ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆವರು ಬಸಿದಿದ್ದ ಕೇಸು ಖುಲಾಸೆಯಾಯಿತು

Last Updated 19 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಭಾರತೀ ಅರಸ್ ಅವರಿಗೆ ಬಾಡಿಗಾರ್ಡ್ ತರಹ ಇದ್ದ ಚಂದ್ರಕಾಂತ್ ಹಾಗೂ ಮಧುಕುಮಾರ್ ಇಬ್ಬರನ್ನೂ ಬಂಧಿಸಲು ನಮ್ಮ ತಂಡ ಹೋದಾಗ, ಅವರು ಸಲೀಸಾಗಿ ಬಗ್ಗಲಿಲ್ಲ. ದರ್ಪ ಮಾಡಿದರು.

ನಾವು ಕೋಪದಲ್ಲಿ ಏಕವಚನದಲ್ಲಿ ಸಂಬೋಧಿಸಿದ್ದನ್ನೇ ದೊಡ್ಡದು ಮಾಡಿ ಬಾಯಿಗೆ ಬಂದಂತೆ ಮಾತನಾಡಿದರು. ಆಮೇಲೆ ಸ್ವಲ್ಪ ಒತ್ತಡ ಹಾಕಿಯೇ ಅವರನ್ನು ದಸ್ತಗಿರಿ ಮಾಡಬೇಕಾಯಿತು. ನಮಗೆ ಏನೋ ಸುಳಿವು ಸಿಕ್ಕಿಬಿಟ್ಟಿದೆ ಎಂಬುದು ಅವರಿಗೆ ಸ್ಪಷ್ಟವಾದದ್ದೇ ನಮ್ಮ ಬಿಗಿಪಟ್ಟು ನೋಡಿ. ಆಮೇಲೆ ತಣ್ಣಗಾದರು. ಕೊಲೆ ಮಾಡಿದ ರೀತಿಯನ್ನು ಬಿಚ್ಚಿಟ್ಟರು.

ಆ ದಿನ ಚಿತ್ರಲೇಖ ಕಚೇರಿ ಕೆಲಸ ಮುಗಿಸಿಕೊಂಡು ಭಾರತಿ ಅರಸ್ ಅವರನ್ನು ಭೇಟಿಯಾಗಲು `ಪಾಮ್ ಗ್ರೂವ್ ನರ್ಸರಿ~ಗೆ ಹೋದರು. ಭಾರತಿ ಅರಸ್ ಲಕ್ಷಗಟ್ಟಲೆ ಹಣವನ್ನು ಬಡ್ಡಿ ಕೊಡುವುದಾಗಿ ನಂಬಿಸಿ ಅವರಿಂದ ಪಡೆದಿದ್ದರು.

ಚಿತ್ರಲೇಖ ತಮ್ಮ ಪರಿಚಯಸ್ಥರಿಂದ ಹಣ ಪಡೆದು, ಬಡ್ಡಿಯ ಆಸೆಯಿಂದ ಆಕೆಗೆ ಕೊಟ್ಟಿದ್ದರು. ಅಸಲು, ಬಡ್ಡಿ ಎಲ್ಲಾ ಸೇರಿ ಚಿತ್ರಲೇಖಾಗೆ ನೀಡಬೇಕಿದ್ದ ಹಣದ ಮೊತ್ತ ಒಂದು ಕೋಟಿಯನ್ನು ದಾಟಿತ್ತು.

ಹಣ ಬೇಕೇಬೇಕೆಂದು ಚಿತ್ರಲೇಖ ಪಟ್ಟು ಹಿಡಿದಾಗ ಭಾರತಿ ತಾವಿದ್ದ ಜಾಗಕ್ಕೆ ಕರೆದಿದ್ದರು. ಅಲ್ಲಿ ಚಂದ್ರಕಾಂತ್ ಹಾಗೂ ಮಧುಕುಮಾರ್ ಹೆದರಿಸಿದರೂ ಅವರು ಜಗ್ಗಲಿಲ್ಲ. ಆಗ ಕುತ್ತಿಗೆಯನ್ನು ಹಿಸುಕಿ, ಉಸಿರುಗಟ್ಟಿಸಿ ಕೊಂದರು.

ಹೆಣವನ್ನು ಚಿತ್ರಲೇಖ ಅವರದ್ದೇ ಕಾರಿನ ಹಿಂದಿನ ಸೀಟಿನಲ್ಲಿ ಜೀವಂತ ಇರುವವರು ಕೂರುವ ಸ್ಥಿತಿಯಲ್ಲಿರಿಸಿ, ಮಧುಕುಮಾರ್ ಹಾಗೂ ಚಂದ್ರಕಾಂತ್ ಹೊರಟರು.  ಭಾರತಿ ಅರಸ್ ಇಶಾರೆಯಂತೆ ಹೆಣವನ್ನು ಚಾರ್ಮಾಡಿ ಘಾಟಿನಲ್ಲಿ ಎಸೆದುಬಂದರು.

ಚಾರ್ಮಾಡಿ ಘಾಟ್‌ನಲ್ಲಿ ಸುಮಾರು 35 ಕಿ.ಮೀ.ನಷ್ಟು ರಸ್ತೆ ಪ್ರಯಾಣ ಮಾಡಬೇಕು. ಅವರು ಯಾವ ಜಾಗದಲ್ಲಿ ಎಸೆದಿದ್ದಾರೋ ಎಂಬ ಜಿಜ್ಞಾಸೆ ಶುರುವಾಯಿತು. ಎಸೆದಿರುವ ಜಾಗ ತನಗೆ ಸ್ಪಷ್ಟವಾಗಿ ಗೊತ್ತೆಂದು ಮಧುಕುಮಾರ್ ಹೇಳಿದ.
 
ಆ ಜಾಗದಲ್ಲಿ ಎತ್ತರದ ಗೋಡೆ ಇದ್ದು, ಅದರ ಮೇಲೆ ಎಂಟು ಎಂದು ಬರೆದಿತ್ತೆಂದು ನೆನಪು ಮಾಡಿಕೊಂಡ. ತಕ್ಷಣ ಅವರು ನಮ್ಮನ್ನು ಕರೆದುಕೊಂಡು ಅಲ್ಲಿಗೆ ಹೊರಟರು. ಬೆಳಗ್ಗೆ ಜಾಗ ತಲುಪಿ ಇಣುಕಿ ನೋಡಿದೆವು. ಸುಮಾರು ನೂರು ಅಡಿ ಆಳದ ದೊಡ್ಡ ಕಂದಕ. ಕೆಳಗೆ ಕೆಂಪುಹೊಳೆ ನದಿ ಹರಿಯುತ್ತಿತ್ತು. ಪಂಚಾಯತುದಾರರು, ಪೊಲೀಸ್ ಸಿಬ್ಬಂದಿ ಎಲ್ಲರನ್ನೂ ಕರೆದುಕೊಂಡು ಅಲ್ಲಿಗೆ ಹೋಗಿದ್ದೆವು.

ಕಂದಕದ ತಳಕ್ಕಿಂತ ಸಾಕಷ್ಟು ಮೇಲ್ಭಾಗದಲ್ಲಿ ಬಂಡೆಯೊಂದು ಇತ್ತು. ಶವವನ್ನು ಕತ್ತಲಲ್ಲಿ ರಸ್ತೆ ಬದಿಯಿಂದ ನದಿಗೆ ಬಿಸಾಡುವುದು ಕಷ್ಟವಿತ್ತೆಂಬುದನ್ನು ದೊಡ್ಡ ಕಲ್ಲುಗಳನ್ನು ಎಸೆದು ಖಾತರಿ ಪಡಿಸಿಕೊಂಡೆವು. ಅಲ್ಲಿಗೆ ಸಲೀಸಾಗಿ ಇಳಿಯುವುದು ಕಷ್ಟವಿತ್ತು. ಅಲ್ಲಿ ಸಾಗುತ್ತಿದ್ದ ಲಾರಿಯನ್ನು ನಿಲ್ಲಿಸಿದೆವು.

ಚಾಲಕನನ್ನು ಕಷ್ಟಪಟ್ಟು ಒಪ್ಪಿಸಿ, 300 ರೂಪಾಯಿ ದುಡ್ಡು ಕೊಟ್ಟು ಅವನಲ್ಲಿದ್ದ ತುಂಬಾ ಉದ್ದದ ಪ್ಲಾಸ್ಟಿಕ್ ಹಗ್ಗ ಕೊಂಡೆವು. ಅದನ್ನು ಕಂದಕಕ್ಕೆ ಇಳಿಬಿಟ್ಟು ಪರ್ವತಾರೋಹಿಗಳಂತೆ ಒಬ್ಬೊಬ್ಬರೇ ಕೆಳಗೆ ಇಳಿದೆವು. ಬಂಡೆಗೆ ಲಗತ್ತಾಗಿ ಒಂದು ಮರ ಬೆಳೆದಿತ್ತು. ಅದಕ್ಕೆ ಶವವೊಂದು ಸಿಕ್ಕಿಹಾಕಿಕೊಂಡಿತ್ತು. ಅದನ್ನು ನೋಡಿ ನಮಗೆ ಅಚ್ಚರಿ.

ಶವದ ಮೈಮೇಲೆ ಒಂದು ಬಟ್ಟೆಯೂ ಇರಲಿಲ್ಲ. ಬರಿಮೈ ಶವವನ್ನು ಬಿಸಾಡಿದರೆ ಪ್ರಾಣಿ ಪಕ್ಷಿಗಳು ತಿಂದು, ಸಾಕ್ಷ್ಯ ಉಳಿಯುವುದಿಲ್ಲ ಎಂದುಕೊಂಡು ಹಾಗೆ ಮಾಡಿದ್ದರು. ಮರಕ್ಕೆ ಸಿಕ್ಕಿಹಾಕಿಕೊಂಡಿದ್ದ ಶವದ ಒಂದು ಭಾಗ ಅಸ್ಥಿಪಂಜರವಾಗಿ ಮಾರ್ಪಟ್ಟಿತ್ತು. ಇನ್ನೊಂದು ಭಾಗದ ಮೇಲೆ ಸೋಪಿನಂತೆ ನೊರೆ ಮೂಡಿ `ಮಮಿಫಿಕೇಷನ್~ ಆಗಿತ್ತು.

ಆ ಸ್ಥಿತಿಯಲ್ಲಿದ್ದ ಶವವನ್ನು ನಾವು ವಶಪಡಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ನಮ್ಮ ಅದೃಷ್ಟಕ್ಕೆ ಪ್ರಾಣಿಗಳು ಓಡಾಡಲು ಸಾಧ್ಯವಿಲ್ಲದ ಜಾಗದಲ್ಲಿ ಆ ಶವ ಸಿಕ್ಕಿಹಾಕಿಕೊಂಡಿತ್ತು. ಹಾಗಾಗಿ ತನಿಖೆಗೆ ಅಗತ್ಯವಿದ್ದ ಪ್ರಕ್ರಿಯೆಯನ್ನು ನಾವು ಮುಂದುವರಿಸುವುದು ಸಾಧ್ಯವಾಯಿತು.

ಅಲ್ಲಿಗೇ ನಾವು ವೈದ್ಯರನ್ನು ಕರೆಸಿದೆವು. ಅವರು ಅಲ್ಲೇ ಶವಪರೀಕ್ಷೆ ಮಾಡಿ ವರದಿ ಕೊಟ್ಟರು. ಹವಾಮಾನ ತಂಪಾಗಿದ್ದಾಗ ಶವದ ಮೇಲೆ ಆ ರೀತಿ `ಮಮಿಫಿಕೇಷನ್~ ಆಗುತ್ತದೆ ಎಂದು ವೈದ್ಯರೇ ಹೇಳಿದರು. ಶವಪರೀಕ್ಷೆಯ ನಂತರ ದೇಹದ ಭಾಗಗಳನ್ನು ಶೇಖರಿಸಿಟ್ಟು ತಂದೆವು. ಕಿವಿಯ ಒಡವೆ, ಕಾಲುಂಗುರ ಮಾತ್ರ ಸಿಕ್ಕಿತು.

ಮಧುಕುಮಾರ್ ಹಾಗೂ ಚಂದ್ರಕಾಂತ್ ಇಬ್ಬರನ್ನೂ ಇನ್ನಷ್ಟು ಪ್ರಶ್ನಿಸಿದಾಗ, ಭಾರತಿ ಅರಸ್ ಸೂಚನೆಯಂತೆ ಶವದ ಮೇಲೆ ಏನೂ ಇರಕೂಡದು ಎಂಬ ಎಚ್ಚರಿಕೆ ವಹಿಸಿದ್ದರೆಂಬುದು ಗೊತ್ತಾಯಿತು.

ಯಾವುದೇ ಪದಾರ್ಥ ಇಟ್ಟುಕೊಳ್ಳಬಾರದು ಎಂದು ಭಾರತಿ ಸೂಚನೆಯ ಮೇರೆಗೆ ಚಿತ್ರಲೇಖ ಶವದಲ್ಲಿದ್ದ ಚಪ್ಪಲಿ, ಬಟ್ಟೆ, ಒಡವೆ ಎಲ್ಲವನ್ನೂ ಮಾರ್ಗಮಧ್ಯೆಯೇ ಬಿಸಾಡಿದ್ದರು.

ಅದಕ್ಕಿಂತ ಸೋಜಿಗದ ಸಂಗತಿಯೆಂದರೆ ನೆಲಮಂಗಲದ ಬಂಕ್‌ನಲ್ಲಿ ಅವರು ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡಾಗ ಹಿಂದಿನ ಸೀಟಿನಲ್ಲಿ ಚಿತ್ರಲೇಖ ಶವವಿತ್ತು. ಅದು ಯಾರ ಕಣ್ಣಿಗೂ ಬೀಳದಂತೆ ಇಬ್ಬರೂ ನಿಗಾ ವಹಿಸಿದ್ದರು. ಮಧುಕುಮಾರ್ ಕಾರನ್ನು ಓಡಿಸಿದ.

ಮೈಮೇಲಿದ್ದ ಎಲ್ಲಾ ಒಡವೆಗಳನ್ನೂ ಒಂದೊಂದಾಗಿ ಬಿಸಾಡಿ ಎಂಬ ಸೂಚನೆಯನ್ನು ಮಾತ್ರ ಹಿಂದೆ ಕೂತಿದ್ದ ಚಂದ್ರಕಾಂತ್ ಪಾಲಿಸಲಿಲ್ಲ. ಬಿಸಾಡುವಂತೆ ನಾಟಕವಾಡಿ ಅವನು ಎಲ್ಲಾ ಒಡವೆಗಳನ್ನೂ ಜೇಬಿನಲ್ಲಿ ತುರುಕಿಕೊಂಡ. ಕಿವಿಯ ಒಡವೆ ಹಾಗೂ ಕಾಲುಂಗರ ತೆಗೆಯುವುದು ಅವನಿಗೆ ಸಾಧ್ಯವಾಗಲಿಲ್ಲ.

ನಾವು ಅಲ್ಲಿಂದ ಬರುವಷ್ಟರಲ್ಲಿ ಭಾರತಿ ಅರಸ್ ತಲೆಮರೆಸಿಕೊಂಡರೆ ಕಷ್ಟವೆಂಬ ಕಾರಣಕ್ಕೆ ಬೆಂಗಳೂರಿನಲ್ಲಿದ್ದ ನಮ್ಮ ಅಧಿಕಾರಿಗಳಿಗೆ ತಕ್ಷಣವೇ  ಅವರನ್ನು ದಸ್ತಗಿರಿ ಮಾಡುವಂತೆ ಕೇಳಿಕೊಂಡೆ.

ಚಿತ್ರಲೇಖ ಮೈಮೇಲಿದ್ದ ಒಡವೆಗಳು ಎಲ್ಲಿವೆ ಎಂಬುದನ್ನು ಪತ್ತೆಹಚ್ಚಬೇಕಿತ್ತು. ಮಧುಕುಮಾರ್ ಆ ವಿಷಯ ಚಂದ್ರಕಾಂತ್‌ಗೆ ಗೊತ್ತು ಎಂಬುದನ್ನು ಸ್ಪಷ್ಟವಾಗಿ ಹೇಳಿಬಿಟ್ಟ.

ನಾವು ಚಂದ್ರಕಾಂತ್ ಕಡೆಗೆ ದೃಷ್ಟಿ ಬೀರಿದೊಡನೆ ಅವನು, `ಸಭ್ಯ ನಾಗರಿಕನಿಗೆ, ಸಂಸಾರಸ್ಥನಿಗೆ, ಮಾನಸ್ಥನಿಗೆ ನೀವು ಹೀಗೆಲ್ಲಾ ಮಾಡುತ್ತಿದ್ದೀರಿ. ಇದು ಮಾನವ ಹಕ್ಕುಗಳ ಉಲ್ಲಂಘನೆ~ ಎಂದು ಬಡಬಡಿಸಿದ. ಆಮೇಲೆ ಅವನಿಗೂ ನಮ್ಮ ಒತ್ತಡಕ್ಕೆ ಮಣಿಯದೆ ವಿಧಿಯಿರಲಿಲ್ಲ.

ರಾಜಾಜಿನಗರದಲ್ಲಿ ಅವನು ವಾಸವಿದ್ದ. ಅಲ್ಲಿಯೇ ಇನ್ನೊಂದು ಮನೆಯನ್ನೇ ಮಲ್ಟಿ ಜಿಮ್ ಆಗಿ ಪರಿವರ್ತಿಸಿದ್ದ. ಅವನದ್ದು ಒಳ್ಳೆಯ ದೇಹದಾರ್ಢ್ಯ. ಆ ಜಿಮ್‌ಗೆ ಹೋದೆವು. ಅಲ್ಲಿ ಒಡವೆಗಳನ್ನು ಮುಚ್ಚಿಡಬಹುದಾದ ಜಾಗವೇ ನಮಗೆ ಕಾಣಲಿಲ್ಲ.
 
ಕೊನೆಗೆ ಒಂದು ಬಚ್ಚಲುಮನೆಯನ್ನು ತೋರಿಸಿದ. ಅಲ್ಲಿ ಹಳೆಯ ಡಂಬಲ್ಸ್, ಪ್ಲೇಟ್‌ಗಳು, ರಾಡ್‌ಗಳನ್ನು ಒಟ್ಟಿದ್ದ. ಬೇಕಾದರೆ ಹುಡುಕಿಕೊಳ್ಳಿ ಎಂಬಂತೆ ಮಾತನಾಡಿದ. ಮತ್ತೆ ಒತ್ತಡ ಹಾಕಿ, `ನಾರ್ಕೊ ಅನಾಲಿಸಿಸ್ ಟೆಸ್ಟ್~ ಮಾಡಿಸಿದರೆ ಬಾಯಿ ಬಿಡುತ್ತಿಯಾ ಎಂದಾಗ, ಆ ಬಚ್ಚಲುಮನೆಯಲ್ಲಿದ್ದ ಹಂಡೆಯ ಒಲೆ ತೋರಿದ.

ಸಿಮೆಂಟ್ ಮೆತ್ತಿದ್ದ ಆ ಒಲೆಯನ್ನು ಒಡೆದರೆ ಒಡವೆಯ ಗಂಟು ಸಿಗುತ್ತದೆ ಎಂದ. ಮೇಲಿನ ಹೊಗೆ ಚಿಮಣಿಯಿಂದ ಒಡವೆ ಗಂಟನ್ನು ಅವನು ಇಳಿಬಿಟ್ಟಿದ್ದ. ಹಂಡೆ ಒಲೆಯನ್ನು ಒಡೆದಾಗ ಗಂಟು ಸಿಕ್ಕಿತು. ಚಿತ್ರಲೇಖಾಗೆ ಸೇರಿದ್ದ ಸಮಸ್ತ ಒಡವೆಗಳು ಹಾಗೂ ದುಬಾರಿ ಬೆಲೆಯ ಹರಳುಗಳು ಸಿಕ್ಕವು. ಆಕೆ ಹತ್ತೂ ಬೆರಳುಗಳಿಗೆ ಉಂಗುರ ತೊಡುತ್ತಿದ್ದರು.

ಕಾಲುಬೆರಳುಗಳಿಗೂ ಉಂಗುರ ಹಾಕುತ್ತಿದ್ದರು. ಆಕೆಯ ಸುತ್ತ ಇಲ್ಲಸಲ್ಲದ ಕಥೆಗಳನ್ನು ಹುಟ್ಟುಹಾಕಿದ್ದರು. ಕೊಲೆ ಮಾಡಿದವರ ಸುಳಿವು ಸಿಕ್ಕಿದ್ದೇ ತಡ ಆ ಕಥೆಗಳೆಲ್ಲಾ ಸತ್ತವು.

ಭಾರತಿ ಅರಸ್ ಅವರನ್ನು ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಳ್ಳಲಾಯಿತು. ಆಕೆ ಪಡೆದಿದ್ದ ಸಾಲದ ದಾಖಲೆಗಳು, ಆಕೆಯನ್ನು ಭೇಟಿ ಮಾಡುತ್ತಿದ್ದವರ ವಿವರ ಎಲ್ಲವನ್ನೂ ವಶಪಡಿಸಿಕೊಳ್ಳಲಾಯಿತು.

ಯಾವ ತಿಂಗಳಲ್ಲಿ 31ನೇ ತಾರೀಕು ಇಲ್ಲವೋ ಎಂಬುದನ್ನು ಅರಿತು, ಆ ತಿಂಗಳಿನ 31ನೇ ತಾರೀಕಿಗೆ ಚೆಕ್ ಬರೆದು ಸಾಲ ನೀಡಿದವರಿಗೆ ಗ್ಯಾರಂಟಿ ಎಂಬಂತೆ ಕೊಟ್ಟು ಯಾಮಾರಿಸುವುದು ಆಕೆಗೆ ಮಾಮೂಲಾಗಿತ್ತು.

ಎಲ್ಲಾ ಸಾಕ್ಷಿಗಳನ್ನು ಇಟ್ಟುಕೊಂಡು ನಾವು ಆರೋಪ ಪಟ್ಟಿ ಸಲ್ಲಿಸಿದೆವು. ನಮ್ಮ ಮೇಲೆ ಒತ್ತಡ ಬಂತು. ನ್ಯಾಯಾಲಯದಲ್ಲಿ ಕೇಸಿನ ವಿಚಾರಣೆ ಮುಗಿಯುವ ಮುನ್ನವೇ ನಾನು ಸ್ವಯಂ ನಿವೃತ್ತಿ ಪಡೆದೆ. ಆಮೇಲೆ ನನ್ನ ಮೇಲೆ ಇನ್ನಷ್ಟು ಒತ್ತಡ ಬಂತು. ನನ್ನ ಡಿಸಿಪಿ ಆಗಿದ್ದ ರವಿಕಾಂತೇಗೌಡರು ಮತ್ತು ಜಾಯಿಂಟ್ ಕಮಿಷನರ್ ಆಗಿದ್ದ ಗೋಪಾಲ್ ಹೊಸೂರು ನನಗೆ ಬೆಂಬಲ ಕೊಟ್ಟರು.

ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಭೇಟಿಯಾಗಿ ನನಗೆ ಎರಡು ಕೋಟಿ ರೂಪಾಯಿ ಆಮಿಷ ಒಡ್ಡಿದರು. ಅದನ್ನೂ ನಾನು ಅಧಿಕಾರಿಗಳ ಗಮನಕ್ಕೆ ತಂದೆ. ಅನೇಕರು ಅದ್ಭುತವಾಗಿ ಸಾಕ್ಷಿ ಹೇಳಿದರು. ಶವದ ಮೇಲಿರುವ ಒಡವೆಗಳನ್ನು ಬಚ್ಚಿಟ್ಟ ವಿವರಗಳನ್ನೂ ಕೊಟ್ಟರು.

ವಿಡಿಯೋದಲ್ಲಿ ತೆಗೆದ ಮಾಹಿತಿಗೆ ಹೊಂದುವಂಥದ್ದೇ ಹೇಳಿಕೆಗಳು ನ್ಯಾಯಾಲಯದಲ್ಲಿ ವ್ಯಕ್ತಗೊಂಡವು. ವ್ಯತಿರಿಕ್ತವಾಗಿ ಬಹುತೇಕರು ಸಾಕ್ಷಿ ಹೇಳಲಿಲ್ಲ. ಪಾಮ್ ಗ್ರೂವ್ ನರ್ಸರಿಯ ಕೆಲಸಗಾರರು ಮಾತ್ರ ತಾವು ಏನೂ ಹೇಳಿಲ್ಲ ಎಂದು ಜಾರಿಕೊಂಡರು.

ಚಿತ್ರಲೇಖ ಹಲ್ಲನ್ನು ಕ್ಯಾಪಿಂಗ್ ಮಾಡಿದ್ದ ದಂತವೈದ್ಯರಿಂದಲೂ ನಮಗೆ ಸಿಕ್ಕ ತಲೆಬುರುಡೆಯಲ್ಲಿ ಇದ್ದದ್ದು ಚಿತ್ರಲೇಖ ಅವರದ್ದೇ ವಸಡು ಎಂಬುದನ್ನು ಖಾತರಿ ಪಡಿಸಿಕೊಂಡೆವು. ಚಿತ್ರಲೇಖ ತಾಯಿ, ಸಹೋದರಿಯ ರಕ್ತದ ಡಿಎನ್‌ಎ ಪರೀಕ್ಷೆ ಮಾಡಿಸಿ, ಹೋಲಿಸಿ ಆ ವರದಿಯನ್ನೂ ನೀಡಿದೆವು.

ಇಷ್ಟೆಲ್ಲಾ ಆದ ನಂತರವೂ ಕೇಸು ಖುಲಾಸೆಯಾಯಿತು. ಯಾಂತ್ರಿಕವಾಗಿ ಹಾಗೂ ಉತ್ಪ್ರೇಕ್ಷೆಯಿಂದ ಅಧಿಕಾರಿ ಸಾಕ್ಷ್ಯ ನೀಡಿದ್ದಾರೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಬರೆದರು. ಪ್ರಕರಣ ಖುಲಾಸೆ ಆಗುವವರೆಗೆ, ಆರು ವರ್ಷ ಭಾರತಿ ಅರಸ್ ಜೈಲಿನಲ್ಲಿದ್ದರು.

ಈ ಪ್ರಕರಣದಲ್ಲಿ ಅವರಿಗೆ ಸುಪ್ರೀಂಕೋರ್ಟ್ ಕೂಡ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಒಂದು ಒಳ್ಳೆಯ ತನಿಖೆಗೆ ನ್ಯಾಯ ಸಿಗಲಿಲ್ಲವಲ್ಲ ಎಂಬ ನೋವು ಮಾತ್ರ ನನ್ನನ್ನು ಈಗಲೂ ಕಾಡುತ್ತಿದೆ.

ಮುಂದಿನ ವಾರ: ಕೊಲೆ ಮಾಡಿದ್ದ ಶವ ಸಿಗದಿದ್ದರೂ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಸಂಗ
ಶಿವರಾಂ ಅವರ ಮೊಬೈಲ್ ಸಂಖ್ಯೆ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT