ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಯರ್ ಸಂಸ್ಕೃತಿಯ ಹೊಸ ಬುರುಗು

Last Updated 26 ಮೇ 2013, 19:59 IST
ಅಕ್ಷರ ಗಾತ್ರ

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, ಅಂದರೆ 1980ರ ದಶಕದಲ್ಲಿ ಬಿಯರ್ ಕುಡಿಯುವ ಸಂಸ್ಕೃತಿ ಬೆಂಗಳೂರಿನಲ್ಲಿ ಹರಡತೊಡಗಿತು. ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ವಿದೇಶಿ ಮದ್ಯ ಎಂದರೆ ವಿಸ್ಕಿ. `ಪಬ್ ಕಲ್ಚರ್' ಎಂದು ಕರೆಸಿಕೊಳ್ಳುತ್ತಿದ್ದ ನಗರಗಳ ಸಾಲಿಗೆ ಬೆಂಗಳೂರು ಸೇರಿತು. `ಪಬ್ ಸಿಟಿ' ಎಂಬ ಗುಣ ವಿಶೇಷಣ ನಗರಕ್ಕೆ ಅಂಟಿಕೊಂಡಿದ್ದು 1990ರ ದಶಕದಲ್ಲಿ. ಭಾರತದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಬಿಯರ್ ಉತ್ಪಾದಿಸುವ ಉದ್ಯಮಿ ಎನಿಸಿಕೊಂಡಿರುವ ವಿಜಯ್ ಮಲ್ಯ ಇರುವುದೂ ಇಲ್ಲಿಯೇ.

ಹೆಚ್ಚು `ವಾಲ್ಯೂಂ' ಇರುವ ಸಂಗೀತ ಮತ್ತು ಹೆಚ್ಚು ಯುವಕರು ಇರುವುದು `ಪಬ್ ಸಂಸ್ಕೃತಿ'ಯಲ್ಲಿ ಕಾಣುವ ಮುಖ್ಯ ಸಂಗತಿಗಳು. ಆದರೆ ಬರಬರುತ್ತಾ ಈ ಸಂಸ್ಕೃತಿ ಕಡಿಮೆಯಾಗಿ ಲೌಂಜ್, ರೆಸ್ಟೋ ಬಾರ್‌ಗಳು ತಲೆಎತ್ತಲು ಆರಂಭಿಸಿದವು. ಕರ್ನಾಟಕ ಹಾಗೂ ಮಹಾರಾಷ್ಟ್ರ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ರಾಜ್ಯಗಳು. ಹಾಗಾಗಿ ಎರಡೂ ರಾಜ್ಯದವರು ವೈನ್ ಮಾರಾಟಕ್ಕೆ ಪ್ರೋತ್ಸಾಹ ನೀಡಲು ಪ್ರಯತ್ನಿಸುತ್ತಿವೆ. ತೆರಿಗೆ ಮತ್ತಿತರ ವಿಷಯಗಳಲ್ಲಿ ಎರಡೂ ರಾಜ್ಯಗಳ ನಡುವೆ `ವೈನ್ ವಾರ್' ನಡೆದಿರುವುದೂ ಸುಳ್ಳಲ್ಲ. ಇಂಥ ಏನೇ ಮಾರುಕಟ್ಟೆ ತಂತ್ರಗಳನ್ನು ಅನುಸರಿಸಿದರೂ ಬಿಯರ್‌ನಷ್ಟು ವೈನ್ ಜನಪ್ರಿಯವಾಗಿಲ್ಲ. `ಬಿಯರ್ ಕುಡಿಯೋಣ ಬನ್ನಿ' ಎಂದು ಕರೆಯುವವರನ್ನು ನಾವು ನೋಡಿದ್ದೇವೆ. ಆದರೆ `ವೈನ್ ಕುಡಿಯೋಣ ಬನ್ನಿ' ಎಂಬ ದನಿ ಕಿವಿಮೇಲೆ ಬೀಳುವುದಿಲ್ಲ.

ನಗರದಲ್ಲೆಗ `ಮೈಕ್ರೊಬ್ರುವರೀಸ್' ತಲೆಎತ್ತುತ್ತಿವೆ. ಆರು `ಮೈಕ್ರೊಬ್ರುವರೀಸ್' ಇಲ್ಲಿವೆ. ಗುಡಗಾಂವ್‌ನಲ್ಲಿ ಇಂಥ ಎಂಟು `ಬ್ರುವರೀಸ್' ಇದ್ದು, ಈ ಸಂಸ್ಕೃತಿ ದೊಡ್ಡ ಮಟ್ಟದಲ್ಲಿ ಪ್ರಾರಂಭವಾದದ್ದು ಅಲ್ಲಿಯೇ. `ಮೈಕ್ರೊಬ್ರುವರೀಸ್' ಇರುವೆಡೆ ಬೇರೆ ಬ್ರಾಂಡ್‌ಗಳ ಬಾಟಲಿ ಅಥವಾ ಕ್ಯಾನ್ ಬಿಯರ್ ಮಾರುವುದಿಲ್ಲ. ದೊಡ್ಡ `ವೆಸೆಲ್'ಗಳಲ್ಲಿ ಅಲ್ಲಿಯೇ ಬಿಯರ್ ಉತ್ಪಾದಿಸುವ ವ್ಯವಸ್ಥೆ `ಮೈಕ್ರೊಬ್ರುವರೀಸ್'ನಲ್ಲಿ ಇರುತ್ತದೆ. ಬಿಯರ್ ಉತ್ಪಾದನೆ ಹೇಗೆ ಆಗುತ್ತದೆ ಎಂಬುದರ ಪ್ರಾತ್ಯಕ್ಷಿಕೆಯನ್ನು ಆಸಕ್ತರು ಇಲ್ಲಿ ನೋಡಬಹುದು. ಯಾವುದೇ ಸಂರಕ್ಷಣಕಾರಿ ರಾಸಾಯನಿಕಗಳನ್ನು ಬಳಸದೆ ತಾಜಾ ಬಿಯರ್ ಕೊಡುವುದಾಗಿ `ಮೈಕ್ರೊಬ್ರುವರೀಸ್' ಹೇಳಿಕೊಳ್ಳುತ್ತವೆ.

`ಮೈಕ್ರೊಬ್ರುವರೀಸ್'ಗಳ ಸನ್ನಿವೇಶ ಪಬ್‌ಗಿಂತ ಭಿನ್ನವಾದದ್ದು. ಹೆಚ್ಚು ಅವಿವಾಹಿತ ಯುವಕರು ಪಬ್‌ಗಳಿಗೆ ಲಗ್ಗೆ ಇಡುತ್ತಾರೆ. ಇಲ್ಲಿ ಸಂಸಾರ ಸಮೇತ ಹೋಗಿ ಬಿಯರ್ ಸ್ವಾದ ಸವಿಯುವವರನ್ನು ಕಾಣಬಹುದು. ಕೆಲವು `ಮೈಕ್ರೊಬ್ರುವರೀಸ್'ಗಳನ್ನು `ಗ್ಯಾಸ್ಟ್ರೋ ಪಬ್' ಎಂದು ಕರೆಯುತ್ತಾರೆ. ಅಂದರೆ, ಬಿಯರ್ ಜೊತೆಗೆ ಸ್ವಾದಿಷ್ಟವಾದ ತಿನಿಸುಗಳೂ ಅಲ್ಲಿ ದೊರೆಯುತ್ತವೆ. ಲ್ಯಾಗರ್, ಏಲ್, ಸ್ಟೌಟ್ ಮೊದಲಾದ ಬಗೆಯ ಬಿಯರ್‌ಗಳನ್ನು ಅಲ್ಲಿ ಸರ್ವ್ ಮಾಡುತ್ತಾರೆ. ಏಲ್ ಬ್ರಿಟನ್ ಮೂಲದ್ದು. ಲ್ಯಾಗರ್‌ನ ತವರು ಜರ್ಮನಿ. ಸ್ಟೌಟ್‌ನ ಹೆಸರು ಕೇಳಿದರೆ ಅದು ಐರಿಷ್ ಮೂಲದ್ದೆಂದು ಅಂದಾಜು ಮಾಡಬಹುದು. ಬಿಯರ್ ಸಂಸ್ಕೃತಿಯಲ್ಲಿ ಕಾಣುತ್ತಿರುವ ಬಗೆಗಳಲ್ಲಿ ಹೊರದೇಶಗಳದ್ದೇ ಸಿಂಹಪಾಲು.

ಕನ್ನಡದ ಕೆಲವು ಪ್ರಾಚೀನ ಕೃತಿಗಳಲ್ಲಿ ಹಲಸು, ಈಚಲು, ಮಾವು ಮೊದಲಾದವುಗಳಿಂದ ಬಿಯರ್‌ನಂತೆ `ಬೂಸ್ಟ್' ಮಾಡಬಲ್ಲ, ದಣಿವಾರಿಸಿ ತಂಪು ನೀಡಬಲ್ಲ ಪಾನೀಯಗಳನ್ನು ತಯಾರಿಸಬಹುದು ಎಂಬ ಉಲ್ಲೇಖಗಳಿವೆಯಂತೆ. ಅವನ್ನು ಮಾಡುವ ವಿಧಾನದ ಕುರಿತು ಈಗ ಯಾರೂ ಅಷ್ಟಾಗಿ ಮಾತನಾಡುತ್ತಿಲ್ಲ. `ವೀಟ್ ಫ್ಲೇವರ್', `ಕಾಫಿ ಫ್ಲೇವರ್' ಹೀಗೆ ಹಲವು ಪರಿಮಳಗಳ ಬಿಯರ್‌ಗಳು ಈಗ ದೊರೆಯುತ್ತಿವೆ.

ಹೀಗಿರುವಾಗ, ಯಾರಾದರೂ ಉದ್ಯಮಿ ದೇಸಿ ಶೈಲಿಯ ಪಾನೀಯಗಳನ್ನು ತಯಾರಿಸಿ, ಬಿಯರ್ ಸಂಸ್ಕೃತಿಗೆ ಸೆಡ್ಡು ಹೊಡೆಯಬಾರದೇಕೆ? ಕೆಲವು `ಮೈಕ್ರೊಬ್ರುವರೀಸ್'ನಲ್ಲಿ ಒಂದು `ಪಿಚರ್' ಬಿಯರ್ ಬೆಲೆ 200ರಿಂದ 250 ರೂಪಾಯಿಯಷ್ಟಿದೆ. ಸಾಮಾನ್ಯ ಬಿಯರ್‌ಗಳಿಗಿಂತ ಇದು ದುಬಾರಿ ಎಂಬುದರಲ್ಲಿ ಅನುಮಾನವಿಲ್ಲ. ಇದಕ್ಕೆ ಪರ್ಯಾಯವಾಗಿ ಹೊಸ ರೀತಿಯ ದೇಸಿ ಮದ್ಯಗಳನ್ನು ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡುವ ಉಪಾಯ ಜಾರಿಗೆ ಬಂದಲ್ಲಿ `ಪಾನಲೋಕ'ದಲ್ಲಿ ಕ್ರಾಂತಿಯೇ ಆಗಬಹುದು. ಆ ಸಾಧ್ಯತೆಯಂತೂ ಆಸಕ್ತಿಕರವಾಗಿದೆ. ಗಾಂಧಿ ಮಹಾತ್ಮ ಹೇಳಿದಂತೆ `ಮದ್ಯಪಾನ ಸಲ್ಲದು' ಎಂಬ ಧೋರಣೆ ಇರುವವರಿಗೆ ಈ ಚರ್ಚೆಯೇ ಅನ್ವಯವಾಗದು. ಸರ್ಕಾರವೂ ಈ ನಿಟ್ಟಿನಲ್ಲಿ ಯೋಚಿಸಬಹುದೇನೋ?

ಹಾಗೆ ನೋಡಿದರೆ ಸುರಾಪಾನದ ಮೂಲಗಳು ನಮ್ಮ ಸಂಸ್ಕೃತಿಯಲ್ಲೇ ಇದೆ. ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಸಾರಾಯಿ ಕುಡಿಸಿ, ಗಾಯದ ಉರಿ ಅಥವಾ ನೋವನ್ನು ನೀಗುತ್ತಿದ್ದರು. ಈಗ ನೋಡಿ, ನೀರಾ, ಸಾರಾಯಿ ಮೊದಲಾದ ಪಾನೀಯಗಳು ಕೂಡ ಸಿಗುತ್ತಿಲ್ಲ.

ಲ್ಯಾವೆಲ್ ರಸ್ತೆಯ ಸರ್ಕಲ್‌ನಲ್ಲಿ ಇರುವ `ಬಿಯರ್ ಕ್ಲಬ್'  ಅದು ನಗರದ ಪ್ರಮುಖ `ಮೈಕ್ರೊಬ್ರುವರೀಸ್'ನಲ್ಲಿ ಒಂದು. ಅಲ್ಲಿ ಬಿಯರ್ ವ್ಯಾಪಾರ ಚೆನ್ನಾಗಿಯೇ ಆಗುತ್ತಿದೆಯಂತೆ. ಪಬ್‌ನಂತೆ ಇಕ್ಕಟ್ಟಾಗಿರದ, ಅಲ್ಲಿನಂತೆ ಯುವಕರ ಅಬ್ಬರವಿಲ್ಲದ ತಂಪು ವಾತಾವರಣದಲ್ಲಿ ತಣ್ಣನೆ ಬಿಯರ್ ಕುಡಿಯುತ್ತಾ ಮನೆಮಂದಿಯ ಜೊತೆಗೆ ಮೆಲುದನಿಯಲ್ಲೇ ಮಂಥನ ನಡೆಸುವವರನ್ನು ಅಲ್ಲಿ ಕಾಣಬಹುದು. ಅದು ಒಂಥರಾ `ರೆಸ್ಟೋರೆಂಟ್ ಕಲ್ಚರ್'ಗೆ ಹತ್ತಿರವಾದ ವಾತಾವರಣ. 10,000 ಚದರ ಅಡಿಯಷ್ಟು ವಿಸ್ತೀರ್ಣದ ಜಾಗ ಇದ್ದಲ್ಲಿ ಮಾತ್ರ `ಮೈಕ್ರೊಬ್ರುವರೀಸ್'ಗೆ ಪರವಾನಗಿ ಸಿಗುತ್ತದಂತೆ. ಪಬ್‌ನಲ್ಲಿ ಇರುವಂತೆ ಕಿಕ್ಕಿರಿದ ಜನಸಂದಣಿ ಇಲ್ಲಿ ಇರುವುದಿಲ್ಲ. ಅಂದಹಾಗೆ, ದಿನಕ್ಕೆ ಸರಾಸರಿ 5000 ಲೀಟರ್ ಬಿಯರನ್ನು ಮಾತ್ರ ಪ್ರತಿ `ಮೈಕ್ರೊಬ್ರುವರೀಸ್' ಉತ್ಪಾದಿಸಲು ಅನುಮತಿ ಇದೆಯಂತೆ.

ಬಿಯರನ್ನು `ಬೀರು' ಎಂದು ಅಪಭ್ರಂಶವಾಗಿ ಹೇಳುವುದು ಸಾಮಾನ್ಯ. ಹಾಗಾಗಿ `ನಗರದಲ್ಲಿ ಈಗ ಮೈಕ್ರೊ ಬೀರಬಲ್ಲರ ಕಾಲ' ಎನ್ನಬಹುದು!

ದುಬಾರಿ ಎಳೆನೀರು
ನಗರದಲ್ಲಿ ಎಳೆನೀರಿನ ಬೆಲೆ ವಿಪರೀತ ಏರುತ್ತಿದೆ. 12, 15 ರೂಪಾಯಿಯಿಂದ ಏಕ್‌ದಂ 20ಕ್ಕೆ ಬಂದು ನಿಂತಿತ್ತು. ಈಗ ನಗರದ ಕೆಲವು ಕಡೆಗಳಲ್ಲಿ 25 ರೂಪಾಯಿಗೆ ಒಂದು ಎಳೆನೀರು ಮಾರುವುದನ್ನು ಕಂಡೆ. ಟ್ರಕ್‌ಗಳಲ್ಲಿ ತಂದು ಎಳೆನೀರನ್ನು ಇಳಿಸಿ ಹೋಗುತ್ತಾರೆಯೇ ವಿನಾ ಯಾರೂ ತೋಟಕ್ಕೆ ಹೋಗಿ ಖರೀದಿಸಿ ತರುವುದು ಸಾಧ್ಯವಿಲ್ಲದ ಕಾಲ ಇದು.

`ಡಿಮ್ಯಾಂಡ್' ಹೆಚ್ಚಾಗಿ, `ಸಪ್ಲೈ' ಕಡಿಮೆ ಆಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆಯಂತೆ. ಕಾಫಿ, ಟೀ ಕುಡಿಯುವಷ್ಟು ಸಲೀಸಾಗಿ ಎಳೆನೀರನ್ನು ಹುಡುಕಿ ಕುಡಿಯುವುದು ಸಾಧ್ಯವಿಲ್ಲ.

ಆದರೂ ಹುಡುಕಿಕೊಂಡು ಹೋಗಿ ಎಳೆನೀರನ್ನು ಕುಡಿಯುವ ಅನೇಕ ಜನರಿದ್ದಾರೆ. ಆಯುರ್ವೇದದಲ್ಲಿ ಅದರ ಆರೋಗ್ಯಕರ ಅಂಶಗಳ ಕುರಿತು ಉಲ್ಲೇಖವಿದೆ. ಮೂತ್ರನಾಳದ ಶುದ್ಧೀಕರಣ, ದೇಹದ ಉಷ್ಣತೆ ಕಡಿಮೆ ಮಾಡುವುದು, ವೀರ್ಯವರ್ಧನೆ ಹೀಗೆ ಎಳೆನೀರಿನ ಹಲವು ಲಾಭಗಳನ್ನು ಆಯುರ್ವೇದದ ವೈದ್ಯರು ಪಟ್ಟಿ ಮಾಡುತ್ತಾರೆ. ಇಂಥ ಎಳೆನೀರನ್ನು ಒಂದು ಪ್ರಬಲ ಬ್ರಾಂಡ್ ಆಗಿ ಮಾರುವುದು ಸಾಧ್ಯವಾಗುತ್ತಿಲ್ಲ. ಈಗ ಕೆಲವು ಕಂಪೆನಿಗಳು ಪ್ಲಾಸ್ಟಿಕ್ ಬಾಟಲಿನಲ್ಲಿ ಎಳೆನೀರು ಮಾರುತ್ತಿವೆ.

ಎಳೆನೀರಿಗೆ ಲಿಂಬೆ ಮತ್ತಿತರ `ಫ್ಲೇವರ್'ಗಳನ್ನು ಬೆರೆಸಿ ಮಾರುವ ತಂತ್ರಗಳನ್ನೂ ನೋಡಬಹುದು. ನಾನು ಪ್ಲಾಸ್ಟಿಕ್ ಬಾಟಲಿ ಎಳೆನೀರನ್ನು ಕುಡಿದು ನೋಡಿದೆ. ಅದಕ್ಕೆ ಸಕ್ಕರೆ ಹಾಕಿಬಿಟ್ಟಿದ್ದರು. ಎಳೆನೀರನ್ನು ಕೊಚ್ಚಿ ಕೊಡುವವನನ್ನು ಗುಣಮಟ್ಟದ ದೃಷ್ಟಿಯಿಂದ ಜನ ಅನುಮಾನಿಸಿ ನೋಡಲಾರರು.

ಯಾಕೆಂದರೆ, ಅದು ಮಾರುವವನ ತಪ್ಪಲ್ಲ, ಎಳೆನೀರಿನ ತಪ್ಪು ಎಂಬುದು ಕಣ್ಣಿಗೆ ಕಾಣುವ ಸತ್ಯ. ಅದೇ ಬಾಟಲಿಯಲ್ಲಿ ಸಿಗುವ ಎಳೆನೀರಿನ ವಿಷಯದಲ್ಲಿ ಜನರಿಗೆ ಗುಣಮಟ್ಟ ಖಾತರಿಯ ನಿರೀಕ್ಷೆ ಇರುತ್ತದೆ. ಪ್ಯಾಕ್‌ಗಳಲ್ಲಿ ತುಂಬಿಕೊಡುವ ಎಳೆನೀರಿನ ಗುಣಮಟ್ಟ ನಿಯಂತ್ರಿಸುವ ವ್ಯವಸ್ಥೆ ಬರಬೇಕಿದೆ ಅನ್ನಿಸುತ್ತದೆ.

ಕೆಲವೇ ದಿನಗಳಲ್ಲಿ `ಡಿಮ್ಯಾಂಡ್'ಗೆ ತಕ್ಕಷ್ಟು `ಸಪ್ಲೈ' ಆಗುತ್ತದೆ. ಆಗ ಬೆಲೆ ಕಡಿಮೆ ಆಗಲಿದೆ ಎಂದು ಎಳೆನೀರು ಮಾರುವವರು ಭರವಸೆ ಕೊಡುತ್ತಾರೆ. ದೂರದ ಹಳ್ಳಿಯ ರೈತನಿಗೆ ಈಗಲೂ ಎಳೆನೀರೊಂದಕ್ಕೆ ಸಿಗುವುದು ಸರಾಸರಿ ನಾಲ್ಕೈದು ರೂಪಾಯಿ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT