ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಾದ ಚಿರಾಗ್

Last Updated 25 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಮಹಾಯುದ್ಧಗಳಲ್ಲಿ ಎಷ್ಟು ಜನ ಪ್ರಾಣ ಕಳೆದುಕೊಂಡರೋ ಅದಕ್ಕಿಂತ ಹೆಚ್ಚು ಜನ ಧರ್ಮದ ಹೆಸರಿನಿಂದ, ದ್ವೇಷದಿಂದ ಪ್ರಾಣ ಕಳೆದುಕೊಂಡಿ­ದ್ದಾರೆ.  ಈ ಸಂದರ್ಭದಲ್ಲಿ ಮತ-ಮತಗಳನ್ನು ಬೆಸೆಯುವ ಕೆಲಸ ಮಾಡಿದ ಮಹಾನುಭಾವರನ್ನು ನೆನೆಯಬೇಕು.ಅಂತಹ ಒಬ್ಬ ಮಹಾನುಭಾವರು ಶೇಖ್ ಮಹಮ್ಮದ್ ನಾಸೀರುದ್ದೀನ್ ಚಿರಾಗ್. ಹಜ್ರತ್ ಶೇಖ್ ಮಹಮ್ಮದ್ ನಾಸೀರುದ್ದೀನ್ ಚಿರಾಗ್ ಹುಟ್ಟಿದ್ದು 1274 ರಲ್ಲಿ ಅಯೋಧ್ಯೆಯಲ್ಲಿ. ಇವರು ಒಂಬತ್ತು ವರ್ಷದವರಿದ್ದಾಗ ತಂದೆ ತೀರಿಹೋದರು.

ಇವರ ತಾಯಿಯು ಮಹಮ್ಮದ್ ನಾಸೀರುದ್ದೀನ್‌ನನ್ನು ಅವರ ಸಹೋದರಿಯೊಂದಿಗೆ ಅತ್ಯಂತ ಪ್ರೀತಿಯಿಂದ ಬೆಳೆಸಿದರು.  ಇವರ ಧಾರ್ಮಿಕ ಪ್ರಜ್ಞೆಯನ್ನು ತಿಳಿದ ಇವರ ಗುರುಗಳಾದ ಮೌಲಾನಾ ಫಕ್ರುದ್ದೀನ್ ಜಿಲಾನಿಯವರು ಈ ಹುಡುಗ ಮುಂದೆ ಅನೇಕ ಜನರಿಗೆ ಬೆಳಕಾಗುತ್ತಾನೆ ಎಂದು ಹೇಳಿದ್ದರಂತೆ.  ಮಹಮ್ಮದ್ ನಾಸೀ­ರು­­ದ್ದೀನ್ ದೆಹಲಿಗೆ ಬಂದು ಮಹಾನ್ ಸೂಫೀ ಸಂತ ಹಜ್ರತ್ ಮಹಬೂಬ್ ಇಲಾಹಿಯವರ ಶಿಷ್ಯತ್ವವನ್ನು ಪಡೆದರು.

ಅವರು ಸೂಫೀ ಚಿಂತನೆಯಲ್ಲಿ ಎಷ್ಟು ಆಳವಾಗಿ ಸೇರಿಹೋಗಿದ್ದರೆಂದರೆ ಎಷ್ಟೋ ದಿನಗಳ ಕಾಲ ನೀರು ಆಹಾರವಿಲ್ಲದೇ ಧ್ಯಾನದಲ್ಲಿ ಕುಳಿತುಬಿಡುತ್ತಿದ್ದರು.  ಒಂದು ಬಾರಿ ಗುರುಗಳಿಗೆ ಹೇಳಿದರಂತೆ, ‘ನಾನು ಒಂದು ದಿನ ಕಾಡು ಸೇರಿ ಇಡೀ ಬದುಕನ್ನೇ ಧ್ಯಾನದಲ್ಲಿ ಕಳೆಯುತ್ತೇನೆ’. ಆಗ ಗುರುಗಳು, ‘ಹಾಗೆ ಮಾಡ­ಕೂಡದು. ನಿಮ್ಮ ಜ್ಞಾನ ಕಾಡಿನಲ್ಲಿ ವ್ಯರ್ಥವಾಗಬಾರದು. ಅದು ಮಾನವನ ಬೆಳವಣಿಗೆಗೆ ಸಾಧಕವಾಗಬೇಕು’ ಎಂದರಂತೆ.  ಇದೇ ಬಗೆಯ ಮಾತನ್ನು ಶ್ರೀ ರಾಮಕೃಷ್ಣರು ನರೇಂದ್ರನಿಗೆ ಹೇಳಿ­ದ್ದರು.

ನರೇಂದ್ರ ನಿರ್ವಿಕಲ್ಪ ಸಮಾಧಿ­ಯನ್ನು ಬೇಡಿದಾಗ ಶ್ರೀರಾಮಕೃಷ್ಣರು, ‘ಕೇವಲ ನೀನು ಮಾತ್ರ ಸಮಾಧಿ ಪಡೆದು ಸ್ವಾರ್ಥಿಯಾಗ­ಬಾರದು. ನಿನ್ನ ಶಕ್ತಿ ಮನುಷ್ಯಲೋಕಕ್ಕೆ ದೊರೆಯಬೇಕು’ ಎಂದಿದ್ದರು. ಎಂಥ ಸಮಾನ ಚಿಂತನೆ! ಮಹಮ್ಮದ್ ನಾಸೀರುದ್ದೀನ್‌ ಅವರು ನಂತರ ಅಮೀರ್ ಖುಸ್ರೊ ಅವರೊಡನೆ ಹಜ್ರತ್ ನಿಜಾಮುದ್ದೀನ್‌ ಅವರ ಶಿಷ್ಯತ್ವವನ್ನು ಪಡೆದರು. ಅವರೇ ಮುಂದೆ ನಿಜಾಮುದ್ದೀನ್‌ ಆಶ್ರಮದ ಉತ್ತರಾಧಿ­ಕಾರಿಯಾಗು­ವುದ­ರೊಂದಿಗೆ ಚಿಸ್ತಿ ಪಂಥದ ದೆಹಲಿಯ ಕೊನೆಯ ಸೂಫೀ ಸಂತರಾಗಿ ಪ್ರಖ್ಯಾತ­ರಾದರು.

ಮಹ­ಮ್ಮದ್ ನಾಸೀರುದ್ದೀನ್‌ ಅವರ ಬಹುದೊಡ್ಡ ಕೊಡುಗೆಯೆಂದರೆ ತಮ್ಮ ಗುರು  ನಿಜಾಮುದ್ದೀನ್‌ ಅವರಂತೆ ಅವರೂ ಜಾತಿ, ಮತಗಳನ್ನು ಗಣಿಸದೆ ಎಲ್ಲರ ಸೇವೆಗೆ ಮುಂದಾದರು.  ಪಂಡಿ­ತರ ಸಂಪರ್ಕವಿರಿಸಿಕೊಂಡು ಹಿಂದೂ ಅಧ್ಯಾತ್ಮ, ವೇದ, ಉಪನಿಷ­ತ್ತುಗಳ ತಿರುಳನ್ನು ತಮ್ಮ ಸೂಫೀ ಚಿಂತನೆಯಲ್ಲಿ ಸೇರಿಸಿಕೊಂಡು ತಮ್ಮ ಬಳಿಗೆ ಬಂದವರಿಗೆ ಉಣಬಡಿಸಿದರು. 

ಇವರ ಆಶ್ರಮದಲ್ಲಿ ಕೆಲಸ ಮಾಡಲು ಅನೇಕ ಜನ ಹಗಲು- ರಾತ್ರಿ ಬರು­ತ್ತಿ­ದ್ದರು. ಆಗ ಮಹಮ್ಮದ್ ಬಿನ್ ತುಘಲಕ್ ದೆಹಲಿಯ ಕೋಟೆಯನ್ನು ಕಟ್ಟಿಸು­ತ್ತಿದ್ದ. ಕೆಲಸ ನಿಧಾನವಾದಾಗ ಅವನು ಮಂತ್ರಿಗಳನ್ನು ಪ್ರಶ್ನಿಸಿದಾಗ, ಕೆಲಸ­ಗಾರರು ನಿತ್ಯರಾತ್ರಿ ಮಹಮ್ಮದ್ ನಾಸೀರುದ್ದೀನ್‌ ಅವರ ಆಶ್ರಮಕ್ಕೆ ಕೆಲಸಕ್ಕೆ ಹೋಗುವುದ­ರಿಂದ ಹಗಲಿನಲ್ಲಿ ಅವರ ಕೆಲಸ ನಿಧಾನವಾಗುತ್ತದೆ ಎಂದರಂತೆ.  ಅದಕ್ಕೆ ಅವನು ಆಶ್ರಮಕ್ಕೆ ರಾತ್ರಿ ದೀಪಗಳ ಬೆಳಕಿಗೆ ಎಣ್ಣೆಯನ್ನೇ ಕೊಡಬೇಡಿ ಎಂದು ಆಜ್ಞೆ ಮಾಡಿ­­ದನಂತೆ. ಆಗ ನಾಸೀರುದ್ದೀನ್‌ ಅವರು ತಮ್ಮ ಶಿಷ್ಯರಿಗೆ ಯಮುನೆಯ ನೀರನ್ನೇ ದೀಪಗಳಿಗೆ ಹಾಕಿ ಉರಿಸಲು ಹೇಳಿದ­ರಂತೆ.

ನೀರಿನಿಂದಲೇ ದೀಪಗಳನ್ನು ಉರಿಸಿದ್ದರಿಂದ ಮಹಮ್ಮದ್ ನಾಸೀರು­ದ್ದೀನ್ ಎಂಬ ಹೆಸರಿನ ಮುಂದೆ ಚಿರಾಗ್ ಎಂಬುದೂ ಸೇರಿ ಹೋಯಿತು. ತಮಗೆ ಚೂರಿ ಹಾಕಿದ ತುರಾಬ್ ಎಂಬುವ­ವನನ್ನು ಕ್ಷಮಿಸಲು ಹೇಳಿದ ಚಿರಾಗ್, ದ್ವೇಷವನ್ನು ಮರೆಯಲು ಹೇಳಿದ ಮಹಾನು­ಭಾವ. ಇವರ ಸಮಾಧಿ ಸ್ಥಳ­ವಿರುವ ಪ್ರದೇಶಕ್ಕೆ ಈಗಲೂ ‘ಚಿರಾಗ್ -ಎ- ದೆಹಲಿ’ ಎಂದೇ ಕರೆಯುತ್ತಾರೆ. ಇಂದಿಗೂ ದುರ್ಗಾ ಶರೀಫ್‌ಗೆ ಅನೇಕ ಮತಗಳ, ಧರ್ಮಗಳ ಜನ ನಡೆದುಕೊಳ್ಳುತ್ತಾರೆ.

ಯಾವ ನಿಜವಾದ ಧರ್ಮವೂ ಹಿಂಸೆಯನ್ನು ಹೇಳಲಾರದು. ಹಾಗೆ ಹೇಳಿದ್ದೇ ಆದರೆ ಅದು ಧರ್ಮವಲ್ಲ. ಎಲ್ಲ ಧರ್ಮಗಳೂ ಅಹಿಂಸೆಯನ್ನೇ ಹೇಳುತ್ತವೆ. ದುರ್ದೈವ­ವೆಂದರೆ ಅದನ್ನು ತಿಳಿಯಲಾರದ, ತಿಳಿದುಕೊಳ್ಳಲು ಮನಸ್ಸಿಲ್ಲದ ಜನ ಧರ್ಮ­ವನ್ನೇ ಗುರಿ­ಯಾಗಿಟ್ಟು­ಕೊಂಡು ಹಿಂಸೆಯನ್ನು ಹರಡುತ್ತಾರೆ. ಅಂಥ ಎಲ್ಲರನ್ನೂ ಹಜ್ರತ್ ಮಹಮ್ಮದ್ ನಾಸೀರುದ್ದೀನ್ ಅವರ ಮಾತುಗಳು ತಟ್ಟಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT