ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಒಗ್ಗಿಬರದ ಸೆಲಿಬ್ರಿಟಿ ಪುಟಗಳು

Last Updated 10 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಮುಂಬೈನಿಂದ ಬೆಂಗಳೂರಿಗೆ ಬಂದ ಪತ್ರಿಕೆಗಳು ಆ ನಗರದ ಸೆಲಿಬ್ರಿಟಿ ಪುಟಗಳನ್ನು ಇಲ್ಲಿಯೂ ಪ್ರಕಟಿಸಲು ಹೊರಟು ಕೆಲವು ತಮಾಷೆಗಳಿಗೆ ಕಾರಣವಾಗಿವೆ. ಮುಂಬೈಯಲ್ಲಿ ಇದ್ದಂತೆ ಬೆಂಗಳೂರಿನಲ್ಲಿ ಪಾರ್ಟಿ ಮಾಡುವ ಸಿನಿಮಾ ಮಂದಿ, ಉದ್ಯೋಗಪತಿಗಳು ತೀರ ವಿರಳ. ಹಾಗಾಗಿ ಇಲ್ಲಿನ ಪಾರ್ಟಿ ಪುಟಗಳಲ್ಲಿ ಕಾಣಿಸಿಕೊಳ್ಳುವ ಬಹುಪಾಲು ಜನ ಸೆಲಿಬ್ರಿಟಿ ಎಂದು ಕರೆಸಿಕೊಳ್ಳಲು ತಿಣುಕಾಡುತ್ತಿರುವವರು. ಪತ್ರಿಕಾ ಕಚೇರಿಗಳಿಗೆ ತಮ್ಮ ಫೋಟೋ ಸೀಡಿಗಳನ್ನು ಹಿಡಿದು ಅಲೆಯುವ ಇಂಥವರನ್ನು ಸೆಲಿಬ್ರಿಟಿಗಳು ಎಂದು ಕರೆಯುವುದಾದರೂ ಹೇಗೆ?

ಮುಂಬೈ ಮೊದಲಿನಿಂದಲೂ ಹಿಂದಿ ಸಿನಿಮಾ ಜಗತ್ತಿನ ಕೇಂದ್ರ. (ಲಾಹೋರ್ ನಲ್ಲಿ ಇದ್ದ ಮುಂಬೈ ರೀತಿಯ ಸಿನಿಮಾ ಉದ್ಯಮ ದೇಶ ವಿಭಜನೆಯಾದ ಮೇಲೆ ದುರ್ಬಲವಾಗಿ ಹೋಯಿತು). ಮುಂಬೈಯಲ್ಲಿ ಸಿನಿಮಾ ಪತ್ರಿಕೆಗಳು ದಶಕಗಳಿಂದ ಪ್ರಕಟವಾಗುತ್ತಾ ಬಂದಿವೆ. ನಿಜ, ಸಿನಿಮಾಕ್ಕಿಂತ `ಟ್ರೇಡ್' ಮತ್ತು `ಲೈಫ್ ಸ್ಟೈಲ್' ಪತ್ರಿಕೆಗಳಂತೆ ಅವು ಇಂದು ಕಾಣಬಹುದು. ಸಿನಿಮಾದ ಬಗ್ಗೆ ಗಂಭೀರ ಲೇಖನ ಒಂದೂ ಇರದ ಎಷ್ಟೋ ಪತ್ರಿಕೆಗಳು ನಟ ನಟಿಯರ ಹೆಸರಿನಲ್ಲಿ ಯಾವುದೊ ವಸ್ತುವನ್ನು, `ಸೇವೆ'ಯನ್ನೂ ಪ್ರಮೋಟ್ ಮಾಡುತ್ತಿರುತ್ತವೆ. 

ಆದರೆ ಒಂದು ಕಾಲಕ್ಕೆ ದೇವಯಾನಿ ಚೌಬಲ್ ಮತ್ತು ಶೋಭ ಡೇ ಥರದ ಮುಂಬೈ ಪತ್ರಕರ್ತರು ಸಿನಿಮಾ ಮಂದಿಯ ತೆವಲುಗಳು, ಚೇಷ್ಟೆಗಳನ್ನು ಗೇಲಿ ಮಾಡುತ್ತಲೇ ಹೆಸರು ಮಾಡಿದವರು. ಅಲ್ಲೊಂದು ಇಲ್ಲೊಂದು ಸಿನಿಮಾ ಸುದ್ದಿಯ ತುಣುಕುಗಳು ಪ್ರಕಟವಾದರೂ, ಬೆಂಗಳೂರಿನಲ್ಲಿ ಆ ರೀತಿಯ ಕೀಟಲೆಯ, ನಟನಟಿಯರ ಒಣ ಜಂಭವನ್ನು ಚುಚ್ಚಿ ಠುಸ್ಸ್ ಮಾಡುವ ಸಿನಿಮಾ ಜರ್ನಲಿಸಂ ಪತ್ರಿಕೆಯೊಂದನ್ನು ಯಶಸ್ವಿಗೊಳಿಸುವಷ್ಟು ಗಟ್ಟಿಯಾಗಿ ಬೆಳೆಯಲಿಲ್ಲ. ಮುಂಬೈನಲ್ಲೂ ಆ ಥರದ ಜರ್ನಲಿಸಂ ಈಚೆಗೆ ಕಾಣುತ್ತಿಲ್ಲ ಅನ್ನುವುದನ್ನು ಮರೆಯದಿರೋಣ.

ಘನ ಗಂಭೀರ ದನಿಯಲ್ಲಿ ಸುದ್ದಿ ಬಿತ್ತರಿಸುತ್ತಿದ್ದ ಮುಂಬೈನ ಇಂಗ್ಲಿಷ್ ದಿನಪತ್ರಿಕೆಗಳೂ ಆ ಊರಿನ ಸಿನಿಮಾ ಪತ್ರಿಕೆಗಳ ಅಂಶಗಳನ್ನು ಹದಿನೈದು ವರ್ಷದಿಂದ ಈಚೆಗೆ ಅಳವಡಿಸಿಕೊಂಡಿವೆ. ಆದರೆ, ಅಲ್ಲಿನ ಬರವಣಿಗೆ ದುಷ್ಟರಿಗೂ ಬೇಸರವಾಗದ ಕಾಡು ಹರಟೆಯ ಮಟ್ಟದಿಂದ ಮೇಲಕ್ಕೆ  ಏಳುತ್ತಿಲ್ಲ. ಪಿ.ಆರ್. ಬರವಣಿಗೆಗಿಂತ ಭಿನ್ನವಾಗಿ ಕಾಣುತ್ತಿಲ್ಲ.  

ಬೆಂಗಳೂರಿನಲ್ಲಿ ಕನ್ನಡ ಸಿನಿಮಾ ಉದ್ಯಮ ಚಿಗುರಿದ್ದೇ 1980ರ ನಂತರ. ಇಲ್ಲಿ ಗಾಸಿಪ್, ಸೆಲಿಬ್ರಿಟಿ ಪುಟ ಮಾಡುವುದು ಸ್ವಲ್ಪ ಕಷ್ಟವೇ. ಒಂದೇ ಕುಟುಂಬ ಎಂದು ತೋರಿಸಿಕೊಳ್ಳಲು ಇಷ್ಟಪಡುವ ಉದ್ಯಮ ಗಾಸಿಪ್ ವರದಿಗಳನ್ನು ಅರಗಿಸಿಕೊಂಡು, ಅವೂ ಕನ್ನಡ ಚಿತ್ರೋದ್ಯಮದ ಝಗಮಗ ಹೆಚ್ಚುವಂತೆ ಮಾಡುತ್ತವೆ ಎಂದು ಒಪ್ಪಿಕೊಳ್ಳುವ ಹಂತಕ್ಕೆ ಇನ್ನೂ ಬಂದಂತಿಲ್ಲ. ಇನ್ನು ಇಲ್ಲಿದ್ದ ದುಡ್ಡಿನ ಮಂದಿ ಮುಂಬೈನ ಗ್ಲಾಮರ್ ಮಂದಿಯಂತೆ ಪಾರ್ಟಿ ಮಾಡಿದ್ದೇ ಇಲ್ಲವೇನೋ? `ಇನ್ಫೋಸಿಸ್'ನ ನಾರಾಯಣ ಮೂರ್ತಿ, `ವಿಪ್ರೊ'ದ ಅಜೀಂ ಪ್ರೇಮ್‌ಜಿ ಪಾರ್ಟಿ ಪುಟಗಳಲ್ಲಿ ಎಂದೂ  ಬರುವಂಥವರಲ್ಲ. ಇದಕ್ಕೆ ಅಪವಾದವೆಂದರೆ ವಿಜಯ್ ಮಲ್ಯ; ಪಾರ್ಟಿ ಮಾಡುವ ಶೋಕಿಯ ಮನುಷ್ಯ. ಆದರೆ ಆತ ನಾರಾಯಣ ಮೂರ್ತಿ, ಪ್ರೇಮ್‌ಜಿ ಮಟ್ಟದ ಉದ್ಯೋಗಪತಿಯಲ್ಲ. ಇನ್ನು ಹಳೆಯ ಬೆಂಗಳೂರಿನ ಧನಿಕರನ್ನು ನೋಡಿ. ರೇಷ್ಮೆ, ಊದುಕಡ್ಡಿ, ದಿನಸಿ ವ್ಯಾಪಾರ ಮಾಡಿ ಸಂಪತ್ತು ಗಳಿಸಿದ ಶೆಟ್ಟಿ ವರ್ತಕರು ಪಾರ್ಟಿ ಮಾಡುವ ಪೈಕಿಯವರಲ್ಲ. ಅವರ ಬಗ್ಗೆ ಪತ್ರಿಕೆಗಳಿಗೆ ಆಸಕ್ತಿಯೂ ಇಲ್ಲ. ಮುಂಬೈನಲ್ಲಿ ಸಿನಿಮಾ ತಾರೆಯರು ಮತ್ತು ವಾಣಿಜ್ಯ ಸಾಮ್ರೋಜ್ಯದ ದೊರೆಗಳು ಪಾರ್ಟಿ ಮಾಡುವಂತೆ ಇಲ್ಲಿಯವರು ಎಂದೂ ಮಾಡಿಯೇ ಇಲ್ಲ.

ಅಜೀಂ ಪ್ರೇಮ್‌ಜಿ ಮಾಡಿದ ದಾನ
ಮೊನ್ನೆ ಸುಮಾರು 12,000 ಕೋಟಿ ರೂಪಾಯಿ ಬೆಲೆಯ ಷೇರುಗಳನ್ನು ದಾನ ಮಾಡಿರುವ ಬೆಂಗಳೂರಿನ ಐಟಿ ಉದ್ಯೋಗಪತಿ ಅಜೀಂ ಪ್ರೇಮ್‌ಜಿ ಭಾರತದ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಮೂರನೆಯವರು (ಮೊದಲನೆಯವರು ಮುಖೇಶ್ ಅಂಬಾನಿ). ಮುಂಬೈ ಮೂಲದ ಪ್ರೇಮ್‌ಜಿ ಬೆಂಗಳೂರಿನಲ್ಲಿ ಹದಿನೈದು ವರ್ಷದಿಂದ ನೆಲೆಸಿದ್ದಾರೆ. `ವಿಪ್ರೊ' ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ದಾನದ ಬಗ್ಗೆ, ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಮಾತಾಡುವ ಇತರ ಕಾರ್ಪೊರೇಟ್ ಸಂಸ್ಥೆಗಳಾಗಲೀ, ಉದ್ಯೋಗಪತಿಗಳಾಗಲಿ ಇಂಥ ದೊಡ್ಡ ಮೊತ್ತದ ದಾನವನ್ನು ಮಾಡಿಲ್ಲ. ಈ ಹಣವನ್ನು ಶಿಕ್ಷಣಕ್ಕೆ ಖರ್ಚು ಮಾಡುವ ಉದ್ದೇಶ ಅವರದು. ಅಜೀಂ ಪ್ರೇಮ್‌ಜಿ ಫೌಂಡೇಶನ್ ನಡೆಸುವ ವಿಶ್ವವಿದ್ಯಾಲಯಕ್ಕೆ ಪ್ರಮುಖವಾಗಿ ಈ ಹಣ ಖರ್ಚಾಗುತ್ತದೆ.  

ಈ ವಿಷಯ ಪ್ರಕಟವಾದಾಗ ಪತ್ರಿಕೆಯವರು ಪ್ರೇಮ್‌ಜಿಯವರನ್ನು ಮಾತಾಡಿಸಲು ಪ್ರಯತ್ನಿಸಿದರು. ಆದರೆ ದಾನದ ಬಗ್ಗೆ ಮಾತಾಡುವುದಿಲ್ಲ ಎಂದು ಪ್ರೇಮ್‌ಜಿ ನಿಲುವು ತೆಗೆದುಕೊಂಡರು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವಿಪರೀತ ಐಶ್ವರ್ಯ ಕೆಲವೇ ಕೆಲವರಲ್ಲಿ ಸೇರಿಕೊಳ್ಳುತ್ತದೆ ಎಂಬ ಮಾತಿದೆ. ಆದರೆ ಹೀಗೆ ಶೇಖರಿಸಿದ ಹಣವನ್ನು ದಾನ ಮಾಡಿಬಿಡುವ ಅಮೆರಿಕನ್ ಮಾರ್ಗವನ್ನು ಪ್ರೇಮ್‌ಜಿ ಅನುಸರಿದ್ದಾರೆ. (ವಾರನ್ ಬಫೆಟ್ ಎಂಬ ಅತಿ ದೊಡ್ಡ ಹೂಡಿಕೆದಾರ ತನ್ನ ಸಂಪತ್ತಿನ ಶೇಕಡ 99 ಭಾಗವನ್ನು ದಾನವಾಗಿ ಕೊಟ್ಟುಬಿಡುತ್ತಿದ್ದಾರೆ. ಅಮೆರಿಕದಲ್ಲಿ `ಇನ್ಹೆರಿಟೆನ್ಸ್ ಟ್ಯಾಕ್ಸ್' ಹೆಚ್ಚಾಗಿರುವುದರಿಂದ ಹೀಗೆ ದಾನ ಮಾಡುವುದೇ ಲೇಸು ಎಂದು ಕೆಲವರು ಕೊಂಕು ಆಡುತ್ತಾರೆ. ಹಾಗಾದರೆ ವಿಪರೀತ ಆಸ್ತಿ ಇರುವವರೆಲ್ಲ ಹೀಗೆ ಯಾಕೆ ದಾನ ಮಾಡುವುದಿಲ್ಲ?). ಇನ್ನು ಕೆಲವರು ದಾನ ಮಾಡಿ ತಮ್ಮ ಸಂಸ್ಥೆಗಳಿಗೇ ವ್ಯಾಪಾರ ವೃದ್ಧಿ ಆಗುವಂತೆ ಮಾಡಿಕೊಳ್ಳುತ್ತಾರೆ ಎಂಬ ಆಪಾದನೆಯೂ ಇದೆ.

ಅದಿರಲಿ. ಹೀಗೆ ಅವರ ದಾನದ ವರದಿಯನ್ನು ಮಾಡ ಹೋರಾಟ ವರದಿಗಾರ ಜಿ.ಎನ್. ಪ್ರಶಾಂತ್‌ಗೆ ಯಾಸ್ಮೀನ್ ಪ್ರೇಮ್‌ಜಿ ಸಿಕ್ಕರು. ಯಾಸ್ಮೀನ್ ಬಗ್ಗೆ ಬೆಂಗಳೂರಿಗರಿಗೆ ಹೆಚ್ಚಾಗಿ ಗೊತ್ತಿಲ್ಲ. ಅವರು ಪತ್ರಕರ್ತರಾಗಿ 17 ವರ್ಷ ಕೆಲಸ ಮಾಡಿದ್ದಾರೆ. ತಮ್ಮ ಯೌವನದ ದಿನಗಳಲ್ಲಿ ಒಬ್ಬರೇ ಹಿಚ್ ಹೈಕ್ ಮಾಡಿಕೊಂಡು ಯೂರೋಪ್ ಸುತ್ತಿ ಬಂದಿದ್ದಾರೆ. ಇತ್ತೀಚಿಗೆ ಒಂದು ಕಾದಂಬರಿ ಬರೆದಿದ್ದಾರೆ. `ಡೇಸ್ ಆಫ್ ಸೆಪಿಯಾ ಅಂಡ್ ಗೋಲ್ಡ್' ಎಂಬ ಅವರ ಪುಸ್ತಕ ಮುಂಬೈ ಉದ್ಯಮಿಯೊಬ್ಬನ ಕಥೆಯನ್ನು ಹೇಳುತ್ತಲೇ ಆ ಊರಿನ ಒಂದು ಘಟ್ಟವನ್ನು ಬಿಂಬಿಸುತ್ತಿದೆ. ಲಾಲ್‌ಜೀ ಎಂಬುವವನ ಕಥೆಯಲ್ಲಿ ಪ್ರೇಮ್‌ಜಿ ಅವರ ಕುಟುಂಬದ ಕಥೆಯ ಅಂಶಗಳೂ ಇವೆ ಎಂದು ಅವರೇ ಹೇಳಿದರು.

ಮಾಧ್ಯಮದವರಿಂದ ದೂರವೇ ಇರುವ ಈ `ಸೆಲಿಬ್ರಿಟಿ'ಯ ಬರವಣಿಗೆಯ ಬಗ್ಗೆ ಕುತೂಹಲವಿದ್ದರೆ ಅವರ ಕಾದಂಬರಿ ಓದಿ. ಕಷ್ಟಪಟ್ಟು ದೊಡ್ಡ ಕಾಟನ್ ವ್ಯಾಪಾರದ ಸಾಮ್ರೋಜ್ಯ ಕಟ್ಟುವ ಬಡವನೊಬ್ಬನ ಯಶೋಗಾಥೆ ಇದು. ಉದ್ಯಮಿಗಳು ಪ್ರತಿಷ್ಠಿತರಾದ ಮೇಲೆ ಅವರ ಜೀವನ ಕ್ರಮ, ಧೋರಣೆ ಹೇಗೆ ರಾಜ ಮಹಾರಾಜರ ವರಸೆಯನ್ನೇ ನೆನಪಿಸುತ್ತದೆ ಎಂದು ಕೆಲವು ಕಡೆ ಅನ್ನಿಸಿತು. ಕೆಲವು ಭಾಗಗಳು ನನಗೆ ಇಷ್ಟವಾದವು.

ಚಿತ್ರಕಥೆಯ ವಿಜಯ
ಹೋದವಾರ ಎರಡು ಹಿಂದಿ ಚಿತ್ರಗಳನ್ನು ನೋಡಿದೆ: `ಕಾಯ್ ಪೋ ಛೆ' ಮತ್ತು `ಸಾಹಿಬ್ ಬೀವಿ ಅಂಡ್ ಗ್ಯಾಂಗ್‌ಸ್ಟರ್ ರಿಟರ್ನ್ಸ್'. ತೀರ ದುಬಾರಿ ನಟರು ಈ ಚಿತ್ರಗಳಲ್ಲಿ ಇಲ್ಲ. ಆದರೆ ಎರಡೂ ಚಿತ್ರಗಳು ಬಿಗಿಯಾಗಿ ಕಥೆ ಹೇಳುತ್ತವೆ. ಒಂದಂತೂ ನಿಜ. ಸ್ಟಾರ್‌ಗಳನ್ನು ಅವಲಂಬಿಸುತ್ತಿದ್ದ ಮುಂಬೈ ಚಿತ್ರೋದ್ಯಮ ಒಳ್ಳೆಯ ಚಿತ್ರಕಥೆಗೆ ಹೆಚ್ಚು ಪ್ರಾಮುಖ್ಯ ನೀಡುತ್ತಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT