ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲಾಕ್ ಬೆರ್ರಿ ಝೆಡ್ 10 : ದುಬಾರಿ ಆದರೆ ಉತ್ತಮ

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಾರ್ಪೊರೇಟ್ ವಲಯದಲ್ಲಿ ಕೆಲವು ವರ್ಷಗಳ ಹಿಂದೆ ಅತಿ ಜನಪ್ರಿಯವಾಗಿದ್ದುದು ಬ್ಲಾಕ್ ಬೆರ್ರಿ ಫೋನ್. ಒಂದು ಕಾಲದಲ್ಲಿ ಬ್ಲಾಕ್ ಬೆರ್ರಿ ಫೋನ್ ಇಟ್ಟುಕೊಳ್ಳುವುದು ಸಿರಿವಂತಿಗೆ ಅಥವಾ ಸಾರ್ವಜನಿಕವಾಗಿ ಪ್ರತಿಷ್ಠೆಯ ದ್ಯೋತಕವಾಗಿತ್ತು. ವಿಮಾನದಲ್ಲಿ ಪ್ರಯಾಣಿಸುವಾಗ ಎಲ್ಲರ ಕಿಸೆಯಲ್ಲೂ ಬ್ಲಾಕ್ ಬೆರ್ರಿ ಇರುತ್ತಿತ್ತು.

ವಿಮಾನ ಕೆಳಗಿಳಿದು ಈಗ ನಿಮ್ಮ ಫೋನ್ ಬಳಸಬಹುದು ಎಂಬ ಸೂಚನೆ ಬರುತ್ತಿದ್ದಂತೆ ಎಲ್ಲರ ಕಿಸೆಗಳಿಂದ ಹೊರಬರುತ್ತಿದ್ದುದು ಬ್ಲಾಕ್ ಬೆರ್ರಿ ಫೋನ್. ಇದೇನು ಹತ್ತು ಹದಿನೈದು ವರ್ಷಗಳ ಹಿಂದಿನ ಕಥೆ ಅಲ್ಲ. ಕೇವಲ ಆರೇಳು ವರ್ಷಗಳ ಹಿಂದಿನ ಕಥೆ.

ನಂತರ ಐಫೋನ್ ಮತ್ತು ಆಂಡ್ರೋಯಿಡ್ ಫೋನ್‌ಗಳ ಪ್ರವಾಹದಲ್ಲಿ ಬ್ಲಾಕ್ ಬೆರ್ರಿ ಮುಳುಗಿಯೇ ಹೋಯಿತೇನೋ ಎಂದು ಮಾರುಕಟ್ಟೆ ವಿಮರ್ಶಕರು ಹೇಳತೊಡಗಿದರು. ಎಷ್ಟರ ಮಟ್ಟಿಗೆ ಎಂದರೆ ಬ್ಲಾಕ್ ಬೆರ್ರಿ ತಯಾರಿಸುತ್ತಿದ್ದ ರಿಸರ್ಚ್ ಇನ್ ಮೋಶನ್ (RIM) ಕಂಪೆನಿಯ ಹೆಸರನ್ನು ತಿರುಚಿ ಅದನ್ನು ಸದ್ಯದಲ್ಲೆ ರೆಸ್ಟ್ ಇನ್ ಪೀಸ್ (RIP-Rest In Peace) ಎನ್ನಬೇಕಾಗುತ್ತದೆ ಎಂದಿದ್ದರು. ಆರ್‌ಐಎಂನ್ನು ಯಾವ ಕಂಪೆನಿ ಕೊಂಡುಕೊಳ್ಳುತ್ತದೆ ಎಂದೆಲ್ಲ ಜನರು ಊಹಿಸುತ್ತಿದ್ದರು.

ಇಂತಹ ಸಂದರ್ಭದಲ್ಲಿ ಬ್ಲಾಕ್ ಬೆರ್ರಿ ವಾಪಸ್ಸು ತನ್ನ ಸ್ಥಾನ ಗಳಿಸಲು ಮಾಡಿದ ಕೆಲಸಗಳು -ಕಂಪೆನಿ ಹೆಸರನ್ನು ಬ್ಲಾಕ್ ಬೆರ್ರಿ ಎಂದು ಬದಲಾಯಿಸಿದ್ದು, ಬ್ಲಾಕ್ ಬೆರ್ರಿ ಕಾರ್ಯಾಚರಣ ವ್ಯವಸ್ಥೆಯ (Operating System - OS) ಹೊಸ ಆವೃತ್ತಿ ಹೊರತಂದಿದ್ದು ಮತ್ತು ಝೆಡ್10 ಎಂಬ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು. ಇನ್ನೂ ಒಂದು ಕ್ಯೂ10 ಎಂಬ ಫೋನ್ ಸದ್ಯದಲ್ಲೇ ಹೊರಬರಲಿದೆ. ಝಡ್10 (ಆBlackberry Z10) ಈ ಸಲದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು: 1.5 ಗಿಗಾಹರ್ಟ್ಸ್ ವೇಗದ ಎರಡು ಹೃದಯಗಳ (dual core) ಪ್ರೋಸೆಸರ್, 2 ಗಿಗಾಬೈಟ್ ಪ್ರಾಥಮಿಕ ಮತ್ತು 16 ಗಿಗಾಬೈಟ್ ಸಂಗ್ರಹ ಮೆಮೊರಿ, ಜೊತೆಗೆ ಮೆಮೊರಿ ಹೆಚ್ಚಿಸಿಕೊಳ್ಳಲು ಮೈಕ್ರೊಎಸ್‌ಡಿ ಕಾರ್ಡ್ ಹಾಕಲು ಕಿಂಡಿ, 4.2 ಇಂಚಿನ 768 x1280 ಪಿಕ್ಸೆಲ್ ರೆಸೊಲೂಶನ್‌ನ ಸ್ಪರ್ಶಸಂವೇದಿ ಪರದೆ, 2ಜಿ/3ಜಿ/4ಜಿ ನೆಟ್‌ವರ್ಕ್ ಬೆಂಬಲ, ಮೈಕ್ರೋಸಿಮ್ ಕಾರ್ಡ್ , 8 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ, ಎಲ್‌ಇಡಿ ಫ್ಲಾಶ್, ಹೈಡೆಫಿನಿಶನ್ ವಿಡಿಯೊ ಚಿತ್ರೀಕರಿಸುವ ಸೌಲಭ್ಯ, ವೈಫೈ ಮತ್ತು ಬ್ಲೂಟೂತ್ ಸಂಪರ್ಕ, ಯುಎಸ್‌ಬಿ ಮತ್ತು ಎಚ್‌ಡಿಎಂಐ ಕಿಂಡಿಗಳು, ಜಿಪಿಎಸ್, ಎನ್‌ಎಫ್‌ಸಿ, ಎಕ್ಸೆಲೆರೋಮೀಟರ್, ಗೈರೋಮೀಟರ್, 1800 mAh ಬ್ಯಾಟರಿ, 130 X65.6 X9  ಮಿ.ಮೀ. ಗಾತ್ರ, 137.5 ಗ್ರಾಂ ತೂಕ, ಇತ್ಯಾದಿ. ಒಂದು ಮೇಲ್ದರ್ಜೆಯ ಸ್ಮಾರ್ಟ್‌ಫೋನಿನಲ್ಲಿ ಇರಬೇಕಾದ ಎಲ್ಲ ಸವಲತ್ತುಗಳಿವೆ.

ಇದರ ವಿನ್ಯಾಸ ತುಂಬ ಚೆನ್ನಾಗಿದೆ. ಕೈಯಲ್ಲಿ ಹಿಡಿದಾಗ ಆಗುವ ಅನುಭವವೂ ಚೆನ್ನಾಗಿಯೇ ಇದೆ. ಪ್ಲಾಸ್ಟಿಕ್ ಎನ್ನುವ ಭಾವ ಬರುವುದಿಲ್ಲ. ಬ್ಲಾಕ್ ಬೆರ್ರಿ ಫೋನ್‌ಗಳು ಅವುಗಳ ಭೌತಿಕ ಕೀಲಿಮಣೆಗೆ ಖ್ಯಾತ. ಆದರೆ ಈ ಫೋನ್‌ನಲ್ಲಿ ಅದಿಲ್ಲ. ಅದು ಬೇಕೇ ಬೇಕಿದ್ದರೆ ಕ್ಯೂ10 ಬರುವ ತನಕ ಕಾಯಬೇಕು. ಇದರ ಯೂಸರ್ ಇಂಟರ್‌ಫೇಸ್ ಸ್ವಲ್ಪ ಭಿನ್ನವಾಗಿದೆ.

ಇತರೆ ಫೋನ್ (ಐಫೋನ್, ಆಂಡ್ರೋಯಿಡ್, ವಿಂಡೋಸ್ ಫೋನ್) ಬಳಸಿ ಅನುಭವವಿದ್ದವರಿಗೆ ಇದು ಸ್ವಲ್ಪ ವಿಚಿತ್ರ ಅನ್ನಿಸಬಹುದು. ಒಂದು ರೀತಿಯಲ್ಲಿ ಇದು ಉಳಿದೆಲ್ಲ ಸ್ಮಾರ್ಟ್‌ಫೋನ್‌ಗಳ ಯೂಸರ್ ಇಂಟರ್‌ಫೇಸ್‌ಗಳ ಚೌಚೌ ಎನ್ನಬಹುದು. ಫೋನಿನಲ್ಲಿ ವಾಲ್ಯೂಮ್ ಮತ್ತು ಆನ್/ಆಫ್ ಬಟನ್ ಮಾತ್ರ ಇವೆ. ಉಳಿದೆಲ್ಲ ಕೆಲಸಗಳನ್ನು ಪರದೆಯನ್ನು ಕೆಳಗಿನಿಂದ ಮೇಲಕ್ಕೆ ಸವರಿದಾಗ ಮೂಡಿಬರುವ ಮೆನು ಬಳಸಿ ಮಾಡಬೇಕು.

ಒಮ್ಮೆ ಅಭ್ಯಾಸವಾದರೆ ಇದರ ಬಳಕೆಯ ಅನುಭವ ಚೆನ್ನಾಗಿಯೇ ಇದೆ. ಹಲವು ಸಂದರ್ಭಗಳಲ್ಲಿ ಪರದೆಯ ಮೇಲೆ ಯಾವ ಬದಿಯಿಂದ ಯಾವ ಬದಿಗೆ ಬೆರಳು ಸರಿಸುತ್ತೀರಿ ಎನ್ನುವುದನ್ನು ಅವಲಂಬಿಸಿ ಬೇರೆಬೇರೆ ಕೆಲಸ ಮಾಡಬಹುದು. ಇದರ ಟಚ್ ರೆಸ್ಪಾನ್ಸ್, ಅಂದರೆ ನೀವು ಅದರ ಪರದೆಯನ್ನು ಸ್ಪರ್ಶಿಸಿದಾಗ ಅದು ನೀಡುವ ಸಂವೇದನೆ ಚೆನ್ನಾಗಿದೆ.

ಪರದೆಯ ರೆಸೊಲೂಶನ್ ಚೆನ್ನಾಗಿದೆ. ವಿಡಿಯೊ ನೋಡುವ ಅನುಭವ ತೃಪ್ತಿದಾಯಕವಾಗಿದೆ. ಹೈಡೆಫಿನಿಶನ್ ವಿಡಿಯೊ ನೋಡಬಹುದು. ಇದರ ಕ್ಯಾಮೆರಾ ಚೆನ್ನಾಗಿದೆ. ಫೋಟೊಗಳು ಉತ್ತಮವಾಗಿ ಮೂಡಿಬರುತ್ತವೆ. ಕ್ಯಾಮೆರಾ ಬಳಸಿ ಹೈಡೆಫಿನಿಶನ್ ವಿಡಿಯೊ ಕೂಡ ತಯಾರಿಸಬಹುದು. ಒಂದು ಸಣ್ಣ ಬಾಧಕವೆಂದರೆ ಯಾವುದಾದರೂ ವಸ್ತುವನ್ನು ಅತಿ ಸಮೀಪದಿಂದ ಫೋಟೊ ತೆಗೆಯುವಾಗ ಫ್ಲಾಶ್ ಬಳಸಿದರೆ ಚಿತ್ರಕ್ಕೆ ಬೆಳಕು ಅಧಿಕವಾಗುತ್ತದೆ. ಆಗ ಚಿತ್ರ ಪೂರ್ತಿ ಬೆಳ್ಳಗಾಗಿ ಮೂಡಿಬರುತ್ತದೆ. ಇದರಲ್ಲಿ ವ್ಯಕ್ತಿಗಳ ಫೋಟೊ ತೆಗೆಯಲು ಒಂದು ವಿಶೇಷ ಸವಲತ್ತು ನೀಡಿದ್ದಾರೆ.

ಒಂದು ಗ್ರೂಪ್ ಫೋಟೊ ತೆಗೆಯುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಎಲ್ಲ ಮಂದಿ ಒಟ್ಟಿಗೆ ಮುಗುಳ್ನಗೆ ನೀಡುವುದು ಸ್ವಲ್ಪ ಕಷ್ಟ. ಇಂತಹ ಸಂದರ್ಭಕ್ಕೆಂದೇ ನೀಡಿರುವ ಸವಲತ್ತು ಬಳಸಿದರೆ ಅದು ಹಲವು ಫೋಟೊಗಳನ್ನು ಒಂದಾದ ಮೇಲೆ ಒಂದರಂತೆ ತೆಗೆಯುತ್ತದೆ. ಎಲ್ಲ ಫೋಟೊಗಳಲ್ಲಿ ವ್ಯಕ್ತಿಗಳ ಮುಖಗಳನ್ನು ಗುರುತು ಮಾಡುತ್ತದೆ. ಪ್ರತಿ ವ್ಯಕ್ತಿಯ ಫೋಟೊವನ್ನು ತೆಗೆದಿರುವ ಹಲವು ಫೋಟೊಗಳಲ್ಲಿ ಯಾವುದು ಸೂಕ್ತ ಎಂದು ನೀವು ತೀರ್ಮಾನಿಸಿ ಅದನ್ನು ಆಯ್ಕೆ ಮಾಡಬಹುದು. ಅಂದರೆ ಒಬ್ಬ ವ್ಯಕ್ತಿಯ ಫೋಟೊವನ್ನು ಒಂದು ಕ್ಲಿಕ್‌ನಿಂದ, ಇನ್ನೊಬ್ಬ ವ್ಯಕ್ತಿಯ ಫೋಟೊವನ್ನು ಮತ್ತೊಂದು ಕ್ಲಿಕ್‌ನಿಂದ ಆಯ್ಕೆ ಮಾಡಿಕೊಳ್ಳಬಹುದು.

ಸಂಗೀತ ಮತ್ತು ಧ್ವನಿಯ ಗುಣಮಟ್ಟ ಚೆನ್ನಾಗಿದೆ. ಮಾತನಾಡುವಾಗ ಮಾತ್ರ ಆಲಿಸುವವರಿಗೆ ನಿಮ್ಮ ಧ್ವನಿ ಸ್ವಲ್ಪ ಬದಲಾದಂತೆ ಅನ್ನಿಸುತ್ತದೆ. ಕೆಲವೊಮ್ಮೆ ಬ್ಲೂಟೂತ್‌ನಲ್ಲಿ ಮಾತನಾಡಿದರೆ ಕೇಳುವವರಿಗೆ ನಿಮ್ಮ ಧ್ವನಿ ಸ್ವಲ್ಪ ಬದಲಾದಂತೆ ಅನ್ನಿಸುವುದಿಲ್ಲವೇ, ಬಹುತೇಕ ಅದೇ ರೀತಿ ಅನ್ನಿಸುತ್ತದೆ.

ಈ ಫೋನ್ ಅನ್ನು ವೈಫೈ ಹಾಟ್‌ಸ್ಪಾಟ್ ಆಗಿಯೂ ಬಳಸಬಹುದು. ಅಂದರೆ ಇತರೆ ಗ್ಯಾಜೆಟ್‌ಗಳು (ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್) ಈ ಫೋನಿನ ಅಂತರಜಾಲ ಸಂಪರ್ಕವನ್ನು ಬಳಸಬಹುದು. ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೌಲಭ್ಯ ಇದೆ. ಆದರೆ ಈ ಫೋನ್ ಹತ್ತು ಗ್ಯಾಜೆಟ್‌ಗಳಿಗೆ ತನ್ನ ಅಂತರಜಾಲ ಸಂಪರ್ಕವನ್ನು ಹಂಚಬಲ್ಲದು. ಹಳೆಯ ಬ್ಲಾಕ್ ಬೆರ್ರಿ ಫೋನ್‌ಗಳಲ್ಲಿ ಇರದ ಕೆಲವು ಪ್ರಮುಖ ಸೌಲಭ್ಯಗಳು ಇದರಲ್ಲಿವೆ.

ಅವು -ಮೈಕ್ರೋಎಸ್‌ಡಿ ಕಾರ್ಡ್ ಹಾಕಿ ಮೆಮೊರಿ ಜಾಸ್ತಿ ಮಾಡುವುದು, ಫೋನನ್ನು ಗಣಕಕ್ಕೆ ಜೋಡಿಸಿ ಯುಎಸ್‌ಬಿ ಸಂಗ್ರಹವಾಗಿ ಬಳಸುವುದು, ಬ್ಲಾಕ್ ಬೆರ್ರಿ ಎಕ್ಸ್‌ಚೇಂಜ್ ಸರ್ವರ್ ಚಂದಾದಾರರಲ್ಲದಿದ್ದರೂ ಅಂತರಜಾಲ ಸಂಪರ್ಕ ಮಾಡುವುದು, ಇತ್ಯಾದಿ. ಕೊನೆಯದು ಬಹಳ ಮಂದಿ ಮೆಚ್ಚುವಂತಹದ್ದು. ಯಾಕೆಂದರೆ ಬ್ಲಾಕ್ ಬೆರ್ರಿ ಎಕ್ಸ್‌ಚೇಂಜ್ ಸರ್ವರ್ ಚಂದಾ ತಿಂಗಳಿಗೆ 600ರೂ. ಇದೆ.

ಹಲವು ಕಂಪೆನಿಗಳು ಈಗಾಗಲೆ ಬ್ಲಾಕ್ ಬೆರ್ರಿ ಚಂದಾದಾರರಾಗಿರುತ್ತಾರೆ. ಅಂತಹವರಿಗೆ ಇದು ಉತ್ತಮ ಫೋನ್. ಹಳೆಯ ಬ್ಲಾಕ್ ಬೆರ್ರಿಯಿಂದ ಸಹಜವಾದ ನವೀಕರಣ ಆಗಬಲ್ಲುದು. ಕಚೇರಿ ವಾತಾವರಣಕ್ಕೆ ಒಂದು, ಮನೆಯ ವಾತಾವರಣಕ್ಕೆ ಇನ್ನೊಂದು -ಹೀಗೆ ಬೇರೆ ಬೇರೆ ಆಯ್ಕೆಗಳನ್ನು ಒಳಗೊಂಡ ಬೇರೆ ಬೇರೆ ಪ್ರೊಫೈಲ್ ಮಾಡಿಟ್ಟುಕೊಂಡು ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸವಲತ್ತು ಇದೆ. ಇದು ಉತ್ತಮ ಸೌಲಭ್ಯ.

ಇದರಲ್ಲಿ ಕನ್ನಡ ಪಠ್ಯದ ರೆಂಡರಿಂಗ್ ಸೌಲಭ್ಯ ಇದೆ. ಅಂದರೆ ಕನ್ನಡ ಪಠ್ಯವನ್ನು (ಇಮೈಲ್, ಜಾಲತಾಣ, ಎಸ್‌ಎಂಎಸ್, ಟ್ವಿಟ್ಟರ್, ಫೇಸ್‌ಬುಕ್, ಇತ್ಯಾದಿ) ಓದಬಹುದು. ಆದರೆ ಕನ್ನಡದ ಕೀಲಿಮಣೆ ಸೌಲಭ್ಯ ಇಲ್ಲ.

ಇದರ ಪರದೆ ಗೊರಿಲ್ಲ ಗ್ಲಾಸ್ ಅಲ್ಲ. ಪರದೆಗೆ ಯಾವ ಸುರಕ್ಷತೆಯೂ ಇಲ್ಲ. ಯಾವ ಬಟನ್ ಕೂಡ ಇಲ್ಲ. ಗಣಕಕ್ಕೆ ಫೈಲ್ ವರ್ಗಾಯಿಸಬೇಕಾದರೆ ಬ್ಲಾಕ್ ಬೆರ್ರಿ ಬ್ರಿಜ್ ಎಂಬ ತಂತ್ರಾಂಶ ಬಳಸಲೇಬೇಕು. ಇದರ ಬೆಲೆ ಬರೋಬ್ಬರಿ 44 ಸಾವಿರ ರೂ. ಕೊಟ್ಟ ಹಣಕ್ಕೆ ದೊರೆಯುವ ಸವಲತ್ತುಗಳಿಗೆ ಮತ್ತು ಗುಣಮಟ್ಟಕ್ಕೆ ಹೋಲಿಸಿದರೆ ಇದು ತುಂಬ ದುಬಾರಿ.

ಗ್ಯಾಜೆಟ್ ಸಲಹೆ
ಮೈಸೂರಿನ ವಿಜಯಾಶಂಕರ ಅವರ ಪ್ರಶ್ನೆ:  ಬರೆದ ಲೇಖನಗಳನ್ನು ಸ್ಕ್ಯಾನ್ ಮಾಡಿ, ಸ್ಕ್ಯಾನ್ ಮಾಡಿದ ಕನ್ನಡದ ಬರಹಗಳನ್ನು ಎಡಿಟ್ ಮಾಡುವುದಕ್ಕೆ ಸುಲಭವಾದ ಕನ್ನಡದ  ‘O C R ಸೌಲಭ್ಯವಿದೆಯೆ? ಇದ್ದರೆ ದಯವಿಟ್ಟ ತಿಳಿಸಿ.

ಉ: ಕನ್ನಡದ ‘O C R’ ಇನ್ನೂ ಸಾರ್ವಜನಿಕವಗಿ ಲಭ್ಯವಿಲ್ಲ. ಆದರೆ ನಿಮ್ಮ ಸಮಸ್ಯೆಗೆ ಪರಿಹಾರ ಇದೆ. ನೀವು ಲೇಖನವನ್ನು ನೇರವಾಗಿ ಗಣಕದಲ್ಲೇ ಬೆರಳಚ್ಚು ಮಾಡಿದರೆ ಬೇಕಾದಾಗೆಲ್ಲ ತಿದ್ದಬಹುದು. ಬರೆದು ಸ್ಕ್ಯಾನ್ ಮಾಡಿ ನಂತರ ‘O C R’ ಬಳಸುವುದು ಸುತ್ತು ಬಳಸು ವಿಧಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT