ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಯಂತೆ ಹಬ್ಬುತ್ತಿರುವ ಬೆಳಕಿನಂಥ ತಂತ್ರಜ್ಞಾನ

Last Updated 5 ಜುಲೈ 2014, 19:30 IST
ಅಕ್ಷರ ಗಾತ್ರ

ಹಿಮಾಚಲ ಪ್ರದೇಶದ ಬಿಯಾಸ್ ನದಿಯಲ್ಲಿ ಹೈದರಾಬಾದಿನ ವಿದ್ಯಾರ್ಥಿಗಳ ಗುಂಪೊಂದು ಕೊಚ್ಚಿಕೊಂಡು ಹೋದ ಘಟನೆಯನ್ನು ಚಿತ್ರೀಕರಿಸಿದ ವಿಡಿಯೊ ಚಿತ್ರ ಕ್ಷಣಮಾತ್ರದಲ್ಲೇ ದೇಶದಾದ್ಯಂತ ಅಲ್ಲ, ಜಗತ್ತಿನಾದ್ಯಂತ  ಸಾಮಾಜಿಕ ಜಾಲ ತಾಣಗಳಲ್ಲಿ ಬಿಯಾಸ್ ನದಿಯ ಪ್ರವಾಹಕ್ಕಿಂತ ವೇಗವಾಗಿ ಹರಿದಾಡಿತು.

ನೈಸರ್ಗಿಕ ದುರಂತ ಎರಗಿದಾಗ ಮನುಷ್ಯ ಜೀವಗಳನ್ನು ಕಾಪಾಡಲು ಮುಂದಾಗಬೇಕೋ ಅಥವಾ ಕ್ಯಾಮೆರಾ ಹಿಡಿದು ಚಿತ್ರೀಕರಿಸುತ್ತಾ ನಿಲ್ಲಬೇಕೊ? ರೋಚಕತೆ ಬಯಸುವ ವಿಕೃತ ಮನಸ್ಸಿಗೆ ಆಹಾರ ಒದಗಿಸುವುದಕ್ಕಾಗಿ ಅದನ್ನು ಪ್ರಚಾರಪಡಿಸಬೇಕೊ? ಅಥವಾ ಇಂಥ ದಾಖಲೆಯೊಂದನ್ನು ಸರ್ಕಾರ ಕಾನೂನು ದೃಷ್ಟಿಯಿಂದ ವಿಶ್ಲೇಷಿಸಿ, ಈ ದುರ್ಘಟನೆಗೆ ಕಾರಣರಾದವರನ್ನು ಶಿಕ್ಷಿಸಿ, ಮುಂದೆ ಇಂಥವು ಸಂಭವಿಸದಂತೆ ಎಚ್ಚರವಹಿಸಬೇಕೋ?

ಇದರಲ್ಲಿ ಅಡಗಿರುವ ನೈತಿಕತೆ, ಸಾಮಾಜಿಕ ನಡವಳಿಕೆ, ಅಧಿಕಾರಿಶಾಹಿಯ ಎಚ್ಚರಗೇಡಿತನ, ಹೊಸ ಕಾಲದ ತಾಂತ್ರಿಕ ತಿಳವಳಿಕೆಯನ್ನು ಸದ್ಬಳಕೆ ಮಾಡಿಕೊಳ್ಳದ ಅವಿವೇಕತನ, ಕತ್ತೆ ಮೇಯಿಸುವ ಕಾನೂನು ವ್ಯವಸ್ಥೆ ಎಲ್ಲವೂ ಭಯ ಹುಟ್ಟಿಸುವಂತಿವೆ. ಸಮೂಹ ಸಾವನ್ನು ಖುದ್ದು ಚಿತ್ರೀಕರಿಸಿ ಲೋಕಕ್ಕೆಲ್ಲಾ ಕ್ಷಣ ಮಾತ್ರದಲ್ಲಿ ಹರಡಿ ಖುಷಿಪಡಿಸುವ ಈ ತಾಂತ್ರಿಕ ವ್ಯವಸ್ಥೆಯನ್ನೇ ಸದ್ಬಳಕೆ ಮಾಡಿದ್ದರೆ, ಅಣೆಕಟ್ಟಿನಿಂದ ನದಿಗೆ ಹೆಚ್ಚಿನ ನೀರು ಬಿಡುವ ಸುದ್ದಿ, ಆ ವಿದ್ಯಾರ್ಥಿಸಮೂಹಕ್ಕೆ ಅದೇ ಸೋಶಿಯಲ್ ನೆಟ್‌ವರ್ಕುಗಳಿಂದ ಸಕಾಲಕ್ಕೆ ತಲುಪಬಹುದಾಗಿತ್ತಲ್ಲವೆ? ಆ ವಿದ್ಯಾರ್ಥಿಗಳ ಬಳಿ ಮೊಬೈಲುಗಳು ಇತ್ತಲ್ಲವೆ?

ವಿಪರ್ಯಾಸವೇನೆಂದರೆ ಜೀವ ಉಳಿಸಲು ಬಳಸಬಹುದಾಗಿದ್ದ ವ್ಯವಸ್ಥೆ, ಜೀವಗಳು ಭಯಗೊಂಡು ಚೀರುತ್ತಾ ಕೊಚ್ಚಿಹೋಗುವುದನ್ನು ಪ್ರಚಾರ ಮಾಡಲು ಮಾತ್ರ ಬಳಕೆಯಾಯಿತು. ಈಗ ಮೊಬೈಲ್ ಮೂಲಕ ಎಲ್ಲರ ಕೈಯಲ್ಲೂ ಸದಾ ಸಿದ್ಧವಾದ ಕ್ಯಾಮೆರಾ ಇದೆ. ಅದೊಂದು ಸೌಲಭ್ಯವೇ. ಬೆಳಕಿನಂತೆ ಬಳಸಬಹುದಾದ ಈ ಸೌಲಭ್ಯವನ್ನು ಬೆಂಕಿಯಂತೆ ಬಳಸುತ್ತಿರುವುದೇ ಇಂದಿನ ದುರಂತ. ತಂತ್ರಜ್ಞಾನದ ತಪ್ಪೇನೂ ಇಲ್ಲ. ಅದರೆ ಅದನ್ನು ಅಮಾನವೀಯವಾಗಿ ಬಳಸುತ್ತಿದ್ದೇವೆ.

ದಲಿತರ ಗುಡಿಸಲಿಗೆ ಬೆಂಕಿ ಬಿದ್ದಾಗ, ಜೀವ ಉಳಿಸಲು ಮುಂದಾಗದೆ, ಕೂಡಲೇ ಕ್ರಾಂತಿಕಾರಿ ಕಾವ್ಯ ರಚಿಸಲು ಕೂರುವ ಕವಿಯ ಮನಸ್ಥಿತಿಗೆ ಇದನ್ನು ಹೋಲಿಸಬಹುದು. ರಸ್ತೆಯಲ್ಲಿ ಅಪಘಾತವಾದಾಗ ಗಾಯಾಳುವನ್ನು ಗಮನಿಸದೆ ಅದನ್ನು ಚಿತ್ರೀಕರಿಸುವ ಮನಸ್ಸುಗಳೇ ಈಗ ಹೆಚ್ಚು. ಅವಘಡಕ್ಕೆ ನಾವು ಕಾರಣರಲ್ಲ; ಅಂಥ ಅಪರೂಪದ ಕ್ಷಣಗಳನ್ನು ದಾಖಲಿಸಿದರೆ ತಪ್ಪೇನು? ಅದೊಂದು ಅಮೂಲ್ಯ ಚಾರಿತ್ರಿಕ ದಾಖಲೆಯಾಗಿ ಉಳಿಯುವುದಿಲ್ಲವೆ? ಅದನ್ನು ಕೈಬಿಟ್ಟರೆ ಸ್ಮೃತಿಯೊಂದು ಕಣ್ಮರೆಯಾಗುವುದಿಲ್ಲವೆ?

ಸಾಕ್ಷ್ಯವು ನಾಶವಾಗುವುದಿಲ್ಲವೆ? ದಾಖಲಾತಿ ಮುಖ್ಯವಲ್ಲವೆ? ಈ ವಾದವೂ ಇದೆ. ಇದಕ್ಕೆ ಪೂರಕವಾಗಿ ಅನೇಕ ಸಾಕ್ಷ್ಯಚಿತ್ರಗಳೂ ಇವೆ. ಚಿತ್ರ ತೆಗೆಯುತ್ತಲೇ ಬಲಿಯಾದವರೂ ಇದ್ದಾರೆ. ಪ್ರಾಣಾಪಾಯ ಲೆಕ್ಕಿಸದೆ ಚಿತ್ರೀಕರಿಸುವವರೂ ಉಂಟು. ಎಲ್ಲಿ, ಏನನ್ನು, ಹೇಗೆ ದಾಖಲಿಸುತ್ತಿದ್ದೇವೆ? ಅದು ಅಂತಃಕರಣಪ್ರೇರಿತವಾದದ್ದೋ? ಅದಕ್ಕೆ ಮಾನವೀಯಸ್ಪರ್ಶವಿದೆಯೆ? ಆ ದಾಖಲಾತಿಯ ಆಶಯ ನಿಜಕ್ಕೂ ಏನು? ಎಂಬುದರ ಮೇಲೆ ಅದರ ಮೌಲ್ಯ ನಿರ್ಧಾರವಾಗುತ್ತದೆ. ವಿದ್ಯಾರ್ಥಿಗಳ ಸಮೂಹ ನೀರಲ್ಲಿ ಕೊಚ್ಚಿ ಹೋಗಿ ಸಾಯುವ ದೃಶ್ಯ ಅನೇಕರಿಗೆ ರೋಚಕವಾಗಿರಬಹುದು. ಆದರೆ ಆ ಮಕ್ಕಳನ್ನು ಹೆತ್ತಕರುಳಿಗೆ?

ಸಾಮಾಜಿಕ ಜಾಲ ತಾಣಗಳು ಹೇಗೆ ಹಬ್ಬಿವೆ, ಎಷ್ಟು ವ್ಯಾಪಕವಾಗಿವೆ ಎಂದರೆ ಈಗ ಈ ಬಲೆಯಲ್ಲಿ ಸಿಕ್ಕಿಬೀಳದವರೇ ಇಲ್ಲ ಅನ್ನುವಷ್ಟು. ನನ್ನ ಹೆಸರಿನಲ್ಲಿ ಯಾರೂ ಖಾತೆ ತೆರೆಯದಿರಲಿ ಎಂಬ ಮುನ್ನೆಚ್ಚರಿಕೆಗಾಗಿ ಫೇಸ್‌ಬುಕ್‌ನಲ್ಲಿ ಅಕೌಂಟ್ ತೆರೆದಿದ್ದೇನೆ ಎಂದರು ಮಿತ್ರರೊಬ್ಬರು. ಈಗ ಫೇಸ್‌ಬುಕ್ ಅಗ್ರಗಣ್ಯ. ಇದರ ಜತೆಗೆ ಟ್ವಿಟರ್, ಗೂಗಲ್ ಪ್ಲಸ್, ಟಂಬ್ಲರ್, ಇನ್‌ಸ್ಟಗ್ರಮ್, ಆರ್ಕುಟ್, ಬ್ಲಾಗರ್, ಡಿಗ್, ಫ್ಲಿಕರ್, ಪಿಕಾಸ, ಯಾಹೂ, ವಾಟ್‌ಪ್ಯಾಡ್, ಯೆಲ್ಪ್, ಯೂಟ್ಯೂಬ್, ವಾಟ್ಸಪ್, ಗುಡ್‌ರೀಡ್ಸ್, ಇಬಿಬೋ, ಹಿಫಿ, ಫ್ರೆಂಡ್‌ಸ್ಟರ್, ಮೈಸ್ಪೇಸ್, ಪಿಂಟರೆಸ್ಟ್, ಬಿಬಿಎಂ, ಲಿಂಕ್ಡ್‌ಇನ್, ವಿಚಾಟ್, ಲೈನ್, ಕಿಕ್, ಸ್ನ್ಯಾಪ್‌ಚಾಟ್, ವಿಮಿಯೋ... ಈ ಅಂಕಣ ಅಚ್ಚಾಗುವ ವೇಳೆಗೆ ಅನೇಕ ಜಾಲ ತಾಣಗಳು ಶುರುವಾಗಿರಬಹುದು!

ಕೆಲವು ವಿಶ್ವವ್ಯಾಪಕ. ಕೆಲವು ವಿಷಯಾಧಾರಿತ. ಕೆಲವು ವಿಷ ಆಧರಿತ! ಹೊಸಕಾಲದ ತಂತ್ರಾಂಶ ಜಗತ್ತಿನ ಕೂಸುಮರಿಗಳಂತೆ ಮನುಷ್ಯರ ಹೆಗಲೇರಿ ಸವಾರಿ ಮಾಡುತ್ತಿರುವುದರಿಂದ ಇವು ಯಾವಾಗ ಕುತ್ತಿಗೆ ಹಿಚುಕುತ್ತವೆ ಎಂದು ಹೇಳಲಾಗುವುದಿಲ್ಲ. ಕ್ಷಣಾರ್ಧದಲ್ಲಿ ಸುದ್ದಿಯೊಂದು, ಚಿತ್ರವೊಂದು ಲೋಕಕ್ಕೆ ಮುಟ್ಟಬಲ್ಲದು. ಆದರೆ ಆ ಸುದ್ದಿ ಕುಹಕಿಯೊಬ್ಬ ಹುಟ್ಟಿಸಿದ್ದ ಹಸಿ ಸುಳ್ಳಾಗಿದ್ದರೆ ? ಕೋಮುದ್ವೇಷ, ಜನಾಂಗ ನಿಂದೆ, ಭಾಷೆಯೊಂದನ್ನು ಅವಮಾನಿಸುವುದು, ಸಮುದಾಯವೊಂದನ್ನು ಹೀಗಳೆಯುವುದು- ಇಂಥ ಕುಚೇಷ್ಟೆಗೆ ಬಳಕೆಯಾಗಿದ್ದರೆ?

ಸಾಮಾಜಿಕ ಜಾಲ ತಾಣಗಳ ಅಪಾಯವಿರುವುದೇ ಇಲ್ಲಿ. ತಂತ್ರಾಂಶ ಕೌಶಲ್ಯ ಅರಿತ, ಮೇಲರಿಮೆಯಿಂದ ಬಳಲುವ ತಿಳಿಗೇಡಿ ಮತಾಂಧರು, ಈ ಸಾಮಾಜಿಕ ಜಾಲತಾಣಗಳ ಮೂಲಕ ಹೂಸು ಬಿಟ್ಟು ಕ್ಷಣಮಾತ್ರದಲ್ಲಿ ಇಡೀ ಲೋಕವನ್ನು ದುರ್ವಾಸನೆಯಿಂದ ತುಂಬಬಲ್ಲರು. ಇದರ ಪರಿಣಾಮ ಅತ್ಯಲ್ಪವಾದರೂ, ಸಮಾಜದ ಶಾಂತಿಭಂಗ ಮಾಡಿದ ವಿಕೃತ ತೃಪ್ತಿಯಷ್ಟೇ ಅವರಿಗೆ ಸಾಕು.

ಸತ್ಯಗಳನ್ನು ಬಚ್ಚಿಡುವುದು, ಸುಳ್ಳುಗಳನ್ನು ವಿಜೃಂಭಿಸುವುದು, ಮೌಢ್ಯವನ್ನು ಮಾರಾಟ ಮಾಡುವುದು, ಅಪನಂಬಿಕೆಗಳನ್ನು ಹರಡುವುದು, ಮನುಷ್ಯವಿರೋಧಿ ನಿಲುವುಗಳನ್ನು ಪ್ರಚಾರ ಮಾಡುವುದು, ಭಿನ್ನಾಭಿಪ್ರಾಯಗಳನ್ನು ಗೌರವಿಸದಿರುವುದು, ಎಂಥ ದೊಡ್ಡವರನ್ನೂ ಸಾಧಕರನ್ನೂ ಏಕವಚನದಲ್ಲಿ ಸಂಬೋಧಿಸಿ ಹೆಮ್ಮೆ ಪಡುವುದು, ಆಗದವರನ್ನು ತೇಜೋವಧೆ ಮಾಡುವುದು, ಅಸಭ್ಯ ಮತ್ತು ಅಶ್ಲೀಲ ನುಡಿಚಿತ್ರಗಳನ್ನು ರವಾನಿಸಿ ಮಜ ತೆಗೆದುಕೊಳ್ಳುವುದು -ಇವೆಲ್ಲ ಈಗ ಅವ್ಯಾಹತವಾಗಿ ನಡೆಯುತ್ತಿವೆ.

ಇದರ ನಡುವೆ ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳುವವರು, ಸ್ನೇಹಿತರ ಗುಂಪನ್ನು ಹೆಚ್ಚಿಸಿಕೊಳ್ಳುವವರು, ವಧು ವರ ಅನ್ವೇಷಣೆ ಮಾಡಿಕೊಳ್ಳುವವರು, ಇಷ್ಟದೈವದ ಮಹತ್ವವನ್ನು ಸಾರುವವರು, ವಿಕಿಪೀಡಿಯಾದಂಥ ತಾಣದಲ್ಲಿ ತಮ್ಮ ಜ್ಞಾನದ ತುಣುಕನ್ನೂ ಸೇರಿಸಿ ಸತ್ಯನಾಶ ಮಾಡುವವರೂ ಉಂಟು. ‘ಕಮ್ಯುನಿಟಿ ಎನ್‌ಸೈಕ್ಲೋಪೀಡಿಯಾ’ ಎಂದರೆ ಅದು ವಿಕಿಪೀಡಿಯಾ ಎಂಬಂತಾಗಿದೆ. ತಮ್ಮ ಚಾಲಾಕಿತನ ಮತ್ತು ದೂರದೃಷ್ಟಿಯಿಂದ ಈ ಸಾಮಾಜಿಕ ಜಾಲ ತಾಣಗಳನ್ನು ಮೋದಿ ಯಶಸ್ವಿಯಾಗಿ ಬಳಸಿಕೊಂಡರು.

ಅವರನ್ನು ಗೆಲ್ಲಿಸಲು, ಅವರ ಏಕತಾಳಕ್ಕೆ, ಇವರು ತ್ರಿತಾಳ ಹಾಕಿ ವೇಗವಾಗಿ ಓಡಲು ಎಲ್ಲೆಲ್ಲಿಯೂ ಇದ್ದ ಜಗತ್ತಿನ ತಂತ್ರಾಂಶ ಮನಸ್ಸು ಸನ್ನದ್ಧವಾಗಿತ್ತು. ಮೋದಿ ಅಭಿನಂದನಾರ್ಹರು. ಆದರೆ ಮೋದಿ ತಪ್ಪು ಮಾಡಿದಾಗ ಈ ಸೋಶಿಯಲ್ ನೆಟ್‌ವರ್ಕು ಇದೇ ಪ್ರಮಾಣದಲ್ಲಿ ಕೆಲಸ ಮಾಡುತ್ತದೆ ಎಂದು ನಿರೀಕ್ಷಿಸುವುದು ಕಷ್ಟ. ಕಾರಣ ಅದರ ಹೆಸರೇ ನೆಟ್‌ವರ್ಕು! ಈಗ ರಾಷ್ಟ್ರಪತಿ ಭವನವೂ ನಿದ್ರೆಯಿಂದ ಎಚ್ಚೆತ್ತು ನೆಟ್‌ವರ್ಕ್ ಪ್ರವೇಶಿಸಿದೆ. ಸರ್ಕಾರಿ ತಾಣಗಳು ಅಪ್‌ಡೇಟ್ ಆಗುವುದು ಮಾತ್ರವಲ್ಲ; ಆಕರ್ಷಕವಾಗಿರಬೇಕು; ಸಂವಹನಶೀಲತೆಯಿಂದ ಕೂಡಿರಬೇಕು.

ವಾರ್ತಾ ಇಲಾಖೆಯ ಜಡ ಜಾಹೀರಾತಿನಂತಿರಬಾರದು. ಮೋದಿ ಜಯಿಸಿದ್ದೇ ತನ್ನ ಹೊಸ ನುಡಿಗಟ್ಟು ಮತ್ತು ವಾಕ್‌ವೈಖರಿಯಿಂದ. ಕೇಂದ್ರ  ಮತ್ತು ರಾಜ್ಯ ಸರ್ಕಾರಗಳು ದೇಶದ ಹವಾಮಾನ, ಪರಿಸರ, ಜಲಸಂಪತ್ತು, ವನ್ಯಸಂಪತ್ತು, ಕೈಗಾರಿಕೆ, ಶಿಕ್ಷಣ, ಉದ್ಯೋಗಾವಕಾಶ, ಸ್ವತಂತ್ರ ಉದ್ದಿಮೆಗಳ ಸ್ಥಾಪನೆ, ವಿದ್ಯುತ್ ಉತ್ಪಾದನೆ, ಸಾಂಸ್ಕೃತಿಕ ಸಂಪತ್ತು, ಸಂಶೋಧನೆ, ಕ್ರೀಡೆ, ಆರ್ಥಿಕ ಜಗತ್ತು, ಪ್ರವಾಸೋದ್ಯಮ, ಕೃಷಿ, ಕರಾವಳಿ- ಈ ವಿಷಯಗಳ ಮೇಲೆ ವಾಸ್ತವ ಮೀರದ ಅತ್ಯಾಕರ್ಷಕ ಮಾಹಿತಿಗಳೊಂದಿಗೆ ಪ್ರತ್ಯಕ್ಷವಾಗಬಹುದು.

ನಮ್ಮ ಮೂರು ಕಡಲು, ಒಂದು ಹಿಮಾಲಯ ಮತ್ತು ಅಸಂಖ್ಯ ನದಿಗಳ ಬಗ್ಗೆ ಮೂಲಭೂತ ಅರಿವಿಲ್ಲದ ಎಷ್ಟೊಂದು ಜನರು ಮಂತ್ರಿಗಳೂ- ಅಧಿಕಾರಿಗಳೂ ಆಗಿದ್ದಾರೆ! ಇಂಥವರಿಂದ ಸೋಶಿಯಲ್ ನೆಟ್‌ವರ್ಕುಗಳಲ್ಲಿ ಸೆನ್ಸೇಶನಲ್ ಸುದ್ದಿಗಳು ಹರಡಲು ಮಾತ್ರ ಸಾಧ್ಯ.
ಸೈಬರ್ ಕ್ರೈಂ ಪತ್ತೆಹಚ್ಚುವ ವಿಭಾಗ ಒಂದಿದೆ. ಅಪರಾಧಿಗಳನ್ನು ದಂಡಿಸಲು ೬೬ಎ ಎಂಬ ಕಾಯಿದೆಯೂ ಇದೆಯಂತೆ. ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಬೆಂಗಳೂರು ಸೈಬರ್ ಕ್ರೈಂನಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.

ಇಲ್ಲಿ ಹನ್ನೆರಡು ಲಕ್ಷ ಐ.ಟಿ. ಉದ್ಯೋಗಿಗಳೂ ನೂರೈದು ಠಾಣೆಗಳೂ ಇವೆ. ಎಷ್ಟು ಎಚ್ಚರಿಕೆಗಳನ್ನು ಬಿತ್ತಿದರೂ ಜನ ಮೋಸ ಹೋಗುತ್ತಾರೆ. ತಮ್ಮ ಕ್ರೆಡಿಟ್, -ಡೆಬಿಟ್ ಕಾರ್ಡ್ ವಿವರಗಳನ್ನು ರಕ್ಷಿಸಿಕೊಳ್ಳುವುದಿಲ್ಲ. ದುರಾಸೆಗೆ ಬೀಳುತ್ತಾರೆ. ಆನ್‌ಲೈನ್ ಪರ್ಚೇಸ್‌ಗಳಲ್ಲಿ ಮೋಸ ಹೋಗುತ್ತಾರೆ. ದುಬೈ ಲಂಡನ್‌ಗಳಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದರೆ, ಪರಿಶೀಲಿಸದೆ ಲಕ್ಷಾಂತರ ರೂಪಾಯಿ ಹಣವನ್ನು ಮೋಸಗಾರನ ಖಾತೆಗೆ ವರ್ಗಾಯಿಸಿಬಿಡುತ್ತಾರೆ.

ಇಲಾಖೆಯಿಂದ ಎಚ್ಚರಿಕೆಯ ಮೆಸೇಜುಗಳನ್ನು ಕಳುಹಿಸಿದರೆ ಓದುವುದೇ ಇಲ್ಲ. ಲಾಟರಿಯಲ್ಲಿ ಬಹುಮಾನ ಬಂದಿದೆ ಎಂಬ ಮೆಸೇಜು ಕಂಡೊಡನೆ ಪುಳಕಿತರಾಗಿ ಅವರಿಗೆ ಹಣ ಕಳುಹಿಸುತ್ತಾರೆ. ಆಫ್ರಿಕಾ ದೇಶಗಳ ವಂಚಕರು ನಮ್ಮ ದೇಶದಲ್ಲಿ ಈ ದಂಧೆಯಲ್ಲಿ ನಿರಂತರವಾಗಿ ತೊಡಗಿದ್ದಾರೆ. ಇವುಗಳೆಲ್ಲ ಆರ್ಥಿಕ ವಂಚನೆಗಳಾದವು. ಸಾಮಾಜಿಕ, ಸಾಂಸ್ಕೃತಿಕ, ಚಾರಿತ್ರಿಕ ವಂಚನೆಗಳಿಗೆ ಪರಿಹಾರ ಸಿಗುವುದು ಕಷ್ಟ. ಕಾರಣ ಅವುಗಳನ್ನು ಸ್ಪಷ್ಟೀಕರಿಸುವುದೇ ಒಂದು ಸವಾಲು.

ನನ್ನ ರಾಜಕಾರಣಿ ಮಿತ್ರರೊಬ್ಬರು ತಮ್ಮ ಮೊಬೈಲ್ ಜತೆಯಲ್ಲಿ ಬೈಬಲ್ ಗಾತ್ರದ ಟೆಲಿಫೋನ್ ಡೈರೆಕ್ಟರಿಯನ್ನು ಹೊತ್ತುಕೊಂಡು ಓಡಾಡುತ್ತಾರೆ. ಕಾರಣ ಕೇಳಿದರೆ ಅವರಿಗೆ ಯಾವ ನಂಬರನ್ನೂ ಹೆಸರಿನೊಂದಿಗೆ ಸೇವ್ ಮಾಡಿಕೊಳ್ಳಲು ಬರುವುದಿಲ್ಲವಂತೆ. ಅವರು ಡೈರೆಕ್ಟರಿಯಲ್ಲಿ ಹೆಸರು ಹುಡುಕುತ್ತಾರೆ. ಕರೆ ಮಾಡಲು ನಂಬರ್‌ಗಳನ್ನು ಒತ್ತುವುದು, ಕರೆಯನ್ನು ಸ್ವೀಕರಿಸಲು ಗುಂಡಿ ಒತ್ತುವುದು, ಇವೆರಡನ್ನು ಬಿಟ್ಟರೆ ಮೊಬೈಲ್‌ನ ಇನ್ನಾವ ಸೌಲಭ್ಯಗಳನ್ನೂ ಅವರಿಗೆ ಬಳಸಲು ಬರುವುದಿಲ್ಲ.

ಇಟ್ಟುಕೊಂಡಿರುವುದು ಮಾತ್ರ ಅತ್ಯಾಧುನಿಕ ಸ್ಮಾರ್ಟ್‌ಫೋನ್. ಹೇಳಿಕೊಡಲು ಹೋದರೆ ಗಾಬರಿಗೊಂಡು ಅರ್ಥವಾಗುವುದಿಲ್ಲ ಎಂದು ಹೌಹಾರುತ್ತಾರೆ. ರಾಜಕೀಯ ವಿಶ್ಲೇಷಕರು, ವಾಚಾಳಿಗಳು, ಅಪಾರ ಜ್ಞಾನ ಉಳ್ಳವರು- ಆದರೆ ಮೊಬೈಲ್ ಬಳಸಲು ಬಾರದವರು. ಇದಕ್ಕೆ ವ್ಯತಿರಿಕ್ತವಾಗಿ ಮೈಸೂರಿನಲ್ಲಿ ನಿವೃತ್ತ ಅಧಿಕಾರಿಯೊಬ್ಬರಿದ್ದಾರೆ. ತಮ್ಮ ಗೆಳೆಯರನ್ನು ಬಂಧು–ಬಾಂಧವರನ್ನು ಮಾತನಾಡಿಸಲು, ಕಷ್ಟಸುಖ ವಿಚಾರಿಸಲು ಅವರಿಗೆ ಪುರುಸೊತ್ತಿರುವುದಿಲ್ಲ. ಆದರೆ ವಿಶ್ವವ್ಯಾಪಿಯಾಗಿರುವ ಅಪರಿಚಿತ ಲೋಕದ ಅಜ್ಞಾತರಿಗೆ ತಮ್ಮ ಸೋಶಿಯಲ್ ನೆಟ್‌ವರ್ಕಿನ ಮೂಲಕ ಸ್ನೇಹಕ್ಕಾಗಿ ಆಹ್ವಾನಿಸುತ್ತಾರೆ.

ದಿನವೊಂದಕ್ಕೆ ಅವರು ಫ್ರೆಂಡ್‌ಶಿಪ್‌ಗೆ ಇನ್‌ವೈಟ್ ಮಾಡುವುದು ಐದು ಸಾವಿರ ಜನಕ್ಕೆ! ಬಹಳ ಜನ ಆಹ್ವಾನವನ್ನು ಸ್ವೀಕರಿಸುವುದಿಲ್ಲ. ಏಕೆ ಸ್ವೀಕರಿಸಲಿಲ್ಲ ಎಂದು ಮತ್ತೆ ಮೆಸೇಜು ಕಳುಹಿಸುತ್ತಾರೆ. ಯಾರು ತಿರಸ್ಕರಿಸಿದರೂ ಬಿಡದೆ, ಸಾವಿರಾರು ಮೆಸೇಜುಗಳನ್ನು ವಾಟ್ಸ್‌ಅಪ್‌ ಮೂಲಕ, ತಮ್ಮ ಇಪ್ಪತ್ತೈದು ವರ್ಷದ ಹಳೆಯ ಭಾವಚಿತ್ರದೊಂದಿಗೆ ಕಳುಹಿಸುತ್ತಲೇ ಇರುತ್ತಾರೆ. ಇಂಥ ಹಿರಿಯರನ್ನು ಕಂಡಾಗ ಸದಾ ಮೊಬೈಲ್‌ಗೆ ಅಂಟಿಕೊಂಡಿರುವ ಹದಿಹರೆಯದವರನ್ನು ಕ್ಷಮಿಸಬಹುದು ಅನ್ನಿಸುತ್ತದೆ.ನಮ್ಮ ಭಾರತ ವಿದ್ಯಾವಂತರಿಂದ ಮತ್ತು ಅವಿದ್ಯಾವಂತರಿಂದ ಮಾತ್ರ ತುಂಬಿಲ್ಲ. ಇದ್ಯಾವಂತರಿಂದ ಮತ್ತು  ಇಅವಿದ್ಯಾವಂತರಿಂದಲೂ ತುಂಬಿ ತುಳುಕುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT