ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ ಮೂಡಿಸಿರುವ ದಿಟ್ಟ ನಿರ್ಧಾರ

Last Updated 15 ಜನವರಿ 2013, 19:59 IST
ಅಕ್ಷರ ಗಾತ್ರ

ಜಾಗತಿಕ ಮತ್ತು ದೇಶಿ ಅರ್ಥ ವ್ಯವಸ್ಥೆಯು  2013ನೇ ಸಾಲಿನಲ್ಲಿ ಕ್ರಮಿಸಲಿರುವ ಮಾರ್ಗದ ಬಗ್ಗೆ ವರ್ಷಾರಂಭದಲ್ಲಿ ಅಂದಾಜು ಮಾಡುವುದು ಸಂಪ್ರದಾಯವಾಗಿದೆ. ನಾನು ಕೂಡ ಅದಕ್ಕೆ ಹೊರತಾಗಿಲ್ಲ. ಮುಂದಿನ 12 ತಿಂಗಳುಗಳ ಕಾಲ ಆರ್ಥಿಕ ವಿದ್ಯಮಾನಗಳು ಯಾವ ರೀತಿಯಲ್ಲಿ ತಿರುವು ಪಡೆಯಲಿವೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಅಂದಾಜು ಮಾಡಲು  ಯತ್ನಿಸಿರುವೆ.

ಜಾಗತಿಕ ಅರ್ಥವ್ಯವಸ್ಥೆಯು ಇನ್ನೂ ತನ್ನೆಲ್ಲ ಸಂಕಷ್ಟಗಳಿಂದ ಪಾರಾಗಿಲ್ಲ. 2008ರಲ್ಲಿ ಆರಂಭವಾದ ಆರ್ಥಿಕ ಹಿಂಜರಿಕೆಯು ಈಗಲೂ ಹಲವಾರು ದೇಶಗಳನ್ನು ಬಾಧಿಸುತ್ತಲೇ ಇದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಗಾಗಿ ಇರುವ ಸಂಘಟನೆಯ 34 ಸದಸ್ಯ ದೇಶಗಳು  (ಒಇಸಿಡಿ) ಆರ್ಥಿಕ ಸಂಕಷ್ಟದಿಂದ ಹೊರ ಬರಲು ನಾಲ್ಕು ವರ್ಷಗಳಿಂದ ಏದುಸಿರು ಬಿಡುತ್ತಲೇ ಇವೆ. ಅಭಿವೃದ್ಧಿ ಎನ್ನುವುದು ಈಗಲೂ ಅವುಗಳ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ. ನಿರುದ್ಯೋಗ ಮಟ್ಟ ನಿರಂತರವಾಗಿ ಗರಿಷ್ಠ ಮಟ್ಟದಲ್ಲಿಯೇ ಇದ್ದು, ಆರ್ಥಿಕ ಚಟುವಟಿಕೆಗಳಿಗೆ ಜಡತ್ವ ಆವರಿಸಿದೆ.

ಇಂತಹ ನಿರಾಶಾದಾಯಕ ಪರಿಸ್ಥಿತಿ ಮಧ್ಯೆಯೇ, ಐರೋಪ್ಯ ಒಕ್ಕೂಟದ `ಯೂರೊ' ಕರೆನ್ಸಿಯ ಮುಂದುವರಿಕೆ ಮತ್ತು ಪೋರ್ಚುಗಲ್, ಇಟಲಿ, ಗ್ರೀಕ್ ಮತ್ತು ಸ್ಪೇನ್ (`ಪಿಗ್ಸ್') ದೇಶಗಳು ಆರ್ಥಿಕವಾಗಿ ದಿವಾಳಿ ಏಳದಿರುವುದು ಮಾತ್ರ ಆಶಾಕಿರಣವಾಗಿ ಉಳಿದಿದೆ.
ಯೂರೋಪ್ ಒಕ್ಕೂಟದ ಕೆಲ ದೇಶಗಳು ಅನುಭವಿಸಿದ ಆರ್ಥಿಕ ಸಂಕಷ್ಟವು ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಿದ್ದು,  ವಾಣಿಜ್ಯ ಬ್ಯಾಂಕ್‌ಗಳು ಮತ್ತು ಯೂರೋಪ್ ಕೇಂದ್ರೀಯ ಬ್ಯಾಂಕ್ ಸಾಧಿಸಿದ ಸಮತೋಲನಕ್ಕೆ ಆಸರೆಯಾಗಿ ನಿಂತಿದೆ.

ಭಾರತದ ಉದ್ಯಮಿಗಳು ಈ ದೇಶಗಳಲ್ಲಿನ ಆರ್ಥಿಕ ಮತ್ತು ರಾಜಕೀಯ ವಿದ್ಯಮಾನಗಳನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ. ಈ ದೇಶಗಳಿಗೆ ಭಾರತದ ರಫ್ತು ವಹಿವಾಟು ನಿರಂತರವಾಗಿ ಕಡಿಮೆಯಾಗುತ್ತಿರುವುದು ಉದ್ಯಮಿಗಳ ಚಿಂತೆಗೆ ಕಾರಣವಾಗಿದ್ದು, ಹೊಸ ವರ್ಷದಲ್ಲಿ ಪರಿಸ್ಥಿತಿ ಬದಲಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ.

ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳು, ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಶೇ 50ರಷ್ಟು ಪಾಲು ಹೊಂದಿವೆ. ಜತೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಅರ್ಥ ವ್ಯವಸ್ಥೆ ಮೇಲೆ ನಿರಂತರವಾಗಿ ಪ್ರಭಾವ ಬೀರುತ್ತಲೇ ಇವೆ. ಹೀಗಾಗಿ ಅಲ್ಲಿನ ವಿದ್ಯಮಾನಗಳು ಜಾಗತಿಕ ವಹಿವಾಟಿನ ಗತಿಯನ್ನೇ ನಿರ್ಧರಿಸುವ ಸಾಮರ್ಥ್ಯ ಹೊಂದಿವೆ.

ಅಮೆರಿಕ, ಜಪಾನ್ ಮತ್ತು ಚೀನಾದಲ್ಲಿ ನಾಯಕತ್ವ ಬದಲಾಗಿದ್ದರೂ, ಅವುಗಳ ಆರ್ಥಿಕ ನೀತಿಗಳು ಗಮನಾರ್ಹವಾಗಿ ಬದಲಾವಣೆಗೊಳ್ಳುವ ಸಾಧ್ಯತೆಗಳು ಕಡಿಮೆ ಇವೆ. ಚೀನಾದ ಕರೆನ್ಸಿ (ಯೂಆನ್) ಮೌಲ್ಯವು ನಿರಂತರವಾಗಿ ಹೆಚ್ಚುತ್ತಿರುವುದರ ಜತೆಗೆ, ಅಲ್ಲಿ ಹಣದುಬ್ಬರವೂ ಏರುಗತಿಯಲ್ಲಿ ಇರುವುದು ಖಂಡಿತವಾಗಿಯೂ ಭಾರತಕ್ಕೆ ಲಾಭಕರವಾಗಿ ಪರಿಣಮಿಸಲಿದೆ. 

ಚೀನಾ ಮತ್ತು ಜಪಾನ್ ಮಧ್ಯೆ ಉದ್ಭವಿಸಿರುವ ಹಗೆತನ ಮತ್ತು ದಕ್ಷಿಣ  ಚೀನಾ ಸಮುದ್ರದಲ್ಲಿನ ತ್ವೇಷಮಯ ಬೆಳವಣಿಗೆಗಳು, ಏಷ್ಯಾದ ದೇಶಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಧ್ರುವೀಕರಣಕ್ಕೆ ಕಾರಣವಾಗಲಿವೆ. ಇದು ಜಪಾನಿನ ಉದ್ಯಮಿಗಳು ತಮ್ಮ ಉತ್ಪನ್ನಗಳಿಗಾಗಿ ಇತರ ದೇಶಗಳತ್ತ ನೋಡುವಂತಹ ಅನಿವಾರ್ಯತೆ ಸೃಷ್ಟಿಸಿದೆ. ಇದು ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಭಾರತದಲ್ಲಿ ಸರಕುಗಳ ತಯಾರಿಕೆಗೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸಲಿದೆ.

2012ರಲ್ಲಿ ದೇಶದ ಅರ್ಥ ವ್ಯವಸ್ಥೆಯು ಅಷ್ಟೇನೂ ಹಿತಕರವಲ್ಲದ  ಸಾಧನೆ ದಾಖಲಿಸಿದೆ. ಅನೇಕ ಗುರಿಗಳನ್ನು ಮುಟ್ಟುವಲ್ಲಿ ದೇಶಿ ಆರ್ಥಿಕತೆಯು ವಿಫಲಗೊಂಡಿತು. ತ್ರೈಮಾಸಿಕದಿಂದ ತ್ರೈಮಾಸಿಕದಲ್ಲಿ ಆರ್ಥಿಕ ವೃದ್ಧಿ ದರ ನಿಯಮಿತವಾಗಿ ಕಡಿಮೆಯಾಗುತ್ತಲೇ ಹೋಗಿತ್ತು.

ರಫ್ತು ಬೆಳವಣಿಗೆಯೂ ಮಂದವಾಗಿತ್ತು. ಹೀಗಾಗಿ ವ್ಯಾಪಾರ ಸಮತೋಲನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಯಿತು. ಹಣದುರವು (ಬೆಲೆ ಏರಿಕೆ) ಗರಿಷ್ಠ ಮಟ್ಟದಲ್ಲಿ ಇರುವುದರ ಜತೆಗೆ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದರಗಳೂ ಹೆಚ್ಚಿನ ಮಟ್ಟದಲ್ಲಿಯೇ ಇದ್ದವು.

ಅರ್ಥ ವ್ಯವಸ್ಥೆಯ ಅನೇಕ ವಲಯಗಳಲ್ಲಿಯೂ ಹಿಂಜರಿಕೆ ಕಂಡು ಬಂದಿತು. ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ಸಂಗ್ರಹವು ನಿಗದಿತ ಗುರಿಗಿಂತ ಕಡಿಮೆಯಾಗಿ, ವಿತ್ತೀಯ ಕೊರತೆಯು ಗರಿಷ್ಠ ಪ್ರಮಾಣದಲ್ಲಿಯೇ ಉಳಿಯುವಂತಾಯಿತು.

ಷೇರುಪೇಟೆ ಮತ್ತು ಕರೆನ್ಸಿ ವಿನಿಮಯ ಮಾರುಕಟ್ಟೆಯ ಸಾಧನೆ ಸಕಾರಾತ್ಮಕವಾಗಿತ್ತು. ಷೇರುಗಳ ಬೆಲೆಗಳು ವರ್ಷವೊಂದರಲ್ಲಿ ಶೇ 20ರಷ್ಟು ಏರಿಕೆ ಕಂಡವು. ರೂಪಾಯಿ ಬೆಲೆ ಬಹುತೇಕ ಸ್ಥಿರವಾಗಿತ್ತು.

ಆರ್ಥಿಕ ಸುಧಾರಣೆಗಳ ವಿಷಯದಲ್ಲಿ ಕೇಂದ್ರ ಸರ್ಕಾರವು ಕೆಲವು  ದಿಟ್ಟ ನಿಲುವು ತೆಗೆದುಕೊಂಡು ಅಚ್ಚರಿ ಮೂಡಿಸಿತ್ತು. ಬಹುಬ್ರಾಂಡ್‌ನ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಮತ್ತು ಸಬ್ಸಿಡಿಯಲ್ಲಿ ಕಡಿತ ಮಾಡಿತು.

2013ರ ಮುನ್ನೋಟವು ಕೂಡ ಅಷ್ಟೇನೂ ಆಶಾದಾಯಕವಾಗಿಲ್ಲ. ಕೇಂದ್ರ ಸರ್ಕಾರವು ವೇಗವರ್ಧಕ ಪಾತ್ರ ನಿರ್ವಹಿಸಿ, ಅರ್ಥ ವ್ಯವಸ್ಥೆಯಲ್ಲಿನ ಜಡತ್ವವನ್ನು ತ್ವರಿತವಾಗಿ ನಿವಾರಿಸಬಹುದಾಗಿದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಬಡ್ಡಿ ದರ ಕಡಿತ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಭೂ ಸ್ವಾಧೀನ ಸುಧಾರಣಾ ಕ್ರಮ, ಸಬ್ಸಿಡಿಗಳ ಸರಳೀಕರಣ ಮುಂತಾದವುಗಳನ್ನು ತಕ್ಷಣದಿಂದಲೇ ಕಾರ್ಯಗತಗೊಳಿಸಿ, ಅರ್ಥ ವ್ಯವಸ್ಥೆ ಚೇತರಿಕೆಗೆ ಅಗತ್ಯವಾದ ಪೂರಕ ಪರಿಸರ ನಿರ್ಮಾಣ ಮಾಡಬೇಕಾಗಿದೆ.

ಆರ್ಥಿಕ ಧ್ರುವೀಕರಣದ ಫಲವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಒದಗಿ ಬಂದಿರುವ ಅವಕಾಶಗಳನ್ನು ಬಾಚಿಕೊಳ್ಳಲು ಸರಕುಗಳ ತಯಾರಿಕೆಗೆ ಆದ್ಯತೆ ನೀಡಬೇಕಾಗಿದೆ. ಮೂಲ ಸೌಕರ್ಯ ಕೊರತೆ, ಅಧಿಕಾರಶಾಹಿಯ ವಿಳಂಬ ನೀತಿ ಮತ್ತಿತರ ಕಾರಣಗಳಿಗೆ ಬಂಡವಾಳ ಹೂಡಿಕೆಗೆ ಎದುರಾಗಿರುವ ಅಡಚಣೆಗಳನ್ನೆಲ್ಲ  ನಿವಾರಿಸಲು ಗಂಭೀರವಾಗಿ ಪ್ರಯತ್ನಿಸಬೇಕಾಗಿದೆ.

ಹೊಸ ವರ್ಷಾರಂಭದಲ್ಲಿ   ಸರ್ಕಾರ ಕೈಗೊಂಡಿರುವ ಕೆಲವು ನಿರ್ಧಾರಗಳು ಭರವಸೆ ಮೂಡಿಸಿವೆ ಎನ್ನಬಹುದು. ರೈಲ್ವೆ ದರಗಳ ಹೆಚ್ಚಳವು ಆರ್ಥಿಕತೆಗೆ ಉತ್ತಮ ಸಂಕೇತ ನೀಡಿದೆ. ಹತ್ತು ವರ್ಷಗಳ ನಂತರ ಇಂತಹ ಬದಲಾವಣೆ  ನಡೆದಿದೆ. ಇದು ತುಂಬ ತಡವಾಗಿದೆ ಎಂದರೂ ಸಕಾರಾತ್ಮಕ ನಿರ್ಧಾರವಾಗಿದೆ.

10 ವರ್ಷಗಳವರೆಗೆ ಪ್ರಯಾಣ ದರ ಹೆಚ್ಚಿಸದಿರುವುದರಿಂದ ರೈಲ್ವೆಗೆ ಆಗಿರುವ ನಷ್ಟವುರೂ.25,000 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಯಾಣ ದರ ಹೆಚ್ಚಳದಿಂದ ಕೇವಲರೂ.6,600 ಕೋಟಿಗಳಷ್ಟು ಹೆಚ್ಚುವರಿ ವರಮಾನ ಬರುವ ನಿರೀಕ್ಷೆ ಇದೆ. ಹೀಗಾಗಿ ನಷ್ಟ ಮತ್ತು ನಷ್ಟ ಭರ್ತಿ ಕ್ರಮಗಳ ಮಧ್ಯೆ ಇನ್ನೂ ಸಾಕಷ್ಟು ಅಂತರ ಇದೆ.

ಹತ್ತು ವರ್ಷಗಳಲ್ಲಿನ ಸರಾಸರಿ ಹಣದುಬ್ಬರ ಲೆಕ್ಕಕ್ಕೆ ತೆಗೆದುಕೊಂಡರೂ, ರೈಲ್ವೆ ಪ್ರಯಾಣ ದರವು ಇದುವರೆಗೆ ಕನಿಷ್ಠ ಶೇ 100ರಷ್ಟು ಏರಿಕೆಯಾಗಬೇಕಿತ್ತು. ನಿಯಮಿತ ಅಂತರದಲ್ಲಿ ಪ್ರಯಾಣ ದರಗಳನ್ನು ಹೆಚ್ಚಿಸುತ್ತ ಹೋಗಿದ್ದರೆ, ಪ್ರಯಾಣಿಕರು ಅದನ್ನು ಭರಿಸಲು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.  ಅಗ್ಗದ ಪ್ರಯಾಣ ದರವು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುತ್ತದೆ ಎಂದು ಸರ್ಕಾರ ಭಾವಿಸುವುದೂ ತಪ್ಪು.

ಕೇಂದ್ರ ಸರ್ಕಾರವು ಸೂಕ್ತ ಸಮಯದಲ್ಲಿ ರೈಲ್ವೆಯ ಆಧುನೀಕರಣಕ್ಕೆ  ಕ್ರಮ ಕೈಗೊಳ್ಳದಿರುವುದು ಒಂದರ್ಥದಲ್ಲಿ ಮೂರ್ಖತನವೇ ಸರಿ. ರಸ್ತೆ ಮತ್ತು ವಿಮಾನ ಸಂಚಾರ ಅತ್ಯಂತ ತ್ವರಿತವಾಗಿ ಬದಲಾಗುತ್ತಿರುವಾಗ, ರೈಲ್ವೆ ಪ್ರಯಾಣದಲ್ಲಿ ಸೂಕ್ತ ಮತ್ತು ಆಧುನಿಕ ಬದಲಾವಣೆಗಳನ್ನು ಅಳವಡಿಸಲು ಸರ್ಕಾರ ಮುಂದಾಗದಿರುವುದು ಸರಿಯಲ್ಲ. ಕೊನೆಗೂ ಎಚ್ಚೆತ್ತುಕೊಂಡಿರುವಂತೆ ಕಾಣುವ ಕೇಂದ್ರ ಸರ್ಕಾರವು, ಈಗಲಾದರೂ ರೈಲ್ವೆಯ ಆಧುನಿಕರಣಕ್ಕೆ ಹೆಚ್ಚು ಗಮನ ನೀಡಬೇಕಾಗಿದೆ.

ರೈಲ್ವೆಯ ಸುಧಾರಣೆಗೆ ಹಲವಾರು ಸಲಹೆ ಮತ್ತು ಆಲೋಚನೆಗಳಿದ್ದರೂ, ಅವುಗಳನ್ನು ಕಾರ್ಯಗತಗೊಳಿಸುವ ಇಚ್ಛಾಶಕ್ತಿಯ ಕೊರತೆ ಇರುವ ಭಾವನೆ ಮೂಡುತ್ತದೆ. ಮೂಲ ಸೌಕರ್ಯ ರಂಗದಲ್ಲಿ ಇತರ ದೇಶಗಳಲ್ಲಿ ಕಂಡು ಬರುತ್ತಿರುವ ಬದಲಾವಣೆಗಳು ನಮ್ಮಲ್ಲೂ ಪ್ರತಿಫಲನಗೊಳ್ಳಲಿ ಎಂದೇ ನಾವೆಲ್ಲ ಆಶಿಸಬೇಕಾಗಿದೆ.

ಕೇಂದ್ರ ಸರ್ಕಾರದ ಆರ್ಥಿಕ ಧೋರಣೆಗಳು ಉತ್ತೇಜನಕಾರಿಯಾಗಿವೆ. ಬ್ಯಾಂಕಿಂಗ್ ವಹಿವಾಟನ್ನು ಇನ್ನಷ್ಟು ಉದಾರೀಕರಣಗೊಳಿಸಬೇಕಾಗಿದೆ. ಬ್ಯಾಂಕ್ ಮತ್ತು ಹಣಕಾಸು ವಲಯದಲ್ಲಿ ಇನ್ನೂ ಸಾಕಷ್ಟು ಬದಲಾವಣೆಗಳನ್ನು ನಾವು ನಿರೀಕ್ಷಿಸಬಹುದಾಗಿದೆ. ಗರಿಷ್ಠ ಆದಾಯ ಮಟ್ಟದವರಿಗೆ ಆದಾಯ ತೆರಿಗೆ ದರಗಳನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳು ಮಾತ್ರ ಆತಂತಕ್ಕೆ ಎಡೆ ಮಾಡಿಕೊಟ್ಟಿವೆ. ಒಂದು ವೇಳೆ ಸರ್ಕಾರ ಅಂತಹ ಕ್ರಮ ಕೈಗೊಂಡರೆ ಅದೊಂದು ಪ್ರತಿಗಾಮಿ ನಡೆ ಎನಿಸಲಿದೆ.

ವಿಶಿಷ್ಟ ಗುರುತಿನ ಚೀಟಿ ಬಳಕೆ (ಯುಐಡಿ) ಮತ್ತು ನಗದು ನೇರ ವರ್ಗಾವಣೆ ನೀತಿಯು ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ತರುವ ನಿರೀಕ್ಷೆ ಇದೆ.  ಇವುಗಳು,  ಸಾಮಾಜಿಕ ಮತ್ತು ಆರ್ಥಿಕ ರಂಗದಲ್ಲಿ ಬದಲಾವಣೆಯ ತರುವ ಕ್ರಾಂತಿಕಾರಿ  ಕ್ರಮಗಳಾಗಲಿವೆ.

ಹತ್ತಾರು ಹಗರಣಗಳು ಜನರ ಮನಸ್ಸಿನಿಂದ ನಿಧಾನವಾಗಿ ಮರೆಯಾಗುತ್ತಿರುವುದರಿಂದ ಸರ್ಕಾರ ಸಮಾಧಾನದ ನಿಟ್ಟುಸಿರು ಬಿಡುತ್ತಿದೆ. ಜನರಲ್ಲಿ ಅದರಲ್ಲೂ ಯುವ ಜನಾಂಗದಲ್ಲಿ ಮಡುಗಟ್ಟಿರುವ ಆಕ್ರೋಶವು ಇತ್ತೀಚೆಗೆ ಅಭಿವ್ಯಕ್ತಗೊಳ್ಳುತ್ತಿರುವುದು ಸರ್ಕಾರಿ ಪ್ರಭುಗಳಲ್ಲಿ, ಅಧಿಕಾರಿಗಳಲ್ಲಿ ಮತ್ತು ರಾಜಕೀಯ ಮುಖಂಡರ ಪಾಲಿಗೆ ಮಾತ್ರ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.

ಸಾಮಾಜಿಕ ಮಾಧ್ಯಮಗಳ ಶಕ್ತಿ ಏನು ಎಂಬುದು ಎಲ್ಲರ ಅನುಭವಕ್ಕೆ ಬರುತ್ತಿದೆ.  ಸಂಪತ್ತು ಗಳಿಸುವ ಮತ್ತು ಸೃಷ್ಟಿಸುವ ಹೊಸ ವರ್ಗದ ಜತೆ ಹೇಗೆ ವ್ಯವಹರಿಸಬೇಕು  ಎನ್ನುವ ಸರ್ಕಾರದ ಧೋರಣೆಯನ್ನೂ ಈ ವಿದ್ಯಮಾನಗಳು ಬದಲಿಸುವ ಸಾಧ್ಯತೆಗಳಿವೆ.

ಮುಂದಿನ ಐದು ವರ್ಷಗಳ ಅಧಿಕಾರಕ್ಕೆ ಬರಲು ಮತ್ತೆ ಜನಾದೇಶ ಪಡೆಯಲು ಮತದಾರರ ಮೇಲೆ ಪ್ರಭಾವ ಬೀರಲು ಕೇಂದ್ರ ಸರ್ಕಾರಕ್ಕೆ ಈಗ ಕೇವಲ ಒಂದು ವರ್ಷದ ಅವಧಿ ಮಾತ್ರ ಇದೆ. ಸರ್ಕಾರವು ಈ ಸುವರ್ಣ ಅವಕಾಶವನ್ನು ಕಳೆದುಕೊಳ್ಳಲಾರದು ಎಂದೇ ನಾನು ಭಾವಿಸುವೆ. ಉದ್ಯಮ ಸಮುದಾಯಕ್ಕಂತೂ  ಇನ್ನೊಂದು ಆಶಾದಾಯಕ ವರ್ಷ ಕಾದಿದೆ ಎಂದೂ ಹೇಳಬಹುದು.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT