ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧನ ಮೂರು ಹುಣ್ಣಿಮೆಗಳು...

Last Updated 22 ಮೇ 2014, 19:30 IST
ಅಕ್ಷರ ಗಾತ್ರ

ಪರಮಶಾಂತಿ ಮತ್ತು ಮಹಾಕರುಣೆಯ ತಂಪಾದ ತಿಳಿಬೆಳಕನ್ನು ಭೂವಲಯದ ಉದ್ದಕ್ಕೂ ಹರಡುವಲ್ಲಿ ಬುದ್ಧನ ಜೀವಿತದ ಮೂರು ಹುಣ್ಣಿಮೆಗಳು ಮಹತ್ವಪೂರ್ಣ. ಮೊದಲನೆಯದು ಸಾಕ್ಯಮುನಿ ಬುದ್ಧ ಜನಿಸಿದ ದಿನ. ಅದೂ ಹುಣ್ಣಿಮೆ. ಎರಡನೆಯದು ತನ್ನ ಅರಮನೆಯನ್ನು ನಟ್ಟಿ­ರು­ಳಲ್ಲಿ ತೊರೆದು ಆತ ಅರಿವಿನ ಬೆಳಕನ್ನು ಅರಸಲು ಹೊರಟದ್ದು. ಅದೂ ಹುಣ್ಣಿಮೆ.

ಕೊನೆಯದು ಆತ ತನ್ನ ದೇಹತ್ಯಾಗ ಮಾಡಿದ ದಿನ. ಅದೂ ಹುಣ್ಣಿಮೆ. ಹೀಗಾಗಿ ಬುದ್ಧನ ಹುಟ್ಟಿನ ದಿನ, ಆತ ಗೃಹ­ತ್ಯಾಗ ಮಾಡಿದ ದಿನ, ದೇಹತ್ಯಾಗ ಮಾಡಿದ  ಮೂರು ಹುಣ್ಣಿಮೆಗಳು ಇಡೀ ಜಗತ್ತಿನ ಕರಾಳ ಇತಿಹಾಸವನ್ನು ಶಾಂತಿ ಮತ್ತು ಕರುಣೆಯಿಂದ ಪ್ರಕಾಶಮಾನವಾಗಿಸಿದವು.

ಬುದ್ಧನ ಮೂರ್ತಿಗಳು ಜಗತ್ತಿನ ಶಿಲ್ಪಗಳಲ್ಲಿ ಅತ್ಯಂತ ಪ್ರಸಿದ್ಧವಾಗಿವೆ, ಪ್ರಭಾವಿಯಾಗಿವೆ. ಭಾರತೀಯ ಸೌಂದರ್ಯ ಮೀಮಾಂಸೆಯಲ್ಲಿ ಆಚಾರ್ಯ ಅಭಿನವಗುಪ್ತಪಾದರಿಗೆ ಶಾಂತರಸ­ವನ್ನು ಒಂಬತ್ತನೆಯ ರಸವನ್ನಾಗಿ ಸ್ಥಾಪಿಸಲು ಆ ಕಾಲದಲ್ಲಿ ವ್ಯಾಪಕವಾಗುತ್ತಿದ್ದ ಬುದ್ಧನ ಧ್ಯಾನ­ಮೂರ್ತಿ­ಗಳಿಂದ ಪ್ರೇರಣೆ ದೊರಕಿತೆಂದು ಹೇಳ­ಲಾಗಿದೆ.

ಆದರೂ ಬುದ್ಧ ತನ್ನ ಮೂರ್ತಿ­ಸ್ಥಾಪ­ನೆಗೆ, ಪೂಜೆಗೆ ಅನುಮತಿ ನೀಡಲಿಲ್ಲ. ಗಾಂಧಾರ ದೇಶದಲ್ಲಿ ಬುದ್ಧನ ಮೂರ್ತಿಗಳು ಪ್ರಚುರ­ಗೊಳ್ಳುವ ಮೊದಲು ಬೌದ್ಧಶಿಲ್ಪದಲ್ಲಿ ಬುದ್ಧ­ನನ್ನು ಕುದುರೆ, ಧರ್ಮಚಕ್ರ ಇತ್ಯಾದಿ ಸಂಕೇತಗಳ ಮೂಲಕವೇ ಸೂಚಿಸಲಾಗುತ್ತಿತ್ತೆಂಬುದು ನಮಗೆ ಸಾಂಚಿಯಂಥ ಶಿಲ್ಪರಚನೆಗಳ ಮೂಲಕ ತಿಳಿದುಬರುತ್ತದೆ. 

ದೇಹಧಾರಿಗಳಾದ ಮಾನ-­ವರು ಅಮೂರ್ತ ಆದರ್ಶಗಳಿಗೆ ದೇಹರೂಪ­ವನ್ನು ನೀಡುವ ಪ್ರಕ್ರಿಯೆಯನ್ನು ಯಾವ ಮೂರ್ತಿ­­­ವಿರೋಧಿ ಧರ್ಮವೂ ಪ್ರತಿಬಂಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬೌದ್ಧಧರ್ಮ ಚೀನಾ, ಟಿಬೆಟ್, ಕೊರಿಯಾ, ಜಪಾನುಗಳಲ್ಲಿ ಮಹಾ­ಯಾನದ ಹೊಸ ಆವಿಷ್ಕಾರಗಳನ್ನು ಪಡೆದು­ಕೊಂಡಾಗ ಮೂರ್ತಿಸ್ಥಾಪನೆ ಮತ್ತು ಮೂರ್ತಿ­ಧ್ಯಾನಗಳು ಪ್ರಚಾರಕ್ಕೆ ಬಂದವು.

ಜಪಾನಿನ ನಾರಾದಲ್ಲಿ ಬುದ್ಧನ ಮರದ ಬೃಹತ್  ಮೂರ್ತಿ ಇಂದಿಗೂ ಪೂಜೆಗೊಳ್ಳುತ್ತಿದೆ. ನಾರಾದ ಬುದ್ಧ­ಮಂದಿರ ಮೂರು ಬಾರಿ  ಬೆಂಕಿಯ ಅನಾಹುತ­ಗಳಿಗೆ ತುತ್ತಾಗಿತ್ತು. ಅದನ್ನು ಮೂರು ಬಾರಿ ಪುನರ್ನಿರ್ಮಾಣ ಮಾಡಲಾಯಿತು. ಅದು ಪ್ರತಿ­ದಿನ ನೂರಾರು ಬೌದ್ಧ ಯಾತ್ರಿಗಳನ್ನು ಇಂದಿಗೂ ಸೆಳೆಯುತ್ತಿದೆ.

ಇಡೀ ಜಗತ್ತನ್ನು ನುಂಗಿ ನೀರು ಕುಡಿಯಲು ಬಯಸಿದ ಸಾಮ್ರಾಜ್ಯಪಿಪಾಸುಗಳ ಸಂಖ್ಯೆ ಕಡಿಮೆ­­ಯೇನಲ್ಲ. ಅಲೆಕ್ಸಾಂಡರ್ ಗೆಲ್ಲಲಿಕ್ಕೆ ಇನ್ನೊಂದು ಭೂಮಿಯಿಲ್ಲವಲ್ಲ ಎಂದು ಮಗು­ವಿ­ನಂತೆ ಅಳುತ್ತಿದ್ದನಂತೆ. ಆದರೆ ಅವನು ಒಂದು ಜಗತ್ತನ್ನೂ ಪೂರ್ಣ ಗೆಲ್ಲುವ ಮೊದಲೇ ಅವ­ಸಾ­ನ­ಗೊಂಡ. ಮಂಗೋಲಿಯಾದ ಚಂಗೀಸ್ ಖಾನ್ ಇನ್ನೊಬ್ಬ ಅಪ್ರತಿಹತ ಸಾಮ್ರಾಜ್ಯ­ಪಿಪಾಸು.

ಜಪಾನಿನಿಂದ ರಷ್ಯಾದವರೆಗಿನ ಅವನಿ­ಯನ್ನು ವಶಪಡಿಸಿಕೊಂಡ. ಇಡೀ ಜಗತ್ತನ್ನು ಗೆಲ್ಲಲು ಅವನಿಗೂ ಸಾಧ್ಯವಾಗಲಿಲ್ಲ. ಹಾಗೆಯೇ ಪೃಥ್ವೀಮಂಡಲದಲ್ಲಿ ಬೃಹತ್ ಸಾಮ್ರಾಜ್ಯಗಳನ್ನು ಸ್ಥಾಪಿಸಿದ ರೋಮನ್ನರಾಗಲಿ, ಸ್ಪೇನಿಗರಾಗಲಿ, ಮೊಘಲರಾಗಲಿ, ಪೂರ್ವ ಏಷ್ಯಾದಲ್ಲಿ ಸಾಮ್ರಾ­ಜ್ಯ­ಗಳನ್ನು ಕಟ್ಟಿದ ತಮಿಳರಸರಾಗಲಿ ಯಾರೂ ಇಡೀ ಜಗತ್ತನ್ನು ವಶಪಡಿಸಿ­ಕೊಳ್ಳು­ವುದರಲ್ಲಿ ಯಶಸ್ಸು ಪಡೆಯಲಿಲ್ಲ. ಅಲ್ಲದೆ ಅವರು ಕಟ್ಟಿದ ಯಾವ ಸಾಮ್ರಾಜ್ಯವೂ ಬಹುಕಾಲ ಉಳಿಯ­ಲಿಲ್ಲ. ಇತಿಹಾಸದ ಸುಂಟರಗಾಳಿಯಲ್ಲಿ ತೇಲಿ­ಹೋದವು.

ಬುದ್ಧ ಅರಸುಕುಲದಲ್ಲಿ ಜನಿಸಿಯೂ ಅರಸೊ­ತ್ತಿಗೆ­ಯನ್ನು ತ್ಯಜಿಸಿದ. ಸಾಮ್ರಾಜ್ಯಪಿಪಾಸೆ ಅವ­ನನ್ನು ಸೋಂಕಲೂ ಇಲ್ಲ. ಆದರೆ ಬದುಕಿನ ಅಶಾ­ಶ್ವತೆಯನ್ನು ಸಾರಿದ ಬುದ್ಧ ಸ್ಥಾಪಿಸಿದ ಧರ್ಮ­ಸಾಮ್ರಾಜ್ಯ ಇಂದಿಗೂ ಉಳಿದಿದೆ, ಬೆಳೆಯುತ್ತಿದೆ. ಅಮೆರಿಕದಂಥ ದೇಶದಲ್ಲಿ ಬೌದ್ಧಧರ್ಮ ಇಂದು ಜನಪ್ರಿಯತೆಯಲ್ಲಿ ಎರಡನೆಯ ಸ್ಥಾನದಲ್ಲಿದೆ.

ಜರ್ಮನಿಯ ರಾಜಧಾನಿಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚಿನ ಬೌದ್ಧ ಧ್ಯಾನಕೇಂದ್ರ­ಗ­ಳಿವೆ. ಕತ್ತಿ ಅಥವಾ ಬಂದೂಕಿನ ಬಲವಿಲ್ಲದೆ, ಒಂದು ಹನಿ ರಕ್ತವನ್ನೂ ಸುರಿಸದೆ ಇಂದು ವಿಶ್ವ­ಧರ್ಮವಾಗಿ ರಾರಾಜಿಸುತ್ತಿರುವ ಬೌದ್ಧ­ಧರ್ಮದ ದಿಗ್ವಿಜಯ ಜಗತ್ತಿನ ಇತಿಹಾಸದ ಸೋಜಿಗಗಳಲ್ಲೊಂದು. ಆದ್ದರಿಂದಲೋ ಏನೋ ಬೌದ್ಧ ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ, ಧ್ಯಾನಮೂರ್ತಿಗಳ ವಿವರಗಳಲ್ಲಿ ಬುದ್ಧ ಮತ್ತು ಅವನ ಅವತಾರಗಳಾಗಿರುವ ಬೋಧಿಸತ್ವರಿಗೆ ರಾಜವೈಭವದ ಲಕ್ಷಣಗಳನ್ನು ಆರೋಪಿಸಲಾಗಿದೆ.

ಮಕುಟಧಾರಿಗಳಾದ, ವಿವಿಧ ಆಯುಧಪಾಣಿಗಳಾದ, ಸ್ವರ್ಣ-ವಜ್ರ-ವೈಢೂರ್ಯ  ಧಾರಿಗಳಾದ ಬುದ್ಧ, ಬೋಧಿಸ­ತ್ವರು ಬೌದ್ಧರ ಸಾಮೂಹಿಕ ಮಾನಸ ಭಿತ್ತಿ­ಯಲ್ಲಿ ನೆಲೆ ನಿಂತು ಧ್ಯಾನ-ಪೂಜೆಗಳನ್ನು ಸ್ವೀಕರಿ­ಸುತ್ತಿದ್ದಾರೆ. ಅವರವರ ಭಾವಕ್ಕೆ ಅವರವರ ವೇಷಗಳನ್ನು ತೊಟ್ಟು ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ ಅನಿತ್ಯವಾ­ದಿಯಾದ ಬುದ್ಧನ ಸ್ಮರಣೆ ನಿತ್ಯಘಟನೆಯಾಗಿದೆ.

ಅದೇ ರೀತಿ ತಿಪಿಟಕಾದಿಗಳಲ್ಲಿ ದಾಖಲಿತವಾದ ಬುದ್ಧವಚನವೂ ನಮ್ಮ ನಡುವೆ ಬುದ್ಧನ ಅಸ್ತಿ­ತ್ವದ ಮುಂದುವರಿಕೆಯಾಗಿದೆ. ಪ್ರಜ್ಞಾ­ಪಾರ­ಮಿತ ಸ್ತೋತ್ರವೆಂಬ ವಜ್ರಾಯಾನ ಪಂಥದ ರಚನೆ­ಯಲ್ಲಿ ಹೀಗೆ ಹೇಳಲಾಗಿದೆ: ‘ಹೇಗೆ ಚಂದ್ರ ಮತ್ತು ಚಂದ್ರ­ಪ್ರಕಾಶದ ನಡುವೆ ಭೇದವಿಲ್ಲವೋ ಹಾಗೆಯೇ ಬುದ್ಧ ಮತ್ತು ಬುದ್ಧವಚನಗಳನ್ನು ಬೇರ್ಪಡಿಸು­ವುದು ಸಾಧ್ಯವಿಲ್ಲ’.

ಬುದ್ಧವಚನವಾದರೋ ತಿಪಿಟಕಾದ ಬೃಹತ್ ರಾಶಿ­ಯಲ್ಲಿ, ಮಹಾಯಾನ ಪಂಥಗಳ ಸಂಸ್ಕೃತ, ಟಿಬೆಟಿಯನ್, ಚೀಣಿ, ಜಪಾನಿ, ಕೊರಿಯನ್ ಭಾಷೆಗಳ ಅಸಂಖ್ಯ ಸೂತ್ರ, ಟೀಕೆಗಳ ಮಹಾನ್ ರಾಶಿಯಲ್ಲಿ ವಿಪುಲವಾಗಿ ಹರಡಿ­ಹೋಗಿದೆ. ಅವುಗಳಲ್ಲಿ ವ್ಯಕ್ತವಾಗಿರುವ ಬೋಧ­ನೆ­ಗಳ, ನಿರ್ದೇಶನಗಳ ಬಹುಳತೆ ಮತ್ತು ಅಂತರ್ವಿರೋಧಗಳು ಬೌದ್ಧಧರ್ಮ, ಶಾಖೋ­­ಪ­­ಶಾಖೆಗಳಾಗಿ  ಹಲವು ಕವಲೊಡೆಯಲು ಕಾರಣ­ವಾದವು. ಆದರೆ ಅನಿತ್ಯತತ್ವ, ಅನಾತ್ಮ­ತತ್ವ, ಪ್ರತೀತ್ಯಸಮುತ್ಪಾದ ಮತ್ತು ನಿರೀಶ್ವರ­ವಾದಗಳು ಎಲ್ಲ ಬಗೆಯ ಬೌದ್ಧಪಂಥಗಳಿಗೂ ಮಾನ್ಯವಾದವೆಂದು ಹೇಳುತ್ತಾರೆ ಜರ್ಮನಿಯ ವಿಖ್ಯಾತ ವಿದ್ವಾಂಸ ಲಾಮಾ ಅನಗರಿಕ ಗೋವಿಂದ.

ಜಗತ್ತಿನ, ದೇಶದ ಮತ್ತು ನನ್ನ ವ್ಯಕ್ತಿಗತವಾದ ಹಲವಾರು ಅನಿಶ್ಚಿತತೆಗಳ ನಡುವೆ ಈ ಸಲದ ಬುದ್ಧನ ಹುಣ್ಣಿಮೆಯನ್ನು ಹೇಗೆ ಆಚರಿಸ­ಬೇಕೆಂದು ಯೋಚಿಸುತ್ತಿರುವಾಗ ನನಗೆ ಬುದ್ಧನ ಬೋಧನೆಗಳನ್ನು ಸಂಗ್ರಹರೂಪವಾಗಿ ಹೇಳುವ ‘ಧಮ್ಮಪದ’ದ ನೆನಪಾಯಿತು. ಈ ಕೃತಿಯನ್ನು ನಾನು ನನ್ನ ಬದುಕಿನ ನಿರ್ಣಾಯಕ ವರ್ಷಗಳಲ್ಲಿ ನಿತ್ಯಪಾಠ ಮಾಡುತ್ತಿದ್ದೆ.

ಇಂದು ‘ಧಮ್ಮಪದ’  ಕನ್ನಡವನ್ನೂ ಒಳಗೊಂಡು ಜಗತ್ತಿನ ಎಲ್ಲ ಭಾಷೆ­ಗ­ಳಿಗೂ ಅನುವಾದವಾಗಿದೆ. ಆಧ್ಯಾತ್ಮಿಕ ಸತ್ಯ ಮತ್ತು ಕಾವ್ಯ-ಸೌಂದರ್ಯಗಳ ಸಂಗಮವಾ­ಗಿ­­­ರುವ ಈ ಕೃತಿಯ ಅನುವಾದವನ್ನು ಈ ಹಿಂದೆ  ಬೌದ್ಧಧರ್ಮದಲ್ಲಿ ತಜ್ಞರಾಗಿದ್ದ ದಿವಂಗತ ಜಿ.ಪಿ. ರಾಜರತ್ನಂ ಅವರು ಮಾಡಿ­ದ್ದರು. ಮುಂದೆ ಬೆಂಗಳೂರಿನ ಮಹಾ­ಬೋಧಿ ಸೊಸೈಟಿಯವರು ಇನ್ನೊಂದು ಅನು­ವಾದ­ವನ್ನು ಪ್ರಕಟಿಸಿದರು.

ಈಚೆಗೆ ನನ್ನ ಯುವ ಮಿತ್ರರೂ ವಿದ್ವತ್ಪೂರ್ಣ ಬರಹಗಾರರೂ ಆದ ಜಿ.ಬಿ. ಹರೀಶ್ ಅವರು ‘ಧಮ್ಮಪದ’ದ ಹೊಸ ಅನುವಾ­ದ­ವನ್ನು ಮಾಡಿ ಅಭಿಪ್ರಾಯಕ್ಕಾಗಿ ನನಗೆ ಕಳಿಸಿದ್ದಾರೆ. ಬುದ್ಧನ ಹುಣ್ಣಿಮೆಯಂದು ಸಾದ್ಯಂತ­ವಾಗಿ ಅದನ್ನು ಮತ್ತೆ ಓದಿದಾಗ ಅದರ ಮೊದಲ ಅಧ್ಯಾಯದಲ್ಲಿರುವ ಒಂದು ದ್ವಿಪದಿ ಮತ್ತೆ ನನ್ನ ಗಮನ ಸೆಳೆಯಿತು. ನನಗಿದು ಬುದ್ಧ­ವಚನದ ಸಾರೋದ್ಧರವಾಗಿ ತೋರುವುದ­ರಿಂದ ಮತ್ತು ಎಂದಿಗಿಂತಲೂ ಇಂದು ನನ್ನ ರಾಷ್ಟ್ರ ಮತ್ತು ಜಗತ್ತುಗಳಿಗೆ ಅತ್ಯಂತ ಪ್ರಸ್ತುತ­ವಾಗಿದೆ­ಎಂದು ಅನಿಸುತ್ತಿರುವುದರಿಂದ ಅದರ ಬಗ್ಗೆ ಧ್ಯಾನಿಸುತ್ತಿದ್ದೇನೆ.

ಆ ದ್ವಿಪದಿಯು ಮೂಲ ಪಾಲಿಯಲ್ಲಿ ಹೀಗಿದೆ:
ನಹಿ ವೇರೇನ  ವೇರಾಣಿ ಸಮ್ಮಂತಿಧ ಕುದಾಚನಙ
ಅವೇರೇನ ಸಮ್ಮಂತಿ ಏಸ ಧಮ್ಮೋ ಸನಾತನೋ


ಇದರರ್ಥ:
ವೈರದಿಂದ ಎಂದಿಗೂ ಸಾಧ್ಯವಿಲ್ಲ ವೈರಶಮನ ಅವೈರದಿಂದ ಸಾಧ್ಯ. ಇದೇ ಧರ್ಮ ಸನಾತನ
ಇದು ಬುದ್ಧ ನೀಡಿದ ಸನಾತನ ಧರ್ಮದ ವ್ಯಾಖ್ಯೆ. ಇದೇನೂ ಬುದ್ಧ ನೀಡಿದ ಹೊಸ ಆಲೋ­ಚನೆಯಲ್ಲ. ಹಾಗೆ ನೋಡಿದರೆ ಬುದ್ಧ ತಾನು ಹೊಸ ಧರ್ಮ ಸ್ಥಾಪಿಸಿದೆ ಎಂದು ಕೊಚ್ಚಿ­ಕೊಳ್ಳಲೇ ಇಲ್ಲ.  ತನ್ನ ಮೊದಲೈದು ಶಿಷ್ಯರಿಗೆ ಸಾರ­ನಾಥದಲ್ಲಿ ಬೋಧಿಪ್ರಾಪ್ತಿಯ ನಂತರ ಆತ ನೀಡಿದ ಬೋಧನೆಯ ಹೆಸರು ಧಮ್ಮಚಕ್ಕ­ ಪ­ಬತ್ತನ ಸುತ್ತ (ಧರ್ಮಚಕ್ರ ಪ್ರವರ್ತನ ಸೂತ್ರ).  ಅಂದರೆ ಧರ್ಮಚಕ್ರ ಮೊದಲೇ ಇತ್ತು. ಆ ಚಕ್ರ ಸ್ಥಗಿತಗೊಂಡಿತ್ತು.

ಬುದ್ಧ ಅದನ್ನು ಪುನಶ್ಚಾಲನೆ ಮಾಡಿದ. ಆ ಬೋಧನೆಯ ಸಾರಸರ್ವಸ್ವ ಚತುರಿ ಅರಿಯ ಸಚ್ಚಾನಿ (ನಾಲ್ಕು ಆರ್ಯ­ಸತ್ಯ­ಗಳು). ಇಲ್ಲಿ ಆರ್ಯ ಅಂದರೆ ಜನಾಂಗ­ಸೂಚಕ­ವಲ್ಲ. ಹಿರೇಕರು ಎಂದದರ ಅರ್ಥ. ಅಂದರೆ ಆತ ಬೋಧಿಸಿದ ಸತ್ಯಗಳು ಈಗಾಗಲೇ ಆತನ ಹಿರೇ­ಕರಿಗೆ ಗೋಚರವಾಗಿ ಅವರು ಅವುಗಳನ್ನು ವ್ಯಕ್ತ­ಪಡಿಸಿದ್ದರು. ಜ್ಞಾನೋದಯ ಕಾಲದಲ್ಲಿ ಬುದ್ಧ ಅವು­ಗಳನ್ನು ತನ್ನ ಧ್ಯಾನಾನುಭವದಲ್ಲಿ ಕಂಡು­ಕೊಂಡ. 

ವಿದ್ವಾಂಸರು ಬೌದ್ಧಧರ್ಮದ ಸಾರವನ್ನು ವಿವಿಧ ರೀತಿಗಳಲ್ಲಿ ವಿವರಿಸಿದ್ದಾರೆ. ನಾಲ್ಕು ಆರ್ಯ­ಸತ್ಯಗಳು, ದುಃಖಾಂತಕ್ಕೆ ಅಗತ್ಯವಾದ ಅರಿಯ ಅಠ್ಠಂಗ ಮಗ್ಗ (ಆರ್ಯ  ಅಷ್ಟಾಂಗ ಮಾರ್ಗ)­ಬುದ್ಧನ ಬೋಧನೆಯ ಆಧಾರ­ಸ್ತಂಭ­ಗಳು. ಅಷ್ಟೇ ಮುಖ್ಯವಾದುವು ಬುದ್ಧ ನೀಡಿದ ಎನ್ನಲಾದ ತ್ರಿರತ್ನಗಳು: ಶೀಲ, ಸಮಾಧಿ, ಪ್ರಜ್ಞಾಶೀಲವನ್ನು ಮಾದಕದ್ರವ್ಯಗಳ ನಿಷೇಧ ಇತ್ಯಾದಿ ಸಂಕುಚಿತ ಕಲ್ಪನೆಗಳಲ್ಲಿ ಗುರುತಿಸ­ಲಾಗುತ್ತಿದೆಯಾದರೂ ಶೀಲವೆಂಬುದರ ಹರಹು ಬಹಳ ದೊಡ್ಡದು.

ಪ್ರಜ್ಞೆಯೆಂದರೆ ಅರಿವು. ಅರಿವೆಂದರೆ ನೇರ ಗ್ರಹಿಕೆ. ಇದನ್ನೇ ಕರ್ನಾಟಕದ ಶರಣರು ಅರಿವೆಂದು ಕರೆದರು. ಆದರೆ ಈ ಮೂರು ರತ್ನಗಳಿಗೆ ಕಾರಣೀಭೂತವಾದ ಇನ್ನೊಂದು ತತ್ವವಿದೆ. ಅದನ್ನೇ ಮೇತ್ತಾಕರುಣಾ­(ಮೈತ್ರಿ-ಕರುಣೆ) ಎಂದು ಕರೆಯಲಾಗಿದೆ. ಮೇಲ್ಕಂಡ ದ್ವಿಪದಿ ಮೈತ್ರಿ-ಕರುಣೆಯ ಅಸ್ತಿ­ವಾರವಾದ ನಿರ್ವೈರವನ್ನು ಸನಾತನ ಧರ್ಮ­ವೆಂದು ಸಾರಿದೆ. ಬೇಕು–-ಬೇಡ, ಹೌದು–-ಇಲ್ಲ  ಇತ್ಯಾದಿ  ಪರಸ್ಪರ ವಿರುದ್ಧವಾದ ಭಾವನೆಗಳ ನಡುವೆ ತೊಳಲಾಡುವ ಮನಸ್ಸು ಸದಾ ಇಬ್ಬಂದಿತನದಲ್ಲಿ, ಇಕ್ಕಟ್ಟು-–ಬಿಕ್ಕಟ್ಟು­ಗ­ಳಲ್ಲಿ ಅಶಾಂತವಾಗಿರುತ್ತದೆ.

ಒಂದು ಬೇಕಾ­ದರೆ ಇನ್ನೇನೋ ಬೇಡವಾಗಿರುತ್ತದೆ; ಒಂದರ ಬಗೆಗೆ ಆಕರ್ಷಣೆ ಇದ್ದರೆ ಇನ್ನೊಂದರ ಬಗ್ಗೆ ವಿಕರ್ಷಣೆ­ಯಿರುತ್ತದೆ. ಪ್ರೀತಿ ಇದ್ದಲ್ಲಿ ಹಗೆಯೂ ಇರುತ್ತದೆ. ಆದರೆ ಕರುಣೆಯೆಂಬುದು ಮೈತ್ರಿಯೆಂಬುದು ನಿರ್ದ್ವಂದ್ವದ ಸ್ಥಿತಿ. ಕರುಣೆಗೆ ವಿರೋಧಾರ್ಥಕ ಭಾವನೆಯಿಲ್ಲ.

ಮೈತ್ರಿಯು ರಾಗವಲ್ಲ. ರಾಗವಿದ್ದಲ್ಲಿ ದ್ವೇಷ ಅನಿವಾರ್ಯ. ‘ನತ್ಥಿ ರಾಗಸಮೋ ನದಿ’ ಅನ್ನು­­ತ್ತದೆ ಧಮ್ಮಪದ. ಅಂದರೆ ರಾಗ ಕೊನೆ­ಯಿರದ ನದಿ. ರಾಗವು ದ್ವೇಷಕ್ಕೂ, ದ್ವೇಷವು ಮೋಹಕ್ಕೂ ಎಡೆ ಮಾಡಿಕೊಟ್ಟು ನಮ್ಮನ್ನು ದುಃಖಜಾಲದಲ್ಲಿ ಸಿಲುಕಿ­ಸುತ್ತದೆ. ಸಂಘ­ರ್ಷಾ­ತ್ಮಕ, ಶೋಷಣಾತ್ಮಕ ಸಾಮಾಜಿಕ ಸನ್ನಿವೇಶ­ಗಳಲ್ಲಿ ತಾನೇ, ತನ್ನ ಜಾತಿಯೇ, ತನ್ನ ಕುಲವೇ, ತನ್ನ ಸಿದ್ಧಾಂತವೇ ಶ್ರೇಷ್ಠ­ವೆನ್ನುವ ಭಾವನೆಗಳು ಎಡೆಬಿಡದ ರಾಗ-ದ್ವೇಷ­ಗಳ ಮೇಲಾಟವನ್ನುಂಟು ಮಾಡಿ ಮನೋ­ವಿಕಾಸವನ್ನು ಕುಂಠಿತ­ಗೊಳಿ­ಸುತ್ತವೆ.

ಬಹುತೇಕ ಧರ್ಮಗಳೂ ಈ ತೆರನ ಸಾಮೂ­ಹಿಕ ಸ್ವಾರ್ಥಕ್ಕೆ ಸ್ಫೂರ್ತಿ ನೀಡಿವೆ.  ಬೌದ್ಧಧರ್ಮ ಕರುಣೆಯನ್ನು ತನ್ನ ಆಧಾರ­ವಾಗಿರಿಸಿ­ಕೊಂಡಿ­ದ್ದರೂ ಬೌದ್ಧ­ಧರ್ಮ ಪ್ರಧಾನ ಶ್ರೀಲಂಕೆಯಲ್ಲಿ ನಡೆದ ತಮಿಳರ ಸಾಮೂಹಿಕ ಹತ್ಯಾಕಾಂಡ ಕರುಣೆಯನ್ನು ಪಾಲಿ­ಸು­ವುದು ಬೌದ್ಧಧರ್ಮೀ­ಯರಿಗೂ ಸುಲಭ­ವಲ್ಲವೆಂದು ತೋರಿಸಿಕೊಟ್ಟಿದೆ.

ಮೈತ್ರಿಕರುಣೆಗಳಿಲ್ಲದೆ ಶೀಲ-, ಸಮಾಧಿ-, ಕರುಣೆ­­ಗಳೂ ನಿರರ್ಥಕವೆಂದು ಸೂಚಿಸುವ ದಂತ­ಕತೆ­ಯೊಂದು ಬೌದ್ಧಪರಂಪರೆಯಲ್ಲಿದೆ.
ಒಮ್ಮೆ ಹಲವು ಮಂದಿ ಬೌದ್ಧಭಿಕ್ಷುಗಳು ಸಿಂಹ­­ಗುಹೆಯೆಂಬ ತಾಣದಲ್ಲಿ ಕಠೋರ ಸಾಧನೆ ಮಾಡತೊಡಗುತ್ತಾರೆ. ಅವರ ಮನಸ್ಸು ವಿಪಸ್ಸನ ­ಧ್ಯಾನದಲ್ಲಿ ನೆಲೆನಿಂತು ಮೊದಲಿಗೆ ಶಾಂತ­ವಾದಂತೆ ಕಂಡರೂ ಸ್ವಲ್ಪ ಸಮಯದ ನಂತರ ಭಯಾನಕ ರೂಪಗಳು ಕಾಣತೊಡಗಿ ಅವರನ್ನು ಹೆದರಿಸತೊಡಗುತ್ತವೆ.

ಅವರೆಲ್ಲರೂ ಪರಿಹಾರ­ವನ್ನು ಕೇಳಲು ಬುದ್ಧಗುರುವಿನ ಬಳಿ ಹೋಗು­ತ್ತಾರೆ. ಮೈತ್ರಿಕರುಣೆಗಳನ್ನು ಬಲಪಡಿಸಿ­ಕೊಳ್ಳದೆ ಧ್ಯಾನದಲ್ಲಿ ತೊಡಗಿದರೆ ಹೀಗಾಗುವು­­­ದೆಂದು ಬುದ್ಧ ಹೇಳುತ್ತಾನೆ. ಆಮೇಲೆ ಆ ಭಿಕ್ಷು­ಗಳು ಬುದ್ಧನ ಬೋಧನೆಯ ಅನುಸಾರ ಮೇತ್ತಾ­ಭಾವನಾ ಎಂಬ ಸಾಧನೆಯನ್ನು ಮಾಡಿ ಭಯ­ಮುಕ್ತರಾಗುತ್ತಾರೆ. ಮೈತ್ರಿ-ಕರುಣೆಯೇ ಬುದ್ಧವಚನಚಂದ್ರಿಕೆಯ ಪ್ರಶಾಂತ ಪ್ರಕಾಶ. ಅದು ನಮ್ಮೆಲ್ಲರ ಆಕಾಶ­ಗಳನ್ನೂ ಬೆಳಗ-­ತೊಡಗಲಿ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT