ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತನ ಪವಾಡಗಳು

Last Updated 17 ಫೆಬ್ರುವರಿ 2011, 18:05 IST
ಅಕ್ಷರ ಗಾತ್ರ

ಒಂದು ದಿನ ಸೂಫೀ ಸಂತ ಹಸನ್ ಬಸ್ರಾ ನದಿಯ ದಂಡೆಯ ಮೇಲೆ ನಡೆದು ಹೋಗುತ್ತಿದ್ದ. ಆಗ ಅವನು ಅತ್ಯಂತ ಪ್ರಭಾವಿ ಸಂತನೆಂದು ಹೆಸರು ಪಡೆದಿದ್ದ. ಅವನನ್ನು ನೋಡಲು ಜನ ದೂರದೂರದಿಂದ ಬರುತ್ತಿದ್ದರು. ಅವತ್ತೂ ಹಾಗೆಯೇ ಅವನನ್ನು ನೋಡಲು ಜನ ಅವನ ಬೆನ್ನು ಹತ್ತಿ ನಡೆದಿದ್ದರು. ಆತ ಇನ್ನೂ ತರುಣ, ತುಂಬ ಸುಂದರಾಂಗ. ಹೀಗೆ ರೂಪ, ಬುದ್ಧಿ, ಖ್ಯಾತಿಗಳು ಸೇರಿಕೊಂಡು ಒಂದು ಅಪರೂಪದ ಪರಿಣಾಮವನ್ನು ಬೀರುತ್ತಿದ್ದವು. ಜನ ತನ್ನನ್ನು ಹಿಂಬಾಲಿಸುತ್ತಾರೆ ಮತ್ತು ತುಂಬ ಮೆಚ್ಚಿಕೊಳ್ಳುತ್ತಾರೆ ಎಂಬುದು ಹಸನ್‌ನಿಗೆ ಗೊತ್ತಿತ್ತು. ಬಹುಶಃ ಅವನಿಗೆ ಅದು ಇಷ್ಟವೂ ಆಗುತ್ತಿತ್ತು.

ಅದೇ ಹೊತ್ತಿನಲ್ಲಿ ಇನ್ನೊಬ್ಬ ಮಹಾನ್ ಸೂಫೀ ಸಂತಳಾದ ರಬಿಯಾ ನದೀ ತೀರಕ್ಕೆ ಬಟ್ಟೆ ಒಗೆಯಲು ಬಂದಿದ್ದಳು. ಆಕೆಯದು ಅತ್ಯಂತ ಸಾತ್ವಿಕ ತೇಜ. ಆಕೆಯನ್ನು ನೋಡಿ ಹಸನ್ ಅವಳ ಬಳಿ ಬಂದ. ಜನ ದೂರದಿಂದ ಇಬ್ಬರೂ ದೊಡ್ಡ ಸಂತರು ಮಾತನಾಡುತ್ತಿರುವುದನ್ನು ಗಮನಿಸಿ ನೋಡುತ್ತಿದ್ದರು. ಹಸನ್ ರಬಿಯಾಳನ್ನು ನೋಡಿ ನಕ್ಕು ತಾನು ಹೊದೆದುಕೊಂಡಿದ್ದ ಶಾಲನ್ನು ತೆಗೆದು ನೀರಿಗೆ ಬೀಸಿ ಎಸೆದು ಬಿಟ್ಟ. ಎಲ್ಲರೂ ಬೆರಗಾಗಿ ನೋಡುತ್ತಿರುವಂತೆ ಅದು ನಿಧಾನವಾಗಿ ಬಿಚ್ಚಿಕೊಂಡು ನೀರ ಮೇಲೆ ತೆಪ್ಪದಂತೆ ತೇಲತೊಡಗಿತು. ಹಸನ್ ಹೇಳಿದ, ‘ರಬಿಯಾ, ನಾವಿಬ್ಬರೂ ಈ ಚಾದರದ ಮೇಲೆ ಕುಳಿತು, ನೀರಿನಲ್ಲಿ ತೇಲುತ್ತ ಭಗವಂತನ ಒಂದೆರಡು ಪ್ರಾರ್ಥನೆಗಳನ್ನು ಹೇಳೋಣ ಬಾ.’

ರಬಿಯಾ, ‘ಯಾಕೆ ಹಸನ್ ಜಗತ್ತಿನ ಈ ಸಂತೆಯಲ್ಲಿ ನಿನಗೆ ಭಗವಂತ ಕೊಡಮಾಡಿರುವ ಶಕ್ತಿಯನ್ನು ಹೀಗೆ ಪ್ರದರ್ಶನದ ವಸ್ತುವಿನಂತೆ ತೋರಿಸಿಕೊಂಡು ಜನರ ಮೇಲೆ ಪ್ರಭಾವ ಬೀರಲು ಬಳಸಿಕೊಳ್ಳುತ್ತೀ? ನೀನು ದೊಡ್ಡವನು ಎಂದು ತೋರಿಸಿಕೊಳ್ಳುವ ಚಪಲವೇ?’ ಎಂದು ಕೇಳಿದಳು. ತಾನು ಒಗೆಯಲು ತಂದಿದ್ದ ಬಟ್ಟೆಗಳ ರಾಶಿಯಿಂದ ಹೊದ್ದಿಕೆಯೊಂದನ್ನು ತೆಗೆದು ಮೇಲಕ್ಕೆಸೆದಳು. ಅದು ಹರಡಿಕೊಂಡು ಎಲೆಯ ತರಹ ಹಾರಲಾರಂಭಿಸಿತು. ಆಗ ಆಕೆ, ‘ಹಸನ್ ನಾವಿಬ್ಬರೂ ಈಗ ಜನರಿಗೆಲ್ಲ ಆಶ್ಚರ್ಯವಾಗುವಂತೆ, ಅದರ ಮೇಲೆ ಕುಳಿತು ಪ್ರಾರ್ಥನೆ ಸಲ್ಲಿಸೋಣ. ಈ ಸೋಜಿಗವನ್ನು ಕಂಡು ಜನ ಇನ್ನಷ್ಟು ಮರುಳಾಗುತ್ತಾರೆ’ ಎಂದಳು. ಅಷ್ಟು ಮೇಲಕ್ಕೆ ಹಾರಾಡುತ್ತಿದ್ದ ಹೊದ್ದಿಕೆಯ ಮೇಲೆ ಏರಿ ಕುಳಿತುಕೊಳ್ಳುವುದು ಹಸನ್‌ನಿಗೆ ಸಾಧ್ಯವಿರಲಿಲ್ಲ. ಆತನಿಗೆ ಮಾತು ಮೂಕವಾಯಿತು, ಗರ್ವ ಇಳಿಯಿತು, ಸಾತ್ವಿಕತೆ ಮನ ತುಂಬಿತು. ಆಕೆಯ ಕಾಲು ಮುಟ್ಟಿ ನಮಸ್ಕರಿದ.

ರಬಿಯಾ ಹೇಳಿದಳು, ‘ಹಸನ್ ಈ ಪವಾಡ ಪ್ರದರ್ಶನ ಅಗ್ಗದ ಪ್ರಚಾರ. ಜನರಿಗೆ ಆಶ್ಚರ್ಯವಾಗುವಂತೆ ಮಾಡಿ ಅವರಿಂದ ಮರ್ಯಾದೆ ಪಡೆಯಬೇಕೆಂಬುದು ಮನೋದೌರ್ಬಲ್ಯ. ನೀನು ಮಾಡಿದ ಪವಾಡವನ್ನು ಒಂದು ಮೀನು ಸಹಜವಾಗಿ ಮಾಡುತ್ತದೆ, ನಾನು ಮಾಡಿದ್ದನ್ನು ಒಂದು ಹಕ್ಕಿ ಸಲೀಸಾಗಿ ಮಾಡುತ್ತದೆ. ನಾವು ಮಾಡುವುದು ಅದೆಂಥ ಪವಾಡ? ಭಗವಂತ ಕ್ಷಣಕ್ಷಣಕ್ಕೆ ಪವಾಡ ಮಾಡುತ್ತಿದ್ದಾನೆ. ಸೂರ್ಯೋದಯ, ಸೂರ್ಯಾಸ್ತ, ಸಮಸ್ತ ಜೀವರಾಶಿ, ಅವುಗಳು ಬದುಕಿ, ಬೆಳೆದು ನಾಶವಾಗುವ ಪರಿ, ಇವೆಲ್ಲ ಅವನ ಪವಾಡಗಳ ದರ್ಶನಗಳು. ಅವನ ಸೇವಕರಾದ ನಾವು ಈ ಹವ್ಯಾಸಗಳನ್ನು ಬಿಟ್ಟು ಅವನು ನಮಗೊಪ್ಪಿಸಿದ, ಆತ್ಮೋದ್ಧಾರದ, ಸಮಾಜದ ಋಣ ತೀರಿಸುವ ಕೆಲಸಗಳನ್ನು ಮಾಡೋಣ ಬಾ’ ಎಂದಳು. ಹಸನ್ ಅವಳನ್ನು ಹಿಂಬಾಲಿಸಿದ.

ಇದು ನಿಜ ಅಲ್ಲವೇ? ಪ್ರತಿಕ್ಷಣ ಪ್ರಪಂಚದಲ್ಲಿ ಪವಾಡಗಳು ನಡೆಯುತ್ತಿವೆ. ಕ್ಷಣಕಾಲ ಬದುಕಿ ಮಾಯವಾಗುವ ಈ ಜೀವನವನ್ನೇ ಚಿರಂಜೀವಿತ್ವ ಎಂದು ಭ್ರಮಿಸಿ ನಾವು ಮಾಡುವ ಹೋರಾಟ, ಬೆದಕಾಟಗಳು ಹಸನ್ ಪ್ರಯತ್ನಿಸಿದ ಪವಾಡಗಳಂತಿವೆ. ನಮ್ಮ ಬದುಕು ಸರಳವಾಗಿ, ಶುದ್ಧವಾಗಿ ನಡೆದಾಗ ಭಗವಂತನ ಪವಾಡಗಳ ಮೆರವಣಿಗೆ ಕಣ್ಣ ಮುಂದೆ ಸಾಗುತ್ತದೆ. ಮನದಲ್ಲಿ ನಮ್ರತೆ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT