ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ಟೆನೆಂದರೂ ಬಿಡದೀ ‘ಬೂಸಾ’!

Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕೆಲ ಬಗೆಯ ರೂಪಕಗಳ ಆಟವೇ ಹಾಗೆ! ಅವು ಒಮ್ಮೆ ಒಂದು ಸಂಸ್ಕೃತಿಯಲ್ಲಿ ಸ್ಥಾಪಿತ­ವಾದರೆ ಬೇರೆ ಬೇರೆ ರೂಪಗಳಲ್ಲಿ ಪ್ರತ್ಯಕ್ಷವಾಗು­ತ್ತಲೇ ಇರುತ್ತವೆ. ಕರ್ನಾಟಕದ ಚಿಂತಕ- ರಾಜ­ಕಾರಣಿ ಬಿ. ಬಸವಲಿಂಗಪ್ಪನವರು ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಮೈಸೂರಿ­ನಲ್ಲಿ ಬಳಸಿದ ‘ಬೂಸಾ’ ಎಂಬ ರೂಪಕ ಕನ್ನಡ ಸಾಹಿತ್ಯದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ.

ಮೊನ್ನೆ ಮೈಸೂರಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಮರ್ಶಾ ಕಮ್ಮಟದಲ್ಲಿ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯನವರು ಬಸವಲಿಂಗಪ್ಪನವರ ಬೂಸಾ ರೂಪಕವನ್ನು ಮತ್ತೆ ಬಳಸಿದ್ದಾರೆ. ಎಪ್ಪತ್ತರ ದಶಕದಲ್ಲಿ ಬಸವಲಿಂಗಪ್ಪನವರು ಒಂದು ನೈತಿಕ ಸಿಟ್ಟಿನ ಗಳಿಗೆಯಲ್ಲಿ ಕೆಲ ಬಗೆಯ ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳನ್ನು ಕುರಿತು ಬೂಸಾ ಎಂಬ ಮಾತನ್ನು ಬಳಸಿದರು.

ಆ ಮಾತು ಪತ್ರಿಕೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ವರದಿಯಾಗಿ ಅಲ್ಲೋಲಕಲ್ಲೋಲವಾಯಿತು. ಆದರೆ ಅವತ್ತು ಆ ಸಭೆಯಲ್ಲಿದ್ದ ಲೇಖಕ ಜಿ.ಎಚ್. ನಾಯಕರ ಪ್ರಕಾರ ಅಧಿಕೃತವಾಗಿ ನಡೆ­ದದ್ದು ಇದು: ‘ನಾನು ಬಸವಲಿಂಗಪ್ಪನವರು ಭಾಷಣ ಮಾಡಿದ ಸಭೆಯಲ್ಲಿದ್ದೆ. ಪತ್ರಿಕೆಗಳಲ್ಲಿ ಬಂದ ವರದಿ ಸರಿಯಾಗಿರಲಿಲ್ಲ...

ಆ ಭಾಷಣದ ಹಿಂದಿನ ದಿನ ಶಿವಮೊಗ್ಗದಲ್ಲಿ ಹಿಂದೂ ಧರ್ಮ, ಪುರೋಹಿತಶಾಹಿ ಕುರಿತಂತೆ ಅವರು ಆಡಿದ ಮಾತುಗಳನ್ನು ವಿಕೃತಗೊಳಿಸಿ ಪತ್ರಿಕೆಯೊಂದು ವರದಿ ಮಾಡಿದೆಯೆಂದೂ, ಇಂಥ ಪತ್ರಿಕೆಗಳಲ್ಲಿ ಏನೇನೋ ಬರೆದು ಹೊಟ್ಟೆ ತುಂಬಿಸಿಕೊಳ್ಳುವ ಇಂಥ ಕನ್ನಡ ಸಾಹಿತಿಗಳು ಬೂಸಾ ಸಾಹಿತಿಗಳು, ಅವರು ಬರೆಯುವ ಕನ್ನಡ ಸಾಹಿತ್ಯವೂ ಬೂಸಾ ಸಾಹಿತ್ಯ; ಅಂಥ ಸಾಹಿತ್ಯಕ್ಕೆ, ಅಂಥ ಬೂಸಾ ಸಾಹಿತಿ­ಗಳಿಗೆ ತಾನು ಯಾವ ಬೆಲೆಯನ್ನೂ ಕೊಡು­ವುದಿಲ್ಲ, ಲಕ್ಷ್ಯವನ್ನೂ ಕೊಡುವುದಿಲ್ಲ ಎಂದು ಬಸವಲಿಂಗಪ್ಪನವರು ಏರಿದ ದನಿಯಲ್ಲಿ ವ್ಯಗ್ರವಾಗಿ ಹೇಳಿದ್ದರು’.

ಆದರೆ ಇಡೀ ಕನ್ನಡ ಸಾಹಿತ್ಯವನ್ನೇ ಬಸವಲಿಂಗಪ್ಪ­ನವರು ಬೂಸಾ ಎಂದು ಕರೆದ­ರೆಂದು ಸುದ್ದಿ ಹಬ್ಬಿತು. ಅವರ ಪರವಾಗಿ, ವಿರುದ್ಧವಾಗಿ ಚರ್ಚೆಗಳು ಶುರುವಾದವು. ಕುವೆಂಪು ಬಸವಲಿಂಗಪ್ಪನವರನ್ನು ಸಮರ್ಥಿ­ಸುತ್ತಾ, ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಬೂಸಾ ಇದೆ ಎಂದರು.
ಇದೀಗ ಕುವೆಂಪು ಅವರ ಮೈಸೂರಿನಲ್ಲೇ  ಎಲ್. ಹನುಮಂತಯ್ಯನವರು  ‘ಕನ್ನಡದಲ್ಲಿ ವರ್ಷಕ್ಕೆ  ಸುಮಾರು ನಾಲ್ಕೂವರೆ ಸಾವಿರ ಪುಸ್ತಕ­ಗಳು ಪ್ರಕಟವಾಗುತ್ತವೆ.

ಇವುಗಳಲ್ಲಿ ಮೂರೂವರೆ ಸಾವಿರ ಪುಸ್ತಕಗಳು ಪ್ರಕಟ­ವಾಗದೆ ಹೋದರೆ ನಷ್ಟವೇನೂ ಆಗುವು­ದಿಲ್ಲ. ಇವುಗಳಲ್ಲಿ ಬಹುತೇಕ ಪುಸ್ತಕಗಳು ಬೂಸಾ ಎಂಬುದರಲ್ಲಿ ಅನುಮಾನವೇ ಇಲ್ಲ’ ಎಂದು ಹೇಳಿದ್ದಾರೆ. ಅದೇ ದಿನ ಮೈಸೂರಿನಿಂದ ‘ಬೂಸಾ’ ಎಂಬ ಮಾತನ್ನು ಬಳಸದೆಯೇ ಕನ್ನಡ ಸಂಸ್ಕೃತಿಯಲ್ಲಿ ‘ಬೂಸಾ’ ಸೃಷ್ಟಿಯಾಗುತ್ತಿರುವುದರ ಬಗೆಗೆ ಮತ್ತೆ­ರಡು ಬಗೆಯ ಆಕ್ಷೇಪಗಳು ಬಂದಿವೆ.  ಮೊದಲನೆ­ಯದು, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿಚಾರ ಸಂಕಿರಣದಲ್ಲಿ ಚಂದ್ರಶೇಖರ ಕಂಬಾರರ ಟೀಕೆ: ‘ನಮ್ಮ ವಿಶ್ವ­ವಿದ್ಯಾಲಯಗಳಿಂದ ಯಾವುದೇ ಕಲಾವಿದರು ಹುಟ್ಟುತ್ತಿಲ್ಲ; ಬದಲಿಗೆ ಕೆಟ್ಟ ಕಲಾ ವಿಮರ್ಶಕರು ಹುಟ್ಟುತ್ತಿದ್ದಾರೆ’.

ಅವತ್ತು ಎಲ್. ಹನುಮಂತ­ಯ್ಯ­ನವರು ಕನ್ನಡ ವಿಮರ್ಶೆಯ ಬಗ್ಗೆ ಆಡಿರುವ ಮಾತುಗಳಲ್ಲೂ ಇದನ್ನು ಹೋಲುವ ಧ್ವನಿ­ಯಿದೆ: ‘ಕನ್ನಡ ವಿಮರ್ಶೆ ಸಹ ಕಳೆದ ಇಪ್ಪತ್ತು ವರ್ಷ­ಗಳಲ್ಲಿ  ಕ್ರಿಯಾಶೀಲವಾಗಿ ಕೆಲಸ ಮಾಡಿಲ್ಲ’. ಅವತ್ತೇ ಮಾನಸಗಂಗೋತ್ರಿಯಲ್ಲಿ ಬಿಡುಗಡೆ­ಯಾದ ಕುವೆಂಪು ಕೃತಿಗಳ ಹಿಂದಿ ಅನುವಾದಗಳ ಬಗೆಗೆ ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ಇಂಗ್ಲಿಷ್ ಅನುವಾದದ ಬಗ್ಗೆ ಸಿ.ಎನ್. ರಾಮಚಂದ್ರನ್ ಆಕ್ಷೇಪಣೆ ಎತ್ತಿದ್ದಾರೆ.

ಈ ಅನುವಾದಗಳಲ್ಲಿ ವ್ಯಾಕರಣ ದೋಷ, ತಪ್ಪು ಪದಗಳು, ಅಚ್ಚಿನ ದೋಷಗಳ ಬಗ್ಗೆ ಅನುವಾದಕರನ್ನು ಈ ಇಬ್ಬರೂ ‘ತರಾಟೆಗೆ ತೆಗೆದುಕೊಂಡರು’ ಎಂದು ವರದಿ­ಯಾಗಿದೆ. ಸಿ.ಎನ್.ರಾಮಚಂದ್ರನ್ ಅವರು ಅನುವಾದಿತ ಕೃತಿಗಳ ಗುಣ, ದೋಷಗಳೆರಡನ್ನೂ ಗುರುತಿಸಿದರು ಎಂದು ಅಲ್ಲಿದ್ದ ಮಿತ್ರರೊಬ್ಬರು ಹೇಳಿದರು. ಅಂತೂ ಒಂದೇ ದಿನ ವಿಭಿನ್ನ ಚಿಂತನೆಗಳ ನಾಲ್ವರು ಕನ್ನಡ ಲೇಖಕರು ಕನ್ನಡದಲ್ಲಿ ಸೃಷ್ಟಿಯಾಗುತ್ತಿರುವ ಬಗೆಬಗೆಯ ‘ಬೂಸಾ’ಗಳ ಬಗ್ಗೆ ವಿಮರ್ಶಾತ್ಮಕವಾಗಿ ಮಾತಾಡಿದ್ದಾರೆ.

ಸಾಹಿತ್ಯ ಪರಿಸರದಲ್ಲಿ ಪ್ರಾಮಾಣಿಕ ವಿಮರ್ಶೆ ಹಾಗೂ ಲೇಖಕರ ಸ್ವವಿಮರ್ಶೆಯ ಕೊರತೆಗಳು ಕೂಡ ಬೂಸಾ ಸೃಷ್ಟಿಗೆ ಕಾರಣ ಎಂಬ ಅರಿವು ನಾಲ್ವರು ಕನ್ನಡ ಲೇಖಕರಲ್ಲಿ ಒಂದೇ ದಿನ ಮೂಡಿರುವುದು ಕುತೂಹಲಕರ ವಿಚಾರ. ಸ್ವತಃ ಈ ನಾಲ್ವರು ಲೇಖಕರೂ ಕೂಡ ಇನ್ನಿತರ ಔಪಚಾರಿಕ ಸಂದರ್ಭಗಳಲ್ಲಿ ತಮ್ಮ ವಿಮರ್ಶಾ ಪ್ರಜ್ಞೆಯನ್ನು ಅಮಾನತಿನಲ್ಲಿಟ್ಟು ಬೂಸಾ ಸಾಹಿತ್ಯ ಕೃತಿಗಳನ್ನು ಪ್ರೋತ್ಸಾಹಿಸಿದ್ದಾರೋ ಇಲ್ಲವೋ ಎಂಬ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳುವುದು ಕೂಡ ಅಗತ್ಯವೆಂದು ಸೂಚಿಸುತ್ತಲೇ ಇಡೀ ಪ್ರಶ್ನೆಯನ್ನು ಇನ್ನಷ್ಟು ಆಳವಾಗಿ ನೋಡಬೇಕೆನ್ನಿಸುತ್ತದೆ.

ಕಾರಣ, ಬಸವಲಿಂಗಪ್ಪನವರು ‘ಬೂಸಾ’ ಎಂದಾಗ ಒಂದು ದೃಷ್ಟಿಯಿಂದ ಪ್ರಾಚೀನ ಕನ್ನಡ ಸಾಹಿತ್ಯದ ಪುನರ್ ಮೌಲ್ಯಮಾಪನ ಆರಂಭ­ವಾಯಿತು. ಹಾಗೆಯೇ ಇಂದಿನ ಜಡ ಹಾಗೂ ಅವಿಮರ್ಶಾತ್ಮಕ ಸಾಹಿತ್ಯ ಪರಿಸರದಲ್ಲಿ ಈ ಬೂಸಾ ಪ್ರಶ್ನೆಯನ್ನು ಇನ್ನಷ್ಟು ಸೂಕ್ಷ್ಮವಾಗಿ ನೋಡಬೇಕು. ಯಾವುದು ಬೂಸಾ, ಯಾವುದು ಉತ್ತಮ ಎಂಬುದನ್ನು ಗ್ರಹಿಸುವ ವಿಮರ್ಶಾ ತಿಳಿವಳಿಕೆಯನ್ನು ನಾವು ನಮ್ಮ ಎಳೆಯರಲ್ಲಿ ಬಿತ್ತು­ತ್ತಿದ್ದೇವೆಯೆ? ಅದರಲ್ಲೂ ಟೆಲಿಚಾನೆಲ್‌­ಗಳು, ‘ಬೂಸಾ’ ಸಿನಿಮಾಗಳನ್ನು ನೋಡಿ ಹೊರಬಂದ ಪ್ರೇಕ್ಷಕರ ಬಾಯಿಗೆ ಮೈಕ್ ಇಟ್ಟು ‘ಗ್ರೇಟ್!’ ‘ಸೂಪರ್!’ ‘ಹಂಡ್ರಡ್ ಡೇಸ್ ಗ್ಯಾರಂಟಿ!’ ಎಂದು ಹೇಳಿಸಿ, ‘ಶ್ರೇಷ್ಠತೆ’ಯನ್ನು ಉತ್ಪಾದಿಸುವ ಕಾಲ ಇದು.

ಇಂಥ ಕೆಟ್ಟ ಕಾಲದಲ್ಲಿ ಸಾಹಿತ್ಯ ಕೃತಿಗಳನ್ನು ಕೂಡ ಎಸ್.ಎಂ.ಎಸ್. ಮೂಲಕ ‘ಶ್ರೇಷ್ಠ’ ಎನ್ನಿಸುವ ಹೀನ ಪರಿಪಾಠವೂ ಶುರುವಾಗಿದೆ. ಈ ಬಗೆಯ ಸಮ್ಮತಿಯ ಉತ್ಪಾದನೆಯ ಕಾಲದಲ್ಲಿ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಾವಿರಾರು ಸಮ್ಮೇಳನ, ಸಂಕಿರಣಗಳಲ್ಲಿ ಭಾಗಿಯಾಗುವ ಸಾಹಿತ್ಯಾಸಕ್ತರಿಗಾದರೂ ಯಾವುದು ಬೂಸಾ, ಯಾವುದು ಶ್ರೇಷ್ಠ ಎಂಬ ಬಗ್ಗೆ ಖಚಿತ ಅರಿವು ಸಿಗುತ್ತಿದೆಯೆ?

ಕನ್ನಡ ಪ್ರಾಧ್ಯಾಪಕ ಎಂ.ಜಿ. ಚಂದ್ರಶೇಖರಯ್ಯ­ನವರ ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಪ್ರತಿವರ್ಷ ಐವತ್ತು ಸಾವಿರ ಜನ ವಿದ್ಯಾರ್ಥಿ, ವಿದ್ಯಾರ್ಥಿನಿ­ಯರು ಕನ್ನಡ ಸಾಹಿತ್ಯವನ್ನು ಐಚ್ಛಿಕ­ವಾಗಿ ಬಿ.ಎ. ತರಗತಿಗಳಲ್ಲಿ ಹಾಗೂ ಪೂರ್ಣ ಪ್ರಮಾಣ­ದಲ್ಲಿ ಎಂ.ಎ. ತರಗತಿಗಳಲ್ಲಿ ಓದು­ತ್ತಾರೆ. ಜೊತೆಗೆ ಕಡೆಯಪಕ್ಷ ಹತ್ತು ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಂಗ್ಲಿಷ್ ಸಾಹಿತ್ಯ­ವನ್ನು ಕಲಿಯುತ್ತಿದ್ದಾರೆ. ಇಂಥದೊಂದು ದೊಡ್ಡ ವರ್ಗಕ್ಕೆ ಕನ್ನಡದ ಹಾಗೂ ಜಗತ್ತಿನ ಶ್ರೇಷ್ಠ ಸಾಹಿತ್ಯವನ್ನು ಸುಮ್ಮನೆ ಪರಿಚಯಿಸಿದರೂ ಸಾಕು, ಅವರಲ್ಲಿ ಒಳ್ಳೆಯ ಅಭಿರುಚಿ ತಂತಾನೇ ನಿರ್ಮಾಣವಾಗುತ್ತದೆ.

ಅದರ ಜೊತೆಗೆ ಶ್ರೇಷ್ಠ ಸಾಹಿತ್ಯವನ್ನು ಗುರುತಿಸುವ ವಿಮರ್ಶಾ ಮಾರ್ಗಗಳನ್ನು ಗಂಭೀರವಾಗಿ ಕಲಿಸಿದರಂತೂ ಈ ಐವತ್ತು ಸಾವಿರದಲ್ಲಿ ಐದು ಸಾವಿರ ಜನರಾದರೂ ವಿಮರ್ಶೆಯ ಕ್ರಮಗಳನ್ನು ಕಲಿಯಬಲ್ಲರು. ಆ ಕೆಲಸ ಮಾಡದೆ, ಸಾಹಿತ್ಯದ ಹೆಸರಿನಲ್ಲಿ ಕಾಡುಹರಟೆ ಹೆಚ್ಚತೊಡಗಿರುವುದ­ರಿಂದ ವಿದ್ಯಾರ್ಥಿಗಳ, ಸಾಹಿತ್ಯಾಸಕ್ತರ ಅಭಿರುಚಿ ನಿರ್ನಾಮವಾಗತೊಡಗುತ್ತದೆ. ಬೂಸಾ ಎಲ್ಲೆಡೆ ವಿಜೃಂಭಿಸುತ್ತದೆ.

ಇದರ ಜೊತೆಗೇ, ಸಾಹಿತ್ಯ ಪರಿಸರದಲ್ಲಿ ಬೂಸಾ ಸೃಷ್ಟಿಗೆ ಸಾಹಿತ್ಯ ಲೋಕದ ಉಡಾಫೆ ಮಾತುಗಳೂ ಪೂರಕವಾಗಿರುವುದನ್ನು ಹಲ­ವರು ಗಮನಿಸಿದಂತಿಲ್ಲ. ಉದಾಹರಣೆಗೆ, ಹಿಂದೆ ಹಾ.ಮಾ. ನಾಯಕರ ಸಾಧಾರಣ ಬರಹಗಳ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಇಂಥ ಆಯ್ಕೆಗಳ ಹಿಂದಿರುವ ವಿಮ­ರ್ಶೆಯ ಮಾನದಂಡಗಳ ಬಗ್ಗೆ ಗಂಭೀರ ಪ್ರಶ್ನೆ­ಗಳು ಎದ್ದಿದ್ದವು. ಆಗ ಸಾಹಿತ್ಯ ಪರಿಸರದಲ್ಲಿ ಶ್ರೇಷ್ಠತೆ­ಯನ್ನು ಎತ್ತಿ ಹಿಡಿಯಬೇಕು ಎಂಬ ಧ್ವನಿ ಮುನ್ನೆಲೆಗೆ ಬಂದಾಗ, ಕೆ.ವಿ. ಸುಬ್ಬಣ್ಣನವರು ಇದು ‘ಶ್ರೇಷ್ಠತೆಯ ವ್ಯಸನ’ ಎಂದುಬಿಟ್ಟರು.

ಮೊದಲೇ ತೂಕಡಿಸುತ್ತಿದ್ದ ಮೀಡಿಯೋಕರ್ ಲೇಖಕರಿಗೆ ಈ ಮಾತು ಹಾಸಿಗೆ ಹಾಸಿಕೊಟ್ಟಂ­ತಾ­ಯಿತು! ಯಾರಾದರೂ ವಸ್ತುನಿಷ್ಠ ವಿಮ­ರ್ಶೆಯ ಮಾನದಂಡಗಳನ್ನು ಬಳಸಿ ಒಂದು ಕೃತಿ­ಯನ್ನು ದುರ್ಬಲ ಎಂದ ತಕ್ಷಣ, ಕಳಪೆ ಬರವಣಿಗೆಯ ಸಮರ್ಥಕರು ‘ನಿಮಗೆಲ್ಲೋ ಶ್ರೇಷ್ಠತೆಯ ವ್ಯಸನ’ ಎಂಬ ಮಾತನ್ನು ಬಿಡು­ಬೀಸಾಗಿ ಬಳಸತೊಡಗಿದರು! ಈ ಮಾತನ್ನು ಹೇಳಿದ ಸುಬ್ಬಣ್ಣನವರೇ ಸ್ವತಃ ತಮ್ಮ ಭಾಷಾಂತರ­ಗಳಿಂದ ಹಿಡಿದು ತಮ್ಮ ಎಲ್ಲ ಪುಸ್ತಕ­ಗಳನ್ನೂ ಶ್ರೇಷ್ಠವಾಗಿಸಬೇಕೆಂಬ ಎಚ್ಚರಿಕೆಯಿಂದ ರೂಪಿಸುತ್ತಿದ್ದರೆಂಬುದನ್ನು ಸುಬ್ಬಣ್ಣನವರ ಮಾತನ್ನು ಗಿಳಿಪಾಠ ಒಪ್ಪಿಸುವವರು ಗಮನಿಸಿ­ದಂತಿಲ್ಲ.

ತಮ್ಮ ಪುಸ್ತಕಗಳನ್ನು ಮಾತ್ರವಲ್ಲ, ತಮ್ಮ ಅಕ್ಷರ ಪ್ರಕಾಶನದ ಪುಸ್ತಕಗಳನ್ನು ಕೂಡ ಸುಬ್ಬಣ್ಣನವರು ತಾವು ರೂಪಿಸಿಕೊಂಡಿದ್ದ ಶ್ರೇಷ್ಠತೆಯ ಮಾನದಂಡಗಳ ಆಧಾರದ ಮೇಲೇ ಪ್ರಕಟಿಸುತ್ತಾ ಬಂದಿದ್ದರು.  ಆದರೆ ಅವರ ಈ ದಕ್ಷತೆಯನ್ನು ಗಮನಿಸದೆ, ಅವರು ಸಡಿಲವಾಗಿ ಆಡಿದ ಮಾತೊಂದನ್ನು ಅಗ್ಗವಾಗಿ ಬಳಸಿದವ­ರೆ­ಲ್ಲರೂ ಬೂಸಾ ಸೃಷ್ಟಿಯನ್ನು ಪರೋಕ್ಷವಾಗಿ ಬೆಂಬಲಿಸ­­ತೊಡಗಿದರು. ಆದರೆ ಈ ಬಗೆಯ ಉಡಾಫೆ­ಗಳಿಂದ ದಾರಿ ತಪ್ಪಿದ ಎಳೆಯರು ತಮ್ಮ ಕೃತಿಗಳಿಗೆ ಸೂಕ್ಷ್ಮತೆ, ಆಳ ಹಾಗೂ ಸಂಕೀರ್ಣತೆ­ಯನ್ನು ತರುವುದನ್ನು ಬಿಟ್ಟು ಅಗ್ಗದ  ಶೈಲಿಯಲ್ಲಿ ಬರೆ­ಯುತ್ತಾ ಬೂಸಾ ಹಳ್ಳಕ್ಕೆ ಬೀಳತೊಡಗಿದರು.

ನಮ್ಮ ಈ ಕಾಲದಲ್ಲಿ ಬೂಸಾ ಸೃಷ್ಟಿಯ ಮತ್ತೊಂದು ಮುಖ್ಯ ವಲಯವೆಂದರೆ ಪ್ರಶಸ್ತಿ ಪ್ರದಾನ ಸಮಾರಂಭಗಳು. ಈ ಬಗೆಯ ಸಮಾರಂಭಗಳಂತೂ ಕೃತಿಗಳಲ್ಲಿ ಇಲ್ಲದ ಶ್ರೇಷ್ಠತೆಯನ್ನು ಆ ಗಳಿಗೆಯ ಒಣವಿಶೇಷಣಗಳ ಮೂಲಕ ಉತ್ಪಾದಿಸುವ ಕಾರ್ಖಾನೆಗಳಂತಾಗಿ­ಬಿಟ್ಟಿವೆ. ಇದೆಲ್ಲದರ  ನಡುವೆ ಸೂಕ್ಷ್ಮ ಸತ್ಯಗಳನ್ನು ಹೇಳುತ್ತಾ ಬೂಸಾವನ್ನು ವಿರೋಧಿಸುವವರು ಹುಚ್ಚರಂತೆ ಕಾಣುವ ಅಪಾಯವಿದೆ.

ಮತ್ತೊಬ್ಬ­ರನ್ನು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿ­ದರೆ ತಮಗೆಲ್ಲಿ ‘ತೊಂದರೆ’ಯಾಗು­ತ್ತದೋ ಎಂದು ಬೂಸಾ ಸಾಹಿತ್ಯದ ಬಗ್ಗೆ ಏನೂ ಹೇಳದೆ ಯೋಜಿತ ಮೌನ ತೋರುವವರೂ ಇದ್ದಾರೆ! ಜೊತೆಗೆ, ತಾವು ಒಪ್ಪುವ ಪಂಥಗಳ ಅಘೋಷಿತ ವಿಮರ್ಶಾ ಗುಲಾಮಗಿರಿ­ಯಲ್ಲಿಯೂ ಹಲವರು ಸಿಕ್ಕಿಕೊಂಡಿರುವಂತೆ ಕಾಣುತ್ತದೆ. ಸ್ತ್ರೀವಾದಿ ವಿಮರ್ಶೆ ಸ್ತ್ರೀ ಸಾಹಿತ್ಯವನ್ನು ವಿವರಿಸುವ ಕೆಲಸಕ್ಕಷ್ಟೆ ತನ್ನನ್ನು ಒಪ್ಪಿಸಿಕೊಂಡರೆ, ಅದು ಸ್ತ್ರೀ ಸಾಹಿತ್ಯವನ್ನು ವಿಮರ್ಶಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳು­ತ್ತದೆ; ಅದೇ ರೀತಿ ನವ್ಯ, ದಲಿತ, ಬಂಡಾಯ, ಮಾರ್ಕ್ಸಿಸ್ಟ್ ವಿಮರ್ಶಾ ಮಾರ್ಗಗಳಿಗೂ ಈ ಮಂಕು ಕವಿದುಕೊಂಡಿದೆ.

ಅದರ ಫಲವಾಗಿ ಈ ಮಾರ್ಗಗಳ ಬರವಣಿಗೆಗಳಲ್ಲಿ ಬೂಸಾ ಕಣ್ಣಿಗೆ ಬಿದ್ದರೂ ಅದನ್ನು ಕಂಡಿಲ್ಲವೆಂಬಂತೆ ಮುನ್ನಡೆ­ಯುವ ಜಾಣ ಮೌನ ನಿರ್ಮಾಣವಾಗುತ್ತದೆ. ಕೊನೆಯ­ಪಕ್ಷ ಈ ಬಗ್ಗೆ ಮೌನವಾಗಿದ್ದರೂ ಪರವಾ­ಗಿಲ್ಲ; ಆದರೆ ಆ ಬೂಸವೇ ಬಂಗಾರ ಎಂದು ನರ್ತಿಸುವ ಅಪ್ರಾಮಾಣಿಕತೆ ಸಾಹಿತ್ಯ­ಲೋಕದಲ್ಲಿ ಹಬ್ಬಿದರೆ ವಿಮರ್ಶಾಹೀನ ಪರಿಸ್ಥಿತಿ ವ್ಯಾಪಕವಾಗತೊಡಗುತ್ತದೆ; ಬೂಸಾ ಕೂಡ ಕಾಯಂ ಸ್ಥಿತಿಯಾಗತೊಡಗುತ್ತದೆ.

ರೋಗ ಪರಿಹಾರದ ಮೊದಲ ಹೆಜ್ಜೆ ರೋಗದ ಮೂಲವನ್ನು ಗುರುತಿಸುವುದು. ಹಾಗೆಯೇ ಸಾಹಿತ್ಯಲೋಕದಲ್ಲಿ ಬೂಸಾದಿಂದ ತಪ್ಪಿಸಿ­ಕೊಳ್ಳುವ ಮೊದಲ ಹೆಜ್ಜೆಯೆಂದರೆ ಇಲ್ಲಿರುವ ಬೂಸಾವನ್ನು ಗುರುತಿಸುವುದು. ಜೊತೆಗೆ, ಈ ಬೂಸಾ ದಿನನಿತ್ಯ ನಾವು ಬೇಜವಾ­ಬ್ದಾರಿಯಿಂದ ಸೃಷ್ಟಿಸುತ್ತಿರುವ ಬರವಣಿಗೆ, ಮಾತು, ಭಾಷಣ, ಕಲೆ, ಸಮೂಹ ಮಾಧ್ಯಮ, ಬೋಧನೆ, ಮೌಲ್ಯಮಾಪನಗಳ ಹುಸಿ ಪರಿಸರ­ದಿಂದಲೂ ಬೆಳೆಯುತ್ತಿರಬಹುದು ಎಂದು ಪರೀಕ್ಷಿಸಿಕೊಳ್ಳುವ ಪ್ರಾಮಾಣಿಕತೆ ಹೆಚ್ಚತೊಡಗಿ­ದಾಗ ಮಾತ್ರ ಬೂಸಾದ ಅಬ್ಬರ ಕಡಿಮೆಯಾಗಬಲ್ಲದು.

ಕೊನೆ ಟಿಪ್ಪಣಿ: ಬೂಸಾ ಮತ್ತು ಕ್ರಿಮಿನಾಶಕ!
ಹದಿನಾರು ವರ್ಷದ ಹಿಂದಿನ ಮಾತು. ಅವತ್ತು ಸಂಜೆ ಪಿ. ಲಂಕೇಶರು ಕೊಂಚ ಆರಾಮಾಗಿ ಆಫೀಸಿನಲ್ಲಿ ಕೂತಿದ್ದರು. ‘ಏನ್ ಸಾರ್, ತುಂಬ ರಿಲ್ಯಾಕ್ಸ್ಡ್ ಆಗಿ  ಕೂತಿದ್ದೀರಿ?’ ಎಂದೆ. ‘ಹೂಂ, ಈಗಿನ್ನೂ ಪೆಸ್ಟಿಸೈಡ್ ಹೊಡೆದು ಕೂತಿದ್ದೀನಿ! ಅದಕ್ಕೇ!’ ಎಂದು ಲಂಕೇಶ್ ನಕ್ಕರು. ಅರ್ಥವಾಗದೆ, ‘ಅಂದರೆ?’ ಎಂದೆ. ‘ಅದೇ ಕಣಯ್ಯಾ! ಒಂದೆರಡು ಪುಸ್ತಕಗಳ ರಿವ್ಯೂ ಬರೆದೆ! ಅದನ್ನೇ ಕ್ರಿಮಿನಾಶಕ ಹೊಡೆದೆ ಅಂದಿದ್ದು!’ ಎಂದರು ಲಂಕೇಶ್.

ಆ ಗಳಿಗೆಗೆ ಅದು ಕೊಂಚ ಜಂಬದ ಮಾತೆನ್ನಿಸಿತ್ತು. ಆದರೆ ಕೃತಿಯ ಹಲ ಬಗೆಯ ದೋಷಗಳನ್ನು, ಕ್ಲೀಷೆಗಳನ್ನು, ದೌರ್ಬಲ್ಯಗಳನ್ನು ಲಂಕೇಶರು ಥಟ್ಟನೆ ಹೆಕ್ಕಿ ತೋರಿಸುತ್ತಿದ್ದ ರೀತಿಯಿಂದ ಲೇಖಕ, ಲೇಖಕಿಯರು ಹಲವು ಪಾಠಗಳನ್ನು ಕಲಿಯುತ್ತಿದ್ದರು, ಕೆಟ್ಟದ್ದನ್ನು ಪ್ರಕಟಿಸಲು ನಾಚುತ್ತಿದ್ದರು ಎಂಬುದೂ  ನನಗೆ ಗೊತ್ತಿತ್ತು. ಸ್ವಾರ್ಥವಿಲ್ಲದ ನಿಷ್ಠುರ ವಿಮರ್ಶೆ ಮಾತ್ರ ಬೂಸಾ ಸಾಹಿತ್ಯ ಸೃಷ್ಟಿಗೆ ತಡೆಯೊಡ್ಡಬಲ್ಲದು ಎಂಬುದನ್ನು ಲಂಕೇಶರ ತೀಕ್ಷ್ಣ ವಿಮರ್ಶೆ ನಮಗೆ ಮತ್ತೆ ಮತ್ತೆ ನೆನಪು ಮಾಡಿಕೊಡುತ್ತಿರಬೇಕಾಗುತ್ತದೆ. ಲಂಕೇಶರು ಇದ್ದಿದ್ದರೆ ಇದೇ ಮಾರ್ಚ್ ಎಂಟಕ್ಕೆ ಎಂಬತ್ತು ತಲುಪುತ್ತಿದ್ದರು. ಅವರು ಕನ್ನಡ ಸಂಸ್ಕೃತಿಯಲ್ಲಿ ಸೃಷ್ಟಿಯಾಗುತ್ತಿದ್ದ ಬಗೆಬಗೆಯ ಬೂಸಾದ ವಿರುದ್ಧ ಹಲವು ದಶಕಗಳ ಕಾಲ ನಡೆಸಿದ ಬೌದ್ಧಿಕ ಹೋರಾಟ ಎಲ್ಲರಿಗೂ ಸ್ಫೂರ್ತಿಯಾಗಲಿ!

ನಿಮ್ಮ ಅನಿಸಿಕೆ ತಿಳಿಸಿ
editpagefeedback@prajavani.co

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT