ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಯ ಜತೆಗಿನ ಸರಸ ಸಲ್ಲದು

Last Updated 26 ಜೂನ್ 2012, 19:30 IST
ಅಕ್ಷರ ಗಾತ್ರ

ಭಾರತದ ರಾಷ್ಟ್ರೀಯತೆ, ಸಮಗ್ರತೆಯಿಂದ ದೂರ ನಿಂತು, ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದವರ ಸ್ಮಾರಕ ನಿರ್ಮಿಸಲು ಹೊರಟವರ ಬಗ್ಗೆ ಏನನ್ನುವುದು? ಸಿಖ್ ಸಮುದಾಯಕ್ಕೇ ಕೆಟ್ಟ ಹೆಸರು ತಂದಂಥವರನ್ನೇ ಹಾಡಿ ಹೊಗಳುವುದು ಅದೆಷ್ಟು ಸರಿ? ಇಂತಹ ಹಲವು ಪ್ರಶ್ನೆಗಳು ಈಚೆಗೆ ನನ್ನನ್ನು ಕಾಡತೊಡಗಿದೆ.

ಪಂಜಾಬ್‌ನಲ್ಲಿ ನೋಡಿ, ಅಕಾಲಿಗಳು ತಮ್ಮ ಕೈಯಲ್ಲಿ ಅಧಿಕಾರ ಇಲ್ಲದಿರುವಾಗ `ಧರಮ್ ಮೋರ್ಚಾ~ದಂತಹ ಚಟುವಟಿಕೆಗಳಲ್ಲಿ ತೊಡಗಿ ಸಿಖ್ಖರ ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಸಲು ಯತ್ನಿಸುತ್ತಾರೆ.

ಅಧಿಕಾರ ಇರುವಾಗ ಕೂಡ ನಿರುದ್ಯೋಗ ಸಮಸ್ಯೆ, ರೈತರ ಆದಾಯದಲ್ಲಿ ಕಂಡು ಬರುತ್ತಿರುವ ತೀವ್ರ ಕುಸಿತ ಇತ್ಯಾದಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲಿಕ್ಕಾಗಿ ಮತ್ತೆ ಇಂತಹದೇ `ಧಾರ್ಮಿಕ ಚಟುವಟಿಕೆ~ಗಳಲ್ಲಿ ತೊಡಗುತ್ತಾರೆ.

ಈ ನಡುವೆ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಹತ್ಯೆ ನಡೆಸಿದ ಬಲ್ವಂತ್‌ಸಿಂಗ್ ರಾಜೋನಾ ಅವರಿಗೆ ಕ್ಷಮಾದಾನ ನೀಡಬೇಕೆಂದು ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್ ಅವರೇ ಮನವಿ ಸಲ್ಲಿಸುತ್ತಾರೆಂದರೆ, ಇದಕ್ಕಿಂತ ಭಯಾನಕ ಸಂಗತಿ ಇನ್ನೇನಿದೆ.

ಈಚೆಗೆ ಪಂಜಾಬ್‌ನಲ್ಲಿ ಕೆಲವು ಪ್ರತ್ಯೇಕತಾವಾದಿಗಳನ್ನು ಸನ್ಮಾನಿಸಲಾಯಿತು. ಅಮೃತಸರದ ಸ್ವರ್ಣಮಂದಿರದ ಮೇಲೆ ಹಿಂದೆ ಭದ್ರತಾಪಡೆಯ ಸಿಬ್ಬಂದಿ ದಾಳಿ ನಡೆಸಿದಾಗ, ಅವರ ವಿರುದ್ಧವೇ ಸಮರ ಸಾರಿದ್ದವರನ್ನೂ ಆ ಸಮಾರಂಭದಲ್ಲಿ ಗೌರವಿಸಲಾಯಿತು. ಆ ಸಮಾರಂಭದಲ್ಲಿ ಬಾದಲ್ ಅವರ ಪುತ್ರರಾದ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಉಪಸ್ಥಿತರಿದ್ದರು.

ಈ ಅಪ್ಪ-ಮಗನ ಕೈಯಲ್ಲಿಯೇ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇದೆ. ರಾಜ್ಯದ ಮತದಾರರು ತಮಗೆ ಇಂತಹ ಜವಾಬ್ದಾರಿ ಕೊಟ್ಟಿರುವಾಗ ತಾವು ಉಗ್ರರ ಜತೆ ಕಾಣಿಸಿಕೊಂಡರೆ, ಇಂತಹ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಅಡ್ಡಿಯಾಗುತ್ತದೆ ಎಂಬ  ಪ್ರಜ್ಞೆಯಾದರೂ ಅವರಿಬ್ಬರಿಗೆ ಇರಬೇಕಿತ್ತು.
ವಿಪರೀತ ಒತ್ತಡಕ್ಕೆ ಮಣಿದು ಅವರು ಈ ರೀತಿ ನಡೆದುಕೊಂಡಿರುವ ಸಾಧ್ಯತೆ ಇದೆ ಎಂದು ಕೆಲವರು ಮಾತನಾಡಿಕೊಂಡಿದ್ದು ನನ್ನ ಕಿವಿಗೆ ಬಿದ್ದಿದೆ.
 
ಹೀಗೆ ಪ್ರತ್ಯೇಕತಾವಾದಿಗಳ, ಉಗ್ರರ ಒತ್ತಡಕ್ಕೆ ಆಡಳಿತಗಾರರು ಮಣಿಯುತ್ತಾರೆಂದರೆ ರಾಜ್ಯದಲ್ಲಿರುವ ಒಂದು ವ್ಯವಸ್ಥೆಯ ಪರಿಸ್ಥಿತಿಯಾದರೂ ಏನು. ಎಪ್ಪತ್ತರ ದಶಕದ ಉತ್ತರಾರ್ಧ ಮತ್ತು ಎಂಬತ್ತರ ದಶಕದ ಪೂರ್ವಾರ್ಧದಲ್ಲಿ ಪಂಜಾಬ್‌ದಾದ್ಯಂತ ಅತ್ಯಂತ ಕೆಟ್ಟ ಸ್ಥಿತಿ ಇತ್ತು. ಎಲ್ಲೆಲ್ಲೂ ಅಶಾಂತಿ ತಾಂಡವವಾಡುತಿತ್ತು.
 
ಪ್ರತ್ಯೇಕತಾವಾದಿ ಉಗ್ರರೇ ಒಂದು ಹಂತದಲ್ಲಿ ಮೇಲುಗೈ ಸಾಧಿಸಿದಂತೆ ಕಂಡು ಬರುತಿತ್ತು. ಆ ದಿನಗಳಲ್ಲಿ ಹಿಂದೂಗಳ ಪಡಿಪಾಟಲು ಮೇರೆ ಮೀರಿತ್ತು. ಆ ಸಮುದಾಯದಲ್ಲಿ ಸದಾ ಆತಂಕದ ಕರಿಛಾಯೆ ಕವಿದಿರುತಿತ್ತು. ಆಗ ಎರಡು ಸಮುದಾಯಗಳ ನಡುವೆ ವಿಷಬೀಜ ಬಿತ್ತಿಯಾಗಿತ್ತು. ಎರಡೂ ಸಮುದಾಯಗಳ ನಡುವಣ ಬಿರುಕು ಎದ್ದು ಕಾಣುತಿತ್ತು.

ಅಂತಹ ಕರಾಳ ನೆನಪುಗಳು ಇದೀಗ ಎಲ್ಲರ ಸ್ಮೃತಿಪಟಲದಿಂದ ಇನ್ನೇನು ಮರೆಯಾಗುತ್ತಿದೆ ಎನ್ನುವಾಗ ಇದೀಗ ಮತ್ತೆ ಆ ನೆನಪುಗಳ ಭಯಾನಕತೆ ಎದ್ದು ಕುಳಿತಂತಾಗಿದೆ. ಜರ್ನೇಲ್‌ಸಿಂಗ್ ಬಿಂದ್ರನ್‌ವಾಲಾ ಬಗ್ಗೆ ಯಾರಿಗೆ ಗೊತ್ತಿಲ್ಲ. ಮೊದಲಿಗೆ ಕಾಂಗ್ರೆಸ್ ಪಕ್ಷವೇ ಆತನನ್ನು ರಾಜಕೀಯ ಲಾಭಗಳಿಗಾಗಿ ಬಳಸಿಕೊಂಡು ಗೊಂದಲಗಳನ್ನು ಸೃಷ್ಟಿಸಿತ್ತು. ನಂತರದ ದಿನಗಳಲ್ಲಿ ಬಿಂದ್ರನ್‌ವಾಲಾ ಎಲ್ಲರ ಕೈಮೀರಿ ಬೆಳೆದು ವ್ಯವಸ್ಥೆಗೇ ವಿರುದ್ಧವಾಗಿ ಪೆಡಂಭೂತವಾಗಿ ನಿಂತು ಬಿಟ್ಟಿದ್ದ. ಆತನಿಂದ ನಡೆದ ಹಿಂಸಾಚಾರ ಭಾರತದ ಚರಿತ್ರೆಯಲ್ಲೊಂದು ಕಪ್ಪುಚುಕ್ಕೆ. ಈಚೆಗೆ ಪಂಜಾಬ್‌ನಲ್ಲಿ ಈತನ ಸ್ಮಾರಕ ನಿರ್ಮಿಸಲಾಗಿದೆ!

ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯೇ (ಎಸ್‌ಜಿಪಿಸಿ) ಈ ಸ್ಮಾರಕ ನಿರ್ಮಿಸಿದೆ ಎಂದು ಸುಖ್‌ಬೀರ್ ಸಬೂಬು ನೀಡಿದ್ದಾರೆ. ಆದರೆ ಎಸ್‌ಜಿಪಿಸಿಯನ್ನು ಸ್ವತಃ ಅಕಾಲಿದಳವೇ ನಿಯಂತ್ರಿಸುತ್ತಿದೆ ಎಂಬುದು ವಾಸ್ತವ. ಇಂತಹ ಸಂದಿಗ್ಧತೆಯಲ್ಲಿ ಕೇಂದ್ರ ಸರ್ಕಾರವೇ ಮುತುವರ್ಜಿವಹಿಸಿ ಈ ಸಮಸ್ಯೆಗಳ ಬೇರುಗಳನ್ನು ಕಂಡು ಹಿಡಿದು ಅದನ್ನು ನಿರ್ನಾಮ ಮಾಡುವ ನಿಟ್ಟಿನಲ್ಲಿ ಗುರುದ್ವಾರ ಕಾಯಿದೆಯನ್ನೇ ರದ್ದುಗೊಳಿಸಬೇಕಿದೆ. ನಂತರ ಇಡೀ ಸಿಖ್ ಸಮುದಾಯವನ್ನು ಪ್ರತಿನಿಧಿಸುವವರೆಲ್ಲರೂ ಗುರುದ್ವಾರವನ್ನು ನಡೆಸುವಂತಾಗಬೇಕಿದೆ. ಕೆಲವು ಗುಂಪುಗಳನ್ನು ಪ್ರತಿನಿಧಿಸುವವರು ಆಯ್ಕೆಯಾಗಿ ಅದರೊಳಗೆ ಕಾರುಬಾರು ನಡೆಸುವುದಕ್ಕೆ ತಡೆ ಹಾಕಬೇಕಿದೆ.

ರಾಜಕೀಯ ಮತ್ತು ಧರ್ಮದ ನಡುವಣ ವ್ಯತ್ಯಾಸವನ್ನು ಗುರುತಿಸಿಕೊಳ್ಳಲಿಕ್ಕೆ ಆಗದಿರುವುದೇ ಇವತ್ತು ಅಕಾಲಿದಳದ ಬಲು ದೊಡ್ಡ ಸಮಸ್ಯೆಯಾಗಿದೆ. ಬಿಂದ್ರನ್‌ವಾಲಾ ಅಂದು ಇಂತಹದೇ ತಪ್ಪು ಮಾಡಿದ್ದ. ಅದಕ್ಕೆ ಪಂಜಾಬ್ ಬಲುದೊಡ್ಡ ದಂಡವನ್ನೇ ತೆರುವಂತಾಯಿತು. ಅಕಾಲಿಗಳು ತಮ್ಮ ತಲೆಯೊಳಗೆ ಅದೇನು ತುಂಬಿಕೊಂಡಿದ್ದಾರೋ, ಇನ್ನೇನನ್ನು ಚಿಂತಿಸುತ್ತಿದ್ದಾರೋ ನನಗೊಂದೂ ಅರ್ಥವಾಗುತ್ತಿಲ್ಲ.

ಏಕೆಂದರೆ ಅವರು ಬಹಳ ಸಮಯಗಳಿಂದ ಅತ್ತಿತ್ತ ನೋಡದೆ ಅದೇ ಅಪಾಯದ ದಾರಿಯಲ್ಲಿ ನಡೆಯುತ್ತಿದ್ದಾರಲ್ಲ. ಇವತ್ತು ಭಾರತದ ಪ್ರಧಾನಿಯಾಗಿರುವ ಮನಮೋಹನ್ ಸಿಂಗ್, ಈ ದೇಶದ ಭೂಪಡೆಯ ಮುಖ್ಯಸ್ಥರಾಗಿರುವ ವಿಕ್ರಮ್ ಸಿಂಗ್ ಸೇರಿದಂತೆ ಅನೇಕ ಆಡಳಿತಗಾರರು ಸಿಖ್ ಸಮುದಾಯಕ್ಕೆ ಸೇರಿದವರು ತಾನೆ.

ಇಂತಹ ಹಿನ್ನೆಲೆ ಇರುವಾಗ ಅಂದು ಸ್ವರ್ಣಮಂದಿರವನ್ನು ಮಲಿನಗೊಳಿಸಿದ ಪ್ರತ್ಯೇಕತಾವಾದಿಗಳಿಗೆ ಅಕಾಲಿಗಳು ಇದೀಗ ಏನನ್ನು ಹೇಳಬಹುದು? ಸಿಖ್ಖರ `ವ್ಯಾಟಿಕನ್~ ಎಂದೇ ಖ್ಯಾತವಾಗಿರುವ ಆ ಪವಿತ್ರಮಂದಿರವನ್ನೇ ಮಲಿನಗೊಳಿಸಿದವರು ಮತ್ತು ದೇಶದ ಸಮಗ್ರತೆಗೇ ಧಕ್ಕೆ ಉಂಟು ಮಾಡಿದವರು ಹಾಗೂ ಸಿಖ್ ಸಮುದಾಯಕ್ಕೇ ಕೆಟ್ಟ ಹೆಸರು ತಂದಿತ್ತ  `ಪ್ರತ್ಯೇಕತಾವಾದಿಗಳ~ ಸ್ಮಾರಕ ನಿರ್ಮಿಸಲು ಹೊರಟಿದ್ದಾರಲ್ಲಾ, ಇವರಿಗೆ ಏನನ್ನಬೇಕು ?
ಹೌದು, ಅಂದು ಸ್ವರ್ಣಮಂದಿರದಲ್ಲಿ ಬ್ಲೂಸ್ಟಾರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಜನರಲ್ ಕೆ.ಎಸ್.ಬ್ರಾರ್ ಆ ಘಟನೆಯ ಬಗ್ಗೆ ನೊಂದು ಮಾತನಾಡಿದ್ದಾರೆ.
 
ದಿನಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಮಾತನಾಡುತ್ತಾ `ಅಕಾಲಿಗಳು ಭಯೋತ್ಪಾದನೆಯನ್ನು ಪುನರ್‌ಪರಿಷ್ಕರಣೆ ಮಾಡಲು ಹೊರಟು ನಿಂತಂತಿದೆ. ಹಿಂದೆ ಭಯೋತ್ಪಾದಕರಾಗಿದ್ದವರನ್ನು ಗೌರವಿಸಲಾಗುತ್ತಿದೆ. ಭದ್ರತಾ ಪಡೆಗಳ ಗುಂಡೇಟಿನಿಂದ ಸತ್ತಿದ್ದ ಉಗ್ರರ ಮಕ್ಕಳನ್ನು ಕರೆದು ಹೂಹಾರ ಹಾಕಿ ಅಭಿನಂದಿಸಲಾಗುತ್ತಿದೆ. ಇದೇನಿದು? ಇಂತಹ ಕೆಲಸಗಳನ್ನು ಮಾಡುವ ಮೂಲಕ ಭಯೋತ್ಪಾದಕರ ಅನುಕಂಪ ಗಳಿಸಲು ಅಕಾಲಿಗಳು ಪ್ರಯತ್ನಿಸುತ್ತಿದ್ದಾರೆಯೇ~ ಎಂದು ಕೆ.ಎಸ್.ಬ್ರಾರ್ ಪ್ರಶ್ನಿಸಿದ್ದಾರೆ.

ಬ್ರಾರ್ ಅವರ ಅನಿಸಿಕೆಗಳು ಮತ್ತು ಪ್ರಶ್ನೆಗಳನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪಟ್ಟದಲ್ಲಿರುವ ಅಪ್ಪ ಮತ್ತು ಮಗ ಮೊದಲಿಗೆ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.

ಉಗ್ರರಿಗೆ ಸ್ಮಾರಕ ನಿರ್ಮಿಸುವುದೂ ಸೇರಿದಂತೆ ಪಂಜಾಬ್‌ನಲ್ಲಿ ಈಚೆಗೆ ನಡೆದಿರುವ ಇಂತಹ ಘಟನೆಗಳ ವಿರುದ್ಧ ಸಿಖ್ ಸಮುದಾಯದ ಯಾವುದೇ ಸಂಘಟನೆ ಅಥವಾ ಯಾರೊಬ್ಬ ಪ್ರಜ್ಞಾವಂತನೂ ಧ್ವನಿ ಎತ್ತದಿರುವುದು ನನಗೆ ಅಚ್ಚರಿ ಎನಿಸಿದೆ. ಪ್ರಸಕ್ತ  ಆಗುಹೋಗುಗಳನ್ನು ಗಮನಿಸಿದರೆ `ಹುಟ್ಟು ಹಾಕಿದವನೇ ನಿಯಂತ್ರಿಸಲು ಸಾಧ್ಯವಿಲ್ಲದಂತಹ ಭೀಕರ ಪೆಡಂಭೂತ~ವೊಂದಕ್ಕೆ ಅಕಾಲಿಗಳು ಜನ್ಮ ನೀಡುತ್ತಿದ್ದಾರೆಯೇ ಎಂಬ ಗುಮಾನಿ ಕಾಡತೊಡಗಿದೆ.

ಇಂತಹದ್ದೊಂದು ಪೆಡಂಭೂತ ಮುಂದೊಂದು ದಿನ ಇಡೀ ಪಂಜಾಬ್‌ನ ಜನರ ಶಾಂತಿಭಂಗ ಮಾಡಿ ಎಲ್ಲೆಡೆ ಅರಾಜಕತೆಗೆ ಕಾರಣವಾದರೆ ಅಚ್ಚರಿಯೇನಿಲ್ಲ. ಒಂದಂತೂ ನಿಜ, ಅಕಾಲಿಗಳು ಅರ್ಥ ಮಾಡಿಕೊಳ್ಳಲಿ ಬಿಡಲಿ, ಈಚೆಗೆ ನಡೆಯುತ್ತಿರುವ ಇಂತಹ ಘಟನೆಗಳ ಬಗ್ಗೆ ಪಂಜಾಬ್‌ದಾದ್ಯಂತ ಜನರಲ್ಲಿ ಸಾತ್ವಿಕ ಕೋಪದ ಅಲೆ ಇರುವುದಂತೂ ನಿಜ.

ಈ ದೇಶದ ಗುಪ್ತಚರ ವಿಭಾಗದವರು ಭಯೋತ್ಪಾದಕರು ಯಾರು, ಅವರ ಹಿನ್ನೆಲೆ ಏನು ಎಂಬ ಬಗ್ಗೆ ವಿವರಗಳನ್ನು ಆ ರಾಜ್ಯಸರ್ಕಾರಕ್ಕೆ ನೀಡಿದೆ ಎಂದೇ ನಾನು ಭಾವಿಸುತ್ತೇನೆ. ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಅವರಿಗೆ ಒತ್ತಡ ಇರುತ್ತದೆ ನಿಜ.
 
ಆದರೆ ಪ್ರಸಕ್ತ ಪಂಜಾಬ್‌ನಲ್ಲಿ ನಡೆದಿರುವ ಬೆಳವಣಿಗೆಗಳನ್ನು ಗುರುತಿಸಿ ಆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕಾದುದು ಅವರ ಜವಾಬ್ದಾರಿಯೂ ಹೌದು. ಇಲ್ಲದಿದ್ದರೆ ಮುಂದೊಂದು ದಿನ ಭಯೋತ್ಪಾದಕತೆ, ಪ್ರತ್ಯೇಕತಾವಾದ ಇನ್ನೊಂದು ಆಯಾಮ ಪಡೆದುಕೊಂಡು ನಾಡಿನ ಜನರ ನಿದ್ದೆ ಕೆಡಿಸುವ ಸಾಧ್ಯತೆ ಇಲ್ಲದಿಲ್ಲ.

ಅಕಾಲಿಗಳು ಅದೇಕೆ ಉಗ್ರವಾದಿ ಗುಂಪುಗಳಾದ ದಮ್‌ದಮಿ ತಕ್ಸಲ್ ಮತ್ತು ದಲ್ ಖಾಲ್ಸಾಗಳಿಗೆ ಬೆಂಬಲಿಸುತ್ತಿದ್ದಾರೆಂಬ ಬಗ್ಗೆ ಪಂಜಾಬಿಗಳು ಯೋಚನೆ ಮಾಡಬೇಕೇ ಹೊರತು, ಉಪೇಕ್ಷಿಸುವುದು ಸರಿಯಲ್ಲ. ಪಂಜಾಬ್ ಸರ್ಕಾರ ಒಂದು ಕಡೆ ಕೇಂದ್ರ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುತ್ತಾ ಅಭಿವದ್ಧಿಗಾಗಿ ಅಪಾರ ಅನುದಾನವನ್ನು ಕೇಳುತ್ತಿದೆ, ಇನ್ನೊಂದು ಕಡೆ ಅಭಿವೃದ್ಧಿಗೆ ಅಡ್ಡಗಾಲಾಗುವಂತಹ ಚಟುವಟಿಕೆಗಳ ಬೆನ್ನಿಗೂ ನಿಂತಿದೆ. ಉಗ್ರರ ಚಟುವಟಿಕೆಗಳು ಹೆಚ್ಚತೊಡಗಿದರೆ ಯಾವ ತೆರನಾದ ಅಭಿವೃದ್ಧಿ ಕಾರ್ಯ ನಡೆಯಲು ಸಾಧ್ಯ?

ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕನಸುಗಳನ್ನು ಇರಿಸಿಕೊಂಡು ಮತದಾರರು ತಮಗೆ ಎರಡನೇ ಅವಧಿಗೆ ಬಹುಮತ ನೀಡಿದ್ದಾರೆಂಬುದನ್ನು ಅಕಾಲಿದಳದವರು ಮರೆಯಬಾರದು. ಹಿಂದೆ ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಕಾಂಗ್ರೆಸ್‌ನವರು ಭರವಸೆಗಳ ಮಳೆಯನ್ನೇ ಸುರಿಸುತ್ತಿದ್ದರು. ಜಾತ್ಯತೀತ ವಿಚಾರಗಳ ಬಗ್ಗೆಯೇ ಮಾತನಾಡುತ್ತಿದ್ದರು. ಆದರೆ ಧಾರ್ಮಿಕ ಗುಂಪುಗಳ ಒಳಗೂ ಅವರು ಗುರುತಿಸಿಕೊಳ್ಳುತ್ತಿದ್ದರು. ಜನಸಾಮಾನ್ಯರು ಇವರನ್ನು ಹೇಗೆ ನಂಬಲು ಸಾಧ್ಯ. ಇಂತಹ ದ್ವಂದ್ವಗಳನ್ನೂ ಜನ ಇಷ್ಟ ಪಡಲಿಲ್ಲ ಎನ್ನುವುದೂ ನಿಜ.

ಅದೇನೇ ಇರಲಿ, ಪ್ರಸಕ್ತ ಅಕಾಲಿಗಳು ಬೆಂಕಿಯ ಜತೆ ಸರಸವಾಡುತ್ತಿದ್ದಾರೆಂಬುದನ್ನು ಅರಿತುಕೊಳ್ಳಬೇಕು. ಮುಂದೊಂದು ದಿನ ಅದರ ಬಿಸಿ ಅವರಿಗೇ ತಾಗದಿರದು. ಈ ಪಕ್ಷವು ಹಿಂದಿನ ದಿನಗಳಲ್ಲಿ ಜನಪ್ರೀತಿ ಗಳಿಸಲಿಕ್ಕಾಗಿ ಮಾಡಿದ ಬಹಳಷ್ಟು ಕೆಲಸಗಳು ಇವತ್ತಿನ ಇಂತಹ ನಡೆಗಳಿಂದಾಗಿ ನೀರಲ್ಲಿ ಹೋಮ ಮಾಡಿದಂತಾಗುತ್ತದೆ ಎಂಬುದನ್ನೂ ಆ ಪಕ್ಷದ ಮುಖಂಡರು ಅರಿತುಕೊಳ್ಳಬೇಕಿದೆ.

ಈ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬದ್ಧತೆಗೆ ಮಾನ್ಯತೆ ಇರುತ್ತದೆ. ಇದೀಗ ಉಗ್ರರನ್ನು ಓಲೈಸುವ ನೆಲೆಯಲ್ಲಿ ಅಂತಹ ಬದ್ಧತೆಗಳನ್ನು ಮಣ್ಣುಪಾಲು ಮಾಡಬಾರದು. ಜತೆಗೆ ಜಾತ್ಯತೀತತೆ ಪದವನ್ನು ತಮ್ಮ ಮನಸ್ಸಿಗೆ ಬಂದಂತೆ ಬಳಸುವಂತಹದ್ದಲ್ಲ ಎಂಬುದನ್ನು ಅಕಾಲಿಗಳು ಅರಿತುಕೊಳ್ಳಬೇಕು. ರಾಜಕಾರಣ ಮತ್ತು ಧಾರ್ಮಿಕತೆಗಳ ಜತೆಗೆ ಒಟ್ಟಿಗೇ ನಡೆಯುವ ಅಕಾಲಿಗಳು ಇನ್ನಾದರೂ, ಆಧುನಿಕತೆಯ  ಬಗ್ಗೆ ಚಿಂತಿಸಲಿ. ಹಳೆಯ ಮೌಢ್ಯಗಳನ್ನು ಬಿಟ್ಟು ಹೊಸತನದತ್ತ ಅವರ ಮನಸ್ಸು ತುಡಿಯಬೇಕಿದೆ.

ಇನ್ನಾದರೂ `ಗುರುದ್ವಾರ~ ರಾಜಕಾರಣಗಳಿಂದ ಅಕಾಲಿಗಳು ಹೊರಬರುವಂತಾಗಲಿ. ಇಂತಹ ಎಲ್ಲಾ ಗೊಂದರಲಗಳ ಬಗ್ಗೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಉತ್ತರ ನೀಡಲಿದ್ದಾರೆ ಎಂಬ ಸತ್ಯ ಅಕಾಲಿಗಳಿಗೆ ಅರಿವಾಗಬೇಕಿದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT