ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್ ವಲಯದಲ್ಲಿ ಮಹಿಳಾ ‘ಯುಗ’!

Last Updated 16 ಜೂನ್ 2018, 9:22 IST
ಅಕ್ಷರ ಗಾತ್ರ

ರಾಷ್ಟ್ರದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದ (ಎಸ್‌ಬಿಐ) ಅಧ್ಯಕ್ಷೆಯಾಗಿ ಅರುಂಧತಿಭಟ್ಟಾಚಾರ್ಯ ಅಧಿಕಾರ ವಹಿಸಿ­ಕೊಂಡಿದ್ದಾರೆ. ಕಳೆದ 207 ವರ್ಷಗಳಿಂದ ಎಸ್‌ಬಿಐ ರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಮಹಿಳೆಯೊಬ್ಬರು ಈ ಬ್ಯಾಂಕ್‌ನ ಅತ್ಯುನ್ನತ ಹುದ್ದೆ ಅಲಂಕರಿಸಲು ಎರಡು ಶತಮಾನಗಳು ಕಾಯಬೇಕಾಯಿತು.

ಇದೇ ಸಂದರ್ಭದಲ್ಲೇ ಅಮೆರಿಕ ಫೆಡರಲ್ ರಿಸರ್ವ್ ಬೋರ್ಡ್‌ನ ಮುಂದಿನ ಅಧ್ಯಕ್ಷೆ­ಯಾಗಿ  ಜೇನೆಟ್  ಎಲ್ಲೆನ್ ಅಧಿಕಾರ ವಹಿಸಿ­ಕೊಳ್ಳಲು ಸನ್ನದ್ಧರಾಗಿರುವುದು ಕಾಕತಾಳೀಯ. ಅಮೆರಿಕದ ಈ ಕೇಂದ್ರೀಯ ಬ್ಯಾಂಕ್ 1914­ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಈ ಅತ್ಯುನ್ನತ ಹುದ್ದೆಗೆ ಏರುತ್ತಿರುವ ಮೊದಲ ಮಹಿಳೆ ಇವರು.

ನಮ್ಮ ರಾಷ್ಟ್ರದಲ್ಲೂ ಕೇಂದ್ರೀಯ ಬ್ಯಾಂಕ್  ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ಹುದ್ದೆಗೇರಲು ಮಹಿಳೆ  68 ವರ್ಷಗಳಷ್ಟು ಸುದೀರ್ಘ ಕಾಲ ಕಾಯ ಬೇಕಾಯಿತು. ರಿಸರ್ವ್ ಬ್ಯಾಂಕ್ ನಲ್ಲಿ ಒಬ್ಬರು ಗವರ್ನರ್ ಹಾಗೂ ನಾಲ್ವರು ಡೆಪ್ಯುಟಿ ಗವರ್ನರ್‌­ಗಳಿರುತ್ತಾರೆ.

ಆ ಮೊದಲ ಡೆಪ್ಯುಟಿ ಗವರ್ನರ್ ಆಗಿ ಕಿಶೋರಿ ಜೆ ಉದೇಶಿ  ಅವರು 2003ರ ಜೂನ್ ನಿಂದ 2005ರ ಅಕ್ಟೋಬರ್‌­ವರೆಗೆ ಕಾರ್ಯ ನಿರ್ವಹಿಸಿದ್ದರು.  ನಂತರ ಈ ಹುದ್ದೆಗೇರಿದವರು ಶ್ಯಾಮಲಾ ಗೋಪಿನಾಥ್ ಹಾಗೂ ಉಷಾ ಥೋರಟ್.  ಈಗ ಇಬ್ಬರೂ ನಿವೃತ್ತರಾಗಿದ್ದಾರೆ.

ಈ ದೃಷ್ಟಿಯಿಂದ ನೋಡಿದರೂ ಮಹಿಳಾ ಅಧ್ಯಕ್ಷೆಯನ್ನು ಹೊಂದಲು ಎಸ್‌ಬಿಐ ಎರಡು ಶತಮಾನಗಳಷ್ಟು ಕಾಲ ಕಾಯಬೇಕಾಯಿತು ಎಂಬುದು ಸುದೀರ್ಘ ಅವಧಿಯೇ . ಹಲವು ಸರ್ಕಾರಿ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಮುಖ್ಯಸ್ಥರು ಗಳಿದ್ದಾರೆ. ಈ ಗುಂಪಿಗೆ ಈಗ ಅರುಂಧತಿ ಭಟ್ಟಾಚಾರ್ಯ ಅವರೂ ಸೇರ್ಪಡೆ ಯಾಗಿದ್ದಾರೆ.

ಈ ಗುಂಪಿ­ನಲ್ಲಿರುವ ಇತರ ಕೆಲವು ಮಹಿಳೆಯರು ಚಂದಾ ಕೊಚ್ಚರ್್ (ಎಂಡಿ ಮತ್ತು ಸಿಇಓ ಐಸಿಐಸಿಐ ಬ್ಯಾಂಕ್), ಶಿಖಾ ಶರ್ಮ (ಎಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಿಇಓ) ,ನೈನಾ ಲಾಲ್ ಕಿದ್ವಾಯಿ (ಗ್ರೂಪ್‌ ಜನರಲ್ ಮ್ಯಾನೇಜರ್ ಹಾಗೂ ಎಚ್‌ಎಸ್‌ಬಿಸಿ ಇಂಡಿಯಾ ಭಾರತದ ಮುಖ್ಯಸ್ಥೆ), ವಿಜಯಲಕ್ಷ್ಮಿ ಆರ್ ಐಯ್ಯರ್ (ಬ್ಯಾಂಕ್‌ ಆಫ್‌ ಇಂಡಿಯಾದ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ), ಶುಭಲಕ್ಷ್ಮಿ ಪನ್ಸೆ (ಅಲಹಾಬಾದ್ ಬ್ಯಾಂಕ್ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ) , ಅರ್ಚನಾ ಭಾರ್ಗವ  (ಸಿಎಂಡಿ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ) ಹಾಗೂ ಕಾಕು ನಖಾಟೆ (ಅಧ್ಯಕ್ಷೆ ಹಾಗೂ  ಬ್ಯಾಂಕ್ ಆಫ್ ಅಮೆರಿಕ ಭಾರತದ ಮುಖ್ಯಸ್ಥೆ). ಈ ಪೈಕಿ ಚಂದಾ ಕೊಚ್ಚರ್, ನೈನಾ ಲಾಲ್ ಕಿದ್ವಾಯಿ  ಹಾಗೂ ಶಿಖಾ ಶರ್ಮ ಅವರು, ‘ಫಾರ್ಚ್ಯೂನ್ ನಿಯತಕಾಲಿಕ ಪಟ್ಟಿ ಮಾಡಿರುವ ವಿಶ್ವದ ಪ್ರಭಾವಿ ಉದ್ಯಮಿ ಮಹಿಳೆಯರ ಪಟ್ಟಿಯಲ್ಲಿ ಈ ವರ್ಷ ಸ್ಥಾನ ಪಡೆದಿದ್ದಾರೆಂಬುದು ಈಗ ಸುದ್ದಿ ಆಗಿರುವುದು ಬ್ಯಾಂಕಿಂಗ್‌ ವಲಯದ ಮಹಿಳೆಯರ ಸಾಧನೆಗೆ ಮತ್ತೊಂದು ಹೊಸ­ಗರಿ ಸೇರಿದಂತಾಗಿದೆ.

ವಾಸ್ತವವಾಗಿ ತೊಂಬತ್ತರ ದಶಕದಲ್ಲಿಯೇ  ಬ್ಯಾಂಕಿಂಗ್‌ ವಲಯದಲ್ಲಿ ಮಹಿಳೆಯರು ಉನ್ನತ ಅಧಿಕಾರ ಹುದ್ದೆಗಳಿಗೇರುವ ಪ್ರಕ್ರಿಯೆ ಆರಂಭವಾಯಿತು. ಉನ್ನತ ಹುದ್ದೆಗಳಿಂದ ಮಹಿಳೆ­ಯರನ್ನು ದೂರ ಇರಿಸುವ ಪುರುಷ ಪ್ರಧಾನ ಪೂರ್ವಗ್ರಹಗಳ ಗಾಜಿನ ಛಾವಣಿ­ಯನ್ನು ಭೇದಿಸುವಲ್ಲಿ ಸಮರ್ಥರಾಗಿದ್ದ ಈ ಮಹಿಳೆಯರು ವೃತ್ತಿಪರ ಸಾಧನೆಗಳ ಮಾದರಿ-­ಗಳನ್ನು ಸೃಷ್ಟಿಸಿದ್ದರು.

1996ರಲ್ಲಿ ಎಕ್ಸ್‌ಪೋರ್ಟ್ – ಇಂಪೋರ್ಟ್ ಬ್ಯಾಂಕ್ (ಎಕ್ಸಿಂಬ್ಯಾಂಕ್)ನ ಅಧ್ಯಕ್ಷೆ­ಯಾಗಿ ತರ್ಜನಿ ವಕೀಲ್ ಅಧಿಕಾರ ವಹಿಸಿ­ಕೊಂಡರು.  ಆ ಮೂಲಕ ಭಾರತದ ದೊಡ್ಡ­ದೊಂದು ಬ್ಯಾಂಕ್‌ನ ಉನ್ನತ ಹುದ್ದೆ­ಗೇರಿದ ಮೊದಲ ಮಹಿಳೆ ಎಂಬ ಖ್ಯಾತಿ ಅವರ­ದಾಯಿತು.

ನಾಲ್ಕು ವರ್ಷಗಳ ನಂತರ 2000 ಜೂನ್ ನಲ್ಲಿ   ರಂಜನಾ ಕುಮಾರ್ ಅವರು ಇಂಡಿಯನ್‌ ಬ್ಯಾಂಕ್‌ನ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿಯಾದರು. ನಷ್ಟದಲ್ಲಿದ್ದ ಈ ಬ್ಯಾಂಕ್ಅನ್ನು ಚೇತರಿಕೆಯ ಹಾದಿಗೆ ಮರಳಿ ತರುವಲ್ಲಿ ಅವರ ಪಾತ್ರ ಬಹು ಮುಖ್ಯವಾದು­ದಾಗಿತ್ತು. ನಂತರ ರಂಜನಾ ಕುಮಾರ್ ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್)ನಲ್ಲೂ ಕಾರ್ಯ ನಿರ್ವಹಿಸಿದ್ದರು.

ಉನ್ನತ ಅಧಿಕಾರ ಸ್ಥಾನಗಳಲ್ಲಿ ಮಹಿಳೆ­ಯರನ್ನು ಹೊಂದಿದ ಸಂಸ್ಥೆಗಳು  ಸಂಘಟನಾ­ತ್ಮಕವಾಗಿ ಹಾಗೂ ಹಣಕಾಸು  ನಿರ್ವಹಣೆ­ಯಲ್ಲಿ ಉತ್ತಮ ಸಾಧನೆ ಮಾಡಿರುವುದು ಸಾಬೀತಾಗಿದೆ. 1806ರಲ್ಲಿ ಆರಂಭವಾದ ಎಸ್ ಬಿಐ ರಾಷ್ಟ್ರದಾದ್ಯಂತ 15,000 ಶಾಖೆಗಳನ್ನು ಹೊಂದಿದೆ.

ಜಾಗತಿಕವಾಗಿ ಹೇಳುವುದಾದರೆ   ಎಸ್‌ಬಿಐ 66ನೇ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐನ ಎರಡು ಲಕ್ಷ ನೌಕರರ ಪೈಕಿ ಮಹಿಳೆಯರ ಪ್ರಮಾಣ ಕೇವಲ 40,000. ಇಷ್ಟೊಂದು ಭಾರಿ ಪ್ರಮಾಣದ ಅನುಪಾತದ ಅಂತರವನ್ನು ತಗ್ಗಿಸುವ ಹೊಣೆ ನೂತನ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರ ಮೇಲಿದೆ.

ಬ್ಯಾಂಕಿಂಗ್ ವಲಯಕ್ಕೆ ಸೇರುತ್ತಿರುವ ಮಹಿಳೆ­ಯರ ಸಂಖ್ಯೆ ನಿಧಾನಕ್ಕೆ ಏರಿಕೆ ಆಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಭಾರತೀಯ ವಾಣಿಜ್ಯೋದ್ಯಮ ಒಕ್ಕೂಟದ ಮುಖ್ಯಸ್ಥೆಯಾಗಿಯೂ ಕಾರ್ಯ ನಿರ್ವಹಿಸು­ತ್ತಿರುವ ಎಚ್‌ಎಸ್ ಬಿಸಿ ಇಂಡಿಯಾದ ನೈನಾ ಲಾಲ್ ಕಿದ್ವಾಯಿ ಅವರ ಪ್ರಕಾರ, ಬ್ಯಾಂಕಿಂಗ್ ವಲಯದ ಹೊಸ  ಉದ್ಯೋಗಿಗಳಲ್ಲಿ ಶೇ 40ರಿಂದ 59ರಷ್ಟು ಮಂದಿ ಮಹಿಳೆ­ಯರಿದ್ದಾರೆ.

ಆದರೆ ಹಾಗೆಯೇ  ಉದ್ಯೋಗ ಬಿಡುವ ಮಹಿಳೆಯರ  ಸಂಖ್ಯೆಯೂ ಹೆಚ್ಚಿರು­ವುದನ್ನು ಮರೆಯುವಂತಿಲ್ಲ.  ಇದಕ್ಕೆ ಕಾರಣ ಕುಟುಂಬ ಹಾಗೂ ಉದ್ಯೋಗದ ದ್ವಿಮುಖ ಹೊರೆ ಹೊರಬೇಕಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಒತ್ತಡ.  ಕುಟುಂಬದ ಬೆಂಬಲ ವ್ಯವಸ್ಥೆ ಇಲ್ಲದಾಗ  ಮಕ್ಕಳನ್ನು ನೋಡಿಕೊಳ್ಳಲು ವೃತ್ತಿಜೀವನ ತ್ಯಾಗ ಮಾಡುವುದು ಮಹಿಳಾ ಉದ್ಯೋಗಿಗಳಿಗೆ ಅನಿವಾರ್ಯ ಎನ್ನಿಸುವ ಸ್ಥಿತಿ ಸಮಾಜದಲ್ಲಿದೆ.

ಇದಕ್ಕಾಗಿಯೇ ಮಹಿಳಾ ಉದ್ಯೋಗಿಗಳಿಗೆ ಎರಡು ವರ್ಷ ಸಬಾಟಿಕಲ್ (ವೇತನ ರಹಿತ ರಜೆ) ನೀಡಲು  ಬ್ಯಾಂಕ್ ಗಳು ಈಗ ಮುಂದಾಗಿವೆ. ಈ ರಜೆಯನ್ನು ಒಂದೇ ಬಾರಿಗೆ ಅಥವಾ ಹಂತಹಂತವಾಗಿ ತೆಗೆದು ಕೊಳ್ಳಲು ಅವಕಾಶವಿದೆ.ಕೆಲವು ವರ್ಷಗಳ ಹಿಂದೆ  ಸರ್ಕಾರಿ ಕ್ಷೇತ್ರದ ಬ್ಯಾಂಕ್ ಗಳ ಮಾನವ ಸಂಪನ್ಮೂಲ  ಆಯಾಮಗಳ ಅಧ್ಯಯನ ನಡೆಸಿದ್ದ ಬ್ಯಾಂಕ್ ಆಫ್ ಬರೋಡಾದ ಮಾಜಿ ಮುಖ್ಯಸ್ಥ  ಎ.ಕೆ. ಖಾಂಡೇಲ್ ವಾಲ್  ಸಮಿತಿ ಶಿಫಾರಸುಗಳ ಅನ್ವಯ ಈ ಕ್ರಮ  ಕೈಗೊಳ್ಳ ಲಾಗಿದೆ. ಬದಲಾದ ಉದ್ಯೋಗ  ಪರಿಸರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕಾದ  ಅಗತ್ಯವಿದೆ.

ಹೀಗಾಗಿಯೇ   ಗಂಡಹೆಂಡಿರು ಜೊತೆಗಿರಲು ಅನುಕೂಲವಾಗುವಂತಹ ಸುಲಭ ವರ್ಗಾವಣೆ ನಿಯಮಗಳನ್ನು ಜಾರಿಗೊಳಿಸುವ ವಿಚಾರ ಕುರಿತು ಎಸ್ ಬಿ ಐ ನೂತನ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ತಮ್ಮ ಮೊದಲ ಪತ್ರಿಕಾ ಗೋಷ್ಠಿಯಲ್ಲೇ ಹೇಳಿದ್ದಾರೆ.

ಮಹಿಳೆಯರು ಕೆಲಸ ಬಿಡುವ ಪ್ರವೃತ್ತಿ ಹೊಸದೇನಲ್ಲ. ಆದರೆ ಇತ್ತೀಚಿನ ರಾಷ್ಟ್ರೀಯ ಮಾದರಿ ಸಮೀಕ್ಷೆ ಅಂಕಿ ಸಂಖ್ಯೆಯೂ  ಈ ಪ್ರವೃತ್ತಿಯನ್ನು ಸಂಕೇತಿಸುತ್ತಿರುವುದು ಆತಂಕಕಾರಿ. 2009–10ರಲ್ಲಿ ಉದ್ಯೋಗ ಮಾಡುವ ವಯಸ್ಸಿನ  ಕೇವಲ ಶೇ 23ರಷ್ಟು ಮಹಿಳೆಯರು  ಮಾತ್ರ ಕೆಲಸದಲ್ಲಿದ್ದರು. ಇದು  2004–05ರಲ್ಲಿದ್ದ ಶೇ 29.4 ಪ್ರಮಾಣಕ್ಕಿಂತ ಕಡಿಮೆ.
ಮಹಿಳೆಯರು ಶಿಕ್ಷಣ ಪಡೆದುಕೊಳ್ಳುತ್ತಿರುವ ಪ್ರಮಾಣ ಈಗ ಹೆಚ್ಚಾಗುತ್ತಿದೆ ನಿಜ.

ಆರ್ಥಿಕ ಬೆಳವಣಿಗೆಯೂ ಗರಿಗೆದರಿದೆ. ಅವಕಾಶಗಳೂ ಹೆಚ್ಚಾಗಿವೆ. ಹೀಗಾದಾಗ  ಉದ್ಯೋಗ ರಂಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯೂ ಹೆಚ್ಚಾಗ ಬೇಕಿತ್ತಲ್ಲವೆ?  ಆದರೆ ವ್ಯತಿರಿಕ್ತ ರೀತಿಯ ಪ್ರವೃತ್ತಿ ಗೋಚರಿಸುತ್ತಿರುವುದು ಅಚ್ಚರಿದಾಯಕ.
ಮಹಿಳೆಯರು ಉನ್ನತ ಶಿಕ್ಷಣ ಮುಂದುವರಿ­ಸಬಯಸುವುದು ಉದ್ಯೋಗ ಕ್ಷೇತ್ರದಲ್ಲಿನ ಪಾಲ್ಗೊಳ್ಳುವಿಕೆ ಪ್ರಮಾಣ ಕಡಿಮೆಯಾಗಲು ಒಂದು ಕಾರಣ ಎಂಬುದು ಒಂದು ವಿಶ್ಲೇಷಣೆ.

  ಜೊತೆಗೆ ಕುಟುಂಬದ ವರಮಾನ ಹೆಚ್ಚಾಗಿ ಸಾಮಾಜಿಕವಾಗಿ ಮೇಲುಸ್ತರಕ್ಕೇರುತ್ತಿದ್ದಂತೆ ಮಹಿಳೆಯರು ಮನೆಗೇ ಸೀಮಿತಗೊಳ್ಳುವ ಪ್ರವೃತ್ತಿ ಎದ್ದು ಕಾಣುತ್ತದೆ ಎಂಬುದು ಮತ್ತೊಂದು ವಿಶ್ಲೇಷಣೆ. ಇಷ್ಟಲ್ಲದೆ ಕೃಷಿ ಯಾಂತ್ರೀಕರಣ, ತಾಂತ್ರಿಕ ಕೌಶಲದ ಕೊರತೆ ಇತ್ಯಾದಿ ಇನ್ನಿತರ ಅಂಶಗಳೂ ಮಹಿಳೆ ಉದ್ಯೋಗ ಅವಕಾಶಗಳಿಂದ ವಂಚಿತಳಾಗಲು ಕಾರಣವಾಗುತ್ತಿವೆ.

ಸರ್ಕಾರದ್ದೇ ಅಂಕಿ ಸಂಖ್ಯೆಯನ್ನು ಗಮನಿಸಿ. 1987ರಿಂದ  2009–10ರವರೆಗೆ  ಭಾರತದ ಉದ್ಯೋಗ ರಂಗದಲ್ಲಿ ಪದವೀಧರ ಹಾಗೂ ಸ್ನಾತಕೋತ್ತರ ಪದವೀಧರ ಮಹಿಳೆಯರ ಸಂಖ್ಯೆ ಸಣ್ಣ ಊರುಗಳಲ್ಲಿ  ಶೇ 63ರಿಂದ ಶೇ 32.4 ಹಾಗೂ ನಗರ ಪ್ರದೇಶಗಳಲ್ಲಿ ಶೇ 61.6ರಿಂದ ಶೇ 26ಕ್ಕೆ ಇಳಿಮುಖವಾಗಿದೆ.

ಬಹುಶಃ ಮಕ್ಕಳ ಲಾಲನೆ ಪಾಲನೆಯೇ ಇಲ್ಲಿ ದೊಡ್ಡ ಪ್ರಶ್ನೆ. ಮಹಿಳೆಯರು ಉದ್ಯೋಗಗಳನ್ನು ತೊರೆಯಲು ಇದು ಮುಖ್ಯ ಕಾರಣ. ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ಸರಿಯಾದ ಅವಕಾಶ ಇಲ್ಲವಾದಲ್ಲಿ ಮಾನವ ಸಂಪನ್ಮೂಲವನ್ನು ಪೂರ್ಣವಾಗಿ ಬಳಸಿಕೊಳ್ಳಲಾಗದ ಮಿತಿ ಸೃಷ್ಟಿಯಾಗುತ್ತದೆ.  ಇದು ಆರ್ಥಿಕ ಬೆಳವಣಿಗೆಯನ್ನು ತಗ್ಗಿಸುತ್ತದೆ.

ಸರ್ಕಾರಿ ಕ್ಷೇತ್ರದ ಬ್ಯಾಂಕ್ ಗಳಿಗೆ ಹೋಲಿಸಿದಲ್ಲಿ ಖಾಸಗಿ ಬ್ಯಾಂಕ್‌ಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಪ್ರಮಾಣ ಹೆಚ್ಚಿದೆ.  ರಾಷ್ಟ್ರದ ಅತಿ ದೊಡ್ಡ ಖಾಸಗಿ ಬ್ಯಾಂಕ್  ಐಸಿಐಸಿಐ  ನಲ್ಲಿ ಮಹಿಳೆಯರ ಪ್ರಮಾಣ  ಒಟ್ಟು ಸಿಬ್ಬಂದಿ ಬಲದ ಮೂರನೇ ಒಂದರಷ್ಟಿದೆ.

ಅಷ್ಟೇ ಅಲ್ಲ  ಲಲಿತಾ ಗುಪ್ತೆ, ಕಲ್ಪನಾ ಮೋರ್ಪಾರಿಯಾ, ಚಂದಾ ಕೊಚ್ಚರ್, ಶಿಖಾ ಶರ್ಮಾ ಹಾಗೂ ರೇಣುಕಾ ರಾಮನಾಥ್  ರಂತಹ  ಮಹಿಳಾ  ನಾಯಕಿಯರು ರೂಪು ಗೊಂಡಿದ್ದು ಕೂಡ ಇದೇ ಸಂಸ್ಥೆಯಲ್ಲಿಯೇ. ಆದರೆ ಭಾರತದ  ಒಟ್ಟು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಮಹಿಳಾ ಸಿಬ್ಬಂದಿ ಬಲ ಶೇ 20ಕ್ಕಿಂತ ಕಡಿಮೆಯೇ ಇದೆ. ಗ್ರಾಮೀಣ ಹಾಗೂ  ತಾಲ್ಲೂಕು ಪ್ರದೇಶಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಇದೆ. 

ಇಂತಹ ಸನ್ನಿವೇಶದಲ್ಲಿ ಮುಂದಿನ ನವೆಂಬರ್ ತಿಂಗಳಿನಲ್ಲಿ  ಭಾರತದ ಮೊದಲ ಮಹಿಳಾ ಬ್ಯಾಂಕ್ ಗಳು ದೇಶದ ಎಂಟು ನಗರಗಳಲ್ಲಿ ಮೊದಲ ಹಂತದಲ್ಲಿ ಆರಂಭ ವಾಗಲಿವೆ. ಉಷಾ ಅನಂತ ಸುಬ್ರಮಣಿಯನ್ ಈ ‘ಮಹಿಳಾ ಬ್ಯಾಂಕ್’ ನೇತೃತ್ವ ವಹಿಸಲಿದ್ದಾರೆ ಎಂಬುದು ಈಗಾಗಲೇ  ಸುದ್ದಿಯಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ದೆಹಲಿ ವಿದ್ಯಾರ್ಥಿನಿ  ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ನಂತರ ರಾಷ್ಟ್ರದಲ್ಲಿ ಮಹಿಳಾ ಸುರಕ್ಷತೆ ಹೆಚ್ಚಿಸುವುದಕ್ಕಾಗಿ ಕೈಗೊಂಡ ಕ್ರಮಗಳ ಅಂಗವಾಗಿ  ಈ ವರ್ಷದ ಬಜೆಟ್ ನಲ್ಲಿ  ಕೇಂದ್ರ ಸರ್ಕಾರ ಈ  ಮಹಿಳಾ ಬ್ಯಾಂಕ್‌ ಸ್ಥಾಪನೆ ಯೋಜನೆಯನ್ನು ಪ್ರಕಟಿಸಿತ್ತು.

ಬ್ಯಾಂಕಿಂಗ್‌ ಎಂಬುದು ವಿಶ್ವಾಸದ ಬಾಂಧವ್ಯವನ್ನು ಕಟ್ಟುವಂತಹದ್ದು.  ಇದು ಮಹಿಳೆಯ ಸಹಜ ಗುಣ. ಸಮಾನ ಅವಕಾಶ, ಅರ್ಹತೆ ಆಧರಿಸಿದ ವಾತಾವರಣದಲ್ಲಿ ಮಹಿಳೆಯಾಗಿರುವುದೇ  ಮಹಿಳೆಗೆ  ಮಿತಿಯಾಗಬಾರದು. ಇದಕ್ಕಾಗಿ ನಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಾತಾವರಣ ಬದಲಾಗುವುದು ಮುಖ್ಯ.

ಕೆಲಸದ ಸ್ಥಳದಲ್ಲಿ ಮಹಿಳೆಯರ ಪ್ರಾತಿನಿಧ್ಯ  ಕಡಿಮೆ ಇದ್ದಾಗ  ಶೇ 50ರಷ್ಟು ಪ್ರತಿಭೆಯನ್ನು ನಾವು ಕಳೆದು ಕೊಳ್ಳುತ್ತೇವೆ ಎಂಬುದು  ಟಾಟಾ  ಸನ್ಸ್ ಅಧ್ಯಕ್ಷ  ಸೈರನ್‌ ಮಿಸ್ತ್ರಿ ಅವರ ಮಾತುಗಳು. ಟಾಟಾ ಗ್ಲೋಬಲ್ ಬೆವರೇಜಸ್‌ ಲಿಮಿಟೆಡ್‌ ವಾರ್ಷಿಕ ವರದಿ ಯಲ್ಲಿ  ಈ ಮಾತುಗಳನ್ನು ಅಧ್ಯಕ್ಷರ ಸಂದೇಶ ದಲ್ಲಿ ಹೇಳಿರುವ ಅವರು ಕಾರ್ಪೊರೆಟ್ ಪ್ರಪಂಚದಲ್ಲಿ ಪುರುಷ, ಮಹಿಳೆಯರ ಪ್ರಾತಿ ನಿಧ್ಯದ (ಜೆಂಡರ್ ಡೈವರ್ಸಿಟಿ)  ಮಹತ್ವವನ್ನು ಪ್ರತಿಪಾದಿಸಿದ್ದಾರೆ.  ಮಹಿಳಾ ಉದ್ಯೋಗಿ ಗಳನ್ನು ಬೆಳೆಸುವ ದಿಸೆಯಲ್ಲಿ ಕಂಪೆನಿಗಳ ಹೊಣೆಗಾರಿಕೆಯನ್ನು ನೆನಪಿಸಿ ಚರ್ಚೆಗೆ ನಾಂದಿ ಹಾಡಿರುವುದು  ಈ ಸಂದರ್ಭದಲ್ಲಿ ಪ್ರಸ್ತುತ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT