ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್‌ ಷೇರು: ವಹಿವಾಟು ಒತ್ತಡ

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿನ ಬದಲಾ­ವಣೆಗಳು ಜನಸಾಮಾನ್ಯರ ಚಿಂತ­ನೆಗಳಿಗೆ ವಿಭಿನ್ನವಾಗಿರುತ್ತ­ವೆಂಬು­ದು ಇತ್ತೀಚಿನ ದಿನಗಳ ಆಗು­ಹೋಗು­ಗಳು ಜೀವಂತ ಸಾಕ್ಷಿಯಾಗಿವೆ. ಚಾಲ್ತಿ ಖಾತೆಯ ಕೊರತೆ, ಕೈಗಾರಿಕಾ ಉತ್ಪಾ­ದನೆ­ಯಲ್ಲಿನ ಹಿಂಜರಿತ, ರೂಪಾಯಿಯ ದಾಖಲೆಯ ಅಪಮೌಲ್ಯ ಮುಂತಾದ ನಕಾರಾತ್ಮಕ ಅಂಶಗಳನ್ನು ತುಂಬಿ ದೇಶಕ್ಕೆ ಭವಿಷ್ಯವೇ ಇಲ್ಲವೆಂಬ ರೀತಿಯಲ್ಲಿ ಅಗ್ರಮಾನ್ಯ ಕಂಪನಿಗಳ ಷೇರುಗಳ ದರಗಳನ್ನು ಅನಿರೀಕ್ಷಿತ ಮಟ್ಟಕ್ಕೆ ಕುಸಿಯುವಂತೆ ಮಾಡಿದ್ದ ವಿತ್ತೀಯ ಸಂಸ್ಥೆಗಳ ಚಟು­ವಟಿಕೆಯು ಪೇಟೆಗಳನ್ನು ಕಳಾಹೀನಮ­ಯವಾಗಿಸಿತ್ತು.

ಆದರೆ ಭಾರತೀಯ ರಿಸರ್ವ್ ಬ್ಯಾಂಕ್‌ ಗವರ್ನರ್ ಆಗಿ ರಘುರಾಂ ರಾಜನ್‌ ಅಧಿಕಾರ ವಹಿಸಿಕೊಂಡ ದಿನದಿಂದ ಸುಮಾರು ಒಂದೂವರೆ ಸಾವಿರ ಅಂಶಗಳಷ್ಟು ಏರಿಕೆಯನ್ನು ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಕಂಡಿದೆ. ಮುಂದಿನ ಸೆ. 20 ರಂದು ಆರ್‌.ಬಿ.ಐ. ತನ್ನ ಸಾಲ ನೀತಿ ಪ್ರಕಟಿಸಲಿದೆ. ಈ ಏರಿಕೆಯ ಹಿಂದೆ ವಿದೇಶ ವಿತ್ತೀಯ ಸಂಸ್ಥೆಗಳು ಸತತವಾದ ಕೊಳ್ಳುವಿಕೆಯೂ ಮುಖ್ಯ ಕಾರಣ­ವಾಗಿದೆ. ಕಂಪನಿಗಳ ಅರ್ಹತೆ, ಗುಣಮಟ್ಟ, ಮೀರಿ ಬೆಲೆಗಳು ಕುಸಿದಿದ್ದು, ಅಗ್ರಮಾನ್ಯ ಕಂಪನಿಗಳಲ್ಲಿ ಅನೇಕವು ವಾರ್ಷಿಕ ಕನಿಷ್ಠಮಟ್ಟ ತಲುಪಿದ್ದವು.

ವಿಶೇಷವಾಗಿ ಬ್ಯಾಂಕಿಂಗ್ ವಲಯವು ವಸೂಲಾಗದ ಸಾಲಗಳ ಒತ್ತಡ, ರೂಪಾಯಿಯ ಅಪಮೌಲ್ಯಗಳ ಕಾರಣ ಆಳದ ಅರಿವಿಲ್ಲದೆ ಕುಸಿದಿದ್ದವು. ಹಿಂದಿನ ವರ್ಷದ ಲಾಭಾಂಶಗಳು ಮತ್ತು ಪೇಟೆಯ ದರಗಳಿಗೆ ಹೋಲಿಸಿದಾಗ ಉತ್ತಮ ಬ್ಯಾಂಕ್‌ಗಳ ತೆರಿಗೆ ರಹಿತ ಲಾಭಾಂಶವು ಬ್ಯಾಂಕ್‌ ಠೇವಣಿ ಬಡ್ಡಿ ದರಗಳನ್ನು ಮೀರಿಸುವಂತಿದ್ದವು.

ಈ ತಿಂಗಳ 3 ರಂದು ಹೆಚ್ಚಿನ ಕಂಪೆನಿಗಳು ವರ್ಷದ ಕನಿಷ್ಠ ಬೆಲೆಯನ್ನು ದಾಖಲಿಸಿ­ದ­ವಾದರೂ ನಂತರದ ಚೇತರಿಕೆ ಆಶ್ಚರ್ಯಕರವಾಗಿತ್ತು. ಓರಿಯಂಟಲ್‌ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಫೆಡರಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌, ಕರ್ನಾಟಕ ಬ್ಯಾಂಕ್‌, ಅಲಹಾಬಾದ್‌ ಬ್ಯಾಂಕ್‌, ದೆನಾ ಬ್ಯಾಂಕ್‌ಗಳು ಉತ್ಸಾಹ­ಭರಿತ ಏರಿಕೆಯನ್ನು ತ್ವರಿತಗತಿಯಲ್ಲಿ ಕಂಡು ಅವಕಾಶ ಒದಗಿದಾಗ ತ್ವರಿತ ನಿರ್ಧಾರದ ಅಗತ್ಯತೆಯನ್ನು ಎತ್ತಿ ತೋರಿದವು. ವೊಕಾರ್ಡ್ ಫಾರ್ಮ ಒಂದೇ ವಾರದಲ್ಲಿ `200ರ ಜಿಗಿತ ಕಂಡಿದೆ. ಸಾರ್ವಜನಿಕ ವಲಯದ ಕಂಪನಿಗಳು ಹೆಚ್ಚು ಬೇಡಿಕೆಯಲ್ಲಿದ್ದವು.

ವಾರದಲ್ಲಿ ಒಟ್ಟಾರೆ 462 ಅಂಶಗಳಷ್ಟು ಏರಿಕೆಯಿಂದ ಸಂವೇದಿ ಸೂಚ್ಯಂಕವು ಮಧ್ಯಮ ಶ್ರೇಣಿಯ ಸೂಚ್ಯಂಕವನ್ನು 178 ಅಂಶಗಳಷ್ಟು, ಕೆಳಮಧ್ಯಮ ಶ್ರೇಣಿ ಸೂಚ್ಯಂಕವನ್ನು 165 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿತು. ವಿದೇಶ ವಿತ್ತೀಯ ಸಂಸ್ಥೆಗಳು ಸುಮಾರು `3,998 ಕೋಟಿ ಹೂಡಿಕೆ ಮಾಡಿದರೆ ಸ್ವದೇಶ ವಿತ್ತೀಯ ಸಂಸ್ಥೆಗಳು ` 2,331 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಷೇರುಪೇಟೆ ಬಂಡವಾಳ ಮೌಲ್ಯವು ಹಿಂದಿನ ವಾರದ `62.35 ಲಕ್ಷ ಕೋಟಿಯಿಂದ `64.07 ಲಕ್ಷ  ಕೋಟಿಗೆ ಏರಿಕೆ ಕಂಡಿತು.
ಹೊಸ ಷೇರಿನ ವಿಚಾರ

4ಟೈಗರ್‌ ಲಾಜಿಸ್ಟಿಕ್ಸ್ (ಇಂಡಿಯಾ) ಲಿಮಿಟೆಡ್‌ ಕಂಪನಿಯು ಪ್ರತಿ ಷೇರಿಗೆ `66/– ರಂತೆ ಇತ್ತೀಚೆಗೆ ಸಾರ್ವಜನಿಕ ವಿತರಣೆ ಮಾಡಿದೆ ಎಸ್‌ಎಂಇ ವಿಭಾಗದ ಈ ಕಂಪನಿಯು 12 ರಿಂದ ಎಂಟಿ ವಿಭಾ­ಗದಲ್ಲಿ 2000 ಷೇರುಗಳ ವಹಿವಾಟು ಗುಚ್ಚದೊಂದಿಗೆ ವಹಿವಾಟಿಗೆ ಬಿಡುಗಡೆಯಾಗಿದೆ.

ಲಾಭಾಂಶ ವಿಚಾರ
ಮೊನ್ನೆಟ್‌ ಇಸ್ಪಾಟ್‌ ಎನರ್ಜಿ ಶೇ 15, ಗ್ರೀವ್‌್ಸ ಕಾಟನ್‌ ಶೇ 15 (ಮು.ಬೆ. `2), ಇಂಡಕ್ಟೊ ಸ್ಟೀಲ್‌ ಶೇ 35, ಹರ್ಯಾಣ ಶಿಪ್‌ ಬ್ಯುಲ್ಡರ್ಸ್ ಶೇ 35, ಪೆಟ್ರೊ ಗ್ಲೋಬಲ್‌ ಲಿ. ಈ ಹಿಂದೆ ಪ್ರಕಟಿಸಿದ್ದ ಶೇ 20ರ ಲಾಭಾಂಶ ಹಿಂದೆ ಪಡೆದಿದೆ.

ಹಕ್ಕಿನ ಷೇರಿನ ವಿಚಾರ
-ಯುನಿಫಾಸ್‌ ಎಂಟರ್‌ಪ್ರೈಸಸ್‌ ಲಿ. ಕಂಪನಿ ರೂ. 17 ರಂತೆ ವಿತರಿಸಲಿರುವ ರೂ. 2ರ ಮುಖಬೆಲೆಯ ಹಕ್ಕಿನ ಷೇರಿಗೆ 19ನೇ ಸೆಪ್ಟೆಂಬರ್‌ ನಿಗದಿತ ದಿನವಾಗಿದೆ.
-ಐಎಲ್‌ಎಫ್‌ಎಸ್‌ ಟ್ರಾನ್ಸ್ ಪೊರ್ಟೇ­ಷನ್‌ ಕಂಪನಿಯು 17 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.

ಮುಖಬೆಲೆ ಸೀಳಿಕೆ ವಿಚಾರ
ಫೆಡರಲ್‌ ಬ್ಯಾಂಕ್‌ ತನ್ನ ಷೇರಿನ ಮುಖಬೆಲೆಯನ್ನು `10 ರಿಂದ `2ಕ್ಕೆ ಸೀಳಲಿದೆ.

ಆಫರ್‌ ಫಾರ್‌ ಸೇಲ್‌
4ಓರಿಯಂಟ್‌ ಪ್ರೆಸ್‌ ಲಿಮಿಟೆಡ್‌ ಕಂಪೆನಿಯ ಪ್ರವರ್ತಕರು ತಮ್ಮಲ್ಲಿರುವ 12,17,578 ಷೇರುಗಳನ್ನು ಷೇರು ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿ ಆಫರ್‌ ಫಾರ್‌ ಸೇಲ್‌ ಮೂಲಕ ಮಾರಾಟ ಮಾಡಲು `60/ರ ಕನಿಷ್ಠ ಬೆಲೆಯನ್ನು ನಿಗದಿಪಡಿಸಿದ್ದಾರೆ. ಈ ವಿತರಣೆಯನ್ನು 12 ರಂದು ಮಾಡಲಾಗಿದೆ.

4ಪ್ರಣವಾದಿತ್ಯ ಸ್ಪನ್ನಿಂಗ್‌ ಮಿಲ್ಸ್  ಲಿ. ಕಂಪನಿಯ ಪ್ರವರ್ತಕರು 12 ರಂದು `10ರ ಮುಖಬೆಲೆಯ 37 ಲಕ್ಷ ಷೇರುಗಳನ್ನು ಪ್ರತಿ ಷೇರಿಗೆ `4.01 ರಂತೆ ಷೇರು ವಿನಿಮಯ ಕೇಂದ್ರದ ಆಫರ್‌ ಫಾರ್‌ ಸೇಲ್‌ ಗವಾಕ್ಷಿಯ ಮೂಲಕ ವಿತರಿಸಿದೆ.

ಏರಿಕೆ ಚಮತ್ಕಾರ
ಮಂಗಳವಾರದ 727 ಪಾಯಿಂಟು­ಗಳ ಏರಿಕೆ ಹಿಂದೆ ಘಟಾನುಘಟಿ ಕಂಪನಿ ಐಟಿಸಿ `19  ಏರಿಕೆಯಿಂದ 125 ಅಂಶಗಳಷ್ಟು, ಎಚ್‌ಡಿಎಫ್‌ಸಿ 85 ಅಂಶ, ಇನ್ಫೊಸಿಸ್‌ 74 ಅಂಶ, ಟಾಟಾ ಮೋಟಾರ್ಸ್ 69 ಅಂಶ, ಹಿಂದೂಸ್ಥಾನ್‌ ಯುನಿಲಿವರ್‌ 47 ಅಂಶ, ಏರಿಕೆಯಿಂದ ಈ 7 ಕಂಪೆನಿಗಳು 500 ಅಂಶಗಳಿಗೂ ಹೆಚ್ಚಿನ ಏರಿಕೆಗೆ ತಮ್ಮ ಕೊಡುಗೆ ನೀಡಿವೆ.

ಇಂಡೆಕ್ಸ್‌ ಬದಲಾವಣೆ
ಮಧ್ಯಮಶ್ರೇಣಿ ಸೂಚ್ಯಂಕದಡಿ ವಹಿವಾಟಾಗುತ್ತಿರುವ ಗ್ರೀವ್ಸ್ ಕಾಟನ್‌, ಅನಂತರಾಜ್‌ ಇಂಡಸ್ಟ್ರೀಸ್‌, ಹಿಂದೂ­ಸ್ಥಾನ್‌ ನ್ಯಾಶನಲ್‌ ಗ್ಲಾಸ್‌ ಅಂಡ್‌ ಇಂಡಸ್ಟ್ರೀಸ್‌, ಯುನಿಕೆಂ ಲ್ಯಾಬೊರೆ­ಟರೀಸ್‌, ಎಬಿಜಿ ಶಿಪ್‌ಯಾರ್ಡ್, ರೇಮಂಡ್‌, ಪಿಟಿಸಿ ಇಂಡಿಯಾ, ಸ್ಪೈಸ್‌­ಜೆಟ್‌, ರೇಡಿಕೊ ಖೈತಾನ್‌, ಪಾರ್ಶ್ವ­ನಾಥ್‌ ಡೆವೆಲಪರ್ಸ್, ಸದ್ಬವ್‌ ಎಂಜಿನಿಯರಿಂಗ್‌, ಟಾಟಾ ಟೆಲಿಸರ್ವಿ­ಸಸ್‌ (ಮಹಾರಾಷ್ಟ್ರ), ಇರೋಸ್‌ ಇಂಟರ್‌, ನ್ಯಾಶನಲ್‌, ಶ್ರೀ ರೇಣುಕಾ ಶುಗರ್ಸ್, ಬಾಂಬೆ ಡೈಯಿಂಗ್‌, ಚೆನ್ನೈ ಪೆಟ್ರೊ, ಮಣಪುರಂ ಫೈನಾನ್ಸ್, ಸಿಂಟೆಕ್ಸ್ ಇಂಡಸ್ಟ್ರೀಸ್, ಕಂಪನಿಗಳನ್ನು ಅವುಗಳ ಬಂಡವಾಳೀಕರಣ ಮೌಲ್ಯವು ಕುಸಿದ ಕಾರಣ ಸ್ಮಾಲ್ ಕ್ಯಾಪ್‌
ಇಂಡೆ­ಕ್ಸ್‌ಗೆ ವರ್ಗಾಯಿಸಲಾಗಿದೆ.

ಇವುಗಳೊಂ­ದಿಗೆ ಪೆಂಟಲೂನ್‌ ಫ್ಯಾಶನ್, ಮಿಡ್‌­ಲ್ಯಾಂಡ್‌ ಪೊಲಿಮರ್ಸ್, ಜಿಂದಾಲ್‌ ಪೊಲಿ ಫಿಲಂಸ್‌, ಸಿಸಿಎಲ್‌ ಇಂಟರ್‌­ನ್ಯಾಶನಲ್‌, ಮೀಡಿಯಾ ಮ್ಯಾಡ್ರಿಕ್ಸ್‌ ವರ್ಲ್ಡವೈಡ್‌, ಆಪ್‌ಟೆಕ್‌, ಮುಂತಾದ­ವುಗಳನ್ನು ಸಹ ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ಗೆ 23 ರಿಂದ ಜಾರಿಯಾ­ಗುವಂತೆ ಬದಲಾಯಿ­ಸಲಾಗಿದೆ.

ಇಂಡೆಕ್ಸ್‌ಗೆ ಸೇರ್ಪಡೆ
ವೊಕಾರ್ಡ್, ರಿಲೈಯನ್ಸ್ ಕ್ಯಾಪಿ­ಟಲ್‌, ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ನ್ಯಾಶನಲ್‌ ಅಲ್ಯುಮಿ­ನಿಯಂ, ಜೆಎಸ್‌ಡಬ್ಲು ಎನರ್ಜಿ, ಇಂಡಿಯಾ ಬುಲ್‌ ಹೌಸಿಂಗ್‌ ಫೈನಾನ್ಸ್, ಹಿಂದೂಸ್ಥಾನ್‌ ಕಾಪರ್‌, ಎಂಆರ್‌ಪಿಎಲ್‌, ಜಸ್ಟ್ ಡಯಲ್‌, ವೆಸ್ಟ್ ಲೈಫ್‌ ಡೆವೆಲಪ್‌ಮೆಂಟ್‌, ರಸೋಯ ಪ್ರೋಟೀನ್ಸ್, ಫ್ಯೂಚರ್ ರೀಟೇಲ್‌, ಜೆಎಂ ಫೈನಾನ್ಶಿಯಲ್‌, ವರ್ಧ­ಮಾನ್‌ ಟೆಕ್ಸ್ ಟೈಲ್ಸ್ ಪಿ.ಐ. ಇಂಡಸ್ಟ್ರೀಸ್‌ಗಳನ್ನು 23 ರಿಂದ ಮಧ್ಯಮಶ್ರೇಣಿ ಸೂಚ್ಯಂಕದಲ್ಲಿ ಸೇರಿಸಲಾ­ಗುತ್ತದೆ.

ಇಂಡೆಕ್ಸ್ ನಿಂದ ಹೊರಕ್ಕೆ
ಕಂಪನಿಗಳಾದ ಬ್ಯಾಂಕೊ ಪ್ರಾಡಕ್ಟ್ಸ್ ಗುಡ್‌ರಿಕ್‌ ಗ್ರೂಪ್‌, ರಾಂಕಿ ಇನ್‌ಫ್ರಾಕ್ಚರ್‌, ಗೋದಾವರಿ ಪವರ್‌, ಎವರೆಸ್ಟ್ ಇಂಡಸ್ಟ್ರೀಸ್‌, ನ್ಯಾನಲ್‌ ಪೆರಾಕ್ಸೈಡ್‌, ಜಯಶ್ರೀ ಟೀ, ಪಟೇಲ್‌ ಎಂಜಿನಿಯರಿಂಗ್‌, ವೀನಸ್‌ ರೆಮೆಡಿಸ್‌, ಬಾಲಾಜಿ ಟೆಲಿ, ಶೇಷಸಾಯಿ ಪೇಪರ್ಸ್, ಫುಲ್‌ಫೋರ್ಡ್, ಏಶಿಯನ್‌ ಹೋಟೆಲ್‌, ಟೆಕ್‌ ಪ್ರೊಸಿಸ್ಟಮ್ಸ್, ಹನಂಗ್‌ಟಾಯ್ಸ್, ಲಿಬರ್ಟಿ ಫಾಸ್ಪೇಟ್‌ ಮುಂತಾದವು ಬೆಲೆ ಕುಸಿತದ ಕಾರಣ ಸ್ಮಾಲ್‌ ಕ್ಯಾಪ್‌ ಸೂಚ್ಯಂಕದಲ್ಲಿ 23 ರಿಂದ ಸ್ಥಾನ ಕಳೆದುಕೊಂಡಿವೆ.

ವಾರದ ವಿಶೇಷ
ಇತ್ತೀಚೆಗೆ ಸುವರ್ಣ ಮಹೋತ್ಸವ ಆಚರಿಸಿಕೊಂಡ ಬೆಂಗಳೂರು ಷೇರು ವಿನಿಮಯ ಕೇಂದ್ರದಲ್ಲಿ ಚಟುವಟಿಕೆ ನಡೆಯುತ್ತಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯ­ವಾಗಿದೆ.

ಈ ಕಾರಣ­ದಿಂದಾಗಿ ಬಿಜಿಎಸ್‌ಇ ಫೈನಾನ್ಶಿಯಲ್ಸ್ ಲಿ. ಹೆಸರಿನಲ್ಲಿ ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಮತ್ತು ಮುಂಬೈ ಸ್ಟಾಕ್‌ ಎಕ್‌್ಸಚೇಂಜ್‌ ಸದಸ್ಯತ್ವ ಪಡೆದು ತನ್ನ ಸದಸ್ಯರ ಕಾರ್ಯಪಡೆಯ ಮೂಲಕ ಹೂಡಿಕೆದಾರರ ಅಗತ್ಯಗಳನ್ನು ಪೂರೈ­ಸುತ್ತಿದೆ. ಈ ಮಧ್ಯೆ ಬೆಂಗಳೂರು ಷೇರು ವಿನಿಮಯ ಕೇಂದ್ರದ ಮಾನ್ಯತೆ ರದ್ದು­ಮಾಡಲು ಪೇಟೆಯ ನಿಯಂತ್ರಕರಿಗೆ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊ­ಳ್ಳುತ್ತಿರುವುದರ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಈಗಾಗಲೇ ಹೈದರಾ­ಬಾದ್‌ ಷೇರು ವಿನಿಮಯ ಕೇಂದ್ರವು ಮಾನ್ಯತೆ ರದ್ದುಮಾಡಲು ಅರ್ಜಿ ಸಲ್ಲಿಸಿದೆ.

ಪ್ರಾದೇಶಿಕ ಷೇರು ವಿನಿಮಯ ಕೇಂದ್ರಗಳು ಕಾರ್ಯಪ್ರವೃತ್ತರಾಗಿ, ಮಾನ್ಯತೆ ಉಳಿಸಿಕೊಳ್ಳಬೇಕಾದರೆ ಅವುಗಳು `100 ಕೋಟಿಯ ನೆಟ್‌ವರ್ಥ ಹೊಂದಿರಬೇಕೆಂಬ ನಿಯಮವನ್ನು ‘ಸೆಬಿ’ ಜಾರಿಗೊಳಿಸಿದೆ.

ಹಾಗೂ ವಾರ್ಷಿಕ `1,000 ಕೋಟಿ ವಹಿವಾಟು ನಡೆಸಬೇಕೆಂಬ ನಿಯಮವೂ ಇದೆ. ಈ ಕಾರಣಗಳು ಷೇರು ವಿನಿಮಯ ಕೇಂದ್ರದ ಮಾನ್ಯತೆ ಮುಂದುವರೆ­ಸಿಕೊಂಡು ಹೋಗುವುದು ಅಸಾಧ್ಯವಾ­ಗಿಸಿದೆ. ಈಗಾಗಲೇ ನಿಷ್ಕ್ರೀಯ­ಗೊಂಡಿರುವ ಅನೇಕ ಪ್ರಾದೇಶಿಕ ಷೇರು ವಿನಿಮಯ ಕೇಂದ್ರಗಳೂ ಇದೇ ಹಾದಿ ಹಿಡಿಯಬಹುದು. ಸ್ವಯಂಪ್ರೇರಿತವಾಗಿ ಮಾನ್ಯತೆ ರದ್ದುಗೊಳಿಸಿಕೊಳ್ಳಲು ಮುಂದಾದರೂ ಸಹ ಇದರ ಅಂಗಸಂಸ್ಥೆ ಬಿಜಿಎಸ್‌ಇ ಫೈನಾನ್ಶಿಯಲ್ಸ್ ಲಿ. ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಈಗಿನಂತೆ ತನ್ನ ಚಟುವಟಿಕೆಯನ್ನು ತನ್ನ ಸದಸ್ಯರ ಮೂಲಕ ಹೂಡಿಕೆದಾರರ ಸೇವೆ ಮೂಂದುವರೆಸಿಕೊಂಡು ಹೋಗುವು­ದರಿಂದ, ಹೂಡಿಕೆದಾರರು, ಆತಂಕಪಡ­ಬೇಕಿಲ್ಲ.

ಈಗಾಗಲೇ ಸಣ್ಣ ಹೂಡಿಕೆದಾ­ರರ ಆಸಕ್ತಿ ಕಳೆದುಕೊಂಡು ಕಳೆಗುಂದಿ­ರುವ ಷೇರುಪೇಟೆಯಲ್ಲಿ, ಪ್ರಾದೇಶಿಕ ಷೇರು ವಿನಿಮಯ ಕೇಂದ್ರಗಳ ಅಂಗ­ಸಂಸ್ಥೆಗಳು ಉಳಿದಿರುವ ಸಣ್ಣ ಹೂಡಿಕೆ­ದಾರ ಅಗತ್ಯಗಳನ್ನು ಪೂರೈಸಿ, ಪೋಷಿಸಿ, ಮಾರ್ಗದರ್ಶನ ನೀಡುತ್ತಿರುವಾಗ ಇದಕ್ಕೆ ಪ್ರೋತ್ಸಾಹ ನೀಡಿ ಬೆಳೆಸುವ ಬದಲು, ಅದನ್ನೇ ಕಿತ್ತು ಹಾಕಲು ಮುಂದಾಗಿರುವ ನಿಯಂತ್ರಕರ ಕ್ರಮ ಎಷ್ಟರಮಟ್ಟಿಗೆ ಸರಿ ಎಂದು ಭವಿಷ್ಯವೇ ನಿರ್ಧರಿಸುವುದು.

ಬೆಂಗಳೂರು ಷೇರು ವಿನಿಮಯ ಕೇಂದ್ರದ ಅಂಗಸಂಸ್ಥೆ ಬಿಜಿಎಸ್‌ಇ ಫೈನಾನ್ಶಿ­ಯಲ್ಸ್ ಲಿಮಿಟೆಡ್‌ ಬ್ರೋಕಿಂಗ್‌, ಸೇವೆಯಲ್ಲಿ ಮಾರ್ಚ್ ಅಂತ್ಯದಲ್ಲಿ ಸುಮಾರು 65 ಸಾವಿರ ಹೂಡಿಕೆದಾರರನ್ನು ನೋಂದಾ­ಯಿಸಿಕೊಂಡು ಅವರು ಚಟುವಟಿಕೆ ನಡೆಸಲು ಅನುವು ಮಾಡಿಕೊಟ್ಟಿದೆ. ಅಲ್ಲದೆ ಡಿಪಾಸಿಟರಿ ಸೇವೆಯಡಿಯಲ್ಲಿ ಒಂದು ಲಕ್ಷ  ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಡಿ.ಪಿ. ಖಾತೆಗಳನ್ನು ಹೊಂದಿದ್ದು ಅವರೆಲ್ಲರಿಗೂ ಸೇವೆ ಒದಗಿಸುತ್ತಿದೆ. ಷೇರು ವಿನಿಮಯ ಕೇಂದ್ರದ ಮಾನ್ಯತೆ ರದ್ದಾದರೂ ಬಿಜಿಎಸ್‌ ಇಫೈನಾನ್ಶಿಯಲ್ಸ್‌ ಲಿ.ನ ಈ ಅಪಾರ ಗ್ರಾಹಕ ವೃಂದದ ಅಗತ್ಯಗಳ ಪೂರೈಕೆಯು ನಿರಾತಂಕವಾಗಿ ಮುಂದು­ವರೆಯಲಿದೆ. ಈ ಬಗ್ಗೆ ಆತಂಕ ಅನಾವಶ್ಯಕ.

ಮೊ : 98863-13380
(ಮಧ್ಯಾಹ್ನ 4.30ರ ನಂತರ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT