ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳ ಕಥೆ

Last Updated 31 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ಎಷ್ಟು ದಿನವಾಗಿದೆ ಎಂದು ನನ್ನ ಸ್ನೇಹಿತರನ್ನು ಕೇಳಿದರೆ ಅವರು ಜ್ಞಾಪಿಸಿಕೊಳ್ಳಲು ತಲೆ ಕೆರೆದುಕೊಳ್ಳುತ್ತಾರೆ. ಅವರೆಲ್ಲ ಪುಸ್ತಕ ಪ್ರೇಮಿಗಳಾದರೂ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗುವ ಅವರ ಅಭ್ಯಾಸ ಬಿಟ್ಟುಹೋಗಿದೆ. ಪುಸ್ತಕ ಕೊಳ್ಳುತ್ತಾರೆ, ಆದರೆ ನಗರ ಕೇಂದ್ರ ಗ್ರಂಥಾಲಯಕ್ಕೆ ಹೋಗಿ, ಅಲ್ಲಿ ಕೂತು ಓದುವುದು, ಅಲ್ಲಿಂದ ಪುಸ್ತಕ ಎರವಲು ಪಡೆಯುವುದು ಯಾವುದೋ ಪೂರ್ವಜನ್ಮದ ನೆನಪು ಅನ್ನುವ ಹಾಗೆ ಆಗಿಹೋಗಿದೆ.

ಬೇರೆ ಬೇರೆ ವೃತ್ತಿ ಮಾಡುವವರು ಗ್ರಂಥಾಲಯಕ್ಕೆ ಹೋಗುವ ಪರಿಪಾಠ ಕೈಬಿಟ್ಟಿದ್ದಾರೆ ಎನ್ನುವುದು ಎಷ್ಟು ನಿಜವೋ ಗ್ರಂಥಾಲಯಗಳು ಹಿಂದಿನಂತಿಲ್ಲ ಎನ್ನುವುದೂ ಅಷ್ಟೇ ನಿಜ. ಪುಸ್ತಕ ಪ್ರೀತಿಯ ಪ್ರತೀಕವಾದ ಈ ಸಂಸ್ಥೆಗಳ ಬಗ್ಗೆ ಮಾಧ್ಯಮಗಳಿಗೂ ನಿರುತ್ಸಾಹ. ನನಗಂತೂ ಟೀವಿಯಲ್ಲಿ ಗ್ರಂಥಾಲಯಗಳ ಬಗ್ಗೆ ಒಂದೂ ವರದಿಯನ್ನು ನೋಡಿದ ನೆನಪಿಲ್ಲ. ಪತ್ರಿಕೆಗಳೂ ಅಂಥದೇ ನಿರ್ಲಕ್ಷ್ಯ ತಾಳಿವೆ.

ಬೆಂಗಳೂರಿನ ಪ್ರಜೆಗಳಿಂದ ವರ್ಷಕ್ಕೆ ಸುಮಾರು ್ಙ 60 ಕೋಟಿ ಗ್ರಂಥಾಲಯ ಕರವಾಗಿ ಸಂಗ್ರಹವಾಗುತ್ತಿದೆ ಎಂದು ಅಂದಾಜು. ಸಂಗ್ರಹ ಮಾಡುತ್ತಿರುವ ಮಹಾನಗರ ಪಾಲಿಕೆ ಗ್ರಂಥಾಲಯ ಇಲಾಖೆಗೆ ದುಡ್ಡನ್ನು ಪೂರ್ಣವಾಗಿ, ಸಮಯಕ್ಕೆ ಸರಿಯಾಗಿ ವರ್ಗಾಯಿಸುತ್ತಿಲ್ಲ. ಪತ್ರಕರ್ತೆ ಮಾರ್ಗೋ ಕೋಹೆನ್ ಅವರು ಪಡೆದ ಇಲಾಖಾ ದಾಖಲೆಗಳ ಪ್ರಕಾರ, ಸುಮಾರು ್ಙ 120 ಕೋಟಿ ಬಾಕಿ ಇನ್ನೂ ಉಳಿದಿದೆ. ಈ ಕಾರಣಕ್ಕೆ ಗ್ರಂಥಾಲಯಗಳ ಬೆಳವಣಿಗೆ ಕುಂಟುತ್ತಿದೆ. ಆದರೆ ಇರುವ ದುಡ್ಡಿನಲ್ಲಿ ಇನ್ನೂ ಚೆನ್ನಾಗಿ ಇಲಾಖೆಯನ್ನು ನಡೆಸಬಹುದು ಎಂಬುದು ಕೂಡ ಸತ್ಯ.

ಹಲವು ಕಾರಣಗಳು ಸೇರಿ ನಮ್ಮ ಸಾರ್ವಜನಿಕ ಗ್ರಂಥಾಲಯಗಳು ವಿಚಿತ್ರ ಸಂದಿಗ್ಧದಲ್ಲಿ ಸಿಲುಕಿವೆ. ಮೊನ್ನೆ ಗ್ರಂಥಾಲಯವೊಂದಕ್ಕೆ ಹೋಗಿ ನೋಡಿಕೊಂಡು ಬಂದವರು ಹೇಳುವಂತೆ, ಅಲ್ಲಿಗೆ ಇಂದು ಹೆಚ್ಚಾಗಿ ಹೋಗುವವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು. ಕೆಲಸ ಹುಡುಕುತ್ತಿರುವ, ಒಂದಷ್ಟು ಬಿಡುವಿರುವ ಯುವಕರು. ಪುಸ್ತಕಕ್ಕಿಂತ ಹೆಚ್ಚು ಪತ್ರಿಕೆ, ಮ್ಯೋಗಜಿನ್ ಓದುವವರು.

ಸುಮಾರು 30 ವರ್ಷದ ಹಿಂದೆ, ಬೇಸಿಗೆ ಬಂತೆಂದರೆ ಗ್ರಂಥಾಲಯಗಳಲ್ಲಿ ಮಕ್ಕಳು ಕಿಕ್ಕಿರಿದಿರುತ್ತಿದ್ದರು. ಇಂದಿನ ಮಧ್ಯಮ ವರ್ಗ, ಓದುವ ವರ್ಗ ಬದಲಾಗಿದೆ. ಮನರಂಜನೆ ಅರಸಿ ಗ್ರಂಥಾಲಯಗಳಿಗೆ ಹೋಗುವುದಿಲ್ಲ. ಟಿವಿ, ಐಪಿಎಲ್, ಸಮ್ಮರ್ ಕ್ಯಾಂಪ್‌ಗಳ ಆಕರ್ಷಣೆ ಒಂದು ಕಡೆ. ನೋಡು ನೋಡುತ್ತಿದಂತೆಯೇ ಇಂಟರ್ನೆಟ್ ಈ ತಲೆಮಾರಿನ ಮನರಂಜನೆಯ, ಓದಿನ ಪ್ರಮುಖ ಮಾಧ್ಯಮವಾಗಿಹೋಗಿದೆ. 

ಹಾಗಾದರೆ ನಮಗಿಂತ ಉತ್ತಮ ವೇಗದ ಇಂಟರ್ನೆಟ್ ಸೌಲಭ್ಯ ಪಡೆದಿರುವ ಪಾಶ್ಚಾತ್ಯ ನಗರಗಳಲ್ಲಿ ಗ್ರಂಥಾಲಯಗಳು ಹೇಗೆ ಉಳಿದುಕೊಂಡಿವೆ? ನ್ಯೂಯಾರ್ಕ್ ಮೂಲದ ಪತ್ರಕರ್ತೆ ಮಾರ್ಗೋ ಕೋಹೆನ್ ಬೆಂಗಳೂರನ್ನು ಚೆನ್ನಾಗಿ ಬಲ್ಲರು. ಬೆಂಗಳೂರಿನ ಮತ್ತು ನ್ಯೂ ಯಾರ್ಕ್ ನಗರದ ಗ್ರಂಥಾಲಯಗಳನ್ನು ಹೊಕ್ಕು ಸುಮಾರು ಕಾಲ ಕಳೆದಿರುವವರು. ಅಲ್ಲಿಗೂ ಇಲ್ಲಿಗೂ ಇರುವ ವ್ಯತ್ಯಾಸವೇನು ಎಂದು ಮೊನ್ನೆ ಬಂದು ಒಂದು ಲೇಖನ ಬರೆದಿದ್ದಾರೆ. ಓದುಗರ ಉತ್ಸಾಹದಿಂದ ಅಲ್ಲಿನ ಗ್ರಂಥಾಲಯಗಳು ಹೊಸ ಜೀವ ಪಡೆದಿವೆಯಂತೆ.

ಗ್ರಂಥಾಲಯಗಳ ಬಗ್ಗೆ ಸರ್ಕಾರಗಳೂ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಗ್ರಂಥಾಲಯ ಮಂತ್ರಿ ರೇವು ನಾಯಕ್ ಬೆಳಮಗಿ ಅವರಿಗೆ ಈ ಖಾತೆಯಲ್ಲದೆ ಪಶು ಸಂಗೋಪನೆಯ ಉಸ್ತುವಾರಿಯನ್ನೂ ಮುಖ್ಯ ಮಂತ್ರಿಗಳು ಕೊಟ್ಟಿದ್ದಾರೆ. ಏಳನೇ ತರಗತಿಯವರೆಗೂ ಓದಿರುವ ಇವರು ಗ್ರಂಥಾಲಯ ನೀತಿಯ ಬಗ್ಗೆಯಾಗಲಿ ವಿಸ್ತರಣೆಯ ಬಗ್ಗೆಯಾಗಲಿ ಮಾತಾಡಿದ್ದು ಎಲ್ಲೂ ವರದಿಯಾಗಿಲ್ಲ. ಇಂಥ ವರದಿಗಳು ಇರದೇ ಇರಲು ಸಾಧ್ಯವಿಲ್ಲ ಎಂದು ಗೂಗಲ್‌ನಲ್ಲಿ ಹುಡುಕಿದರೂ ಏನೇನೂ ಸಿಗುವುದಿಲ್ಲ.

ಇಲಾಖೆಯ ನೀತಿಯ ಪ್ರಕಾರ ಶೇಕಡ 80ರಷ್ಟು ಪುಸ್ತಕಗಳು ಕನ್ನಡದಲ್ಲಿರಬೇಕು. ಬೆಂಗಳೂರಿನಂಥ ಬಹುಭಾಷಾ ವಾತಾವರಣದಲ್ಲಿ ಇಂಗ್ಲಿಷ್ ಮತ್ತು ಕನ್ನಡೇತರ ಪುಸ್ತಕಗಳಿಗೆ ಇನ್ನೂ ಹೆಚ್ಚಿನ ಆದ್ಯತೆ ಕೊಟ್ಟರೆ ಲೈಬ್ರರಿ ಬಳಸುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಪುಸ್ತಕ ಕೊಳ್ಳುವಿಕೆಯಲ್ಲಿನ ಅಕ್ರಮಗಳು ಮೊನ್ನೆ ಪತ್ತೆಯಾದ ಒಂದು ಪ್ರಕರಣದಿಂದ ಬೆಳಕಿಗೆ ಬಂದಿವೆ. ಪೊಲೀಸರು ದೊಡ್ಡ ಜಾಲವನ್ನು ಬಯಲು ಮಾಡುವ ವಿಶ್ವಾಸದಲ್ಲಿದ್ದಾರೆ.

ಗ್ರಂಥಾಲಯಗಳು ನಮ್ಮ ನಗರದ ಬೌದ್ಧಿಕ, ಸಾಂಸ್ಕೃತಿಕ ಜೀವನಕ್ಕೆ ಅತ್ಯಗತ್ಯ. ಒಳ್ಳೆಯ ಗ್ರಂಥಪಾಲಕರು ಹಲವರು ನಮ್ಮ ನಡುವೆ ಇದ್ದಾರೆ. ಪ್ರೀತಿಯಿಂದ ಲೈಬ್ರರಿ ನಡೆಸುವವರೂ ಇಲ್ಲದೆ ಇಲ್ಲ. ನಮ್ಮ ನಗರ ಸಂಸ್ಕೃತಿಯ ಬಗ್ಗೆ ಕಾಳಜಿ ಇರುವ ಮಂತ್ರಿಗಳು, ಅಧಿಕಾರಿಗಳು ಬಂದರೆ ಗ್ರಂಥಾಲಯಗಳು ಮಲ್ಟಿಪ್ಲೆಕ್ಸ್‌ಗಳಷ್ಟೇ ಜನಪ್ರಿಯವಾಗಬಹುದಲ್ಲವೇ? ಕೆಲವು ಉತ್ತಮ ಖಾಸಗಿ ಸಾಂಸ್ಥಿಕ ಗ್ರಂಥಾಲಯಗಳು ಸಾರ್ವಜನಿಕರಿಗೆ ತೆರೆದಿರುತ್ತವೆ. ಬೇಸಿಗೆಯಲ್ಲಿ ಬಿಡುವಿದ್ದರೆ ಅಲ್ಲಿಗೆ ಹೋಗಿ ಬನ್ನಿ. ಮಕ್ಕಳನ್ನು ಕಳಿಸಿ. ಕೆಲವು ಸಲಹೆಗಳು: ಯುನೈಟೆಡ್ ಥಿಯೋಲಾಜಿಕಲ್ ಕಾಲೇಜು, ಮಿಥಿಕ್ ಸೊಸೈಟಿ, ರಾಮಕಷ್ಣ ಆಶ್ರಮ, ಗಾಂಧಿ ಭವನ, ಅಜೀಮ್ ಪ್ರೇಮ್‌ಜೀ ವಿಶ್ವವಿದ್ಯಾಲಯ, ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್.

ರಮ್ಯಾ ಮತ್ತು ಫೋಟೋಗ್ರಾಫರ್ ತಮಾಷೆ
ಸೆಟ್ಸ್ ಮೇಲೆ ತೆಗೆದ ಫೋಟೋ ಚೆನ್ನಾಗಿಲ್ಲ ಎಂದು ಮೊನ್ನೆ ಚಿತ್ರ ನಟಿ ರಮ್ಯಾ ಫೋಟೋ ಜರ್ನಲಿಸ್ಟ್ ಒಬ್ಬರ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿರುವ ಬಗ್ಗೆ ಕೇಳಿರುತ್ತೀರಿ. ಹೀಗಾಗಿರುವುದು ಪ್ರಪಂಚದಲ್ಲಿ ಇದೇ ಮೊದಲಿರಬೇಕು! ಯಾವಾಗಲೂ ಚೆನ್ನಾಗಿಯೇ ಕಾಣಿಸಿಕೊಳ್ಳಬೇಕು ಎಂದು ಹಪಹಪಿಸುವ ಚಿತ್ರ ನಟಿಯರಿಗೆ ಪ್ರಚಾರ ಮತ್ತು ಪಬ್ಲಿಕ್ ರಿಲೇಶನ್ಸ್‌ಗೂ, ಪತ್ರಿಕೋದ್ಯಮಕ್ಕೂ ವ್ಯತ್ಯಾಸ ಗೊತ್ತಿರದೇ ಇರುವುದೇ ಇಂಥ ಹಾಸ್ಯಾಸ್ಪದ ದೂರಿಗೆ ಕಾರಣವಿರಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT