ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೂ ಬೇಕು `ಥ್ಯಾಚರ್ ಸಿದ್ಧಾಂತ'

Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಾ ರ್ಗರೇಟ್ ಥ್ಯಾಚರ್ ಅವರು  ನಮ್ಮಿಂದ ದೂರವಾದರು ಎನ್ನುವ ಸ್ದ್ದುದಿ ಕೇಳಿದಾಗ, ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡ ಸಿದ್ಧಾಂತ (ಇಸಂ)  ಮರೆಯಲು ಸಾಧ್ಯವೇ ಇಲ್ಲ. ರಾಜಕೀಯ ಮತ್ತು ಆರ್ಥಿಕ ಚಿಂತನೆಯ ವಿಚಾರದಲ್ಲಿ ಜಗತ್ತಿನ ಕೆಲವೇ ಕೆಲವು ಮಂದಿಗೆ ಮಾತ್ರ ಇಂತಹ ಪ್ರಬಲವಾದ ತಮ್ಮದೇ ಆದ ಸಿದ್ಧಾಂತದ ಮುದ್ರೆ ಒತ್ತುವುದು ಸಾಧ್ಯವಿದೆ. ಜಗತ್ತು ಎಂದಿಗೂ ಮರೆಯಲಾಗದಂತಹ ಮಹೋನ್ನತ ಮಹಿಳೆ ಮಾರ್ಗರೇಟ್ ಥ್ಯಾಚರ್.

ಮಾರ್ಗರೇಟ್ ಥ್ಯಾಚರ್ ಅವರು 1979ರಿಂದ 1990ರವರೆಗೆ ಬ್ರಿಟನ್‌ನ ಪ್ರಧಾನಿಯಾಗಿದ್ದರು. ಅವರು ಅಧಿಕಾರಕ್ಕೇರಿದಾಗ ಗರಿಷ್ಠ ಮಟ್ಟದ ಹಣದುಬ್ಬರ, ಅತಿಯಾದ ನಿರುದ್ಯೋಗ, ಅಸಮರ್ಥ ಸರ್ಕಾರಿ ವಲಯ ಹಾಗೂ ಉಗ್ರ ಸ್ವರೂಪದ ಕಾರ್ಮಿಕ ಸಂಘಟನೆಗಳಿಂದಾಗಿ ದೇಶ ಬಹಳ ಗಂಭೀರ ಸ್ವರೂಪದ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿತ್ತು. ಕಲ್ಲಿದ್ದಲು ಉದ್ಯಮವು ಇಡೀ ದೇಶವನ್ನು ತನ್ನ ಮುಷ್ಟಿಯಲ್ಲಿ ಹಿಡಿದುಕೊಂಡಿತ್ತು. ಅವರಿಗಿಂತ ಮೊದಲು ಅಧಿಕಾರ ನಡೆಸಿದವರು ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂದು ಗೊತ್ತಾಗದೆ ತತ್ತರಿಸಿ ಹೋಗಿದ್ದರು.

ಯಥಾಸ್ಥಿತಿ ಮುಂದುವರಿಸುವುದು ಮತ್ತು ಅತ್ಯಂತ ನಿಧಾನವಾದ ಆರ್ಥಿಕ ವೃದ್ಧಿ ದರ ಸಾಧಿಸುವುದರತ್ತ ಗಮನ ಹರಿಸುವುದು ಬಿಟ್ಟರೆ  ಸರ್ಕಾರಕ್ಕೆ ಅನ್ಯ ಮಾರ್ಗವೇ ಇರಲಿಲ್ಲ. ಆದರೆ ಥ್ಯಾಚರ್ ಅವರಿಗೆ ವಿಭಿನ್ನ ಆಲೋಚನೆಗಳಿದ್ದವು. ದೃಢ ಸಂಕಲ್ಪದೊಂದಿಗೆ ಆರ್ಥಿಕ ಬದಲಾವಣೆ ಜಾರಿಗೆ ತರತೊಡಗಿದರು. ಹಲವು ಕ್ಷೇತ್ರಗಳನ್ನು ಅವರು ಖಾಸಗೀಕರಣಗೊಳಿಸಿದರು. ಈ ಮೂಲಕ ಅಲ್ಲಿಯವರೆಗೆ ಯೂರೋಪಿನ ಹಲವು ದೇಶಗಳು ಅನುಸರಿಸಿಕೊಂಡು ಬರುತ್ತಿದ್ದ ಹುರುಪಿನ ಸಮಾಜವಾದ ನೀತಿಗಳಿಂದ ದೇಶವನ್ನು ದೂರ ಸರಿಸತೊಡಗಿದರು.

ತಾವು ತಳೆದ ಇಂತಹ ಆರ್ಥಿಕ ನಿಲುವುಗಳ ಬಗ್ಗೆ ಅವರು ಭಾವುಕರಾಗಿದ್ದರು. ಅಷ್ಟೇ ಅಲ್ಲದೇ,  ಪ್ರತಿ ಹಂತದಲ್ಲೂ ತಮ್ಮ ಬಲಪಂಥೀಯ ಯೋಜನೆಗಳ ಜಾರಿಗಾಗಿ ಹಾಗೂ ತಾವು ಕಂಡ ಕನಸಿನ ಸಾಕಾರಕ್ಕಾಗಿ ಹೋರಾಡಿದರು. ಥ್ಯಾಚರ್ ಅವರ ಈ ಕ್ರಾಂತಿಕಾರಿ ಧೋರಣೆಗಳಿಂದಾಗಿ ಅತ್ಯಂತ ಗೌರವದಿಂದ ಕಾಣಲಾಗುತ್ತಿದ್ದ ಕೆನೇಶಿಯನ್ ಆರ್ಥಿಕ ನೀತಿಗಳು ಕಸದ ಬುಟ್ಟಿ ಸೇರಿದವು, ಬದಲಿಗೆ ಮಿಲ್ಟನ್ ಫ್ರೈಡ್‌ಮನ್ ಮತ್ತು ಹಯೇಕ್ ಅವರ ಹೊಸ ಚಿಂತನೆಗಳು ಮೆರೆದವು.

ಥ್ಯಾಚರ್ ಅವರು ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುದೂರ ಕ್ರಮಿಸಬಲ್ಲಂತಹ ಬದಲಾವಣೆಗಳನ್ನು ತಂದರು. ಇದರಿಂದ ಹಣಕಾಸು ಮಾರುಕಟ್ಟೆ ತ್ವರಿತವಾಗಿ ಪ್ರಗತಿ ಕಂಡಿತು. ಇದರ ಫಲವಾಗಿ ಅಂತರರಾಷ್ಟ್ರೀಯ ಹಣಕಾಸು ಮಾರುಕಟ್ಟೆಗಳಲ್ಲಿ ಲಂಡನ್ ಮತ್ತೆ ಹಳೆಯ ಪ್ರಭಾವಶಾಲಿ ಸ್ಥಾನ ಗಳಿಸಿಕೊಂಡಿತು. ಅವರು ತೆರಿಗೆ ಹೊರೆಯನ್ನು ತಗ್ಗಿಸಿ ಹಲವಾರು ನೀತಿಗಳಲ್ಲಿ ಬದಲಾವಣೆ ತಂದರು. ಇದರಿಂದ ಉದ್ಯೋಗ ನೀಡುವವರಿಗೆ ಅನುಕೂಲವಾಯಿತು ಹಾಗೂ ಕಾರ್ಮಿಕ ಸಂಬಂಧಿತ ಉಗ್ರಗಾಮಿ ಮನೋಭಾವ ಮತ್ತು ಚಳವಳಿಗಳು ನಿಯಂತ್ರಣಕ್ಕೆ ಬಂದವು.

ಸಂಕ್ಷಿಪ್ತವಾಗಿ ಹೇಳುವುದಾದರೆ ಅವರ ಅಧಿಕಾರ ಅವಧಿಯಲ್ಲಿ ಬಂಡವಾಳಶಾಹಿಗೆ ಬಹಳ ದೊಡ್ಡ ಉತ್ತೇಜನ ಸಿಕ್ಕಿತು.  ಇವರ 11 ವರ್ಷಗಳ ಅಧಿಕಾರ ಅವಧಿಯ ಕೊನೆಯಲ್ಲಿ ಬ್ರಿಟನ್ ಬಲಿಷ್ಠ ಮತ್ತು ಸ್ಪಂದನಶೀಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತ್ತು.

ಹಣದುಬ್ಬರ, ಆರ್ಥಿಕ ಪ್ರಗತಿಯಂತಹ ಆರ್ಥಿಕ ಮಾನದಂಡಗಳೆಲ್ಲವೂ ಆರೋಗ್ಯಪೂರ್ಣವಾಗಿದ್ದವು ಹಾಗೂ ಬ್ರಿಟನ್ ಯಾವ ಕಾರಣಕ್ಕೂ ಯೂರೋಪ್‌ನ `ಕಾಯಿಲೆಯ ಕೂಸಾಗಿ' ಉಳಿಯಲಿಲ್ಲ. ಜಾಗತಿಕ ಹಣಕಾಸು ಕ್ಷೇತ್ರದಲ್ಲಿ ಬದಲಾವಣೆ ಮತ್ತು ಆದ್ಯತೆಗಳನ್ನು ತಂದವರು ಥ್ಯಾಚರ್ ಎಂದು ಅವರ ಅಭಿಮಾನಿಗಳು ಮತ್ತು ಬಲಪಂಥೀಯ ರಾಜಕಾರಣಿಗಳು ಹೇಳುತ್ತಾರೆ. ಥ್ಯಾಚರ್ ಅವರು ಇಂತಹ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳದೆ ಹೋಗುತ್ತಿದ್ದರೆ ಸಮಾಜವಾದ ಎಂಬುದು ಜಗತ್ತನ್ನು ಮುಳುಗಿಸಿಬಿಡುವ ಭೀತಿ ಇತ್ತು ಮತ್ತು ಥ್ಯಾಚರ್ ತಂದಿತ್ತ ಆರ್ಥಿಕ ಪ್ರಗತಿ ಸಾಧ್ಯವಾಗುತ್ತಲೇ ಇರಲಿಲ್ಲ ಎಂದೂ ಹಲವರು ಅಭಿಪ್ರಾಯಪಡುತ್ತಾರೆ.

ಮಹಾನ್ ವ್ಯಕ್ತಿಗಳಿಗೆಲ್ಲ ಇರುವಂತೆ ಥ್ಯಾಚರ್ ಅವರಿಗೂ ಟೀಕಾಕಾರರು ಮತ್ತು ಕಾಲೆಳೆಯುವವರು ಇದ್ದರು. ದೃಢವಾದ ಕೈಗಾರಿಕಾ ನೆಲೆ ಅಳಿಸಿಹಾಕಿದ ಮತ್ತು ಕಾರ್ಮಿಕ ಚಳವಳಿಯನ್ನು ಶಾಶ್ವತವಾಗಿ ದುರ್ಬಲಗೊಳಿಸಿದ ಆರೋಪ ಅವರ ಮೇಲೆ ಇತ್ತು. ಹಣಕಾಸು ಕ್ಷೇತ್ರ ಮುಕ್ತಗೊಳಿಸುವ ಅವರ ನೀತಿಗಳಿಗೆ ಟೀಕಾಕಾರರು `ಬಿಗ್ ಬ್ಯಾಂಗ್' ಎಂದು ಕರೆಯುತ್ತಿದ್ದರು.

ಅವರು ತಳೆದ  ನೀತಿಯಿಂದಾಗಿಯೇ ಹಣಕಾಸು ಕ್ಷೇತ್ರ ಅನಾರೋಗ್ಯಕರವಾಗಿ ಬೆಳವಣಿಗೆ ಹೊಂದಿತು, ಅದರ ಪರಿಣಾಮದಿಂದಾಗಿಯೇ 2008ರಲ್ಲಿ ಜಾಗತಿಕ ಆರ್ಥಿಕ ಕುಸಿತ ಆರಂಭವಾಯಿತು ಎಂಬ ಟೀಕೆ ಸಹ ಇದೆ. ಹಣಕಾಸು ನೀತಿಯಲ್ಲಿನ ಈ ಮಹತ್ವದ ಬದಲಾವಣೆಯಿಂದಾಗಿ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ದೊಡ್ಡ ಪಾಲು ಹಣಕಾಸು ಸೇವೆಯಿಂದಲೇ ದೊರೆಯುವಂತಾಯಿತು.

ಆರ್ಥಿಕ ಚಟುವಟಿಕೆಗಳು ಕುಸಿದ ಕಾರಣಕ್ಕೆ ಸರ್ಕಾರ ದೊಡ್ಡ ಮಟ್ಟದ್ಲ್ಲಲಿ ಸಾಲ ಮಾಡಬೇಕಾಯಿತು, ವೈಯಕ್ತಿಕ ಸಾಲವೂ ಅಧಿಕವಾಯಿತು. ಬ್ಯಾಂಕ್‌ಗಳನ್ನು ಸಂಕಷ್ಟದಿಂದ ಪಾರು ಮಾಡಬೇಕಾಯಿತು ಮತ್ತು ಆರ್ಥಿಕ ಹಿಂಜರಿತ ಕಂಡುಬಂತು. ಆದರೆ, ನಿಜವಾಗಿ ಹೇಳುವುದಾದರೆ ಇದಕ್ಕೆಲ್ಲ ಥ್ಯಾಚರ್ ಅವರನ್ನು ದೂರುವುದು ತಪ್ಪಾಗುತ್ತದೆ. ಮುಂದೆ ಆರ್ಥಿಕ ಬಿಕ್ಕಟ್ಟು ಬರಲಿರುವುದನ್ನು ಗಮನಿಸದ ಥ್ಯಾಚರ್ ನಂತರದ ಜಾಗತಿಕ ನಾಯಕರು ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳೇ ಇದಕ್ಕೆಲ್ಲ ಹೊಣೆಗಾರರು ಎನ್ನಲೇಬೇಕು.

 ಉತ್ತರ ಸಮುದ್ರ ಭಾಗದಿಂದ ತೈಲ ಹರಿದು ಬರುವುದನ್ನು ಥ್ಯಾಚರ್ ಅವರಿಗೆ ಒಲಿದ ಅದೃಷ್ಟ ಎಂದೇ ಬಿಂಬಿಸಲಾಗುತ್ತಿತ್ತು. ಬಳಿಕ ಅದೇ ವಿಚಾರ ಅವರ ವಿರುದ್ಧವೂ ಕೆಲಸ ಮಾಡಿಬಿಟ್ಟಿತು.

ಥ್ಯಾಚರ್ ಅವರು ಅಂದಿನ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಜತೆಗೆ ಅತ್ಯುತ್ತಮ ಸಂಬಂಧ ಹೊಂದಿದ್ದರು. ರೇಗನ್ ಅವರ ಆರ್ಥಿಕ ಚಿಂತನೆ (ರೇಗನಾಮಿಕ್ಸ್) ಮತ್ತು ಥ್ಯಾಚರ್ ಅವರ ಆರ್ಥಿಕ ಸಿದ್ಧಾಂತಗಳ (ಥ್ಯಾಚರಿಸಂ) ಸಮಷ್ಟಿ ಪರಿಣಾಮ ಜಗತ್ತಿನಲ್ಲಿನ ಆರ್ಥಿಕ ಪ್ರಗತಿಯಲ್ಲಿ ಬೊಟ್ಟುಮಾಡಿ ತೋರಿಸುವಂತಹ ಪರಿಣಾಮವನ್ನು ಬೀರಿಬಿಟ್ಟಿತ್ತು.

ಫಾಲ್ಕ್‌ಲೆಂಡ್ ಯುದ್ಧದಲ್ಲಿ ಅರ್ಜೆಂಟೈನಾ ವಿರುದ್ಧ ಅವರು ದೇಶಕ್ಕೆ ಜಯ ದೊರಕಿಸಿಕೊಟ್ಟರು. ಈ ಮೂಲಕ ಇಡೀ ಜಗತ್ತಿಗೆ `ಸ್ತ್ರೀ ಸಾಮರ್ಥ್ಯ' ಏನು ಎಂಬುದನ್ನು ತೋರಿಸಿಕೊಟ್ಟರು. ಈ ಮೂಲಕ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದರು.
ಸೋವಿಯತ್ ಒಕ್ಕೂಟದ್ಲ್ಲಲಿ ಕಮ್ಯುನಿಸ್ಟ್ ಆಡಳಿತ ಕೊನೆಗೊಳಿಸುವಲ್ಲಿ ಅವರು ಮಿಖಾಯಿಲ್ ಗೋರ್ಬಚೇವ್ ಅವರಿಗೆ ಬೆಂಬಲ ನೀಡುವ ಮೂಲಕ 'ಉಕ್ಕಿನ ಮಹಿಳೆ' ಎಂದೂ ಎನಿಸಿಕೊಂಡರು.

ಯುರೋಪ್‌ನ ಪಶ್ಚಿಮ ಭಾಗದ ರಾಷ್ಟ್ರಗಳ ಪ್ರಬಲ ವಿರೋಧದ ನಡುವೆಯೂ ಬ್ರಿಟನ್‌ನಲ್ಲಿ ಅಮೆರಿಕದ ಪರಮಾಣು ಸಿಡಿತಲೆಗಳನ್ನು ನಿಯೋಜಿಸುವುದಕ್ಕೆ ಒಪ್ಪಿಗೆ ಸೂಚಿಸಿದರು. ಯುರೋಪ್‌ನಲ್ಲಿ ಬ್ರಿಟನ್‌ನ ಪಾತ್ರದ ಬಗ್ಗೆ ಚರ್ಚೆ ಆರಂಭಿಸುವುದಕ್ಕೆ ಅವರೇ ಕಾರಣ. ಯೂರೋಪ್‌ನಲ್ಲಿ ಕರೆನ್ಸಿ `ಯೂರೊ' ಚಲಾವಣೆಯಲ್ಲಿದ್ದರೂ, ಬ್ರಿಟನ್‌ನಲ್ಲಿ ಮಾತ್ರ ಈಗಲೂ `ಪೌಂಡ್ ಸ್ಟರ್ಲಿಂಗ್' ಕರೆನ್ಸಿ ಬಳಕೆ ಮುಂದುವರಿದಿರುವುದಕ್ಕೆ ಥ್ಯಾಚರ್ ಅವರ ಯೋಜನೆಗಳು ಚಿಗುರೊಡೆದಿರುವುದೇ ಕಾರಣ ಎಂದೂ ಕೆಲವು ಆರ್ಥಿಕ ತಜ್ಞರು ಹೇಳುತ್ತಾರೆ.

ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಮಾರ್ಗರೇಟ್ ಥ್ಯಾಚರ್ ಅನುಸರಿಸುತ್ತಿದ್ದ ಶೈಲಿಯೇ ಅವರಿಗೆ ಕೊನೆಯಲ್ಲಿ ಮುಳುವಾಯಿತು. ರಾಜಿ ಮಾಡಿಕೊಳ್ಳದ, ಒಂದು ರೀತಿಯ ದುರಹಂಕಾರ ಪ್ರವೃತ್ತಿ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿಸಿತು. ಥ್ಯಾಚರ್ ಅವರ ನಿಲುವುಗಳು ಮತ್ತು ನೀತಿಗಳು ಸಾಕಷ್ಟು ಫಲ ನೀಡುವುದರ ಜತೆಗೆ  ತೀವ್ರ ಟೀಕೆಗಳಿಗೂ ಒಳಗಾದವು. ಆರ್ಥಿಕ ಹಿಂಜರಿತ ಕಂಡುಬಂದ ಬಳಿಕ ಜಗತ್ತಿನಲ್ಲಿ ಇಂದು, ಹಿಂದೆ ಅವರು ಜಾರಿಗೆ ತಂದಿದ್ದ ನೀತಿಗಳು ನಿಧಾನವಾಗಿ ತಿರುವು ಮುರುವು ಪಡೆಯತೊಡಗಿವೆ.

ಹಲವು ದೇಶಗಳಲ್ಲಿ ಸರ್ಕಾರದ ಪಾತ್ರ ದೊಡ್ಡ ಪ್ರಮಾಣದಲ್ಲಿ ಹೆಚ್ಚತೊಡಗಿದೆ. ನಿಯಮಾವಳಿಗಳು ಮತ್ತು ನಿಯಂತ್ರಣಗಳು ಪ್ರತೀಕಾರ ರೀತಿಯಲ್ಲಿ ಹಿಂದಿರುಗುತ್ತಿವೆ. ಚೀನಾದ ಅಭಿವೃದ್ಧಿ ಮಾದರಿ ಸ್ವೀಕಾರಗೊಳ್ಳುತ್ತಿರುವುದರಿಂದ `ಥ್ಯಾಚರಿಸಂ'ನ ಔಚಿತ್ಯವನ್ನೇ ಪ್ರಶ್ನಿಸುವಂತಾಗಿದೆ. ಜಗತ್ತಿನ ಭವಿಷ್ಯದ ನಡೆ ಹೇಗೆಯೇ ಇರಲಿ, ಥ್ಯಾಚರ್ ಮಾತ್ರ ದೀರ್ಘ ಕಾಲ ಉಳಿಯುವಂತಹ ಮತ್ತು ಅಳಿಸಲಾಗದಂತಹ ಪ್ರಭಾವವನ್ನು ತಮ್ಮ ಹಿಂದೆ ಬಿಟ್ಟು ಹೋಗಿದ್ದಾರೆ. ಜಾಗತಿಕ ಮಹಾಯುದ್ಧ ನಂತರದ ಒಬ್ಬರು ಮಹಾನ್ ನಾಯಕರು ಎಬಂತೆ ಅವರು ಸದಾ ಸ್ಮರಣೆಗೆ ಪಾತ್ರರಾಗಲಿದ್ದಾರೆ.

ದೇಶದ ಅಭ್ಯುದಯಕ್ಕಾಗಿ ಕೇವಲ ಒಬ್ಬ ಉತ್ತಮ ನಾಯಕ ಇಂತಹ ಬದಲಾವಣೆಗಳನ್ನು ತರುವುದು ಸಾಧ್ಯವಿದೆ. ಮುಂದಿನ ಚುನಾವಣೆಯಲ್ಲಿ ಭಾರತ ತನ್ನ ಥ್ಯಾಚರ್ ಅವರನ್ನು ಪಡೆದೀತು ಎಂದು ನಾನು ಆಶಿಸುತ್ತೇನೆ.

- ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT