ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕ್ರಿಕೆಟ್‌ಪ್ರೇಮಿ ಅನಾಥ

Last Updated 6 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಹಣ ಕೊಟ್ಟು ನೋಡುವ ಪ್ರೇಕ್ಷಕ ಅನಾಥ. ಅವನಿಗೆ ಯಾವ ರೀತಿಯ ಮರ್ಯಾದೆಯೂ ಇಲ್ಲ. ಮೊದಲು ಟಿಕೆಟ್ ಪಡೆಯಲು ಆತ ಹೆಣಗಾಡುತ್ತಾನೆ. ನಂತರ ಕ್ರೀಡಾಂಗಣದೊಳಗೆ ಹೋಗಲು ಎಲ್ಲ ರೀತಿಯ ದೈಹಿಕ, ಮಾನಸಿಕ ಕಿರಿಕಿರಿ ಅನುಭವಿಸುತ್ತಾನೆ. ಒಳಗೆ ಹೋದರೆ ಸರಿಯಾದ ಸೀಟಿಗಾಗಿ ಪರದಾಡುತ್ತಾನೆ. ನೀರು, ತಿಂಡಿ ತೀರ್ಥಕ್ಕಾಗಿ ದುಬಾರಿ ಬೆಲೆ ತೆರುತ್ತಾನೆ. ಏನಾದರೂ ಗದ್ದಲವಾಗಿ ಲಾಠಿ ಪ್ರಹಾರವಾದರೆ ಪೆಟ್ಟು ತಿಂದು, ಚಪ್ಪಲಿ ಕಳೆದುಕೊಂಡು ನೋವಿನಿಂದ ಮನೆಗೆ ಹೋಗುತ್ತಾನೆ. ಆದರೂ ಅವನ ಕ್ರಿಕೆಟ್ ಹುಚ್ಚು ಬಿಟ್ಟಿಲ್ಲ ಎಂಬ ಮಾತು ಬೇರೆ! ಆದರೆ ಪುಕ್ಕಟೆ ಪಾಸು ಪಡೆಯುವ ಸಾವಿರಾರು ಜನ, ಆಟ ಗೊತ್ತಿಲ್ಲದಿದ್ದರೂ ಆಡಂಬರಕ್ಕಾಗಿ ವಿಶೇಷ ಟಿಕೆಟ್‌ಗಳನ್ನು ಪಡೆಯುವ ಶ್ರೀಮಂತರು, ಪಾಸು ಪಡೆಯುವುದು ತಮ್ಮ ಹಕ್ಕು ಎಂದು ಗಲಾಟೆ ಮಾಡುವ ರಾಜಕಾರಣಿಗಳು, ಮಹಾನಗರಪಾಲಿಕೆ ಸದಸ್ಯರು, ವಿದ್ಯುತ್ ಮಂಡಳಿ, ಜಲಮಂಡಳಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಆರಾಮವಾಗಿ ಮಜಾ ಮಾಡುತ್ತಾರೆ. ಅವರು ನಿಜಕ್ಕೂ ಕ್ರಿಕೆಟ್ ಆಟವನ್ನು ಆನಂದಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ನನಗನಿಸುವಂತೆ ಅವರೆಲ್ಲ ಆಟದ ಕೌಶಲವನ್ನು ಅನುಭವಿಸುವುದಕ್ಕಿಂತ ಕ್ರೀಡಾಂಗಣದಲ್ಲಿ ಅವರಿಗೆ ಕೊಡಮಾಡುವ ರಾಜಾತಿಥ್ಯವನ್ನು ಹೆಚ್ಚು ಆನಂದಿಸುತ್ತಾರೆ.

ಇದು ಇಂದಿನ ಕಥೆ ಅಲ್ಲ. ಬಹಳ ಹಿಂದಿ ನಿಂದಲೂ ನಡೆದುಕೊಂಡು ಬಂದಿದೆ. ಕ್ರಿಕೆಟ್‌ನಲ್ಲಿ ಅದು ಹೆಚ್ಚು ಎದ್ದು ಕಾಣುತ್ತದೆ. ಯಾಕೆಂದರೆ ನಮ್ಮಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಬಂದಾಗ, ಅದರಲ್ಲೂ ಭಾರತ ಆಡುವಾಗ ಒಂದು ರೀತಿಯ ಉನ್ಮಾದ ಉದ್ಭವವಾಗುತ್ತದೆ. ಎಲ್ಲರ ಕ್ರಿಕೆಟ್‌ಪ್ರೇಮ ಜಾಗೃತವಾಗುವುದು ಈ ಸಂದರ್ಭ ದಲ್ಲಿ ಮಾತ್ರ. ಎಲ್ಲರಿಗೂ ಪಾಸ್ ಬೇಕು, ಟಿಕೆಟ್ ಬೇಕು. ಅದೇ ರಣಜಿ ಟ್ರೋಫಿ ಅಥವಾ ಬೇರೆ ಪ್ರಥಮ ದರ್ಜೆ ಪಂದ್ಯಗಳು ನಡೆದರೆ ಯಾರಿಗೂ ಗೊತ್ತೇ ಇರುವುದಿಲ್ಲ. ಇದೇ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಮಹೇಂದ್ರಸಿಂಗ್ ದೋನಿ ಅವುಗಳಲ್ಲಿ ಆಡುತ್ತಿದ್ದರೂ ಕ್ರೀಡಾಂಗಣ ಖಾಲಿ ಯಾಗಿರುತ್ತವೆ. ನಿಜವಾದ ಕ್ರಿಕೆಟ್‌ಪ್ರೇಮಿ ಮಾತ್ರ ಆ ಪಂದ್ಯಗಳನ್ನು ನೋಡುತ್ತಿರುತ್ತಾನೆ. ಕ್ರಿಕೆಟ್ ಈ ದೇಶದ ಧರ್ಮ ಎಂದು ಪ್ರಚಾರ ಮಾಡುವ ಜನ ಶಾಲಾ ಕಾಲೇಜುಗಳ ಕ್ರಿಕೆಟ್ ಬಗ್ಗೆ ಯಾಕೆ ಆಸಕ್ತಿ ತೋರುವುದಿಲ್ಲ? ಕ್ರಿಕೆಟ್ ಧರ್ಮ ಅಲ್ಲ, ಎಲ್ಲ ರೀತಿಯ ಮೋಸ, ಅವ್ಯವಹಾರಗಳಿಂದ ತುಂಬಿರುವ ಅಧರ್ಮ.

ನವದೆಹಲಿಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡೆಗಳಲ್ಲೂ ಹೀಗೆ ಆಯಿತು. ದುಡ್ಡು ಕೊಟ್ಟು ಕ್ರೀಡೆಗಳನ್ನು ನೋಡುವ ಮನಸ್ಸಿನ ಜನ ಮೂರ್ಖರಾದರು. ಟಿಕೆಟ್ ಇಲ್ಲ ಎಂದು ಹೇಳಲಾಯಿತು. ಅವುಗಳನ್ನು ಏನು ಮಾಡಲಾಯಿತು ಎಂದು ಯಾರಿಗೂ ಗೊತ್ತಿಲ್ಲ. ಎಷ್ಟೋ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನೋಡಲು ಜನರೇ ಇರಲಿಲ್ಲ. ಜನರ ಕ್ರೀಡಾಸಕ್ತಿ ಯನ್ನೇ ಕೊಲ್ಲಲಾಗಿತ್ತು. ಕ್ರಿಕೆಟ್‌ನಲ್ಲಿ ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹೈಸ್ಕೂಲು, ಕಾಲೇಜು,

ವಿಶ್ವವಿದ್ಯಾಲಯಗಳಲ್ಲಿ ಆಡುವ ಕ್ರಿಕೆಟ್ ಹುಡುಗರಿಗೆ ಅಂತರರಾಷ್ಟ್ರೀಯ ಪಂದ್ಯಗಳನ್ನು, ಆಟಗಾರರನ್ನು ಪ್ರತ್ಯಕ್ಷ ನೋಡುವ ಅವಕಾಶವೇ ಸಿಗುವುದಿಲ್ಲ. ಯಾಕೆಂದರೆ ಅವರಿಗೆ ಯಾರೂ ಪಾಸ್ ಕೊಡುವುದಿಲ್ಲ. ಕ್ಯೂ ನಿಂತರೂ ಟಿಕೆಟ್ ಸಿಗುವುದಿಲ್ಲ. ಈಗ ಕರ್ನಾಟಕ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿಯಾಗಿರುವ ಜಾವಗಲ್ ಶ್ರೀನಾಥ್ ಅವರಿಗೇ 1987 ರ ವಿಶ್ವ ಕಪ್ ಸಮಯದಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಫೆಬ್ರುವರಿ 27 ರಂದು ನಡೆದ ಭಾರತ-ಇಂಗ್ಲೆಂಡ್ ವಿಶ್ವ ಕಪ್ ಕ್ರಿಕೆಟ್ ಪಂದ್ಯದ ಟಿಕೆಟ್ ಹಗರಣ ಗಲಾಟೆಗೆ ಕಾರಣವಾಗಿದೆ. ಜನರಲ್ಲಂತೂ ಬಹಳ ಅಸಮಾಧಾನವಿದೆ. ಆದರೆ ಪುಕ್ಕಟೆ ಟಿಕೆಟ್, ಪಾಸ್ ಪಡೆದಿರುವ ಶಾಸಕರು ಯಾಕೆ ಗಲಾಟೆ ಮಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಅವರಿಗೆ ಬೇಕಾದಷ್ಟು ಸಂಖ್ಯೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂದೇ ಅಥವಾ ಜನಪ್ರತಿನಿಧಿಗಳಾಗಿರುವ ತಮಗೆ ಎಲ್ಲವೂ ಪುಕ್ಕಟೆಯಾಗಿಯೇ ಸಿಗಬೇಕು ಎಂಬ ಮನೋಭಾವ ಕಾರಣವೇ? ಅಥವಾ ಇದು ತಮ್ಮ ಹಕ್ಕು ಎಂಬ ಭಾವನೆ ಅವರಲ್ಲಿದೆಯೇ? ಈ ಮೂರೂ ಅವರಲ್ಲಿವೆ ಎಂದೆನಿಸುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸರ್ಕಾರ ಜಾಗ ಕೊಟ್ಟಿರಬಹುದು. ಹಾಗೆಂದು ಅದರ ಮೇಲೆ ಸಚಿವರ, ಶಾಸಕರ ಹಕ್ಕು ಸ್ಥಾಪಿತವಾಗುತ್ತದೆಯೇ? ಎಲ್ಲ ಮಾಜಿ, ಹಾಲಿ ಸಂಸದರು, ಶಾಸಕರು, ಸಚಿವರು, ಅಧಿಕಾರಿಗಳು, ಪೊಲೀಸರು ಸೇರಿದರೆ ಅವರ ಸಂಖ್ಯೆ ಸಾವಿರಾರು ಆಗುತ್ತದೆ. ಇವರ ಜೊತೆ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಇತರ ಇಲಾಖೆ ಸದಸ್ಯರು ಸೇರಿಕೊಂಡರೆ ಅವರೆಲ್ಲರಿಗೂ ಹತ್ತು ಸಾವಿರಕ್ಕೂ ಹೆಚ್ಚು ಕುರ್ಚಿಗಳನ್ನು ಮೀಸಲಿಡಬೇಕಾಗುತ್ತದೆ. 

ಒಂದು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಸಲು ಕೆಲವು ಇಲಾಖೆಗಳ ಸಹಕಾರ ಬೇಕಾಗುತ್ತದೆ. ಮುಖ್ಯವಾಗಿ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರ ನೆರವು ಬೇಕು. ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆಗೆ ಕ್ರಿಕೆಟ್ ಸಂಸ್ಥೆ ಹಣ ಕಟ್ಟಬೇಕಾಗುತ್ತದೆ.

ಹೊನಲು ಬೆಳಕಿನ ವ್ಯವಸ್ಥೆ, ನೀರು ಸರಬರಾಜಿಗೆ ಹಣ ಕೊಡಲೇಬೇಕಾಗುತ್ತದೆ. ಇವುಗಳನ್ನು ಸಂಸ್ಥೆ ಕೊಟ್ಟಿರುತ್ತದೆ. ಆದರೂ ಎಲ್ಲರೂ ಪಾಸ್ ಪಡೆಯುವುದು ತಮ್ಮ ಹಕ್ಕು ಎಂದೇ ವರ್ತಿಸುತ್ತ ವಿಪರೀತ ಬೇಡಿಕೆ ಮುಂದಿಡುತ್ತಾರೆ. ಹಿಂದಿ ನಿಂದಲೂ ಇಂಥ ಒಂದು ವ್ಯವಸ್ಥೆ ಬೆಳೆದುಬಂದು ಬಿಟ್ಟಿದೆ. ವಿಧಾನಸೌಧದಲ್ಲಿ ನಿರ್ದಿಷ್ಟ ಸಂಖ್ಯೆಯಲ್ಲಿ ಪಾಸುಗಳನ್ನು ಕೊಡುತ್ತ ಬರಲಾಗಿದೆ. ಈಗ ಬೇಡಿಕೆ ಹತ್ತಾರು ಪಟ್ಟು ಹೆಚ್ಚಿದೆ. ಸಂಸ್ಥೆ ಹಿಂದೇಟು ಹಾಕಿದಾಗ ಎಲ್ಲರಿಗೂ ಸಿಟ್ಟು ಬರುತ್ತದೆ. ಇವರಿಗೆಲ್ಲ ತಮ್ಮ ಊರಿನಲ್ಲಿ ಒಂದು ವಿಶ್ವ ಕಪ್ ಪಂದ್ಯ ನಡೆಯುವುದು ಹೆಮ್ಮೆಯ ವಿಷಯ, ಅದಕ್ಕೆ ಸಹಕಾರ ಕೊಡಬೇಕು ಎಂದು ಅನಿಸುವುದೇ ಇಲ್ಲವೇ?

ಇವರಿಗೆಲ್ಲ ಪಾಸುಗಳನ್ನು ಕೊಡಬೇಕೆಂಬ ಯಾವ ನಿಯಮವೂ ಇಲ್ಲ. ಏನೋ ಒಂದು ರೀತಿಯ ಗೌರವದ ಪದ್ಧತಿ ಬೆಳೆದಿದೆ. ಅದು ಪರವಾಗಿಲ್ಲ. ಆದರೆ ಕೇಳಿದಷ್ಟು ಕೊಡಬೇಕು ಎನ್ನುವ ದರ್ಪ ಖಂಡನಾರ್ಹ. ಸರ್ಕಾರ ಜಾಗ ಕೊಟ್ಟಿದ್ದರೆ, ಸಂಸ್ಥೆಗೆ ಕೆಲವು ಷರತ್ತುಗಳನ್ನು ಹಾಕಿ. ಯಾವುದೇ ರಾಷ್ಟ್ರೀಯ, ಅಂತರರಾಷ್ಟ್ರೀಯ ಪಂದ್ಯಗಳು ಬಂದಾಗ ಶೇ. ಐದು ಅಥವಾ ಹತ್ತರಷ್ಟು ಟಿಕೆಟ್‌ಗಳನ್ನು ರಿಯಾಯತಿ ದರದಲ್ಲಿ ಸರ್ಕಾರಿ ಶಾಲೆಯ ಕ್ರೀಡಾಪಟುಗಳಿಗೆ ಕೊಡಬೇಕೆಂದು ಕಡ್ಡಾಯ ಮಾಡಿ. ಇದರಿಂದ ಸರ್ಕಾರಿ ಶಾಲೆಗೆ ಬರುವ ಬಡಮಕ್ಕಳಿಗೂ ತಮ್ಮ ನೆಚ್ಚಿನ ಕ್ರಿಕೆಟ್‌ಪಟುಗಳ ಆಟ ನೋಡುವ ಅವಕಾಶ ಕಲ್ಪಿಸಿದಂತಾಗುತ್ತದೆ. ಜನಪ್ರತಿನಿಧಿಗಳ ನಡವಳಿಕೆ ಕ್ರೀಡೆ ಬೆಳೆಯಲು ಸಹಾಯಕವಾಗಬೇಕು.

ಟಿಕೆಟ್ ಮಾರಾಟದಲ್ಲಿ ನಿಜಕ್ಕೂ ಅವ್ಯವಹಾರ ವಾಗಿದ್ದರೆ ಈ ಶಾಸಕರು ತನಿಖೆಗೆ ಒತ್ತಾಯಿಸಲಿ. ಆದರೆ ಇದರಲ್ಲಿ ತಮಗೆ ಸಿಕ್ಕಿಲ್ಲ ಎಂಬ ದುರುದ್ದೇಶ ಇರಬಾರದು. 1993 ರಲ್ಲಿ ನಕಲಿ ಟಿಕೆಟ್ ಹಗರಣದಲ್ಲಿ  ರಾಜ್ಯ ಕ್ರಿಕೆಟ್ ಸಂಸ್ಥೆ ಪದಾಧಿಕಾರಿ ಗಳನ್ನು ಪಾರು ಮಾಡಿದವರು ಈ ರಾಜಕಾರಣಿ ಗಳೇ ಅಲ್ಲವೇ? ರಾಜಕೀಯದಂತೆ ಕ್ರಿಕೆಟ್‌ನಲ್ಲೂ ಪಾರದರ್ಶಕತೆ ಇಲ್ಲದಿರುವುದೇ ಹಗರಣಗಳಿಗೆ ಮುಖ್ಯ ಕಾರಣ. ಜೊತೆಗೆ ಯಾರಿಗೂ ತಾನು ಇದಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂಬ ಜವಾಬ್ದಾರಿಯೇ ಇಲ್ಲ. ಏನು ಬೇಕಾದ್ದನ್ನು ಮಾಡಬಹುದು ಎಂಬ ಸೊಕ್ಕು ಇವರೆಲ್ಲರಲ್ಲೂ ತುಂಬಿದೆ.

ಕ್ರಿಕೆಟ್ ಇಂದು ದೊಡ್ಡದಾಗಿ ಬೆಳೆದಿದ್ದರೆ ಅದಕ್ಕೆ ಹಣ ಕೊಟ್ಟು ನೋಡಿರುವ ಪ್ರೇಕ್ಷಕ ಕಾರಣ. ಅವನ ಪ್ರೋತ್ಸಾಹದಿಂದಲೇ ಎಲ್ಲ ಆಟಗಾರರೂ ಬೆಳೆದವರು. ಅವನಿಗೆ ಕನಿಷ್ಠ ಮರ್ಯಾದೆಯನ್ನಾ ದರೂ ಕೊಡುವ ಸೌಜನ್ಯ ಸಂಸ್ಥೆಗಳಿಗೆ ಇರಬೇಕು. ಒಂದು ಕ್ರೀಡಾಂಗಣದ ಶೇ. 50 ರಷ್ಟಾದರೂ ಟಿಕೆಟ್‌ಗಳು ಕ್ರಿಕೆಟ್‌ಪ್ರೇಮಿ ಜನಸಾಮಾನ್ಯರಿಗೆ ಸಿಗಬೇಕು. ಟಿಕೆಟ್ ಮಾರಾಟ ವ್ಯವಸ್ಥೆಯಲ್ಲಿ ಸುಧಾರಣೆಯಾಗದಿದ್ದರೆ ಮುಂದೆಯೂ ಇದೇ ರೀತಿ ಗಲಾಟೆ ಆಗುತ್ತಲೇ ಇರುತ್ತದೆ. ‘ಸಭ್ಯ’ ಆಟಗಾರರೆಂದು ಹೆಸರು ಮಾಡಿ, ಆರಿಸಿ ಬಂದಿರುವ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಅವರಿಗೆ ಆಡಳಿತದ ಕುರ್ಚಿ ಎಷ್ಟು ಬಿಸಿ ಎಂಬುದು ಈಗ ಅರ್ಥವಾಗಿರಬಹುದು. ಟಿಕೆಟ್ ವಿಷಯದಲ್ಲಿ ಈಗಿರುವ ಕೆಟ್ಟ ವ್ಯವಸ್ಥೆಯನ್ನು ಖಂಡಿತವಾಗಿಯೂ ಸುಧಾರಿಸಬಹುದು. ಆದರೆ ಅದಕ್ಕೆ ಗಟ್ಟಿ ಮನಸ್ಸು ಬೇಕು. ಆಗ ಅವರು ನಿಜಕ್ಕೂ ಕ್ರಿಕೆಟ್‌ಪ್ರೇಮಿಗಳ ಗೌರವಕ್ಕೆ ಪಾತ್ರರಾಗುತ್ತಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT