ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ವಿದ್ಯಾರ್ಥಿಗಳಿಂದ ಮೋದಿಗೆ ಶುಭ ಸುದ್ದಿ!

Last Updated 3 ಸೆಪ್ಟೆಂಬರ್ 2017, 19:50 IST
ಅಕ್ಷರ ಗಾತ್ರ

ಬೆಂಗಳೂರಿನ ಒಂದು ಕಾಲೇಜಿನಲ್ಲಿ ನಾನು ಕಳೆದ ವಾರ ಅಂದಾಜು ಒಂದು ಸಾವಿರ ವಿದ್ಯಾರ್ಥಿಗಳ ಸಮೂಹವನ್ನು ಉದ್ದೇಶಿಸಿ ಮಾತನಾಡಿದೆ. ಇವರಲ್ಲಿ ಬಹುಪಾಲು ಜನ ಅರ್ಥಶಾಸ್ತ್ರದ ವಿದ್ಯಾರ್ಥಿಗಳು. ಇಬ್ಬರು ಸಂಸದರ ಜೊತೆ ವೇದಿಕೆಯ ಮೇಲಿದ್ದ ನಾನು ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಕೇಳಿದೆ: ‘ಯುಪಿಎ ಆಡಳಿತ ಅವಧಿಯ ಒಂದು ದಶಕದ ಸರಾಸರಿ ಜಿಡಿಪಿ ಬೆಳವಣಿಗೆಗಿಂತ, ಕಳೆದ ಮೂರು ವರ್ಷಗಳಲ್ಲಿ ದೇಶದ ಜಿಡಿಪಿ ವೇಗದ ಬೆಳವಣಿಗೆ ಸಾಧಿಸಿದೆ ಎಂದು ಎಷ್ಟು ಜನರಿಗೆ ಅನಿಸುತ್ತಿದೆ?’ ಇಂದು ಹೆಚ್ಚಿನ ವೇಗದಲ್ಲಿ ಜಿಡಿಪಿ ಬೆಳವಣಿಗೆ ಆಗುತ್ತಿದೆ ಎಂದು ಭಾವಿಸಿದವರು ಕೈ ಎತ್ತಬೇಕು ಎಂದು ನಾನು ಹೇಳಿದೆ.

ಯುಪಿಎ ಆಡಳಿತ ಅವಧಿಯಲ್ಲಿ ಜಿಡಿಪಿಯ ವಾರ್ಷಿಕ ಸರಾಸರಿ ಬೆಳವಣಿಗೆ ಶೇಕಡ 8ಕ್ಕಿಂತ ಹೆಚ್ಚಿಗೆ ಇತ್ತು. ಎನ್‌ಡಿಎ ಆಡಳಿತದ ಮೂರು ವರ್ಷಗಳ ಅವಧಿಯಲ್ಲಿ ಜಿಡಿಪಿಯ ವಾರ್ಷಿಕ ಬೆಳವಣಿಗೆಯು ಶೇಕಡ 8ರ ಗಡಿಯನ್ನು ಮುಟ್ಟಿಲ್ಲ. ಆದರೂ ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿ ಕೈ ಎತ್ತಿದರು. ಮೊದಲೇ ಹೇಳಿದಂತೆ, ಹೀಗೆ ಕೈ ಎತ್ತಿದವರಲ್ಲಿ ಹೆಚ್ಚಿನ ಮಾಹಿತಿ ಹೊಂದಿರಬೇಕಾಗಿದ್ದ ಅರ್ಥಶಾಸ್ತ್ರದ ವಿದ್ಯಾರ್ಥಿಗಳು ಬಹು ಸಂಖ್ಯೆಯಲ್ಲಿ ಇದ್ದರು. ಆದರೆ ಅಂಕಿ-ಅಂಶಗಳನ್ನು ಇಟ್ಟುಕೊಂಡು ರಾಜಕೀಯದ ಚರ್ಚೆ ನಡೆಸುವುದು ಕಷ್ಟದ ಕೆಲಸ ಎಂಬುದು ವಾಸ್ತವ, ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಇದು ಕಷ್ಟದ್ದು.

ಇತ್ತೀಚಿನ ಎರಡು ವಿದ್ಯಮಾನಗಳನ್ನು ಬಳಸಿಕೊಂಡು ರಾಜಕೀಯದ ಅಲೆ ಬಿಜೆಪಿಗೆ ವಿರುದ್ಧವಾಗಿ ಬೀಸುವಂತೆ ಮಾಡಬಹುದು ಎಂದು ವಿರೋಧ ಪಕ್ಷಗಳು ಆಲೋಚಿಸುತ್ತಿವೆ. ಹಾಗಾಗಿ ಈ ಮಾತು ಹೇಳುತ್ತಿದ್ದೇನೆ.

ನೋಟು ರದ್ದತಿಯ ಉದ್ದೇಶ ಈಡೇರಿಲ್ಲ, ಅದು ವಿಫಲಗೊಂಡಿದೆ ಎಂಬ ಸುದ್ದಿ ಈ ವಿದ್ಯಮಾನಗಳ ಪೈಕಿ ಮೊದಲನೆಯದ್ದು. ₹ 1,000 ಹಾಗೂ ₹ 500 ಮುಖಬೆಲೆಯ ಹಳೆಯ ಬಹುತೇಕ ನೋಟುಗಳನ್ನು ಹೊಸ ₹ 2,000 ಹಾಗೂ ₹ 500 ನೋಟುಗಳನ್ನಾಗಿ ಬದಲಾಯಿಸಿಕೊಳ್ಳಲಾಗಿದೆ. ಅಂದರೆ ಕಪ್ಪುಹಣವನ್ನು ಸಕ್ರಮ ಮಾಡಿಕೊಳ್ಳಲಾಗಿದೆ. ಕೆಲವು ಲಕ್ಷ ಕೋಟಿ ರೂಪಾಯಿ ಮೊತ್ತದ ಕಪ್ಪುಹಣ ಬ್ಯಾಂಕ್‌ಗಳಿಗೆ ಮರಳುವುದಿಲ್ಲ, ಅವುಗಳನ್ನು ಅರ್ಥವ್ಯವಸ್ಥೆಯಿಂದ ಹೊರಹಾಕಬಹುದು ಎಂದು ಸರ್ಕಾರ ಭಾವಿಸಿತ್ತು ಎಂದಾದರೆ, ಆ ಕೆಲಸ ವಾಸ್ತವದಲ್ಲಿ ಆಗಿಲ್ಲ. ಈಗ ಕಪ್ಪುಹಣವನ್ನು ತೊಡೆಯಲು ಇರುವ ಮಾರ್ಗ ನೋಟಿಸ್ ಜಾರಿಗೊಳಿಸುವುದು ಹಾಗೂ ತೆರಿಗೆ ವಸೂಲಿ ಮಾಡುವುದು. ಭಾರತದಲ್ಲಿ ಇದು ಸುಲಭದ ಕೆಲಸವೂ ಅಲ್ಲ, ತ್ವರಿತವಾಗಿ ಆಗುವ ಕೆಲಸವೂ ಅಲ್ಲ.

ಭಯೋತ್ಪಾದನೆಯ ವಿಚಾರದಲ್ಲಿ ಅಥವಾ ಭಯೋತ್ಪಾದನೆ ಎಂದು ಭಾರತದಲ್ಲಿ ವ್ಯಾಖ್ಯಾನಿಸಲಾಗುವ ವಿಚಾರದಲ್ಲಿ ಕೂಡ ನೋಟು ರದ್ದತಿಯು ನಿರೀಕ್ಷಿತ ಪರಿಣಾಮ ಬೀರುವಲ್ಲಿ ವಿಫಲವಾಗಿದೆ. ನಮ್ಮಲ್ಲಿ ಸಂಘರ್ಷ ಜಾರಿಯಲ್ಲಿರುವ ಮೂರು ವಲಯಗಳನ್ನು ಹೊರತುಪಡಿಸಿದರೆ, ಬೇರೆಡೆ ಭಯೋತ್ಪಾದನೆಯಿಂದ ಉಂಟಾಗುವ ಹಿಂಸಾಚಾರ ತೀರಾ ಕಡಿಮೆ. ಈ ವರ್ಷ ಭಯೋತ್ಪಾದನೆಯಿಂದ ಉಂಟಾಗಿರುವ ಸಾವಿನ ಸಂಖ್ಯೆ 1. ಹಿಂದಿನ ವರ್ಷ 11 ಜನ ಮೃತಪಟ್ಟಿದ್ದರು, ಅದಕ್ಕೂ ಹಿಂದಿನ ವರ್ಷ 13 ಹಾಗೂ ಅದಕ್ಕಿಂತ ಹಿಂದಿನ ವರ್ಷ 14 ಜನ ಭಯೋತ್ಪಾದನೆಗೆ ಬಲಿಯಾಗಿದ್ದರು. ಸರ್ಕಾರವು ಭಯೋತ್ಪಾದನೆ ಹಾಗೂ ನೋಟು ರದ್ದತಿಯ ಬಗ್ಗೆ ಮಾತನಾಡುವುದು, ಜಮ್ಮು ಮತ್ತು ಕಾಶ್ಮೀರದಲ್ಲಿನ ಹಿಂಸಾಚಾರವನ್ನು ಉದ್ದೇಶಿಸಿ.

ನೋಟು ರದ್ದತಿಯು ಕಾಶ್ಮೀರದಲ್ಲಿನ ಹಿಂಸಾಚಾರವನ್ನು ಹತ್ತಿಕ್ಕಿದೆ ಎಂದು ರಕ್ಷಣಾ ಸಚಿವರು (ಇವರು ಹಣಕಾಸು ಸಚಿವರೂ ಹೌದು. ಹಾಗಾಗಿ ಭಯೋತ್ಪಾದನೆ ಹಾಗೂ ನೋಟು ರದ್ದತಿ ಕುರಿತ ಮಾಹಿತಿ ಇವರ ಬಳಿ ಇರಬೇಕು) ಹೇಳಿಕೊಂಡಿದ್ದಾರೆ. ಆದರೆ ಹಾಗೆ ಆಗಿದೆಯೇ? ಇಲ್ಲ. ಅಲ್ಲಿ ಕಳೆದ ವರ್ಷ 267 ಜನ ಸತ್ತಿದ್ದಾರೆ. ಈ ವರ್ಷ ಎಂಟು ತಿಂಗಳ ಅವಧಿಯಲ್ಲೇ 239 ಸಾವುಗಳು ಸಂಭವಿಸಿವೆ. ನೋಟು ರದ್ದತಿಯು ಭಯೋತ್ಪಾದನೆಯ ಮೇಲೆ ಸರ್ಕಾರ ಹೇಳುವಂತಹ ನಕಾರಾತ್ಮಕ ಪರಿಣಾಮ ಬೀರಿಲ್ಲ ಎಂಬುದಕ್ಕೆ ಇದು ಸಾಕ್ಷಿ.

ನೋಟು ರದ್ದತಿಯು ಪರಿಣಾಮ ಬೀರಲಿದೆ ಎಂದು ಪ್ರಧಾನಿಯವರು ಹೇಳಿದ್ದ ಕೊನೆಯ ವಿಚಾರ ಭ್ರಷ್ಟಾಚಾರ. ಉನ್ನತ ಮಟ್ಟದಲ್ಲಿ ಅದು ನಡೆಯದಂತೆ ಅವರು ನೋಡಿಕೊಂಡಿದ್ದಾರೆ. ನಗದು ಕೊರತೆಯ ಕಾರಣ ನೋಟು ರದ್ದತಿಯು ಇನ್ನಿತರ ಕಡೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದೆ ಎಂದು ಅವರು ಹೇಳಿದ್ದರು. ಭ್ರಷ್ಟಾಚಾರದ ವಿಚಾರದಲ್ಲಿ ಹಂಚಿಕೊಳ್ಳಲು ನನ್ನ ಬಳಿ ಅಂಕಿ-ಅಂಶ ಇಲ್ಲದಿರುವ ಕಾರಣ, ಭ್ರಷ್ಟಾಚಾರವು ವಾಸ್ತವದಲ್ಲಿ ಕಡಿಮೆ ಆಗಿದೆಯೇ ಎಂಬುದನ್ನು ತೀರ್ಮಾನಿಸುವ ಕೆಲಸವನ್ನು ಓದುಗರಿಗೆ ಬಿಟ್ಟುಬಿಡುತ್ತೇನೆ.

ದೇಶದ ಅರ್ಥ ವ್ಯವಸ್ಥೆ ಕುಸಿಯುತ್ತಿದೆ ಎಂಬುದು ಬಹಿರಂಗ ಆಗಿರುವುದು ವಿರೋಧ ಪಕ್ಷಗಳಲ್ಲಿ ಉತ್ಸಾಹ ತಂದಿರುವ ಎರಡನೆಯ ವಿಚಾರ. ಈ ವಿಚಾರದಲ್ಲಿ ನಮ್ಮ ಬಳಿ ಅಂಕಿ-ಅಂಶಗಳು ಇರುವ ಕಾರಣ ನಾವು ಖಚಿತವಾಗಿ ಮಾತನಾಡಬಹುದು. ಕಳೆದ ಐದು ತ್ರೈಮಾಸಿಕಗಳಿಂದಲೂ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರ ಕಡಿಮೆ ಆಗುತ್ತಿದೆ. ಅಂದರೆ 15 ತಿಂಗಳುಗಳಿಂದ ಹೀಗೆ ಆಗುತ್ತಿದೆ. ಏಪ್ರಿಲ್‌ನಿಂದ ಜೂನ್‌ ನಡುವಣ ಅವಧಿಯಲ್ಲಿ ಅರ್ಥವ್ಯವಸ್ಥೆ ಶೇಕಡ 5.7ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ ಎಂಬುದನ್ನು ಸರ್ಕಾರದ ಅಂಕಿ-ಅಂಶಗಳು ಹೇಳುತ್ತಿವೆ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಹಾಗೂ ಸರಕುಗಳ ದಾಸ್ತಾನನ್ನು ಕಡಿಮೆ ಮಾಡುವತ್ತ ಗಮನ ಹರಿಸಿದ್ದು ಇದಕ್ಕೆ ಕಾರಣ ಎಂದು ಸರ್ಕಾರದ ಬೆಂಬಲಿಗರು ಹೇಳುತ್ತಾರೆ. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತರ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವುದು ಹೇಗೆ ಎಂಬ ಬಗ್ಗೆ ಕಂಪೆನಿಗಳಿಗೆ ಖಚಿತತೆ ಇರಲಿಲ್ಲವಾದ ಕಾರಣ ಅವು ಜೂನ್‌ ತಿಂಗಳಲ್ಲಿ ತಯಾರಿಕೆ ಸ್ಥಗಿತಗೊಳಿಸಿದವು, ತಮ್ಮ ದಾಸ್ತಾನು ಖಾಲಿ ಮಾಡಿಕೊಂಡವು ಎಂಬುದು ಇದರ ಅರ್ಥ.

ಈ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ದರ ಕಡಿಮೆ ಆಗಲು ಕಾರಣ ಜಿಎಸ್‌ಟಿ ಹಾಗೂ ನೋಟು ರದ್ದತಿ ಎನ್ನುವುದು ಸರ್ಕಾರದ ವಿರೋಧಿಗಳ ಮಾತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅರುಣ್‌ ಜೇಟ್ಲಿ (ಜೇಟ್ಲಿ ಒಬ್ಬ ವಕೀಲ) ಅಥವಾ ಮೋದಿಯವರಂತೆ (ಮೋದಿ ಅವರು ದೂರಶಿಕ್ಷಣದ ಮೂಲಕ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ) ಅಲ್ಲ. ಸಿಂಗ್‌ ಅವರು ಅರ್ಥಶಾಸ್ತ್ರಜ್ಞರು. ನೋಟು ರದ್ದತಿಯು ದೇಶದ ಅರ್ಥವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ, ಇದು ಅರ್ಥ ವ್ಯವಸ್ಥೆಯ ಬೆಳವಣಿಗೆಯನ್ನು ಶೇಕಡ 2ರಷ್ಟು ಕಡಿಮೆ ಮಾಡಲಿದೆ ಎಂದಿದ್ದರು ಸಿಂಗ್. ಆ ಮಾತು ನಿಜವಾಗಿದೆ ಎಂದೂ ಸರ್ಕಾರದ ವಿರೋಧಿಗಳು ಹೇಳುತ್ತಾರೆ. ಬಹುಶಃ ಅವರ ಮಾತು ನಿಜವಾಗಿರಬೇಕು.

ಆದರೆ, ಸರ್ಕಾರದ ವಿರೋಧಿಗಳೂ ಅಲ್ಲದ, ಬೆಂಬಲಿಗರೂ ಅಲ್ಲದ ನಮ್ಮಂತಹವರ ಪಾಲಿಗೆ ಅರ್ಥವ್ಯವಸ್ಥೆಯ ಬೆಳವಣಿಗೆ ಐದು ತ್ರೈಮಾಸಿಕಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವುದು ನಿಚ್ಚಳವಾಗಿ ಕಾಣುತ್ತದೆ. ಈ ಸರ್ಕಾರ ಅರ್ಥ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಮಾದರಿಯಲ್ಲಿ ಏನೋ ಒಂದು ಮೂಲಭೂತ ದೋಷವಿದೆ.

ಅಂಕಿ-ಅಂಶಗಳ ವಿಚಾರದಲ್ಲಿ ಸರ್ಕಾರವು ಸೋಲುವ ಹಂತದಲ್ಲಿದೆ ಹಾಗಾಗಿ ಇದರ ಲಾಭವನ್ನು ತಾವು ಪಡೆಯಬಹುದು ಎಂದು ವಿರೋಧ ಪಕ್ಷಗಳು ಭಾವಿಸಬಹುದೇ? ‘ಇಲ್ಲ’ ಎಂಬುದು ಈ ಪ್ರಶ್ನೆಗೆ ನನ್ನ ಉತ್ತರ. ಆರ್ಥಿಕ ಬೆಳವಣಿಗೆಯ ವಿಚಾರದಲ್ಲಿ ಕಡಿಮೆ ಸಾಧನೆ ತೋರಿದ್ದರೂ ಜನಪ್ರಿಯರಾಗಿಯೇ ಉಳಿದ ನಾಯಕರನ್ನು ನಾವು ಹಲವು ಬಾರಿ ಕಂಡಿದ್ದೇವೆ. ಅರ್ಥ ವ್ಯವಸ್ಥೆಯ ಬೆಳವಣಿಗೆ ಶೇಕಡ 5ಕ್ಕಿಂತ ಕಡಿಮೆ ಇದ್ದರೂ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರು ಒಂದಾದ ನಂತರ ಒಂದರಂತೆ ಚುನಾವಣೆಗಳಲ್ಲಿ ಜಯ ಸಾಧಿಸಿದರು.

ಮೋದಿ ಅವರು ನೋಟು ರದ್ದತಿ ಸುತ್ತಲಿನ ಚರ್ಚೆಯನ್ನೇ ಬದಲಾಯಿಸಿಬಿಟ್ಟಿದ್ದಾರೆ ಎಂಬುದು ಇನ್ನೊಂದು ಸಂಗತಿ. ಅವರು ಮಾತನಾಡಿದ್ದ ಎಲ್ಲ ವಿಚಾರಗಳನ್ನೂ ಮರೆತಾಗಿದೆ. ಮೋದಿ ಅವರು ಡಿಜಿಟಲ್ ವ್ಯವಸ್ಥೆ, ಕಡಿಮೆ ನಗದು ಬಳಕೆ ಮಾಡುವ ವ್ಯವಸ್ಥೆಗಳ ಬಗ್ಗೆ ಮಾತನಾಡಿದ್ದಾರೆ. ಮೋದಿ ಅವರನ್ನು ಬೇರೆ ಬೇರೆ ವಿಚಾರಗಳಲ್ಲಿ ದೂಷಿಸಬಹುದು. ಆದರೆ ರಾಜಕಾರಣದಲ್ಲಿ ತಪ್ಪು ಮಾಡಿದ್ದಾರೆ ಎಂಬ ದೂಷಣೆಯನ್ನು ಅವರ ಮೇಲೆ ಹೊರಿಸಲು ಆಗದು.

2014ರ ನಂತರ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳು ಆಗಿವೆಯೇ ಎಂಬ ಪ್ರಶ್ನೆಯನ್ನು ನಾನು ಬೆಂಗಳೂರಿನ ಆ ಒಂದು ಸಾವಿರ ಯುವ ವಿದ್ಯಾರ್ಥಿಗಳ ಮುಂದಿಟ್ಟೆ. ಆಗ ಕೂಡ ಬಹುತೇಕ ಯುವಕರು ಕೈ ಎತ್ತಿದರು. ಇದು ಆಗುತ್ತಿರುವವರೆಗೆ, ಮುಂದಿನ ಕೆಲವು ತಿಂಗಳುಗಳ ಕಾಲ ಇದು ಖಂಡಿತವಾಗಿಯೂ ಹೀಗೇ ಇರಲಿದೆ, ಮೋದಿ ಅವರು ಆರಾಮವಾಗಿ ಇರಬಹುದು.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT