ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಸ್ ಸ್ಪೀಕರ್ ಮತ್ತು ಹೆಡ್‌ಫೋನ್‌ಗಳು ಆಡಿಯೊ ಲೋಕದ ವಿಶಿಷ್ಟ ಧ್ವನಿ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಯಾವುದೇ ಆಡಿಯೊ ಸಿಸ್ಟಮ್‌ನ ಕೊನೆಯ ಕೊಂಡಿ ಸ್ಪೀಕರ್ ಅಥವಾ ಹೆಡ್‌ಫೋನ್. ನಿಮ್ಮ ಆಂಪ್ಲಿಫೈಯರ್ ಎಷ್ಟೇ ಚೆನ್ನಾಗಿದ್ದರೂ ಸ್ಪೀಕರ್ ಚೆನ್ನಾಗಿಲ್ಲವಾದಲ್ಲಿ ಉತ್ತಮ ಧ್ವನಿಯ ಪುನರುತ್ಪತ್ತಿ ಸಾಧ್ಯವಿಲ್ಲ. ಸ್ಪೀಕರ್‌ಗಳ ಬಗ್ಗೆ ಇದೇ ಅಂಕಣದಲ್ಲಿ ವಿವರವಾಗಿ ಬರೆಯಲಾಗಿತ್ತು.

ಸ್ಥೂಲವಾಗಿ ಹೇಳುವುದಾದರೆ ಅತಿ ಕಡಿಮೆ ಕಂಪನಾಂಕದ ಧ್ವನಿಯ ಪುನರುತ್ಪತ್ತಿಗೆ ವೂಫರ್, ಅತಿ ಹೆಚ್ಚಿನ ಕಂಪನಾಂಕದ ಧ್ವನಿಗೆ ಟ್ವೀಟರ್ ಮತ್ತು ಇವೆರೆಡರ ಮಧ್ಯದ ಧ್ವನಿಗೆ ಮಿಡ್‌ರೇಂಜ್ ಎಂದೆಲ್ಲ ಸ್ಪೀಕರುಗಳಿವೆ. ಉತ್ತಮ ಹೈಫೈ ಎನ್ನಿಸುವ ಒಂದು ಪೂರ್ತಿ ಸಿಸ್ಟಮ್‌ನಲ್ಲಿ ಮೂರು ಸ್ಪೀಕರುಗಳೂ ಇರುತ್ತವೆ.

ಇವೆಲ್ಲ ಸಾಮಾನ್ಯ ಸ್ಪೀಕರುಗಳಾದವು. ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಜನ ಕೊಂಡುಕೊಳ್ಳುವುದು ಮತ್ತು ಬಳಸುವುದು ಈ ಮಾದರಿಯ ಸ್ಪೀಕರ್‌ಗಳನ್ನು. ಈಗ ಸ್ವಲ್ಪ ಈ ಮಾದರಿಯ ಸ್ಪೀಕರುಗಳಿಂದ ಸಂಪೂರ್ಣ ವಿಭಿನ್ನವಾದ ಸ್ಪೀಕರುಗಳ ಪ್ರಪಂಚದ ಕಡೆ ನೋಡೋಣ. ಇವುಗಳನ್ನು ಬೋಸ್ ಸ್ಪೀಕರ್‌ಗಳೆನ್ನುತ್ತಾರೆ. ಇವುಗಳನ್ನು ತಯಾರಿಸುವುದು ಅಮೆರಿಕದ ಬೋಸ್ ಕಂಪೆನಿ. ಈ ಕಂಪೆನಿ ಹುಟ್ಟುಹಾಕಿದವರು ಭಾರತೀಯ ಮೂಲದ, ಇತ್ತೀಚೆಗೆ ತೀರಿಕೊಂಡ, ಅಮರ್ ಗೋಪಾಲ್ ಬೋಸ್.

ಇವರನ್ನು ಇಪ್ಪತ್ತನೆಯ ಶತಮಾನದ ೧೦೦ ಶ್ರೇಷ್ಠ ಸಂಶೋಧಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಬೋಸ್ ಅವರು ಅಮೆರಿಕದ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಅವರಿಗೆ ಸಂಗೀತದಲ್ಲಿ ಆಸಕ್ತಿ ಇತ್ತು. ಅವರು ಒಮ್ಮೆ ಒಂದು ಸಂಗೀತ ಕಚೇರಿಗೆ ಹೋಗಿದ್ದರು. ಅಲ್ಲಿ ಕೇಳಿಬಂದ ಧ್ವನಿಯ ಶ್ರೀಮಂತಿಕೆ ತಮ್ಮ ಮನೆಯ ಸ್ಪೀಕರ್‌ನಿಂದ ಬರುತ್ತಿಲ್ಲ ಎಂಬುದನ್ನು ಗಮನಿಸಿದರು.

ಇದೇಕೆ ಹೀಗೆ ಎಂದು ತಲೆ ಕೆಡಿಸಿಕೊಂಡರು. ಇದರ ಬಗ್ಗೆ ಹಲವು ವರ್ಷಗಳ ಸಂಶೋಧನೆ ಮಾಡಿದರು. ಅವರು ಅದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ಮತ್ತು ಸಂಶೋಧಕರಾಗಿ ಕೆಲಸ ಮುಂದುವರಿಸಿದಾಗಲೂ ಸ್ಪೀಕರ್‌ಗಳ ಬಗ್ಗೆ ತಮ್ಮ ಸಂಶೋಧನೆ ಮುಂದುವರಿಸಿದರು. ಅದರ ಫಲವಾಗಿ ಕೊನೆಗೊಮ್ಮ ಜಗತ್ತಿನಲ್ಲೇ ಸರ್ವಶ್ರೇಷ್ಠವಾದ ಸ್ಪೀಕರ್‌ಗಳ ಉಗಮವಾಯಿತು.

ಸಂಗೀತ ಕಚೇರಿಯಲ್ಲಿ ಕೇಳಿದ ಅನುಭವ ಮನೆಯ ಸ್ಪೀಕರ್‌ನಲ್ಲಿ ಯಾಕೆ ಬರುತ್ತಿಲ್ಲ ಎಂಬುದನ್ನು ಬೋಸ್ ಪತ್ತೆ ಹಚ್ಚಿದರು. ಸಂಗೀತ ಕಚೇರಿ ನಡೆಯುವ ಭವನದಲ್ಲಿ ಧ್ವನಿಯು ನೇರವಾಗಿ ಮಾತ್ರವಲ್ಲ ಗೋಡೆಗಳಿಂದ ಪ್ರತಿಫಲಿತವಾಗಿಯೂ ನಮ್ಮ ಕಿವಿಯನ್ನು ತಲುಪುತ್ತವೆ. ಮನೆಯ ಸ್ಪೀಕರುಗಳಲ್ಲಿ ಧ್ವನಿ ನೇರವಾಗಿ ನಮ್ಮ ಕಿವಿಯನ್ನು ತಲುಪುತ್ತವೆ. ಈ ವ್ಯತ್ಯಾಸವನ್ನು ಸರಿಪಡಿಸಲು ಬೋಸ್ ತಮ್ಮ ಡೈರೆಕ್ಟ್/ರಿಫ್ಲೆಕ್ಟಿಂಗ್ ಸ್ಪೀಕರುಗಳನ್ನು ಸಂಶೋಧಿಸಿ ವಿನ್ಯಾಸ ಮಾಡಿದರು.

ಈ ಸ್ಪೀಕರುಗಳಲ್ಲಿ ಧ್ವನಿ ನೇರವಾಗಿ ಮಾತ್ರವಲ್ಲ, ಕೋಣೆಯ ಗೋಡೆಗಳಿಂದಲೂ ಪ್ರತಿಫಲಿತವಾಗಿ ನಮ್ಮ ಕಿವಿಯನ್ನು ಸೇರುತ್ತವೆ. ಅಂದರೆ ಬಹುಮಟ್ಟಿಗೆ ಸಭಾಭವನದಲ್ಲಿ ಕೇಳಿದ ಅನುಭವವೇ ಆಗುತ್ತದೆ. ಸಾಮಾನ್ಯ ಸ್ಪೀಕರುಗಳನ್ನು ಬಳಸುವಾಗ ನಾವು ಎರಡು ಸ್ಪೀಕರುಗಳ ಮಧ್ಯ ಕುಳಿತರೆ ಮಾತ್ರ ಸಂಪೂರ್ಣ ಸ್ಟೀರಿಯೋ ಮತ್ತು ಉತ್ತಮ ಸಂಗೀತದ ಆನಂದ ಪಡೆಯಬಹುದು.

ಬೋಸ್ ಅವರ ನೇರ/ಪ್ರತಿಫಲಿತ ಸ್ಪೀಕರುಗಳಲ್ಲಿ ಧ್ವನಿ ನೇರವಾಗಿ ಮಾತ್ರವಲ್ಲ, ಅದು ಗೋಡೆಗಳಿಂದಲೂ ನೆಲದಿಂದಲೂ ಪ್ರತಿಫಲಿತವಾಗಿ ನಮ್ಮ ಕಿವಿಯನ್ನು ಸೇರುವಂತೆ ವಿನ್ಯಾಸ ಮಾಡಿರುತ್ತಾರೆ. ಇದರಿಂದಾಗಿ ನೀವು ಒಂದು ಸ್ಥಳದಲ್ಲೇ ಕುಳಿತು ಸಂಗೀತವನ್ನು ಆನಂದಿಸಬೇಕಾಗಿ ಬರುವುದಿಲ್ಲ. ಸಂಗೀತ ಕೋಣೆಯನ್ನು ಪೂರ್ತಿ ತುಂಬಿರುತ್ತದೆ.

ಎಲ್ಲಿ ಬೇಕಾದರೂ ಕುಳಿತು ಅಥವಾ ನಡೆದಾಡುತ್ತ ಸಂಗೀತದ ಪೂರ್ತಿ ಶ್ರೀಮಂತ ಅನುಭವ ಪಡೆಯಬಹುದು. ಈ ಸ್ಪೀಕರುಗಳನ್ನು ಬೋಸ್ ೧೯೬೪ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಅತಿ  ವೇಗದಲ್ಲಿ ಅವು ಅತಿ ಜನಪ್ರಿಯವಾದವು. ಬೋಸ್ ಕಂಪೆನಿ ಈ ಮೂಲಕ ಸ್ಪೀಕರ್ ಪ್ರಪಂಚದಲ್ಲಿ ತನ್ನದೇ ವಿಶಿಷ್ಟ ಸ್ಥಾನದ ಹುಟ್ಟುಹಾಕುವಿಕೆಗೆ ಕಾರಣೀಭೂತವಾಯಿತು.

ಅಕೋಸ್ಟಿಮಾಸ್ ಸ್ಪೀಕರ್ ಎಂಬ ಹೆಸರಿನಿಂದ ಮಾರಾಟ ಮಾಡುತ್ತಿರುವ ಚಿಕ್ಕ ಗಾತ್ರದ ಸ್ಪೀಕರ್‌ಗಳಿಗೆ ಬೋಸ್ ಜಗದ್ವಿಖ್ಯಾತವಾಗಿದೆ. ಈ ಸ್ಪೀಕರ್‌ಗಳಲ್ಲಿ ಅತಿ ಕಡಿಮೆ ಕಂಪನಾಂಕದ (ಸೆಕೆಂಡಿಗೆ ೨೦೦ರಿಂದ ಕಡಿಮೆಯ) ಧ್ವನಿಯನ್ನು ಹೊರಡಿಸಲು ಒಂದು ಪೆಟ್ಟಿಗೆಯಾಕಾರಾದ ಸ್ಪೀಕರ್ ಇರುತ್ತದೆ. ಈ ಪೆಟ್ಟಿಗೆಯನ್ನು ಎಲ್ಲಿ ಬೇಕಾದರೂ ಇಡಬಹುದು. ಇದರಿಂದ ಹೊರಹೊಮ್ಮುವ ಧ್ವನಿ ನೇರವಾಗಿ ಕಿವಿಗೆ ಬೀಳಬೇಕೆಂಬ ನಿಯಮವಿಲ್ಲ.

ಉಳಿದ ಧ್ವನಿಯನ್ನು ಹೊರಡಿಸಲು ಎರಡೂವರೆ ಇಂಚು ಗಾತ್ರದ ಚಿಕ್ಕ ಚಿಕ್ಕ ಸ್ಪೀಕರುಗಳಿರುತ್ತವೆ. ಈ ಸ್ಪೀಕರ್‌ಗಳ ಸಂಖ್ಯೆ ನಾಲ್ಕರಿಂದ ಇಪ್ಪತ್ತರ ತನಕವೂ ಇರಬಹುದು. ಇವುಗಳನ್ನು ಮನೆ ತುಂಬ ಇರಿಸಿದರೆ ಸಂಗೀತವೂ ಮನೆಯನ್ನು ತುಂಬುವುದು.

ಚಿಕ್ಕ ಸ್ಪೀಕರ್‌ಗಳಿಂದ ದೊಡ್ಡ ಧ್ವನಿ ಹೊರಹೊಮ್ಮುತ್ತದೆ. ದೊಡ್ಡ ಧ್ವನಿ ಹೊರಹೊಮ್ಮಲು ಹೆಚ್ಚು ಗಾಳಿಯನ್ನು ಹೊರದಬ್ಬಬೇಕು ಎಂಬ ತತ್ವವನ್ನಾಧರಿಸಿ ಈ ಚಿಕ್ಕ ಸ್ಪೀಕರ್‌ಗಳ ಡಯಾಫ್ರಮ್ (ಕಾಗದದ ಶಂಕು) ಹೆಚ್ಚು ದೂರ ಕಂಪಿಸಿ ಹೆಚ್ಚು ಗಾಳಿಯನ್ನು ಹೊರದಬ್ಬುತ್ತವೆ.

ಸಾಮಾನ್ಯ ಸ್ಪೀಕರುಗಳಲ್ಲಿ ಧ್ವನಿಯ ಪುನರುತ್ಪತ್ತಿ ಮಾಡಲು ಹಿಂದೆ ಮುಂದೆ ಚಲಿಸುವ ಶಂಕುವಿನಾಕಾರದ ಅಂಗವೊಂದಿರುತ್ತದೆ. ಇದನ್ನು ಡಯಾಫ್ರಮ್ ಎನ್ನುತ್ತಾರೆ. ಅತಿ ಕಡಿಮೆ ಕಂಪನಾಂಕದ ಧ್ವನಿಯ ಪುನರುತ್ಪತ್ತಿಗೆ ದೊಡ್ಡ ಡಯಾಫ್ರಮ್ (ವೂಫರ್) ಮತ್ತು ಅತಿ ಹೆಚ್ಚು ಕಂಪನಾಂಕದ ಧ್ವನಿಯ ಪುನರುತ್ಪತ್ತಿಗೆ ಚಿಕ್ಕ ಡಯಾಫ್ರಮ್ (ಟ್ವೀಟರ್) ಇರುತ್ತವೆ.

ಇವೆರಡಲ್ಲದೆ ಕೆಲವು ಸ್ಪೀಕರುಗಳಲ್ಲಿ ಒಂದು ಕೊಳವೆಯಾಕಾರದ ರಚನೆ ಇರುತ್ತದೆ. ಇದು ಮಧ್ಯದ ಕಂಪನಾಂಕದ ಧ್ವನಿಯ ಪುನರುತ್ಪತ್ತಿಯಲ್ಲಿ ಸಹಾಯ ಮಾಡುತ್ತದೆ. ಆದರೆ ಇಲ್ಲಿ ಒಂದು ಸಮಸ್ಯೆಯಿದೆ. ಈ ಕೊಳವೆಯ ಉದ್ದ ಅಗಲವನ್ನು ಅನುಸರಿಸಿ ಅದು ಯಾವುದಾದರೊಂದು ಕಂಪನಾಂಕದ ಧ್ವನಿಯನ್ನು ಅರ್ಥಾತ್ ಯಾವುದಾದರೂ ಒಂದು ವಾದ್ಯದ ಧ್ವನಿಯನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಪುನರುತ್ಪತ್ತಿ ಮಾಡಬಲ್ಲುದು.

ಎಲ್ಲ ವಾದ್ಯಗಳ ಧ್ವನಿಯನ್ನು ಪ್ರಾಮಾಣಿಕವಾಗಿ ಪುನರುತ್ಪತ್ತಿ ಮಾಡಬೇಕಾದರೆ ಹಲವು ಉದ್ದ, ಅಗಲ ಮತ್ತು ಬೇರೆ ಬೇರೆ ವಿನ್ಯಾಸದ ಕೊಳವೆ ಬೇಕಾಗುತ್ತವೆ. ಬೋಸ್ ಈ ಬಗ್ಗೆ ತುಂಬ ತಲೆ ಕೆಡಿಸಿಕೊಂಡರು. ತಲೆಕೆಡಿಸಿಕೊಂಡು ಅಲ್ಲೆ ಮುಗಿಸಲಿಲ್ಲ. ಈ ಕೊಳವೆಗಳ ವಿನ್ಯಾಸದ ಸಂಶೋಧನೆ ಮಾಡಿದರು. ಈ ಸಂಶೋಧನೆ ಒಂದೆರಡು ತಿಂಗಳು ಅಥವಾ ವರ್ಷ ಮಾತ್ರ ಕಾಲ ನಡೆಯಲಿಲ್ಲ. ಬರೋಬ್ಬರಿ ಹದಿನಾಲ್ಕು ವರ್ಷಗಳ ಸತತ ಸಂಶೋಧನೆಯ ಫಲವಾಗಿ ಅಕೋಸ್ಟಿಕ್ ವೇವ್‌ಗೈಡ್ ತಂತ್ರಜ್ಞಾನದ ಸ್ಪೀಕರುಗಳ ವಿನ್ಯಾಸವಾಯಿತು. 

ಬೋಸ್‌ನವರು ಹೆಡ್‌ಫೋನ್‌ಗಳನ್ನೂ ತಯಾರಿಸಿದ್ದಾರೆ. ಇಲ್ಲೂ ಅವರು ತಮ್ಮ ವೈಶಿಷ್ಟ್ಯವನ್ನು ತೋರಿಸಿದ್ದಾರೆ. ಇವರ ಶಬ್ದನಿವಾರಕ ಹೆಡ್‌ಫೋನ್‌ಗಳು ತುಂಬ ಜನಪ್ರಿಯವಾಗಿವೆ. ತುಂಬ ಶಬ್ದಮಾಲಿನ್ಯವಿರುವ ಜಾಗದಲ್ಲಿದ್ದರೂ ನಿಮ್ಮ ಕಿವಿಗೆ ಶಬ್ದವನ್ನು ಕಳೆದು ಸಂಗೀತವನ್ನು ಮಾತ್ರ ತಲುಪುವಂತೆ ಈ ಹೆಡ್‌ಫೋನ್‌ಗಳನ್ನು ವಿನ್ಯಾಸ ಮಾಡಿರುತ್ತಾರೆ. ವಿಮಾನದ ಪೈಲಟ್‌ಗಳು ಇಂತಹ ಹೆಡ್‌ಫೋನ್‌ಗಳನ್ನೇ ಬಳಸುವುದು. ಈ ಹೆಡ್‌ಫೋನ್ ಬಗ್ಗೆಯೇ ಪ್ರತ್ಯೇಕ ಲೇಖನವನ್ನು ನಿರೀಕ್ಷಿಸಿ.

ನಾನು ಸುಮಾರು ೧೮ ವರ್ಷಗಳಿಂದ ಬೋಸ್ ಸ್ಪೀಕರ್ ಬಳಸುತ್ತಿದ್ದೇನೆ. ಅದರಿಂದ ಹೊರಬರುವ ಪರಿಪೂರ್ಣ ಧ್ವನಿಗೆ ಬೇರೆ ಯಾವ ಸ್ಪೀಕರ್ ಸರಿಸಮಾನವಾಗಲಾರದು. ಮನೆಯಲ್ಲಿ ಬಳಸುವ ಸ್ಪೀಕರ್ ಮಾತ್ರವಲ್ಲ. ಸಭಾಭವನ, ಕಾರ್, ವಿಮಾನ, ಎಲ್ಲ ಕಡೆ ಬೋಸ್ ಸ್ಪೀಕರ್‌ಗಳ ಬಳಕೆ ಆಗುತ್ತದೆ. ಮಾತ್ರವಲ್ಲ, ನಿಮ್ಮ ಸಭಾಭವನದ ಸಂಪೂರ್ಣ ಆಡಿಯೊ ವ್ಯವಸ್ಥೆಯ ವಿನ್ಯಾಸವನ್ನೂ ಅವರು ಮಾಡಿಕೊಡುತ್ತಾರೆ.

ಬೋಸ್ ಸ್ಪೀಕರ್‌ಗಳ ಬೆಲೆ ಅತಿ ಹೆಚ್ಚು. ಬಹುಮಂದಿ ಭಾರತೀಯರ ಕೈಗೆಟುಕುವಂತೆ ಇಲ್ಲ. ಕೇವಲ ಭಾರತ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಲಿಸಿದರೂ ಬೋಸ್ ಸ್ಪೀಕರ್‌ಗಳ ಬೆಲೆ ಹೆಚ್ಚೆ. ಆದುದರಿಂದಲೇ ಬೋಸ್ ಸ್ಪೀಕರ್ ಹೊಂದಿರುವುದು ವಿದೇಶಗಳಲ್ಲೂ ಪ್ರತಿಷ್ಠೆಯ ವಿಷಯವಾಗಿದೆ. ಬೋಸ್ ಸ್ಪೀಕರ್ ಅವುಗಳ ಪ್ರತಿಸ್ಪರ್ಧಿ ಸ್ಪೀಕರ್‌ಗಳಿಗಿಂತ ಮೂರು ಪಟ್ಟು ಹೆಚ್ಚು ಬೆಲೆಬಾಳುತ್ತವೆ.

ಇದನ್ನು ಹಲವು ಮಂದಿ ತೀವ್ರವಾಗಿ ಟೀಕಿಸಿದ್ದಾರೆ. ಅಂತರಜಾಲದಲ್ಲಿ ಬೋಸ್ ವಿರೋಧಿ ಜಾಲತಾಣಗಳೂ ಇವೆ! ಇಂತವರಿಗೆ "ನೀವು ನಿಮ್ಮ ಕಿವಿಯನ್ನು ಮಾತ್ರ ನಂಬಿ. ಇತರ ಸ್ಪೀಕರ್‌ಗಳ ಧ್ವನಿಗಿಂತ ಬೋಸ್‌ನಲ್ಲಿ ಹೆಚ್ಚೇನು ಕೇಳಿಬರದಿದ್ದಲ್ಲಿ ಬೋಸ್ ಕೊಳ್ಳಬೇಡಿ" ಎಂಬುದು ಬೋಸ್‌ನವರ ಉತ್ತರ. ಅಂದಹಾಗೆ ಈಗ ಭಾರತದಲ್ಲೂ ಬೋಸ್ ಉತ್ಪನ್ನಗಳು ಲಭ್ಯವಿವೆ. ವಿವರಗಳಿಗೆ  www.boseindia.com  ಜಾಲತಾಣಕ್ಕೆ ಭೇಟಿ ನೀಡಬಹುದು.

ಗ್ಯಾಜೆಟ್ ಸಲಹೆ
ಹಲವು ಮಂದಿ ನೋಕಿಯ ಆಶಾ ೫೦೧ ಫೋನಿನಲ್ಲಿ ವಾಟ್ಸ್‌ಅಪ್ ಇದೆಯಾ ಎಂದು ಕೇಳಿದ್ದರು. ಪ್ರಾರಂಭದಲ್ಲಿ ಅದು ಇರಲಿಲ್ಲ. ಈಗ ನೋಕಿಯದವರು ಅದನ್ನು ನೀಡುತ್ತಿದ್ದಾರೆ. ನಿಮ್ಮ ಫೋನಿನ ಸಾಫ್ಟ್‌ವೇರ್ ಅನ್ನು ನವೀಕರಿಸಿಕೊಂಡರೆ ನಿಮಗೆ ವಾಟ್ಸ್‌ಅಪ್ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT