ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಹತ್ತಿರುವ ಪಿಜ್ಜಾ ರುಚಿ

Last Updated 18 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಅಮೆರಿಕದಿಂದ ಬಂದು ಈಚೆಗೆ ಬೆಂಗಳೂರಿನಲ್ಲಿ ಜನಪ್ರಿಯವಾಗಿರುವ ಹಲವು ತಿನಿಸುಗಳಲ್ಲಿ ಪಿಜ್ಜಾ ಕೂಡ ಒಂದು. ಬರ್ಗರ್ ಮತ್ತೊಂದು. ಪಿಜ್ಜಾದ ಮೂಲ ಇಟಲಿ. ಬ್ರೆಡ್ ತಳದ ಮೇಲೆ ತರಕಾರಿ, ಕೋಳಿ ತುಂಡು ಹಾಕಿ ಓವೆನ್‌ನಲ್ಲಿ ತಯಾರಿಸುವ ಈ ತಿನಿಸು ಈಚಿನ ವರ್ಷಗಳಲ್ಲಿ ನಮ್ಮ ರೊಟ್ಟಿ ಚಟ್ನಿಗಿಂತ ಜನಪ್ರಿಯವಾಗಿರುವುದಕ್ಕೆ ಅಮೆರಿಕನ್ನರೇ ಕಾರಣವಿರಬೇಕು.

ಈ ಇಟಾಲಿಯನ್ ತಿನಿಸನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಿದವರು ಅಮೆರಿಕನ್ನರೇ. ಹಾಲಿವುಡ್ ಚಿತ್ರಗಳು, ಸಾಫ್ಟ್‌ವೇರ್ ಕಂಪೆನಿಗಳ ಅಮೆರಿಕನ್ ಶೈಲಿ ಎಲ್ಲ ಸೇರಿ ಬೆಂಗಳೂರಿನ ಜನಕ್ಕೆ ಈಗ ಪಿಜ್ಜಾ ರುಚಿ ಹತ್ತಿಬಿಟ್ಟಿದೆ. ಭಾರತದಲ್ಲಿ ವರ್ಷಕ್ಕೆ ಶೇ.೨೫ರಷ್ಟು ಈ ವ್ಯಾಪಾರ ಬೆಳೆಯುತ್ತಿದೆಯಂತೆ ಮತ್ತು ಹೊರಗೆ ಹೋಗಿ ತಿನ್ನುವವರಲ್ಲಿ ಶೇ.೭೦ರಷ್ಟು ಜನ ೩೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರಂತೆ.

ಅಯ್ಯಂಗಾರ್ ಬೇಕರಿಗಳಲ್ಲಿ ಟೋಸ್ಟ್, ಸ್ಯಾಂಡ್ವಿಚ್ ಎಂದು ಕರೆಯುವ ತಿನಿಸು ಸುಮಾರು ೩೦ ವರ್ಷದಿಂದ ಬೆಂಗಳೂರಿನ ಜನಕ್ಕೆ ಪರಿಚಿತ. ಅದು ಒಂದು ರೀತಿಯಲ್ಲಿ ಪಿಜ್ಜಾ ರೀತಿಯ ತಿನಿಸೇ. ಈರುಳ್ಳಿ, ಟೊಮೊಟೊ ಹೆಚ್ಚಿ, ಖಾರದ ಮಸಾಲೆ ಹಾಕಿ ಅದನ್ನು ಬ್ರೆಡ್ ಹಾಳೆಯ ಮೇಲೆ ಸುರಿದು ಓವೆನ್‌ನಲ್ಲಿಟ್ಟು ತಯಾರಿಸುವ ಈ ತಿನಿಸು ಇಂದಿಗೂ ತುಂಬ ಕಡಿಮೆ ಬೆಲೆಗೆ ಸಿಗುತ್ತದೆ.

ಹೆಚ್ಚು ಕಡಿಮೆ ಇಂಥದ್ದೇ ಸಾಮಗ್ರಿಗಳಿಗೆ ಚೀಸ್ ಮತ್ತು ಘಮ ತರುವ ಇಟಾಲಿಯನ್ ಪುಡಿಗಳನ್ನು ಹಾಕಿದಾಗ ಪಿಜ್ಜಾ ಆಗುತ್ತದೆ. (ಚೀಸ್ ಹಾಕುವುದರಿಂದ ರುಚಿಯಲ್ಲಿ ಪಿಜ್ಜಾ ಟೋಸ್ಟ್‌ಗಿಂತ ಚೆನ್ನಾಗಿರುತ್ತದೆ). ಇಟಾಲಿಯನ್ ಅಡಿಗೆಯಲ್ಲಿ ಟೊಮೊಟೊ ಮತ್ತು ಚೀಸ್ ಹೆಚ್ಚಾಗಿ ಬಳಸುತ್ತಾರೆ. ಟೊಮೊಟೊ ಅಗ್ಗ. (ಇಂದಿನ ಬೆಲೆ: ಕಿಲೋಗೆ ₨ ೨೦). ಆದರೆ ಚೀಸ್ ದುಬಾರಿ. ಹಾಗಾಗಿ ಈಗ ಜನಪ್ರಿಯವಾಗಿರುವ ಪಿಜ್ಜಾ ಅಯ್ಯಂಗಾರ್ ಬೇಕರಿಯ ಟೋಸ್ಟ್‌ಗಿಂತ ದುಬಾರಿಯಾಗಿರುವುದು ಸಹಜ.

ಆದರೂ ಒಂದು ಮೀಡಿಯಂ ಪಿಜ್ಜಾಕ್ಕೆ
₨ ೫೦೦, -೬೦೦ ತೆರುವುದು ಇಲ್ಲಿನ ಗ್ರಾಹಕರಿಗೆ ಕಷ್ಟವೆನಿಸಬಹುದು ಎಂದು ನಾನು ಎಣಿಸಿದ್ದೆ. ಶನಿವಾರ, ಭಾನುವಾರ ಬೆಂಗಳೂರಿನ ಎಲ್ಲ ದೊಡ್ಡ ಬ್ರಾಂಡ್ ಪಿಜ್ಜಾ ಔಟ್‌ಲೆಟ್‌ಗಳು ಕಿಕ್ಕಿರಿದಿರುತ್ತವೆ. ಪಿಜ್ಜಾ ಹಟ್ ಥರದ ಜಾಗಕ್ಕೆ ಇಬ್ಬರು ಹೋಗಿ ಒಂದು ಪಿಜ್ಜಾ, ಜೊತೆಗೆ ಪೊಟೆಟೊ ವೆಡ್ಜಸ್ ರೀತಿಯ ಸಣ್ಣ ಪುಟ್ಟ ಐಟಂ ಆರ್ಡರ್ ಮಾಡಿದರೆ ಕನಿಷ್ಟ ₨ ೧,೦೦೦ ಬಿಲ್ ಆಗುತ್ತದೆ.

ಅದೇ ಸೌತ್ ಇಂಡಿಯನ್ ಹೋಟೆಲ್‌ಗೆ ಹೋಗಿ ನೀವು ದೊಸೆ, ಜೊತೆಗೆ ಇನ್ನೊಂದೆರಡು ಐಟಂ ಆರ್ಡರ್ ಮಾಡಿದರೆ ₨ ೨೫೦ಕ್ಕೂ ಹೆಚ್ಚಾಗಲಾರದು. ಅಮೆರಿಕನ್ನರ ಲೆಕ್ಕದಲ್ಲಿ ಯಾವುದು ಅಗ್ಗದ ಫಾಸ್ಟ್ ಫುಡ್ ಎಂದೆನಿಸಿರುತ್ತದೋ ಅದು ಇಂಡಿಯಾದಲ್ಲಿ ಹೇಗೆ ಇಷ್ಟು ದುಬಾರಿಯಾಗಿಹೋಗುತ್ತದೆ?

ಜೀನ್ಸ್ ಕೂಡ ಅಮೆರಿಕದ ಕೆಲಸದ ವರ್ಗದ ಉಡುಪು. ಆದರೆ ನಮ್ಮ ದೇಶದಲ್ಲಿ ದೊಡ್ಡ ಬ್ರಾಂಡಿನ ಜೀನ್ಸ್ ಪ್ಯಾಂಟನ್ನು ಅನುಕೂಲಸ್ಥರ ಉಡುಪು ಎಂಬಂತೆ ಪ್ರಮೋಟ್ ಮಾಡುತ್ತಾರೆ. ಹಾಗೆಯೇ ಬೆಲೆ ನಿಗದಿ ಮಾಡಿರುತ್ತಾರೆ. ಇಂಗ್ಲೆಂಡ್‌ನಲ್ಲಿ ವರ್ಕಿಂಗ್ ಕ್ಲಾಸ್ ಓದುಗರಿಗೆ ತಯಾರಾಗುವ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಶೈಲಿ ಭಾರತದ ಮೇಲ್ವರ್ಗದವರಿಗೆ ಇಷ್ಟ ಎಂದು ಇಲ್ಲಿನ ಪತ್ರಿಕಾ ಮಾಲೀಕರು ತಿಳಿದಿದಂತಿದೆ. ಫ್ಯಾಷನ್, ಗಾಸಿಪ್ ಹೆಚ್ಚು ಬರೆಯಿರಿ ಎಂದು ಪತ್ರಕರ್ತರ ಮೇಲೆ ಒತ್ತಡ ಹೇರುತ್ತಾರೆ.

ಈ ವಿಚಿತ್ರವನ್ನು ಆಕಾರ್ ಪಟೇಲ್ ಎಂಬ ಪತ್ರಕರ್ತ ಗುರುತಿಸಿ ಒಮ್ಮೆ ಬರೆದಿದ್ದರು: ಪಶ್ಚಿಮದಲ್ಲಿ ಅಪ್ ಮಾರ್ಕೆಟ್ (ಅಂದರೆ ಮೇಲ್ವರ್ಗವನ್ನು ಉದ್ದೇಶಿಸಿ ಮಾಡಿದ) ಪತ್ರಿಕೆಗಳು ಸಾಹಿತ್ಯ, ಕಲೆ, ಕ್ಲಾಸಿಕಲ್ ಮ್ಯೂಸಿಕ್ ಬಗ್ಗೆ ಬರೆಯತೊಡಗುತ್ತವೆ. ಆದರೆ ಪಾರ್ಟಿ, ಬಾಲಿವುಡ್ ಬಗ್ಗೆ ಬರೆದರೆ ನಮ್ಮ ಮೇಲ್ವರ್ಗದವರು ಇಷ್ಟ ಪಡುತ್ತಾರೆ ಎಂದು ಇಲ್ಲಿನ ನಂಬಿಕೆ. ಈ ನಂಬಿಕೆ ನಿಜವಾದರೆ, ಮೇಲ್ವರ್ಗದ ಪಾಶ್ಚಿಮಾತ್ಯರು ಅಸಡ್ಡೆಯಿಂದ ದೂರ ತಳ್ಳುವ ಅಭಿರುಚಿ ನಮ್ಮ ದೇಶದ ಶ್ರೀಮಂತರ ಅಭಿರುಚಿ ಆಗಿಹೋಗಿದೆಯೇ? ಇಲ್ಲಿನ ಶ್ರೀಮಂತರ ಅಭಿರುಚಿ ಮತ್ತು ಪಶ್ಚಿಮದ ಕಡಿಮೆ ವಿದ್ಯಾವಂತರ ಅಭಿರುಚಿ ಒಂದೇ ಇರಬಹುದೇ?.

ಕೆಲವು ತಿಂಗಳಿಂದ ಮಾರ್ಕೆಟಿಂಗ್ ಜನ ಬೆಲೆ ನಿಗದಿಯ ದ್ವಂದ್ವವನ್ನು ಅರಿತು ಒಂದಷ್ಟು ಬದಲಾವಣೆ ಮಾಡಿದಂತಿದೆ. ಅಮೆರಿಕನ್ ಫಾಸ್ಟ್ ಫುಡ್ ಸಂಸ್ಥೆಗಳಾದ ಮ್ಯಾಕ್ ಡೊನಾಲ್ಡ್ಸ್, ಕೆಎಫ್ಸಿ ಬೆಲೆ ಇಳಿಸಿವೆ. ಕಡಿಮೆ ಬೆಲೆಯ ಒಂದಷ್ಟು ತಿನಿಸುಗಳನ್ನು ಪ್ರಮೋಟ್ ಮಾಡುತ್ತಿವೆ. ಟ್ಯಾಕೋ ಬೆಲ್ ಎಂಬ ಸಂಸ್ಥೆ ಕೂಡ ಮಧ್ಯಮ ವರ್ಗದವರಿಗೆ ಎಟುಕುವಂತೆ ಬೆಲೆಗಳನ್ನು ನಿಗದಿ ಮಾಡಿದೆ.

ಅಮೆರಿಕನ್ ಮೂಲದ ಪಿಜ್ಜಾ ಹಟ್ ಬೆಂಗಳೂರಿನಲ್ಲಿ ದುಬಾರಿ ಎನಿಸಿದರೂ ದೆಹಲಿ ಸಮೀಪದ ಗುರ್ಗಾವ್‌ನಂಥ ಊರುಗಳಲ್ಲಿ ಕಡಿಮೆ ಬೆಲೆಯ ತಿನಿಸುಗಳನ್ನು ಮಾರಲು ಶುರು ಮಾಡಿದೆ. ಪಾಪ ಜಾನ್, ಡೊಮಿನೋಸ್ ಮತ್ತು ಪಿಜ್ಜಾ ಕಾರ್ನರ್ ಸಂಸ್ಥೆಗಳೂ ಪೈಪೋಟಿಗೆ ಇಳಿದಿವೆ. ಪಿಜ್ಜಾ ಮತ್ತು ಅಮೆರಿಕನ್ ಫಾಸ್ಟ್ ಫುಡ್ ಮಧ್ಯಮ ವರ್ಗದ ಆಯ್ಕೆಯಾಗಬೇಕು ಎಂದು ಇವರೆಲ್ಲ ನಿರ್ಧರಿಸಿಬಿಟ್ಟಂತಿದೆ.

ಪಿಜ್ಜಾ ಜೊತೆಗೆ ಪೆಪ್ಸಿ, ಕೋಕ್ ಕೊಳ್ಳುವಂತೆ ಈ ಸಂಸ್ಥೆಗಳು ಒತ್ತಾಯ ಮಾಡುತ್ತವೆ. ಎಣ್ಣೆಯಲ್ಲಿ ಕರಿದ, ಕಾರ್ಬೋಹೈಡ್ರೇಟ್ ಹೆಚ್ಚಾಗಿರುವ ತಿನಿಸುಗಳು ಕೂಡ ಈ ಪ್ಯಾಕೇಜ್‌ನಲ್ಲಿರುತ್ತವೆ. ಆರೋಗ್ಯದ ದೃಷ್ಟಿಯಿಂದ ಇವೆಲ್ಲ ಒಳ್ಳೆಯದಲ್ಲದಿದ್ದರೂ ಒಂದು ಲೈಫ್‌ಸ್ಟೈಲ್ ಆಗಿಬಿಡುತ್ತಿವೆ.
ಪಿಜ್ಜಾ ಹಟ್‌ನಲ್ಲಿ ಒಂದು ಗಂಟೆ ತೂಗಿ ಹಾಕಿರುತ್ತಾರೆ. ಖುಷಿಯಾಗಿದ್ದರೆ ಗಂಟೆ ಬಾರಿಸಿ ಎಂದು ಅಲ್ಲಿನ ಫಲಕ ಸಲಹೆ ಮಾಡುತ್ತದೆ. ದೇವಸ್ಥಾನಕ್ಕೆ ಬಂದವರಂತೆ ಹಲವರು ಗಂಟೆ ಬಾರಿಸಿ ಹೋಗುವ ದೃಶ್ಯ ನನಗಂತೂ ಆಶ್ಚರ್ಯ ತಂದಿತು! ನೆಹರು ದೊಡ್ಡ ಉದ್ಯಮಗಳನ್ನು ‘ಟೆಂಪಲ್ಸ್ ಆಫ್ ಮಾಡ್ರನ್ ಇಂಡಿಯಾ’ ಎಂದು ಕರೆಯುತ್ತಿದ್ದರು. ಜಾಗತೀಕರಣದ ನಂತರದ ಟೆಂಪಲ್ಸ್ ಸ್ವಲ್ಪ ಬೇರೆಯೇ ಆಗಿಬಿಟ್ಟಿವೆ, ಅಲ್ಲವೆ?

ಮಳೆ ಮತ್ತು ಮೆಟ್ರೋ ಮಣ್ಣು
ಬೆಂಗಳೂರಿನ ಮಧ್ಯ ಭಾಗದಲ್ಲಿ ಮೆಟ್ರೋ ರೈಲಿನ ಕೆಲಸ ನಡೆಯುತ್ತಿದೆ. ನೆಲ ಅಗೆದು ತೆಗೆದ ಮಣ್ಣನ್ನು ಹೊರುವ ಲಾರಿಗಳು ಅಲ್ಲಲ್ಲಿ ಮಣ್ಣು ಚೆಲ್ಲಿಕೊಂಡು ಹೋಗುವುದರಿಂದ ಮೋಟಾರ್ ಸೈಕಲ್ ಸವಾರರಿಗೆ ತೊಂದರೆಯಾಗುತ್ತಿದೆ. ಮಣ್ಣಿನ ಮೇಲೆ ಮಳೆ ಬಿದ್ದಾಗ ರಸ್ತೆಗಳು ತುಂಬ ಅಪಾಯಕಾರಿಯಾಗಿವೆ. ಅಪಘಾತಕ್ಕೆ ಆಹ್ವಾನದಂತಿವೆ. ನಾನು ಕೇಳಿದಂತೆ ಹಲವರು ಜಾರಿ ಬಿದ್ದು ಗಾಯಗೊಂಡಿದ್ದಾರೆ. ಮೆಟ್ರೋ ಸಂಸ್ಥೆ ನಾಗರಿಕರ ಇಂಥ ತೊಂದರೆಗಳನ್ನು ಲೆಕ್ಕಿಸದೆ ಕೆಲಸದಲ್ಲಿ ತೊಡಗಿದೆ. ಎಷ್ಟೋ ಕಡೆ ಮೆಟ್ರೋ ಲೈನಿನ ಪಕ್ಕ ಅಗೆದಿರುವ ರಸ್ತೆಗಳು ತೀರ ಅಪಾಯಕಾರಿಯಾಗಿವೆ. ಯೋಜನೆಯ ಮೇಲ್ವಿಚಾರಕರು ಹೆಚ್ಚಿನ ಹೊಣೆಗಾರಿಕೆಯಿಂದ ಕೆಲಸ ಮುಂದುವರೆಸುವುದು ಅಗತ್ಯ.

ಚೆನ್ನೈ ಎಕ್ಸ್‌ಪ್ರೆಸ್‌ ಎಂಬ ಡಬ್ಬಾ ಚಿತ್ರ
ಬಿಡುಗಡೆಯಾದ ಕೂಡಲೇ ನೂರು ಕೋಟಿ ಸಂಪಾದಿಸಿದ ಚಿತ್ರ ಚೆನ್ನೈ ಎಕ್ಸ್‌ಪ್ರೆಸ್‌ ಎಂದು ಅದರ ತಂಡ ಜಂಬ ಕೊಚ್ಚಿಕೊಳ್ಳುತ್ತಿದೆ. ಈ ಶಾರುಖ್ ಖಾನ್ ಪಿಕ್ಚರ್ ತುಂಬ ಸಿಲ್ಲಿಯಾಗಿದೆ.

ನಾಯಕಿ ದೀಪಿಕಾ ಒಂದು ದೃಶ್ಯದಲ್ಲಿ ‘ಬೋಕ್ವಾಸ್’ ಎಂದು ಹೇಳುವ ವಿಚಿತ್ರ ಸ್ಟೈಲ್ ಹಿಂದಿ ಚಿತ್ರ ಪ್ರೇಮಿಗಳಿಗೆ ಕಚಗುಳಿ ಇಟ್ಟಿದೆ. ಅವರು ಅಂದುಕೊಂಡಂತೆ ಅದು ಖಂಡಿತ ತಮಿಳು ಸ್ಟೈಲ್ ಅಲ್ಲ. ಚಿತ್ರ ನೋಡುತ್ತಿದ್ದ ನನಗೆ ಆಕೆಯ ‘ಬೋಕ್ವಾಸ್‘ ಹಿಂದಿಯ ‘ಬಕ್ವಾಸ್‘ ಮತ್ತು ಇಂಗ್ಲಿಷ್‌ನ ‘ಹಾಗ್ವಾಶ್‘ (ಅಂದರೆ ನಾನ್ಸೆನ್ಸ್) ಪದಗಳ ಮಿಶ್ರಣವಾಗಿ ಕಿವಿಗೆ ಬಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT