ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ–ಬಂಡಾಯದ ಮೀರಾ ಅಪೂರ್ವ ಹಾಡು

Last Updated 23 ಮಾರ್ಚ್ 2016, 9:07 IST
ಅಕ್ಷರ ಗಾತ್ರ

It is impossible to define a feminine practice of writing, and this is an impossibility that will remain, for this practice can never be theorized, enclosed, encoded, which doesn’t mean that it doesn’t exist. But it will always surpass the discourse that regulates the phallocentric system; it does and will take place in areas other than those subordinated to philosophic, theoretical domination. It will be conceived of only by subjects who are breakers of automatism by pherpheral figures that no authority can ever subjugate.
–Helene Cixous

ಹೆಲೆನ್ ಸಿಕ್ಯುಳ ಈ ಮಾತು ಹೆಣ್ಣಿಗೂ ಭಾಷೆಗೂ ಕಾವ್ಯಕ್ಕೂ ಇರುವ ವಿಶಿಷ್ಟ ಸಖ್ಯವನ್ನು ಗುರುತಿಸುತ್ತಲೇ ಆ ಸಖ್ಯವು ನಿರಂತರವಾಗಿ ಎದುರಿಸುತ್ತಿರುವ ಅವಜ್ಞೆಯನ್ನೂ ತೊಡಕನ್ನೂ ಹೇಳುತ್ತದೆ. ಸಿಕ್ಯೂಳ ಈ ಹೇಳಿಕೆಯೂ ಮಹತ್ವದ ರಾಜಕೀಯ ವಿಷ್ಲೇಷಣೆಯೂ ಹೌದು. ಹೆಣ್ಣು ಮತ್ತು ಭಾಷೆಯ ಸಖ್ಯದ ಕನ್ನಡಿಯಂತೆ ಕಾಣಿಸುವ ಕಾವ್ಯವನ್ನೂ  ಅದರ ಅನನ್ಯತೆಯನ್ನೂ ನೇಪಥ್ಯಕ್ಕೆ ಸರಿಸುವುದರಲ್ಲಿ ಪಿತೃಸಂಸ್ಕೃತಿಯು ಪಡೆದಿರುವ ಹಿಡಿತವು ಅಸಾಧಾರಣವಾದುದು.

ಇದನ್ನು ಒಅಡೆಯುವ ಸವಾಲನ್ನೇ ಸಿಕ್ಯು ಈ ಮಾತುಗಳಲ್ಲಿ ಹೇಳಲು ಪ್ರಯತ್ನಿಸಿರುವುದು.ಆದ್ದರಿಂದಲೇ ಹೆಣ್ಣಿನ ಕಾವ್ಯವನ್ನು, ಕಾವ್ಯದ ರೂಪದಲ್ಲಿನ ಅವಳ ಹೋರಾಟ ಮತ್ತು ಪ್ರತಿರೋಧವನ್ನು ರಾಜಕೀಯ ಕಥನವೆಂದೂ ಗುರುತಿಸಬೇಕಾಗುವುದು ಮೂಲತಃ ಈ ಕಾರಣಕ್ಕೆ. ಅವಳು ಭಾಷೆಯನ್ನು ಮಾತ್ರ ರಚಿಸಿಕೊಳ್ಳುತ್ತಿಲ್ಲ, ಅದರೊಂದಿಗೇ ತನ್ನನ್ನೂ ರಚಿಸಿಕೊಳ್ಳುತ್ತಿದ್ದಾಳೆ. ಇವುಗಳಿಗೆ ವೈಯಕ್ತಿಕ ನೆಲೆಯಷ್ಟೇ ಗಾಢವಾದ ಸಾಮುದಾಯಿಕ ನೆಲೆಯೂ ಇದೆ. ಇದು ಪ್ರಾತಿನಿಧಿಕ ನೆಲೆ ಎಂದು ಚರ್ಚಿಸುವ ಅಗತ್ಯವನ್ನೇ ಸ್ತ್ರೀವಾದಿ ವಿಮರ್ಶಕರು ಪ್ರತಿಪಾದಿಸುತ್ತಿರುವುದು..

ಹೆಣ್ಣಿಗೂ ಭಾಷೆಗೂ ಇರುವ ಸಂಬಂಧ ದ್ವಿಮುಖಿ ನೆಲೆಯದ್ದು. ಒಂದು ಸ್ತರದಲ್ಲಿ ಅದು ‘ದತ್ತ’ ಅರ್ಥಗಳನ್ನು ಬಳಸಿಕೊಂಡರೆ ಇನ್ನೊಂದು ಸ್ತರದಲ್ಲಿ ಅದನ್ನು ಧಿಕ್ಕರಿಸಿ ‘ಸ್ವ’ ಅರ್ಥಗಳನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹೆಣ್ಣು ತನ್ನ ಮಾನವ, ನಾಗರಿಕ ಹಕ್ಕನ್ನು ಪಡೆಯಲು ನಡೆಸುವ ಪ್ರಯತ್ನವಾಗಿ, ಲೋಕ ತಮಗೆ ವಿಧಿಸಿದ ಚೌಕಟ್ಟನ್ನು, ವಿನ್ಯಾಸವನ್ನು ಮೀರುವ ರೋಮಾಂಚನವನ್ನು ಅನುಭವಿಸುವ ‘ದಿವ್ಯ’ಘಳಿಗೆಯಾಗಿಯೂ ಹೆಣ್ಣಿನ ಕಾವ್ಯವನ್ನು ನೋಡಬೇಕು.

ಇದು ಆಲಯದಿಂದ ಬಯಲ ಕಡೆಗಿನ ಮಹಾಪ್ರಯಾಣ.
My words are intentional and discover themselves pictorially As emerge and continue To struggle from their white Bits of netting
–Kathleen Fraser

ಎಲ್ಲ ಅಭಿಜಾತ ಕಾವ್ಯದಂತೆಯೇ ಹೆಣ್ಣಿನ ಕಾವ್ಯವೂ ಸ್ವಂತಿಕೆಯ, ಅನನ್ಯತೆಯ, ರೂಪಕ ಸೃಷ್ಟಿಯ, ಮುರಿದು ಕಟ್ಟುವ ಮೂಲಸವಾಲುಗಳನ್ನು ಎದುರಿಸುತ್ತಿರುತ್ತದೆ. ಇಷ್ಟೇ ಮುಖ್ಯವಾಗಿ ಅದು ಗಂಡಿನ ಭಾಷೆಯೊಳಗೇ ಹೆಣ್ಣಿನ ಭಾಷೆಯನ್ನು ಕಟ್ಟುವ ಸನ್ನಾಹವೂ ಆಗಿರುತ್ತದೆ. ಇದು ರೂಪಾಂತರವಿಲ್ಲದೆಯೇ ಅರ್ಥಾಂತರವನ್ನು ಸಾಧಿಸುವ ವಿಲಕ್ಷಣವಾದ, ಮಹತ್ವದ ಕ್ರಿಯೆ. ಈ ಅರ್ಥಾಂತರಗಳನ್ನು ಕಾವ್ಯದ ನೈತಿಕ ಬಲದಿಂದ ಅಧಿಕೃತಗೊಳಿಸುವ ರಾಜಕೀಯ ಪ್ರಕ್ರಿಯೆಯೂ ಆಗಿರುತ್ತದೆ.

ಮಹಿಳೆಯರ ಮಟ್ಟಿಗೆ ಕಾವ್ಯವೆನ್ನುವುದು ಅವಳ ಅಸ್ತಿತ್ವ ಮತ್ತು ಅಸ್ಮಿತೆ ಎರಡಕ್ಕೂ ಅಧಿಕೃತತೆಯನ್ನು ಒದಗಿಸುವ ವಾಹಕವಾಗಿ, ಸಾಕ್ಷಿಯಾಗಿ ಎಲ್ಲಕ್ಕಿಂತ ಹೆಚ್ಚಾಗಿ ವಕೀಲಿಕೆಯ ಕೆಲಸವನ್ನೂ ಮಾಡುತ್ತಿರುತ್ತದೆ. ಸ್ಕಾಟ್ ಎನ್ನುವ ಮಹತ್ವದ ಸ್ತ್ರೀವಾದಿ ಚಿಂತಕಿ ಭಾಷೆಯ ಮಹತ್ವ ಮತ್ತು ಪಾತ್ರವನ್ನು ಚರ್ಚಿಸುತ್ತಾ– That language is and must be the only subject of history and that through linguistic analysis gender will be revealed ಎನ್ನುತ್ತಾಳೆ.

ಮುಂದುವರಿದು, ಈಕೆ ಹೇಳುವ one of the things I like about writing history is drawing meaning from the stories, in the ambigious metaphorical, narrative of daily life ಮಾತುಗಳು ಇನ್ನೂ ಕುತೂಹಲಕರವಾಗಿವೆ. ಡ್ರಾಯಿಂಗ್ ಮೀನಿಂಗ್ ಎನ್ನುವುದನ್ನು ಗಮನಿಸಿ. ಅರ್ಥವನ್ನು ಚಿತ್ರಿಸುವ, ರಚಿಸುವ ಈ ಪರಿಯು ಕಾವ್ಯದ್ದೂ ಹೌದು, ಹೆಣ್ಣಿನದೂ ಹೌದು. ಕವಿಯ ಪ್ರತಿಭೆ, ಕಲ್ಪನೆ, ಭಾಷೆಯನ್ನು ಹೊಚ್ಚ ಹೊಸದಾಗಿ ಎಂಬಂತೆ ಬಳಸುವ ಸೃಜನಶೀಲ ಪರಿ ಎಲ್ಲವೂ ಸೇರಿ ಕಾವ್ಯ ಭಾಷೆಯು ನಭೂತೋ ಎನ್ನುವಂತಹ ತಾಜಾತನವನ್ನು ಪಡೆಯುತ್ತದೆ.

ಹೆಣ್ಣಿನ ಮಟ್ಟಿಗೆ ಇದು ಇಷ್ಟೇ ಅಲ್ಲ ಎನ್ನುವುದೇ ಮಹಿಳಾಕಾವ್ಯವನ್ನು, ಅದರ ಓದು ಮತ್ತು ಗ್ರಹಿಕೆಯ ಕ್ರಮಗಳನ್ನು ಸಂಕೀರ್ಣಗೊಳಿಸುತ್ತದೆ ಮತ್ತು ಭಿನ್ನವಾಗಿಸುತ್ತದೆ. ಮೊದಲನೆಯ ಕಾರಣ ತನ್ನ ಪ್ರತಿಭೆಯಲ್ಲಿ ಜೀವನ್ಮರಣದ ತೀವ್ರತೆಯ ಅಸ್ಮಿತೆಯ ಹುಡುಕಾಟವನ್ನು ಬೆರೆಸಿ ಸೃಷ್ಟಿಸುವ ರೂಪಕಗಳನ್ನು ಕಾವ್ಯದ ಆಸ್ವಾದನಾವಾದಿ ನೆಲೆಯಿಂದ ಮಾತ್ರ ಗ್ರಹಿಸಿದರೆ ಅದು ಆ ಕಾವ್ಯದ ಅಪೂರ್ಣ ಓದಾಗುತ್ತದೆ.

ಅದರ ಹಿಂದಿನ ವ್ಯಕ್ತಿತ್ವ ರಚನೆಯ ಹಿನ್ನೆಲೆಯಲ್ಲಿ ಓದಿದಾಗ ಮಾತ್ರ ಅದರ ಪೂರ್ಣ ಓದು ಮತ್ತು ಅರ್ಥ ಪರಂಪರೆಗಳ ಗ್ರಹಿಕೆ ಸಾಧ್ಯವಾಗುತ್ತದೆ. ಸರಳವಾಗಿ ಹೇಳುವುದಾದರೆ ಕಾವ್ಯ ಮತ್ತು ಕಾವ್ಯ ಭಾಷೆ ಎರಡೂ ಹೆಣ್ಣಿಗೆ ಒದಗಿ ಬರುವುದೂ ಹೌದು, ಒಲಿಸಿಕೊಳ್ಳುವುದೂ ಹೌದು.
***
ಮೀರಾ ಭಾರತೀಯರ ಮೂಲಮಾದರಿ ವ್ಯಕ್ತಿತ್ವಗಳಲ್ಲಿ ಒಂದೆಂದೇ ಪರಗಣಿತವಾಗಿರುವವಳು. ತಂಬೂರಿ ಹಿಡಿದು ಪರವಶತೆಯಲ್ಲಿ, ಮೀರಾ ಕೆ ಪ್ರಭು ಎನ್ನುವುದು ಭಾರತೀಯರೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಕೊರೆದ ಚಿತ್ರ. ಭಕ್ತಿಯ, ವೈರಾಗ್ಯದ , ದೈವ ಸಾನ್ನಿಧ್ಯಕ್ಕಾಗಿ ಅನವರತ ಹಂಬಲಿಸಿದ ಮತ್ತು ಪಡೆದ ಹೆಣ್ಣೆಂದು ಇವಳಿಗೆ ಇನ್ನಿಲ್ಲದ ಗೌರವ ಮತ್ತು ಭಕ್ತಿಯ ಪ್ರಣಾಮಗಳು ಸಲ್ಲುತ್ತಲೇ ಇವೆ.

ಬಿಳಿಯ ಸೀರೆ ಉಟ್ಟ, ಹೆಣ್ಣೆಂದರೆ ಹೀಗಿರಬೇಕು ಎನ್ನುವ ಅಸಾಧಾರಣ ಮೃದುತ್ವ , ಮರೆಯಾಗದ ಮಂದಹಾಸದ ಈ ಹೆಣ್ಣುಮಗಳು ತನ್ನ ಭಕ್ತಿಯಲ್ಲೇ ಲೋಕವನ್ನೆಲ್ಲ ಗೆದ್ದ ಹಾಗೆ ಬಿಂಬಿಸಲಾಗಿದೆ. ಮೀರಾಳ ಕಾವ್ಯ ಮತ್ತು ವ್ಯಕ್ತಿತ್ವದ ಸ್ಥಾಪಿತ ನೆಲೆಯನ್ನು ಅವಳ ಕಾವ್ಯದ ಭಿನ್ನವಾದ ಓದು ಒಡೆದು ಹೊಸದೊಂದೇ ಚಿತ್ರ ರೂಪಿತವಾಗುವ ಬಗೆಯನ್ನು ಈ ಬಾರಿ ನೋಡೋಣ.

Friend from my childhood , I long to be a renunciator,
That from which enchants mu sahib , that is the form I will keep
At your asking I will dye my sari in the colour of the kusumal flower
At your asking I will take on saffron robes
Friend from my childhood , I long to be a renunciator ,
At your asking I will fill the parting of my hair with pearls,
At your asking I will unbind my hair
Friend from my childhood , I long to be a renunciator
My being resides elsewhere , here is only the empty husk
Like straw in the wind, I left behind
Mother father family
Friend from my childhood , I long to be a renunciator

ಮೀರಾಳ ಬಹು ಪ್ರಸಿದ್ಧವಾದ ಗೀತೆ ಇದು. ‘ವಿದಾಯ’ ಎನ್ನುವ ಶೀರ್ಷಿಕೆಯ ಈ ಕವಿತೆ, ಮದುವೆಯಾದ ಹೆಣ್ಣು ಮಗಳು ಗಂಡನ ಮನೆಗೆ ಹೊರಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಹೆಣ್ಣಿನ ಭಾವಲೋಕ ಮತ್ತು ಮನಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಚಿತ್ರಿಸುವ ಹಾಗೆ ಕಾಣಿಸಿದರೂ, ಈ ಕವಿತೆ ಭಿನ್ನ ದೃಷ್ಟಿಕೋನದ ಮರು ಓದಿನಲ್ಲಿ ಇನ್ನೊಂದೇ ಅರ್ಥವನ್ನು ಬಿಟ್ಟುಕೊಡುವುದನ್ನು ಅಥವಾ ಧ್ವನಿಸುವುದನ್ನು ನಾವು ಗಮನಿಸಬಹುದು.

ಹಾಗೆ ನೋಡಿದರೆ ಹೆಣ್ಣಿನ ಬದಲಾಗುತ್ತಿರುವ ವ್ಯಕ್ತಿತ್ವವನ್ನು ವಿದಾಯದ ಗೀತೆಗಳು ಸಾಮಾನ್ಯವಾಗಿ ಪ್ರತಿಬಿಂಬಿಸುತ್ತವೆ. ಮಗಳ ಪಾತ್ರದಿಂದ ಸೊಸೆಯ ಪಾತ್ರಕ್ಕೆ ಬದಲಾಗುತ್ತಿರುವ ಹೆಣ್ಣಿನ ಆಳದ ತಳಮಳ ಮತ್ತು ನಿರೀಕ್ಷಿತ ಸಂಭ್ರಮವನ್ನು ವಿದಾಯದ ಗೀತೆಗಳು ಒಳಗೊಳ್ಳುತ್ತವೆ. ಬಹುತೇಕ ಸಂದರ್ಭಗಳಲ್ಲಿ ಮದುವೆಯನ್ನು ಕುರಿತಂತೆ ಆಯ್ಕೆಯ ಅವಕಾಶವೇ ಇಲ್ಲದ ಹೆಣ್ಣುಮಕ್ಕಳ ಅಸಹಾಯಕತೆಯ ಚಿತ್ರಣವಾಗಿಯೂ ವಿದಾಯದ ಕವಿತೆಗಳು ಕಾಣಿಸತೊಡಗುತ್ತವೆ.

ಭಾವನಾತ್ಮಕವಾದ ಸಂಬಂಧವನ್ನು, ಪ್ರೀತಿಯನ್ನೆಲ್ಲ ಧಾರೆಯೆರೆದು ಬೆಳೆಸಿದ ಕುಟುಂಬವನ್ನು ಒಟ್ಟಿನಲ್ಲಿ ತನ್ನ ರಕ್ಷಣಾ ವಲಯವನ್ನು ಬಿಟ್ಟುಹೋಗುವ ಸನ್ನಿವೇಶವಾದ್ದರಿಂದ ಹೆಣ್ಣುಮಕ್ಕಳು ಸಹಜವಾಗಿಯೇ ಬಿಟ್ಟುಹೋಗುತ್ತಿರುವ ಅಥವಾ ಕಳೆದುಕೊಳ್ಳುತ್ತಿರುವ ಮನೆಯನ್ನು, ಸಂಬಂಧಗಳನ್ನು ಕುರಿತು ನಾಸ್ಟಾಲ್‌ಜಿಕ್ ಎನ್ನಬಹುದಾದ ಮನಸ್ಥಿತಿಯನ್ನು ಹೊಂದಿರುತ್ತಾರೆ.

ಮೀರಾಳ ಈ ಕವಿತೆಯ ಚಲನೆ ಮತ್ತು ದೃಷ್ಟಿಕೋನ ಭಿನ್ನವಾಗಿದೆ. ಇಲ್ಲಿ ವಿದಾಯವು ಕವಿತೆಯು ತೋರಿಸುತ್ತಿರುವ ಅರ್ಥಗಳಿಗಿಂತ ಭಿನ್ನವಾದ, ಆಳವಾದ ಅರ್ಥ ವಲಯಗಳನ್ನು ಧ್ವನಿಸುತ್ತಿದೆ. ‘ಬಾಲ್ಯ ಕಾಲದ ನನ್ನ ಗೆಳತಿಯೇ’ ಎನ್ನುವ ಸಂಬೋಧನೆ ಮತ್ತು ಉದ್ಗಾರವೇ ಕವಿತೆಯನ್ನು ಹೊಸ ಪ್ರಾರಂಭದ ಕಡೆಗೆ ಕರೆದೊಯ್ಯುತ್ತದೆ. ‘ನನಗೆ ವಿರಾಗಿಯಾಗುವ ಬಯಕೆ’ ಎನ್ನುವ ಮಾತು ಹೊಸ ವ್ಯಕ್ತಿತ್ವ, ಹೊಸ ಬದುಕಿನೆಡೆಗಿನ ಇವಳ ಬಯಕೆಯನ್ನು ಸೂಚಿಸುತ್ತಿದೆ.

ಬಾಲ್ಯ ಕಾಲದ ಗೆಳತಿ ಎನ್ನುವ ಮಾತು ತಾನು ಮಾತ್ರವಲ್ಲ, ಇನ್ನೆಷ್ಟೋ ಜನ ಬದಲಾಗಬೇಕಾದ ಅಗತ್ಯವನ್ನೂ ಹೇಳುತ್ತಿದೆ. ಇಲ್ಲಿನ ವೈರಾಗ್ಯದ ಹಂಬಲ ತಾಯಿ ಮನೆಯನ್ನು ತೊರೆಯುವ ಘಳಿಗೆಯಲ್ಲಿ ಹೆಣ್ಣಿಗೆ ಉಮ್ಮಳಿಸಿ ಬರುವ ದುಃಖದ ಚರಮ ಸ್ಥಿತಿಯ ಅಭಾವ ವೈರಾಗ್ಯದ ದೃಷ್ಟಿಕೋನವಲ್ಲ. ಬದಲಿಗೆ ಪಿತೃಸಂಸ್ಕೃತಿಗೆ ವಿದಾಯ ಹೇಳಬೇಕೆನ್ನುವ ಇವಳ ಬಯಕೆ ಆಘಾತಕಾರಿಯಾಗಿ ಕಾಣುತ್ತದೆ. ಹೀಗಾಗಿ ಇಡೀ ಕವಿತೆ ಪಿತೃಸಂಸ್ಕೃತಿಯನ್ನು ಕುರಿತು ಪ್ರತಿರೋಧದ ಬೇರೆ ಬೇರೆ ಸಾಧ್ಯತೆಗಳನ್ನು ಹೇಳುತ್ತಾ ಹೋಗುತ್ತದೆ.

ಆರ್ಷೇಯ ಭಾರತೀಯ ದೃಷ್ಟಿಕೋನವು ಹೆಣ್ಣಿಗೆ ಆತ್ಮವೇ ಇಲ್ಲ ಎನ್ನುವುದರಿಂದ ಹಿಡಿದು ಅವಳು ಮಾಯಾವಿ ಎನ್ನುವ ತನಕ ವಿರುದ್ಧ ನೆಲೆಗಳ ನಂಬಿಕೆಯನ್ನು ಪೋಷಿಸಿಕೊಂಡು ಬಂದಿದೆ. ಹಾಗೆ ನೋಡಿದರೆ ಗಂಡು ಸಾಧಿಸಲು ಹೊರಡುವ ವೈರಾಗ್ಯದ ಹಾದಿಯಲ್ಲಿನ ಮುಳ್ಳು ಎಂದೇ ಹೆಣ್ಣನ್ನು ಪರಿಗಣಿಸುವುದು. ಹೀಗಾಗಿ ವೈರಾಗ್ಯವನ್ನು ಪಡೆಯಬೇಕು ಎನ್ನುವ ಆಸೆಯೇ ಪಿತೃಸಂಸ್ಕೃತಿಯನ್ನು ಎದುರಿಸುವ ಒಂದು ಕ್ರಮ.

ಸಾಂಪ್ರ ದಾಯಿಕ ನೆಲೆಯಲ್ಲಿ ಮದುವೆ, ಗಂಡನ ಸೇವೆ ಮತ್ತು ಕುಟುಂಬದ ಪೋಷಣೆಯೇ ಹೆಣ್ಣು ತನ್ನನ್ನು ತಾನು ಮುಕ್ತಿಯ ಕಡೆಗೆ ಕರೆದು ಕೊಂಡು ಹೋಗುವ ಏಕೈಕ ದಾರಿ ಎಂದು ಇದು ವಾದಿಸುತ್ತದೆ. ಈ ಕವನದ ಎರಡನೇ ಸಾಲು ‘ನನ್ನ ಪ್ರಭುವಿಗೆ ಪ್ರಿಯವಾಗುವ ರೂಪ ಯಾವುದೋ ಅದನ್ನು ನಾನು ಉಳಿಸಿಕೊಳ್ಳುತ್ತೇನೆ’– ಪರಸ್ಪರ ವಿರುದ್ಧವಾದ ಮದುವೆ ಮತ್ತು ವೈರಾಗ್ಯಗಳನ್ನು ಒಟ್ಟಿಗೇ ಇಡುವ ಮೂಲಕವೇ ಮೀರಾ ಹೊಸ ಸಾಧ್ಯತೆಯೊಂದನ್ನು ನಮ್ಮ ಮುಂದಿಡುತ್ತಾಳೆ.

ಈ ಹೊಸ ಸಾಧ್ಯತೆಯು ಮದುವೆ, ಗಂಡು ಹೆಣ್ಣಿನ ಸಂಬಂಧ, ದೈವ ಮತ್ತು ಆಯ್ಕೆಯ ಬದುಕು ಈ ಎಲ್ಲವನ್ನೂ ಕುರಿತಂತೆ ಮೀರಾಳ ಬದಲಾದ ನಿಲುವುಗಳನ್ನು ಸ್ಪಷ್ಟಪಡಿಸುತ್ತದೆ. ತನ್ನ ಕಲ್ಪನೆಯ ಮತ್ತು ನಿರೀಕ್ಷೆಯ ಗಂಡನ ಅಧಿಕಾರ ಮತ್ತು ಅವನನ್ನು ಕುರಿತ ತನ್ನ ದಾಸ್ಯ ಭಾವ ಈ ಎರಡನ್ನೂ ಉತ್ಪ್ರೇಕ್ಷಿಸುವುದರ ಮೂಲಕವೇ ಸ್ಥಾಪಿತ ವ್ಯವಸ್ಥೆಯನ್ನೂ ಅದರ ಮೌಲ್ಯಗಳನ್ನೂ ಉಲ್ಲಂಘಿಸುವ ಕ್ರಾಂತಿಯೊಂದನ್ನು ಈ ಮಧುರ, ಮೆಲುಧ್ವನಿಯ ಕವಿತೆಯ ಮೂಲಕ ಮೀರಾ ಮಾಡುತ್ತಿದ್ದಾಳೆ.

ಮೀರಾಳ ಕಾಲದ ಸಾಂಪ್ರದಾಯಿಕ, ಪ್ರತಿಷ್ಠಿತ ರಾಜಪೂತ ಮನಸ್ಸುಗಳಿಗೆ ಈ ನಿಲುವು ಎಂಥ ಆಘಾತವನ್ನು ಉಂಟು ಮಾಡಿರಬಹುದು ಎನ್ನುವುದನ್ನು ಊಹಿಸಬಹುದು. ದೇವರೊಂದಿಗಿನ ಮದುವೆಯೆನ್ನುವುದು ಜಾಗತಿಕವಾಗಿಯೂ ಅನೇಕ ಮಹಿಳೆಯರು ಅಳವಡಿಸಿಕೊಂಡ ಬದುಕಿನ ದಾರಿಯೇ ಆಗಿದೆ. ಇಂಥ ಎಲ್ಲ ಸನ್ನಿವೇಶಗಳನ್ನೂ ನಾವು ನೋಡಬೇಕಾದ ಕ್ರಮವೆಂದರೆ ಈ ದಾರಿಯು ಈ ಹೆಣ್ಣುಮಕ್ಕಳಿಗೆ ಕೊಡಲು ಶಕ್ತವಾಗುವ ವೈಯಕ್ತಿಕ ಸ್ವಾಯತ್ತತೆ ಮತ್ತು ಇದು ಅಸಾಂಸ್ಥಿಕ ಎನ್ನುವುದೂ ಅಷ್ಟೇ ಮುಖ್ಯವಾದದ್ದು.

ಮದುವೆ ಎನ್ನುವ ಸಂಸ್ಥೆಯನ್ನೇ ನಿರಾಕರಿಸುವ ಮತ್ತು ಅದಕ್ಕೆ ಪರ್ಯಾಯವೊಂದನ್ನು ಈ ಮಹಿಳೆಯರು ಪ್ರತಿಪಾದಿಸುತ್ತಿದ್ದಾರೆ. ಮದುವೆ ಒಳಗೊಳ್ಳುವ ಹೆಣ್ಣನ್ನು ಕುರಿತ ಕರಾರುಗಳನ್ನು ತಲೆಕೆಳಗು ಮಾಡುತ್ತ ತನ್ನ ಆಯ್ಕೆಯ ಪುರುಷರನ್ನು ಆರಿಸಿಕೊಳ್ಳುತ್ತಲೇ, ಅವನಿಗೆ ಹೇಗೆ ಬೇಕೋ ಹಾಗೆ ನಾನಿರುತ್ತೇನೆ ಎನ್ನುತ್ತಾಳೆ ಮೀರಾ. ಆದರೆ ಅವಳು ನಡೆಸುತ್ತಿರುವ ಪ್ರಯತ್ನ ಮತ್ತು ಬಯಕೆ ಎರಡೂ ಇವಳ ಆಯ್ಕೆಯನ್ನೇ ಎತ್ತಿಹಿಡಿಯುತ್ತಿವೆ.

ಎಂದರೆ, ಇಡೀ ಕವಿತೆ ಇರಿಯುವ ವ್ಯಂಗ್ಯದಲ್ಲಿ ತನಗೆ ಆಯ್ಕೆಯ ಅವಕಾಶವನ್ನೇ ಕೊಡದ ಪಿತೃಸಂಸ್ಕೃತಿಗೆ ಅದರದ್ದೇ ಭಾಷೆಯಲ್ಲಿ ಅದಕ್ಕೆ ವಿರುದ್ಧವಾದದ್ದನ್ನು ತಾನು ಪಡೆಯಲು ಹೊರಡುವುದನ್ನೂ, ಪಡೆಯಬಹುದಾದದ್ದನ್ನೂ ಸೂಚಿಸುತ್ತಿದ್ದಾಳೆ. ಎಂದರೆ ಇಲ್ಲಿ ವಿದಾಯ ಪಿತೃಸಂಸ್ಕೃತಿಗೂ ಹೌದು, ಅದರ ಸಂಸ್ಥೆಗಳಿಗೂ ಹೌದು. ಲೌಕಿಕ ಮದುವೆಯಿಂದ ಅಲೌಕಿಕ ಸಖ್ಯದ ಕಡೆಗೆ ಇವಳು ಗಮನ ಹರಿಸುತ್ತಿದ್ದಾಳೆ ಎನ್ನುವ ಅರ್ಥ ಪದರದೊಂದಿಗೆ ಇನ್ನೊಂದು ಅರ್ಥ ವಲಯವೂ ಇಲ್ಲಿ ಸೂಚಿತವಾಗುತ್ತಿದೆ.

ಅದು ಅಲೌಕಿಕ ಸಖ್ಯದ ಈ ಮಾದರಿ ಲೌಕಿಕ ಮದುವೆ ಎನ್ನುವ ಬಹುಮುಖ್ಯ ಸಂಸ್ಥೆಯಲ್ಲಿಯೂ ಆಗಬೇಕಾದ ಪಲ್ಲಟಗಳನ್ನು ಸೂಚಿಸುತ್ತಿದೆ. ಈ ಮದುವೆ ಎನ್ನುವ ಸಂಸ್ಥೆಯು ಕೊನೆಗೂ ಪುರುಷನ ಅಭೀಪ್ಸೆಗಳನ್ನು ಈಡೇರಿಸುವ, ‘ಯಜಮಾನ’ನ ಅನುಕೂಲಗಳು ಹೆಣ್ಣಿನ ಮಟ್ಟಿಗೆ ಕರಾರುಗಳು ಆಗಿ ಅವಳ ಅಧೀನತೆಯನ್ನು ಮತ್ತಷ್ಟು ಬಲಗೊಳಿಸುವ ಸಂಸ್ಥೆಯಾಗಿರುವುದನ್ನು ಮೀರ ಪ್ರಶ್ನಿಸುತ್ತಿದ್ದಾಳೆ. ಹೀಗಾಗಿ ಈ ಕವಿತೆ ಮದುವೆ ಎನ್ನುವ ಸಂಸ್ಥೆಯನ್ನು ಹೆಣ್ಣಿನ ದೃಷ್ಟಿಯಿಂದ ಪುನರ್ ರಚಿಸುವ ಪ್ರಯತ್ನವೂ ಆಗಿದೆ.

ಪರಸ್ಪರ ವಿರುದ್ಧವಾದದ್ದನ್ನು ಒಟ್ಟಿಗೇ ಇಡುವಲ್ಲಿ ಮಹಿಳಾ ಕಾವ್ಯದ ಚಹರೆಯೊಂದನ್ನು ಮೀರ ಹುಡುಕುತ್ತಿರುವ ಹಾಗೆಯೂ ಕಾಣುತ್ತದೆ.  ಸಾಂಪ್ರದಾಯಿಕವಾದ ಮದುವೆಯನ್ನು ಕುರಿತ ವೈರಾಗ್ಯ ಮತ್ತು ವಿದಾಯವಾಗಿ ಹೊಸ ಸಖ್ಯದ ಮಾದರಿಯನ್ನೂ ಇಲ್ಲಿ ಮೀರಾ ಹುಡುಕುತ್ತಿದ್ದಾಳೆಯೇ? ಮದುವೆ ಮತ್ತು ವೈರಾಗ್ಯ ಈ ಎರಡರ ವ್ಯಾಖ್ಯಾನವನ್ನೂ ಬದಲಿಸುವ ಇಶಾರೆಗಳು ಈ ಕವಿತೆಯಲ್ಲಿವೆಯೇ?
ಕೃಷ್ಣನೊಂದಿಗಿನ ತನ್ನ ಮದುವೆಯನ್ನು ಅವ ವಿವರಿಸುವ ಪರಿಯಲ್ಲಿಯೇ ಅವಳು ಅದನ್ನು ಪಿತೃಸಂಸ್ಕೃತಿಯ ಪರಿಧಿಯಿಂದ ಹೊರಗಿಡುತ್ತಿದ್ದಾಳೆ.

ತನ್ನ ಮೊದಲ ಸಾಂಪ್ರದಾಯಿಕ ಮದುವೆಯಿಂದ ಮೀರಾ ಪಡೆಯುತ್ತಿರುವ ಮುಕ್ತಿ ಮತ್ತು ಕೃಷ್ಣನೊಂದಿಗಿನ ಮದುವೆಯನ್ನು ಅವಳು ಘೋಷಿಸುತ್ತಿರುವ ಪರಿ ಎರಡೂ ಪಿತೃಸಂಸ್ಕೃತಿ ಮಾದರಿಯ ರಾಜಪೂತ ಮದುವೆಯನ್ನು ಕುರಿತ ಬಂಡಾಯ, ಪ್ರತಿರೋಧವೇ ಆಗಿದೆ. ಕಾವ್ಯದಲ್ಲಿ ತನ್ನ ಮದುವೆಯನ್ನು ಅವಳು ಚಿತ್ರೀಕರಿಸುವ ರೀತಿಯೇ ಈ ಮದುವೆಯನ್ನು ಅವಳನ್ನು ಬಿಟ್ಟು ಇನ್ನಾರೂ ಅರ್ಥೈಸಲಾರರು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಮೀರಾಳ ಧಾರ್ಮಿಕ ಪ್ರತಿಮೆ, ತುಮುಲದಲ್ಲಿನ ಹೆಣ್ಣಿನ ಸಾಂಪ್ರದಾಯಿಕ ಸ್ಥಾನವನ್ನು ಖಚಿತಪಡಿಸುತ್ತದೆ, ಎನ್ನುತ್ತಾರೆ ನೀರಾ ದೇಸಾಯಿ

ಬಲವಂತವಾಗಿ ತನ್ನನ್ನು ಮದುವೆಯ ಸಂಸ್ಥೆಯೊಳಗೆ ಸೇರಿಸಿ ಕಟ್ಟಿದ ಸಾಂಸ್ಥಿಕ ರಚನೆಯನ್ನು, ಅದಕ್ಕೆ ಪರ್ಯಾಯವೆನ್ನುವಂತೆ ತಾಸೇರಿಸಿ ಕಟ್ಟಿದ ಸಾಂಸ್ಥಿಕ ರಚನೆಯನ್ನು, ಅದಕ್ಕೆ ಪರ್ಯಾಯವೆನ್ನುವಂತೆ ತಾನು ಕಂಡುಕೊಂಡ ಕೃಷ್ಣನೊಂದಿಗಿನ ಮದುವೆಯನ್ನು, ಲೌಕಿಕಕ್ಕೆ, ಲೋಕದ ಸಂಸ್ಥೆಗಳಿಗೆ ಹೇಳುವ ವಿದಾಯ ಮತ್ತು ವೈರಾಗ್ಯ ಎನ್ನುವಂತೆ ಮೀರ ಪ್ರತಿಪಾದಿಸುತ್ತಾಳೆ. 

ಭಕ್ತಿ ಪಂಥದ ಮಹಿಳೆಯರ ಬದುಕು ಮತ್ತು ಬರವಣಿಗೆಗಳ ಒಳಗೆ ಒಳ ಚಳವಳಿಯೊಂದು, ಬಂಡಾಯದ ಚಹರೆಯೊಂದು ಇದೆ ಎಂದು ಹೇಳುವ ನನ್ನ ವಾದಕ್ಕೆ ತಾರ್ಕಿಕ ಪುರಾವೆಯೊಂದು ಈ ಕವಿತೆಯಲ್ಲಿದೆ. ಬಂಡಾಯದ, ಪ್ರತಿರೋಧದ ಮುಖ್ಯ ಲಕ್ಷಣವೆಂದರೆ, ಯಾವುದನ್ನು ವಿರೋಧಿಸುತ್ತಿದೇವೆಯೋ, ಅದರ ಬಗೆಗೆ ಇರಬೇಕಾದ ಸ್ಪಷ್ಟತೆ ಮತ್ತು ಅದಕ್ಕೆ ಪರ್ಯಾಯವನ್ನು ಮಂಡಿಸುವ, ಪ್ರತಿಪಾದಿಸುವ ಶಕ್ತಿ. ಈ ಎರಡೂ ಇಲ್ಲದಿದ್ದಲ್ಲಿ ಪ್ರತಿರೋಧ ಚಳವಳಿಯ, ಕ್ರಾಂತಿಯ ಸ್ವರೂಪವನ್ನು, ಆಯಾಮವನ್ನು ಪಡೆಯುವುದು ಕಷ್ಟ.

ಇಲ್ಲಿ ಮೀರಾಗೆ ತಾನು ಯಾವುದನ್ನು, ಯಾಕಾಗಿ ವಿರೋಧಿಸುತ್ತಿದ್ದೇನೆ ಎನ್ನುವುದರ ಬಗ್ಗೆ ಅಪಾರ ಸ್ಪಷ್ಟತೆಯಿದೆ. ಇದರ ಬದಲಾಗಿ ತನಗೆ ಬೇಕಾಗಿರುವುದು ಏನು ಎನ್ನುವುದರ ಬಗೆಗೂ ಅಷ್ಟೇ ಖಾಚಿತ್ಯವಿದೆ. ಮುಂದಿನ ಎರಡು ಚರಣಗಳು / ಪದ್ಯಗಳು ವೈರಾಗ್ಯವನ್ನು ಕುರಿತ ಗಂಡು–ಹೆಣ್ಣಿನ ಭಿನ್ನ ದೃಷ್ಟಿಕೋನವನ್ನೇ ಎತ್ತಿ ತೋರಿಸುವಂತಿದೆ. ಸಾಮಾನ್ಯವಾಗಿ ವೈರಾಗ್ಯವೆಂದರೆ ಪುರುಷರ ಮಟ್ಟಿಗೆ         ಕಾವಿಬಟ್ಟೆಯ ಜಟಾಧಾರಿಗಳ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಮೀರಾ ಇದಕ್ಕೆ ತದ್ವಿರುದ್ಧವಾದ ಚಿತ್ರವನ್ನು ನಮ್ಮೆದುರಿಗೆ ನೀಡುತ್ತಿದ್ದಾಳೆ.

ಹೆಣ್ಣಿನ ದೇಹ ಮಗ್ನತೆಯ ವಿವರಗಳನ್ನು, ಅವಳ ದೇಹ ಸೌಂದರ್ಯದ, ಅದನ್ನು ಪ್ರಕಟಿಸುವ, ಮಾತ್ರವಲ್ಲ ಮದುವೆಯಾದ ಹೆಣ್ಣಿನ ಚಿತ್ರಗಳನ್ನೆಲ್ಲ ಇಲ್ಲಿ ಹೊಂದಿಸುತ್ತಾಳೆ. ಮದುವೆಯ ಕೆಂಪು ಸೀರೆ, ಬೈತಲೆ ತೆಗೆದ ಕೂದಲು ಇವೆಲ್ಲ ಪುರುಷನ ವೈರಾಗ್ಯದ ನೆಲೆಗಳಿಗಿಂತ ಭಿನ್ನ ಮಾತ್ರವಲ್ಲ, ವಿರುದ್ಧ ದಿಕ್ಕಿನಲ್ಲಿದ್ದಂತೆ ಭಾಸವಾಗುತ್ತದೆ. ಲೈಂಗಿಕ ಮೀಮಾಂಸೆಯ ಬದಲು ಕೃಷ್ಣನೊಂದಿಗೆ ಉತ್ಕಟ ದೈಹಿಕ ನಿರ್ಬಂಧಕ್ಕಾಗಿ ಸನ್ನದ್ಧಳಾಗುವ, ಕೃಷ್ಣನೊಂದಿಗಿನ ಮಿಲನವನ್ನೇ ವೈರಾಗ್ಯವೆಂದೂ ಪ್ರತಿಪಾದಿಸುವ ಮೀರಾಳ ನಿಲುವು, ಭಾಷೆ ಎಲ್ಲವೂ ಹೊಚ್ಚ ಹೊಸದಾಗಿ, ಹೆಣ್ಣಿಗೇ ವಿಶಿಷ್ಟವೇನೋ ಎನ್ನಿಸುವ ಅನನ್ಯತೆಯಲ್ಲಿ ಪ್ರತಿಪಾದಿತವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT