್ಲಿ ನಿಂತಿರುತ್ತಾರೆ. ಅಂಥವರೆಲ್ಲ ಸೇರಿ ನಿರ್ಮಿಸುವ ಹೊಸ ತ್ರಿಶಂಕುಲೋಕ ನಾಳೆ ಸ್ವರ್ಗವೂ ಆದೀತು, ನರಕವೂ ಆದೀತು. ಅಂಥದ್ದೇ ಇನ್ನಷ್ಟು ‘ಸ್ವತಂತ್ರ ದೇಶ’ಗಳ ನಿರ್ಮಾಣಕ್ಕೆ ಪೈಪೋಟಿ ಕೂಡ ಆರಂಭವಾದೀತು.

ಮುಂದಿನದು ನಮಗೆ ಗೊತ್ತೇ ಇದೆ: ನೀರಜಗಳ, ತೈಲಜಗಳ, ಗಾಳಿಜಗಳ, ರಾಜಕಾರಣ, ಧರ್ಮಕಾರಣ, ಯುದ್ಧಸಿದ್ಧತೆ... ಅದೇ ಹಳೇ ಕತೆ. ಆದರೂ ಅಲ್ಲೊಂದು ದೇಶ ಇರುವುದು ಒಳ್ಳೆಯದೇನೊ. ಅಂಥ ಗಲಾಟೆಕೋರರನ್ನೆಲ್ಲ ಅತ್ತ ಸಾಗಹಾಕಿದರೆ ಇತ್ತ ನಮ್ಮದು ನಿಜಕ್ಕೂ ದ್ಯಾವಾಪೃಥಿವೀ ಆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT