ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಐಟಿ ಉದ್ಯಮದ ‘ಚರಕ ಕ್ಷಣ’

Last Updated 9 ಸೆಪ್ಟೆಂಬರ್ 2016, 11:38 IST
ಅಕ್ಷರ ಗಾತ್ರ

ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಕಳೆದ ಆರು ತಿಂಗಳ ಅವಧಿಯಲ್ಲಿ ಆಡಿರುವ ಮಾತುಗಳನ್ನು ಮುಂದಿಟ್ಟುಕೊಂಡರೆ ಕಾಲಚಕ್ರ ಮೂರು ಶತಮಾನಗಳಷ್ಟು ಹಿಂದಕ್ಕೆ ತಿರುಗಿದೆಯೇನೋ ಎನಿಸುತ್ತದೆ. ಈ ವರ್ಷ ಜನವರಿಯಲ್ಲಿ  ದಾವೋಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲ್ ಸಿಕ್ಕಾ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ=ಎಐ) ಮತ್ತು ಆಟೋಮೇಶನ್‌ನಂಥ ವಿಚ್ಛಿದ್ರಕಾರಕ ತಂತ್ರಜ್ಞಾನಗಳು ಮಾಹಿತಿ ತಂತ್ರಜ್ಞಾನ ಉದ್ದಿಮೆಗೇ ಅಪಾಯಕಾರಿಯಾಗಿ ಪರಿಣಮಿಸಿವೆ’ ಎಂದಿದ್ದರು.

ಈ ತಿಂಗಳ ಮೊದಲ ದಿನ ಇನ್ಫೊಸಿಸ್‌ನ ಮಾನವ ಸಂಪನ್ಮೂಲ ವಿಭಾಗದ ಮಾಜಿ ಮುಖ್ಯಸ್ಥ ಟಿ.ವಿ. ಮೋಹನ್‌ದಾಸ್ ಪೈ ‘ಆಟೋಮೇಷನ್ ಮತ್ತು ಎಐ ತಂತ್ರಜ್ಞಾನಗಳು ವಾರ್ಷಿಕ ಶೇಕಡಾ 10ರಷ್ಟು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಗಳನ್ನು ಕಿತ್ತುಕೊಳ್ಳಲಿವೆ. ಮಧ್ಯಮ ಹಂತದ ಮ್ಯಾನೇಜರ್‌ಗಳ ಉದ್ಯೋಗದ ಮೇಲೂ ಇದು ಪರಿಣಾಮ ಬೀರುತ್ತದೆ’ ಎಂದರು. ಕಳೆದ ಆರು ತಿಂಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ಮೇಲೊಮ್ಮೆ ಕಣ್ಣಾಡಿಸಿದರೆ ವಾರಕ್ಕೆ ಒಮ್ಮೆಯಾದರೂ ಆಟೋಮೇಶನ್ ಮತ್ತು ಎಐ ತಂತ್ರಜ್ಞಾನ ಹೇಗೆ ಐ.ಟಿ. ಉದ್ಯಮಕ್ಕೆ ಸವಾಲಾಗಬಹುದು ಎಂಬ ಮಾತುಗಳನ್ನು ಒಬ್ಬರಲ್ಲ ಒಬ್ಬರು ಹೇಳುತ್ತಲೇ ಬಂದಿದ್ದಾರೆ.

18ನೇ ಶತಮಾನದ ಕೊನೆಯ ಭಾಗದಲ್ಲಿ ಇಂಗ್ಲೆಂಡಿನ ನೇಕಾರರಿಗೆ ಇದೇ ಬಗೆಯ ಭಯವೊಂದು ಕಾಡಿತ್ತು. ಆಗಷ್ಟೇ ಪವರ್‌ಲೂಮ್‌ಗಳೆಂದು ಕರೆಯುವ ಯಾಂತ್ರಿಕ ಮಗ್ಗಗಳ ಆವಿಷ್ಕಾರವಾಗಿತ್ತು. ವಾರಗಟ್ಟಳೆ ಕೈಮಗ್ಗದಲ್ಲಿ ನೇಯಬೇಕಾಗಿದ್ದ ಬಟ್ಟೆಯನ್ನು ಗಂಟೆಗಳಲ್ಲಿ ನೇಯುವ ಸಾಮರ್ಥ್ಯವಿದ್ದ ಈ ಯಂತ್ರಗಳನ್ನು ಅವರು ತಮ್ಮ ಶತ್ರುವೆಂದು ಭಾವಿಸಿ ಅವುಗಳನ್ನು ನಾಶ ಮಾಡಲು ತೊಡಗಿದರು. ಈ ನೇಕಾರರ ಭಯ ಇಂಗ್ಲಿಷ್‌ನಲ್ಲಿ ‘Luddite fallacy’ ಅಥವಾ ‘ಲುಡ್ಡೈಟರ ಭ್ರಾಂತಿ‘ ಎಂಬ ನುಡಿಗಟ್ಟಾಗಿ ಈಗಲೂ ಉಳಿದು ಕೊಂಡಿದೆ.  ಐ.ಟಿ. ಉದ್ಯಮದ ಭಯ ಕೂಡಾ 18ನೇ ಶತಮಾನದ ಲುಡ್ಡೈಟರ ಭ್ರಾಂತಿಯಂಥದ್ದೇ ?

ಲುಡ್ಡೈಟರಿಗೆ ಇದ್ದದ್ದು ಕೇವಲ ಭ್ರಾಂತಿ ಎನ್ನಲು ಆಗಲೂ  ಸಾಧ್ಯವಿರಲಿಲ್ಲ. ಈಗಲೂ ಸಾಧ್ಯವಿಲ್ಲ. ಪವರ್‌ಲೂಮ್‌ಗಳು ಇಂಗ್ಲೆಂಡಿನ ನೇಕಾರರ ಉದ್ಯೋಗವನ್ನಷ್ಟೇ ಕಿತ್ತುಕೊಳ್ಳಲಿಲ್ಲ. ಈಸ್ಟ್ ಇಂಡಿಯಾ ಕಂಪೆನಿ ತನ್ನ ಜವಳಿಯನ್ನು ಮಾರಾಟ ಮಾಡುವ ಉದ್ದೇಶದಿಂದ ಭಾರತದಲ್ಲಿದ್ದ ನೂಲುವಿಕೆ, ನೇಕಾರಿಕೆಯ ಕೌಶಲವನ್ನೇ ಬಹುತೇಕ ನಾಶ ಮಾಡಿಬಿಟ್ಟಿತು. ಭಾರತದ ಹಳ್ಳಿಗಳ ಸ್ವಾವಲಂಬನೆಯೇ ಇಲ್ಲವಾಗುವಂಥ ವಿಚಿತ್ರ ಆರ್ಥಿಕತೆಯೊಂದನ್ನು ವಸಾಹತುಶಾಹಿ ಸ್ಥಾಪಿಸಿಬಿಟ್ಟಿತು. ಇದನ್ನು ಎದುರಿಸುವುದಕ್ಕಾಗಿ ಗಾಂಧೀಜಿ ಚರಕಕ್ಕೆ ಜೀವಕೊಟ್ಟರು. ಲುಡ್ಡೈಟರು ಯಂತ್ರಗಳನ್ನು ನಾಶ ಮಾಡಿ ಪ್ರತಿಭಟಿಸಿದರೆ ಗಾಂಧೀಜಿ ಚರಕವನ್ನು ಜೀವಂತಗೊಳಿಸುವ ಮೂಲಕ ಪರ್ಯಾಯವನ್ನು ಸೃಷ್ಟಿಸಿದರು. ಈ ಪರ್ಯಾಯ ಕೇವಲ ಸಂಕೇತವಾಗಿಯಷ್ಟೇ ಉಳಿದು ಆಧುನಿಕ ಭಾರತ ಪವರ್‌ಲೂಮ್‌ಗಿಂತ ದೊಡ್ಡದಾದ ಬಟ್ಟೆ ಗಿರಣಿಗಳ ಮೊರೆ ಹೋಯಿತು. ಗಾಂಧೀಜಿಯ ಪ್ರಿಯ ಶಿಷ್ಯ ಜವಹರಲಾಲ್ ನೆಹರು ಬೃಹತ್ ಕಾರ್ಖಾನೆಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದದ್ದು ಈಗ ಇತಿಹಾಸ.

ಈ ಹಿನ್ನೆಲೆಯಲ್ಲೇ ಸದ್ಯ ಮಾಹಿತಿ ತಂತ್ರಜ್ಞಾನ ಉದ್ಯಮಪತಿಗಳು ವ್ಯಕ್ತಪಡಿಸುತ್ತಿರುವ ಭಯವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಪವರ್‌ಲೂಮ್‌ನಿಂದ ಭಯಗ್ರಸ್ತರಾದ ಇಂಗ್ಲೆಂಡಿನ ನೇಕಾರರು, ಈಸ್ಟ್ ಇಂಡಿಯಾ ಕಂಪೆನಿಯ ಏಕಪಕ್ಷೀಯ ಬೆಲೆ ನಿಗದಿಗೆ ಬೇಸತ್ತು ಬೆರಳನ್ನೇ ಕತ್ತರಿಸಿಕೊಂಡು ಪ್ರತಿಭಟಿಸಿದ ಬಂಗಾಳದ ಮಸ್ಲಿನ್ ಬಟ್ಟೆಯ ನೇಕಾರರು ಮುಗ್ಧರಾಗಿದ್ದರು. ಅವರ ಬದುಕಿನ ಮೇಲೆ ಪರಿಣಾಮ ಬೀರಿದ್ದು ತಂತ್ರಜ್ಞಾನವಲ್ಲ. ಅದನ್ನು ಬಳಸಿಕೊಂಡು ಹುಟ್ಟಿಕೊಂಡ ಉದ್ಯಮ ಅಥವಾ ಶ್ರಮಕ್ಕಿಂತ ಬಂಡವಾಳವೇ ಮುಖ್ಯವಾಗಿಬಿಟ್ಟ ಸ್ಥಿತಿ. ಆದರೆ ಇಂದಿನ ಐ.ಟಿ. ಉದ್ಯಮದ ಸ್ಥಿತಿ ಹಾಗಿಲ್ಲ. ಇದು ಹುಟ್ಟಿಕೊಂಡದ್ದೇ ಬಂಡವಾಳದ ಉತ್ತುಂಗದಲ್ಲಿ. 18ನೇ ಶತಮಾನದಿಂದೀಚೆಗೆ ಬಂದ ತಂತ್ರಜ್ಞಾನಗಳಲ್ಲಿ ಅತ್ಯಂತ ‘ವಿಚ್ಛಿದ್ರಕಾರಕ’ವಾದದ್ದು ಮಾಹಿತಿ ತಂತ್ರಜ್ಞಾನವಾಗಿತ್ತು. ಕೇವಲ ಎರಡು ದಶಕಗಳ ಹಿಂದಷ್ಟೇ ಭಾರತದ ಕಾರ್ಮಿಕ ಸಂಘಟನೆಗಳು ‘ಕಂಪ್ಯೂಟರೀಕರಣ’ವನ್ನು ವಿರೋಧಿಸುತ್ತಿದ್ದವು. ಹತ್ತಾರು ಜನರ ಕೆಲಸವನ್ನು ಒಂದು ಕಂಪ್ಯೂಟರ್ ಮಾಡಿಬಿಡುತ್ತದೆ. ಇದರಿಂದ ಲಕ್ಷಾಂತರ ಉದ್ಯೋಗಗಳು ಇಲ್ಲವಾಗುತ್ತವೆ ಎಂದು ಅವು ಹೇಳುತ್ತಿದ್ದವು. ಆದರೆ ಈ ಎರಡು ದಶಕಗಳ ಅವಧಿಯಲ್ಲಿ ಸಂಭವಿಸಿದ್ದೇನು?

ಬ್ಯಾಂಕಿಂಗ್, ಮುದ್ರಣ, ವಿನ್ಯಾಸ ಹೀಗೆ ಎಲ್ಲಾ ಕ್ಷೇತ್ರಗಳಿಗೂ ಕಂಪ್ಯೂಟರ್‌ಗಳು ಪ್ರವೇಶಿಸಿದವು. ಲಕ್ಷಾಂತರ ಮಂದಿ ಕೆಲಸವನ್ನೂ ಕಳೆದುಕೊಂಡರು ಅಥವಾ ಉದ್ಯೋಗದ ಸ್ವರೂಪವೇ ಬದಲಾಯಿತು. ಪರಿಣಾಮವಾಗಿ  ಅವಧಿಯಲ್ಲಿ ಭಾರತದಲ್ಲಿ ಹಿಂದೆಂದೂ ಇಲ್ಲದಷ್ಟು ದೊಡ್ಡದೊಂದು ಮಧ್ಯಮ ವರ್ಗ ಹುಟ್ಟಿಕೊಂಡಿತು. ಜನರ ಖರೀದಿಯ ಸಾಮರ್ಥ್ಯ ಹೆಚ್ಚಾಯಿತು. ‘ಕಾರ್ಮಿಕ ಸಂಘಟನೆ’ ಎಂಬ ಪರಿಕಲ್ಪನೆಯೇ ಅಪ್ರಸ್ತುತ ಎಂದು ವಾದಿಸುವವರ ಸಂಖ್ಯೆ ಹೆಚ್ಚಾಯಿತು. ಜೊತೆಗೆ ಮನುಷ್ಯನಿಗಿಂತ ಕಂಪ್ಯೂಟರ್ ಹೆಚ್ಚು ವಿಶ್ವಾಸಾರ್ಹ ಎಂಬ ಪರಿಕಲ್ಪನೆಯೊಂದು ಆಡಳಿತ ವ್ಯವಸ್ಥೆಯಲ್ಲೂ ಗಟ್ಟಿಯಾಗಿ ನೆಲೆಯೂರಿತು. ಇ–ಆಡಳಿತ ಎಂಬ ಪಾರಿಭಾಷಿಕವನ್ನು ಬಳಸದೇ ಇರುವ ಆಡಳಿತಾಗಾರರೇ ಈಗ ಇಲ್ಲ. ಇವೆಲ್ಲವೂ ಮಾಹಿತಿ ತಂತ್ರಜ್ಞಾನ ಉದ್ದಿಮೆಯನ್ನು ಬೆಳೆಸುತ್ತಲೇ ಹೋದವು. ನಮ್ಮ ಸೇವಾ ಕ್ಷೇತ್ರದ ರಫ್ತಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಬೆಳೆಯಿತು.

ಈಗ ಕಾಲಚಕ್ರ ಒಂದು ಸುತ್ತು ತಿರುಗಿದೆ. ಎರಡು ಶತಮಾನದ ಹಿಂದೆ ಮುಗ್ಧ ನೇಕಾರರಿಗೆ ಇದ್ದ, ಎರಡೇ ದಶಕಗಳ ಹಿಂದೆ ಕಾರ್ಮಿಕರಿಗೆ ಇದ್ದ ಭಯ ಇಂದು ಉದ್ಯಮಪತಿಗಳನ್ನು ಕಾಡುತ್ತಿದೆ. ಯಾವುದೇ ಎಂಜಿನಿಯರಿಂಗ್ ಪದವಿ ಪಡೆದವರನ್ನೂ ನಾವು ‘ಸಾಫ್ಟ್‌ವೇರ್ ಎಂಜಿನಿಯರ್’ ಆಗಿ ಮಾರ್ಪಡಿಸುತ್ತೇವೆ ಎನ್ನುತ್ತಿದ್ದವರೀಗ ‘ಐ,ಟಿ. ಕ್ಷೇತ್ರವನ್ನು ಸೇರುವ ಬದಲಿಗೆ ಊಬರ್ ಅಥವಾ ಓಲಾ ಟ್ಯಾಕ್ಸಿ ಓಡಿಸಿ ಇನ್ನೂ ಹೆಚ್ಚು ಸಂಪಾದಿಸಿ’ ಎಂಬ ಸಲಹೆ ನೀಡುತ್ತಿದ್ದಾರೆ.

ಸದಾ ಶ್ರಮಜೀವಿಗಳಿಗಷ್ಟೇ ಭಯ ಹುಟ್ಟಿಸುತ್ತಿದ್ದ ‘ಆಧುನಿಕ ತಂತ್ರಜ್ಞಾನ’ ಶ್ರಮವನ್ನು ಬಳಸಿಕೊಂಡು ಮಿಗುತಾಯ ಮೌಲ್ಯವನ್ನು ಸೃಷ್ಟಿಸುತ್ತಿದ್ದ ಉದ್ಯಮಪತಿಗಳಲ್ಲಿ ಅಭದ್ರತೆ ಮೂಡಿಸಿರುವುದು ವಿಚಿತ್ರ ಮತ್ತು ವಿಲಕ್ಷಣ. ಆದರೆ ಈ ಭಯ ಉದ್ಯಮಪತಿಗಳಿಗೆ ಹೊಸತೇನೂ ಅಲ್ಲ ಎಂಬ ವಾಸ್ತವ ಕೂಡಾ ಇಲ್ಲಿದೆ. ಛಾಯಾಗ್ರಹಣ ತಂತ್ರಜ್ಞಾನದಲ್ಲಿ ಆದ ಬದಲಾವಣೆ ಕೊಡಾಕ್‌ನಂಥ ಬೃಹತ್ ಕಂಪೆನಿಯನ್ನು ಮುಚ್ಚಿಸಿಬಿಟ್ಟಿತು. ಆದರೆ ಅದು ಬೇರೊಂದು ರೀತಿಯಲ್ಲಿ ಮರುಹುಟ್ಟು ಪಡೆಯಲು ಪ್ರಯತ್ನಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 360 ಡಿಗ್ರಿ ವ್ಯಾಪ್ತಿಯ ದೃಶ್ಯವನ್ನು ಸೆರೆಹಿಡಿಯಬಲ್ಲ ವೃತ್ತಿಪರ ಮಟ್ಟದ ಕ್ಯಾಮರಾ ಕೊಡಾಕ್‌ನದ್ದು. ಯಾವ ತಂತ್ರಜ್ಞಾನದಿಂದ ಅದು ತನ್ನ ಮಾರುಕಟ್ಟೆಯನ್ನು ಕಳೆದುಕೊಂಡಿತ್ತೋ ಅದೇ ತಂತ್ರಜ್ಞಾನದ ಮೂಲಕ ಹೊಸ ಮಾರುಕಟ್ಟೆಯನ್ನು ಶೋಧಿಸುವುದಕ್ಕೆ ಮುಂದಾಗಿದೆ.

ಭಾರತದ ಐ.ಟಿ. ಉದ್ಯಮದ  ಭಯದ ಹಿಂದೆ ಅದರ ಸ್ವರೂಪವಿದೆ. ಇದು ತಂತ್ರಜ್ಞಾನೋದ್ಯಮವಲ್ಲ. ಇದು ತಂತ್ರಜ್ಞಾನಾಧಾರಿತ ಉದ್ಯಮ. ಆದ್ದರಿಂದಲೇ ಆಟೋಮೇಶನ್ ಮತ್ತು ಎಐ ತಂತ್ರಜ್ಞಾನಗಳು ಅದಕ್ಕೆ ಹೆದರಿಕೆ ಹುಟ್ಟಿಸುತ್ತಿದೆ. ಈಗ ಎದುರಾಗುತ್ತಿರುವ ಸವಾಲನ್ನು ಎದುರಿಸುವುದಕ್ಕೆ ಅದು ಅನುಸರಿಸುತ್ತಿರುವ ವಿಧಾನವೂ ಸುಸ್ಥಿರವಾದುದೇನೂ ಅಲ್ಲ. ಮುಂದುವರಿದ ದೇಶಗಳ ಕಂಪೆನಿಗಳು ಒದಗಿಸುವ ‘ಆಟೋಮೇಶನ್’ ತಂತ್ರಜ್ಞಾನವನ್ನೇ ಅಳವಡಿಸಿಕೊಂಡು ಮುಂದುವರಿಯಲು ಪ್ರಯತ್ನಿಸುತ್ತಿವೆ. ಕಳೆದ ಒಂದೆರಡು ವರ್ಷಗಳಿಂದ ಇದಕ್ಕಾಗಿ ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೋಗಳು ಆಟೋಮೇಶನ್ ತಂತ್ರಜ್ಞಾನದ ಮೇಲೆ ಹೂಡುತ್ತಿರುವ ಬಂಡವಾಳ ಇದನ್ನೇ ಹೇಳುತ್ತಿದೆ. ತೀರಾ ಇತ್ತೀಚಿನವರೆಗೂ ಭಾರತದಲ್ಲಿ ಕಡಿಮೆ ಸಂಬಳಕ್ಕೆ ದೊರೆಯುತ್ತಿದ್ದ ಮಾನವ ಸಂಪನ್ಮೂಲ ಈ ಕಂಪೆನಿಗಳ ಬಹುಮುಖ್ಯ ಆದಾಯದ ಮೂಲವಾಗಿತ್ತು. ಈಗ ಅದರಲ್ಲಿ ಪಾಲು ಪಡೆಯಲು ಇನ್ನಷ್ಟು ದೇಶಗಳು ಹುಟ್ಟಿಕೊಂಡಿವೆ. ಇದರ ಜೊತೆಗೆ ಆಟೋಮೇಶನ್ ಮತ್ತು ಎಐ ತಂತ್ರಜ್ಞಾನಗಳು ನಮ್ಮ ಐ.ಟಿ.ಉದ್ಯಮಗಳು ಮಾಡುತ್ತಿದ್ದ ಕೆಲಸವನ್ನೇ ಇಲ್ಲವಾಗಿಸುತ್ತಿವೆ.

ಇದನ್ನು ಭಾರತೀಯ ಐ.ಟಿ. ಉದ್ದಿಮೆಯ ‘ಚರಕ ಕ್ಷಣ’ ಎನ್ನಬಹುದು. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವ ಹೊತ್ತಿಗೆ ಚರಕ ಬಹುತೇಕ ಕಾಣೆಯಾಗಿತ್ತು. ಅದನ್ನು ಹುಡುಕಿ ತಂದು ಅದಕ್ಕೆ ಮರುಜೀವ ಕೊಟ್ಟು ಅದನ್ನೊಂದು ದೊಡ್ಡ ಸಂಕೇತ ಮತ್ತು ಸಂದೇಶವಾಗಿಸಿದರು. ಬಹುಶಃ ಭಾರತೀಯ ಐ.ಟಿ. ಉದ್ಯಮ ಇಂದು ಮಾಡಬೇಕಾಗಿರುವುದು ಅದನ್ನೇ. ಐ.ಟಿ. ಆಧಾರಿತ ಸೇವೆಯೇ ಶಾಶ್ವತ ಎಂಬ ನಂಬಿಕೆಯಿಂದ ಹೊರಬಂದು ಹೊಸ ಆವಿಷ್ಕಾರಗಳ ಕುರಿತು ಆಲೋಚಿಸ ಬೇಕಾಗಿದೆ. ಈಗ ಪರಿಕಲ್ಪನೆಯ ಮಟ್ಟದಲ್ಲಿ ಮತ್ತು ಸಣ್ಣ ಪ್ರಯೋಗಗಳ ಮಟ್ಟದಲ್ಲಿ ಉಳಿದುಕೊಂಡಿರುವ ‘ವಿತರಣಾತ್ಮಕ ಬಂಡವಾಳ’ದಂಥವುಗಳ ಪ್ರಾಯೋಗಿಕ ಬಳಕೆ ಸಾಧ್ಯವೇ ಎಂದು ಪರೀಕ್ಷಿಸಬೇಕಾಗಿದೆ. ಈಗಿನ ಸವಾಲನ್ನು ವಿನಾಶದ ಮುನ್ಸೂಚನೆಯೆಂದು ಕಾಣುವ ಬದಲಿಗೆ ಹೊಸ ಸಾಧ್ಯತೆಯನ್ನಾಗಿ ಕಾಣುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT