ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆಯಿಲ್ಲದ ಚೆಕ್

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇದೊಂದು ಸತ್ಯ ಘಟನೆ ಎಂದು ಹೇಳುತ್ತಾರೆ. ಅದು ಸತ್ಯವಿರದಿದ್ದರೂ ಯಾವ ವ್ಯತ್ಯಾಸವೂ ಆಗುವುದಿಲ್ಲ. ಯಾಕೆಂದರೆ ಈ ಘಟನೆ ನೀಡುವ ಮಾರ್ಗದರ್ಶನದ ಶಕ್ತಿ ಮಾತ್ರ ಸತ್ಯ.

ಅಮೆರಿಕೆಯ ಮಿಷಿಗನ್ ನಗರದ ಮಧ್ಯದಲ್ಲಿ ಒಂದು ದೊಡ್ಡ ತೋಟವಿದೆ. ಒಂದು ಭಾನುವಾರ ಬೆಳಿಗ್ಗೆ ಒಬ್ಬ ಮನುಷ್ಯ ಅಲ್ಲಿಗೆ ಬಂದ. ಅವನ ಮುಖದಲ್ಲಿ ಸೋಲಿನ ಕಳೆ ಸೋರುತ್ತಿದೆ. ಅದಕ್ಕೆ ಸರಿಯಾಗಿ ದೇಹಭಾವ ಕೂಡ ಸೋಲನ್ನೇ ತೋರುತ್ತಿದೆ. ಅವನು ಆ ತೋಟದ ಮೂಲೆಯ ಬೆಂಚೊಂದನ್ನು ಆರಿಸಿಕೊಂಡು ಕುಳಿತ. ತನ್ನ ತಲೆಯನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಯೋಚಿಸತೊಡಗಿದ. ತನ್ನ ಬಾಳು ಸೋಲಿನ ಸರಮಾಲೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಅಪಜಯವೇ ದೊರಕಿದೆ. ಇತ್ತೀಚೆಗಂತೂ. ಯಾವ ಮಟ್ಟದ ಸೋಲು ತನ್ನನ್ನು ಅಮರಿಕೊಳ್ಳುತ್ತಿದೆಯೆಂದರೆ ಮತ್ತೆ ಮೇಲೇಳುವುದು ದೂರದ ವಿಷಯ, ಬದುಕಿ ಉಳಿಯುವುದೇ ಅಸಾಧ್ಯವೆನ್ನಿಸಿದೆ. ಬಹುಶಃ ಅದೇ ತನಗೆ ಸೂಕ್ತ ಪರಿಹಾರ. ಹೀಗೆಯೇ ಅವನ ವಿಚಾರಧಾರೆ ಮುಂದುವರೆದಿತ್ತು.

ಆಗ ಪಕ್ಕದಲ್ಲಿ ಏನೋ ಸದ್ದಾದಂತಾಯಿತು. ತಲೆ ಎತ್ತಿ ನೋಡಿದ. ಯಾರೋ ಒಬ್ಬ ಮುದುಕ ಪಕ್ಕದಲ್ಲೇ ಒಂದು ಕುಳಿತು ಇವನನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ಅವರನ್ನು ನೋಡಿದರೆ ತುಂಬ ಗೌರವ ಬರುವಂತಿದ್ದಾರೆ. ಮುಖದ ಮೇಲೆ ಸ್ವಲ್ಪ ಶ್ರಿಮಂತಿಕೆಯ ಕಳೆ ಇದೆ. ಅವರು ಇವನ ಭುಜತಟ್ಟಿ ಕೇಳಿದರು, `ಯಾಕಪ್ಪಾ, ಏನಾದರೂ ಚಿಂತೆ ಇದೆಯೇ? ಇದ್ದರೆ ಹೇಳು, ನನ್ನಿಂದಾದ ಸಹಾಯ ಮಾಡುತ್ತೇನೆ.~  ಈತ ಆಶ್ಚರ್ಯದಿಂದ ನೋಡಿದ. `ನಮ್ಮ ದೇಶದಲ್ಲೂ ಹೀಗೆ ಗೊತ್ತು ಪರಿಚಯವಿಲ್ಲದವರಿಗೆ ಯಾರಾದರೂ ಸಹಾಯ ನೀಡುತ್ತಾರೆಯೇ?~ ಆದರೂ ಸಾವರಿಸಿಕೊಂಡು ಹೇಳಿದ,  `ಹೌದು ಸರ್, ನಾನೀಗ ಕಷ್ಟಗಳ ಬೆಂಕಿಯಲ್ಲಿ ಹಾಯ್ದು ಹೋಗುತ್ತಿದ್ದೇನೆ. ಯಾವ ಕೆಲಸಮಾಡಿದರೂ ಜಯ ದೊರಕುತ್ತಿಲ್ಲ. ಹಣಕಾಸಿನ ತೊಂದರೆಯಿಂದ ಏನನ್ನೂ ಮಾಡಲಾಗುತ್ತಿಲ್ಲ. ಈಗ ಒಂದು ಬಹುದೊಡ್ಡ ಅವಕಾಶ ಬಂದಿದೆ. ಆದರೆ ಹೂಡಲು ಹಣವಿಲ್ಲ, ಮುಂದೆ ಹೋಗಲು ಧೈರ್ಯವಿಲ್ಲ.~  ಮುದುಕ ಕೇಳಿದರು, `ನಿನಗೆ ಈಗ ಎಷ್ಟು ಹಣ ದೊರಕಿದರೆ ಧೈರ್ಯ ಬಂದೀತು?~ ಆತ ಹೇಳಿದ, `ಸರ್, ಕನಿಷ್ಠ ಐದು ಲಕ್ಷ ಡಾಲರ್‌ಗಳಿದ್ದರೆ ಧೈರ್ಯದಿಂದ ಕೈ ಹಾಕಬಹುದು.~

ಮುದುಕ ತಕ್ಷಣ ತಮ್ಮ ಕೋಟಿನ ಒಳ ಕಿಸೆಯಲ್ಲಿ ಕೈ ಹಾಕಿ ಚೆಕ್ ಪುಸ್ತಕವನ್ನು ಹೊರತೆಗೆದು ಸರಸರನೇ ಬರೆದು, ಒಂದು ಹಾಳೆಯನ್ನು ಹರಿದು ಇವನ ಕೈಯಲ್ಲಿ ಇಟ್ಟರು. ಈತ ಅದನ್ನು ನೋಡಿ ದಿಙ್ಮೂಢನಾದ. ಮಾತೇ ಬರಲಿಲ್ಲ. ಮುದುಕ ಹತ್ತು ಲಕ್ಷ ಡಾಲರಿಗೆ ಚೆಕ್ ಬರೆದಿದ್ದಾರೆ! ತನ್ನ ಹೆಸರನ್ನು ಕೂಡ ಅರಿಯದೇ ಹೀಗೆ ಯಾರಾದರೂ ಹತ್ತು ಲಕ್ಷ ಡಾಲರ್ ಕೊಡುತ್ತಾರೆಂದರೆ ನಂಬುವುದು ಸಾಧ್ಯವೇ? ಮುದುಕ ನುಡಿದರು,  `ನಿನಗೆ ಬೇಕಾದ್ದಕ್ಕಿಂತ ಹೆಚ್ಚೇ ಹಣ ಇದೆ. ಧೈರ್ಯವಾಗಿ ಕೆಲಸದಲ್ಲಿ ಮುನ್ನುಗ್ಗು. ಖಂಡಿತ ಯಶಸ್ಸು ಸಿಗುತ್ತದೆ. ಲಾಭವಾಯಿತೋ ಅದು ನಿನಗೇ. ಒಂದು ವೇಳೆ ಎಲ್ಲವೂ ನಷ್ಟವಾದರೂ ನೀನು ದುಃಖಪಡಬೇಕಾಗಿಲ್ಲ. ಈ ಹಣವನ್ನು ನಿನಗೆ ನಿನ್ನ ತಂದೆ ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂದು ತಿಳಿದುಕೊ. ನಾವು ಮತ್ತೆ ಮುಂದಿನ ವರ್ಷ, ಇಲ್ಲೇ, ಇದೇ ದಿನವೇ ಈ ಹೊತ್ತಿಗೇ ಭೇಟಿಯಾಗೋಣ. ದೇವರು ಒಳ್ಳೆಯದು ಮಾಡಲಿ~ ಎಂದು ನಡೆದೇಬಿಟ್ಟರು!

ಈತನಿಗೆ ಬಲ ಬಂತು. ಈ ಚೆಕ್ಕನ್ನು ಸ್ನೇಹಿತರಿಗೆ ತೋರಿಸಿದ. ಅವರೂ ಒಂದ್ಟಿ ಸಹಾಯ ಮಾಡಿದರು. ಈತ ಚೆಕ್ಕನ್ನು ಬಳಸಿಕೊಳ್ಳಲಿಲ್ಲ. ಅಷ್ಟು ವಿಶ್ವಾಸದಿಂದ ನೀಡಿದ ಹಣದ ದುರ್ಬಳಕೆಯಾಗಬಾರದು. ತನ್ನ ಪ್ರಯತ್ನ ಮೀರಿಯೂ ಹಣ ಕೂಡದಿದ್ದರೆ ಇದನ್ನು ಬಳಸಬೇಕು ಎಂದುಕೊಂಡ. ಅವನ ಉತ್ಸಾಹದ, ಪರಿಶ್ರಮದ ಫಲ ಬೇಗನೇ ದೊರಕತೊಡಗಿತು. ಒಂದು ವರ್ಷದಲ್ಲಿ ಸಾಕಷ್ಟು ಲಾಭ ಬಂತು. ವರ್ಷವಾದ ದಿನ, ಈತ ಆ ಚೆಕ್ಕನ್ನು ಜೇಬಿನಲ್ಲಿಟ್ಟುಕೊಂಡು, ಸರಿಯಾದ ಸಮಯಕ್ಕೆ ಆ ತೋಟಕ್ಕೆ ಬಂದು ಕುಳಿತ. ಸ್ವಲ್ಪ ಹೊತ್ತು ಕಾಯ್ದ. ಅಲ್ಲೊಬ್ಬ ನರ್ಸ್ ಬಂದು ಯಾರನ್ನೋ ಹುಡುಕಾಡುತ್ತಿದ್ದಳು. ಈತನನ್ನು ಕೇಳಿದಳು, `ಇಲ್ಲೊಬ್ಬ ಮುದುಕನನ್ನು ನೋಡಿದರಾ? ಅವರು ಗಂಭೀರವಾಗಿ ಬಂದು ಕುಳಿತು ಯಾರಾದರೂ ಸಿಕ್ಕರೆ ಅವರಿಗೆ ಒಂದು ಚೆಕ್ಕು ಕೊಟ್ಟುಬಿಡುತ್ತಾರೆ. ಅವರೊಬ್ಬ ಮನೋರೋಗಿ. ತಮ್ಮನ್ನು ಹೆನ್ರಿ ಫೋರ್ಡ್ ಎಂದು ಭಾವಿಸಿದ್ದಾರೆ. ಅವರನ್ನು ಮರಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ಕಷ್ಟ.~ ಈತ ಥಟ್ಟನೇ ತನ್ನ ಜೇಬಿನಲ್ಲಿಯ ಚೆಕ್ಕು ತೆಗೆದು ನೋಡಿದ. ಹೌದು, ಕೆಳಗೆ ಸಹಿ ಹೆನ್ರಿ ಫೋರ್ಡ್ ಎಂದೇ ಇದೆ! ಹಾಗಾದರೆ ಇದೊಂದು ಅರ್ಥವಿಲ್ಲದ ಚೆಕ್ಕು. ಅದಕ್ಕೆ ಯಾವ ಬೆಲೆಯೂ ಇಲ್ಲ. ಆದರೂ ಅದು ತನಗೆ ನೀಡಿದ ಧೈರ್ಯ ಬೆಂಬಲದಿಂದ ಎಂಥ ಸಾಧನೆ ಸಾಧ್ಯವಾಯಿತಲ್ಲ ಎಂದು ಆಶ್ಚರ್ಯಪಟ್ಟ.
ನಮಗೂ ಹೀಗೆ ಜೀವನದಲ್ಲಿ ಕೆಲವು ಅನಿರೀಕ್ಷಿತವಾದ ಬೆಂಬಲಗಳು ಗುರು, ಹಿರಿಯರ ಆಶೀರ್ವಾದ, ಸ್ನೇಹಿತರ ಸಹಕಾರಗಳ ರೂಪದಲ್ಲಿ ಬರುತ್ತವೆ. ಅವುಗಳ ನೈಜ ಬೆಲೆಗೆ ಅರ್ಥವಿಲ್ಲ. ಆದರೆ ಅವು ನೀಡುವ ಧೈರ್ಯ, ಒತ್ತಾಸೆಗಳ ಶಕ್ತಿ ಅಪಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT