ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್ ಮಸೂದೆ ಪ್ರಭಾವ!

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಷೇರುಪೇಟೆಯು ಕಳೆದವಾರ ಉತ್ತೇಜಿತವಾಗಿ ಕಂಡುಬಂದರೂ ಅಂತ್ಯದಲ್ಲಿ ನೀರಸಮಯವಾಗಿತ್ತು. ಮುಖ್ಯವಾಗಿ ಬ್ಯಾಂಕಿಂಗ್ ವಲಯದ ಸುಧಾರಣೆಗಳ ಮಸೂದೆಗೆ ಅಂಗೀಕಾರ ಮುದ್ರೆ ದೊರೆತ ಕಾರಣ ಹೆಚ್ಚಿನ ಬ್ಯಾಂಕಿಂಗ್ ಷೇರುಗಳು ಜಿಗಿತ ಕಂಡವು. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಬಡ್ಡಿದರ ಅಥವಾ ಸಿ.ಆರ್.ಆರ್. ದರಗಳಲ್ಲಿ ಏನೂ ಬದಲಾವಣೆ ಮಾಡದ ಕಾರಣ ಪೇಟೆಯು ನಿರುತ್ಸಾಹಮಯವಾಯಿತು. ಕಳೆದ ವಾರ ಲೋಹ ವಲಯದ ಟಾಟಾ ಸ್ಟೀಲ್, ಸ್ಟೀಲ್ ಅಥಾರಿಟೀಸ್ ಆಫ್ ಇಂಡಿಯಾ, ಜೆಎಸ್‌ಡಬ್ಲು ಸ್ಟೀಲ್, ಹಿಂಡಾಲ್ಕೊ, ನಾಲ್ಕೊ ಮುಂತಾದವು ಚುರುಕಾದ ಏರಿಕೆ ಪ್ರದರ್ಶಿಸಿದವು. ಫಾರ್ಮಾ ವಲಯದ ಗ್ಲೆನ್‌ಮಾರ್ಕ್ ಫಾರ್ಮ, ಸಿಪ್ಲಾ, ಸನ್‌ಫಾರ್ಮಾ, ಸ್ಟ್ರೈಡ್ಸ್ ಆರ್ಕೊಲ್ಯಾಬ್ ಏರಿಕೆಯಿಂದ ವಿಜೃಂಭಿಸಿದವು. 
 
ಇತ್ತೀಚೆಗೆ ಆಕರ್ಷಕ ಏರಿಕೆಯಲ್ಲಿದ್ದ ಟಾಟಾ ಗ್ಲೋಬಲ್ ಬ್ರಿವರೇಜಸ್, ಟಿಟಿಕೆ ಪ್ರೆಸ್ಟೀಜ್, ಜೆಟ್ ಏರ್‌ವೇಸ್‌ಗಳು ಮಾರಾಟದ ಒತ್ತಡ ಎದುರಿಸಿದವು. ರಿಯಲ್ ಎಸ್ಟೇಟ್  ವಲಯದ ಬ್ರಿಗೇಡ್ ಎಂಟರ್ ಪ್ರೈಸಸ್, ನಿಕೊಷ್ ಎಸ್ಟೇಟ್ಸ್, ಗಣೇಶ್ ಹೌಸಿಂಗ್ ಉತ್ತಮ ಏರಿಕೆ ಪ್ರದರ್ಶಿಸಿದವು. ಬಜಾಜ್ ಹೋಲ್ಡಿಂಗ್, ಎಲ್ ಅಂಡ್ ಟಿ ಫೈನಾನ್ಸ್, ರಿಲಯನ್ಸ್ ಕ್ಯಾಪಿಟಲ್ ಮುಂತಾದವು ಬ್ಯಾಂಕಿಂಗ್ ಲೈಸೆನ್ಸ್ ಸಾಧ್ಯತೆಯ ಕಾರಣ ಚುರುಕಾದವು.
 
ಒಟ್ಟಿನಲ್ಲಿ ಹಿಂದಿನವಾರ ಸಂವೇದಿ ಸೂಚ್ಯಂಕವು 75 ಅಂಶಗಳಷ್ಟು ಹಾನಿಗೊಳಗಾದರೆ ಮಧ್ಯಮ ಶ್ರೇಣಿ ಸೂಚ್ಯಂಕ ಕೇವಲ 1 ಅಂಶಗಳಷ್ಟು ಇಳಿಕೆಯಿಂದ ಸಮತೋಲನದಲ್ಲಿತ್ತು. ಕೆಳಮಧ್ಯಮ ಶ್ರೇಣಿ ಸೂಚ್ಯಂಕ 28 ಅಂಶಗಳಷ್ಟು ಇಳಿದಿದೆ. ವಿದೇಶಿ ವಿತ್ತೀಯ ಸಂಸ್ಥೆಗಳುರೂ 3,635 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ಸಂಸ್ಥೆಗಳುರೂ1,736 ಕೋಟಿ ಷೇರು ಮಾರಾಟ ಮಾಡಿವೆ. ಪೇಟೆ ಬಂಡವಾಳರೂ 67.78 ಲಕ್ಷ ಕೋಟಿಗಳಷ್ಟಾಗಿದೆ. 
 
ಬೋನಸ್ ಷೇರಿನ ವಿಚಾರ
* ಗ್ಯಾಮನ್ ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್ ಕಂಪೆನಿಯು ಕಂಪೆನಿಗಳಲ್ಲಿ ಕನಿಷ್ಠಮಟ್ಟದ ಸಾರ್ವಜನಿಕ ಭಾಗಿತ್ವಕ್ಕೆ ಅವಕಾಶ ಮಾಡಿ, ಲಿಸ್ಟಿಂಗ್ ನಿಯಮ ಪಾಲಿಸಲು 1:34ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.
 
*ಟಿ. ಗುಂಪಿನ ಧನಲೀಲ ಇನ್ವೆಸ್ಟ್‌ಮೆಂಟ್ಸ್ ಅಂಡ್ ಟ್ರೇಡಿಂಗ್ ಕಂಪೆನಿ 4:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.
* ಶ್ರೀ ಗಣೇಶ್ ಸ್ಪಿನ್ನರ್ಸ್ ಲಿ. ಕಂಪೆನಿಯು 5:2ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.
 
ಹೊಸ ಷೇರಿನ ವಿಚಾರ
ಪಂಕಜ್ ಪೊಲಿಪ್ಯಾಕ್ ಲಿ. ಕಂಪೆನಿಯಲ್ಲಿ ಪಂಕಜ್ ಪೊಲಿಮರ್ಸ್‌ನ ಶೀಟ್ಸ್ ವಿಭಾಗವನ್ನು ವಿಲೀನಗೊಳಿಸಿದ್ದು ಪ್ರತಿ 12 ಷೇರಿಗೆ 5 ಪಂಕಜ್ ಪೊಲಿಪ್ಯಾಕ್ ನೀಡಲಾಗಿರುವ ಈ ಷೇರುಗಳು ಡಿಸೆಂಬರ್ 26 ರಿಂದ ಟಿ ಗುಂಪಿನಲ್ಲಿ ವಹಿವಾಟಾಗಲಿವೆ.
 
ಆಫರ್ ಫಾರ್ ಸೇಲ್
* ರಿಲೈಯನ್ಸ್ ಪವರ್ ಲಿ. ಕಂಪೆನಿಯು ಪ್ರವರ್ತಕರು 19 ರಂದು 15.2 ಕೋಟಿ ಷೇರನ್ನುರೂ 93ರ ಕನಿಷ್ಠ ಬೆಲೆ ಆಧರಿಸಿ ಷೇರು ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿ ಮೂಲಕ 19 ರಂದು ಮಾರಾಟ ಮಾಡಿ, ಸಾರ್ವಜನಿಕ ಭಾಗಿತ್ವದಲ್ಲಿ ಶೇ 25ಕ್ಕೆ ತಲುಪಿಸಿದೆ.
 
* ಎರೋಸ್ ಇಂಟರ್‌ನ್ಯಾಶನಲ್ ಲಿ. ಕಂಪೆನಿಯ ಪ್ರವರ್ತಕರು 20 ರಂದು 25, 73, 710 ಷೇರುಗಳನ್ನು ಷೇರು ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿ ಮೂಲಕ ಮಾರಾಟ ಮಾಡಿ ಸಾರ್ವಜನಿಕರ ಕನಿಷ್ಠ ಹೂಡಿಕೆ ಮಿತಿ ತಲುಪಿದೆ. ಕನಿಷ್ಠ ಬೆಲೆರೂ200.
 
*ಅದಾನಿ ಎಂಟರ್‌ಪ್ರೈಸಸ್‌ನ ಪ್ರವರ್ತಕ ಸಮೂಹವು 21 ರಂದು 2.30 ಕೋಟಿ ಷೇರುಗಳನ್ನುರೂ 282 ಕನಿಷ್ಠ ಬೆಲೆಯಂತೆ ಮಾರಾಟ ಮಾಡಿ, ಸಾರ್ವಜನಿಕ ಭಾಗಿತ್ವದ ಕನಿಷ್ಠ ಮಿತಿ ತಲುಪಿದೆ.
 
ಮುಖಬೆಲೆ ಸೀಳಿಕೆ ವಿಚಾರ
* ಸುಲಭ್ ಎಂಜಿನಿಯರ್ಸ್ ಅಂಡ್ ಸರ್ವಿಸಸ್ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನುರೂ10 ರಿಂದರೂ 1ಕ್ಕೆ ಸೀಳಲಿದೆ. ಈ ಕಂಪೆನಿಯು `ಟಿ' ಗುಂಪಿನಲ್ಲಿ ವಹಿವಾಟಾಗುತ್ತಿದೆ.
 
*ಎಂ.ಎಂ. ಫೈನಾನ್ಶಿಯಲ್ ಸರ್ವಿಸಸ್ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನುರೂ10 ರಿಂದರೂ2ಕ್ಕೆ ಸೀಳಲಿದೆ.
 
*ಣಪಿ.ಎಸ್. ಗ್ಲೋಬಲ್ ಲಿ. ಕಂಪೆನಿಯು 22 ರಂದು ಮುಖಬೆಲೆ ಸೀಳಿಕೆ ನಿರ್ಧರಿಸಲಿದೆ.
 
ಪ್ರಿ ಓಪನಿಂಗ್ ಮಾಯೆ!
ಪೇಟೆ ಆರಂಭಕ್ಕೆ ಮುಂಚಿನ ಸಮಯ ಅಂದರೆ 9 ರಿಂದ 9.15 ರವರೆಗಿನ ಸಮಯದಲ್ಲಿ ಸೂಚ್ಯಂಕಗಳು ಅತೀವ ಏರಿಳಿತ ಪ್ರದರ್ಶಿಸುತ್ತವೆ. ಗುರುವಾರ ಮತ್ತು ಶುಕ್ರವಾರ 500 ಅಂಶಗಳಷ್ಟು ಏರಿಕೆ ತೋರಿ ಇಳಿದಿವೆ. ಕಳೆದ ಗುರುವಾರ ಎಸ್‌ಬಿಐರೂ2,842 ರಿಂದರೂ2,350ರ ಏರಿಳಿತ ಪ್ರದರ್ಶಿಸಿದರೆ ಶುಕ್ರವಾರ ಎಚ್‌ಡಿಎಫ್‌ಸಿರೂ 997 ರಿಂದರೂ832 ಏರಿಳಿತ ಪ್ರದರ್ಶಿಸಿದೆ. 
ಕರ್ನಾಟಕ ಬ್ಯಾಂಕ್ ಏರಿಳಿತ
 
ಈ ಕಂಪೆನಿಯು ಸೆಪ್ಟೆಂಬರ್ 14 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ ಎಂಬ ಕಾರ್ಯ ಸೂಚಿ ಪ್ರಕಟಿಸಿದ ನಂತರ ಷೇರಿನ ಬೆಲೆಯುರೂ80 ರೊಳಗೆ ಕುಸಿಯಿತು. ಆದರೆ ಸೆಪ್ಟೆಂಬರ್ 14 ರಂದು ಹಕ್ಕಿನ ಷೇರು ಯೋಜನೆಯನ್ನು ಕೈಬಿಟ್ಟಿರುವುದಾಗಿ ಪ್ರಕಟಿಸಿತು. ಅಲ್ಲಿಂದ ಷೇರಿನ ಬೆಲೆಯು ಏಕಮುಖವಾಗಿ ಏರಿಕೆ ಕಂಡುರೂ198 ದಾಟಿತು. ನಂತರ ಈ ವಾರದ ಕೊನೆಯಲ್ಲಿ ಇಳಿಕೆ ಕಂಡುರೂ161 ರಲ್ಲಿ ವಾರಾಂತ್ಯಗೊಂಡಿತು.
 
 ಈ ಏರಿಳಿತಗಳ ಬಗ್ಗೆ ನಿಯಂತ್ರಕರು ತನಿಖೆಗೊಳಪಡಿಸಬಹುದೆಂಬ ಸುದ್ದಿಯು ಈ ಕುಸಿತಕ್ಕೆ ಕಾರಣವಾಗಿದೆ. ಮೊದಲು ಹಕ್ಕಿನ ಷೇರು ಪರಿಶೀಲನೆ ಪ್ರಕಟಿಸಿ ನಂತರ ಕೈ ಬಿಟ್ಟ ಕ್ರಮವು ಕಂಪೆನಿಯ ಕಾರ್ಪೊರೇಟ್ ಆಡಳಿತ ಗುಣಮಟ್ಟದ ಬಗ್ಗೆ ಸಂಶಯ ಉಂಟು ಮಾಡುವಂತಿದೆ. ಆದರೂ ಮುಂದಿನ ದಿನಗಳಲ್ಲಿ ಹೆಚ್ಚಿನ ಏರಿಳಿತ ಪ್ರದರ್ಶಿತವಾಗುವ ಸಾಧ್ಯತೆ ಇದೆ.
ವಾರದ ಪ್ರಶ್ನೆ
ಲಿಸ್ಟೆಡ್ ಕಂಪೆನಿಗಳಲ್ಲಿ ಪಬ್ಲಿಕ್ ಷೇರ್ ಹೋಲ್ಡಿಂಗ್ ಮಿತಿ ಏನು? ಈಗಾಗಲೇ ಲೀಸ್ಟ್ ಆಗಿರುವ ಕಂಪೆನಿಗಳಿಗೂ ಇದು ಅನ್ವಯಿಸುತ್ತದೆಯೆ? ದಯವಿಟ್ಟು ವಿವರಿಸಿರಿ.
 
ಉತ್ತರ: ಷೇರು ಪೇಟೆಯ ಚಟುವಟಿಕೆಯಲ್ಲಿ ಭಾಗಿದಾರರು ಹೆಚ್ಚಾದಂತೆ ಅದರ ಗುಣಮಟ್ಟವು ಹೆಚ್ಚುತ್ತದೆ. ಷೇರು ಪೇಟೆಯಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಕಂಪೆನಿಗಳಲ್ಲಿ ಕನಿಷ್ಠ ಶೇ 25ರ ಭಾಗಿತ್ವವು ಸಾರ್ವಜನಿಕರಲ್ಲಿ ಇರಬೇಕೆಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಇದನ್ನು 2010ರ ಜೂನ್ ತಿಂಗಳಿನಲ್ಲಿ ಸೆಕ್ಯುರಿಟೀಸ್ ಕಾಂಟ್ರಾಕ್ಟ್ಸ್ (ರೆಗ್ಯುಲೇಶನ್ ಅಮೆಂಡ್‌ಮೆಂಟ್) ರೂಲ್ಸ್ 2010ರ ಮೂಲಕ ಜಾರಿಗೊಳಿಸಲಾಗಿದೆ.
 
 ಈ ನಿಯಮದ ಪ್ರಕಾರ ಈಗಾಗಲೇ ನೋಂದಾಯಿಸಿಕೊಂಡಿರುವ ಕಂಪೆನಿಗಳು ಪ್ರತಿ ವರ್ಷ ಶೇ 5 ರಷ್ಟಾದರೂ ಸಾರ್ವಜನಿಕ ಭಾಗಿತ್ವಹೆಚ್ಚಿಸಿಕೊಳ್ಳಬೇಕು. ಹೊಸದಾಗಿ ಲೀಸ್ಟಿಂಗ್ ಆಗುವ ಕಂಪೆನಿಗಳಲ್ಲಿ ವಿತರಣೆ ಬೆಲೆಯಲ್ಲಿ ಕಂಪೆನಿಯ ಬಂಡವಾಳವುರೂ4000 ಕೋಟಿ ಮೀರಿದ್ದರೆ ಅಂತಹ ಕಂಪೆನಿಗಳು ಕೇವಲ ಶೇ 10ರ ಸಾರ್ವಜನಿಕ ಭಾಗಿತ್ವದಿಂದ ಪೇಟೆ ಪ್ರವೇಶಿಸಬಹುದು. ಆದರೆ ಪ್ರತಿ ವರ್ಷ ಶೇ 5ರಷ್ಟಾದರೂ ಸಾರ್ವಜನಿಕ ಭಾಗಿತ್ವ ಹೆಚ್ಚುತ್ತಿರಬೇಕು. ಈ ನಿಯಮವು ಸಾರ್ವಜನಿಕ ಹಾಗೂ ಖಾಸಗಿ ವಲಯದ ಕಂಪೆನಿಗಳಿಗೂ ಅನ್ವಯಿಸುತ್ತದೆ. 
 
 ಈ ಕಾರಣದಿಂದ  ಕಂಪೆನಿಗಳು ಕನಿಷ್ಠ ಸಾರ್ವಜನಿಕ ಮಿತಿ ತಲುಪಲು ಷೇರು ವಿನಿಮಯ ಕೇಂದ್ರಗಳಲ್ಲಿ `ಓಪನ್ ಆಫರ್' ಗವಾಕ್ಷಿ ಕಲ್ಪಿಸಲಾಗಿದೆ. ಈ ಗವಾಕ್ಷಿ ಮೂಲಕ ಇತ್ತೀಚೆಗೆ ರಿಲಯನ್ಸ್ ಪವರ್, ಬ್ಲೂಡಾರ್ಟ್ ಎಕ್ಸ್‌ಪ್ರೆಸ್, ದಿಸಾ ಇಂಡಿಯಾ, ಪ್ರೆಸಿನಿಯಸ್ ಕಬಿ ಆಂಕಾಲಜಿ ಮುಂತಾದವು ತಮ್ಮ ಅಗತ್ಯತೆಯನ್ನು ಪೂರೈಸಿಕೊಂಡಿವೆ. ಈ ಓಪನ್ ಆಫರ್ ಗವಾಕ್ಷಿ ವಿಧಾನದ ಮೂಲಕ ಸಾರ್ವಜನಿಕ ವಲಯದ ಹಿಂದೂಸ್ತಾನ್ ಕಾಪರ್ ಮತ್ತು `ಎನ್‌ಎಂಡಿಸಿ'ಗಳು ಸಹ ಷೇರು ವಿತರಣೆ ಮಾಡಿ ತಮ್ಮಗಳ ಸಾರ್ವಜನಿಕ ಭಾಗಿತ್ವ ಹೆಚ್ಚಿಸಿಕೊಳ್ಳುವುದರೊಂದಿಗೆ ಸರ್ಕಾರದ ಬಂಡವಾಳ ಹಿಂತೆಗೆತವೂ ಸುಲಭವಾಯಿತು.

ಗ್ಯಾಮನ್ ಇನ್‌ಫ್ರಾಸ್ಟ್ರಕ್ಚರ್ ಅಂಡ್ ಪ್ರಾಜೆಕ್ಟ್ಸ್ ಕಂಪೆನಿಯು 1:3ರ ಅನುಪಾತದ ಬೋನಸ್ ಷೇರು ವಿತರಣೆ ಮೂಲಕ ಸಾರ್ವಜನಿಕ ಭಾಗಿತ್ವ ಹೆಚ್ಚಿಸಲು ಮುಂದಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಓಪನ್ ಆಫರ್ ಮೂಲಕ ಕಂಪೆನಿಗಳು ಪೇಟೆ ಪ್ರವೇಶಿಸುವ ಸಾಧ್ಯತೆ ಇದೆ. ಓಪನ್ ಆಫರ್ ವೇಳೆ ಬರಬಹುದಾದ ಏರಿಕೆಯನ್ನು ಹೂಡಿಕೆದಾರರು ಅನುಕೂಲಕ್ಕೆ ಬಳಸಿಕೊಳ್ಳುವುದು ಉತ್ತಮ.ವಾರದ ಪ್ರಶ್ನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT