ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಕಟ್ಟು ಬದುಕಿಗಾಗಿ ಸೆಣಸಿದ ಆದಿವಾಸಿ

Last Updated 1 ಫೆಬ್ರುವರಿ 2018, 19:41 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಜೀವನ ಚರಿತ್ರೆ ಎಂಬುದು ಅಭಿವೃದ್ಧಿ ಹೊಂದಿಲ್ಲದ ಪ್ರಕಾರ. ಜೀವಿಸಿರುವವರ ಮುಖಸ್ತುತಿ ಮಾಡುವುದು ಹೇಗೆ ಎಂಬುದು ಭಾರತೀಯರಾದ ನಮಗೆ ಗೊತ್ತು. ಆದರೆ ಗತಿಸಿ ಹೋದವರ ಬಗ್ಗೆ ಒಳನೋಟಗಳ ಜತೆಗೆ ಅಧಿಕಾರಯುತವಾಗಿ ಬರೆಯುವುದು ನಮಗೆ ತಿಳಿಯದು. ನಮ್ಮ ಪ್ರಮುಖ ರಾಷ್ಟ್ರೀಯ ನಾಯಕರ ಬಗ್ಗೆ (ಮೃತಪಟ್ಟವರು ಮತ್ತು ಈಗಿನವರು) ಪುಸ್ತಕಗಳಿವೆ. ಆದರೆ ಅವುಗಳಲ್ಲಿ ಪಾಂಡಿತ್ಯಪೂರ್ಣ ಅಥವಾ ಸಾಹಿತ್ಯ ಎಂದು ಪರಿಗಣಿಸಬಹುದಾದವು ಬಹಳ ಕಡಿಮೆ (ಗೋಖಲೆ ಬಗ್ಗೆ ಬಿ.ಆರ್‍. ನಂದಾ, ಪಟೇಲ್‍ ಬಗ್ಗೆ ರಾಜಮೋಹನ್‍ ಗಾಂಧಿ ಮತ್ತು ರಾಧಾಕೃಷ್ಣನ್‍ ಬಗ್ಗೆ ಎಸ್‍.ಗೋಪಾಲ್‍ ಬರೆದಿರುವುದನ್ನು ಬಿಟ್ಟರೆ).

ಈ ಕೊರತೆಯು ರಾಜಕೀಯ ಅಥವಾ ಸಾರ್ವಜನಿಕ ವ್ಯವಹಾರಗಳ ಕ್ಷೇತ್ರಗಳಿಗೆ ಮಾತ್ರ ಸೀಮಿತವಲ್ಲ. ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದ ಬಗ್ಗೆಯೂ ಇದನ್ನೇ ಹೇಳಬಹುದು. ಕನ್ನಡದ ಮೇರು ಲೇಖಕ ಶಿವರಾಮ ಕಾರಂತ, ಬಂಗಾಳಿ ಲೇಖಕಿ ಮತ್ತು ಹೋರಾಟಗಾರ್ತಿ ಮಹಾಶ್ವೇತಾದೇವಿ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಭಾವ ಹೊಂದಿರುವ ಸಂಗೀತಗಾರ ರವಿಶಂಕರ್‍ ಅಂಥವರ ಬಗ್ಗೆ ಆಳವಾದ ಸಂಶೋಧನೆ ನಡೆಸಿ ಬರೆದ ಜೀವನ ಚರಿತ್ರೆಗಳನ್ನು ಓದಲು ನಾನು ಇಷ್ಟಪಡುತ್ತೇನೆ. ಆದರೆ ಅಂತಹ ಪುಸ್ತಕಗಳು ಇಲ್ಲ.

ಕೊನೆಗೂ ಈ ಸ್ಥಿತಿ ಬದಲಾಗುವಂತೆ ಕಾಣಿಸುತ್ತಿದೆ. ನಾಲ್ವರು ಯುವ ಪ್ರತಿಭಾವಂತ ಲೇಖಕರು ಜೀವನಚರಿತ್ರೆ ಬರೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ನಾಲ್ಕೂ ಜೀವನಚರಿತ್ರೆಗಳು ಇಂಗ್ಲಿಷ್‌ನಲ್ಲಿ ಬರಲಿವೆ. ಈ ಮಧ್ಯೆ, ಹಿಂದಿಯಲ್ಲಿ ಇತ್ತೀಚೆಗೆ ಪ್ರಕಟವಾದ ಆಸಕ್ತಿಕರ ಜೀವನ ಚರಿತ್ರೆಯೊಂದನ್ನು ನಾನು ನೋಡಿದೆ. ಇದನ್ನು ಬರೆದವರು ಹಿರಿಯ ಪತ್ರಕರ್ತ ಸುದೀಪ್‌ ಠಾಕೂರ್‌. ಆದಿವಾಸಿ ಹೋರಾಟಗಾರ ಲಾಲ್‌ ಶ್ಯಾಮ್‌ ಶಾ ಅವರ ಜೀವನಚರಿತ್ರೆ ಇದು. ಶಾ ಅವರು ತಮ್ಮ ತಾಯ್ನಾಡು ಗೊಂಡ್ವಾನಾದಲ್ಲಿ ಬಹಳ ಪ್ರಸಿದ್ಧ ವ್ಯಕ್ತಿ. ಆದರೆ ಅವರ ಕೆಲಸ ಮತ್ತು ಅವರು ಹಾಕಿಕೊಟ್ಟ ನಿದರ್ಶನ ದೇಶದಾದ್ಯಂತ ಪ್ರತಿಧ್ವನಿಸಿದೆ.

ಶಾ ಅವರು ಬುಡಕಟ್ಟು ಜನಾಂಗದ ಶ್ರೀಮಂತ ಕುಟುಂಬವೊಂದರಲ್ಲಿ 1919ರಲ್ಲಿ ಜನಿಸಿದರು. ಭಾರಿ ಪ್ರಮಾಣದ ಜಮೀನು ಮತ್ತು ಅರಣ್ಯ ಅವರಿಗೆ ಇತ್ತು. ಅವರೂ ಎಲ್ಲರ ಹಾಗೆಯೇ ಆಲಸಿತನದ ಜಮೀನ್ದಾರಿ ಬದುಕು ನಡೆಸಬಹುದಿತ್ತು. ಆದರೆ, ಅದರ ಬದಲಿಗೆ ತಮ್ಮ ಜನರ ಸೇವೆ ಮಾಡುವುದನ್ನು ಅವರು ಆಯ್ಕೆ ಮಾಡಿಕೊಂಡರು. ಆದಿವಾಸಿ ಮಹಾಸಭಾದ ನಾಯಕರಾಗಿದ್ದ ಶಾ, ಜಮೀನು ಮತ್ತು ಅರಣ್ಯದ ಮೇಲೆ ಬುಡಕಟ್ಟು ಜನರು ಹೊಂದಿರುವ ಹಕ್ಕುಗಳ ರಕ್ಷಣೆಗೆ ಮತ್ತು ಬುಡಕಟ್ಟು ಇತಿಹಾಸ ಮತ್ತು ಸಂಸ್ಕೃತಿಯ ಗೌರವವನ್ನು ಉಳಿಸಿ
ಕೊಳ್ಳಲು ಹೋರಾಡಿದರು. ಮಧ್ಯ ಭಾರತದಾದ್ಯಂತ ವ್ಯಾಪಕವಾಗಿ ಸುತ್ತಾಡುತ್ತಿದ್ದ ಅವರ ಮೇಲೆ ಈ ಪ್ರದೇಶದ ಆದಿವಾಸಿಗಳಿಗೆ ಬಹಳ ಪ್ರೀತಿ ಮತ್ತು ಗೌರವ ಇತ್ತು.

ಸ್ವಾತಂತ್ರ್ಯದ ಬಳಿಕ ಯಾವುದೇ ಪಕ್ಷ ಸೇರದೆ ಪಕ್ಷೇತರನಾಗಿಯೇ ಇರಲು ಬಯಸಿದರು. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಅವರು ಅಲ್ಪ ಅಂತರದಲ್ಲಿ ಸೋತರು. ಆದರೆ ಪ್ರತಿಸ್ಪರ್ಧಿಯ ಗೆಲುವನ್ನು ನ್ಯಾಯಾಲಯವು ರದ್ದುಪಡಿಸಿತು. ಅಲ್ಲಿ ನಡೆದ ಉಪಚುನಾವಣೆಯಲ್ಲಿ ಶಾ ಗೆದ್ದರು. ಆದರೆ, ಸ್ವಲ್ಪ ಕಾಲದ ಬಳಿಕ  ವಿಧಾನಸಭೆಗೆ ರಾಜೀನಾಮೆ ನೀಡಿದರು. ಗುತ್ತಿಗೆದಾರರು, ಅಧಿಕಾರಿಗಳು ಮತ್ತು ರಾಜಕಾರಣಿಗಳಿಂದ ಆದಿವಾಸಿಗಳ ಶೋಷಣೆ ಮುಂದುವರಿದಿರುವುದರ ಬಗ್ಗೆ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ವಿಷಾದದಿಂದ ಬರೆದಿದ್ದರು. ಆದಿವಾಸಿಗಳು ಹೇಗೆ ಕಸದ ಬುಟ್ಟಿಗೆ ಸೀಮಿತರಾಗಿದ್ದಾರೆ ಮತ್ತು ಪ್ರಭಾವಿ ಉದ್ಯಮಿಗಳ ಮುಂದೆ ರಾಜಕಾರಣಿಗಳು ಹೇಗೆ ನಡು ಬಗ್ಗಿಸುತ್ತಿದ್ದಾರೆ ಎಂಬುದನ್ನೂ ಅವರು ಬರೆದಿದ್ದರು.

ಶಾ ನಡೆಸಿದ ವಿವಿಧ ಅಭಿಯಾನಗಳನ್ನು ಠಾಕೂರ್‍ ಕಟ್ಟಿಕೊಟ್ಟಿದ್ದಾರೆ. ಶಾ ವಿಧಾನಸಭೆ ಮತ್ತು ಲೋಕಸಭೆಗೆ ಸ್ಪರ್ಧಿಸಿ ಕೆಲವಲ್ಲಿ ಗೆದ್ದ, ಕೆಲವನ್ನು ಸೋತ ಹಲವು ಚುನಾವಣಾ ಹೋರಾಟಗಳನ್ನು ದಾಖಲಿಸಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳ ಮೇಲೆ ಆದಿವಾಸಿಗಳ ಹಕ್ಕನ್ನು ದೃಢಪಡಿಸುವುದಕ್ಕಾಗಿ ಅಥವಾ ಬುಡಕಟ್ಟು ಸಮುದಾಯಗಳನ್ನು ಸ್ಥಳಾಂತರಗೊಳಿಸುವ ವಿನಾಶಕಾರಿ ಯೋಜನೆಗಳ ವಿರುದ್ಧ ಚುನಾವಣಾ ಕ್ಷೇತ್ರದ ಹೊರಗೆ ಅವರು ನಡೆಸಿದ ಹೋರಾಟಗಳಿಗೆ ಠಾಕೂರ್‍ ಹೆಚ್ಚು ಗಮನ ಹರಿಸಿದ್ದಾರೆ. ಬುಡಕಟ್ಟು ಜನರು ಬಹುಸಂಖ್ಯಾತರಾಗಿರುವ ‘ಗೊಂಡ್ವಾನಾ’ ಪ್ರಾಂತ್ಯ ರಚನೆಗೆ ನಡೆದ ಅಭಿಯಾನದಲ್ಲಿ ಶಾ ಮಹತ್ವದ ಪಾತ್ರ ವಹಿಸಿದ್ದರು (ಇದು ಯಶಸ್ಸು ಪಡೆಯದ್ದು ವಿಷಾದನೀಯ). ಅದು ಯಶಸ್ವಿಯಾಗಿದ್ದರೆ ಈಗಿನ ಛತ್ತೀಸಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾಗಳಲ್ಲಿ ಹಂಚಿ ಹೋಗಿರುವ ಒಂದಕ್ಕೊಂದು ತಾಗಿಕೊಂಡಿರುವ, ಬುಡಕಟ್ಟು ಜನರು ಬಹುಸಂಖ್ಯಾತರಾಗಿರುವ ಗುಡ್ಡ ಮತ್ತು ಅರಣ್ಯಗಳಿಂದ ಕೂಡಿದ ವಿಸ್ತಾರ ಪ್ರದೇಶ ಒಂದು ಪ್ರಾಂತ್ಯವಾಗುತ್ತಿತ್ತು.

ಶಾ ಅವರು ಚಿಂತಕ ಮತ್ತು ಹೋರಾಟಗಾರ ಎರಡೂ ಆಗಿದ್ದರು ಎಂಬುದನ್ನು ಠಾಕೂರ್‍ ಚಿತ್ರಿಸಿದ್ದಾರೆ. ಆದಿವಾಸಿ ಬಿಕ್ಕಟ್ಟುಗಳು ಮತ್ತು ಕಾನೂನು ಚೌಕಟ್ಟಿನ ಬಗ್ಗೆ ಅವರಿಗೆ ಆಳವಾದ ಅರಿವಿತ್ತು. ಸಂವಿಧಾನವು ದೇಶದ ರಾಷ್ಟ್ರಪತಿ ಮತ್ತು ರಾಜ್ಯಗಳ ರಾಜ್ಯಪಾಲರನ್ನು ಆದಿವಾಸಿ ಹಕ್ಕುಗಳ ರಕ್ಷಕರನ್ನಾಗಿ ಮಾಡಿದೆ. ಆದರೆ ಈ ಉನ್ನತ ಸ್ಥಾನಗಳಲ್ಲಿ ಇದ್ದವರು ತಮ್ಮ ವಿವೇಚನೆ ಮತ್ತು ಹೊಣೆಗಾರಿಕೆಯನ್ನು
ಕೈಬಿಟ್ಟು ಹೆಚ್ಚು ಪ್ರಭಾವಶಾಲಿ ಆರ್ಥಿಕ ಹಿತಾಸಕ್ತಿಗಳ ದಯೆಯಲ್ಲಿ ಆದಿವಾಸಿಗಳು ಇರುವಂತೆ ಮಾಡಿದ್ದಾರೆ ಎಂದು ಶಾ ವಾದಿಸುತ್ತಿದ್ದರು. ತಳಮಟ್ಟದಲ್ಲಿ, ಆದಿವಾಸಿಗಳನ್ನು ಲೇವಾದೇವಿಗಾರರ ಹಿಡಿತದಿಂದ ಬಿಡಿಸಿಕೊಳ್ಳಲು ಅವರು ಕೆಲಸ ಮಾಡಿದ್ದಾರೆ. ಹಲವು ಪ್ರಕರಣಗಳಲ್ಲಿ ವೈಯಕ್ತಿಕವಾಗಿ ನೆರವಾಗಿದ್ದಾರೆ.

1960ರ ಅಕ್ಟೋಬರ್‌ನಲ್ಲಿ ಶಾ ಮತ್ತು ಜವಾಹರಲಾಲ್‍ ನೆಹರೂ ಅವರ ನಡುವೆ ರಾಯಪುರದಲ್ಲಿ ನಡೆದ ಭೇಟಿಯ ಬಗೆಗಿನ ಲವಲವಿಕೆಯ ವಿವರಣೆಯೇ ಈ ಪುಸ್ತಕದಲ್ಲಿ ಅತಿ ಹೆಚ್ಚು ಗಮನ ಸೆಳೆಯುವ ಭಾಗ. ಈಗ ಛತ್ತೀಸಗಡದ ರಾಜಧಾನಿಯಾಗಿರುವ ಈ ನಗರದಲ್ಲಿ ಅಖಿಲ ಭಾರತ ಕಾಂಗ್ರೆಸ್‍ ಸಮಿತಿಯ (ಎಐಸಿಸಿ) ಸಭೆ ನಡೆದಿತ್ತು. ಅದರಲ್ಲಿ ನೆಹರೂ ಭಾಗವಹಿಸಿದ್ದರು. ಆದಿವಾಸಿಗಳ ಬೇಡಿಕೆಗಳನ್ನು ನೇರವಾಗಿ ಪ್ರಧಾನಿಯವರ ಗಮನಕ್ಕೆ ತರುವುದು ಶಾ ಅವರ ಯೋಚನೆಯಾಗಿತ್ತು. ಅದಕ್ಕಾಗಿ ಅವರು ಪಾದಯಾತ್ರೆಯೊಂದನ್ನು ಸಂಘಟಿಸಿದರು. ಸಾವಿರಾರು ಆದಿವಾಸಿಗಳು ತಮ್ಮ ಗ್ರಾಮಗಳಿಂದ ನಡೆದು ಬಂದರು. ರಾಯಪುರದಲ್ಲಿ ಸೇರಿದ ಜನರು ಎಐಸಿಸಿ ಅಧಿವೇಶನ ನಡೆಯುವ ಸ್ಥಳದಿಂದ ಒಂದು ಮೈಲು ದೂರದಲ್ಲಿರುವ ಮೈದಾನದಲ್ಲಿ ಉಳಿದುಕೊಂಡರು.

ಇಲ್ಲಿ ಸೇರಿದ್ದ ಆದಿವಾಸಿಗಳಿಗೆ ಪ್ರಧಾನಿಯ ಮುಂದಿಡಲು ಹಲವು ಬೇಡಿಕೆಗಳಿದ್ದವು. ಪ್ರತ್ಯೇಕ ಗೊಂಡ್ವಾನಾ ರಾಜ್ಯ ಮತ್ತು ಆದಿವಾಸಿಗಳ ಆರ್ಥಿಕ ಸುರಕ್ಷತೆಗಾಗಿ ಸರ್ಕಾರಿ ನೀತಿ ರಚನೆ ಇವುಗಳಲ್ಲಿ ಸೇರಿದ್ದವು. ನೆಹರೂ ಮತ್ತು ಭಾರತದ ಹೆಮ್ಮೆ ಹಾಗೂ ಸಂಭ್ರಮವಾಗಿದ್ದ ಬೃಹತ್‍ ಭಿಲಾಯಿ ಉಕ್ಕಿನ ಕಾರ್ಖಾನೆಯು ರಾಯಪುರದ ಹತ್ತಿರದಲ್ಲಿಯೇ ನಿರ್ಮಾಣವಾಗಲಿತ್ತು. ಕಾರ್ಖಾನೆ ನಿರ್ಮಾಣವಾಗುವ ಜಿಲ್ಲೆಯಲ್ಲಿ ದೀರ್ಘ ಕಾಲದಿಂದ ನೆಲೆಯಾಗಿದ್ದ ಆದಿವಾಸಿಗಳು ಈ ಜಿಲ್ಲೆಯ ಮಣ್ಣಿನ ಮಕ್ಕಳಾಗಿದ್ದರೂ ಕಾರ್ಖಾನೆಯಲ್ಲಿ ಅವರಲ್ಲಿ ಕೆಲವರಿಗೆ ಮಾತ್ರ ಕೆಲಸ ಸಿಗುತ್ತಿತ್ತು.

ಆದಿವಾಸಿಗಳ ಜತೆಗೆ ನೆಹರೂ ಮಾತನಾಡಬೇಕು ಎಂಬುದು ಶಾ ಅವರ ಬಯಕೆಯಾಗಿತ್ತು. ಆದರೆ, ನೆಹರೂ ಎಐಸಿಸಿ ಅಧಿವೇಶನದಲ್ಲಿ ಮಾತ್ರ ಭಾಗವಹಿಸಬೇಕು ಎಂದು ಅವರನ್ನು ನೋಡಿಕೊಳ್ಳುತ್ತಿದ್ದವರು ಬಯಸಿದ್ದರು. ಹಾಗಾಗಿ, ನೆಹರೂ ತಂಗಿದ್ದ ಸ್ಥಳಕ್ಕೆ ಶಾ ಅವರು ದಿಟ್ಟವಾಗಿ ನಡೆದು ಹೋದರು. ‘ನನ್ನ ಸಹಜೀವಿಗಳು ನಿಮ್ಮೊಂದಿಗೆ ಮಾತನಾಡುವುದಕ್ಕಾಗಿ ದಿನಗಟ್ಟಲೆ ನಡೆದು ಇಲ್ಲಿಗೆ ಬಂದಿದ್ದಾರೆ’ ಎಂದು ನೆಹರೂ ಅವರಿಗೆ ಹೇಳಿದರು. ಶಾ ಮಾತು ನೆಹರೂ ಅವರಿಗೆ ಮನದಟ್ಟಾಯಿತು. ಭದ್ರತಾ ಸಿಬ್ಬಂದಿಯ ಎಚ್ಚರಿಕೆಯನ್ನು ನಿರ್ಲಕ್ಷಿಸಿ ನೆಹರೂ ಅವರು ಆದಿವಾಸಿಗಳನ್ನು ನೋಡಲು ಹೋದರು. ಅವರ ಬೇಡಿಕೆಗಳ ಬಗ್ಗೆ ಗಮನ ಹರಿಸುವುದಾಗಿ ಭರವಸೆ ಕೊಟ್ಟರು.

ಶಾ ಅವರು ಚಂದಾ ಲೋಕಸಭಾ ಕ್ಷೇತ್ರದಿಂದ (ಈಗ ಮಹಾರಾಷ್ಟ್ರದಲ್ಲಿರುವ ಚಂದ್ರಾಪುರ) 1962ರಲ್ಲಿ ಗೆದ್ದರು. ಆದರೆ, ಆಯ್ಕೆಯಾಗಿ ಎರಡೇ ವರ್ಷದಲ್ಲಿ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪೂರ್ವ ಪಾಕಿಸ್ತಾನದಿಂದ ಬಂದ ನಿರಾಶ್ರಿತರಿಗೆ ಮಧ್ಯ ಭಾರತದ ಅರಣ್ಯ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಲು ಸರ್ಕಾರ ನಿರ್ಧರಿಸಿದ್ದು ಇದಕ್ಕೆ ಕಾರಣ. ಆದಿವಾಸಿ ಜನರ ಹಕ್ಕುಗಳು ಮತ್ತು ಬೇಡಿಕೆಗಳ ಬಗ್ಗೆ ಸರ್ಕಾರದ ಅಲಕ್ಷ್ಯದ ಇತ್ತೀಚಿನ ಉದಾಹರಣೆ ಇದು ಎಂಬುದು ಶಾ ಅವರ ನಿಲುವಾಗಿತ್ತು. ತಮ್ಮದೇ ನೆಲದಲ್ಲಿ ಆದಿವಾಸಿಗಳನ್ನು ಹೇಗೆ ನಿರಾಶ್ರಿತರನ್ನಾಗಿ ಮಾಡಲಾಗುತ್ತಿದೆ ಎಂಬುದನ್ನು ತಮ್ಮ ರಾಜೀನಾಮೆ ಪತ್ರದಲ್ಲಿ ಅವರು ಬರೆದಿದ್ದರು. ಆದಿವಾಸಿಗಳ ಭೂಮಿ ಮತ್ತು ಅರಣ್ಯವನ್ನು ಹೊರಗಿನವರಿಗೆ ನೀಡಲಾಗುತ್ತಿದೆ ಅಥವಾ ಅವು ಬೃಹತ್‍ ಅಣೆಕಟ್ಟೆ ಯೋಜನೆಗಳಲ್ಲಿ ಮುಳುಗಡೆಯಾಗುತ್ತಿವೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಹಕ್ಕನ್ನೂ ಆದಿವಾಸಿಗಳಿಗೆ ನಿರಾಕರಿಸಲಾಗುತ್ತಿದೆ ಎಂಬುದನ್ನೂ ತಮ್ಮ ರಾಜೀನಾಮೆ ಪತ್ರದಲ್ಲಿ ಶಾ ಹೇಳಿದ್ದರು.

ಕೆಲ ವರ್ಷಗಳ ಬಳಿಕ ನೆಹರೂ ಮಗಳು ಇಂದಿರಾ ಗಾಂಧಿ ಪ್ರಧಾನಿಯಾದರು. 1975ರ ಜೂನ್‍ನಲ್ಲಿ ಅವರು ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದರು. ಶಾ  ಯಾವುದೇ ರಾಜಕೀಯ ಪಕ್ಷದ ಸದಸ್ಯರಲ್ಲದಿದ್ದರೂ ಅವರನ್ನು ಕಾಂಗ್ರೆಸ್‍ ಸರ್ಕಾರ ಬಂಧಿಸಿತು. ಒಂದಿಡೀ ವರ್ಷ ಸೆರೆಮನೆಯಲ್ಲಿ ಇಟ್ಟಿತು.

ಸರ್ಕಾರದ ಕಿರುಕುಳದಿಂದ ಶಾ ಎದೆಗುಂದಲಿಲ್ಲ. 1980ರ ದಶಕದಲ್ಲಿ ದೇಶದಾದ್ಯಂತ ಅನುರಣಿಸಿದ ‘ಜಂಗಲ್‍ ಬಚಾವೊ, ಮಾನವ್‍ ಬಚಾವೊ’ ಆಂದೋಲನದಲ್ಲಿ ಸಕ್ರಿಯರಾದರು. ‘ಜಲ್‍, ಜಂಗಲ್‍, ಜಮೀನ್‍’ನ (ಜಲ, ಅರಣ್ಯ ಮತ್ತು ಜಮೀನು) ಮೇಲೆ ಆದಿವಾಸಿ ಜನರ ಹಕ್ಕುಗಳಿಗಾಗಿ ನಡೆದ ಹೋರಾಟ ಇದು. ನೀರು, ಕಾಡು ಮತ್ತು ಜಮೀನುಗಳು ಸ್ಥಳೀಯ ಅರ್ಥ ವ್ಯವಸ್ಥೆಯ ಮೂರು ಸ್ತಂಭಗಳಾಗಿದ್ದವು. ಈ ಮೂರೂ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲು ಹೊರಗಿನವರೂ ಬಯಸಿದ್ದರು.

ಈ ಮಧ್ಯೆ, ಇಂದ್ರಾವತಿ ನದಿಯಲ್ಲಿ ಸರಣಿ ಅಣೆಕಟ್ಟೆ ನಿರ್ಮಿಸುವ ಯೋಜನೆಯನ್ನು ಸರ್ಕಾರ ಹೊಂದಿತ್ತು. ಇದು ವಿಸ್ತಾರವಾದ ನೈಸರ್ಗಿಕ ಕಾಡುಗಳನ್ನು ಮುಳುಗಿಸುವುದರ ಜತೆಗೆ ಬುಡಕಟ್ಟು ಜನರ ಸಾವಿರಾರು ಕುಟುಂಬಗಳನ್ನು ನಿರ್ವಸಿತರನ್ನಾಗಿಸುತ್ತಿತ್ತು. ಇಂತಹ ಬೃಹತ್‍ ಯೋಜನೆಗಳು ಆದಿವಾಸಿಗಳಿಗೆ ಕೊಡುವ ಪ್ರಯೋಜನ ಅತ್ಯಲ್ಪವಾದರೆ ನೋವು ಅಗಾಧ ಎಂಬುದು ಹಿಂದಿನ ಕಹಿ ಅನುಭವಗಳಿಂದ ಶಾ ಅವರಿಗೆ ಗೊತ್ತಿತ್ತು. ಹಿರಿಯ ಗಾಂಧಿವಾದಿ ಬಾಬಾ ಆಮ್ಟೆಯವರ ಜತೆ ಸೇರಿ ಈ ವಿನಾಶಕಾರಿ ಯೋಜನೆಗಳ ವಿರುದ್ಧ ಜನಪ್ರಿಯ ಆಂದೋಲನವನ್ನು ಶಾ ರೂಪಿಸಿದರು. ಕನಿಷ್ಠ ಎರಡು ಅಣೆಕಟ್ಟೆ ಯೋಜನೆಗಳನ್ನು ತಡೆಯುವಲ್ಲಿ ಅವರು ಯಶಸ್ವಿಯಾದರು. 1988ರ ಮಾರ್ಚ್‌ನಲ್ಲಿ ಅವರು ಸಾಯುವ ತನಕ ಸಕ್ರಿಯವಾಗಿದ್ದರು ಮತ್ತು ಹೋರಾಟಗಾರನಾಗಿಯೇ ಇದ್ದರು.

ಶಾ ಅವರು ಮಧ್ಯ ಭಾರತದ ಆದಿವಾಸಿ ಜನರ ಧ್ವನಿ ಮತ್ತು ಆತ್ಮಸಾಕ್ಷಿಯಾಗಿದ್ದರು. ಅವರು ‘ಲಾಲ್‍ ಶ್ಯಾಮ್‍ ಶಾ, ಆದಿವಾಸಿ’ ಎಂದೇ ಸಹಿ ಮಾಡುತ್ತಿದ್ದರು ಎಂಬುದನ್ನು ಠಾಕೂರ್‍ ವಿವರಿಸಿದ್ದಾರೆ. ಇದು ತಮ್ಮ ಜನರ ಬಗ್ಗೆ ಅವರು ಹೊಂದಿದ್ದ ಹೆಮ್ಮೆಯ ಜತೆಗೆ, ಅವರೆಡೆಗಿನ ಸಂಪೂರ್ಣ ಬದ್ಧತೆಯ ಪ್ರತೀಕವಾಗಿತ್ತು. ಅವರು ಇಂದಿನ ನಾಯಕರ ರೀತಿಯಲ್ಲಿ ಇರಲಿಲ್ಲ; ತಮ್ಮ ರಾಜಕೀಯ ಅಧಿಕಾರಕ್ಕೆ ಅವರು ಹೋರಾಡಲಿಲ್ಲ, ಬದಲಿಗೆ, ತಮ್ಮ ಸಮುದಾಯದ ಆತ್ಮಗೌರವಕ್ಕಾಗಿ ಸೆಣಸಿದರು. ಈ ಪುಸ್ತಕವನ್ನು ಹೆಚ್ಚು ಹೆಚ್ಚು ಜನರು ಓದಬೇಕು. ಅದರ ಚಾರಿತ್ರಿಕ ಮಹತ್ವದ ಜತೆಗೆ, ಲಾಲ್‍ ಶ್ಯಾಮ್‍ ಶಾ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ ಅವರು ಕನಸು ಕಂಡಿದ್ದ ಮತ್ತು ಹೋರಾಡಿದ್ದ ಭಾರತವನ್ನು ನಿರ್ಮಿಸಲು ಯುವ ಜನರು ಸ್ಫೂರ್ತಿ ಪಡೆದುಕೊಳ್ಳಲು ಈ ಓದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT