ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಬೇಸಿಗೆಯಲ್ಲಿ ಹುಟ್ಟಿದ ಮಹಾನ್ ಗುರುಗಳು

Last Updated 26 ಏಪ್ರಿಲ್ 2016, 19:58 IST
ಅಕ್ಷರ ಗಾತ್ರ

ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು ಐನೂರು ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಉರಿಬಿಸಿಲಿಗೆ ಸಡ್ಡು ಹೊಡೆದಂತೆ ಹರಡಿಕೊಂಡಿದ್ದ ಒಂದು ಸುಂದರ ಛತ್ರಿಮರದ ಅಡಿ ಸದ್ದು ಮಾಡದೆ ಕೂತಿದ್ದರು. ಅವತ್ತು ಆ ಕಾಲೇಜು ರೂಪಿಸಿದ್ದ ‘ಚೈತನ್ಯಕ್ಕೆ ಶರಣು’ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ತಮ್ಮ ಅಧ್ಯಾಪಕ, ಅಧ್ಯಾಪಕಿಯರ ಜೊತೆ ಕೂತ ಆ ಹೊಸ ತಲೆಮಾರು ಬಿರುಬಿಸಿಲಿನ ಕಾಲದಲ್ಲಿ ಹುಟ್ಟಿದ ಮಹಾನ್ ಗುರುಗಳ ಬಗ್ಗೆ ಅತಿಥಿಗಳು ಹೇಳಿದ ಮಾತುಗಳನ್ನು ಕೇಳಿಸಿಕೊಳ್ಳುತ್ತಿತ್ತು. ಈ ಮನ ಮುಟ್ಟುವ ದೃಶ್ಯವನ್ನು ನೋಡುತ್ತಿರುವಂತೆ, ಅಲ್ಲಿದ್ದ ಎಲ್ಲರಿಗೂ ನೆರಳು ಕೊಡುತ್ತಿದ್ದ ಆ ಮರ ಅದ್ಭುತ ಸಂಕೇತದಂತೆ ಕಾಣತೊಡಗಿತು. ಕಾರಣ, ಅವತ್ತು ಎಲ್ಲರೂ ನೆನೆಯುತ್ತಿದ್ದ ಬುದ್ಧ, ಬಸವ, ಫುಲೆ, ಅಂಬೇಡ್ಕರ್ ವಿವಿಧ ಕಾಲಘಟ್ಟಗಳಲ್ಲಿ ಈ ನೆಲದಲ್ಲಿ ವೈಚಾರಿಕ ಆಸರೆಗಳನ್ನು ಹಬ್ಬಿಸಿ, ಆ ಮರದಂತೆಯೇ ಹಲವು ತಲೆಮಾರುಗಳ ಜನರಿಗೆ ಆಸರೆಯಾಗಿದ್ದರು.

ಕುದಿವ ಬಿಸಿಲ ಕಾಲದಲ್ಲಿ ತಂಪೆರೆವ ಹಣ್ಣುಗಳನ್ನು ಕೊಡುವ ಪ್ರಕೃತಿಯ ವಿಸ್ಮಯದ ಬಗ್ಗೆ ಕಿ.ರಂ.ನಾಗರಾಜರು ಸಂಭ್ರಮಿಸಿದ್ದು ನೆನಪಾಯಿತು. ಹಾಗೆಯೇ ‘ಬಿಸಿಲಣ್ಣು ಉಂಡೀದಿ; ಬೆಳದಿಂಗಳ ಕಂಡೀದಿ’ ಎಂದು ಗುರುದೇವ ರವೀಂದ್ರರನ್ನು ಕುರಿತ ಬೇಂದ್ರೆಯವರ ಬಣ್ಣನೆ ಈ ಚಿಂತಕರಿಗೆ ನಿಖರವಾಗಿ ಹೊಂದಿಕೊಳ್ಳುವಂತೆ ಕಂಡಿತು. ದಮನಕ್ಕೊಳಗಾದವರಿಗೆ ತಂಪಾದ ಚಿಂತನೆಯ ಫಲಗಳನ್ನು ನೀಡುತ್ತಾ ಬಂದಿದ್ದ ಈ ಚಿಂತಕರು ಈ ನೆಲದಲ್ಲಿ ಕಂದಾಚಾರಿಗಳು ಸೃಷ್ಟಿಸಿದ್ದ ಹಲಬಗೆಯ ಅಸಮಾನತೆಗಳ ಕಾಯಂ ಬಿರುಬೇಸಗೆಯನ್ನು ಹೊಡೆದೋಡಿಸುವ ದಾರಿಗಳನ್ನು ಹುಡುಕುತ್ತಿದ್ದರು. ಸುಮ್ಮನೆ ಅಕಡೆಮಿಕ್ ಕುತೂಹಲದಿಂದ ಗಮನಿಸಿದೆ: ಬುದ್ಧ, ಮಹಾವೀರ, ಬಸವ, ಕನಕದಾಸ, ಜ್ಯೋತಿಬಾ ಫುಲೆ, ಅಂಬೇಡ್ಕರ್, ಜಗಜೀವನರಾಮ್… ಎಲ್ಲರೂ ಉರಿಬಿಸಿಲಿನ ಕಾಲದಲ್ಲೇ ಹುಟ್ಟಿದ್ದರು. ಅವರ ಜೊತೆಗೆ, ಆದ್ಯ ವಚನಕಾರ ದೇವರ ದಾಸಿಮಯ್ಯ, ಕವಯಿತ್ರಿ ಅಕ್ಕಮಹಾದೇವಿ ಕೂಡ ಈ ಕಾಲದಲ್ಲೇ ಹುಟ್ಟಿದ್ದರು.

ಅವತ್ತು ಆ ಕಾರ್ಯಕ್ರಮದ ಚಿಂತನೆ ಮುಖ್ಯವಾಗಿ ಬುದ್ಧ, ಬಸವ, ಫುಲೆ, ಅಂಬೇಡ್ಕರ್ ಸುತ್ತ ಹರಿಯುತ್ತಿತ್ತು. ಬುದ್ಧನ  ವೈಚಾರಿಕತೆ ಆನಂತರ ಬೇರೆ ಬೇರೆ ರೀತಿಯಲ್ಲಿ ಇನ್ನುಳಿದ ಮೂವರಲ್ಲೂ ಬೆಳೆದ ರೀತಿಯಲ್ಲೂ ಒಂದು ನಿರಂತರತೆ ಇವತ್ತು ಕಾಣುತ್ತದೆ. ಎರಡೂವರೆ ಸಾವಿರ ವರ್ಷಗಳ ಕೆಳಗೆ ಗೌತಮ ಮಾನವ ದುಃಖದ ಕಾರಣಗಳನ್ನು ಹುಡುಕಿ ಹೊರಟ. ಈ ದುಃಖಕ್ಕೆ ಮನುಷ್ಯ ಕಾರಣನೋ ಅಥವಾ ಈ ದುಃಖವು ವ್ಯವಸ್ಥೆಯೇ ಸೃಷ್ಟಿಸಿದ ಭೇದಭಾವಗಳಲ್ಲಿದೆಯೋ ಎಂಬ ಬಗ್ಗೆ ಗಾಢವಾಗಿ ಚಿಂತಿಸಿದ. ಜನರನ್ನು ಒಡೆಯುವ ನಾಲ್ಕು ವರ್ಣಗಳ ಕಟ್ಟಳೆಗಳನ್ನು ಧಿಕ್ಕರಿಸಿ, ಅಸ್ಪೃಶ್ಯರನ್ನೂ ಒಳಗೊಂಡು ಎಲ್ಲರೂ ಸೇರುವಂಥ ಸಂಘವನ್ನು, ಧಮ್ಮವನ್ನು ರೂಪಿಸಿದ. ಮೊದಮೊದಲು ಮಹಿಳೆಯರಿಗೆ ಅಲ್ಲಿ ಪ್ರವೇಶವಿರಲಿಲ್ಲ; ನಂತರ ಮಹಿಳೆಯರು ಪರಿವ್ರಾಜಕಿಯರಾಗುವ ಅವಕಾಶ ತೆರೆಯಿತು.

ಬುದ್ಧನ ಸಂಘದ ಈ ಆರಂಭದ ಹಿಂಜರಿಕೆ ಹನ್ನೆರಡನೆಯ ಶತಮಾನದ ವಚನಯುಗದ ಅನುಭವ ಮಂಟಪದಲ್ಲಿ ಇರಲಿಲ್ಲ; ಆವುಗೆ ರಾಯಮ್ಮ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ, ಸೂಳೆ ಸಂಕವ್ವೆ ಮೊದಲಾದವರು ಅನುಭವ ಮಂಟಪದಲ್ಲಿ ಕೂತು ಆಧ್ಯಾತ್ಮಿಕ ಚಿಂತನೆಯಲ್ಲಿ, ಕಟುಸಾಮಾಜಿಕ ವಿಮರ್ಶೆಯಲ್ಲಿ ತೊಡಗಿದ್ದರು. ಹತ್ತೊಂಬತ್ತನೆಯ ಶತಮಾನದಲ್ಲಿ ಜೋತಿಬಾ ಫುಲೆ ತಮ್ಮ ಪತ್ನಿ ಸಾವಿತ್ರಿಗೆ ವಿದ್ಯಾಭ್ಯಾಸ ಕೊಡಿಸಿ, ಅವರನ್ನು ಶಿಕ್ಷಕಿಯನ್ನಾಗಿ ಮಾಡಿದರು; ಹುಡುಗಿಯರಿಗಾಗಿ ಶಾಲೆಗಳನ್ನು ತೆರೆದರು; ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿ ಸಂಪ್ರದಾಯಸ್ಥರ ಅಸಂಬದ್ಧ ನಡೆನುಡಿಗಳನ್ನು ಪ್ರಶ್ನಿಸಿ, ತಿದ್ದಲೆತ್ನಿಸಿದರು. ಬುದ್ಧ, ಫುಲೆ, ಕಬೀರರನ್ನು ತಮ್ಮ ಗುರುಗಳನ್ನಾಗಿ ಸ್ವೀಕರಿಸಿದ ಅಂಬೇಡ್ಕರ್, ಶಿಕ್ಷಣವೂ ಸೇರಿದಂತೆ ಎಲ್ಲ ಹಕ್ಕುಗಳೂ ಎಲ್ಲರಿಗೂ ದೊರೆಯುವಂತೆ ಚಿಂತನೆ, ಹೋರಾಟಗಳನ್ನು ರೂಪಿಸಿದರು.

ಇವೆಲ್ಲವನ್ನೂ ನೋಡುತ್ತಿದ್ದರೆ ಇಂಡಿಯಾದ ಬೃಹತ್ ವೈಚಾರಿಕ ಮಹಾವೃಕ್ಷವೊಂದು ಎರಡೂವರೆ ಸಾವಿರ ವರ್ಷಗಳ ಕೆಳಗೆ ಆಳವಾಗಿ ಬೇರೂರಿ, ಹಲವು ಟೊಂಗೆಗಳಾಗಿ, ನಿರಂತರ ಫಲ ಕೊಡುತ್ತಿರುವ ಅದ್ಭುತ ಚಿತ್ರವೊಂದು ಮೂಡತೊಡಗುತ್ತದೆ… ಈ ನಾಲ್ವರೂ ಮೊದಲು ವ್ಯಕ್ತಿಗಳಾಗಿ ಬಂಡೆದ್ದವರು. ಕ್ಷತ್ರಿಯ ಗೌತಮ ಅರಮನೆ ಬಿಟ್ಟು ಹೊರಟ. ಇತ್ತ ಬಸವಣ್ಣ, ಕವಿ ಹರಿಹರ ಬಣ್ಣಿಸುವಂತೆ, ‘ಕರ್ಮಲತೆಯಂತಿರ್ದ ಜನಿವಾರಮಂ ಕಿತ್ತು ಬಿಸುಟು’ ಹೊರಟ. ಈ ಇಬ್ಬರಲ್ಲೂ ನಿಜವಾದ ಒಳಬಂಡಾಯ ಹಾಗೂ ಮೇಲುಸ್ತರದಲ್ಲಿ ಹುಟ್ಟಿದ ಸೂಕ್ಷ್ಮಜ್ಞರ ಪಾಪಪ್ರಜ್ಞೆ ಎರಡೂ ಸೇರಿ, ನೊಂದವರ ಬಿಡುಗಡೆಗಾಗಿ ಕೆಲಸ ಮಾಡಲು ಅವರನ್ನು ಪ್ರೇರೇಪಿಸಿರಬಹುದು. ಆದರೂ, ಎಂ.ಡಿ. ನಂಜುಂಡಸ್ವಾಮಿಯವರು ಸಂದರ್ಶನವೊಂದರಲ್ಲಿ ಹೇಳಿದಂತೆ ‘ಒಂದು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಬೇಕೆಂದರೆ, ಸಮಾಜದ ದೇಹ ಹಾಗೂ ಮನಸ್ಸು ಎರಡನ್ನೂ ಏಕಕಾಲಕ್ಕೆ ಬದಲಿಸಬೇಕು.

ಬುದ್ಧ ಹಾಗೂ ಬಸವ ಜನರ ಮನಸ್ಸನ್ನು ಮಾತ್ರ ಬದಲಾಯಿಸಲೆತ್ನಿಸಿದರು; ಆದರೆ ಸಮಾಜದ ದೇಹ ಹಾಗೇ ಉಳಿಯಿತು’. ಚರಿತ್ರೆಯ ಈ ಬಗೆಯ ಮಹತ್ತರ ಹೋರಾಟಗಳ ಮಿತಿಗಳು ಮುಂದೆ ಬಂದ ಫುಲೆ ಹಾಗೂ ಅಂಬೇಡ್ಕರ್ ಅವರಿಗೆ ಹೊಳೆದಿದ್ದವು. ಫುಲೆ ತಮ್ಮ ಹೂವಾಡಿಗ ಜಾತಿಯ ಜನ ಮಾತ್ರವಲ್ಲ, ಇಂಥ ಹತ್ತಾರು ಹಿಂದುಳಿದ ಜಾತಿಗಳು ಹಾಗೂ ದಲಿತರನ್ನು ಒಟ್ಟಾಗಿಸಲೆತ್ನಿಸಿದರು. ಅವರ ಮಾನಸಿಕ ಹಾಗೂ ಆರ್ಥಿಕ ಬಿಡುಗಡೆಗೆ, ಅದರಲ್ಲೂ ಕೃಷಿಕ ಸಮುದಾಯದ ಕಷ್ಟಗಳ ಪರಿಹಾರಕ್ಕೆ ಪ್ರಯತ್ನಿಸಿದರು. ಅಂಬೇಡ್ಕರ್ ಸ್ವಂತದ ಅವಮಾನವನ್ನು ಮೀರುವುದಕ್ಕಿಂತ ಮುಖ್ಯವಾಗಿ ಸಮುದಾಯಗಳ ಅವಮಾನಗಳಿಗೆ ಉತ್ತರ ಹುಡುಕಿದರು. ಹೀಗೆ ಈ ಚಿಂತಕರು ಹುಡುಕಿದ ಉತ್ತರಗಳು ಎಲ್ಲ ಜಾತಿ, ವರ್ಗಗಳಿಗೂ ಬಿಡುಗಡೆಯ ಹಾದಿಗಳನ್ನು ತೆರೆದವು. 

ಇಂಡಿಯಾದ ಮನಸ್ಸಿನ ಜಡತೆ ಹಾಗೂ ಗುಲಾಮಗಿರಿಗೆ ಕಾರಣವಾಗಿದ್ದ ವಿಧಿವಾದವನ್ನು ಈ ನಾಲ್ವರೂ ತಿರಸ್ಕರಿಸಿದರು. ಅಂದರೆ, ಮನುಷ್ಯನ ಸ್ಥಿತಿಯನ್ನು ಮನುಷ್ಯನೇ ಬದಲಿಸಬಹುದು ಎಂಬ ನಂಬಿಕೆಯನ್ನು ಜನರ ಮನಸ್ಸಿನಲ್ಲಿ ಮೂಡಿಸಲೆತ್ನಿಸಿದರು. ಜನರ ಮನಸ್ಸನ್ನು ಆಳುತ್ತಿದ್ದ ಶಾಸ್ತ್ರಾಧಾರಗಳನ್ನು ತಿರಸ್ಕರಿಸಿದರು. ಬುದ್ಧ ಸಂದೇಹವನ್ನು ನೋಟಕ್ರಮವನ್ನಾಗಿ ಮಾಡಿ ದೇವರು, ಧರ್ಮಗಳ ಸುತ್ತ ಹಬ್ಬಿದ್ದ ಕಟ್ಟುಕತೆಗಳನ್ನು ತಿರಸ್ಕರಿಸಿದ. ಬಸವಣ್ಣ ‘ಶಾಸ್ತ್ರಕ್ಕೆ ನಿಗಳನಿಕ್ಕುವೆ’ ಎಂದರೆ, ಅಕ್ಕಮಹಾದೇವಿ ‘ವೇದ ಶಾಸ್ತ್ರ ಪುರಾಣಾಗಮಂಗಳೆಲ್ಲ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿಭೋ, ಇವ ಕುಟ್ಟಲೇಕೆ?’ ಎಂದು ದಿಟ್ಟವಾಗಿ ಸಾರಿದರು. ಜೋತಿಬಾ ಫುಲೆ ವಿಧಿವಿಧಾನಗಳ ಕಗ್ಗಂಟುಗಳನ್ನು ಸೃಷ್ಟಿಸಿದ್ದ ಶಾಸ್ತ್ರಗಳನ್ನು ತಿರಸ್ಕರಿಸಿ, ಅದರ ಬದಲಿಗೆ ಆಧುನಿಕ ವೈಚಾರಿಕ ವಿದ್ಯೆಯನ್ನು ಕೊಡುವ ಚಳವಳಿಯನ್ನೇ ಶುರು ಮಾಡಿದರು.

ಅಂಬೇಡ್ಕರ್ ‘ಶಾಸ್ತ್ರಗಳನ್ನು ಹೊಸದಾಗಿ ವಿವರಿಸುವುದರಿಂದ ಏನೂ ಪ್ರಯೋಜನವಿಲ್ಲ’ ಎಂದು ಅವನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಹೇಳಿದರು. ಮನುಧರ್ಮಶಾಸ್ತ್ರವನ್ನು ಸುಟ್ಟರು. ಆದರೆ ಜನಸಮುದಾಯಕ್ಕೆ ಧರ್ಮದ ಅಗತ್ಯವಿದೆ ಎಂದು ತೀವ್ರವಾಗಿ ಅನ್ನಿಸಿದಾಗ, ಬೌದ್ಧಧರ್ಮವನ್ನು ವೈಚಾರಿಕ ಮನಸ್ಸಿಗೆ ಒಪ್ಪಿಗೆಯಾಗುವಂತೆ ಮರುರೂಪಿಸಿದರು. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಗಳನ್ನು ನಾನು ಫ್ರೆಂಚ್ ಕ್ರಾಂತಿಯಿಂದ ಕಲಿಯಲಿಲ್ಲ; ಬದಲಿಗೆ ನನ್ನ ಗುರು ಬುದ್ಧನಿಂದ ಕಲಿತೆ’ ಎಂದ ಅಂಬೇಡ್ಕರ್ ಈ ಮೂರು ಲಕ್ಷಣಗಳುಳ್ಳ ಧರ್ಮ ಮಾತ್ರ ಅನುಸರಿಸಲು ಯೋಗ್ಯ ಎಂದು ಹೇಳಿದರು. ಬಸವಣ್ಣನ ಮಹತ್ವವನ್ನೂ ಅರಿತಿದ್ದ ಅಂಬೇಡ್ಕರ್ ನಿಜಲಿಂಗಪ್ಪನವರಿಗೆ ಬರೆದ ಪತ್ರದಲ್ಲಿ, ಮಹಾನ್ ಚಿಂತಕರಾಗಿ ವಿಕಾಸಗೊಳ್ಳಬಹುದಾಗಿದ್ದ ಬಸವಣ್ಣನವರ ಪ್ರಭಾವವನ್ನು ಲಿಂಗಾಯತರು ಸೀಮಿತಗೊಳಿಸಿದ್ದನ್ನು ಒತ್ತಿ ಹೇಳಿದ್ದರು.

ಬುದ್ಧನ ಕಾಲದಲ್ಲಿ ಈ ನೆಲದ ನಿಜವಾದ ನಾಗರಿಕತೆಯ ಯುಗ ಶುರುವಾಯಿತು ಎಂಬುದನ್ನು ಅಂಬೇಡ್ಕರ್ ಗುರುತಿಸುತ್ತಾರೆ. ಎಲ್ಲ ವರ್ಣಗಳೂ ವರ್ಗಗಳೂ ಒಂದೆಡೆ ಕೂತು ತಂತಮ್ಮ ಆಲೋಚನೆಯನ್ನು ಹಂಚಿಕೊಳ್ಳುವ ಬುದ್ಧನ ‘ಸಂಘ’ದ ನಂತರ ಅನುಭವ ಮಂಟಪ, ಸತ್ಯಶೋಧಕ ಸಮಾಜ, ಅಂಬೇಡ್ಕರ್ ರೂಪಿಸಿದ ಸಂಘಟನೆಗಳು ಈ ದೇಶವನ್ನು ಪ್ರಜಾಪ್ರಭುತ್ವಕ್ಕೆ ಅಣಿ ಮಾಡಿದವು. ಈ ಚಿಂತಕರು ತಮ್ಮ ಚಿಂತನೆಗಳನ್ನು ಜನರಿಗೆ ನೇರವಾಗಿ ತಲುಪಿಸಲು ಸ್ಪಷ್ಟ, ಸರಳ ಭಾಷೆಯನ್ನು ಬಳಸಿದ್ದನ್ನು ಕೂಡ ಗಮನಿಸಬೇಕು. ಈ ನಾಲ್ವರ ಚಿಂತನೆಗಳೂ ವ್ಯಾಖ್ಯಾನಕಾರರ ನೆರವಿಲ್ಲದೆಯೂ ನಮಗೆ ತಲುಪುತ್ತವೆ. ಸಾಧ್ಯವಾದಷ್ಟೂ ಕಾರ್ಯರೂಪಕ್ಕೆ ತರಬಲ್ಲ ಚಿಂತನೆಯನ್ನು, ಚಿಂತನೆಗೆ ತಕ್ಕ ಭಾಷೆಯನ್ನು ಅವರು ತಂತಮ್ಮ ದೇಶಭಾಷೆಗಳಲ್ಲಿ ರೂಪಿಸಿದರು; ಅಂಬೇಡ್ಕರ್ ಮರಾಠಿ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನೇರ, ಸರಳ ಗದ್ಯವನ್ನು ಬಳಸಿದರು.

ಬುದ್ಧ, ಬಸವರು ಭಾಷೆಯನ್ನು ಬಳಸುವಾಗ ಸದಾ ತಮ್ಮನ್ನು ತಾವು ಪರೀಕ್ಷೆ ಮಾಡಿಕೊಳ್ಳುವ ಕ್ರಮ, ಪದಗಳ ಬಳಕೆಯಲ್ಲಿ ತೋರುವ ನೈತಿಕ ಎಚ್ಚರ ಕೂಡ ಈ ಕಾಲದಲ್ಲಿ ಮಾತು, ಬರಹಗಳನ್ನು ಬಳಸುವ ಎಲ್ಲರಿಗೂ ಉತ್ತಮ ಮಾದರಿಗಳಾಗಿವೆ. ತಮ್ಮ ಕಾಲದ ಜನಬಳಕೆಯ ಹಾದಿಗಿಂತ ಭಿನ್ನವಾದ ಹಾದಿ ತುಳಿದಿದ್ದರಿಂದ ಎದುರಾದ ಅಡ್ಡಿ, ಆತಂಕಗಳನ್ನು ಈ ಚಿಂತಕರು ಎದುರಿಸಿದ ರೀತಿ ಕೂಡ ನಮಗೆ ಸ್ಫೂರ್ತಿಯಾಗಬಲ್ಲದು. ಅಂಬೇಡ್ಕರ್ ತಮ್ಮ ಜೀವಿತದ ಕೊನೆಗೆ ‘ನಾನು ನಾನು ಜೀವನದಲ್ಲಿ ಈ ಎಲ್ಲ ಕೆಲಸಗಳನ್ನು ಮಾಡುವಾಗ, ತೀವ್ರ ಯಾತನೆಗಳನ್ನು, ಕೊನೆಯಿಲ್ಲದ ಕಿರುಕುಳಗಳನ್ನು ಎದುರಿಸುತ್ತಾ, ನನ್ನ ವಿರೋಧಿಗಳ ವಿರುದ್ಧ ಸೆಣಸುತ್ತಾ ಬಂದಿದ್ದೇನೆ’ ಎನ್ನುತ್ತಾರೆ; ಈ ಮಾತು ಉಳಿದ ಮೂವರು ಚಿಂತಕರಿಗೂ ಅನ್ವಯಿಸುತ್ತದೆ.

ಇಂಡಿಯಾದ ಒಂದು ದೊಡ್ಡ ವೈಚಾರಿಕ ಪರಂಪರೆಯ ನಾಲ್ಕು ದೃಢವಾದ ಕಂಬಗಳಂತಿರುವ ಈ ನಾಲ್ವರನ್ನೂ ಕರ್ನಾಟಕದ ದಲಿತ ಚಳವಳಿ ಸದಾ ಸ್ಮರಿಸುತ್ತಿದ್ದುದು, ಆನಂತರ ಬಹುಜನ ಸಮಾಜ ಪಕ್ಷ ಕರ್ನಾಟಕದಲ್ಲಿ ಅವರನ್ನು ಮುಖ್ಯ ಸಾಂಸ್ಕೃತಿಕ ನಾಯಕರಾಗಿ ಬಿಂಬಿಸಿದ್ದು ನೆನಪಾಗುತ್ತದೆ. ದಲಿತ ಚಳವಳಿ ಹಾಗೂ ಬಿ.ಎಸ್.ಪಿ. ಈ ಬಗೆಯ ಚಿಂತಕರನ್ನು ಒಟ್ಟಿಗೆ ಬೆಸೆಯಹೊರಟಿದ್ದರ ಹಿಂದೆ ಇದ್ದ ದೂರದೃಷ್ಟಿ ಇಂಡಿಯಾದ ಬಹುತೇಕ ಬುದ್ಧಿಜೀವಿಗಳಿಗೆ ಹಾಗೂ ರಾಜಕೀಯ ವಿಶ್ಲೇಷಕರಿಗೆ ಕಾಣದೇ ಹೋದದ್ದು ನಿಜಕ್ಕೂ ವಿಚಿತ್ರವಾಗಿದೆ. ಕೋಮುವಾದಿಗಳು, ಜಾತಿವಾದಿಗಳು, ಜಾಗತೀಕರಣವಾದಿಗಳು ಬಿಂಬಿಸುತ್ತಿರುವ ಹುಸಿ ‘ಸಾಂಸ್ಕೃತಿಕ’ ನಾಯಕರ ಎದುರು ಇಂಥ ಶ್ರೇಷ್ಠ ಸಾಂಸ್ಕೃತಿಕ ನಾಯಕರನ್ನು ಬಿಂಬಿಸುವ ಸಾಂಸ್ಕೃತಿಕ ರಾಜಕಾರಣಕ್ಕೆ ಚಾರಿತ್ರಿಕ ಮಹತ್ವವಿದೆ. ಈ ಬಗೆಯ ಮಂಡನೆಯ ಮೂಲಕವೂ ಒಂದು ಸೀಮಿತ ಮಟ್ಟದಲ್ಲಾದರೂ ಈ ಚಿಂತನೆಗಳು ಹೊಸ ತಲೆಮಾರುಗಳಲ್ಲಿ ಹಬ್ಬುತ್ತಾ ಹೋಗುತ್ತವೆ. ಪ್ರತಿ ತಲೆಮಾರೂ ಈ ವೈಚಾರಿಕ ಬೆಳಕನ್ನು ಮುಂದಕ್ಕೆ ಒಯ್ಯುತ್ತಿರಬೇಕಾಗುತ್ತದೆ. 

ಕೊನೆ ಟಿಪ್ಪಣಿ: ಸತ್ಯಶೋಧಕ ಸಮಾಜ ಮತ್ತು ಅನುಭವ ಮಂಟಪ ಅಂಬೇಡ್ಕರ್ ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯಲು ನೆರವಾದ ಶಾಹು ಮಹಾರಾಜ್ ಸತ್ಯಶೋಧಕ ಸಮಾಜದ ಬೆಂಬಲಿಗರಲ್ಲೊಬ್ಬರಾಗಿದ್ದರು. ಒಮ್ಮೆ ಸತ್ಯಶೋಧಕ ಸಮಾಜದ ಕಾರ್ಯಕರ್ತ ಬಾಬುರಾವ್ ಯಾದವ್, ಶಾಹು ಮಹಾರಾಜರನ್ನು ಭೇಟಿ ಮಾಡಬೇಕಾಗಿತ್ತು. ಆತ ಕೊಂಚ ತಡವಾಗಿ ಬಂದ. ‘ಯಾಕೆ ತಡವಾಯಿತು?’ ಎಂದು ಮಹಾರಾಜ ಕೇಳಿದಾಗ, ಆತ ತಾನು ಹೊಡೆದುಕೊಂಡು ಬಂದಿದ್ದ ಎತ್ತಿನಗಾಡಿಯಲ್ಲಿ ಪೇರಿಸಿಟ್ಟಿದ್ದ ಕುಂಕುಮ ಬಳಿದಿದ್ದ ಕಲ್ಲುಗಳನ್ನು ತೋರಿಸುತ್ತಾ ಹೇಳಿದ: ‘ನಿಮ್ಮ ಮನೆಗೆ ಬರುವ ದಾರಿಯಲ್ಲಿ ಸಿಕ್ಕ ಈ ಕುಂಕುಮ ಬಳಿದ ಕಲ್ಲುಗಳನ್ನು ಎತ್ತಿ ಹಾಕಿಕೊಂಡು ಬರಬೇಕಾಗಿತ್ತು; ಯಾಕೆಂದರೆ ಹೊಲಗಳ ಬದುಗಳ ಮೇಲೆ ಕೂತ ಈ ಕಲ್ಲುಗಳು ಹಳ್ಳಿಯವರನ್ನೆಲ್ಲಾ ಕಲ್ಲಾಗಿ ಮಾಡುತ್ತಿದ್ದವು!’

ಮೂಢನಂಬಿಕೆಗಳ ವಿರುದ್ಧ ಹತ್ತೊಂಬತ್ತನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಇಂಥ ಹೋರಾಟಕ್ಕೆ ಶಾಹು ಮಹಾರಾಜರ ಬೆಂಬಲವಿತ್ತು. ಅದು ಮಹಾರಾಷ್ಟ್ರದಲ್ಲಿ ಇಪ್ಪತ್ತೊಂದನೆಯ ಶತಮಾನದಲ್ಲಿ ಮೂಢನಂಬಿಕೆ ವಿರೋಧಿ ಕಾನೂನಿಗೂ ದಾರಿ ಮಾಡಿಕೊಟ್ಟಿತು. ಈಚೆಗೆ ಕರ್ನಾಟಕದಲ್ಲೂ ಇಂಥದೊಂದು ಚರ್ಚೆ ಶುರುವಾಗಿರುವಾಗ, ಸನಾತನಿಗಳು, ಜಗದ್ಗುರುಗಳು, ಯಥಾಸ್ಥಿತಿವಾದಿಗಳು ಅದರ ವಿರುದ್ಧ ನಡೆಸಿರುವ ಅವೈಚಾರಿಕ ಚೀರಾಟ ಅತ್ಯಂತ ಅಶ್ಲೀಲವಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಇಲ್ಲಿ ಬಸವಣ್ಣ ಹುಟ್ಟಿದ್ದನ್ನೇ ಇಂಥವರು ಮರೆತಂತಿದೆ; ಇನ್ನು ಅನುಭವ ಮಂಟಪ ಮೂಡಿಸಿದ ವೈಚಾರಿಕ ಎಚ್ಚರವನ್ನು, ದಾಸಿಮಯ್ಯನವರ ಮಾತಿನಲ್ಲೇ ಹೇಳಬಹುದಾದರೆ, ‘ಈ ಲೋಕದ ಜಡರೆತ್ತ ಬಲ್ಲರು?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT