ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ರಾಜಕೀಯವೂ, ಅಮೆರಿಕದ ಚುನಾವಣೆಯೂ

Last Updated 29 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಯಾವಾಗಲೂ ವಿಶ್ವದ ಗಮನ ಸೆಳೆಯುತ್ತದೆ. ಜಗತ್ತಿನಾದ್ಯಂತದ ಹಲವು ಘಟನೆಗಳು ಹಾಗೂ ರಾಜಕೀಯ ಸಂಗತಿಗಳ ಮೇಲೆ ಈ ಚುನಾವಣೆಯ ಫಲಿತಾಂಶ ಪ್ರಭಾವ ಬೀರುತ್ತದೆ.

ಈ ಕಾರಣಕ್ಕಾಗೇ ನಾನು, ಅಮೆರಿಕದ ವಿವಿಧ ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ಎರಡು ಮತ್ತು ಉಪಾಧ್ಯಕ್ಷ ಚುನಾವಣೆಯ ಒಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದೆ.

ಈ ಚರ್ಚೆಗಳ ಗುಣಮಟ್ಟ ಮತ್ತು ಅದರಲ್ಲಿ ಭಾಗವಹಿಸಿದ್ದವರಿಗೆ ಸಂಗತಿಗಳ ಗ್ರಹಿಕೆಯಲ್ಲಿ ಇದ್ದ ಆಳವಾದ ಜ್ಞಾನದ ಕೊರತೆ ನೋಡಿದವರಲ್ಲಿ ಬೇಸರ ಮತ್ತು ಕಳವಳ ಮೂಡಿಸುವಂತಿತ್ತು. ಒಬಾಮ ಅಥವಾ ರೋಮ್ನಿ ಯಾರೇ ಆಗಿರಲಿ ಒಬ್ಬ ನಾಯಕನ ಪಾತ್ರ ನಿರ್ವಹಿಸುವ ಬದಲು, ವಿಷಯಗಳ ಬಗ್ಗೆ ಅತ್ಯಂತ ಸಂಕುಚಿತ ರಾಜಕೀಯ ದೃಷ್ಟಿಕೋನ ಹೊಂದಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಒಮ್ಮೆ ಆಯ್ಕೆಯಾದ ನಂತರ ಈ ನಾಯಕರು ಕೈಗೊಳ್ಳಬಹುದಾದ ನಿರ್ಧಾರಗಳ ಬಗ್ಗೆ ಯೋಚಿಸಿದರೆ ನಡುಕ ಹುಟ್ಟುತ್ತದೆ. ಒಬಾಮ ಸೋತವರಂತೆ ಉತ್ಸಾಹಶೂನ್ಯರಾಗಿ ಕಂಡರೆ, ರೋಮ್ನಿ ಸಹ ತಮ್ಮ ಸಂಕುಚಿತ ಕಟ್ಟುಪಾಡುಗಳ ರೂಢಿಗತ ದೃಷ್ಟಿಕೋನವನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನವನ್ನೇನೂ ಮಾಡಿರಲಿಲ್ಲ.

ಒಟ್ಟಿನಲ್ಲಿ ಅವರಿಬ್ಬರಿಗೂ ಯೋವುದೇ ಹೊಸ ಯೋಜನೆಗಳಾಗಲಿ, ಚಿಂತನೆಗಳಾಗಲಿ ಅಥವಾ ಅಮೆರಿಕ ಸೇರಿದಂತೆ ಇಡೀ ವಿಶ್ವವನ್ನೇ ಆವರಿಸಿಕೊಂಡಿರುವ ನಿರುದ್ಯೋಗ, ಪರಿಸರ, ಆರ್ಥಿಕತೆ, ಆರೋಗ್ಯ ರಕ್ಷಣೆ ಮತ್ತು ವಿದೇಶಾಂಗ ನೀತಿಯ ಸಮಸ್ಯೆಗಳ ಬಗ್ಗೆ ಪರಿಹಾರವಾಗಲಿ ಇದ್ದಂತೆ ತೋರಲಿಲ್ಲ. ಅಂತಿಮವಾಗಿ ಅವರಿಬ್ಬರೂ ಪ್ರದರ್ಶಿಸುತ್ತಿದ್ದುದು ತಮ್ಮ ತಮ್ಮ ರಾಜಕೀಯ ಚಾಣಾಕ್ಷತನವನ್ನು ಮಾತ್ರ.

ನಮ್ಮ ರಾಜಕಾರಣಿಗಳನ್ನು ನಾವು ಇಲ್ಲಿ ಹೇಗೆ ತೀವ್ರವಾಗಿ ಟೀಕಿಸುತ್ತೇವೆಯೋ ಅಮೆರಿಕದಲ್ಲೂ ಅದೇ ಪರಿಸ್ಥಿತಿ ಇದೆ. ಭಾರತದಲ್ಲಿ ಸದ್ದುಗದ್ದಲದಿಂದ ಕೂಡಿದ, ಅಷ್ಟೇನೂ ಆರೋಗ್ಯಕರವಾಗಿಲ್ಲದ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂದು ಹೇಳಲಾಗುತ್ತದೆ. ಅಮೆರಿಕದಲ್ಲಿ ಇರುವುದು ಆರೋಗ್ಯಪೂರ್ಣವಾದ, ಗದ್ದಲರಹಿತ ದ್ವಿಪಕ್ಷೀಯ ವ್ಯವಸ್ಥೆಯನ್ನು ಹೊಂದಿದ ಪ್ರಜಾಪ್ರಭುತ್ವ ಎಂಬ ಭಾವನೆ ಸಾಮಾನ್ಯವಾಗಿದೆ.

ಆದರೆ ಕೊಂಚ ಆಳಕ್ಕೆ ಇಳಿದು ನೋಡಿದವರಿಗೆ ಎರಡೂ ದೇಶಗಳ ಇಂದಿನ ರಾಜಕಾರಣಿಗಳಲ್ಲಿ, ಅವರ ರಾಜಕೀಯ ಚರ್ಚೆಗಳಲ್ಲಿ, ವಾದಗಳಲ್ಲಿ ಮತ್ತು ಕುರುಡು ಪಂಥಾಭಿಮಾನದಲ್ಲಿ ಹೆಚ್ಚೇನೂ ವ್ಯತ್ಯಾಸ ಇಲ್ಲ ಎಂಬುದು ತಿಳಿಯುತ್ತದೆ.

ರಾಜಕಾರಣಿಗಳು ಭಾರತದಲ್ಲಿರಲಿ ಅಥವಾ ಅಮೆರಿಕದಲ್ಲಿರಲಿ, ಕಾಂಗ್ರೆಸ್‌ನಲ್ಲಿರಲಿ, ಬಿಜೆಪಿಯವರಾಗಿರಲಿ, ಡೆಮಾಕ್ರೆಟಿಕ್ ಅಥವಾ ರಿಪಬ್ಲಿಕ್ ಪಕ್ಷಕ್ಕೆ ಸೇರಿದವರಾಗಿರಲಿ ಅವರೆಲ್ಲರ ಮೂಲ ಸ್ವಭಾವ ಒಂದೇ ರೀತಿ ಇರುತ್ತದೆ. ತಮ್ಮ ನಾಗರಿಕರಿಗೆ ಅಥವಾ ಮಾನವ ಕುಲಕ್ಕೆ ಸಂಬಂಧಿಸಿದ ವ್ಯಾಪಕ ಸಂಗತಿಗಳಿಗಿಂತ ಹೆಚ್ಚಾಗಿ ಅವರು ತಮ್ಮ ಬಗ್ಗೆಯೇ ಹೆಚ್ಚು ಗಮನ ಕೇಂದ್ರೀಕರಿಸಿಕೊಂಡಿರುತ್ತಾರೆ.

ಕಳೆದ ಎರಡು ವರ್ಷಗಳಿಂದ ಈ ಎರಡೂ ದೇಶಗಳಲ್ಲಿ ನಾಗರಿಕರ ಪ್ರತಿಕ್ರಿಯೆಗಳು ಮತ್ತು ನಾಗರಿಕ ಸಮಾಜದ ಆಂದೋಲನ ಗರಿಗೆದರಿದೆ. ಅದು ಭಾರತದಲ್ಲಿನ ಭ್ರಷ್ಟಾಚಾರ ವಿರೋಧಿ ಆಂದೋಲನವೇ ಆಗಿರಬಹುದು ಅಥವಾ ಅಮೆರಿಕದ `ವಾಲ್‌ಸ್ಟ್ರೀಟ್ ಮುತ್ತಿಗೆ~ ಇರಬಹುದು. ಜನಸಾಮಾನ್ಯರಲ್ಲಿ ಚಡಪಡಿಕೆ ಹೆಚ್ಚಾಗುತ್ತಿದ್ದು, ಉತ್ತರದಾಯಿತ್ವ ಮತ್ತು ಪಾರದರ್ಶಕ ವ್ಯವಸ್ಥೆಗಾಗಿ ಅವರು ದನಿ ಎತ್ತುತ್ತಿದ್ದಾರೆ.

ಇದೊಂದು ಅತ್ಯಂತ ಆಶಾದಾಯಕ ಬೆಳವಣಿಗೆ. ಆದರೆ ಇದರ ಜೊತೆ ಜೊತೆಗೇ,  ಒಂದು ವೇಳೆ ಇದೇ ನಾಗರಿಕರು ಚುನಾವಣಾ ಗದ್ದಲದೊಳಕ್ಕೆ ಅಡಿ ಇಡುವ ಮನಸ್ಸನ್ನೇನಾದರೂ ಮಾಡಿದರೆ ಅವರು ಎದುರಿಸಬೇಕಾಗಿ ಬರುವ ಸವಾಲುಗಳನ್ನೂ ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಭಾರತದಲ್ಲಿ ಚುನಾವಣಾ ಕಣಕ್ಕೆ ಇಳಿಯುವುದಕ್ಕೆ ನಿಮ್ಮ ಅರ್ಹತೆಯಾಗಲಿ, ಸದುದ್ದೇಶದ ಮನಸ್ಸಾಗಲಿ ಅಥವಾ ಸಾಮಾಜಿಕ ಸೇವೆಯ ದಾಖಲೆಗಳಾಗಲಿ ಲೆಕ್ಕಕ್ಕೆ ಬರುವುದಿಲ್ಲ. ನಿಮ್ಮ ಬಳಿ ಎಷ್ಟು ಹಣ ಇದೆ, ನೀವು ಯಾವ ಜಾತಿಯವರು, ನಿಮ್ಮ ಮನೆತನ ಯಾವುದು, ಆಟದ ನಿಯಮಗಳನ್ನು ಬಗ್ಗಿಸಲು ಮತ್ತು ಮುರಿಯಲು ನೀವು ಎಷ್ಟರಮಟ್ಟಿಗೆ ಸಮರ್ಥರು ಎಂಬುದನ್ನು ಅದು ಅವಲಂಬಿಸಿರುತ್ತದೆ.

ಸಭ್ಯನಾದ  ಒಬ್ಬ ಸಾಧಾರಣ ಅಮೆರಿಕನ್ನನಿಗೂ ರಾಜಕೀಯ ಪ್ರವೇಶ ಸುಲಭದ ಮಾತಲ್ಲ. ಅಲ್ಲೂ ಶೇ 98ರಷ್ಟು ಸೆನೆಟರ್‌ಗಳು ಮತ್ತು ಕಾಂಗ್ರೆಸ್ ಸದಸ್ಯರು ಮರು ಆಯ್ಕೆ ಆಗುತ್ತಾರೆ. ಅವರು ಅಧಿಕಾರಾವಧಿಯಲ್ಲಿ ಮರಣ ಹೊಂದಿದರೆ ಮಾತ್ರ ಬೇರೆಯವರು ಆಯ್ಕೆಯಾಗಬಹುದು ಎಂಬ ಮಾತು ಅಲ್ಲಿ ಚಾಲ್ತಿಯಲ್ಲಿದೆ.

ಚುನಾವಣೆಯಲ್ಲಿ ಹಣ ಬಲದ ಪಾತ್ರ ಉಭಯ ದೇಶಗಳಲ್ಲೂ ಚರ್ಚೆಗೆ ಒಳಪಡುತ್ತಿದೆ. ನಮ್ಮ ಚುನಾವಣಾ ಆಯೋಗ ನಿಗದಿಪಡಿಸಿರುವ ಚುನಾವಣಾ ವೆಚ್ಚದ ಮಿತಿ ಎಷ್ಟು ತಮಾಷೆಯಾಗಿದೆ ಎಂಬುದು ನಮಗೆಲ್ಲ ಗೊತ್ತು. ಸಂಸತ್ ಚುನಾವಣಾ ಅಭ್ಯರ್ಥಿಯ ಗರಿಷ್ಠ ವೆಚ್ಚ ಮಿತಿ 25 ಲಕ್ಷ ರೂಪಾಯಿ.

ಆದರೆ ವಾಸ್ತವದಲ್ಲಿ ಅವರು ಏನಿಲ್ಲವೆಂದರೂ 30- 50 ಕೋಟಿ ರೂಪಾಯಿಯನ್ನಾದರೂ ವ್ಯಯಿಸುತ್ತಾರೆ ಎಂದೇ ಹೇಳಲಾಗುತ್ತದೆ. ಹಾಗಿದ್ದರೆ ದೇಶದಾದ್ಯಂತ ನಮ್ಮ ಲೋಕಸಭಾ ಚುನಾವಣೆಗಾಗಿ ಎಷ್ಟು ಹಣ ಖರ್ಚಾಗಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ.
ಅಮೆರಿಕದ ಪರಿಸ್ಥಿತಿ ಸಹ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಈ ವರ್ಷದ ಅಧ್ಯಕ್ಷೀಯ ಚುನಾವಣೆಗಾಗಿ ಇಬ್ಬರು ಅಭ್ಯರ್ಥಿಗಳಿಂದ ಒಟ್ಟಾರೆ 2.5 ಶತಕೋಟಿ ಡಾಲರ್ ಖರ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಜನಪ್ರತಿನಿಧಿಗಳ ಚುನಾವಣೆಗೆ ತಗಲುವ 3.5 ಶತಕೋಟಿ ಡಾಲರ್‌ನ್ನೂ ಇದಕ್ಕೆ ಸೇರಿಸಿದಾಗ ಆಗುವ ಒಟ್ಟಾರೆ ಮೊತ್ತ ದಿಗಿಲು ಹುಟ್ಟಿಸುತ್ತದೆ. 6 ಶತಕೋಟಿ ಡಾಲರ್, ಅಂದರೆ ನಮ್ಮ  ರೂಪಾಯಿಯಲ್ಲಿ ಹೇಳುವುದಾದರೆ 32 ಸಾವಿರ ಕೋಟಿ ಈ ಚುನಾವಣೆಗಳಿಗಾಗಿ ಖರ್ಚಾಗುತ್ತದೆ.

ಅದರಲ್ಲೂ ಇದು ಆರ್ಥಿಕ ಬಿಕ್ಕಟ್ಟಿನ ಕಾಲ. ಹಾಗಿರುವಾಗ ಇಂತಹ ಸಮಯದಲ್ಲಿ ಇಷ್ಟೆಲ್ಲ ಹಣ ಎಲ್ಲಿಂದ ಬರುತ್ತದೆ ಮತ್ತು ಅಭ್ಯರ್ಥಿಗಳು ಇದನ್ನೆಲ್ಲ ಯಾವುದಕ್ಕಾಗಿ ಖರ್ಚು ಮಾಡುತ್ತಾರೆ? ಭಾರತದಲ್ಲೇನೋ ಚುನಾವಣಾ ಪ್ರಚಾರಕ್ಕೆ, ಮತದಾರರನ್ನು ಕೊಳ್ಳುವುದಕ್ಕೆ ಮತ್ತು ಅವರನ್ನು ಸಂಪ್ರೀತರನ್ನಾಗಿಸುವುದಕ್ಕೆ ಬಳಸುತ್ತಾರೆ ಎಂದು ನಾವು ಹೇಳಬಹುದು.

ಆದರೆ ಅಮೆರಿಕದಲ್ಲಿ ಬಹುತೇಕ ಹಣ ಪ್ರಚಾರ ಕಾರ್ಯ ಮತ್ತು ಟಿ.ವಿ ಸಮಯಕ್ಕಾಗಿ ಬಳಕೆಯಾಗುತ್ತದೆ. ನೂರಾರು ಗಂಟೆಗಳ ಟಿ.ವಿ ಜಾಹೀರಾತು ನೀಡುವುದು ಎಂದರೆ ವಾಹಿನಿಗಳು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಹೆಚ್ಚು ಹೆಚ್ಚು ಹಣ ಸೇರುತ್ತದೆ ಎಂದರ್ಥ. ಭಾರತದಲ್ಲಿ ರಾಜಕಾರಣಿಗಳಿಗೆ ಇಂತಹ ಹಣ ಲಂಚ ಅಥವಾ ರುಷುವತ್ತುಗಳ ಮೂಲಕ ಹರಿದು ಬಂದರೆ, ಅಮೆರಿಕದಲ್ಲಿ ಇದೇ ಹಣ ಅತ್ಯಂತ ಘನತೆಯಿಂದ `ಪ್ರಚಾರ ನಿಧಿ~ ಎಂದು ಕರೆಸಿಕೊಳ್ಳುತ್ತದೆ.

ಹೀಗೆ `ಪ್ರಚಾರ ನಿಧಿ~ಗೆ ಹಣ ನೀಡಿದವರ ಪಟ್ಟಿಯನ್ನು ಗಮನಿಸಿದರೆ, ಇವರೆಲ್ಲ ಇಷ್ಟೊಂದು ಹಣವನ್ನು ಯಾಕಾಗಿ ನೀಡುತ್ತಾರೆ ಎಂಬುದು ಅರ್ಥವಾಗುತ್ತದೆ. ಇಷ್ಟೇ ಅಲ್ಲದೆ ಪ್ರಭಾವಿ ಗುಂಪುಗಳು ಚುನಾವಣೆಗೆ ಮಾಡುವ ಖರ್ಚನ್ನೂ ಇದಕ್ಕೆ ಸೇರಿಸಿ ನೋಡಬೇಕಾಗುತ್ತದೆ. ಅಮೆರಿಕದಲ್ಲಿ 11,700ಕ್ಕೂ ಹೆಚ್ಚು ನೋಂದಾಯಿತ ಪ್ರಭಾವಿ ಗುಂಪುಗಳಿದ್ದು, ಅವು ಈ ವರ್ಷವೊಂದರಲ್ಲೇ ಸುಮಾರು 1.68 ಶತಕೋಟಿ ಡಾಲರ್ ವ್ಯಯಿಸಿವೆ.

ಪರಿಸ್ಥಿತಿ ಹೀಗಿರುವಾಗ ಗೆಲ್ಲುವ ಅಭ್ಯರ್ಥಿ ಹೀಗೆ ತನಗೆ ದೇಣಿಗೆ ಕೊಟ್ಟ ಮಂದಿಗೆ ಎಷ್ಟು ಕೃತಾರ್ಥನಾಗಿರಬೇಕು ಎಂಬುದನ್ನು ಊಹಿಸಲು ಹೆಚ್ಚು ಬುದ್ಧಿವಂತಿಕೆಯೇನೂ ಬೇಕಾಗದು. ಹೀಗಾಗಿ ಭಾರತದಲ್ಲಾಗಲಿ ಅಥವಾ ಅಮೆರಿಕದಲ್ಲಾಗಲಿ ಯಾವುದೇ ನಿರ್ಧಾರ ಕೈಗೊಳ್ಳುವುದರ ಹಿಂದೆ ಸಾರ್ವಜನಿಕ ಹಿತಾಸಕ್ತಿಗೆ ಬದಲಾಗಿ ಇಂತಹ ಹಿತಾಸಕ್ತಿಗಳು ಮತ್ತು ಒತ್ತಾಯಪೂರ್ವಕ ಗುಂಪುಗಳ ನಿರ್ದೇಶನವೇ ಹೆಚ್ಚು ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ನೆನೆಸಿಕೊಂಡಾಗ ತತ್ತರಿಸುವಂತಾಗುತ್ತದೆ.

ಯಾವ ರೂಪದಲ್ಲೇ ಇರಲಿ ಭ್ರಷ್ಟಾಚಾರ ಭ್ರಷ್ಟಾಚಾರವೇ. ಇದನ್ನೆಲ್ಲ ನೋಡಿದಾಗ ಪ್ರಜಾಪ್ರಭುತ್ವಕ್ಕಾಗಿ ನಾವು ಇಂತಹ ಬೆಲೆಯನ್ನೆಲ್ಲಾ ತೆರಬೇಕಾಗುತ್ತದೆಯೇ ಎಂದು ಅಚ್ಚರಿಯಾಗದೇ ಇರದು. ಹಾಗಿದ್ದರೆ ಉತ್ತಮ ಪರಿಸ್ಥಿತಿ ನಿರ್ಮಿಸಲು ಅಗತ್ಯವಾದ ಪರಿಹಾರಗಳಾದರೂ ಏನು? ಹೆಚ್ಚು ಅರ್ಹ, ಸ್ಪರ್ಧಾತ್ಮಕ ಮತ್ತು ನೈತಿಕತೆ ಹೊಂದಿದ ವ್ಯಕ್ತಿಗಳ ಪಾಲ್ಗೊಳ್ಳುವಿಕೆಯಲ್ಲೇ ಪರಿಹಾರ ಅಡಕವಾಗಿದೆಯೇ? ಇದು ನಿಶ್ಚಿತವಾಗಿಯೂ ಪೂರ್ವಭಾವಿಯಾದ ಅಗತ್ಯವಾಗಿದ್ದರೂ, ಈ ಸಮಸ್ಯೆಗಳಿಗೆ ಪರಿಹಾರ ಅಷ್ಟೊಂದು ಸರಳವಾದದ್ದು ಎಂದು ಯಾರೂ ಅಂದುಕೊಳ್ಳುವಂತಿಲ್ಲ.

ಪ್ರಜಾಪ್ರಭುತ್ವ ಎಂದರೆ ಕೇವಲ ಶ್ರೀಮಂತರು ಮತ್ತು ಬಲಿಷ್ಠರ ಕೈಗೆ ಸಿಗುವ ಅಸ್ತ್ರ ಮಾತ್ರ ಎಂಬಂತಹ ಸ್ಥಿತಿಗೆ ನಾವು ಅದನ್ನು ತಂದುಬಿಟ್ಟಿದ್ದೇವೆ. ಹೀಗಾಗಿ ಈ ಹಿತಾಸಕ್ತಿಗಳು ಅಧಿಕಾರ ಮತ್ತು ನೀತಿ ನಿರೂಪಣೆಯಲ್ಲಿನ ಮುಂದಾಳತ್ವ ಹಾಗೂ ನಿಯಂತ್ರಣ ಅಷ್ಟೊಂದು ಸುಲಭದಲ್ಲಿ ತಮ್ಮ ಕೈತಪ್ಪಿ ಹೋಗಲು ಅವಕಾಶ ಮಾಡಿಕೊಡಲಾರರು.

ಈ ಪ್ರಬಲ ಶಕ್ತಿಗಳ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳ ಮುಂದೆ ರಾಷ್ಟ್ರ ಅಥವಾ ಜನರ ಹಿತಾಸಕ್ತಿ ಎರಡನೇ ಸ್ಥಾನಕ್ಕೆ ಹೋಗಿದೆ. ಹೀಗೆ ನಾವು ಪ್ರಜಾಪ್ರಭುತ್ವವನ್ನು `ಶ್ರೀಮಂತರು ಮತ್ತು ಬಲಿಷ್ಠರಿಂದ~ `ಶ್ರೀಮಂತರು ಮತ್ತು ಬಲಿಷ್ಠರಿಗಾಗಿಯೇ~ ಇರುವ ಆಡಳಿತ ಪ್ರಕ್ರಿಯೆಯ ಮಟ್ಟಕ್ಕೆ ಇಳಿಸಿಬಿಟ್ಟಿದ್ದೇವೆ.

ಒಂದೆಡೆ ರಾಜಕೀಯ ಪ್ರಕ್ರಿಯೆ ಮತ್ತು ಚುನಾವಣೆಗಳನ್ನು ಅಲಕ್ಷಿಸುವುದೇ ಇದೆಲ್ಲದರಿಂದ ಪಾರಾಗಲು ಇರುವ ತಕ್ಕ ಮಾರ್ಗ ಎಂದು ಭಾವಿಸಿ ಮೌನಕ್ಕೆ ಮೊರೆ ಹೋಗಿರುವ ವರ್ಗವನ್ನು (ಇವರಲ್ಲಿ ಬಹುತೇಕರು ಮಧ್ಯಮ ವರ್ಗದವರು ಮತ್ತು ಸಾಕ್ಷರಸ್ಥರು) ನಾವು ಕಾಣುತ್ತೇವೆ. ಇನ್ನೊಂದೆಡೆ, ಪರಿಸ್ಥಿತಿಯ ಲಾಭ ಪಡೆದುಕೊಳ್ಳುವುದೇ ಸರಿ ಎಂದು ನಂಬಿ ಇಡೀ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನೇ ಭ್ರಷ್ಟಗೊಳಿಸುವ ಬೃಹತ್ ಸಂಖ್ಯೆಯ ಇಚ್ಛಾಪೂರ್ವಕ ಭಾಗೀದಾರರ ಸಂಖ್ಯೆ ಹೆಚ್ಚಾಗುತ್ತಿರುವುದನ್ನೂ ನೋಡುತ್ತಿದ್ದೇವೆ.

ಹೀಗಿರುವಾಗ ಚುನಾವಣೆಗೆ ನಿಲ್ಲುವವರನ್ನಷ್ಟೇ ಅಲ್ಲ ಅವರಿಗೆ ಮತ ಹಾಕುವವರನ್ನೂ ಅತ್ಯಂತ ಅಗತ್ಯವಾದ ಬದಲಾವಣೆಗೆ ಒಗ್ಗಿಸಬೇಕಾದ ಕ್ಲಿಷ್ಟ ಪರಿಸ್ಥಿತಿಯನ್ನು ನಾವು ನಿಭಾಯಿಸುವುದಾದರೂ ಹೇಗೆ?

ಬರೀ ಹಿಂದೆ ಕುಳಿತು ದೂರುವುದು ಅಥವಾ ಭ್ರಷ್ಟ ಪ್ರಕ್ರಿಯೆಯ ಲಾಭಗಳನ್ನು ಅನುಭವಿಸುವುದರ ಬದಲು, ವ್ಯವಸ್ಥೆಯಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಳ್ಳುವ, ಹೊಣೆಗಾರಿಕೆ ಮತ್ತು ಪಾರದರ್ಶಕತೆಗಾಗಿ ಆಳುವ ವರ್ಗವನ್ನು ಆಗ್ರಹಿಸುವ ನಿಟ್ಟಿನಲ್ಲಿ ನಾವು ನಾಗರಿಕರನ್ನು ಜಾಗೃತಗೊಳಿಸಬೇಕು.

ಪ್ರವರ್ಧಮಾನಕ್ಕೆ ಬರುತ್ತಿರುವ ಕೈಗಾರಿಕೆಗಳು ಮತ್ತು ಅವುಗಳ ನಿಯಂತ್ರಣ ಅವಧಿಯ ಮೇಲೆ ಕಣ್ಗಾವಲಿಟ್ಟು, ಅವುಗಳ ಪಾತ್ರವನ್ನು ಮಿತಿಗೊಳಪಡಿಸುವ ಸೂಕ್ತ ನಿಯಂತ್ರಣ ಕ್ರಮಗಳತ್ತ ಗಮನಹರಿಸಬೇಕು. ಸರ್ಕಾರಿ ವೆಚ್ಚದಲ್ಲೇ ಚುನಾವಣಾ ವೆಚ್ಚ ಭರಿಸುವ ಮತ್ತು ತಂತ್ರಜ್ಞಾನದ ಮೂಲಕ ಚುನಾವಣಾ ವೆಚ್ಚ ತಗ್ಗಿಸುವ ಮಾರ್ಗೋಪಾಯಗಳನ್ನು ದೇಶಗಳು ಕಂಡುಕೊಳ್ಳಬೇಕು.

ನಾಗರಿಕರು ಸಹ ಪ್ರಜಾಪ್ರಭುತ್ವ ಬಯಸುವ ಜವಾಬ್ದಾರಿಗಳನ್ನು ಅಂತರ್ಗತಗೊಳಿಸಿ ಕೊಳ್ಳಬೇಕು, ದೇಶ ಮತ್ತು ಸರ್ಕಾರದ ವ್ಯವಹಾರಗಳಲ್ಲಿ ಹೆಚ್ಚು ಪ್ರಜ್ಞಾವಂತರಾಗಿ ಪಾಲ್ಗೊಳ್ಳಬೇಕು. ಹಣ ಬಲ ಜಾತಿ ಬಲ ಮತ್ತು ಸದಾಕಾಲ ಅಧಿಕಾರಕ್ಕೆ ಅಂಟಿಕೊಂಡಿರದೆ ನಾಗರಿಕರ ಸೇವೆ ಮಾಡುವ ನೈಜ ಆಕಾಂಕ್ಷೆ, ಪ್ರಜಾಸತ್ತಾತ್ಮಕ ತತ್ವಗಳು (ಪಕ್ಷದ ಒಳಗೆ ಅಥವಾ ಹೊರಗೆ), ನೈತಿಕತೆಯನ್ನು ಆಧರಿಸಿದ ರಾಜಕೀಯ ಪ್ರಕ್ರಿಯೆಯನ್ನು ತುರ್ತಾಗಿ ಅಳವಡಿಸಿಕೊಳ್ಳಬೇಕು. ಸಜ್ಜನರು ರಾಜಕೀಯ ರಂಗ ಪ್ರವೇಶಿಸಲು ಇರುವ ಅಡೆತಡೆಗಳು ಮೊದಲು ನಿವಾರಣೆಯಾಗಬೇಕು.

ಸ್ವಪ್ರತಿಷ್ಠೆಯನ್ನು ಕಿತ್ತೊಗೆಯಬಲ್ಲ ಜನರನ್ನು ಒಟ್ಟುಗೂಡಿಸುವ ಮೂಲಕ ಆಂದೋಲನವೊಂದನ್ನು ಸೃಷ್ಟಿಸಬೇಕು ಮತ್ತು ಈ ವ್ಯವಸ್ಥೆ ಮುಂದುವರಿಯಲು ಬೇಕಾದ ಪ್ರಜ್ಞಾವಂತ ಸಮೂಹವನ್ನು ಒಗ್ಗೂಡಿಸಬೇಕು.

ಅಸ್ತಿತ್ವದಲ್ಲಿರುವ 192 ರಾಷ್ಟ್ರಗಳ ಪೈಕಿ 120 ದೇಶಗಳು ಚುನಾವಣಾ ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುತ್ತಿವೆ ಮತ್ತು ಈ ಪ್ರಮಾಣ ಜಗತ್ತಿನ ಜನಸಂಖ್ಯೆಯ ಶೇ 58.2ರಷ್ಟು ಎಂಬುದನ್ನು ನಾವು ಮರೆಯಬಾರದು.

ಪ್ರಜಾಪ್ರಭುತ್ವದ ಬಗ್ಗೆ ಕೆಲವರಿಗೆ ಇರುವ ಅಸಮಾಧಾನದ ಹೊರತಾಗಿಯೂ ಅದಕ್ಕಿಂತ ಹೆಚ್ಚು ಪ್ರಾಯೋಗಿಕವಾದ, ಜವಾಬ್ದಾರಿಯುತವಾದ ಮತ್ತು ಘನವಾದ ಬೇರಾವುದೇ ಆಯ್ಕೆಗಳು ನಮ್ಮ ಮುಂದೆ ಇಲ್ಲದಿರುವುದರಿಂದ, ಈ ವ್ಯವಸ್ಥೆಯಲ್ಲೇ ಏನನ್ನಾದರೂ ಸಾಧಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT