ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮ ಎಂಬ ಜೆನ್ ಗುರು

Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮ್ಮನ ಮುಖದಲ್ಲಿ ಸದಾ ತುಂಬಿರುತ್ತಿದ್ದ ಮಂದಹಾಸ ನಮ್ಮನ್ನು ಅಚ್ಚರಿಗೊಳಿಸುತ್ತಿತ್ತು. ಬದುಕಿನಲ್ಲಿ ಅವನಿಗೆ ಸಂಕಷ್ಟಗಳು ಎಂದೂ ಎದುರಾಗಿರಲಿಲ್ಲವೊ, ಅಥವಾ ಹೊರಗಿನವರಿಗೆ ತೋರದಂತೆ ಅವುಗಳನ್ನು ಗುಟ್ಟಾಗಿ ಅನುಭವಿಸುತ್ತಿದ್ದನೊ, ನಮಗೆ ತಿಳಿದಿರಲಿಲ್ಲ. ಒಟ್ಟಿನಲ್ಲಿ ಮುಗ್ಧ ಹುಸಿನಗೆ ಬೊಮ್ಮನ ಮುಖದಲ್ಲಿ ಮಾಸಿದ್ದನ್ನು ನಾವು ಕಂಡಿರಲಿಲ್ಲ.

ತನ್ನ ನಿಷ್ಕಪಟ ನಗುವನ್ನು ಆತ ಧಾರಾಳವಾಗಿ ಬಳಸುತ್ತಿದ್ದ. ಅಲ್ಲದೆ ಆತ ಹೇಗೋ ಸಂಗ್ರಹಿಸುತ್ತಿದ್ದ ಅಂತೆಕಂತೆ, ಗುಸುಗುಸು ಸುದ್ದಿಗಳನ್ನು ಯಾವಾಗ–ಯಾರೊಂದಿಗೆ ಎಷ್ಟನ್ನು ಹಂಚಿಕೊಳ್ಳಬೇಕೆಂಬ ಅರಿವು–ಕಲೆ ಅವನಿಗೆ ಕರಗತವಾಗಿತ್ತು. ಬೊಮ್ಮನ ಮತ್ತೊಂದು ವೈಶಿಷ್ಟ್ಯತೆ ಎಂದರೆ, ಅವನು ಹೇಳುತ್ತಿದ್ದ ಕಥೆಗಳು. ಅವು ಅಮೂರ್ತವಾಗಿ, ಅಸಂಗತ ಕಥೆಗಳಂತಿರುತ್ತಿದ್ದವು. ಆ ಕಥೆಗಳು ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ, ಕೇಳುಗರನ್ನು ಗೊಂದಲಕ್ಕೀಡುಮಾಡುವಲ್ಲಿ ಯಶಸ್ವಿಯಾಗುತ್ತಿದ್ದವು.
***
ಒಮ್ಮೆ ಬೆಂಗಳೂರಿನ ಮಿತ್ರರೊಬ್ಬರು ಮುದುಮಲೈ ಕಾಡಿಗೆ ಬಂದಿದ್ದರು. ನಾವು ಹೇಳುತ್ತಿದ್ದ ಅನೇಕ ಕಥೆಗಳಲ್ಲಿ ಆವರಿಸಿಕೊಳ್ಳುತ್ತಿದ್ದ ಬೊಮ್ಮನ ವ್ಯಕ್ತಿತ್ವ ಅವರಲ್ಲಿ ಕುತೂಹಲ ಮೂಡಿಸಿತ್ತು. ಮನುಷ್ಯನ ನಡವಳಿಕೆ, ಸ್ವಭಾವಗಳನ್ನೆಲ್ಲ ತಾತ್ವಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸುತ್ತಿದ್ದ ಅವರಿಗೆ ಬೊಮ್ಮ ಜೆನ್ ತತ್ವಜ್ಞಾನಿಯಂತೆ ಕಂಡಿದ್ದ.
ಹಾಗಾಗಿ ಅವರು ಮುದುಮಲೈಗೆ ಬಂದ ಉದ್ದೇಶಗಳಲ್ಲಿ ಬೊಮ್ಮನನ್ನು ಭೇಟಿ ಮಾಡುವುದೇ ಪ್ರಮುಖವಾಗಿತ್ತು. ಬೊಮ್ಮನನ್ನು ಅವರಿಗೆ ಪರಿಚಯ ಮಾಡಿಕೊಡುವುದು ಕಷ್ಟದ ಕೆಲಸವಾಗಿರಲಿಲ್ಲ. ಆದರೆ ನಮಗೆ ನಮ್ಮದೇ ಆದ ಹಿಂಜರಿಕೆಗಳಿದ್ದವು.

ಇಪ್ಪತ್ತು ವರ್ಷಗಳ ಹಿಂದೆ ಮುದುಮಲೈನ ಕಾಡುಕುರುಬರು ದಿನದ ಹೆಚ್ಚಿನ ಸಮಯವನ್ನು ಕಾಡಿನಲ್ಲೇ ಕಳೆಯುತ್ತಿದ್ದರು. ಅವರಿಗೆ ನಗರವಾಸಿಗಳ ಸಂಪರ್ಕ ಅಷ್ಟಾಗಿ ಇರುತ್ತಿರಲಿಲ್ಲ. ಅಪರಿಚಿತರು ಎದುರಾದಾಗ ಸಂಕೋಚಗೊಂಡು ಮಾತು ತಿಳಿಯದವರಂತೆ ತುಟಿ ಬಿಚ್ಚದಿರುವುದು ಅವರ ಸ್ವಭಾವವಾಗಿತ್ತು. ‘ನಿಮ್ಮ ಹೆಸರೇನು’ ಎಂಬ ಸರಳ ಪ್ರಶ್ನೆಗೆ, ಆಕಾಶ ನೋಡುತ್ತಾ ಇಲ್ಲವೆ ಕಾಡಿನತ್ತ ಮುಖಮಾಡಿ ಯೋಚಿಸಿ ತಡವಾಗಿ ಉತ್ತರಿಸುತ್ತಿದ್ದರು.

ಹೇಗಾದರೂ ಮಾತಿಗೆ ಎಳೆಯೋಣವೆಂದರೆ, ಆಬ್ಜೆಕ್ಟಿವ್ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವಂತೆ – ‘ಹೌದೇನು?’ ಎಂದರೆ ಹೌದೆಂದು, ‘ಇಲ್ಲವಂತೆ?’ ಎಂದರೆ ಇಲ್ಲವೆಂದು ತಲೆಯಾಡಿಸಿ ನಿಲ್ಲುವುದು ಸಾಮಾನ್ಯವಾಗಿತ್ತು. ಹೊಸಬರನ್ನು ಕಂಡಾಗ ಮಾತು ಬಹಳ ದುಬಾರಿ ಎನ್ನುವಂತೆ ವರ್ತಿಸುತ್ತಿದ್ದುದಲ್ಲದೆ, ಸುಲಭವಾಗಿ ಬೆರೆಯುವುದಾಗಲೀ ತೆರೆದುಕೊಳ್ಳುವುದಾಗಲೀ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಅನವಶ್ಯಕವಾದ ಅನುಕಂಪದ ಮಾತುಗಳು ಅವರಿಗೆ ಇಷ್ಟವಾಗುತ್ತಿರಲಿಲ್ಲ.

ಇದೆಲ್ಲ ತಿಳಿದಿದ್ದರಿಂದ, ಹೆಚ್ಚಿನ ನಿರೀಕ್ಷೆಯೊಂದಿಗೆ ಆಗಮಿಸಿದ್ದ ಮಿತ್ರರಿಗೆ ನಿರಾಶೆಯಾಗುವುದು ಬೇಡವೆಂದು ಬೊಮ್ಮನನ್ನು ಭೇಟಿ ಮಾಡಿಸಲು ಹಿಂಜರಿದಿದ್ದೆವು.
ಆದರೆ ಬೊಮ್ಮನನ್ನು ನೋಡಲೇಬೇಕೆಂದು ಅವರು ಒತ್ತಾಯಿಸಿದಾಗ ಅನ್ಯಮಾರ್ಗವಿಲ್ಲದೆ ಬೊಮ್ಮನ ಬಳಿ ಕರೆದೊಯ್ದೆವು.

ನಾವು ಯೋಚಿಸಿದಂತೆ, ಹೊಸಮುಖ ಕಂಡಾಕ್ಷಣ ಬೊಮ್ಮ ಸಂಕೋಚದಿಂದ ಮಾತು ಬರದವನಂತೆ ನೀಲಗಿರಿ ಬೆಟ್ಟದ ಕಡೆ ನೋಡುತ್ತಾ ನಿಂತ. ನಂತರ ಒಬ್ಬರ ಮುಖ ಒಬ್ಬರು ನೋಡಿ ಆಗಾಗ್ಗೆ ಮಂದಹಾಸ ಬೀರುವುದು ಕೆಲಕಾಲ ನಡೆದಿತ್ತು. ಆದರೆ ಬೊಮ್ಮ ನಮಗೆ ತುರ್ತಾಗಿ ತಿಳಿಸಬೇಕೆಂದುಕೊಂಡಿದ್ದ ಸಂಗತಿಯೊಂದಿತ್ತು, ಹಾಗಾಗಿ ಕೆಲವು ನಿಮಿಷಗಳ ಮೌನದ ಬಳಿಕ ಮಾತನಾಡಲು ಆರಂಭಿಸಿದ.

ಹಾಡಿಯ ಹಿಂಬದಿಯ ಬೆಟ್ಟದತ್ತ ಕೈ ತೋರಿದ ಬೊಮ್ಮ, ನೆತ್ತಿಯಲ್ಲಿದ್ದ ಬಂಡೆಯ ಕಡಿದಾದ ಇಳಿಜಾರಿನಲ್ಲಿ ಹದ್ದೊಂದು ಗೂಡು ಕಟ್ಟುತ್ತಿರುವುದಾಗಿ ಹೇಳಿದ. ಅವನ ಕೈಯಷ್ಟು ದಪ್ಪದ ಕಡ್ಡಿಯನ್ನು ಕಾಲಿನಲ್ಲಿ ಹಿಡಿದುಕೊಂಡು ಕಷ್ಟಪಟ್ಟು ಹಾರುತ್ತಿದ್ದ ಹದ್ದೊಂದನ್ನು ನೋಡಿದ್ದಾಗಿ ತಿಳಿಸಿದ. ಮುಂದುವರೆದ ಬೊಮ್ಮ, ಆಕಾಶದಲ್ಲಿ ಸುತ್ತುತ್ತಿದ್ದ ಎರಡು ಹದ್ದುಗಳು ಇದ್ದಕ್ಕಿದ್ದಂತೆ ಒಂದರ ಹಿಂದೆ ಒಂದು ಡೈವ್ ಹೊಡೆದು, ಕೆಳಕ್ಕಿಳಿದು ಮತ್ತೆ ಮೇಲೇರಿದ್ದನ್ನು ಬಹಳ ಉತ್ಸಾಹದಿಂದ ನಾಟಕೀಯವಾಗಿ, ಹಾವಭಾವಗಳೊಂದಿಗೆ ಅಭಿನಯಿಸುತ್ತಾ ವಿವರಿಸಿದ.

ಮರೆತದ್ದನ್ನು ನೆನಪಿಸಿಕೊಂಡಂತೆ ಕಡೆಯಲ್ಲಿ ‘ಆ ಹದ್ದು ಸಾ... ರೆಡ್ ಕಲರ್ರು... ಸಾ...’ ಎಂದು ಮಾತು ಮುಗಿಸಿದ. ಬೊಮ್ಮನ ಭಾಷೆ, ನಿರೂಪಣೆ, ಹಾವಭಾವಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಮ್ಮ ಮಿತ್ರರು ಪುಳಕಿತರಾದಂತೆ ಕಂಡಿತು. ಬೊಮ್ಮ ಆತುರದಲ್ಲಿ ಆ ಸುದ್ದಿ ತಿಳಿಸಲು ಕಾರಣವಿತ್ತು.

ಮುದುಮಲೈ ಕಾಡಿನಲ್ಲಿ ತೀರಾ ಅಪರೂಪವಾದ ಕಂದು ಎದೆಯ ಹದ್ದುಗಳ ಗೂಡನ್ನು ಪತ್ತೆ ಹಚ್ಚಬೇಕೆಂದು ನಾವು ದೀರ್ಘಕಾಲದಿಂದ ಹುಡುಕಿ ಅಲೆದಾಡುತ್ತಿದ್ದದ್ದನ್ನು ಆತ ಅರಿತಿದ್ದ. ಆ ಪ್ರಯತ್ನದಲ್ಲಿ ಒಂದೆರಡು ಬಾರಿ ನಮ್ಮೊಂದಿಗೆ ಕಾಡಿಗೂ ಬಂದಿದ್ದ.

ಆದರೆ ನಾವು ಹುಡುಕುತ್ತಿದ್ದ ಹದ್ದು ಗೂಡು ಕಟ್ಟುವುದು ಎತ್ತರದ ಮರಗಳಲ್ಲಿ. ಬೊಮ್ಮ ಗಮನಿಸಿದ್ದ ಇತರ ವಿವರಗಳೆಲ್ಲವೂ ಸರಿ ಎನಿಸಿದರೂ ಆತ ತಿಳಿಸಿದಂತೆ ಕೆಂಪುಬಣ್ಣದ ಹದ್ದುಗಳು ಆ ಕಾಡಿನಲ್ಲಿರಲಿಲ್ಲ. ಡಾ. ಸಲೀಂ ಅಲಿಯವರ ಹಕ್ಕಿ ಪುಸ್ತಕದಲ್ಲೂ ಈ ಬಗ್ಗೆ ಯಾವ ಪ್ರಸ್ತಾಪವಿರಲಿಲ್ಲ.

ಗೊಂದಲ ಪರಿಹರಿಸಿಕೊಳ್ಳಲು, ‘ರೆಡ್ ಕಲರ್... ಅಂದರೆ ಯಾವ ಬಣ್ಣ ಬೊಮ್ಮ?’ ಎಂದು ಕೇಳಿದೆ. ‘ಅದೇನೋ ನಂಗೂ ಗೊತ್ತಿಲ್ಲ ಸಾ... ಅದು... ನೋಡಿ ತಾ... ಹೇಳ್ಬೇಕು ಸಾ...’ ಎಂದು ತನ್ನ ನಿಷ್ಕಪಟ ನಗೆಯೊಂದಿಗೆ ಬೆಟ್ಟದ ನೆತ್ತಿಯತ್ತ ನೋಡುತ್ತಾ ನಿಂತ. ಜೀವ ವಿಜ್ಞಾನದಲ್ಲಿ ಅಪಾರ ಪಾಂಡಿತ್ಯವಿದ್ದ ನಮ್ಮ ಮಿತ್ರರು ಗಾಢ ಚಿಂತನೆಯಲ್ಲಿ ಕಳೆದುಹೋದರು.

ಜೀವ ಜಗತ್ತಿನಲ್ಲಿ ಒಂದು ಜೀವಿಗೆ ಕಾಣುವ ಬಣ್ಣ ಬೇರೊಂದು ಜೀವಿಗೆ ಅದೇ ಬಣ್ಣವಾಗಿ ಕಾಣಬೇಕೆಂದೇನಿಲ್ಲ. ನಮ್ಮ ಬರಿಗಣ್ಣಿಗೆ ಕಾಣದ, ಅಲ್ಟ್ರಾ ವೈಯೊಲೆಟ್ ವರ್ಣಸ್ಥರಗಳನ್ನು ನೋಡಬಲ್ಲ ಎಷ್ಟೋ ಕೀಟಗಳಿಗೆ ಕಾಣುವ ಜಗತ್ತಿನ ಬಣ್ಣವೇ ಬೇರೆ. ನಮಗೆ ಕಾಣುವ ಹಳದಿ ಬಣ್ಣ, ದುಂಬಿಗೆ ಬೇರೆಯೇ ಬಣ್ಣವಾಗಿರಬಹುದು.

ರಾತ್ರಿ ಅರಳುವ ಬಹಳಷ್ಟು ಹೂಗಳ ಬಣ್ಣ ಬಿಳಿ. ಅದು ನಮ್ಮ ಕಣ್ಣಿಗೆ ಮಾತ್ರ ಬಿಳಿ ಇರಬಹುದೇ? ಯೋಚಿಸಿನೋಡಿ. ನಸುಗೆಂಪು ವರ್ಣಗಳನ್ನು ಗ್ರಹಿಸುವ ಪ್ರಾಣಿಗಳಿಗೆ ಕಾಣುವ ಜಗತ್ತೇ ಬೇರೆ, ನಮಗೆ ಕಾಣುವ ಜಗತ್ತೇ ಬೇರೆ. ಅನೇಕಾನೇಕ ವರ್ಣಸ್ಥರಗಳನ್ನು ಗ್ರಹಿಸಲು ನಮ್ಮ ಕಣ್ಣು ವಿನ್ಯಾಸಗೊಂಡಿರದೇ ಇರಬಹುದು.

ಅಂದರೆ ಬೊಮ್ಮನಿಗೆ ಕಂಡ ರೆಡ್ ಕಲರ್, ಜಗತ್ತಿಗೆಲ್ಲಾ ಕೆಂಪು ಬಣ್ಣವೇ ಆಗಿರಬೇಕಿಲ್ಲ. ಹಾಗಾದರೆ ಬಣ್ಣದ ನಿಜವಾದ ಬಣ್ಣವೇನು!? ‘ಅದನ್ನ... ನೋಡಿ ತಾ... ಹೇಳ್ಬೇಕು ಸಾ...’ ಎನ್ನುವ ಬೊಮ್ಮನ ಉತ್ತರವೇ ಸರಿ ಇರಬಹುದಲ್ಲವೇ? ಆ ಕ್ಷಣ ಬೊಮ್ಮ ನಮ್ಮ ಮಿತ್ರರಿಗೆ ಜೆನ್ ಗುರುವಿನಂತೆ ಕಂಡಿದ್ದ. ಇರುವುದಕ್ಕಿಂತ ಹೆಚ್ಚಿನದ್ದನ್ನು ಅವರು ಬೊಮ್ಮನಲ್ಲಿ ಹುಡುಕುತ್ತಿದ್ದಾರೆಂದು ನಾವು ನಕ್ಕು ಸುಮ್ಮನಾದೆವು.
***
ಮುದುಮಲೈ ಕಾಡಿನ ನಮ್ಮ ಆರಂಭದ ದಿನಗಳು. ಬೇಸಿಗೆ ಸಮೀಪಿಸಿತ್ತು. ಆಗ ಬೆಂಕಿಯ ಸಮಯ. ಕಾಡನ್ನು ಭಸ್ಮಗೊಳಿಸುವ ಬೆಂಕಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿತ್ತು. ಬೆಂಕಿಯ ಅನಾಹುತ ಮತ್ತು ಪರಿಣಾಮಗಳನ್ನು ಪ್ರತಿನಿಧಿಸುವ ಛಾಯಾಚಿತ್ರಗಳನ್ನು ತೆಗೆದುಕೊಡಲು ನಮ್ಮನ್ನು ಕೋರಿದ್ದರು. ಆಗಿನ್ನು ಡಿಜಿಟಲ್ ಯುಗ ಆರಂಭವಾಗಿರಲಿಲ್ಲ. ಸ್ವಯಂಚಾಲಿತವಲ್ಲದ, ಐ.ಎಸ್.ಒ. ನಿಯಂತ್ರಣವಿಲ್ಲದ, ಫಿಲ್ಮ್ ಕ್ಯಾಮೆರಾಗಳಲ್ಲಿ ದೀರ್ಘಕಾಲ ಶಟರ್ ತೆರೆದಿಟ್ಟು, ಕತ್ತಲಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದು ಸವಾಲಿನ ಕೆಲಸವಾಗಿತ್ತು.

ಇಲಾಖೆ ವಹಿಸಿದ್ದ ಕೆಲಸವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೆವು. ಪ್ರತಿ ನಿತ್ಯ ಸಂಜೆಯ ಹೊತ್ತಿಗೆ ಬೆಂಕಿ ಬೀಳುವ ಸೂಚನೆಗಳಿಗೆ ಕಾದು ಕುಳಿತಿರುತ್ತಿದ್ದೆವು.ಆದರೂ ಕಾಡಿನ ಯಾವುದೋ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬೆಂಕಿಯನ್ನು ಪರಿಣಾಮಕಾರಿಯಗಿ ಚಿತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಬೆಂಕಿ ಸಂಭವಿಸುವ ಸ್ಥಳಗಳನ್ನು ನಿರೀಕ್ಷಿಸಿ, ಆಯಕಟ್ಟಿನ ಸ್ಥಳದಲ್ಲಿ ಮುಂಚಿತವಾಗಿ ಕಾಯ್ದಿರುವುದು ಸುಲಭದ ಕೆಲಸವಾಗಿರಲಿಲ್ಲ.

ಕತ್ತಲಾದ ಬಳಿಕ ಸಮತಟ್ಟಾದ ಕಾಡಿನ ಓಣಿಗಳಲ್ಲಿ ನಡೆಯುವುದೇ ಒಂದು ದೊಡ್ಡ ಸವಾಲಿನ ಕೆಲಸ. ಹಾಗಿರುವಾಗ, ಮುಳ್ಳಿನ ಗಿಡ, ಕೊರಕಲು ಬಂಡೆಗಳ ನಡುವೆ ಸಾಗುತ್ತಾ ಬೆಟ್ಟಗುಡ್ಡಗಳನ್ನು ಏರಿಳಿಯುವುದನ್ನು ನೀವೇ ಕಲ್ಪಿಸಿಕೊಳ್ಳಿ. ಎಡವುತ್ತಾ, ತಡವರಿಸುತ್ತಾ, ಏಳುತ್ತಾ, ಬೀಳುತ್ತಾ, ಕಾಲಿಗೆ ಸುತ್ತಿಕೊಂಡ ಮುಳ್ಳು, ಬಳ್ಳಿಗಳನ್ನು ಬಿಡಿಸಿಕೊಳ್ಳುತ್ತಾ ಸಾಗುವಾಗ ಬಹುಶಃ ಕಾಡಿಗೆ ಕಾಡೇ ನಮ್ಮನ್ನು ನೋಡಿ – ಈ ಮಾನವರು ಎಷ್ಟು ದುರ್ಬಲ ಜೀವಿಗಳೆಂದು ಸಹಾನುಭೂತಿ ವ್ಯಕ್ತಪಡಿಸಿರಬಹುದು ಅಥವಾ ಅಣಕಿಸಿಕೊಂಡು ನಕ್ಕಿರಬಹುದು.

ಹೀಗೆ ಹತ್ತಾರು ದಿನಗಳ ಕಾಲ ನಮ್ಮ ಕಸರತ್ತು ಮುಂದುವರೆದಿತ್ತು. ಈ ಕೆಲಸದಲ್ಲಿ ನಾವು ಹಲವಾರು ದಿನಗಳಿಂದ ಹೆಣಗಾಡುತ್ತಿರುವುದನ್ನು ಬೊಮ್ಮ ಗಮನಿಸಿದ್ದ. ಪ್ರತಿ ಸಂಜೆ ಗುಡ್ಡಗಳನ್ನೇರಿ ಕುಳಿತು ಆ ಸಂದರ್ಭಕ್ಕಾಗಿ ಕಾಯುವಾಗ ಮತ್ತೊಂದು ದಿಕ್ಕಿನಲ್ಲಿ ಬೆಂಕಿ ಆವರಿಸುತ್ತಿತ್ತು. ಅಲ್ಲಿ ತಲುಪುವ ವೇಳೆಗಾಗಲೆ ಬೆಂಕಿ ತೀವ್ರತೆಯನ್ನು ಕಳೆದುಕೊಂಡಿರುತ್ತಿತ್ತು. ಇಲ್ಲವೇ ಇಲಾಖೆಯವರು ನಂದಿಸಿ ಹೋಗಿರುತ್ತಿದ್ದರು.

ಈ ಪ್ರಯತ್ನದ ನಡುವೆ ಒಂದೆರಡು ದಿನ ಮೈಸೂರಿಗೆ ಹೋಗಿ ಹಿಂದಿರುಗಿದಾಗ ಬೊಮ್ಮ ನಮಗಾಗಿ ಹುಡುಕುತ್ತಿದ್ದನೆಂದು ತಿಳಿಯಿತು. ನಾವು ವಾಪಸಾದಾಗ ಎಂದಿನಂತೆ ನಗುತ್ತಲೇ ಎದುರಾದ ಬೊಮ್ಮ – ‘ನಿನ್ನೆ ಬರ್‌ಬೇಕಿತ್ತು ಸಾ... ನನ್ ತಮ್ಮನ ಮನೆ... ಸಾ...’ ಎಂದು ಕೈಗಳನ್ನು ಎತ್ತರಕ್ಕೆ ಚಾಚುತ್ತಾ, ಬಹಳ ಸಂತೋಷದಿಂದ ‘ಅಷ್ಟೆತ್ರ ಬೆಂಕಿ ಸಾ... ಹೊತ್ ಉರೀತಿತ್ತು ಸಾ... ದೊಡ್ ಬೆಂಕಿ ಸಾ... ಒಳ್ಳೆ ಪೋಟೊ... ಸಾ...’ ಎಂದು ನಾಟಕದ ಕಲಾವಿದನಂತೆ ಬಾಡಿ ಲ್ಯಾಂಗ್ವೇಜ್ ಬಳಸಿ ಘಟನೆಯನ್ನು ವಿವರಿಸಿದ.

ನಾವು ತಲ್ಲಣಗೊಂಡೆವು. ಇವನೇನು ಮನುಷ್ಯನೊ ಅಲ್ಲವೊ! ಅದು ಶತ್ರುವಿನ ಮನೆ ಸಹ ಅಲ್ಲ. ಹೊತ್ತಿ ಉರಿದದ್ದದ್ದು ಸ್ವಂತ ಒಡಹುಟ್ಟಿದವನ ಮನೆ. ಬೊಮ್ಮ, ಒಮ್ಮೆಲೆ, ಬಹಳ ಸಣ್ಣ ಮನುಷ್ಯನಂತೆ ಕಂಡ. ತನ್ನ ಸ್ವಂತ ತಮ್ಮನ ಮನೆಗೆ ಹತ್ತಿದ ಬೆಂಕಿಯ ದೃಶ್ಯವನ್ನು ಸೆರೆಹಿಡಿಯಬೇಕೆಂದು ಆತ ಯೋಚಿಸಿದ್ದಾದರೂ ಹೇಗೆ?
ಆತ ನಗುತ್ತಾ ಸನ್ನಿವೇಶವನ್ನು ವಿವರಿಸುತ್ತಿದ್ದುದು ಗಾಬರಿ ಹುಟ್ಟಿಸಿತ್ತು. ಅನೈತಿಕ ಚಿಂತನೆಯಂತೆ ಕಂಡಿತ್ತು.

ನಮ್ಮ ಬೊಮ್ಮನಿಗೂ ದಾಯಾದಿ ಹಗೆತನವೇ? ಎನ್ನಿಸಿ ಅಸಹ್ಯವೆನಿಸಿತು. ಹೀಗೆಲ್ಲಾ ಯೋಚಿಸುತ್ತಾ ಸ್ವಲ್ಪ ಸುಧಾರಿಸಿಕೊಂಡು ‘ಯಾರಾದರು ಗಾಯಗೊಂಡರೆ? ಬೆಲೆ ಬಾಳುವ ವಸ್ತುಗಳೇನಾದರು ಸುಟ್ಟುಹೋದವೆ’ ಎಂದು ಆತಂಕದಿಂದ ಕೇಳಿದೆವು. ಬೊಮ್ಮ ಮತ್ತೆ ನಗುತ್ತಾ ಉತ್ತರಿಸಲು ಸಜ್ಜಾದ. ಈ ಬಾರಿ ನಮಗೆ ನಿಜವಾಗಲೂ ಸಿಟ್ಟು ತಲೆಗೇರಿತ್ತು.

ಆದರೆ ಬೊಮ್ಮ ‘ಒಂದು ಇಲ್ಲ ಸಾ... ನಾವು... ಹಾಡಿಯೊರೆಲ್ಲಾ ಸೇರ್ಕೊಂಡು ಅವನಿಗೆ ಹೊಸ ಮನೆ ಕಟ್ತಾ ಇದ್ದಿವಿ ಸಾ... ಇನ್ ಎರಡು ದಿನ ಸಾ... ಮನೆ ರೆಡಿ ಸಾ...’ ಎಂದ ಬೊಮ್ಮನ ಮುಖದಲ್ಲಿ ಅದೇ ನಿಷ್ಕಪಟ ನಗು. ‘ನೆನ್ನೆ ಬಂದಿದ್ರೆ ಸಾ... ಒಳ್ಳೆ ಫೋಟೊ ಸಾ...’ ಎಂದು ಚಿತ್ರ ತೆಗೆಯಲು ಒದಗಿಬಂದಿದ್ದ ಅಪೂರ್ವ ಅವಕಾಶವೊಂದು ತಪ್ಪಿಹೋದುದರ ಬಗ್ಗೆ ಮತ್ತೆ ಮರುಗಿದ.

ಮಾನವ ಸಹಜವಾದ ಅಪ್ರಾಮಾಣಿಕತೆ, ಸಣ್ಣತನಗಳು ಇವರಲ್ಲೂ ಇದ್ದರೂ ಈ ಕಾಡುಕುರುಬರ ಬದುಕಿನ ಒಳ ಅರಿವುಗಳು ಹಾಗೂ ಅಂತರ್‌ದೃಷ್ಟಿಗಳೇ ಬೇರೆ. ಅವರ ಸರಳತೆ ಮತ್ತು ಬದುಕಿನ ತತ್ವಗಳು ಇಂದಿಗೂ ನಮ್ಮನ್ನು ಅಚ್ಚರಿಗೊಳಿಸುತ್ತಲೇ ಇವೆ.
***
ಆ ವರ್ಷ ಮುಂಬೈ ನ್ಯಾಚುರಲ್ ಹಿಸ್ಟರಿ ಸಂಸ್ಥೆಯ ಅಮೃತಮಹೋತ್ಸವ. ಸ್ಮರಣೋತ್ಸವದ ಅಂಗವಾಗಿ ಆನೆಗಳ ಕುರಿತ ಅಂತರರಾಷ್ಟ್ರೀಯ ವಿಜ್ಞಾನ ಗೋಷ್ಠಿ ಮುದುಮಲೈನಲ್ಲಿ ಏರ್ಪಾಡಾಗಿತ್ತು.

ಆನೆಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನಿಗಳು, ಅವರ ಸಹಾಯಕರು, ಸಮಾರಂಭದ ಸಿದ್ಧತೆಯಲ್ಲಿ ಬಿಡುವಿಲ್ಲದೆ ದುಡಿಯುತ್ತಿದ್ದರು. ಬೊಮ್ಮ ಸಹ ಅವರಿಗೆ ನೆರವಾಗುತ್ತಿದ್ದ. ವಿಶ್ವದ ಹೆಸರಾಂತ ಆನೆ ತಜ್ಞರೆಲ್ಲ ಅಲ್ಲಿ ಪಾಲ್ಗೊಳ್ಳುತ್ತಿದ್ದುದರಿಂದ ಮತ್ತು ಅದು ಸಂಸ್ಥೆಯ ಪ್ರತಿಷ್ಠೆಯ ವಿಷಯವಾಗಿದ್ದರಿಂದ, ಎಲ್ಲರೂ ಗಡಿಬಿಡಿಯಲ್ಲಿದ್ದರು.

ಗೋಷ್ಠಿ ಆರಂಭಗೊಂಡಾಗ ಅದೊಂದು ಅದ್ಭುತ ಅನುಭವವೆನಿಸಿತು. ಜಗತ್ತಿನ ಮೂಲೆ ಮೂಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಸರಾಂತ ವಿಜ್ಞಾನಿಗಳು ತಮ್ಮ ಅಧ್ಯಯನಗಳ ತಿರುಳುಗಳನ್ನು, ಹೊಸ ಆಲೋಚನೆಗಳನ್ನು, ಚಿಂತನೆಗಳನ್ನು ತೆರೆದಿಟ್ಟರು. ಆ ದಿನಗಳಲ್ಲಿ ವೈಜ್ಞಾನಿಕಲೋಕದಲ್ಲಿ ಜರುಗುತ್ತಿದ್ದ ಹೊಸ ವಿಷಯಗಳು ಇಂದಿನಂತೆ ಸುಲಭವಾಗಿ ಎಲ್ಲರಿಗೂ ಲಭ್ಯವಾಗುತ್ತಿರಲಿಲ್ಲ. ಹಾಗಾಗಿ ನಮಗೂ ಈ ವಿಚಾರ ಸಂಕಿರಣ ಬಹಳ ವಿಶೇಷವಾಗಿತ್ತು, ಕುತೂಹಲಕಾರಿಯಾಗಿತ್ತು.

ಮುಂಬೈ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಯುವ ಸಂಶೋಧಕರು ಮಂಡಿಸಿದ ಪ್ರಬಂಧಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಆನೆಗಳ ಬದುಕು, ಸಂಘರ್ಷ ಮತ್ತು ಅವುಗಳ ಸಂರಕ್ಷಣೆಯ ಕುರಿತಾಗಿ ಅವು ಹೊಸ ಒಳನೋಟಗಳನ್ನು ತೆರೆದಿಟ್ಟವು. ಆಗಮಿಸಿದ್ದವರೆಲ್ಲ ಅವರ ಅಧ್ಯಯನದ ಮಹತ್ವವನ್ನು ಕೊಂಡಾಡಿದರು.

ಬಳಿಕ ಕಾಡನ್ನು ನೋಡಲು ತೆರಳಿದ್ದ ವಿದೇಶಿ ವಿಜ್ಞಾನಿಗಳು ಸ್ಥಳೀಯ ಕಾಡು ಕುರುಬರ ಜ್ಞಾನ ಮತ್ತು ಚತುರತೆಗಳನ್ನು ಮೆಚ್ಚಿದರು. ಇದೆಲ್ಲದರ ನಡುವೆ ಯಾವಾಗಲೂ ನಗುತ್ತಲೇ ಕೆಲಸ ಮಾಡುತ್ತಿದ್ದ ಬೊಮ್ಮ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ.

ಗೋಷ್ಠಿಯ ಅಂತಿಮ ದಿನ ಕಾಡಿನ ಜಾಡಿನಲ್ಲಿ ವಿಜ್ಞಾನಿಗಳ ಅಧ್ಯಯನಕ್ಕೆ ನೆರವಾಗಿದ್ದ ಕೃಷ್ಣ, ಚೆನ್ನ ಮತ್ತು ಬೊಮ್ಮರನ್ನು ಗೌರವಿಸಲು ವಿದೇಶಿ ಅತಿಥಿಗಳು ತೀರ್ಮಾನಿಸಿದರು. ಆ ಮೂವರಿಗೂ ನಗದು, ಫಲಕ ಮತ್ತು ಪ್ರಶಂಸನಾ ಪತ್ರಗಳನ್ನು ನೀಡಲು ನಿರ್ಧರಿಸಿದರು. ಆ ತೀರ್ಮಾನ ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿತ್ತು.

ಮಧ್ಯಾಹ್ನದ ಸಭೆ ಆರಂಭಗೊಂಡಾಗ ನಮ್ಮೆಲ್ಲರ ಉತ್ಸಾಹ ಇಮ್ಮಡಿಗೊಂಡಿತ್ತು. ಕಡೆಗೂ ಸಂಜೆಯ ಸಮಾರೋಪ ಸಮಾರಂಭಕ್ಕೆ ಮುಂಚಿನ ಸನ್ಮಾನ ಕಾರ್ಯಕ್ರಮ ಶುರುವಾಯಿತು. ಮೊದಲಿಗೆ ಕೃಷ್ಣ, ನಂತರ ಚೆನ್ನನನ್ನು ವೇದಿಕೆಗೆ ಕರೆದು ಅವರ ಕೌಶಲ್ಯ, ಜಾಣ್ಮೆ ಮತ್ತು ಕೊಡುಗೆಗಳನ್ನೆಲ್ಲ ನಿರೂಪಕರು ಶ್ಲಾಘಿಸುತ್ತಿದ್ದಾಗ, ದೇಶ ವಿದೇಶದ ಗಣ್ಯರೆಲ್ಲಾ ಪದೇ ಪದೇ ಎದ್ದು ನಿಂತು ಕರತಾಡನ ಮಾಡುತ್ತಿದ್ದರು. ನಮಗಂತೂ ಈ ಕಾರ್ಯಕ್ರಮ ರೋಮಾಂಚನ ತಂದಿತ್ತು.

ವಿಶ್ವದ ಅಗ್ರಗಣ್ಯ ವಿಜ್ಞಾನಿಗಳಿಂದ, ಗಣ್ಯರಿಂದ ನಮ್ಮ ಕೃಷ್ಣ, ಚೆನ್ನ, ಬೊಮ್ಮರು ಸನ್ಮಾನಿತಗೊಳ್ಳುವ ಆ ಕ್ಷಣ ನಮಗೆ ಅವಿಸ್ಮರಣೀಯ ಗಳಿಗೆಯಂತೆ ಕಂಡಿತು.ನಂತರ ಬೊಮ್ಮನ ಸರದಿ. ಬೊಮ್ಮನ ಹೆಸರು ಮೈಕಿನಲ್ಲಿ ಹೊರ ಬಿದ್ದಾಕ್ಷಣ ಸೀಟಿ–ಚಪ್ಪಾಳೆಗಳು ಸಭಾಂಗಣದಲ್ಲಿ ಇನ್ನಷ್ಟು ಮೊಳಗಿದವು. ವೇದಿಕೆಗೆ ಆಗಮಿಸುವ ಬೊಮ್ಮನಿಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದೆವು. ಬೊಮ್ಮ ಎಲ್ಲೂ ಕಾಣಲಿಲ್ಲ. ಮತ್ತೊಮ್ಮೆ, ಮಗದೊಮ್ಮೆ, ಬೊಮ್ಮನ ಹೆಸರು ವೇದಿಕೆಯಿಂದ ಮೊಳಗಿತ್ತು. ಆತನಿಗಾಗಿ ಎಲ್ಲರೂ ಹುಡುಕಾಡಿದೆವು. ಆದರೆ ಆತ ಬರಲೇ ಇಲ್ಲ.

ಬೊಮ್ಮನ ನಡವಳಿಕೆ ಎಲ್ಲರಿಗೂ ಬೇಸರ ತರಿಸಿತ್ತು. ನೆರೆದಿದ್ದ ಗಣ್ಯರ ಎದುರು ಆಯೋಜಕರಿಗೆ ಮುಜುಗರವಾಗಿತ್ತು. ಆತಿಥೇಯ ಯುವ ವಿಜ್ಞಾನಿಗಳು ಸಿಟ್ಟಿಗೆದ್ದಿದ್ದರು. ದೊರಕಲಿದ್ದ ಗೌರವದಿಂದ ಆತ ದೂರಸರಿದ ಕಾರಣವೇನೆಂದು ನಮಗಾರಿಗೂ ಅರ್ಥವಾಗಲೇ ಇಲ್ಲ. ಸಮಾರಂಭ ಮುಕ್ತಾಯಗೊಂಡ ಬಳಿಕ ಬೊಮ್ಮನ ಬೇಜವಾಬ್ದಾರಿತನವನ್ನು ಶಪಿಸುತ್ತಾ ನದಿಯ ದಡದ ಕಾಡಿನಲ್ಲಿ ನಡೆದು ಮನೆಯತ್ತ ಸಾಗಿದ್ದೆವು.

ಸುಮಾರು ಒಂದು ಕಿಲೋಮೀಟರ್ ದೂರ ಸಾಗಿದ ಬಳಿಕ ಕಾಡುಕುರುಬರ ಹೆಂಗಸರು ಮೀನಿಗೆ ಗಾಳ ಹಾಕುತ್ತಾ, ಸ್ನಾನ ಮಾಡುತ್ತಾ, ಬಟ್ಟೆ ಒಗೆಯುತ್ತಾ, ನದಿಯ ಬಂಡೆಗಳ ಮೇಲೆ ಕುಳಿತಿದ್ದರು. ಅವರೊಂದಿಗೆ ಬೊಮ್ಮನ ಹೆಂಡತಿ ಕೂಡ ಮೀನಿಗೊಂದು ಗಾಳ ಬಿಸಾಡಿ ಕುಳಿತಿದ್ದಳು. ‘ಬೊಮ್ಮ ಎಲ್ಲಿ’ ಎಂದು ಆಕೆಯನ್ನು ಕೇಳಿದಾಗ, ಆಕೆ ನಗುತ್ತಾ ಮತ್ತೊಂದು ದಡದತ್ತ ಕೈ ತೋರಿದಳು.

ಹೆಂಗಸರಿಂದ ಸುಮಾರು ನೂರು ಅಡಿ ದೂರದಲ್ಲಿ, ಸಿಂಹಾಸನದಂತಿದ್ದ ಬಂಡೆಯೊಂದರ ಮೇಲೆ, ತುಂಡು ಲುಂಗಿಯೊಂದ್ದನ್ನಷ್ಟೇ ತೊಟ್ಟಿದ್ದ ಬೊಮ್ಮ ಹರಿವ ನೀರಿನಲ್ಲಿ ಕಾಣದ ಮೀನಿಗಾಗಿ ಗಾಳ ಎಸೆದು, ತನ್ನ ಸಾಮ್ರಾಜ್ಯದಲ್ಲಿ ಸಂತೃಪ್ತನಾಗಿ ಕುಳಿತಿದ್ದ. ಅವನದೇ ಆದ ಜಗತ್ತಿನಲ್ಲಿದ್ದ ಅವನ ನೆಮ್ಮದಿಯನ್ನು, ಸುಖವನ್ನು ಭಂಗಗೊಳಿಸಲು ಮನಸ್ಸಾಗಲಿಲ್ಲ. ಕೇಳಬೇಕೆಂದುಕೊಂಡಿದ್ದ ಪ್ರಶ್ನೆಗಳೆಲ್ಲ ನಮ್ಮೊಳಗೆ ಉಳಿದುಹೋದವು.
***
ನಮ್ಮ ಮಿತ್ರರು ಬೊಮ್ಮನಲ್ಲಿ ಜೆನ್ ತತ್ವಜ್ಞಾನಿಯನ್ನು ಕಂಡಾಗ ನಾವು ವ್ಯಂಗ್ಯ ಮಾಡಿದ್ದೆವು. ಆದರೆ ಈಗ ನಾವು ಕೂಡ ಗೊಂದಲಕ್ಕೀಡಾಗಿದ್ದು ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT