ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಂಡಾರ್ಕರ್ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಕಥೆ ಏನು?

Last Updated 25 ಜುಲೈ 2017, 19:30 IST
ಅಕ್ಷರ ಗಾತ್ರ

ಮಧುರ್ ಭಂಡಾರ್ಕರ್ ಅವರ ’ಇಂದು ಸರ್ಕಾರ್’ ಚಿತ್ರದ ವಿರುದ್ಧ ಕಾಂಗ್ರೆಸ್ ಪಕ್ಷ ಈಗ ನಡೆಸುತ್ತಿರುವ ಅಭಿಯಾನ ಹಾಗೂ ಈ ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಇದನ್ನು ಸೆನ್ಸಾರ್ ಮಂಡಳಿ ಎಂದು ಕರೆಯುವುದು ರೂಢಿಯಲ್ಲಿ ಬಂದಿದೆ) ಸೂಚಿಸಿರುವುದು ತೀರಾ ದುರದೃಷ್ಟಕರ. ಭಂಡಾರ್ಕರ್ ಅವರ ಈ ಸಿನಿಮಾ ತುರ್ತು ಪರಿಸ್ಥಿತಿ ಕಾಲದ ವ್ಯಕ್ತಿಗಳಿಗೆ ಸಂಬಂಧಿಸಿದ್ದು. ಇದು ತುರ್ತು ಪರಿಸ್ಥಿತಿ ಕುರಿತ ಸಿನಿಮಾ ಅಲ್ಲ. ಹಾಗಾಗಿ, ಈ ಸಿನಿಮಾದ ಬಿಡುಗಡೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳು ಹಾಗೂ ಸೆನ್ಸಾರ್ ಮಂಡಳಿಯ ಅನಗತ್ಯ ಹಸ್ತಕ್ಷೇಪವು ನಮ್ಮ ದೇಶದದ ಸಾಂವಿಧಾನಿಕ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವು ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತಿದೆ.

ಇಂದಿರಾ ಗಾಂಧಿ ಅವರು ಶಕ್ತಿಶಾಲಿ ಪ್ರಜಾತಂತ್ರ ವ್ಯವಸ್ಥೆಯೊಂದನ್ನು 1975ರಿಂದ 1977ರ ನಡುವಿನ ಅವಧಿಯಲ್ಲಿ ಸರ್ವಾಧಿಕಾರಕ್ಕೆ ಒಳಪಡಿಸಿದರು, ತಮ್ಮೆಲ್ಲ ರಾಜಕೀಯ ವಿರೋಧಿಗಳನ್ನು ಜೈಲಿಗೆ ತಳ್ಳಿದರು, ಸ್ವಾತಂತ್ರ್ಯಾನಂತರ ಭಾರತ ಕಂಡ ಕೆಲವು ಅತ್ಯಂತ ಘೋರವಾದ ದಬ್ಬಾಳಿಕೆಯ ಕೃತ್ಯಗಳನ್ನು ಎಸಗಿದರು. ನಾವು ನಮ್ಮ ಸ್ವಾತಂತ್ರ್ಯ ಹಾಗೂ ನಮ್ಮ ಸಂವಿಧಾನವನ್ನು ಪುನಃ ಪಡೆದು ನಲವತ್ತು ವರ್ಷಗಳು ಸಂದಿವೆ.

ಆದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮ ಪ್ರಜಾತಂತ್ರ ವ್ಯವಸ್ಥೆ ಕಂಡ ಕಗ್ಗತ್ತಲ ದಿನಗಳ ಬಗ್ಗೆ ಒಂದೇ ಒಂದು ಸಿನಿಮಾ ಕೂಡ ಬಂದಿಲ್ಲ. ಅಂತೂ, ಮಧುರ್ ಭಂಡಾರ್ಕರ್ ಅವರಂತಹ ಜನಪ್ರಿಯ ಹಾಗೂ ಪ್ರತಿಭಾನ್ವಿತ ನಿರ್ದೇಶಕರು ತುರ್ತು ಪರಿಸ್ಥಿತಿಯ ಹಿನ್ನೆಲೆ ಇರುವ ಕಥೆ ಆಧರಿಸಿ ಸಿನಿಮಾ ಮಾಡಲು ಮುಂದಾದರೆ ಎಲ್ಲ ರೀತಿಯಿಂದಲೂ ತಕರಾರು ಎತ್ತಲಾಗುತ್ತದೆ. 2014ರಲ್ಲಿ ಕೇಂದ್ರದಲ್ಲಿ ಆಡಳಿತ ಕೈಬದಲಾದಾಗಿನಿಂದಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಏರು ಧ್ವನಿಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಭಾರತದ ಪ್ರಜಾತಂತ್ರ ಜೀವನದ ಅತ್ಯಂತ ಘೋರ ಕಾಲಘಟ್ಟದ ಕುರಿತು ಸತ್ಯ ಹೇಳುವ ಸ್ವಾತಂತ್ರ್ಯವೂ ಇರಬೇಕು ಎನ್ನುವುದು ಅಪಥ್ಯವಾಗಿದೆ.

ರಾಜಕೀಯ ಪಕ್ಷವೊಂದಕ್ಕೆ ಇರುಸು ಮುರುಸು ಆಗುವುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಈ ಸಿನಿಮಾ ವಿಚಾರದಲ್ಲಿ ಸೆನ್ಸಾರ್‌ ಮಂಡಳಿಗೆ ಏನು ಸಮಸ್ಯೆ? ಪ್ರಜಾತಂತ್ರದ ಆಶಯಗಳನ್ನು ಬಲಪಡಿಸುವ ಹೊಣೆ ಈ ದೇಶದ ಎಲ್ಲ ಸಂಸ್ಥೆಗಳ ಮೇಲೂ ಇದೆ. ಈ ಹೊಣೆ ಸೆನ್ಸಾರ್ ಮಂಡಳಿಯ ಮೇಲೆಯೂ ಇದೆ. ಹೀಗಿರುವಾಗ, ತುರ್ತು ಸ್ಥಿತಿ ಕಾಲದ ಕುರಿತ ಸತ್ಯಗಳನ್ನು ಹೇಳುವುದಕ್ಕೆ ಮಂಡಳಿ ವಿರೋಧ ವ್ಯಕ್ತಪಡಿಸುವುದು ಯಾವ ಆಧಾರದಲ್ಲಿ? ಸೆನ್ಸಾರ್ ಮಂಡಳಿಯು ಆರಂಭದಲ್ಲಿ ಎತ್ತಿದ್ದ ಕೆಲವು ತಕರಾರುಗಳು ನಿಜಕ್ಕೂ ತರ್ಕರಹಿತ. ಮಧುರ್ ಭಂಡಾರ್ಕರ್ ಅವರ ಪ್ರಕಾರ ಸೆನ್ಸಾರ್ ಮಂಡಳಿಯು ಆರಂಭದಲ್ಲಿ ಕೆಲವು ಪದಗಳು ಹಾಗೂ ಅಭಿವ್ಯಕ್ತಿಗಳಿಗೆ ವಿರೋಧ ವ್ಯಕ್ತಪಡಿಸಿತ್ತು, ಅವುಗಳನ್ನು ಅಳಿಸಿಹಾಕುವಂತೆ ಸೂಚಿಸಿತ್ತು. ಆ ಪದಗಳು ಮತ್ತು ಅಭಿವ್ಯಕ್ತಿಗಳು ಹೀಗಿವೆ: ವಾಜಪೇಯಿ, ಮೊರಾರ್ಜಿ ಮತ್ತು ಅಡ್ವಾಣಿ!, ಭಾರತ್ ಕಿ ಏಕ್ ಬೇಟಿ ನೆ ದೇಶ್‌ ಕೊ ಬಂ111111111111 ಬನಾಯಾ ಹುವಾ ಹೈ (ಭಾರತದ ಮಗಳೊಬ್ಬಳು ದೇಶಕ್ಕೆ ಸರಪಳಿ ಬಿಗಿದಿದ್ದಾಳೆ), ಔರ್ ತುಮ್ ಲೋಗ್ ಜಿಂದಗಿ ಭರ್ ಮಾ–ಬೇಟೆ ಕಿ ಗುಲಾಮಿ ಕರ್ತೆ ರಹೋಗೆ (ಮತ್ತು ನೀವೆಲ್ಲರೂ ಜೀವನ ಪರ್ಯಂತ ಅಮ್ಮ – ಮಗನ ಗುಲಾಮರಾಗಿ ಇರುತ್ತೀರಿ).

ತುರ್ತು ಪರಿಸ್ಥಿತಿಯ ಬಗ್ಗೆ ವಿಸ್ತೃತವಾಗಿ ಬರೆದಾಗಿದೆ. ಆ ಅವಧಿಯಲ್ಲಿ ಜನರ ಮೇಲೆ ನಡೆದ ದೌರ್ಜನ್ಯಗಳನ್ನು ವಿವರಿಸುವ ಹಲವು ಪುಸ್ತಕಗಳು ಬಂದಿವೆ, ಪತ್ರಿಕೆಗಳಲ್ಲಿ ಸಾವಿರಾರು ಅಂಕಣ ಬರಹಗಳು ಪ‍್ರಕಟವಾಗಿವೆ. ಲೇಖಕ ಅಥವಾ ಪತ್ರಿಕೆಗಳ ಅಂಕಣಕಾರರಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯ ಸಿನಿಮಾ ನಿರ್ದೇಶಕರೊಬ್ಬರಿಗೆ ಏಕಿರಬಾರದು?

ಇಷ್ಟೇ ಅಲ್ಲ, ಈ ಒಂದು ಮಾತನ್ನು ಸಿನಿಮಾದಿಂದ ಅಳಿಸುವಂತೆ ಸೆನ್ಸಾರ್ ಮಂಡಳಿಯು ಸೂಚಿಸಿದೆ ಎಂದು ಹೇಳಲಾಗಿದೆ: ‘ಮೆ ತೊ 70 ಸಾಲ್‌ ಕಾ 111111ಬುಡಾ ಹ್ಞೂಂ, ಮೇರಿ ನಸ್ಬಂದಿ ಕ್ಯೂಂ ಕರ್ವಾ ರಹೇ ಹೋ?’ (ನಾನು 70 ವರ್ಷ ವಯಸ್ಸಿನವ. ನನ್ನ ಸಂತಾನಶಕ್ತಿಯನ್ನು ಏಕೆ ಹರಣ ಮಾಡುತ್ತಿದ್ದೀರಿ?) ತುರ್ತು ಪರಿಸ್ಥಿತಿಯ ಕಾಲದಲ್ಲಿ ಎಸಗಿದ ಅತ್ಯಂತ ಹೇಯ ಅಪರಾಧಗಳಲ್ಲಿ ಬಲವಂತವಾಗಿ ನಡೆಸಿದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೂಡ ಸೇರಿದೆ. ವಾಸ್ತವ ಹೀಗಿದೆ: ತುರ್ತು ಪರಿಸ್ಥಿತಿಯ ಕಾಲದಲ್ಲಿ ಸರ್ಕಾರಿ ನೌಕರರು, ಶಿಕ್ಷಕರು ಸೇರಿದಂತೆ ದೇಶದ ಲಕ್ಷಾಂತರ ಜನರನ್ನು ಬಲವಂತವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಬಲವಂತದ ಕ್ರಮದಿಂದ ಮಾತ್ರ ದೇಶದ ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಬಹುದು ಎಂದು ಸಂಜಯ್ ಗಾಂಧಿ ನಿರ್ಧರಿಸಿದ್ದರು.

ಎರಡು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವವರನ್ನು ಸಂತಾನಶಕ್ತಿ ಹರಣ ಶಿಬಿರಗಳಿಗೆ ಬಲವಂತವಾಗಿ ಕರೆದೊಯ್ಯ1111111ತ್ತಿತ್ತು. ಅಲ್ಲದೆ, ಈ ಕಾರ್ಯಕ್ರಮಕ್ಕೆ ವೇಗ ನೀಡುವ ಉದ್ದೇಶದಿಂದ ಪ್ರತಿ ರಾಜ್ಯಕ್ಕೂ ಗುರಿ ನಿಗದಿ ಮಾಡಲು ನಿರ್ಧರಿಸಲಾಗಿತ್ತು. ವ್ಯಾಸೆಕ್ಟಮಿಗೆ (ಪುರುಷರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ) ಒಳಗಾಗಲು ಒಪ್ಪದ ಶಾಲಾ ಶಿಕ್ಷಕರನ್ನು ‘ಮೀಸಾ’ ಕಾಯ್ದೆಯ ಅಡಿ ಜೈಲಿಗೆ ಕಳುಹಿಸಲಾಗಿತ್ತು ಎಂದು ತುರ್ತು ಪರಿಸ್ಥಿತಿ ವೇಳೆ ನಡೆದ ಹಲವಾರು ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಿದ ಶಾ ಆಯೋಗ ಹೇಳಿದೆ. ತಾವು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇವೆ ಎಂಬುದಕ್ಕೆ ವೈದ್ಯರಿಂದ ಪಡೆದ ಪ್ರಮಾಣಪತ್ರವನ್ನು ಹಾಜರುಪಡಿಸಿದ ನಂತರವೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಈಗ ನಾವೇನು ಮಾಡಬಹುದು? ಸಿನಿಮಾ ಸೆನ್ಸಾರ್‌ಷಿಪ್‌ ಬಗ್ಗೆ ಶ್ಯಾಮ್‌ ಬೆನಗಲ್ ನೇತೃತ್ವದ ಸಮಿತಿ ನೀಡಿದ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವಂತೆ ನಾವು ಸರ್ಕಾರವನ್ನು ಕೋರಬೇಕು. ಸೆನ್ಸಾರ್‌ ಮಂಡಳಿಯ ಕೆಲಸ ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವುದು ಮಾತ್ರ ಎಂದು ಸಮಿತಿ ಸ್ಪಷ್ಟವಾಗಿ ಹೇಳಿದೆ. ಅದು ಸಿನಿಮಾಗಳನ್ನು ಸೆನ್ಸಾರ್ ಮಾಡುವ ಮಂಡಳಿ ಅಲ್ಲ, ಅದು ಸಿನಿಮಾದ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸುವಂತಿಲ್ಲ, ಪ್ರಮಾಣಪತ್ರ ನೀಡುವ ಕೆಲಸವನ್ನು ಮಾತ್ರ ಅದು ಮಾಡಬೇಕು ಎಂದು ಸಮಿತಿ ಹೇಳಿದೆ. ಯಾವುದೇ ಸಿನಿಮಾ ಸಿನೆಮಾಟೋಗ್ರಾಫ್‌ ಕಾಯ್ದೆಯ ಸೆಕ್ಷನ್ 5ಬಿ(1)ಕ್ಕೆ ವಿರುದ್ಧವಾಗಿದ್ದರೆ, ಆ ಸಿನಿಮಾಕ್ಕೆ ಮಂಡಳಿಯು ಪ್ರಮಾಣಪತ್ರ ನಿರಾಕರಿಸಬಹುದು.

ಅಮರ್ತ್ಯ ಸೇನ್ ಕುರಿತ ಸಾಕ್ಷ್ಯಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ನೀಡಿರುವ ನಿರ್ದೇಶನಗಳೂ ತರ್ಕಹೀನವಾಗಿವೆ. ’ಗುಜರಾತ್, ಗೋವು ಮತ್ತು ಭಾರತದ ಕುರಿತ ಹಿಂದುತ್ವದ ದೃಷ್ಟಿಕೋನ ಎನ್ನುವ ಪದಗಳನ್ನು ಅಳಿಸುವಂತೆ ಸೆನ್ಸಾರ್ ಮಂಡಳಿ ಹೇಳಿದೆ’ ಎಂದು ಸಾಕ್ಷ್ಯಚಿತ್ರ ನಿರ್ಮಿಸಿರುವ ಸುಮನ್ ಘೋಷ್ ಅವರು ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ. ಗೋರಕ್ಷಕರ ಬಗ್ಗೆ ಹಾಗೂ ಪವಿತ್ರ ಗೋವಿನ ಹೆಸರಿನಲ್ಲಿ ಕೆಲವು ಗೂಂಡಾಗಳು ಎಸಗುತ್ತಿರುವ ಕೃತ್ಯಗಳ ಬಗ್ಗೆ ಈಚಿನ ತಿಂಗಳುಗಳಲ್ಲಿ ನಡೆಯುತ್ತಿರುವ ಚರ್ಚೆಗಳು ನಮಗೆಲ್ಲರಿಗೂ ತಿಳಿದಿವೆ. ಇಂಥ ಗೂಂಡಾಗಿರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಕಟುವಾಗಿ ಖಂಡಿಸಿದ್ದಾರೆ, ಇಂತಹ ಹಿಂಸಾಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದಾರೆ. ಹೀಗಿರುವಾಗ ಸೆನ್ಸಾರ್ ಮಂಡಳಿಯು ’ನಾನು ನಿನಗಿಂತ ಹೆಚ್ಚು ಉತ್ತಮ’ ಎಂಬಂತೆ ವರ್ತಿಸುತ್ತಿರುವುದು ಏಕೆ?

ಬೆನಗಲ್ ಸಮಿತಿಯ ವರದಿಯನ್ನು ಎಷ್ಟು ಬೇಗ ಅಂಗೀಕರಿಸಲಾಗುತ್ತದೆಯೋ ಸಿನಿಮಾ ಉದ್ಯಮಕ್ಕೆ ಅಷ್ಟರಮಟ್ಟಿಗೆ ಒಳ್ಳೆಯದಾಗುತ್ತದೆ. ಮಧುರ್ ಭಂಡಾರ್ಕರ್ ವಿರುದ್ಧ ಕಾಂಗ್ರೆಸ್ ಪಕ್ಷವು ಪುಣೆ, ನಾಗಪುರ ಮತ್ತು ಇತರೆಡೆ ನಡೆಸಿದ ಸರಣಿ ಪ್ರತಿಭಟನೆಗಳನ್ನು ಗಮನಿಸಿದರೆ, ತುರ್ತು ಪರಿಸ್ಥಿತಿಯ ಕಾಲದ ನಂತರವೂ ಆ ಪಕ್ಷದ ಧೋರಣೆಯಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ ಎಂಬ ಅರ್ಥ ಬರುತ್ತದೆ. ತುರ್ತು ಪರಿಸ್ಥಿತಿ ವೇಳೆ ಪಕ್ಷವು ಕಿಶೋರ್ ಕುಮಾರ್ ಅವರಿಗೆ ಆಲ್‌ ಇಂಡಿಯಾ ರೇಡಿಯೊ ಹಾಗೂ ದೂರದರ್ಶನದ ಕಾರ್ಯಕ್ರಮಗಳಿಗೆ ಬಹಿಷ್ಕಾರ ಹಾಕಿತ್ತು. ಅವರ ಹಾಡುಗಳನ್ನು ಮಾರಾಟ ಮಾಡದಂತೆ ಗ್ರಾಮಾಫೋನ್ ಕಂಪೆನಿಗಳಿಗೆ ಸೂಚಿಸಿತ್ತು. ‘ಕಿಸ್ಸಾ ಕುರ್ಸಿ ಕಾ’, ’ಆಂಧಿ’ಯಂತಹ ಸಿನಿಮಾಗಳಿಗೆ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ನಿಷೇಧ ಹೇರಿತ್ತು. ಈಗ ಪಕ್ಷಕ್ಕೆ ಮಧುರ್ ಭಂಡಾರ್ಕರ್ ಸಿನಿಮಾವನ್ನು ನಿರ್ಬಂಧಿಸಬೇಕಾಗಿದೆ.

’ಇಂದು ಸರ್ಕಾರ್’ ಸಿನಿಮಾ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ದಿಗ್ದರ್ಶಕರು ಎಂದು ಹೇಳಿಕೊಂಡವರು (ಇವರು, ತೀರಾ ಈಚೆಗೆ ಮುನ್ನೆಲೆಗೆ ಬಂದವರು ಎಂಬುದು ನಿಜ) ಹೊರಗೆ ಕಾಣಿಸಿಕೊಳ್ಳುತ್ತಿಲ್ಲ. ಅವರನ್ನು ಹೊರಗೆ ಕರೆಯಬೇಕಾದ ಸಂದರ್ಭ ಬಂದಿದೆ. ಏಕೆಂದರೆ, ತುರ್ತು ಸ್ಥಿತಿ ಕುರಿತ ಮಧುರ್ ಭಂಡಾರ್ಕರ್ ಸಿನಿಮಾ ಮೇಲೆ ನಿಷೇಧ ಹೇರಬೇಕು ಎಂದು ಬಯಸುವವರು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಮಾತನಾಡುವ ಹಕ್ಕನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT