ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಬೇಕು ಅತಲಕುತಲ ನಾಯಕರು

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಸಂಘ ಪರಿವಾರದ ರಾಜಕೀಯ ಘಟಕವಾದ ಬಿಜೆಪಿಯ ಸರ್ಕಾರಗಳು ನಿಜಕ್ಕೂ ಜನಪರವಾದ ಕಾರ್ಯಕ್ರಮಗಳನ್ನು ಅದೆಷ್ಟರಮಟ್ಟಿಗೆ ಅನುಷ್ಠಾನಗೊಳಿಸಿವೆಯೋ ಆ ಶ್ರೀರಾಮಚಂದ್ರನೇ ಬಲ್ಲ! ಹಾಗೇ ಜನಪರ ಕಾರ್ಯಕ್ರಮಗಳ ಪಟ್ಟಿ ಇಟ್ಟುಕೊಂಡು ಯಾವ ಚುನಾವಣೆ ಎದುರಿಸಿವೆಯೋ ಆಂಜನೇಯನೇ ಬಂದು ಸಾಕ್ಷ್ಯ ನುಡಿಯಬೇಕು. ಎಷ್ಟೆಂದರೂ ಅದು ತೋರಿಕೆಯ ದೇವನಾಮ ಸ್ಮರಣೆ ನೆಚ್ಚಿಕೊಂಡಿರುವ ಪಕ್ಷ. ಸಾಕ್ಷ್ಯಹೇಳುವುದಕ್ಕೂ ದೇವರೇ ಬರಬೇಕು.

ಬಿಜೆಪಿ ಪಾಲಿಗೆ ‘ಸರ್ವಶಕ್ತನೂ, ದಯಾಮಯನೂ, ಸರ್ವಾಂತರ್ಯಾಮಿಯೂ ಆಗಿರುವ’ ನರೇಂದ್ರ ಮೋದಿ (ಅವರು ಎಷ್ಟೆಂದರೂ ಈ ದೇಶದ ಪ್ರಧಾನಿ. ಅವರನ್ನು ಟ್ವೀಟೇಶ್ವರನೆಂದೋ, ಸಂಘ ಪರಿವಾರದ ಬೆದರು ಬೊಂಬೆಯೆಂದೋ, ಅನಿವಾಸಿ ಭಾರತೀಯ ಪ್ರಧಾನಿ ಎಂದೋ ಕರೆದರೆ ಕೆಲವರ ಮನಸ್ಸಿಗಾದರೂ ನೋವಾಗುತ್ತದೆ. ಅಪ್ರಿಯವಾದ ಸತ್ಯವನ್ನು ಹೇಳಬಾರದು!) ಮನದ ಮಾತು ಒಂದಿದ್ದರೆ ಅದೇ ಪಕ್ಷದ ಅಷ್ಟದಿಕ್ಪಾಲಕರ ಬಾಯಿಂದ ಬೇರೆಯೇ ಅರ್ಥ ಹೊರಡಿಸುವ ಹೇಳಿಕೆಗಳು ಮಾರ್ದನಿಸುತ್ತವೆ. ಇದು, ಎತ್ತು ಏರಿಗೆಳೆದರೆ ಕೋಣ ನೀರಿಗೆಳೆದ ರೀತಿಯದಲ್ಲ. ಪ್ರಚಾರದ ಕಾರ್ಯತಂತ್ರವೇ ಹಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಿಂದೊಮ್ಮೆ ‘ಭಾರತೀಯ ಮುಸ್ಲಿಮರು ಭಾರತಕ್ಕಾಗಿಯೇ ಬದುಕುತ್ತಾರೆ, ಭಾರತಕ್ಕಾಗಿಯೇ ಪ್ರಾಣತ್ಯಾಗವನ್ನೂ ಮಾಡುತ್ತಾರೆ, ತಮ್ಮ ಮಾತೃಭೂಮಿಗೆ ಹಾನಿಯಾಗುವುದನ್ನು ಮುಸ್ಲಿಮರು ಬಯಸುವುದಿಲ್ಲ’ ಎಂದು ಹೇಳಿದ್ದರು. ಆದರೆ ಬಿಜೆಪಿ ಸೇರಿದಂತೆ ಸಂಘ ಪರಿವಾರದ ವಿವಿಧ ಅಂಗಗಳ ನಾಯಕರು ಈ ಮಾತಿಗೆ ತದ್ವಿರುದ್ಧವಾದ ಹೇಳಿಕೆ ನೀಡಿ ವಿವಾದಗಳನ್ನೇ ಸೃಷ್ಟಿಸಿದ್ದಾರೆ.

ಯೋಗಿ ಆದಿತ್ಯನಾಥ, ಸಾಕ್ಷಿ ಮಹಾರಾಜ್, ಸಾಧ್ವಿ ಪ್ರಾಚಿ, ಸಾಧ್ವಿ ನಿರಂಜನ್ ಜ್ಯೋತಿ, ಗಿರಿರಾಜ್ ಸಿಂಗ್... ಒಬ್ಬರೇ ಇಬ್ಬರೇ? ಒಬ್ಬರು ‘ಮುಸ್ಲಿಂಮುಕ್ತ ಭಾರತ’ಕ್ಕೆ ಕರೆ ನೀಡಿದರೆ, ಇನ್ನೊಬ್ಬರು ‘ಮುಸ್ಲಿಮರಿಂದಾಗಿಯೇ ಭಾರತದಲ್ಲಿ ಜನಸಂಖ್ಯಾ ಸ್ಫೋಟವಾಗಿದೆ’ ಎನ್ನುತ್ತಾರೆ. ಮತ್ತೊಬ್ಬರು, ‘ಮುಸ್ಲಿಮರು ಶೇಕಡ 20 ರಿಂದ 40 ರಷ್ಟು ಜನಸಂಖ್ಯೆ ಇರುವ ಪ್ರದೇಶಗಳಲ್ಲೇ ಕೋಮುಗಲಭೆ ಆಗುತ್ತದೆ’ ಎಂದು ಬೊಬ್ಬಿಡುತ್ತಾರೆ. ಮಗದೊಬ್ಬರು, ‘ಇದು ಹಿಂದೂ ರಾಷ್ಟ್ರ’ ಎಂದು ಅಪ್ಪಣೆ ಕೊಟ್ಟುಬಿಡುತ್ತಾರೆ. ಈ ಯಾವುದೇ ಹೇಳಿಕೆಗೂ ಪ್ರಧಾನಿ ಮೋದಿ ಪ್ರತಿಕ್ರಿಯಿಸುವುದಿಲ್ಲ. ತನ್ನ ಹೇಳಿಕೆಗಳಿಗೆ ತದ್ವಿರುದ್ಧ ಹೇಳಿಕೆ ನೀಡಿದವರ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸುವುದಿಲ್ಲ. ಅದರ ಬದಲಿಗೆ ಪಕ್ಷದ ವಕ್ತಾರರು, ‘ಇದು ಪಕ್ಷದ ನಿಲುವಲ್ಲ, ಈ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ’ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ.

ಮೋದಿ ಅವರ ಮೌನವು ಇಂಥವರ ನಡವಳಿಕೆಗೆ ಗ್ರೀನ್ ಸಿಗ್ನಲ್ ಇದ್ದಂತೆ. ಏಕೆಂದರೆ ವಿವಾದಾತ್ಮಕ ಹೇಳಿಕೆಗಳ ಅತಲಕುತಲ, ಕೂಚಿಪಾಚಿ ವೀರರು ಈ ಪಕ್ಷದ ಆಧಾರಸ್ತಂಭಗಳು! ಇಂಥವರ ಬತ್ತಳಿಕೆಯಲ್ಲಿ ಸಮೂಹ ಸನ್ನಿಗೊಳಪಡಿಸುವಂಥ ಜನೋಪಕಾರಿಯಲ್ಲದ ಅತಿ ಸುಲಭ ಅಸ್ತ್ರಗಳು. ಯಾವುದೋ ಒಂದು ಹೇಳಿಕೆ, ಇನ್ಯಾವುದೋ ಕಲಾಕೃತಿ, ಇನ್ನೆಂಥದ್ದೋ ಲೇಖನ, ಪುಸ್ತಕ... ಎಲ್ಲದರಲ್ಲೂ ಹುಳುಕು ಹುಡುಕುವ ಸೃಜನಶೀಲ ವಿರೋಧಿ ಪ್ರತಿಗಾಮಿ ಮನಸ್ಸು. ಇಪ್ಪತ್ತೊಂದನೇ ಶತಮಾನದಲ್ಲಿದ್ದರೂ ಶಿಲಾಯುಗಕ್ಕೆ ವಾಪಸ್ ಕರೆದೊಯ್ಯಲು ಸಿದ್ಧರಾದವರಂತಿರುತ್ತದೆ ಇಂಥವರ ವರ್ತನೆ. ದೇವರು, ದಿಂಡರು, ಧರ್ಮಗ್ರಂಥ, ಮೂಢನಂಬಿಕೆ ಇದ್ಯಾವುದರ ವಿಮರ್ಶೆಯೂ ಬೇಕಿಲ್ಲ. ಜಾತ್ಯತೀತ, ಸಾಮರಸ್ಯ, ಸಮನ್ವಯ, ಸಹಬಾಳ್ವೆ ಎಂಬ ಯಾವುದೇ ಪದಗಳೂ ಇವರ ನಿಘಂಟಿನಲ್ಲಿದ್ದಂತಿಲ್ಲ. ಏಕತೆಯ ಮಾತನಾಡುತ್ತಲೇ ಒಡೆಯುವ ಕಲೆ ಕರಗತ ಮಾಡಿಕೊಂಡಿರುವ ಈ ಮಹಾನುಭಾವರು ವಿತಂಡವಾದದಲ್ಲಿ ಮೊದಲಿಗರು. ಯಾವುದೇ ಪ್ರತಿಕ್ರಿಯೆಗೂ ಕೊಂಕು. ತಮ್ಮದು ಮಾತ್ರ ಪರಮಶ್ರೇಷ್ಠ ಎಂಬ ಕೂಪಮಂಡೂಕ ಸಿದ್ಧಾಂತವಾದಿಗಳಿವರು. ಚುನಾವಣೆಗಾಗಿ ಏನು ಬೇಕಾದರೂ ಮಾತಾಡಬಲ್ಲರು ಎನ್ನುವುದಕ್ಕಿಂತ ಅರಚಬಲ್ಲರು ಎನ್ನುವುದೇ ಸೂಕ್ತ. ಹಾಗಿರುತ್ತವೆ ಇಂಥವರ ಮಾತಿನ ಧಾಟಿ.

ಇಂಥವರ ಸಾಲಿಗೆ ಇತ್ತೀಚಿನ ಸೇರ್ಪಡೆ ಅನಂತಕುಮಾರ ಹೆಗಡೆ. ಇತ್ತೀಚಿನ ಸೇರ್ಪಡೆ ಎಂದರೆ ಅವರಿಗೆ ಬೇಸರ ಉಂಟಾಗಬಹುದು, ಅವಮಾನವಾಯಿತೆಂದು ಸಿಟ್ಟು ಕೂಡ ಬರಬಹುದು. ಏಕೆಂದರೆ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಈ ಕೆಲಸವನ್ನೇ ಅವರು ಮಾಡಿಕೊಂಡು ಬಂದಿದ್ದಾರೆ. ಈಗ ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವರಾಗಿರುವುದರಿಂದ ಅವರ ಈ ಕಸುಬು ಕಾರವಾರ ಲೋಕಸಭಾ ಕ್ಷೇತ್ರದಿಂದ ರಾಷ್ಟ್ರ ಮಟ್ಟಕ್ಕೆ ವಿಸ್ತಾರಗೊಳ್ಳುವ ಅದ್ಭುತ ಅವಕಾಶವೂ ದಕ್ಕಿದೆ.

ಕಳೆದ ಸೆಪ್ಟೆಂಬರ್‍ನಲ್ಲಿ ಕೇಂದ್ರ ಸಂಪುಟ ವಿಸ್ತರಣೆಗೊಂಡು ಅನಂತಕುಮಾರ ಹೆಗಡೆಗೆ ಸ್ಥಾನ ಸಿಕ್ಕಿದಾಗ ಕೆಲವರು ಅಚ್ಚರಿಗೊಂಡಿರಬಹುದು. ಮತದಾರರ ಸಂಖ್ಯಾಬಲದ ದೃಷ್ಟಿಯಿಂದ ಯಾವುದೇ ರೀತಿಯಲ್ಲಿ ನೆರವಾಗದ ಬ್ರಾಹ್ಮಣ ಸಮುದಾಯದ (ಮೊದಲೇ ಸಂಪುಟದಲ್ಲಿರುವ ಬ್ರಾಹ್ಮಣ ಸಮುದಾಯದ ಅನಂತಕುಮಾರ್) ಇನ್ನೊಬ್ಬರಿಗೆ ಕರ್ನಾಟಕದಿಂದ ಅವಕಾಶ ನೀಡಿ ರಾಜ್ಯದ ಪ್ರಬಲ ಸಮುದಾಯವಾದ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡದೇ ಇದ್ದುದು ಈ ಅಚ್ಚರಿಗೆ ಕಾರಣವಾಗಿತ್ತು. ಮೊದಲ ಸಲ ಸಂಪುಟ ರಚನೆಯಾದಾಗ ಅವಕಾಶ ಪಡೆದಿದ್ದ ಲಿಂಗಾಯತ ಸಮುದಾಯದ ಜಿ.ಎಂ.ಸಿದ್ಧೇಶ್ವರ ಅವರನ್ನು ಕೈ ಬಿಟ್ಟರೂ ಇನ್ನೊಬ್ಬ ಲಿಂಗಾಯತರಿಗೆ ಈ ಅವಕಾಶ ದೊರೆತಿರಲಿಲ್ಲ.

ಮುಂದಿನ ಮುಖ್ಯಮಂತ್ರಿ ಎಂದು ಪ್ರಬಲ ಲಿಂಗಾಯತ ಸಮುದಾಯದ ಬಿ.ಎಸ್.ಯಡಿಯೂರಪ್ಪ ಹೆಸರನ್ನು ಈಗಾಗಲೇ ಘೋಷಿಸಿರುವುದರಿಂದ ಕೇಂದ್ರ ಸಂಪುಟಕ್ಕೆ ಲಿಂಗಾಯತ ಪ್ರಾತಿನಿಧ್ಯ ಬೇಕಿಲ್ಲ ಎಂದು ಪಕ್ಷದ ಮೂಲಗಳು ಹೇಳಿಕೊಂಡಿದ್ದವು. ಅದೇನೇ ಇರಲಿ. ಇನ್ನೇನು ಕೆಲವೇ ತಿಂಗಳಲ್ಲಿ ಎದುರಾಗುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಮತದಾರರ ಒಲವು ಗಳಿಸಲು ಈ ಎಲ್ಲ ಘಟಾನುಘಟಿಗಳಿರುವಾಗ ಬಿಜೆಪಿಗೆ ಅನಂತಕುಮಾರ ಹೆಗಡೆಯಂಥವರೇ ಬೇಕಿತ್ತೇ?

ಘಟಾನುಘಟಿ ನಾಯಕರೆನಿಸಿಕೊಂಡಿರುವ ಯಡಿಯೂರಪ್ಪ ಅವರನ್ನೇ ನೋಡಿ. ಅವರು ಒಂದು ರೀತಿಯಲ್ಲಿ ಶಾಪಗ್ರಸ್ತ, ಹತಾಶ ನಾಯಕ. ಮೊದಲ ಸಲ ಮುಖ್ಯಮಂತ್ರಿಯಾದಾಗ ಪಕ್ಷದ ಜತೆಗಾರರ ಸಂಚಿನಿಂದಾಗಿಯೇ ಅದರಿಂದ ವಂಚಿತರಾಗಿದ್ದ ಯಡಿಯೂರಪ್ಪ ಅವರಲ್ಲಿ ಮೊದಲಿನ ತೇಜಸ್ಸು, ಉತ್ಸಾಹವಂತೂ ಕಾಣುತ್ತಿಲ್ಲ. ಈ ಮೊದಲು ವೀರಾವೇಶದ ಭಾಷಣಗಳಿಂದ ಜನಸಮುದಾಯದ ಗಮನ ಸೆಳೆಯುತ್ತಿದ್ದ ಯಡಿಯೂರಪ್ಪ ಅವರ ಸೂಜಿಗಲ್ಲಿನ ಶಕ್ತಿ ಎಂದೋ ಕುಂದಿದಂತೆ ಕಾಣುತ್ತಿದೆ. ಆದರೂ ಅವರನ್ನು ಬಿಟ್ಟರೆ ಇನ್ನೊಬ್ಬ ಮಾಸ್ ಲೀಡರ್ ಪಕ್ಷದಲ್ಲಿ ಕಾಣುತ್ತಿಲ್ಲ. ಹಾಗೊಂದು ವೇಳೆ ಶೋಭಾ ಕರಂದ್ಲಾಜೆ ಅವರನ್ನೇ ಗುರುತಿಸಿ ಮುಂಚೂಣಿಗೆ ತಂದಿದ್ದರೂ ರಾಜ್ಯದ ಇತರ ನಾಯಕರ ಬೆಂಬಲ ದೊರೆಯುವುದು ಕಷ್ಟವೇ ಇತ್ತು. ಕೇಂದ್ರ ಸಚಿವರಾಗಿ ಸಂಸತ್ತಿನಲ್ಲಿ ಪ್ರಮುಖ ನಾಯಕರೆಂದು ಈಗಾಗಲೇ ಬಿಂಬಿತರಾಗಿರುವ ಅನಂತಕುಮಾರ್ ಪ್ರಭಾವಿ ಜಾತಿ ಕಾರಣದಿಂದ ನಾಯಕರಾಗಿದ್ದಾರೆಯೇ ಹೊರತು ಜನಮಾನಸದ ನಾಯಕನಲ್ಲ. ಅಧಿಕಾರ, ಬಡ್ತಿ ಪಡೆಯುವ ಸಲುವಾಗಿ ತೆರೆಮರೆಯ ಚಟುವಟಿಕೆಗಳನ್ನು ನಡೆಸುವುದಕ್ಕಷ್ಟೇ ಅವರ ಸಾಮರ್ಥ್ಯ ಸೀಮಿತವಾಗಿದೆ. ಆರ್.ಎಸ್.ಎಸ್., ಎ.ಬಿ.ವಿ.ಪಿ. ಸಂಘಟನೆಗಳ ಮೂಲಕ ನಾಗಪುರಕ್ಕೆ ಹತ್ತಿರವಾಗಿರುವುದರಿಂದ ಅವರು ಪ್ರಮುಖ ಸ್ಥಾನದಲ್ಲಿರುವುದು ಸಾಧ್ಯವಾಗಿದೆ. ಆದರೆ ಬಿಜೆಪಿಯ ಹೊಸ ತಲೆಮಾರಿನ ಯುವ ನಾಯಕರಂತೆ ಅವರಿಂದ ಆಕ್ರಮಣಕಾರಿ ಹೇಳಿಕೆ, ಭಾಷಣಗಳು ಈವರೆಗೆ ಗಮನ ಸೆಳೆಯುವ ಪ್ರಮಾಣದಲ್ಲಿ ದಾಖಲಾದಂತಿಲ್ಲ. ಮತ ಗಳಿಕೆಯ ಜಾತಿ ಬಲವೂ ಅವರಿಗಿಲ್ಲ. ಅವರು ಈವರೆಗೆ ಗೆದ್ದಿರುವುದು ಬಿಜೆಪಿ ಹೆಸರಿನಲ್ಲಿ, ಮೋದಿ ಹೆಸರಿನಲ್ಲಿ. 1999ರ ಚುನಾವಣೆಯಲ್ಲಂತೂ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ವಿರುದ್ಧ ಆಗಿನ ಕಾಂಗ್ರೆಸ್ ಮುಖಂಡ ಎಸ್.ಎಂ.ಕೃಷ್ಣ ಪರೋಕ್ಷ ಬೆಂಬಲದಿಂದ ಗೆಲುವು ಸಾಧಿಸಿದ್ದರು.

ಇನ್ನೋರ್ವ ಸಚಿವ ಡಿ.ವಿ.ಸದಾನಂದಗೌಡ ಒಂದರ್ಥದಲ್ಲಿ ನಿರಾಯಾಸ ನಾಯಕ. ಅವರು ಈವರೆಗೆ ಪಡೆದಿರುವ ಪ್ರಮುಖ ಅಧಿಕಾರಗಳೆಲ್ಲ ಇನ್ನೊಬ್ಬರ ಔದಾರ್ಯದಿಂದ ಲಭ್ಯವಾಗಿವೆಯೇ ಹೊರತು ಶ್ರಮ ಮತ್ತು ಹೋರಾಟದಿಂದ ನಾಯಕರಾಗಿ ರೂಪುಗೊಂಡವರಲ್ಲ. ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದುದು, ಆನಂತರ ಮುಖ್ಯಮಂತ್ರಿಯಾದುದು... ಎಲ್ಲವೂ ಯಡಿಯೂರಪ್ಪ ಅವರ ಔದಾರ್ಯ ಮತ್ತು ನಂಬಿಕೆಯಿಂದ (ಇನ್ನೋರ್ವ ಬಲಿಷ್ಠನನ್ನು ತಂದರೆ ತಮ್ಮ ಸ್ಥಾನಕ್ಕೇ ಕುತ್ತು ಬರಬಹುದೆಂಬ ಸಂಶಯದಿಂದಾಗಿ ಯಡಿಯೂರಪ್ಪ ಇಂಥ ನಿರ್ಧಾರ ಕೈಗೊಂಡಿದ್ದರು ಎನ್ನುವುದು ಬೇರೆಯೇ ಚರ್ಚೆಯೆ ವಿಷಯ). ಅವರು ಸಮ್ಮೋಹನಗೊಳಿಸುವ ಮಾತುಗಾರರೂ ಅಲ್ಲ, ಮಹಾನ್ ಸಂಘಟಕರೂ ಅಲ್ಲ. ಅವರು ಬಿಜೆಪಿ ಅಧ್ಯಕ್ಷರಾಗಿದ್ದಾಗ ಪಕ್ಷ ಅಧಿಕಾರಕ್ಕೆ ಬಂದಿದ್ದು ಯಡಿಯೂರಪ್ಪ ಅವರ ಶ್ರಮದ ಫಲವೇ ಹೊರತು ಅದಕ್ಕೆ ಸದಾನಂದಗೌಡರ ವಿಶೇಷ ಕೊಡುಗೆಯೇನೂ ಇರಲಿಲ್ಲ. ಅವರು ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು ಮತ್ತು ಮಾಜಿ ಮುಖ್ಯಮಂತ್ರಿಗಳೆಂಬ ಕಾರಣದಿಂದಲೇ ಅವರು ರೈಲ್ವೆ ಮಂತ್ರಿಯೂ ಆದರು. ವೈಫಲ್ಯ ಗೊತ್ತಾಗುತ್ತಲೇ ಹಿಂಬಡ್ತಿಯನ್ನೂ ಪಡೆದರು. ಅವರದು ಒಕ್ಕಲಿಗ ಪ್ರಾತಿನಿಧ್ಯ ಎಂದು ಹೇಳಲಾಗುತ್ತಿದೆಯಾದರೂ ದಕ್ಷಿಣ ಕನ್ನಡ-ಕೊಡಗು ಗಡಿ ಭಾಗದ ಅರೆಭಾಷೆಗೌಡರನ್ನು ಮಂಡ್ಯ, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳ ಒಕ್ಕಲಿಗರು ಸಂಪೂರ್ಣವಾಗಿ ಒಕ್ಕಲಿಗರೆಂದು ಒಪ್ಪಿಕೊಂಡಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮದುವೆ ಸಂಬಂಧಗಳಿಗಾಗಿ ಕೊಡುವುದು, ತರುವುದು ನಡೆದಿದ್ದರೂ ರಾಜಕೀಯವಾಗಿ ಈ ನಂಬಿಕೆ ಇನ್ನೂ ಗಟ್ಟಿಯಾಗಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೇ ಬಹುತೇಕ ಒಕ್ಕಲಿಗರ ಪ್ರಶ್ನಾತೀತ ನಾಯಕರಾಗಿರುವುದರಿಂದ ಸದಾನಂದಗೌಡರಿಗೆ ಈ ಸಮುದಾಯದ ಮತಗಳನ್ನು ಸೆಳೆಯುವುದೂ ಅಷ್ಟು ಸುಲಭವಲ್ಲ.

ಈ ಮಹಾಮಹಿಮರನ್ನು ನಂಬಿಕೊಂಡು ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರ ಗಳಿಸುವುದು ಸಾಧ್ಯವಿದೆಯೇ, ಹಿಂದಿನ ಅಧಿಕಾರಾವಧಿಯಲ್ಲಿ ನಡೆದ ಹಗರಣಗಳು ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಅಡ್ಡಿಯಾಗುವುದಿಲ್ಲವೇ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಅನಂತಕುಮಾರ ಹೆಗಡೆಯನ್ನು ಬಿಜೆಪಿ ವರಿಷ್ಠರು ರಂಗಕ್ಕಿಳಿಸಿದ್ದಾರೆ. ಅದಕ್ಕೆ ತಕ್ಕ ಅರ್ಹತೆಯೂ ಅವರಿಗಿದೆ. ಅವರು ಬೆಂಕಿ ಉಗುಳುವ ಮಾತುಗಾರರು. ಲೋಕಸಭಾ ಚುನಾವಣೆಗೆ ಮುನ್ನ ತಮಗೆ ಮುಸ್ಲಿಮರ ಮತಗಳೇ ಬೇಕಿಲ್ಲ ಎಂದು ಘೋಷಿಸುವ ಧೈರ್ಯ ಪ್ರದರ್ಶಿಸುತ್ತಾರೆ. ಈ ಜಗತ್ತಿನಲ್ಲಿ ಇಸ್ಲಾಂ ಧರ್ಮ ಇರುವವರೆಗೆ ಭಯೋತ್ಪಾದನೆ ಇರುತ್ತದೆ. ಇಸ್ಲಾಂ ಧರ್ಮವನ್ನು ಮೂಲೋತ್ಪಾಟನೆ ಮಾಡದೆ ಭಯೋತ್ಪಾದನೆ ಮೂಲೋತ್ಪಾಟನೆಯಾಗದು, ಇಸ್ಲಾಂ ಎಂದರೆ ಬಾಂಬ್ ಇದ್ದಂತೆ ಎಂಬ ತರ್ಕಹೀನ ಹೇಳಿಕೆಯನ್ನೂ ಪೋಣಿಸುವುದರಲ್ಲಿ ಅವರು ನಿಸ್ಸೀಮರು. ಅಷ್ಟೇ ಏಕೆ? ಜಾತ್ಯತೀತತೆ ಎಂಬ ಪದ ಇರುವ ಸಂವಿಧಾನವನ್ನೇ ತಮ್ಮ ಸರ್ಕಾರ ಬದಲಾಯಿಸುತ್ತದೆ ಎಂಬ ಉದ್ಧಟತನ ತೋರುತ್ತಾರೆ. ಜಾತ್ಯತೀತವಾದಿಗಳಿಗೆ ಅಪ್ಪ ಅಮ್ಮಂದಿರೂ ಇಲ್ಲ, ಸಾಹಿತಿಗಳೆಂದರೆ ಅರ್ಥವಿಲ್ಲದಂತೆ ಬರೆಯುವವರು ಎಂದೂ ತಮಗೆ ಅರಿವಿಲ್ಲದ ವಿಷಯಗಳ ಕುರಿತು ವಿಮರ್ಶೆಯ ಅಜ್ಞಾನ ಪ್ರಕಟಿಸುತ್ತಾರೆ. ತಮ್ಮ ಹೇಳಿಕೆಗಳ ವಿರುದ್ಧ ಪ್ರತಿಭಟನೆ ನಡೆಸುವವರ ಬಗ್ಗೆ ಬೀದಿ ನಾಯಿಗಳೆಂದೂ ಜರಿಯುವ ತಾಕತ್ತನ್ನೂ ಪ್ರದರ್ಶಿಸುತ್ತಾರೆ (ಈ ಹೇಳಿಕೆ ನೀಡುವ ಮುನ್ನ ಅವರಿದ್ದ ಕಾರನ್ನು ತಡೆದು ಪ್ರತಿಭಟನೆ ನಡೆಸಿದ್ದು ದಲಿತ ಸಂಘಟನೆಯೊಂದರ ಕಾರ್ಯಕರ್ತರು ಎಂದೂ ಹೇಳಲಾಗುತ್ತಿದೆ).

ಬಿಜೆಪಿ ವರಿಷ್ಠರಿಗೆ ಇನ್ನೇನು ಬೇಕು? ಕರ್ನಾಟಕದಲ್ಲಿ ಮುಸ್ಲಿಮರ ವಿರುದ್ಧ ಇಷ್ಟೊಂದು ನೇರವಾಗಿ, ವಿವಾದಾತ್ಮಕವಾಗಿ ಮಾತನಾಡುವ ಇನ್ನೋರ್ವ ನಾಯಕನಿಲ್ಲ. ರಾಜ್ಯದ ಇತರ ಬಿಜೆಪಿ ನಾಯಕರಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಸುಂದರ ಮತ್ತು ರಕ್ತದ ಕಾವು ಇಳಿಸುವ ನಡುವಯಸ್ಸು ಇನ್ನೂ ತಲುಪಿಲ್ಲ, ಮತಗಳಾಗಿ ಪರಿವರ್ತಿಸುವ ಜಾತಿ ಬಲ ಇಲ್ಲದಿದ್ದರೂ ಮತಗಳನ್ನು ಕೊಳ್ಳೆ ಹೊಡೆಯಬಹುದೆಂಬ ಭ್ರಮೆ ಸೃಷ್ಟಿಸುತ್ತಿರುವ ಅನಂತಕುಮಾರ ಹೆಗಡೆಯ ಬೆಂಕಿಯುಗುಳುವ ಮಾತುಗಳ ಮೆರವಣಿಗೆ ಆರಂಭವಾಗಿದೆ. ಯಡಿಯೂರಪ್ಪ, ಅನಂತಕುಮಾರರನ್ನೂ ಭಾಷಣಗಳಲ್ಲಿ ಓವರ್‍ಟೇಕ್ ಮಾಡಿ ಹೆಚ್ಚಿನ ಚಪ್ಪಾಳೆ ಗಿಟ್ಟಿಸುತ್ತಿದ್ದಾರೆ. ಮೋದಿ ಮತ್ತು ಅಮಿತ್ ಷಾ ಕರ್ನಾಟಕಕ್ಕೆ ಪ್ರಚಾರಕ್ಕೆ ಬರುವವರೆಗೂ ಅವರ ಜವಾಬ್ದಾರಿಯನ್ನು ಟೀಕ್ವಾಂಡೊ ಆತ್ಮರಕ್ಷಣೆ ಕಲೆಯಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆದಿರುವ ಅನಂತಕುಮಾರ ಹೆಗಡೆ ‘ಯಶಸ್ವಿ’ಯಾಗಿ ನಿರ್ವಹಿಸುವ ಲಕ್ಷಣಗಳನ್ನು ತೋರಿದ್ದಾರೆ. ಆದರೆ ಬಸವಣ್ಣ, ಶಿಶುನಾಳ ಷರೀಫ, ಕುವೆಂಪು, ಪಿ.ಲಂಕೇಶ್ ಅಂಥವರು ಜನಿಸಿದ ಈ ನೆಲ ಮತ್ತೆ ಬಿಜೆಪಿಗೆ ಮರುಳಾಗುವುದು ಅಷ್ಟು ಸುಲಭವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT