ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕು-ನೆರಳಿನ ಚೆಲ್ಲಾಟದ ಜೀವನ

Last Updated 16 ಫೆಬ್ರುವರಿ 2011, 17:00 IST
ಅಕ್ಷರ ಗಾತ್ರ

ನವರತ್ನ ರಾಮರಾಯರು ಅಮಲ್ದಾರರಾಗಿದ್ದಾಗ ಮೇಲೂರೆಂಬ ಊರಿಗೆ ತಪಶೀಲಿಗೆ ಹೋದಾಗ ಅಲ್ಲೊಬ್ಬ ಗೌಡ ತನ್ನ ಹೆಂಡತಿ ಮತ್ತು ಮಗಳನ್ನು ಕರೆದುಕೊಂಡು ಬಂದಿದ್ದ. ಗೌಡ ಅಳಿಯನ ಮೇಲೆ ಫಿರ್ಯಾದು ತಂದಿದ್ದ. ‘ಅಳಿಯ ಮಹಾ ಒರಟ, ಹೆಂಡತಿಯನ್ನು ಸರಿಯಾಗಿ ಬಾಳಿಸದೇ ದನವನ್ನು ಹೊಡೆದ ಹಾಗೆ ಹೊಡೆದಿದ್ದಾನೆ. ನೋಡಿ ಅವಳ ಮೈಮೇಲೆ ಹೇಗೆ ಬಾಸುಂಡೆ ಬಂದಿದೆ’ ಎಂದು ಹೇಳಿ ಆ ಹುಡುಗಿಯ ಬೆನ್ನು, ತೋಳುಗಳ ಮೇಲೆ ಎದ್ದು ಕಾಣುತ್ತಿದ್ದ ಕೆಂಪನೆಯ ಬಾಸುಂಡೆಗಳನ್ನು ತೋರಿಸಿದ. ಹುಡುಗಿ ಬಿಕ್ಕಿ ಬಿಕ್ಕಿ ಅಳುತ್ತಾ ತನ್ನ ಕಷ್ಟ ಹೇಳಿಕೊಂಡಳು. ಆಕೆಯ ತಂದೆ-ತಾಯಿಯರೂ ಈ ಗೋಳಿನ ಕಥೆಯಲ್ಲಿ ಸೇರಿಕೊಂಡರು.

ಅಮಲ್ದಾರರು ಆಕೆಯ ಗಂಡನನ್ನು ಹಿಡಿದು ತರಿಸಿದರು. ಆತ ಸುಮಾರು 23 ವರ್ಷದ ಸ್ಫುರದ್ರೂಪಿ ತರುಣ. ಅವನ ಮುಖದಲ್ಲಿ ಕೋಪ, ಅಸಹಾಯಕತೆ, ಗಾಬರಿಗಳ ಬೆರಕೆ ಇತ್ತೇ ವಿನಾ ದುಷ್ಟತನ ಕಾಣುತ್ತಿರಲಿಲ್ಲ, ಅಮಲ್ದಾರರು ಧ್ವನಿ ಏರಿಸಿ, ‘ನೀನೇನು ಮನುಷ್ಯನೋ, ದನವೋ? ನಿನ್ನನ್ನೇ ನಂಬಿ ಬಂದ ಹುಡುಗಿಗೆ ಹೀಗೆ ಹೊಡೆಯುವುದೇ?’ ಎಂದು ಕೇಳಿದರು. ಅದಕ್ಕೇ ಆತ, ‘ಹೌದು ಬುದ್ಧಿ ಆ ಕ್ಷಣದಲ್ಲಿ ನಾನು ಮನುಷ್ಯನೇ ಅಲ್ಲ. ಸಿಟ್ಟಿನಲ್ಲಿ ಹೊಡೆದುಬಿಟ್ಟೆ. ಯಾಕೇ ಮುದ್ದೆ ಮಾಡ್ಲಿಲ್ಲ? ಯಾಕೇ ನೀರು ತರಲಿಲ್ಲ? ಎಂದು ಕೇಳಿದ್ರೆ ನಾನೇನು ನೀನು ತಂದಿಟ್ಟ ಆಳಾ? ನೀನೇನು ದೊರೆ ಮಗನಾ? ಎಂದೆಲ್ಲ ಅಂಬೋದೇ ಸ್ವಾಮಿ? ಅವರಪ್ಪ ಸಾವಕಾರ, ನಾನು ಬಡವ. ನನ್ನ ಮನೆ ಸಣ್ಣದು. ತಪ್ಪು ನಂದೇ ಸ್ವಾಮಿ, ದೊಡ್ಡಮನೆ ಮಗಳನ್ನು ಮದುವೆಯಾಗಬಾರದಿತ್ತು. ಮೊದಮೊದಲು ಸರಿಯಾಗೇ ಇದ್ಲು, ಆಮೇಲೆ ತಾಯಿ ಮಾತು ಕೇಳ್ಕೊಂಡು ಹೀಗೆ ಮಾಡಿ ಸಂಸಾರ ಕೆಡಿಸಿಬಿಟ್ಳು. ನಾನು ಸೀರೆ ತಂದ್ರೆ ಉಡೊಲ್ಲ, ನಮ್ಮ ನೆಂಟರ ಮನೆಗೆ ಕರದ್ರೆ ಅವಳಿಗೆ ನನ್ನ ಜೊತೆ ಬರೋಕೆ ಮಾನಕ್ಕೆ ಕಡಿಮೆಯಾಗ್ತದೆ. ಯಾವಾಗಲೂ ತಲೆ ಕೆದರಿಕೊಂಡು ಅಳ್ತಾ ಇರೋದು. ಅಯ್ಯೋ ನನ್ನ ಬಾಳು ಬ್ಯಾಡ ಬಿಡಿ ಬುದ್ಧೀ’ ಎಂದ. ಅವನ ಕಣ್ಣಲ್ಲಿ ನೀರು ತುಂಬಿ ಬಂದವು.

ಅವನು ಮಾತನಾಡುತ್ತಿದ್ದಾಗ ಆ ಹುಡುಗಿಯ ಕಣ್ಣಲ್ಲೂ ನೀರು ತುಂಬಿದ್ದವು. ‘ನಾನು ಆಕೇನ್ನ ಹೊಡೀಬೇಕೂಂತ ಹೊಡೆದವನಲ್ಲ. ಬಿಸಿಲಿನಲ್ಲಿ ದುಡಿದು ಕಂಗಾಲಾಗಿ ಮನೇಲಿ ನೀರು ಕಂಡೇನೇ ಎಂದು ಬಂದರೆ ಒಂದು ಒಳ್ಳೇ ಮಾತು ಬೇಡ್ವೇ? ನನಗೆ ಸಿಕ್ಕಾಪಟ್ಟೆ ಕೋಪ ಬರಿಸಿ, ನನ್ನ ಕಡಿಂದ ಹೊಡಿಸಿಕೊಂಡು ನನ್ನ ಹೊಟ್ಟೆ ಉರಿಸ್ತಾಳೆ. ನಾನು ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಪ್ರೀತಿ ಹೆಂಡ್ತಿಗೆ ಹೊಡೆದದ್ದಕ್ಕೆ ನನಗೆ ಶಿಕ್ಷೆ ಕೊಡಿ ಬುದ್ಧಿ, ಜೇಲಿಗೆ ಕಳ್ಸಿಬಿಡಿ. ಆದದ್ದಾಗಲಿ ಬುದ್ಧಿ’ ಎಂದು ಮತ್ತೆ ಕಣ್ಣೊರೆಸಿಕೊಂಡ.

ಅಮಲ್ದಾರರಿಗೆ ಗೊತ್ತಾಯಿತು. ಶ್ರೀಮಂತರ ಮನೆಯಿಂದ ಬಂದ ಹುಡುಗಿಗೆ ಬಡವನ ಮನೆಯಲ್ಲಿ ಹೊಂದಿಕೊಳ್ಳುವುದು ಕಷ್ಟ ಆಗಿದೆ. ಆದರೆ ಅವರಿಬ್ಬರಲ್ಲಿ ಪ್ರೀತಿ ಇದೆ. ಅವರು ಹುಸಿ ಕೋಪದಿಂದ, ‘ನೀನು ಹ್ಯಾಗೂ ಹೊಡೆದದ್ದನ್ನು ಒಪ್ಪಿದ್ದೀಯಲ್ಲ. ಆಯ್ತು ನಿನಗೆ ಎರಡು ತಿಂಗಳು ಸಜಾ ಕೊಟ್ಟಿದ್ದೇನೆ. ಯಾರೋ ಅಲ್ಲಿ. ಇವನನ್ನು ಹಿಡಿದುಕೊಂಡು ಹೋಗಿ’ ಎಂದು ಗರ್ಜಿಸಿದರು. ಆಗ ನೋಡಿ ಆಯಿತು ಚಮತ್ಕಾರ. ಹುಡುಗಿ ಧಡಕ್ಕನೇ ಎದ್ದವಳೇ ಹಾರಿ ಅಮಲ್ದಾರರ ಕಾಲ ಮೇಲೆ ದೊಪ್ಪನೇ ಬಿದ್ದು, ‘ಸ್ವಾಮಿ ನನ್ನೊಡೆಯ, ನನ್ನ ಗಂಡನಿಗೆ ಶಿಕ್ಷೆ ಕೊಡಬೇಡಿ, ನನಗೆ ಕೊಡಿ. ತಪ್ಪು ನಂದೇ. ಇಂಥಾ ಬಂಗಾರದಂಥ ಗಂಡನ್ನ ಸರಿಯಾಗಿ ನೋಡ್ಕೋಳ್ಳೋದಕ್ಕೆ ನಂಗೇ ಬರಲಿಲ್ಲ. ಹೊಡದ್ರೆ ಏನಾಯ್ತು ಬುದ್ಧಿ? ಹೊಡೆದದ್ದು ನಂಗೇ ತಾನೇ? ಎಷ್ಟೇ ಪ್ರೀತಿ ಇದ್ರೂ ಗಂಡ ಹೆಂಡತಿಗೆ ಹೊಡಿದೇ ಇರೋದಕ್ಕೆ ಆಗುತ್ತಾ? ನೀವು ಹೊಡೆದಿಲ್ವಾ ನಿಮ್ಮ ಹೆಂಡರಿಗೆ?’ ಎಂದು ಹೋಗಿ ಗಂಡನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಇಬ್ಬರೂ ಒಬ್ಬರೊಬ್ಬರ ಮುಖ ನೋಡಿಕೊಂಡು ಅಳುತ್ತಿದ್ದಾರೆ!

ಅಮಲ್ದಾರರು ಇಬ್ಬರಿಗೂ ಮತ್ತು ಅತ್ತೆ ಮಾವಂದಿರಿಗೂ ಬುದ್ಧಿ ಹೇಳಿ ಇನ್ನು ಮೇಲೆ ಜಗಳವಾಡದಂತೆ ತಿಳಿಸಿ ಕಳುಹಿಸಿದರು. ಮರುವರ್ಷ ದಂಪತಿಗಳಿಬ್ಬರೂ ಅಮಲ್ದಾರರನ್ನು ಕಾಣಲು ಬಂದರು. ಆದರೆ ಈಗ ತಾಯಿಯ ಕೈಯಲ್ಲಿ ಸುಂದರವಾದ ಮಗು. ಎಲ್ಲೆಡೆಗೂ ಬೆಳದಿಂದಗಳ ನಗು.

ಇದೇ ಅಲ್ಲವೇ ಸಂಸಾರ? ಕ್ಷಣಹೊತ್ತು ಕೋಪ, ನಂತರ ಪಶ್ಚಾತ್ತಾಪ, ಕೆಲವೊಮ್ಮೆ ತಪ್ಪು ಅಭಿಪ್ರಾಯ ನಂತರ ಒಪ್ಪಿಗೆ, ಕೆಲಕ್ಷಣ ನೋವು ನಂತರ ಅದರ ಉಪಶಮನ. ಹೀಗೆ ಬೆಳಕು ನೆರಳಿನ ಚೆಲ್ಲಾಟವೇ ಜೀವನ. ಆದರೆ ನಾವು ಎಚ್ಚರದಿಂದ, ತಿಳಿವಿನಿಂದ ನಡೆದರೆ ಮಾತ್ರ ಇದು ಚೆಲ್ಲಾಟ, ಹದ ತಪ್ಪಿದರೆ ಸದಾ ಚಿಂತೆಯ, ನೋವಿನ ಕೂಪ, ಅದು ಹೇಗಿರಬೇಕೆಂದು ನಮ್ಮ ಕೈಯಲ್ಲಿಯೇ ಇದೆ.
(ಕೃಪೆ- ಕೆಲವು ನೆನಪುಗಳು : ನವರತ್ನ ರಾಮರಾಯರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT