ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌಲರ್‌ಗಳಿಂದ ಸಾಧ್ಯವಾಗುವ ಸರಣಿ ಗೆಲುವು

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಬಹುತೇಕ ಭಾಗವನ್ನು ವೀಕ್ಷಿಸಲು ನನಗೆ ಆಗಲಿಲ್ಲ. ವೀಕ್ಷಿಸಲು ಆಗದಿದ್ದುದು ಒಳ್ಳೆಯದೇ! ನಾನು ನನ್ನನ್ನು ಕ್ರಿಕೆಟ್ ಪ್ರೇಮಿಯಂತೆ ತೋರಿಸಿಕೊಳ್ಳುತ್ತೇನೆ. ಆದರೆ ನಾನು ಕ್ರಿಕೆಟ್ ವೀಕ್ಷಿಸುವಂತೆ ಮಾಡುವುದು ನನ್ನ ರಾಷ್ಟ್ರೀಯತೆ. ಹಾಗೆಯೇ, ಭಾರತ ಸೋಲುತ್ತಿರುವಾಗ ಪಂದ್ಯ ವೀಕ್ಷಿಸಲು ನನ್ನಿಂದ ಆಗದು. ನಮ್ಮ ತಂಡ ಹಿಂದೆ ದುರ್ಬಲವಾಗಿತ್ತಾದರೂ, ಅದು ಈಗ ಹಾಗಿಲ್ಲ. ಈ ಕಾರಣದಿಂದಾಗಿ, ನಮ್ಮ ತಂಡ ಸೋಲುತ್ತಿರುವಾಗ ಪಂದ್ಯ ವೀಕ್ಷಿಸಲು ನನ್ನಿಂದಾಗದು. ನಮ್ಮ ರಾಷ್ಟ್ರೀಯ ತಂಡದ ಸಾಧನೆ ಅಷ್ಟೇನೂ ಚೆನ್ನಾಗಿರದಿದ್ದರೂ ನಾವು ಅದನ್ನು ಉತ್ಸಾಹದಿಂದ ಬೆಂಬಲಿಸುತ್ತಿದ್ದ ಒಂದು ಕಾಲವನ್ನು ನಾನು ನೆನಪಿಸಿಕೊಳ್ಳಬಲ್ಲೆ. ಆದರೆ ನಮ್ಮ ತಂಡದ ಪರಿಸ್ಥಿತಿ ಈಗ ಹಾಗಿಲ್ಲ.

ನಾಲ್ಕನೆಯ ದಿನದ ಆಟದ ವೇಳೆ ಒಂದು ಸಂದರ್ಭದಲ್ಲಿ 'ನಾವು ಗೆಲ್ಲಬಹುದು' ಎಂದು ಭಾಸವಾಗುತ್ತಿತ್ತು. ಆದರೆ ಚೆಂಡು ಹೆಚ್ಚು ಪುಟಿಯುತ್ತಿದ್ದ ಪಿಚ್‌ನಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳು ಎದುರಾಳಿಗಳಿಗೆ ಶರಣಾದರು. ಇಂತಹ ಪಿಚ್‌ಗಳು ದಕ್ಷಿಣ ಆಫ್ರಿಕಾದ ಮಟ್ಟಿಗೆ ಸಾಮಾನ್ಯ. ನಮ್ಮ ತಂಡಕ್ಕೆ ಹೀಗೇಕೆ ಆಯಿತು? ಈಗ ಎರಡನೆಯ ಟೆಸ್ಟ್‌ ಪಂದ್ಯ ಆರಂಭವಾಗಿದೆ. ನಮ್ಮ ತಂಡದ ಕೆಲವು ಸಂಗತಿಗಳ ಬಗ್ಗೆ ಪರಿಶೀಲಿಸೋಣ. ನಮ್ಮದು ಇಂದು ಮತ್ತು ಹಿಂದೆಯೂ ಬ್ಯಾಟಿಂಗ್‌ ವಿಭಾಗವನ್ನು ಹೆಚ್ಚು ಅವಲಂಬಿಸಿರುವ ತಂಡ.

ನಾವು ನಮ್ಮ ದೇಶದ ಮಹಾನ್ ಕ್ರಿಕೆಟ್ ಆಟಗಾರರು ಎಂದು ಗಾವಸ್ಕರ್, ತೆಂಡೂಲ್ಕರ್ ಮತ್ತು ಕೊಹ್ಲಿ ಅವರನ್ನು ಹೆಸರಿಸಬಹುದು. ಪಾಕಿಸ್ತಾನದವರು ತಮ್ಮ ದೇಶದ ಮಹಾನ್‌ ಕ್ರಿಕೆಟ್ ಆಟಗಾರರು ಎಂದು ಇಮ್ರಾನ್, ವಾಸಿಮ್ ಮತ್ತು ವಕಾರ್ ಅವರನ್ನು ಹೆಸರಿಸಬಹುದು. ಮಹಾನ್ ಬ್ಯಾಟ್ಸ್‌ಮನ್‌ಗಳಿಗಿಂತ ಬೌಲರ್‌ಗಳು ಕಡಿಮೆ. ದೇಶಗಳ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಆಟಗಾರರ ಹೆಸರನ್ನು ಪಟ್ಟಿ ಮಾಡಿದಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಉಪಖಂಡದ ಬಗ್ಗೆಯೇ ಮಾತನಾಡುವುದಾದರೆ, ಪಾಕಿಸ್ತಾನದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ: ಹನೀಫ್ ಮೊಹಮ್ಮದ್, ಸಯೀದ್ ಅನ್ವರ್, ಜಹೀರ್ ಅಬ್ಬಾಸ್, ಜಾವೆದ್ ಮಿಯಾಂದಾದ್, ಇಂಜಮಾಮ್ ಉಲ್‌ ಹಕ್, ಯೂನಿಸ್ ಖಾನ್, ರಷೀದ್ ಲತೀಫ್, ಇಮ್ರಾನ್ ಖಾನ್, ವಾಸಿಂ ಅಕ್ರಂ, ವಕಾರ್ ಯೂನಿಸ್ ಮತ್ತು ಶೋಯೆಬ್ ಅಖ್ತರ್ ಇರುತ್ತಾರೆ. ಭಾರತದ ಇಂತಹ ಒಂದು ಪಟ್ಟಿಯಲ್ಲಿ ಗಾವಸ್ಕರ್, ಸೆಹ್ವಾಗ್, ಕೊಹ್ಲಿ, ತೆಂಡೂಲ್ಕರ್, ದ್ರಾವಿಡ್, ಗಂಗೂಲಿ, ದೋನಿ, ಕಪಿಲ್ ದೇವ್, ಕುಂಬ್ಳೆ, ಶ್ರೀನಾಥ್ ಮತ್ತು ಜಹೀರ್ ಇರುತ್ತಾರೆ.

ಯಾವ ತಂಡ ಹೆಚ್ಚು ಸಮತೋಲನದಿಂದ ಕೂಡಿದೆ, ಹೆಚ್ಚು ಬಲಿಷ್ಠವಾಗಿದೆ ಅನಿಸುತ್ತದೆ (ಕನಿಷ್ಠಪಕ್ಷ ಕಾಗದದ ಮೇಲೆ)? ನಮ್ಮ ತಂಡವಂತೂ ಹಾಗೆ ಕಾಣಿಸುವುದಿಲ್ಲ. ನಮ್ಮ ತಂಡದ ಬೌಲಿಂಗ್ ವಿಭಾಗ ದುರ್ಬಲವಾಗಿರುವುದೇ ಅವರ ಮತ್ತು ನಮ್ಮ ನಡುವೆ ಇರುವ ವ್ಯತ್ಯಾಸ. ಈ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಆದರೆ ಭಾರತದ ಮಟ್ಟಿಗೆ ಹೇಳುವುದಾದರೆ, ಕಷ್ಟಪಡುವ ಬೌಲರ್‌ಗಳನ್ನು ಬ್ಯಾಟ್ಸ್‌ಮನ್‌ಗಳಿಗಿಂತ 'ಕೆಳಗಿನವರು' ಎಂಬಂತೆ ಕಾಣಲಾಗುತ್ತದೆ. ಇಲ್ಲಿ ಇನ್ನೊಂದು ಅಂಶವೂ ಇದೆ. ನಾವು ಬ್ಯಾಟ್ಸ್‌ಮನ್‌ಗಳಿಗೆ ಆದ್ಯತೆ ನೀಡುವ ದೇಶವಾಗಿರುವ ಕಾರಣ ಅಥವಾ ಹಾಗೆ ಬದಲಾವಣೆ ಕಂಡಿರುವ ಕಾರಣ, ಅವರಿಗೆ ಅನುಕೂಲ ಆಗುವಂತಹ ಪಿಚ್‌ಗಳನ್ನು ಸಿದ್ಧಪಡಿಸುತ್ತೇವೆ. ಕ್ರಿಕ್‌ಇನ್ಫೊ ವೆಬ್‌ಸೈಟ್‌ಗೆ ಎಸ್‌. ರಾಜೇಶ್‌ ಅವರು 2009ರಲ್ಲಿ ಒಂದು ವಿಶ್ಲೇಷಣೆಯನ್ನು ಅಂಕಿ-ಅಂಶಗಳನ್ನು ಆಧರಿಸಿ ಬರೆದುಕೊಟ್ಟಿದ್ದರು. ನಮ್ಮ ಪಿಚ್‌ಗಳು ಬೌಲರ್‌ಗಳಿಗೆ ಅದೆಷ್ಟರಮಟ್ಟಿಗೆ ಅನನುಕೂಲ ಮಾಡುತ್ತವೆ ಎಂಬುದನ್ನು ಅವರು ವಿವರಿಸಿದ್ದರು. ಭಾರತದಲ್ಲಿ ನಡೆಯುವ ಟೆಸ್ಟ್‌ ಪಂದ್ಯಗಳ ಪೈಕಿ ಶೇಕಡ 40ರಷ್ಟು ಡ್ರಾನಲ್ಲಿ ಅಂತ್ಯಗೊಳ್ಳುತ್ತವೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಶೇಕಡ 7ರಷ್ಟು ಟೆಸ್ಟ್‌ ಪಂದ್ಯಗಳು ಮಾತ್ರ ಡ್ರಾನಲ್ಲಿ ಕೊನೆಗೊಳ್ಳುತ್ತವೆ. ಭಾರತದ ಕ್ರಿಕೆಟ್ ತಂಡವು ಮೊದಲನಿಂದಲೂ ತೊಂದರೆ ಅನುಭವಿಸುವ ಪಿಚ್‌ಗಳ ಪೈಕಿ ಆಸ್ಟ್ರೇಲಿಯಾದ ಪಿಚ್‌ಗಳೂ ಸೇರಿವೆ. ಅಲ್ಲಿ ನಡೆಯುವ ಟೆಸ್ಟ್‌ ಪಂದ್ಯಗಳಲ್ಲಿ ಶೇಕಡ 11ರಷ್ಟು ಮಾತ್ರ ಡ್ರಾ ಆಗುತ್ತವೆ.

ಭಾರತದಲ್ಲಿ ನಡೆಯುವ ಪಂದ್ಯಗಳಲ್ಲಿ ತಂಡಗಳು ಬೃಹತ್ ಮೊತ್ತ ಕಲೆಹಾಕುವುದು ಅಪರೂಪವೇನೂ ಅಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಎರಡೂ ತಂಡಗಳು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 200 ರನ್‌ಗಳ ಗಡಿ ದಾಟಿದ್ದವು. ನಮ್ಮಲ್ಲಿ ನಡೆಯುವ ಪಂದ್ಯಗಳ ಮೊದಲ ಇನ್ನಿಂಗ್ಸ್‌ಗಳಲ್ಲಿ ಇಂತಹ ಸ್ಕೋರ್‌ ಸಾಧ್ಯವೇ ಇಲ್ಲ. ದಕ್ಷಿಣ ಆಫ್ರಿಕಾದಲ್ಲಿ ಸಾಧ್ಯವಾದ ಈ ಸ್ಕೋರ್‌ಅನ್ನು ಇಲ್ಲಿ ಸಾಧ್ಯವಾಗಿಸಲು ಬೌಲರ್‌ಗಳಿಗೆ ಅವಕಾಶವೇ ಇಲ್ಲ ಎನ್ನಬಹುದು. ನಾವು ಮೊದಲ ಟೆಸ್ಟ್‌ ಪಂದ್ಯವನ್ನು ಸೋತಂತಹ ಪಿಚ್‌ಗಳಿಗೆ 'ಬ್ಯಾಟಿಂಗ್‌ ಮತ್ತು ಬೌಲಿಂಗ್‌ಗಳಿಗೆ ಸಮಾನ ಆದ್ಯತೆ ನೀಡುವ ಪಿಚ್‌' (sporting wicket) ಎನ್ನುತ್ತಾರೆ.

2000ನೆಯ ಇಸವಿಯಿಂದ 2010ರ ನಡುವಿನ ಅವಧಿಯಲ್ಲಿ ಬೌಲರ್‌ಗಳ ಪಾಲಿಗೆ ಅತ್ಯುತ್ತಮ ಎನಿಸಿದ ಕ್ರೀಡಾಂಗಣಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದು ಕ್ರೀಡಾಂಗಣದ ಹೆಸರು ಇಲ್ಲ. ಆದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಅತಿಹೆಚ್ಚು (ಸರಾಸರಿ) ರನ್‌ ಬಾರಿಸಲು ಅವಕಾಶ ಕಲ್ಪಿಸಿದ ಕ್ರೀಡಾಂಗಣಗಳ ಪಟ್ಟಿಯಲ್ಲಿ ಕೋಲ್ಕತ್ತ, ಬೆಂಗಳೂರು ಮತ್ತು ಮೊಹಾಲಿಯ ಹೆಸರುಗಳು ಇವೆ.

ಈ ಎಲ್ಲ ಕಾರಣಗಳಿಂದಾಗಿ ನಮ್ಮ ರಾಷ್ಟ್ರೀಯ ತಂಡವು ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿಯೂ, ಬೌಲಿಂಗ್‌ನಲ್ಲಿ ದುರ್ಬಲವಾಗಿಯೂ ಇದೆ- ಅದರಲ್ಲೂ ತಂಡ ಬಲಿಷ್ಠವಾಗಿರುವುದು ತವರಿನಲ್ಲಿ ಮಾತ್ರ. ಸ್ಪಿನ್ನರ್‌ಗಳನ್ನು ಮತ್ತು ನಿಧಾನಗತಿಯ ಪಿಚ್‌ಗಳಲ್ಲಿ ಆಟ ನೋಡುವುದನ್ನು ಇಷ್ಟಪಡುವ ಭಾರತೀಯರು ಹಲವರಿದ್ದಾರೆ ಎಂಬುದು ಸತ್ಯ. ಆದರೆ, ನನ್ನ ಪಾಲಿಗೆ, ಚೆಂಡು ಹೆಚ್ಚು ಪುಟಿಯುವ ಮತ್ತು ವೇಗದ ಬೌಲಿಂಗ್‌ಗೆ ಅನುಕೂಲ ಕಲ್ಪಿಸುವ ಪಿಚ್‌ಗಳಲ್ಲಿ ಆಟ ನೋಡುವುದು ಚೇತೋಹಾರಿ ಅನುಭವ ನೀಡುತ್ತದೆ. ಈ ರೀತಿಯ ಆಟ ನೋಡಬಯಸುವವರು ಇನ್ನೂ ಹಲವರಿದ್ದಾರೆ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ.

ಒಬ್ಬ ಒಳ್ಳೆಯ ವೇಗದ ಬೌಲರ್‌ ಒಳ್ಳೆಯ ದಾಂಡಿಗನನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಬೌಲಿಂಗ್‌ ಮಾಡುವುದನ್ನು ನೋಡುವುದು ಇನ್ನೊಂದು ಅಂಶ. ಚೆಂಡು ಹೆಚ್ಚು ಪುಟಿಯುವ ಪಿಚ್‌ಗಳಲ್ಲಿ ಆಟಗಾರರು ದೈಹಿಕವಾಗಿ ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾದಲ್ಲಿ ನಡೆಯುವ ಟೆಸ್ಟ್‌ ಪಂದ್ಯಗಳನ್ನು ನೋಡುವ ಅನುಭವ, ಭಾರತ ಅಥವಾ ಶ್ರೀಲಂಕಾದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳನ್ನು ನೋಡುವ ಅನುಭವ ಬೇರೆ ಬೇರೆ. ಬ್ಯಾಟ್ಸ್‌ಮನ್‌ ಗಾಯಗೊಳ್ಳುವುದನ್ನು ನೋಡಲು ನನಗೆ ಇಷ್ಟವಿಲ್ಲ. ಹಾಗಾಗಿ, ವೇಗದ ಬೌಲಿಂಗ್‌ಗೆ ನೆರವಾಗುವ ಪಿಚ್‌ಗಳಲ್ಲಿ ನಡೆಯುವ ಪಂದ್ಯಗಳನ್ನು ನೋಡುವ ಅನುಭವ ಇನ್ನಷ್ಟು ರೋಮಾಂಚಕಾರಿ ಆಗಿರುತ್ತದೆ. ಇದು ಭಾರತದಲ್ಲಿ ಸಾಧ್ಯವಿಲ್ಲ. ಒಂದು ವಿಷಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳೋಣ: ಭಾರತದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳು ಬೋರು ಹೊಡೆಸುತ್ತವೆ, ಬಹುಪಾಲು ಪಂದ್ಯಗಳನ್ನು ವೀಕ್ಷಿಸುವುದು ಸಾಧ್ಯವೇ ಇಲ್ಲ.

ಈ ಪರಿಸ್ಥಿತಿ ಬದಲಾಗಬೇಕು ಎಂದಾದರೆ ನಮ್ಮಲ್ಲಿನ ಮೂಲ ಸೌಕರ್ಯಗಳಲ್ಲಿ ಬದಲಾವಣೆ ಆಗಬೇಕು. ಕ್ರಿಕೆಟ್ ಜಗತ್ತಿನಲ್ಲಿ ಬಿಸಿಸಿಐ ಅತ್ಯಂತ ಶ್ರೀಮಂತ ಸಂಸ್ಥೆಯಾಗಿದ್ದರೂ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡಿನ ಕ್ರೀಡಾಂಗಣಗಳಿಗೆ ಹೋಲಿಸಿದರೆ ನಮ್ಮಲ್ಲಿನ ಕ್ರೀಡಾಂಗಣಗಳು ಮುಜುಗರ ತರಿಸುವಂತೆ ಇವೆ. ಫಿರೋಜ್ ಷಾ ಕೋಟ್ಲಾ ಮೈದಾನವು ಜಗತ್ತಿನಲ್ಲೇ ಅತ್ಯಂತ ಕೊಳಕಾದ ಕ್ರಿಕೆಟ್ ಮೈದಾನ. ಅಲ್ಲಿ ಎಲ್ಲ ಕಡೆಯೂ ಸಿಮೆಂಟ್‌ ಪಟ್ಟಿಗಳು, ಜಾಹೀರಾತು ಫಲಕಗಳು ತುಂಬಿವೆ.

ಅದೇನೇ ಇದ್ದರೂ, ನಾವು ಯಾವ ಬಗೆಯ ಕ್ರಿಕೆಟ್ ಆಟವನ್ನು ಬಯಸುತ್ತೇವೆ ಎಂಬುದನ್ನು ತೀರ್ಮಾನಿಸುವುದು ಪಿಚ್‌. ನಮಗೆ ಬೇಕಿರುವುದು ಮಧ್ಯಮ ವೇಗದ ಬೌಲರ್‌ಗಳೋ, ಸ್ಪಿನ್ನರ್‌ಗಳೋ ಅಥವಾ ನೈಜ ವೇಗದ ಬೌಲರ್‌ಗಳೋ? ವಾಂಖೆಡೆ ಅಥವಾ ಈಡನ್‌ ಗಾರ್ಡನ್ಸ್‌ನಲ್ಲಿ ದಾಖಲೆಗಳನ್ನು ಪುಡಿಗಟ್ಟುವ, ಆದರೆ ದಕ್ಷಿಣ ಆಫ್ರಿಕಾದ ಸಾಮಾನ್ಯ ದಾಳಿಯನ್ನು ಎದುರಿಸಲಾಗದ ಬ್ಯಾಟ್ಸ್‌ಮನ್‌ಗಳು ನಮಗೆ ಬೇಕೇ?

ನಾನು ಈಗಾಗಲೇ ಹೇಳಿರುವಂತೆ, ನಾನು ಕ್ರಿಕೆಟ್ ವೀಕ್ಷಿಸುವುದು ಭಾರತೀಯ ಕ್ರಿಕೆಟ್ ತಂಡದ ಮೇಲಿನ ಪ್ರೀತಿಯಿಂದಲೇ ವಿನಾ, ಕ್ರಿಕೆಟ್ ಎಂಬ ಆಟದ ಮೇಲಿನ ಪ್ರೀತಿಯಿಂದ ಅಲ್ಲ ಎಂಬ ಅನುಮಾನ ನನ್ನಲ್ಲಿದೆ. ನಾವು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೆಯ ಟೆಸ್ಟ್ ಪಂದ್ಯವನ್ನು ಮತ್ತು ಇಡೀ ಸರಣಿಯನ್ನು ಗೆಲ್ಲುತ್ತೇವೆ ಎಂಬ ನಿರೀಕ್ಷೆ ಹೊಂದಿದ್ದೇನೆ. ಇದು ಸಾಧ್ಯವಾಯಿತು ಎಂದಾದರೆ, ಎರಡನೆಯ ದರ್ಜೆಯ ನಾಗರಿಕರ ಮಟ್ಟಕ್ಕೆ ನಾವು ಇಳಿಸಿದ್ದರೂ ಚೆನ್ನಾಗಿ ಪ್ರದರ್ಶನ ತೋರುವ ಬೌಲರ್‌ಗಳಿಂದ ಮಾತ್ರ.

(ಲೇಖಕ ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT