ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರ ಸೇತುವೆಗಳು

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

 ಮೊನ್ನೆ ರಾತ್ರಿ ಊಟದಲ್ಲಿ ಮಿಡಿಗಾಯಿ ಉಪ್ಪಿನಕಾಯಿ ಇತ್ತು.  ಅದರ ರುಚಿಯನ್ನು ಸವಿಯುವಾಗ ಡಬೀರರವರ ಪರಿವಾರದ ನೆನಪು ಉಕ್ಕಿ ಬಂತು. ಹುಬ್ಬಳ್ಳಿಯಲ್ಲಿ ಡಬೀರರವರ ಮನೆತನ ಗೌರವಕ್ಕೆ ಪಾತ್ರವಾದದ್ದು. ಅವರದು ದಶಕಗಳಿಂದ ವ್ಯಾಪಾರಕ್ಕೆ ಪ್ರಸಿದ್ಧವಾದ ಮನೆ. ನಾನೂ ಬಹಳ ಜನ ಶ್ರಿಮಂತರನ್ನು ಪ್ರಪಂಚದಲ್ಲೆಲ್ಲ ಕಂಡಿದ್ದೇನೆ.  ಆದರೆ ಬಾಹ್ಯ ಶ್ರಿಮಂತಿಕೆಯೊಡನೆ ಹೃದಯ ಶ್ರಿಮಂತಿಕೆಯನ್ನು ಹೊಂದಿದವರು ಅಪರೂಪ.  ಆ ಅಪರೂಪಕ್ಕೆ ಸೇರಿದ್ದು ಡಬೀರರವರ ಪರಿವಾರ. 

ಹಿರಿಯ ಡಬೀರ ದಂಪತಿಗಳು, ಗಂಡು ಮಕ್ಕಳು, ಸೊಸೆಯಂದಿರು, ಮಗಳು ಆಶಾ, ಅಳಿಯ ಅನಿಲ ಇವರೆಲ್ಲ ಸೇರಿ ಮನೆಯನ್ನು ಆತ್ಮೀಯವಾಗಿಸಿ ಸುಂದರವಾಗಿಸಿದ್ದಾರೆ. 

 ಒಂದು ದಿನ ನನ್ನನ್ನು ನೋಡಬೇಕೆಂದು ಡಬೀರರವರು ಫೋನ್ ಮಾಡಿದಾಗ ನಾನು ಈಗ ಬಾಗಲುಕೋಟೆಯಲ್ಲಿದ್ದೇನೆ,  ಹುಬ್ಬಳ್ಳಿಗೆ ಬರುವುದು ತುಂಬ ತಡವಾಗುತ್ತದೆ, ಮತ್ತೊಮ್ಮೆ ಬಂದು ಕಾಣುತ್ತೇನೆ ಎಂದೆ.  ಅವರು ಆಗ ತಾನೇ ಒಂದು ದೊಡ್ಡ ಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರು.  ಅವರ ಶ್ರಿಮತಿಯವರು ಅದೆಷ್ಟೇ ತಡವಾದರೂ ಬಂದೇ ತೀರಬೇಕು ಎಂದು ಒತ್ತಾಯಿಸಿದರು. 

ನಾನು ಅನುಮಾನಪಡುತ್ತಲೇ ಅವರ ಮನೆ ಸೇರಿದಾಗ ರಾತ್ರಿ ಹನ್ನೆರಡು ಮುಕ್ಕಾಲು! ಎಲ್ಲರೂ ಎದ್ದು ಕುಳಿತದ್ದು ಮಾತ್ರವಲ್ಲ, ಯಾರೂ ಊಟ ಮಾಡದೇ ಕುಳಿತಿದ್ದಾರೆ! ಆ ಸಮಯದಲ್ಲಿ ಆ ತಾಯಿ ಬಿಸಿಬಿಸಿ ಅಡುಗೆ ಮಾಡಿಟ್ಟು ಊಟ ಬಡಿಸಿದ್ದು ಆಶ್ಚರ್ಯವೆನಿಸಿತು!. ಯಾರ ಮುಖದ ಮೇಲೂ ಬೇಸರದ ಒಂದು ಗೆರೆಯೂ ಕಾಣಲಿಲ್ಲ.  ಸಂಭ್ರಮದಿಂದ ಮಾತನಾಡಿದರು.

 ನನಗೆ ಅವರ ಮನೆಯಲ್ಲಿ ಒಂದು ಸಮಸ್ಯೆ ಇದೆ.  ಅವರ ಮನೆಯಲ್ಲಿ ಊಟಕ್ಕೆ ಕುಳಿತಾಗ ಮಿಡಿಕಾಯಿ ಉಪ್ಪಿನಕಾಯಿ ಚೆನ್ನಾಗಿದೆ ಎಂದದ್ದೇ ತಪ್ಪಾಯಿತು.  ಮರುವಾರ ನಮ್ಮ ಮನೆಗೆ ಒಂದು ದೊಡ್ಡ ಡಬ್ಬಿ ಉಪ್ಪಿನಕಾಯಿ ಬಂದಿಳಿಯಿತು.

  ಇನ್ನೊಮ್ಮೆ ಯಾವಾಗಲೋ ಶ್ರಿಮತಿ ಆಶಾರವರ ಮನೆಯಲ್ಲಿದ್ದ ಶ್ರಿಕೃಷ್ಣನ ಚಿತ್ರ ತುಂಬ ಚೆನ್ನಾಗಿದೆ ಎಂದೆ.  ಮುಂದೆ ಒಂದು ತಿಂಗಳಲ್ಲಿ ಅಂಥದೇ ಸುಂದರ ಚಿತ್ರವನ್ನು ಮನೆಗೇ ತಂದು ಕೊಟ್ಟುಬಿಟ್ಟರು.  ಈಗ ನನಗೆ ಅವರ ಮನೆಯ ಯಾವ ವಸ್ತುವನ್ನೂ ಹೊಗಳಲು ಹೆದರಿಕೆಯಾಗಿಬಿಟ್ಟಿದೆ!

ನನಗೆ ಈ ವಿಷಯ ಅದ್ಭುತವೆನ್ನಿಸಲು ಒಂದು ಕಾರಣವಿದೆ.  ಈ ದಿನಗಳಲ್ಲಿ ಅಣ್ಣ-ತಮ್ಮಂದಿರ, ರಕ್ತ ಹಂಚಿಕೊಂಡವರ ಸಂಬಂಧಗಳು ವ್ಯವಹಾರವಾಗುತ್ತಿರುವಾಗ ಯಾವ ರಕ್ತ ಸಂಬಂಧವೂ ಇಲ್ಲದೇ ಕೇವಲ ಪ್ರೀತಿಯೊಂದನ್ನೇ ಬಂಧನವನ್ನಾಗಿ ಬೆಳೆಸಿದ ಬಾಂಧವ್ಯ ಅಪರೂಪದ್ದು.  ನನ್ನಿಂದ ಅವರಿಗೆ ಆಗಬೇಕಾದ್ದು ಏನೂ ಇಲ್ಲ.  ಆದರೂ ಈ ಅಕಾರಣವಾದ ಪ್ರೀತಿಯ ಬಂಧವೇ ಮನುಷ್ಯ   ಮನುಷ್ಯರನ್ನು ಬೆಸೆಯುವ ಪ್ರಬಲ ಕೊಂಡಿಯನ್ನಾಗಿಸಿದೆ.

   ನನಗೊಬ್ಬ ತತ್ವಜ್ಞಾನಿ ಹೇಳಿದ್ದರು.  ಪ್ರತಿಯೊಬ್ಬ ಮನುಷ್ಯ ತೇಲುತ್ತಿರುವ ನಡುಗಡ್ಡೆಯಂತೆ.  ಅವನಿಗೆ ನೆಲೆ ಇಲ್ಲ, ದಿಸೆ ಇಲ್ಲ. ಆದರೆ, ಒಮ್ಮೆ ಒಂದು ಸೇತುವೆ ಕಟ್ಟಿದರೆ ಅಲೆದಾಡುವುದು ತಪ್ಪುತ್ತದೆ. ಹೆಚ್ಚು ಸೇತುವೆಗಳನ್ನು ಕಟ್ಟಿದರೆ ನಡುಗಡ್ಡೆ ಮತ್ತಷ್ಟು ಭದ್ರವಾಗುತ್ತದೆ.

  ಮನುಷ್ಯ ಜೀವನಕ್ಕೆ ಭದ್ರತೆ, ತೃಪ್ತಿ, ಸಂತೋಷಗಳನ್ನು ನೀಡುವುದೇ ಈ ಹೃದಯ-ಹೃದಯಗಳ ನಡುವೆ ನಾವಾಗಿಯೇ ಕಟ್ಟಿಕೊಂಡ ಸೇತುವೆಗಳು.  ಇಂಥ ನಿರಪೇಕ್ಷ ಸೇತುವೆಗಳ ಸಂಖ್ಯೆ ಹೆಚ್ಚಾದಷ್ಟು ಮನಸ್ಸಿಗೆ, ಜೀವಕ್ಕೆ, ಧನ್ಯತೆ, ತೃಪ್ತಿ, ದೊರಕುವುದರೊಂದಿಗೆ ಬದುಕಿಗೊಂದು ಅರ್ಥಬರುತ್ತದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT