ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರವಾದ ನೌಕೆ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನಂತಯ್ಯ ಮೊದಲಿನಿಂದಲೂ ಹಾಗೆಯೇ. ಯಾವುದಕ್ಕೂ ಅಂಟಿಕೊಂಡವರಲ್ಲ. ಅವರು ಬಲವಾಗಿ ಹಿಡಿದು­ಕೊಂಡದ್ದು ಎರಡೇ. ಒಂದು, ಅವರು ಸದಾಕಾಲ ಜಪಿಸುವ, ಪೂಜಿಸುವ ಕೃಷ್ಣ. ಇನ್ನೊಂದು ಅತ್ಯಂತ ಪ್ರೀತಿಯಿಂದ ಅಪ್ಪಿ­ಕೊಂಡಿದ್ದ ಶಿಕ್ಷಕ ವೃತ್ತಿ. ಆಗೆಲ್ಲ ಬಡತನ ಶಿಕ್ಷಕ ವೃತ್ತಿಯೊಂದಿಗೇ ಬೆಸೆದು­ಕೊಂಡಿತ್ತು. ಬಡ ಶಿಕ್ಷಕ ಎನ್ನುವ ಮಾತೇ ಇಲ್ಲ. ಯಾಕೆಂದರೆ ಶಿಕ್ಷಕ ಎಂದರೇ ಬಡತನ.

ಹಾಗಿದ್ದಾಗ ಬಡಶಿಕ್ಷಕ ಎಂಬ ವಿಶೇಷಣೆ ಬೇರೆ ಏಕೆ ಬೇಕು ಎನ್ನು­ವಂತಿತ್ತು. ಅನಂತಯ್ಯ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಬಡತನದಲ್ಲೇ, ಇರುವು­ದರಲ್ಲೇ ಸಂತೋಷಪಡುತ್ತ ತಮ್ಮ ವೃತ್ತಿಯನ್ನು ಸಂಪೂರ್ಣ ತನ್ಮಯತೆಯಿಂದ ನಡೆಸು­ತ್ತಿದ್ದರು. ಅವರ ವಿದ್ಯಾರ್ಥಿಗಳಿಗೆ ಅವರೊಬ್ಬ ಆದರ್ಶ ಪುರುಷ. ಅನಂತಯ್ಯ ತಮ್ಮ ಮನಸ್ಸಿನ ಅತ್ಯಂತ ಸುಂದರವಾದ ಚಿಂತನೆಗಳನ್ನು ಮಕ್ಕಳ ಹೃದಯದಲ್ಲಿ ಬಿತ್ತುತ್ತಿದ್ದರು. ಮನೆಗೆ ಬಂದ ಮೇಲೆ ಅವರಿಗೆ ಬೇರೆ ಹವ್ಯಾಸ­ಗಳಿ­ರಲಿಲ್ಲ.

ಅವರಾಯಿತು ಅವರ ಕೃಷ್ಣ ಆಯಿತು. ಪ್ರತಿಕ್ಷಣ ಅವರ ಬಾಯಿ­ಯಿಂದ ಕೃಷ್ಣ, ಕೃಷ್ಣ ಎಂಬ ಮಾತೇ ಬರುತಿತ್ತು. ಬೆಳಿಗ್ಗೆ ಪೂಜೆ ಮಾಡುವಾಗ ಪುಟ್ಟ ಕೃಷ್ಣನ ವಿಗ್ರಹವನ್ನು ಕಣ್ತುಂಬ ನೋಡಿ, ಮನತುಂಬ ಅವನ ರೂಪವನ್ನು ಕಂಡು ಸಂತೋಷಿಸಿ ಸಂತೋಷ­ಭಾಷ್ಪಗಳನ್ನು ಸುರಿಸದ ದಿನವೇ ಇರಲಿಲ್ಲ. ಅವರಿಗೆ ಕಿರಿಯರು ಯಾರಾ­ದರೂ ನಮಸ್ಕರಿಸಿದರೆ ತಕ್ಷಣ ಕೃಷ್ಣ, ಕೃಷ್ಣ ಎಂದು ಅವನಿಗೇ ಅರ್ಪಿಸಿಬಿಡುತ್ತಿದ್ದರು. ಯಾರಾದರೂ ಸಾಂತ್ವನ ಕೇಳಿ ಬಂದರೆ, ಚಿಂತೆ ಬೇಡ ಕೃಷ್ಣ ಎಲ್ಲವನ್ನೂ ಸರಿಮಾಡುತ್ತಾನೆ ಎನ್ನುವರು.

ಅನಂತ­ಯ್ಯ­ನ­ವರಿಗೆ ವಯಸ್ಸಾಯಿತು. ಕೆಲಸದಿಂದ ನಿವೃತ್ತಿಯೂ ಆಯಿತು. ವೃದ್ಧಾಪ್ಯದೊಡನೆ ಆರೋಗ್ಯವೂ ಕೆಡ­ತೊಡಗಿತು. ತಮಗೆ ತಿಳಿದಿದ್ದ ಮನೆವೈದ್ಯ ಮಾಡಿ ನೋಡಿದರು. ಫಲ ಸಿಗಲಿಲ್ಲ. ಮನೆಯಲ್ಲಿ ಮಗ ದೊಡ್ಡ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿ­ಸೋಣವೆಂದ. ದೊಡ್ಡ ಆಸ್ಪತ್ರೆಯ ಖರ್ಚನ್ನು ನೀಗಿಸುವುದು ಮಗನಿಂದಲೂ ಆಗದು ಎಂದು ತಿಳಿದಿದ್ದ ಅನಂತಯ್ಯ ವಿಷಯವನ್ನು ಮುಂದೂಡುತ್ತ ಬಂದರು. ಆದರೆ, ಆರೋಗ್ಯ ಪೂರ್ತಿ ಹದಗೆಟ್ಟಾಗ ನಿರ್ವಾಹವಿಲ್ಲದೇ ಮಗನನ್ನು ಕರೆದುಕೊಂಡು ದೊಡ್ಡ ಆಸ್ಪತ್ರೆಗೆ ಹೋದರು.

ವೈದ್ಯರು ತಪಾಸಣೆ  ಮಾಡಿದರು. ಇವರನ್ನು ಆಸ್ಪತ್ರೆಯ ನಿರ್ದೇಶಕರಾಗಿದ್ದ ಅತ್ಯಂತ ಹಿರಿಯ ವೈದ್ಯರಿಗೇ ತೋರಿಸಿದರೆ ವಾಸಿಯೆಂದು ಉಳಿದ ವೈದ್ಯರು ತೀರ್ಮಾನಿಸಿ ಅವರ ಬಳಿಗೆ ಕರೆದೊಯ್ದರು. ಆತನಿಗೋ ಒಂದು ಕ್ಷಣವೂ ಪುರುಸೊತ್ತಿಲ್ಲ. ಆದರೆ ಅನಂತಯ್ಯನವರನ್ನು ನೋಡಿದ ತಕ್ಷಣ ಕುರ್ಚಿಯಿಂದ ಮೇಲೆದ್ದು ನಗುನಗುತ್ತ ಬಂದು ಇವರ ಕಾಲು ಮುಟ್ಟಿ ನಮಸ್ಕರಿಸಿದ.

‘ಸರ್ ನಾನು ಭಾಸ್ಕರ, ನಿಮ್ಮ ವಿದ್ಯಾರ್ಥಿಯಾಗಿದ್ದೆ’ ಎಂದು ನೆನಪಿಸಿಕೊಟ್ಟ. ಅನಂತಯ್ಯ ಪ್ರೀತಿಯಿಂದ ಅವನ ತಲೆಯ ಮೇಲೆ ಕೈಯಾಡಿಸಿದರು. ಆತ ಸಂಪೂರ್ಣ ದೇಹ ಪರೀಕ್ಷೆ ಮಾಡಿ ಇದಕ್ಕೆ ಒಂದು ತಿಂಗಳು ಆಸ್ಪತ್ರೆಯಲ್ಲೇ ಇದ್ದು ವಿಶೇಷ ಚಿಕಿತ್ಸೆ ಪಡೆಯಲೇ­ಬೇಕೆಂದು ಹೇಳಿ ಒಂದು ಪ್ರತ್ಯೇಕ ಕೋಣೆಯನ್ನು ವ್ಯವಸ್ಥೆ ಮಾಡಿ, ಒಬ್ಬ ಹಿರಿಯ ದಾದಿಯನ್ನು ಇವರ ಶುಶ್ರೂಷೆಗೇ ನೇಮಿಸಿದ.

ಅನಂತಯ್ಯ­ನವರಿಗೆ, ಅವರ ಮಗನಿಗೆ ಗಾಬರಿ. ಈ ಚಿಕಿತ್ಸೆಗೆ ಅದೆಷ್ಟು ಖರ್ಚೋ? ಅದನ್ನು ಹೇಗೆ ಹೊಂದಿಸುವುದು? ಇವರ ಯಾವ ಪ್ರಶ್ನೆಗೂ ಡಾ. ಭಾಸ್ಕರ, ‘ಯಾವ ಚಿಂತೆ ಮಾಡಬೇಡಿ, ಸುಮ್ಮನಿದ್ದುಬಿಡಿ’ ಎನ್ನುತ್ತಿದ್ದ. ಅವನೇ ಮಗನಂತೆ ನಿಂತು ಕಾಳಜಿ ಮಾಡಿ ನೋಡಿಕೊಂಡ. ಪೂರ್ತಿ ಗುಣಮುಖರಾಗಲು ಎರಡು ತಿಂಗಳೇ ತೆಗೆದುಕೊಂಡಿತು. ಇವರನ್ನು ಮನೆಗೆ ಕಳುಹಿಸುವ ದಿನ ಭಾಸ್ಕರ ತಾನೇ ದೊಡ್ಡ ಹಣ್ಣಿನ ಬುಟ್ಟಿ ತಂದು ಗುರುಗಳಿಗೆ ಕೊಟ್ಟು ನಮಸ್ಕಾರ ಮಾಡಿ ಹೇಳಿದ, ‘ಸರ್, ನೀವಿನ್ನು ಪೂರ್ತಿ ಗುಣವಾಗಿದ್ದೀರಿ.

ವಿಶ್ರಾಂತಿ ತೆಗೆದು­ಕೊಳ್ಳಿ. ಆದರೆ, ಒಂದು ಪ್ರಶ್ನೆ ಸರ್, ನೀವು ಪ್ರತಿ ನಿಮಿಷಕ್ಕೊಮ್ಮೆ ಕೃಷ್ಣ, ಕೃಷ್ಣ ಎನ್ನುತ್ತೀರಲ್ಲ, ಆ ಕೃಷ್ಣ ನಿಮಗೇನು ಮಾಡಿದ? ನಿಮ್ಮ ಆಯುಷ್ಯವೆಲ್ಲ ಬಡತನದಲ್ಲೇ ಕಳೆಯಿತು. ಆರೋಗ್ಯ ಕೆಟ್ಟಾಗ ಕೃಷ್ಣ ಎಲ್ಲಿಗೆ ಹೋಗಿದ್ದ? ಆದರೂ ಯಾಕೆ ಈ ಬಲವಾದ ನಂಬಿಕೆ?’.

ಅನಂತಯ್ಯ ನಕ್ಕರು, ‘ಹುಚ್ಚಾ, ಕೃಷ್ಣ ನನ್ನ ಕೈ ಎಲ್ಲಿ ಬಿಟ್ಟಿ­ದ್ದಾನೋ? ಬಡತನದಲ್ಲೂ ಸಂತೋಷ ಕೊಡಲಿಲ್ಲವೇ? ನನ್ನ ಆರೋಗ್ಯ ಕೆಟ್ಟಾಗ ನಿನ್ನನ್ನು ಹಿಡಿದು ತಂದು ನನ್ನ ಮುಂದೆ ನಿಲ್ಲಿಸಿ ಚಿಕಿತ್ಸೆ ಕೊಡಿಸಲಿಲ್ಲವೇ?’ ಭಾಸ್ಕರ ಈ ನಂಬಿಕೆಗೆ ಬೆರಗಾದ. ಯಾವುದ­ರಲ್ಲೂ ಬಲವಾದ ನಂಬಿಕೆ ಇರಬೇಕು. ನಂಬಿಕೆ ಇಲ್ಲದಿದ್ದಾಗ ಕೈಯಲ್ಲಿದ್ದ ಹಗ್ಗ ಹಾವಾಗುತ್ತದೆ. ನಂಬಿಕೆ ಇದ್ದಾಗ ಹಾವೂ, ಹಗ್ಗದಂತೆ ಕೆಲಸ ಮಾಡುತ್ತದೆ. ಜೀವನದ ಎಡರು ತೊಡರುಗಳನ್ನು ಅಪಾಯವಿಲ್ಲದೇ ದಾಟಿಸುವ ಭದ್ರನೌಕೆಯೇ ಈ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT