ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಚಾಣಕ್ಯನ ಮೇಲುಗೈ

Last Updated 2 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ತಮ್ಮನ್ನು ಕಾಣಲು ಬರುವವರನ್ನು ಭೇಟಿಯಾಗುವ ಕೋಣೆಯು ಹಳೆ ತಲೆಮಾರಿನ ರಾಜಕಾರಣಿಗಳ ಮನೆಯಂತೆ ಆಕರ್ಷಕ ಕಲಾಕೃತಿಗಳಿಂದ ಗಮನ ಸೆಳೆಯುತ್ತದೆ. ಹಜಾರದ ಮಧ್ಯಭಾಗದಲ್ಲಿ ಇರುವ ತಮ್ಮ ಅಚ್ಚುಮೆಚ್ಚಿನ ಸೋಫಾದಲ್ಲಿ ಕುಳಿತುಕೊಂಡೇ ಅವರು ಬಂದವರ ಜತೆ ಮಾತುಕತೆ ನಡೆಸುತ್ತಾರೆ.

ಅವರ ಬೆನ್ನ ಹಿಂದೆ ಇರುವ ಗೋಡೆಯ ಮೇಲೆ ಇರುವ ಚಾಣಕ್ಯ ಮತ್ತು ಸಾವರ್ಕರ್‌ ಅವರ ವರ್ಣಚಿತ್ರಗಳು ಅಲ್ಲಿಗೆ ಬರುವ ಎಲ್ಲರ ಗಮನ ಸೆಳೆಯುತ್ತವೆ. ಷಾ ಅವರು ಆರಾಧಿಸುವ ಈ ಇಬ್ಬರೂ ಮಹಾನುಭಾವರು ಅವರ ರಾಜಕೀಯ ಬದುಕು, ನಿರ್ಧಾರಗಳನ್ನು ತೀವ್ರವಾಗಿ ಪ್ರಭಾವಿಸಿದ್ದಾರೆ.

ಚಾಣಕ್ಯನಿಂದ ರಾಜಕೀಯ ಕಸುಬುದಾರಿಕೆ ಕರಗತ ಮಾಡಿಕೊಂಡಿರುವ ಷಾ, ಸಾವರ್ಕರ್‌ ಅವರಿಂದ ಹಿಂದುತ್ವ– ರಾಷ್ಟ್ರೀಯತೆಯ ವಿಚಾರಧಾರೆ ಅಳವಡಿಸಿಕೊಂಡಿದ್ದಾರೆ.

ಈ ಎರಡೂ ವರ್ಣಚಿತ್ರಗಳ ಮಧ್ಯೆ ಖಾಲಿ ಇರುವ ಸ್ಥಳದಲ್ಲಿ, ಷಾ ಅವರು ಮೂರನೇ ವರ್ಣಚಿತ್ರವನ್ನೂ ಅಳವಡಿಸಬಹುದಾಗಿದೆ. ಪಕ್ಕಾ ಕಾಂಗ್ರೆಸಿಗರಾಗಿದ್ದ ಕೆ. ಕಾಮರಾಜ್‌ ಅವರ ಚಿತ್ರವೇ ಆ ಖಾಲಿ ಜಾಗವನ್ನು ತುಂಬಬಹುದಾಗಿದೆ. ರಾಜಕೀಯ ನೀತಿ ಮತ್ತು ತಾತ್ವಿಕ ಚಿಂತನೆಯ ಅಂತಃಪ್ರೇರಣೆಯು ಈಗಾಗಲೇ ಇಬ್ಬರು ಮಹಾನುಭಾವರಿಂದ ಪಡೆದಿದ್ದಾರೆ. ಷಾ ಅವರ ಸದ್ಯದ ರಾಜಕೀಯ ನಡೆ ಮತ್ತು ಅವರಲ್ಲಿ ಕೇಂದ್ರಿತವಾಗಿರುವ ಅಧಿಕಾರವು 1963–67 ಅವಧಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಕೆ. ಕಾಮರಾಜ್‌ ಅವರ ಪ್ರಭಾವಶಾಲಿ ವ್ಯಕ್ತಿತ್ವವನ್ನು ನೆನಪಿಸುತ್ತದೆ.

ಕಾಮರಾಜ್‌ ಅಧಿಕಾರಾವಧಿಯಲ್ಲಿ ಸಂಪುಟ ದರ್ಜೆಯ ಸಚಿವರೂ, ಪಕ್ಷದ ಅಧ್ಯಕ್ಷರ ಕಚೇರಿಗೆ ಎಡತಾಕಿ ತಮ್ಮ ಸಾಧನೆಯ ವರದಿ ಒಪ್ಪಿಸಬೇಕಾಗಿತ್ತು, ಇಲ್ಲವೇ ಪಕ್ಷ ವಹಿಸುವ ಕೆಲಸವನ್ನು ಶ್ರದ್ಧೆಯಿಂದ ನಿಭಾಯಿಸಲು ಸಚಿವ ಹುದ್ದೆಗೆ ರಾಜೀನಾಮೆ ನೀಡಬೇಕಾಗುತ್ತಿತ್ತು. ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿಯೂ ಈಗ ಅಂತಹದೇ ಛಾಯೆ ಕಂಡು ಬರುತ್ತಿದೆ.

ನಾನಿಲ್ಲಿ ಪಕ್ಷದ ಪ್ರಭಾವಿ ಮತ್ತು ಪೂರ್ಣಾವಧಿ ಅಧ್ಯಕ್ಷರ ಬಗ್ಗೆ ಮಾತ್ರ ಬರೆಯುತ್ತಿರುವೆ ಎನ್ನುವುದನ್ನು ಸ್ಪಷ್ಟಪಡಿಸುವೆ. ಕಾಂಗ್ರೆಸ್‌ನಲ್ಲಿ ಪ್ರಧಾನಿಯಾದವರು ಪಕ್ಷದ ಅಧ್ಯಕ್ಷರಾಗಿಯೂ ಮುಂದುವರೆಯುತ್ತಿದ್ದರು ಅಥವಾ ಪಕ್ಷದ ಅಧ್ಯಕ್ಷರು ಪ್ರಧಾನಿಯಾಗಿ ನೇಮಕಗೊಂಡರೂ ಸೀಮಿತ ಅಧಿಕಾರ ಹೊಂದಿರುತ್ತಿದ್ದರು. ಆಡಳಿತಾರೂಢ ಪಕ್ಷದ ಪೂರ್ಣಾವಧಿ ಅಧ್ಯಕ್ಷರ ಪಟ್ಟಿಯಲ್ಲಿ ದೇವ್‌ಕಾಂತ್‌ ಬರೂವಾ, ಚಂದ್ರಶೇಖರ್‌ (ಜನತಾ) ಮತ್ತು ವಾಜಪೇಯಿ ಅವರ ಪ್ರಭಾವ ಇದ್ದ ಸಮಯದಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದವರೂ ಸೀಮಿತ ಅಧಿಕಾರ ಹೊಂದಿದ್ದರು.

ಬಿಜೆಪಿ ಅಧ್ಯಕ್ಷರಾಗಿ ಅಮಿತ್‌ ಷಾ ಹೊಂದಿರುವ ಅಧಿಕಾರವು ಹಲವಾರು ಕಾರಣಕ್ಕೆ ವಿಶಿಷ್ಟವಾಗಿದೆ. 2014ರ ಸಾರ್ವತ್ರಿಕ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಜುಲೈನಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಷಾ ಅವರು ನರೇಂದ್ರ ಮೋದಿ ಅವರ ವೈಯಕ್ತಿಕ ಆಯ್ಕೆಯಾಗಿದ್ದರು.

ವೈದ್ಯಕೀಯ ರೋಗಶಾಸ್ತ್ರಜ್ಞರು ಕಾಯಿಲೆಯ ಪ್ರತಿಯೊಂದು ತಪಾಸಣೆ ನಡೆಸಿ ನಿರ್ಣಯಕ್ಕೆ ಬರುವಂತೆ, ಯಾರೇ ಆಗಲಿ ಎಷ್ಟೇ ಸಂದೇಹಪಟ್ಟರೂ, ಷಾ ಮತ್ತು ಮೋದಿ ಮಧ್ಯೆ ಒಂದೇ ಒಂದು ಭಿನ್ನಾಭಿಪ್ರಾಯವನ್ನು ಹುಡುಕಿದರೂ ಸಿಗಲಾರದು. ಮೋದಿ ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಷಾ ಅವರೆಂದೂ ಎರವಾಗಿಲ್ಲ.

ಲೋಕಸಭಾ ಚುನಾವಣೆಗೂ ಮುಂಚೆ, ಅಮಿತ್ ಷಾ ಅವರಿಗೆ ಉತ್ತರ ಪ್ರದೇಶದಲ್ಲಿ ಪಕ್ಷದ ಪ್ರಚಾರ ಕಾ‌ರ್ಯದ ಉಸ್ತುವಾರಿ ವಹಿಸಲಾಗಿತ್ತು. 2013ರ ಜುಲೈ ತಿಂಗಳಲ್ಲಿ ಬರೆದಿದ್ದ ನನ್ನ ಅಂಕಣದಲ್ಲಿ ನಾನು ಬಿಜೆಪಿ ತೆಗೆದುಕೊಂಡಿದ್ದ ಈ ನಿರ್ಧಾರವನ್ನು ಪ್ರಶ್ನಿಸಿದ್ದೆ.

ಲೋಕಸಭೆ ಚುನಾವಣೆ ಮುಂಚೆ ಬಿಜೆಪಿಯು, ಅಟಲ್ ಬಿಹಾರಿ ವಾಜಪೇಯಿ ಅವರ ಸಮಯದಲ್ಲಿ ಘಟಿಸಿದಂತೆ ಮತ್ತೊಮ್ಮೆ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚಿಸಲು ಕಾರ್ಯತಂತ್ರ ಹೆಣೆಯುತ್ತಿತ್ತು. ಮೃದು ಹಿಂದುತ್ವದ ಮೂಲಕ ಎಲ್ಲರನ್ನೂ ಒಳಗೊಳ್ಳುವ ಸೂತ್ರದ ಮೂಲಕ ಅಧಿಕಾರದ ಗದ್ದುಗೆ ಏರಲು ಹೊರಟಿತ್ತು. ಅದೇ ತತ್ವ ಆಧರಿಸಿದ ರಾಜಕೀಯ ನಡೆ ರೂಪಿಸುವ ಹಾದಿಯಲ್ಲಿ ಷಾ ಅವರ ಆಯ್ಕೆ ಸರಿಯಲ್ಲ. ಅದೊಂದು ಕೆಟ್ಟ ನಿರ್ಧಾರವಾಗಿದೆ ಎನ್ನುವುದು ನನ್ನ ವಿಶ್ಲೇಷಣೆಯಾಗಿತ್ತು.

ರಾಜ್ಯದಲ್ಲಿನ 80 ಲೋಕಸಭಾ ಕ್ಷೇತ್ರಗಳ ಪೈಕಿ, ಮಿತ್ರ ಪಕ್ಷಗಳ ಎರಡು ಸ್ಥಾನಗಳೂ ಸೇರಿದಂತೆ 73 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ನನ್ನ ಎಣಿಕೆಗಳನ್ನೆಲ್ಲ ತಲೆಕೆಳಗು ಮಾಡಿದ್ದವು. ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಅವರ ಕಾರ್ಯವೈಖರಿ ಬಗೆಗಿನ ನನ್ನ ಊಹೆಗಳೆಲ್ಲ ಸುಳ್ಳಾಗಿದ್ದವು.

ನಂತರ ನಡೆದ ರಾಜಕೀಯ ಬೆಳವಣಿಗೆಗಳು ಕೂಡ ನಾನು ಮಾಡಿದ್ದ ಅಂದಾಜುಗಳೆಲ್ಲ ತಪ್ಪೆಂದು ಸಾಬೀತುಪಡಿಸಿದ್ದವು. ಮೋದಿ – ಷಾ ಸೇರಿಕೊಂಡು ಕೇಂದ್ರದಲ್ಲಿ ಬಿಜೆಪಿ – ಆರೆಸ್ಸೆಸ್ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದರು.

ವಾಜಪೇಯಿ ಅವರ ಸರ್ಕಾರದಲ್ಲಿ ಸಚಿವರಾದವರಲ್ಲಿ ಬಹುತೇಕರು ಆರೆಸ್ಸೆಸ್‌ ಹಿನ್ನೆಲೆ ಮತ್ತು ಸಂಪರ್ಕದಿಂದ ಬಂದಿರಲಿಲ್ಲ. ಹೀಗಾಗಿ ಅದೊಂದು ಸಂಪೂರ್ಣ ಮತ್ತು ಕಟ್ಟಾ ಬಿಜೆಪಿ ಸರ್ಕಾರ ಎನ್ನುವ ಹಣೆಪಟ್ಟಿಗೆ ಭಾಜನವಾಗಿರಲಿಲ್ಲ. ಮಿತ್ರ ಪಕ್ಷಗಳಿಗೆ ಸೇರಿದ್ದ ಜಾರ್ಜ್‌ ಫರ್ನಾಂಡಿಸ್‌ಗೆ ರಕ್ಷಣಾ ಹೊಣೆಗಾರಿಕೆ ನೀಡಲಾಗಿತ್ತು.

ಜಸ್ವಂತ್ ಸಿಂಗ್‌, ಯಶವಂತ ಸಿನ್ಹಾ, ರಂಗರಾಜನ್‌ ಕುಮಾರ ಮಂಗಳಂ, ಅರುಣ್‌ ಶೌರಿ ಮತ್ತಿತರರು ಮೂಲತಃ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರಧಾರೆಯಿಂದ ಪ್ರಭಾವಿತರಾಗಿರಲಿಲ್ಲ. ಹೀಗಾಗಿ ಅದೊಂದು ಸಂಪೂರ್ಣವಾಗಿ ಸಿದ್ಧಾಂತ ಮತ್ತು ಪಕ್ಷ ಆಧರಿಸಿದ ಸರ್ಕಾರವಾಗಿರಲಿಲ್ಲ. ಆದರೆ, ಇದೇ ಮಾನದಂಡಗಳನ್ನು ಆಧರಿಸಿ ಹೇಳುವುದಾದರೆ, ಸದ್ಯಕ್ಕೆ ಕೇಂದ್ರದಲ್ಲಿ ಇರುವ ಸರ್ಕಾರ ಸಂಪೂರ್ಣ ಭಿನ್ನವಾಗಿದೆ.

ಸಿದ್ಧಾಂತ ಮತ್ತು ಪಕ್ಷ ಆಧರಿಸಿ ಹೇಳುವುದಾದರೆ ನರೇಂದ್ರ ಮೋದಿ ನೇತೃತ್ವದಲ್ಲಿನ ಸರ್ಕಾರವು ಸಂಪೂರ್ಣ ಬಿಜೆಪಿಮಯವಾಗಿದೆ ಎನ್ನುವುದು ಸ್ಪಷ್ಟಗೊಳ್ಳುತ್ತದೆ. ನಿರ್ದಿಷ್ಟ ಸಚಿವ ಹುದ್ದೆ ನಿಭಾಯಿಸಲು ಸೈದ್ಧಾಂತಿಕ ಅರ್ಹತೆ ಹೊಂದಿದವರು ಪಕ್ಷದ ಒಳಗೆ ಸಿಗದಿದ್ದರೆ, ಹೊರಗಿನವರನ್ನು ಆಯ್ಕೆ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲ. ಪಕ್ಷದ ಸಿದ್ಧಾಂತವನ್ನು ಕಟ್ಟುನಿಟ್ಟಾಗಿ ಪಾಲಿಸುವವರಿಗೆ ಅಥವಾ ದಶಕಗಳ ಕಾಲ ಪಕ್ಷಕ್ಕೆ ನಿಷ್ಠ
ರಾಗಿ ದುಡಿದವರಿಗೆ ಮಾತ್ರ ಬಿಜೆಪಿಯು ಸಚಿವ ಹುದ್ದೆ ದಯಪಾಲಿಸಿದೆ. ಈ ಧೋರಣೆಯನ್ನು ಷಾ ಅವರು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ.

ಈ ಅರ್ಥದಲ್ಲಿ ಹೇಳುವುದಾದರೆ, ಸದ್ಯದ ಬಿಜೆಪಿ /ಎನ್‌ಡಿಎ ಸರ್ಕಾರವು ಈ ಹಿಂದಿನ ಸರ್ಕಾರಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಈ ಬಾರಿ ಬಿಜೆಪಿಯು ತನ್ನ ಸ್ವಂತ ಬಲದ ಆಧಾರದ ಮೇಲೆ ಬಹುಮತ ಹೊಂದಿರುವುದು ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದೆ.

ಎಲ್‌. ಕೆ. ಅಡ್ವಾಣಿ ಅಥವಾ ಪಕ್ಷದ ಹಳೆಯ ಮುಖಂಡರಿಗೆ ಇದೇ ಬಗೆಯ ಬಹುಮತ ದೊರೆತಿದ್ದರೆ ಅವರು ಸೈದ್ಧಾಂತಿಕ ಗೊಂದಲಕ್ಕೆ ಆಸ್ಪದ ಇಲ್ಲದ ಸರ್ಕಾರ ರಚಿಸುತ್ತಿದ್ದರು ಎನ್ನುವುದು ಮಾತ್ರ ಖಚಿತವಾಗಿರುತ್ತಿತ್ತು.

ಆರೆಸ್ಸೆಸ್‌ ಪ್ರಚಾರಕರಾದ, ಯುವ ಮತ್ತು ನಂಬಿಕಸ್ಥರಾದವರನ್ನೇ ಹರಿಯಾಣ, ಜಾರ್ಖಂಡ್‌ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನಾಗಿ ನೇಮಿಸಿರುವ ನರೇಂದ್ರ ಮೋದಿ ಅವರು ತಾವು ಅನುಸರಿಸುತ್ತಿರುವ ಧೋರಣೆ ಏನೆಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನಂತರ ಅಮಿತ್‌ ಷಾ ಅವರೂ ತಮ್ಮದೇ ಆಯ್ಕೆಯ ಪ್ರಕಾರ, ಗುಜರಾತ್‌ನಲ್ಲಿ ವಿಜಯ್‌ ರೂಪಾನಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಮತ್ತು ರಾಮನಾಥ ಕೋವಿಂದ್‌ ಅವರನ್ನು ರಾಷ್ಟ್ರಪತಿ ಹುದ್ದೆಗೆ ಪರಿಗಣಿಸುತ್ತಾರೆ.

ಈ ಎಲ್ಲ ನೇಮಕಗಳು ಪ್ರಧಾನಿ ಮೋದಿ ಅವರ ಸಮ್ಮತಿಯಿಂದಲೇ ನಡೆದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇವರೆಲ್ಲರ ನೇಮಕದಲ್ಲಿ ಅಮಿತ್‌ ಷಾ ಸ್ವಾತಂತ್ರ್ಯ ಹೊಂದಿದ್ದರು. ಆದರೂ, ಈ ಎಲ್ಲ ನೇಮಕಗಳನ್ನು ಅವರು ಪಕ್ಷದಿಂದಲೂ ಗುಟ್ಟಾಗಿ ಇಟ್ಟಿದ್ದರು.

1963ರ ಗಾಂಧಿ ಜಯಂತಿ ದಿನ ಕಾಮರಾಜ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ದೇಶಿ ರಾಜಕೀಯ ರಂಗದಲ್ಲಿ ಭಾರಿ ಬದಲಾವಣೆಗೆ ಮುನ್ನುಡಿ ಬರೆದಿದ್ದರು. ಮುಖ್ಯಮಂತ್ರಿ ಹುದ್ದೆ ತೊರೆದು ಪಕ್ಷದ ಸಂಘಟನೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು.

ಅವರನ್ನು ಅನುಸರಿಸಿ ಕೇಂದ್ರ ಸಚಿವ ಸಂಪುಟದ ಆರು ಮಂದಿ ಸಚಿವರು ಮತ್ತು ಐದು ರಾಜ್ಯಗಳಲ್ಲಿನ ಮುಖ್ಯಮಂತ್ರಿಗಳೂ ರಾಜೀನಾಮೆ ಸಲ್ಲಿಸಿದ್ದರು. ಮೊರಾರ್ಜಿ ದೇಸಾಯಿ ಮತ್ತು ಜಗಜೀವನ್ ರಾಂ ಅವರಂತಹ ಘಟಾನುಘಟಿಗಳದ್ದೂ ತಲೆದಂಡವಾಗಿತ್ತು. ಕಾಮರಾಜ್‌ ಅವರು ಪಕ್ಷವನ್ನು ಶುದ್ಧೀಕರಿಸಲು ಕೈಗೊಂಡ ನಿರ್ಧಾರವು ಅನೇಕರ ಪಾಲಿಗೆ ಒರಟಾಗಿ ಕಂಡಿತ್ತು.

ಪಕ್ಷದ ಮುಖ್ಯಸ್ಥರಾಗಿರದಿದ್ದರೂ ಅವರು ಕೈಗೊಂಡ ರಾಜೀನಾಮೆ ನಿರ್ಧಾರ, ಅದರ ಬೆನ್ನಲ್ಲೇ ಅನೇಕ ಪ್ರಭಾವಿಗಳೂ ರಾಜೀನಾಮೆ ನೀಡಲು ಮುಂದಾದ ರಾಜಕೀಯ ವಿದ್ಯಮಾನಗಳೆಲ್ಲ ‘ಕಾಮರಾಜ್‌ ಯೋಜನೆ’ ಎಂದೇ ದೇಶಿ ರಾಜಕೀಯದ ಇತಿಹಾಸದಲ್ಲಿ ದಾಖಲಾಗಿದೆ.

50 ವರ್ಷಗಳ ಹಿಂದಿನ ಈ ವಿದ್ಯಮಾನ ಈಗ ಜನರ ನೆನಪಿನಿಂದ ಮರೆಯಾಗಿದೆ. ಸ್ವಯಂ ಪ್ರೇರಣೆಯ ರಾಜೀನಾಮೆ ಹೆಸರಿನಲ್ಲಿ ಸರ್ಕಾರ ಮತ್ತು ಪಕ್ಷಕ್ಕೆ ಬೇಡವಾದವರನ್ನು ಹೊರ ಹಾಕಿ ಅವರಿಗೆ ಬೇರೆ ಹೊಣೆ ಒಪ್ಪಿಸುವ ಈ ರಾಜಕೀಯ ಕಾರ್ಯತಂತ್ರ ಈಗ ಮತ್ತೆ ಚಲಾವಣೆಗೆ ಬಂದಿದೆ.

‘ಕಾಮರಾಜ್ ಯೋಜನೆ’ಯು ವ್ಯಂಗ್ಯಚಿತ್ರಕಾರರು ಮತ್ತು ವಿಡಂಬನಕಾರರಿಗೆ ದೀರ್ಘ ಕಾಲದವರೆಗೆ ‘ಆಹಾರ’ವಾಗಿ ಬಳಕೆಯಾಗಿತ್ತು. ಕಾಮರಾಜ್‌ ಅವರ ಈ ದಿಢೀರ್‌ ನಡೆ ನೆಹರೂ ಅವರ ಮೇಲೆಯೂ ಸಾಕಷ್ಟು ಪ್ರಭಾವ ಬೀರಿತ್ತು, ಜತೆಗೆ ಅವರಲ್ಲಿಯೂ ಅಭದ್ರತೆ ಭಾವನೆ ಮೂಡಿಸಿತ್ತು. ಅದೇ ಕಾರಣಕ್ಕೆ ಕಾಮರಾಜ್‌ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ನೆಹರೂ ಒತ್ತಾಯಿಸಿದ್ದರು. ನೆಹರೂ ಅವರ ನಿಧನದ ನಂತರ ಲಾಲ್ ಬಹಾದ್ದೂರ್‌ ಶಾಸ್ತ್ರಿ ಮತ್ತು ನಂತರ ಇಂದಿರಾ ಗಾಂಧಿ ಅವರನ್ನು ಪ್ರಧಾನಿ ಹುದ್ದೆಗೆ ನೇಮಿಸಲಾಯಿತು. ಇದರಿಂದ ಮಹತ್ವಾಕಾಂಕ್ಷೆಯ ಮೊರಾರ್ಜಿ ದೇಸಾಯಿ ಅವರ ಪ್ರಧಾನಿಯಾಗುವ ಕನಸು ನುಚ್ಚು ನೂರಾಗಿತ್ತು.

1963 ರಿಂದ 1967ರ ಅವಧಿಯಲ್ಲಿ ಕಾಂಗ್ರೆಸ್‌ನ ಪ್ರಮುಖರೆಲ್ಲ ಕಾಮರಾಜ್‌ ಅವರ ಕೃಪಾಕಟಾಕ್ಷ ಪಡೆಯಲು ದುಂಬಾಲು ಬೀಳುತ್ತಿದ್ದರು. ಅದಕ್ಕೆ ಅವರು ಸಾಮಾನ್ಯವಾಗಿ ತಮಿಳಿನಲ್ಲಿನ ಕೊಡುತ್ತಿದ್ದ ‘ಪಾರ್ಕಲಾಂ’ (ನೋಡೋಣ) ಉತ್ತರವು ಭಾರತದ ರಾಜಕೀಯ ಶಬ್ದಕೋಶದಲ್ಲಿ ಸೇರ್ಪಡೆಗೊಂಡಿತ್ತು.

ಅಮಿತ್‌ ಷಾ ಕೂಡ ಇಂತಹ ತಮಗಿಷ್ಟದ ನಿರ್ದಿಷ್ಟ ಪದವೊಂದನ್ನು ಬಳಸುವರೋ ಇಲ್ಲವೋ ಗೊತ್ತಿಲ್ಲ. ಆದರೆ, ಕಾಮರಾಜ್‌ ಅವರು ಅನು
ಸರಿಸುತ್ತಿದ್ದ ರಾಜಕೀಯ ಕಾರ್ಯತಂತ್ರಗಳೆಲ್ಲವೂ ಷಾ ಅವರಲ್ಲಿಯೂ ಕಾಣಬಹುದಾಗಿದೆ. ಪ್ರಧಾನಿ ಮೋದಿ ಅವರೇ ಸಚಿವ ಹುದ್ದೆ ದಯಪಾಲಿಸಿದ್ದರೂ, ಸಚಿವರು ಷಾ ಅವರ ಮುಂದೆ ಕೈಕಟ್ಟಿ ನಿಲ್ಲುತ್ತಾರೆ. ಪಕ್ಷದ ಕೆಲಸಕ್ಕೆ ಸಮರ್ಪಿಸಿಕೊಳ್ಳುವುದಾಗಿ ಸ್ವಯಂ ಪ್ರೇರಣೆಯ ಹೇಳಿಕೆ ನೀಡುವಂತೆ ಷಾ, ಸಚಿವರ ಮನವೊಲಿಸುತ್ತಾರೆ.

ಸಚಿವ ಹುದ್ದೆ ಕಳೆದುಕೊಂಡಿದ್ದಕ್ಕೆ ಭಾರಿ ನಿರಾಶೆಯಿಂದ ಅವರ ಎದೆ ಒಡೆದು ಹೋಗುತ್ತಿದ್ದರೂ ಮೇಲ್ನೋಟಕ್ಕೆ ತಾವೆಲ್ಲ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಹೇಳಿಕೊಳ್ಳುತ್ತ ಮುಖದ ಮೇಲೆ ಬಲವಂತದಿಂದ ನಗು ಮೂಡಿಸಿಕೊಂಡು ಹೊರ ಬರುತ್ತಾರೆ.

ಮೋದಿ –ಷಾ ಜೋಡಿಯ ಪ್ರಭಾವಿ ನಾಯಕತ್ವವು 2024ರವರೆಗೂ ಅಬಾಧಿತವಾಗಿ ಮುಂದುವರೆಯಲಿದೆ ಎಂದು ಲೆಕ್ಕ ಹಾಕಿಯೇ ಅವರು ಪಕ್ಷಕ್ಕಾಗಿ ದುಡಿಯಲಿದ್ದಾರೆ. ಪಕ್ಷಕ್ಕೆ ತಾವು ನೀಡಿದ ಕೊಡುಗೆ ಪರಿಗಣಿಸಿ ಷಾ ಅವರು ಮುಂದೊಂದು ದಿನ ಮತ್ತೆ ತಮಗೆ ಸಚಿವ ಹುದ್ದೆ ಕರುಣಿಸಲಿದ್ದಾರೆ ಎನ್ನುವುದೂ ಅವರ ಆಶಾಭಾವನೆಯಾಗಿದೆ.

ಪ್ರಭಾವಶಾಲಿ ಪಕ್ಷದ ಅಧ್ಯಕ್ಷರನ್ನು ದೆಹಲಿಯು ಅರ್ಧ ಶತಮಾನದಿಂದೀಚೆಗೆ ಕಂಡಿರಲಿಲ್ಲ. ಅಮಿತ್‌ ಷಾ, ಆ ಕೊರತೆಯನ್ನು ಈಗ ತುಂಬಿದ್ದಾರೆ. ಇದರ ಜತೆಗೆ, ಷಾ ಅವರು ಇತರ ಕೆಲವು ಪ್ರಮುಖ ಬದಲಾವಣೆಗಳನ್ನೂ ಮಾಡಿದ್ದಾರೆ. ಪಕ್ಷದ ಸಂಸದೀಯ ಮಂಡಳಿ ಸಭೆಯು ಈಗ ಬಿಜೆಪಿಯ ಕಚೇರಿಯಲ್ಲಿ ನಡೆಯುತ್ತಿದೆ. ಪ್ರಧಾನಿ ಅಲ್ಲಿಗೇ ಬಂದು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಧಾನಿಯ ಅನುಕೂಲಕ್ಕಾಗಿ ಅವರ ನಿವಾಸದಲ್ಲಿಯೇ ಸಂಸದೀಯ ಮಂಡಳಿ ಸಭೆ ನಡೆಸುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿತ್ತು. ಇದನ್ನೂ ಷಾ ಬದಲಿಸಿದ್ದಾರೆ.

ಬಿಜೆಪಿ ನೇತೃತ್ವದಲ್ಲಿನ ಕೇಂದ್ರ ಸರ್ಕಾರದಲ್ಲಿನ ಅಧಿಕಾರವು ಈಗ ಎಲ್ಲಿ ಕೇಂದ್ರೀಕೃತಗೊಂಡಿದೆ ಎನ್ನುವುದನ್ನು ಸಂಪುಟ ದರ್ಜೆ ಸಚಿವರು, ಮುಖ್ಯಮಂತ್ರಿಗಳು, ಸರ್ಕಾರದ ಪ್ರಮುಖ ಇಲಾಖೆಗಳು ಮತ್ತು ಸಂಸ್ಥೆಗಳ ಮುಖ್ಯಸ್ಥರು ಸರಿಯಾಗಿ ಅರ್ಥೈಸಿಕೊಂಡಿದ್ದಾರೆ. ಇದಕ್ಕೆ ತಕ್ಕಂತೆ ಅವರು ತಮ್ಮ ಕಾರ್ಯವೈಖರಿ ಮತ್ತು ನಡವಳಿಕೆಯನ್ನು ಬದಲಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಸಂಪುಟಕ್ಕೆ ಈಗ ನಡೆಯುತ್ತಿರುವ ಪುನರ್‌ ರಚನೆಯು ಈ ಬದಲಾದ ಪರಿಸ್ಥಿತಿಯನ್ನು ಮತ್ತೊಮ್ಮೆ ಖಚಿತಪಡಿಸಲಿದೆಯಷ್ಟೆ.
(ಲೇಖಕ ‘ದಿ ಪ್ರಿಂಟ್’ ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT