ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕ್ಕಟ್ಟನ್ನು ಏಳು ವಾರ ಎದುರಿಸಿದ ನಾಯಕ

Last Updated 25 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನೋಟು ರದ್ದತಿಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಏಳು ವಾರ ಎದುರಿಸಿ ಉಳಿಯಲು ನರೇಂದ್ರ ಮೋದಿ ಅವರನ್ನು ಹೊರತುಪಡಿಸಿದರೆ ಭಾರತದ ಯಾವುದೇ ನಾಯಕನಿಗೆ, ಬಹುಶಃ ಯಾವುದೇ ಆಧುನಿಕ ಪ್ರಜಾಪ್ರಭುತ್ವದಲ್ಲಿನ ರಾಜಕೀಯ ವ್ಯಕ್ತಿಗೆ ಸಾಧ್ಯವಾಗಲಿಕ್ಕಿಲ್ಲ.

ಮೋದಿ ಅವರು ಜನನಾಯಕ ಎಂಬುದಕ್ಕೆ ಯಾರಾದರೂ ಆಧಾರ ಹುಡುಕುತ್ತಿದ್ದರೆ, ಅದು ಈ ಅವಧಿಯಲ್ಲಿ ಕಾಣಸಿಕ್ಕಿದೆ. ಇದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸೋಣ. ಏಕೆಂದರೆ ನಾವು ನೈಜ ಯಜಮಾನನ ನಡುವೆ ಇದ್ದೇವೆ.

ನೋಟುಗಳ ಬದಲಾವಣೆಯ ಬಿಕ್ಕಟ್ಟನ್ನು ಸರ್ಕಾರ ಪೂರ್ಣ ಪ್ರಮಾಣದಲ್ಲಿ ಊಹಿಸಿರಲಿಲ್ಲವೇನೋ ಎನ್ನಲು ನಮ್ಮಲ್ಲಿ ಕೆಲವು ಸುಳಿವುಗಳಿವೆ. ಮೊದಲು ಸುಳಿವು ಮೋದಿ ಅವರ ಆರಂಭದ ಘೋಷಣೆಯಲ್ಲಿ ಇತ್ತು. ಪರಿಸ್ಥಿತಿ ಸಹಜವಾಗುತ್ತದೆ ಎಂದು ಅವರು ನುಡಿದಿದ್ದ ಭವಿಷ್ಯ ನಿಜವಾಗಲಿಲ್ಲ. ನೋಟುಗಳ ಕೊರತೆಯು ಅರ್ಥ ವ್ಯವಸ್ಥೆಯ ಮೇಲೆ ಎಷ್ಟು ತೀವ್ರವಾಗಿ ಪರಿಣಾಮ ಬೀರಬಲ್ಲದು ಎಂಬುದು ಅರಿವಾಗುತ್ತಿದ್ದ ಹೊತ್ತಿನಲ್ಲಿ ಮೋದಿ ಅವರು ಪೂರ್ವಯೋಜಿತ ಜಪಾನ್‌ ಭೇಟಿಗೆ ತೆರಳಿದ್ದು ಎರಡನೆಯ ಸುಳಿವು. ಬ್ಯಾಂಕ್‌ ಹಾಗೂ ಎಟಿಎಂಗಳ ಎದುರಿನ ಸರತಿ ಸಾಲುಗಳು ಬೇಗನೆ ಕರಗುವಂಥವಲ್ಲ ಎಂಬುದು ಅವರು ಜಪಾನ್‌ನಿಂದ ಮರಳುವ ವೇಳೆಗೆ ಸ್ಪಷ್ಟವಾಗಿತ್ತು.

ಮೋದಿ ಅವರು ನೋಟು ರದ್ದತಿ ಬಗ್ಗೆ ಮೊದಲು ಮಾಡಿದ ಘೊಷಣೆ ಅದೆಷ್ಟು ಶಕ್ತಿಯುತವಾಗಿತ್ತು ಎಂದರೆ, ಬಹುಸಂಖ್ಯೆಯ ಜನರಲ್ಲಿ ಅದು ಉತ್ಸಾಹ ಮೂಡಿಸಿತು.ಮಾಧ್ಯಮಗಳು ಸಂಪೂರ್ಣವಾಗಿ ಮೋದಿ ಪರ ನಿಂತವು. ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದ್ದ ಕಾಂಗ್ರೆಸ್ ಕೂಡ ಈ ತೀರ್ಮಾನ ಬೆಂಬಲಿಸಿತು. ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್‌ ಎಂಬ ಇಬ್ಬರು ತಳಮಟ್ಟದ ನಾಯಕರು ಮಾತ್ರ ಈ ತೀರ್ಮಾನದಲ್ಲಿನ ಅಪಾಯ ಗುರುತಿಸಿ, ಅದನ್ನು ವಿರೋಧಿಸಿದರು.

ಮೋದಿ ಅವರು, ದೇಶದ ಬಹುತೇಕ ಜನ ಈ ತೀರ್ಮಾನ ಬೆಂಬಲಿಸುವಂತೆ ಮಾಡಿದರು. ಮೋದಿ ಅವರಿಗೆ ಮತ ನೀಡದವರೂ, ಭಾರಿ ಬದಲಾವಣೆಯೊಂದು ಬರಲಿದೆ ಎಂಬ ನಿರೀಕ್ಷೆಯಿಂದ ತೊಂದರೆಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ.

ನೋಟು ರದ್ದತಿಯ ತೀರ್ಮಾನವನ್ನು ಒಂದು ವೇಳೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಕೈಗೊಂಡಿದ್ದಿದ್ದರೆ, ನಗರವಾಸಿ ಮಧ್ಯಮ ವರ್ಗದವರಲ್ಲಿ ಹಾಗೂ ಮಾಧ್ಯಮಗಳಲ್ಲಿ ಈ ಪರಿಯ ಬೆಂಬಲ ವ್ಯಕ್ತವಾಗುತ್ತಿತ್ತು ಎನ್ನಲಾಗದು. ಅವರ ಸರ್ಕಾರ ಹೀಗೆ ಮಾಡಿದ್ದರೆ ಪ್ರತಿಕ್ರಿಯೆ ಈಗಿನದ್ದಕ್ಕೆ ವಿರುದ್ಧವಾಗಿರುತ್ತಿತ್ತು. ಕಷ್ಟವಾಗುವಂತೆ ಮಾಡಿದ್ದಕ್ಕಾಗಿ ಜನ ಕೋಪಗೊಳ್ಳುತ್ತಿದ್ದರು. ಪರಿಸ್ಥಿತಿ ಏಳು ವಾರ ಮುಂದುವರಿದಿದ್ದರೆ, ಕೋಪ ತೀಕ್ಷ್ಣವಾಗುತ್ತಿತ್ತು.

ಈಗ, ನೋಟು ರದ್ದತಿಯಿಂದ ಆಗಿರುವ ತೊಂದರೆ ಕೆಲವು ತಿಂಗಳು ಮುಂದುವರಿಯಲಿದೆ ಎಂಬುದು ಸ್ಪಷ್ಟವಾಗಿರುವ ಕಾರಣ, ಜನರಲ್ಲಿ ಕೋಪ ಹೆಚ್ಚುತ್ತಿರುವಂತಿದೆ. ಆದರೆ ಇಷ್ಟು ಕಾಲ ಮೋದಿ ಅವರು ಇದನ್ನು ನಿಭಾಯಿಸಿಕೊಂಡು ಬಂದಿರುವುದು ಗಮನಾರ್ಹ.

ನೋಟು ರದ್ದತಿಯ ನಕಾರಾತ್ಮಕ ಪರಿಣಾಮಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿವೆ ಎಂಬುದನ್ನು ಮೋದಿ ಅವರು ಬಹಳ ಬೇಗನೆ ಗ್ರಹಿಸಿದ್ದು ಅವರ ಚತುರ ಬುದ್ಧಿಮತ್ತೆಗೆ ಇನ್ನೊಂದು ಸಾಕ್ಷಿ. ಜಪಾನ್‌ನಿಂದ ವಾಪಸ್‌ ಬಂದ ತಕ್ಷಣ ಅವರು ಎರಡು ಭಾಷಣ ಮಾಡಿದರು. ಅವುಗಳ ಮೂಲಕ ಎರಡು ಕೆಲಸ ಮಾಡಿದರು.

ಮೊದಲನೆಯದು: ‘ನಾನು ಒಳ್ಳೆಯ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವೆ. ಧ್ಯೇಯಕ್ಕಾಗಿ ನಾನು ಕೌಟುಂಬಿಕ ಜೀವನವನ್ನು ತ್ಯಾಗ ಮಾಡಿದ್ದೇನೆ’ ಎಂದು ಅವರು ದೇಶವಾಸಿಗಳಿಗೆ ಹೇಳಿದರು.

ಅವರು ಅಸಹಜವೆಂಬಂತೆ ಭಾವುಕವಾಗಿ ಮಾತನಾಡಿದ ಆ ಕ್ಷಣ, ಮಾತಿನ ಮಧ್ಯದಲ್ಲಿ ತುಸು ಹೊತ್ತು ಕಣ್ಣೀರು ಸುರಿಸಿದ್ದು, ಪರಿಸ್ಥಿತಿ ಕೈಮೀರಿದೆ ಎಂಬುದನ್ನು ಒಪ್ಪಿಕೊಂಡ ಸಂದರ್ಭವೂ ಆಗಿದ್ದಿರಬಹುದು.

ಎರಡನೆಯದು: ಪರಿಸ್ಥಿತಿ ಐವತ್ತು ದಿನಗಳಿಗಿಂತ ಮೊದಲು ಸಹಜವಾಗುವುದಿಲ್ಲ ಎಂದು ಅವರು ಹೇಳಿದರು. ಈ ಹೇಳಿಕೆಯ ಮೂಲಕ ಅವರು, ತಮ್ಮ ಕಾರ್ಯತಂತ್ರವನ್ನು ಮರುರೂಪಿಸಲು ಕಾಲಾವಕಾಶ ಪಡೆದುಕೊಂಡರು. ಆಗ ಅವರಿಗೆ ಮತ್ತೆ ಮಾಧ್ಯಮಗಳ ಬೆಂಬಲ ಸಿಕ್ಕಿತು. ನೋಟು ರದ್ದತಿಯಿಂದಾಗಿ ಜನ ಆ ಹೊತ್ತಿನಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳ ಮೇಲಿನ ಚರ್ಚೆ ಬೇರೆಡೆ ಹೊರಳಿತು.

ಪರಿಸ್ಥಿತಿ ತಾನಾಗಿಯೇ ತಿಳಿಯಾಗಲಿ ಎಂದು ಮೋದಿ ಅವರು ಕಾಯಬಹುದಿತ್ತು. ಆದರೆ, ವಿರೋಧ ಪಕ್ಷಗಳಿಂದ ಒತ್ತಡ ಎದುರಾಗುವ ಮುನ್ನವೇ, ಮೋದಿ ಅವರು ತಾವಾಗಿಯೇ ಕಾಲಮಿತಿಯೊಂದನ್ನು ನಿಗದಿಪಡಿಸಿದರು.

‘ಐವತ್ತು ದಿನಗಳ ತೊಂದರೆ’ ಎಂಬ ಹೇಳಿಕೆಯ ಮೂಲಕ ಮೋದಿ ಅವರಿಗೆ, ನೋಟು ರದ್ದತಿಯನ್ನು ಪುನರ್‌ ನಿರ್ವಚಿಸಲು ಸ್ವಾತಂತ್ರ್ಯ ಸಿಕ್ಕಿತು. ನೋಟು ರದ್ದತಿ ಬಗ್ಗೆ ಮೋದಿ ಅವರು ಮೊದಲು ಮಾಡಿದ ಘೋಷಣೆಯಲ್ಲಿ ಡಿಜಿಟಲ್ ಅರ್ಥ ವ್ಯವಸ್ಥೆಯ ಬಗ್ಗೆ ಉಲ್ಲೇಖ ಇರಲಿಲ್ಲ. ಆವಾಗ ಅವರು ಉಲ್ಲೇಖಿಸಿದ್ದು ಕಪ್ಪುಹಣ, ನಕಲಿ ನೋಟು ಮತ್ತು ಭಯೋತ್ಪಾದನೆಯನ್ನು ಮಾತ್ರ ಎಂದು ಕೆಲವು ಮಾಧ್ಯಮಗಳು ಬರೆದಿವೆ.

ಮೋದಿ ಅವರು ಜಪಾನ್‌ನಿಂದ ಮರಳಿದ ನಂತರ, ಚರ್ಚೆಗಳು ಬೇರೊಂದು ನೆಲೆ ಕಂಡುಕೊಂಡವು. ನೋಟು ರದ್ದತಿ ಕುರಿತ ಚರ್ಚೆಗಳು ಬೇರೊಂದು ನೆಲೆಗೆ ಪಲ್ಲಟಗೊಂಡಿದ್ದು ಮೋದಿ ಅವರ ಚಾತುರ್ಯ ಹಾಗೂ ಅವರು ಹೊಂದಿರುವ ವಿಶ್ವಾಸಾರ್ಹತೆಯ ಕಾರಣದಿಂದ.

ಚರ್ಚೆ ಬೇರೆಡೆ ತಿರುಗುವಂತೆ ಮಾಡಿದ್ದು ಗುರಿಯನ್ನೇ ಬದಲಿಸುವುದಕ್ಕೆ ಸಮ ಎಂದು ವಿರೋಧ ಪಕ್ಷ ಹೇಳಿತು. ಆದರೆ, ಇದು ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಚರ್ಚೆ ಅಲ್ಲ ಎಂಬುದನ್ನು ವಿರೋಧ ಪಕ್ಷ ನೆನಪಿನಲ್ಲಿ ಇರಿಸಿಕೊಳ್ಳಬೇಕು. ತಮ್ಮ ನೀತಿಗಳು ಒಳ್ಳೆಯವು, ಈಗ ಅನುಭವಿಸುವ ಕಷ್ಟ ಮುಂದೆ ಒಳಿತು ಮಾಡುತ್ತದೆ ಎಂದು ಜನರನ್ನು ಒಪ್ಪಿಸಲು ಸಾಧ್ಯವಿರುವವರೆಗೆ ಮೋದಿ ಅವರು ಇದನ್ನೇ ಮಾಡುತ್ತಿರುತ್ತಾರೆ. ನೀತಿಯೊಂದರ ನಿರ್ದಿಷ್ಟ ಪ್ರಯೋಜನಗಳು ರಾಜಕೀಯದಲ್ಲಿ ಅಮುಖ್ಯ.

ನೋಟು ರದ್ದತಿ ತೀರ್ಮಾನದ ಒಂದು ತಿಂಗಳ ನಂತರವೂ ಬಿಜೆಪಿ ಭಾರತದ ವಿವಿಧೆಡೆ ಚುನಾವಣೆಯಲ್ಲಿ ಯಶಸ್ಸು ಸಾಧಿಸುತ್ತಿರುವುದು ಇದಕ್ಕೆ ಸಾಕ್ಷಿ. ಪಂಜಾಬ್‌ನಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದರೂ, ಈಚಿನ ಚುನಾವಣೆಯಲ್ಲಿ ಯಶಸ್ಸು ಸಾಧಿಸಿದೆ.

ವಾಸ್ತವದಲ್ಲಿ ಈ ಹೊತ್ತಿನಲ್ಲಿ ಮೋದಿ ಅವರಿಗೆ ಸಮರ್ಥ ವಿರೋಧಿಗಳೇ ಇಲ್ಲ. ನೋಟು ರದ್ದತಿಯು ಪ್ರತಿ ಭಾರತೀಯನ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿದ್ದರೂ, ಈ ಕುರಿತ ವಾಗ್ವಾದಗಳನ್ನು ಮೋದಿ ಅವರೇ ಇಂದಿಗೂ ನಿಯಂತ್ರಿಸುತ್ತಿದ್ದಾರೆ ಎಂಬುದು ಆಶ್ಚರ್ಯಕರ. ಜನರಿಗೆ ಆಗಿರುವ ತೊಂದರೆಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಅವಕಾಶ ಕಾಂಗ್ರೆಸ್ಸಿಗೆ ಇತ್ತು. ಆದರೆ ಅದು ಇದುವರೆಗೆ ಆ ಕೆಲಸ ಮಾಡಿಲ್ಲ.

ನೋಟು ರದ್ದತಿ ಬಗ್ಗೆ ತಮಗಿರುವ ಅಸಮಾಧಾನವನ್ನು ಬಹಿರಂಗವಾಗಿ ಹೇಳಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ನಿಂದನೆಗೆ ಗುರಿಯಾಗುವ ಭೀತಿ ಅವರಲ್ಲಿದೆ.

ನವೆಂಬರ್‌ 8ರ ನಂತರ ಮೋದಿ ಅವರು ಸಾಧಿಸಿದ್ದನ್ನು ಭಾರತದ ಬೇರೆ ಯಾವುದೇ ನಾಯಕ ಸಾಧಿಸಲಾರ. ಇಂಥದ್ದನ್ನು ಸಾಧಿಸುವ ಶಕ್ತಿ ವಿಶ್ವದ ಕೆಲವೇ ನಾಯಕರಲ್ಲಿ ಇದೆ. ಈ ಪರಿಸ್ಥಿತಿ 2017ರಲ್ಲಿ ಬದಲಾಗಬಹುದು. ಆ ಹೊತ್ತಿಗೆ ನೋಟು ರದ್ದತಿಯ ಮಧ್ಯಮಾವಧಿ ಪರಿಣಾಮಗಳು ಗೋಚರಿಸಲು ಆರಂಭವಾಗುತ್ತವೆ.

ತಾವು ಈ ಸ್ಥಾನ ಪಡೆದಿರುವುದು ಅದೃಷ್ಟದ ಬಲದಿಂದ ಅಲ್ಲ. ಸಾಮರ್ಥ್ಯದ ಆಧಾರದಿಂದ, ಜನಾಭಿಪ್ರಾಯವನ್ನು ತಮ್ಮ ಪರ ತಿರುಗಿಸಿಕೊಳ್ಳುವ ತಾಕತ್ತಿನಿಂದ ಎಂಬುದನ್ನು ಪ್ರಧಾನಿ ಮೋದಿ ತೋರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT