ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರಲ್ಲಿ ಜನಾಂಗೀಯ ದ್ವೇಷಿಗಳು ಇದ್ದಾರೆಯೇ?

Last Updated 9 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಮಾನವ ಕುಲದಲ್ಲಿ ಹಲವರು ಬೆಳ್ಳಗಿದ್ದರೆ, ಉಳಿದವರು ಕಪ್ಪಗಿದ್ದಾರೆ, ಹೀಗೇಕೆ? ವಿಕಾಸದ ಹಾದಿಯಲ್ಲಿ ನಮ್ಮ ಸುತ್ತಲಿನ ವಾತಾವರಣಕ್ಕೆ ತಕ್ಕಂತೆ ಸುಲಭವಾಗಿ ಹೊಂದಿಕೊಳ್ಳಲು ಲಭ್ಯವಾಗಿರುವ ಅತ್ಯುತ್ತಮ ನೈಸರ್ಗಿಕ ಸಾಧನ ಇದು ಎಂಬ ಉತ್ತರವನ್ನು ನೀಡಬಹುದು.  
 
ಅಧಿಕ ತಾಪಮಾನದ ಪ್ರದೇಶದಲ್ಲಿ ನೆಲೆಸಿದವರ ದೇಹದಲ್ಲಿ ಕೂದಲಿನ ಪ್ರಮಾಣ ಕಡಿಮೆ, ಅದೇ ಬೆವರಿನ ಗ್ರಂಥಿಗಳು ಹೆಚ್ಚು. ದೇಹದ ಉಷ್ಣವನ್ನು ಬಹುಬೇಗ ಕಡಿಮೆ ಮಾಡುವಂತಹ ನೈಸರ್ಗಿಕ ವ್ಯವಸ್ಥೆ ಇದು. ತಲೆಗೂದಲು ಗುಂಗುರು–ಗುಂಗುರಾಗಿರಲು ಕೂಡ ಇದೇ ಕಾರಣ.
 
ದೇಹದ ಕಡಿಮೆ ಭಾಗವನ್ನಷ್ಟೇ ತಲೆಗೂದಲು ಆವರಿಸುವುದರಿಂದ ಅಧಿಕ ಉಷ್ಣವನ್ನು ಕಳೆದುಕೊಳ್ಳಲು ಚರ್ಮಕ್ಕೆ ಸಾಧ್ಯವಾಗುತ್ತದೆ. ತೀಕ್ಷ್ಣ ಬಿಸಿಲಿನಿಂದ, ಅದರಲ್ಲೂ ಕ್ಯಾನ್ಸರ್‌ಕಾರಕ ಅತಿನೇರಳೆ ಕಿರಣಗಳಿಂದ ಚರ್ಮದ ರಕ್ಷಣೆ ಅತ್ಯಗತ್ಯವಾಗಿದ್ದು, ಆ ರೀತಿ ಚರ್ಮದ ರಕ್ಷಣೆಗೆ ಧಾವಿಸುವುದು ದೇಹದಲ್ಲಿರುವ ಮೆಲನಿನ್‌ ಎಂಬ ಕಂದುಬಣ್ಣದ ದ್ರವ್ಯ.
 
ಈ ದ್ರವ್ಯ ಒಬ್ಬೊಬ್ಬ ವ್ಯಕ್ತಿಯಲ್ಲಿ ಒಂದೊಂದು ಪ್ರಮಾಣದಲ್ಲಿ ಬಳಕೆ ಆಗುತ್ತದೆ. ಮೆಲನಿನ್‌, ಮನುಷ್ಯನಿಗೆ ಸಿಕ್ಕ ಒಂದು ನೈಸರ್ಗಿಕ ‘ಸನ್‌ಸ್ಕ್ರೀನ್‌’ (ಬಿಸಿಲಿನ ಪ್ರಖರತೆ ತಡೆಯುವ ಪರದೆ) ಆಗಿದೆ. ಪ್ರಖರ ಬಿಸಿಲಿಗೆ ಒಡ್ಡಲಾದ ದೇಹವನ್ನು ರಕ್ಷಿಸಲು ಮೆಲನಿನ್‌ ಹರಿದುಬರುತ್ತದೆ. ಹೀಗಾಗಿ ಅಂಥವರ  ಚರ್ಮ ಸಂಪೂರ್ಣ ಕಪ್ಪಾಗಿರುತ್ತದೆ.
 
ಅಧಿಕ ಉಷ್ಣ ಪ್ರದೇಶದಲ್ಲಿ ನೆಲೆಸಿದವರು ಏಕೆ ಇತರರಿಗಿಂತ ಹೆಚ್ಚು ಕಪ್ಪು ಎನ್ನುವುದು ಈಗ ಅರ್ಥವಾಗಿರಬೇಕು. ಹಾಗಾದರೆ ಹಲವರ ಮೈಬಣ್ಣ ಬೆಳ್ಳಗೆ ಹೊಳೆಯುವುದೇಕೆ ಎಂಬ ಪ್ರಶ್ನೆಯೂ ಮೂಡಬಹುದು. ದೇಹಕ್ಕೆ ತುಸು ಪ್ರಮಾಣದಲ್ಲಿ ಅತಿನೇರಳೆ ಕಿರಣಗಳ ಅಗತ್ಯವೂ ಇದೆ.
 
ಏಕೆಂದರೆ, ಆ ಕಿರಣಗಳಿಂದ ಚರ್ಮವು ವಿಟಮಿನ್‌ ‘ಡಿ’ ಹೀರಿಕೊಂಡು, ಎಲುಬುಗಳಿಗೆ ಕ್ಯಾಲ್ಸಿಯಂ ಒದಗಿಸುತ್ತದೆ. ದೇಹದ ಆರೋಗ್ಯದ ಸಮತೋಲನವನ್ನು ಕಾಪಾಡಲು ಈ ಪ್ರಕ್ರಿಯೆ ಅಗತ್ಯವಾಗಿದೆ. ಎಲ್ಲಿ ಸೂರ್ಯನ ಕಿರಣಗಳು ಹೆಚ್ಚಾಗಿ ಬೀಳುವುದಿಲ್ಲವೋ ಅಲ್ಲಿ 
(ಉದಾಹರಣೆಗೆ ಉತ್ತರ ಭಾಗ) ಬೀಳುವ ಅಲ್ಪಪ್ರಮಾಣದ ಸೂರ್ಯನ ಕಿರಣಗಳನ್ನೇ ಹೀರಿಕೊಳ್ಳಲು ಚರ್ಮ ಬೆಳ್ಳಗಾಗಿರುತ್ತದೆ.
 
ಅಂದರೆ ಅಂತಹ ಚರ್ಮದಲ್ಲಿ ಮೆಲನಿನ್‌ ಉಪಸ್ಥಿತಿ ಕಡಿಮೆ ಇರುತ್ತದೆ. ತಾತ್ಪರ್ಯ ಏನೆಂದರೆ, ಭೌಗೋಳಿಕ ವಾತಾವರಣವೇ ಚರ್ಮದ ಬಣ್ಣಕ್ಕೆ ಕಾರಣ. ಈ ವಿಷಯದಲ್ಲಿ ಉಳಿದ ಪ್ರಕ್ರಿಯೆಗಳ ಪಾತ್ರ ನಗಣ್ಯ. ಜನಾಂಗಗಳ ವಿಕಾಸದಲ್ಲಿ ಭೌಗೋಳಿಕ ವಾತಾವರಣದ ಪಾತ್ರ ಹಿರಿದಾಗಿದೆ.
 
ಭಾರತದಲ್ಲಿ ಉತ್ತರದಿಂದ ದಕ್ಷಿಣದ ಕಡೆಗೆ ಪ್ರವಾಸ ಮಾಡಿದಾಗ ಚರ್ಮದ ಬಣ್ಣ ಬದಲಾಗುವುದನ್ನು ನಾವೆಲ್ಲ ಗಮನಿಸಿದ್ದೇವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ತರುಣ್‌ ವಿಜಯ್‌ ಮೊನ್ನೆ ಇದೇ ಅಭಿಪ್ರಾಯವನ್ನು ತುಂಬಾ ವಿಕಾರವಾಗಿ ಪ್ರತಿಪಾದಿಸಿದ್ದರು. ‘ನಾವು ವರ್ಣಭೇದ ನೀತಿಯ ಪ್ರತಿಪಾದಕರಲ್ಲ.
 
ಹಾಗೊಂದು ವೇಳೆ ನಾವು ಜನಾಂಗೀಯ ದ್ವೇಷಿಗಳಾಗಿರುವುದು ನಿಜವೇ ಆಗಿದ್ದಲ್ಲಿ, ದಕ್ಷಿಣ ಭಾರತದ ಜನರೊಂದಿಗೆ ಹೇಗೆ ಬದುಕುತ್ತಿದ್ದೆವು’ ಎಂದು ಅವರು ಪ್ರಶ್ನಿಸಿದ್ದರು. ದಕ್ಷಿಣದ ನಾಲ್ಕು ರಾಜ್ಯಗಳನ್ನು ಪೆದ್ದು ಪೆದ್ದಾಗಿ ಹೆಸರಿಸಿದ ಅವರು, ‘ನಮ್ಮ ಸುತ್ತಲೂ ಕಪ್ಪು ವರ್ಣೀಯರೇ ಇದ್ದಾರೆ’ ಎಂದೂ ಹೇಳಿದ್ದರು.
 
‘ಭಾರತದಲ್ಲಿ ಆಫ್ರಿಕನ್ನರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಜನಾಂಗೀಯ ದ್ವೇಷವೇ ಇದಕ್ಕೆ ಕಾರಣ’ ಎಂಬ ವರದಿಗಳಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದರು. ವಿಜಯ್‌ ಅವರು ಭಾರತದಲ್ಲಿ ವರ್ಣಭೇದ ನೀತಿ ಜಾರಿಯಲ್ಲಿದೆ ಎಂಬ ಆರೋಪಕ್ಕೆ ಸವಾಲೆಸೆಯುವ ಭರದಲ್ಲಿ ಹೇಳಿಕೆ ನೀಡಿದ್ದರು.

ಆದರೆ, ಅವರ ಹೇಳಿಕೆಗೆ ಸಂಬಂಧಿಸಿದಂತೆಯೇ ವಿವಾದ ಎದ್ದು, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಪೇಚಿಗೆ ಅವರು ಸಿಲುಕಬೇಕಾಯಿತು. 
ಆಫ್ರಿಕಾದ ಎಲ್ಲ ರಾಯಭಾರಿಗಳು ಒಟ್ಟಾಗಿ ಜನಾಂಗೀಯ ದ್ವೇಷದ ಕುರಿತು ಹೇಳಿಕೆ ನೀಡಿರುವುದು ನನಗೆ ಕುತೂಹಲಕಾರಿಯಾಗಿ ತೋರುತ್ತದೆ.
 
ಆಫ್ರಿಕನ್ನರ ಮೇಲಿನ ದಾಳಿಗಳ ಕುರಿತು ಚರ್ಚಿಸಿರುವ ಅವರು, ‘ಇಂತಹ ಘಟನೆಗಳನ್ನು ತಡೆಯಲು ಭಾರತ ಸರ್ಕಾರ ಎದ್ದು ಕಾಣುವಂತಹ ಕ್ರಮವನ್ನು ಕೈಗೊಂಡಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
 
‘ಆಫ್ರಿಕನ್ನರ ಮೇಲಿನ ದಾಳಿಯ ಘಟನೆಗಳನ್ನು ಯಾವ ಭಾರತೀಯ ಪ್ರಾಧಿಕಾರಗಳೂ ಗಟ್ಟಿಧ್ವನಿಯಲ್ಲಿ ಖಂಡಿಸಿಲ್ಲ. ಈ ಘಟನೆಗಳು ಜನಾಂಗೀಯ ದ್ವೇಷದ ಸ್ವರೂಪವನ್ನು ಹೊಂದಿವೆ ಎಂಬುದು ಸಭೆಯ ಸರ್ವಾನುಮತದ ಅಭಿಪ್ರಾಯವಾಗಿದೆ’ ಎಂದು ಒಕ್ಕೊರಲಿನಿಂದ ತಿಳಿಸಿದ್ದಾರೆ.
 
ಇದೊಂದು ಗಂಭೀರ ಆಪಾದನೆ. ಭಾರತ ಸರ್ಕಾರ ಈ ಆಪಾದನೆಗೆ ಸಂಬಂಧಿಸಿದಂತೆ ತರುಣ್‌ ವಿಜಯ್‌ ಅವರಂತೆಯೇ ಪ್ರತಿಕ್ರಿಯಿಸಿದೆ. ಸಾಮಾನ್ಯ ಅಪರಾಧ ಪ್ರಕರಣಗಳನ್ನು ಜನಾಂಗೀಯ ದ್ವೇಷದಂತೆ ಬಿಂಬಿಸಲಾಗುತ್ತಿದೆ ಎಂದು ಅದು ಪ್ರತಿಪಾದಿಸಿದೆ.
 
‘ಭಾರತದ ಬಲಿಷ್ಠ ಸಂಸ್ಥೆಗಳು ಇಂತಹ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕಲು ಸಮರ್ಥವಾಗಿವೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ. ಆದರೆ, ನನ್ನ ಪ್ರಕಾರ, ಇದೊಂದು ಸುಳ್ಳು ಹೇಳಿಕೆ. ಏಕೆಂದರೆ, ಗುಂಪು ಘರ್ಷಣೆಯಂತಹ ಪ್ರಕರಣಗಳಲ್ಲಿ ಭಾರತೀಯರನ್ನೇ ರಕ್ಷಿಸಲು ಇಲ್ಲಿನ ಭದ್ರತಾ ಸಂಸ್ಥೆಗಳಿಗೆ ಸಾಧ್ಯವಾಗಿಲ್ಲ.
 
ಅಂದಮೇಲೆ, ಅವುಗಳು ವಿದೇಶಿಯರಿಗೆ ಹೇಗೆ ರಕ್ಷಣೆ ನೀಡುತ್ತವೆ? ಇದೇ ಕಾಲಕ್ಕೆ ನಾವು ಇನ್ನೊಂದು ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ. ಅದೇನೆಂದರೆ: ಆಫ್ರಿಕಾದ ರಾಯಭಾರಿಗಳು ಮಾಡಿದ ಆಪಾದನೆ ಎಷ್ಟರಮಟ್ಟಿಗೆ ಸರಿ?
 
ಸುಮಾರು 25 ವರ್ಷಗಳ ಹಿಂದೆ ಭಾರತದಲ್ಲಿ ನಿಯತಕಾಲಿಕವೊಂದು ಕಸರತ್ತು ನಡೆಸಿತ್ತು. ಅದು ಕುಟುಕು ಕಾರ್ಯಾಚರಣೆ ಅಸ್ತಿತ್ವದಲ್ಲಿಲ್ಲದ ಕಾಲಘಟ್ಟ. ಆಗ ವಿಡಿಯೊಗಳು ಇರಲಿಲ್ಲ. ಛಾಯಾಚಿತ್ರಗಳು ಮತ್ತು ವರದಿಗಾರನ ವಿಶ್ವಾಸಾರ್ಹತೆಯಷ್ಟೇ ಆಗ ಮುಖ್ಯವಾಗಿತ್ತು.
 
ವಾಸ್ತವಿಕ ಸನ್ನಿವೇಶ ತಿಳಿಯಲು ಆ ಪತ್ರಿಕೆ ಇಬ್ಬರು ವಿದೇಶಿಯರನ್ನು ಪ್ರತ್ಯೇಕವಾಗಿ ಉದ್ದನೆಯ ಸರದಿಯಿದ್ದ ಸ್ಥಳಕ್ಕೆ ಕರೆತಂದಿತ್ತು. ಆ ಸ್ಥಳ ರೈಲ್ವೆ ನಿಲ್ದಾಣ ಆಗಿತ್ತೇನೋ? ಅಂದಹಾಗೆ, ಆ ವಿದೇಶಿಯರಲ್ಲಿ ಒಬ್ಬ ಬಿಳಿಯ ಹಾಗೂ ಮತ್ತೊಬ್ಬ ಕಪ್ಪು ವ್ಯಕ್ತಿ ಇದ್ದರು.
 
ಸರದಿಯ ಅನುಕ್ರಮ ತಪ್ಪಿಸಿ ಕಪ್ಪು ವ್ಯಕ್ತಿ ಮುಂದೆ ಹೊರಟಾಗ ಜನ ಅವರಿಗೆ ತುಂಬಾ ಕೆಟ್ಟದಾಗಿ ಬೈದು, ಮುಂದೆ ಹೋಗದಂತೆ ತಡೆದಿದ್ದರು. ಅದೇ ಬಿಳಿಯ ವ್ಯಕ್ತಿ ಬಂದಾಗ, ಕೆಲವೇ ಕ್ಷಣಗಳ ಹಿಂದೆ ಕಪ್ಪು ವ್ಯಕ್ತಿಗೆ ಬೈದಿದ್ದ ಅದೇ ಜನ, ಈ ವ್ಯಕ್ತಿಗೆ ಮುಂದೆ ಹೋಗಲು ಅವಕಾಶ ಮಾಡಿಕೊಟ್ಟಿದ್ದರು.
 
ಇಬ್ಬರೂ ವ್ಯಕ್ತಿಗಳನ್ನು ನೋಡುವ ಭಾರತೀಯರ ದೃಷ್ಟಿಕೋನ ಭಿನ್ನವಾಗಿತ್ತು ಎನ್ನುವುದು ಪತ್ರಿಕೆಯ ಅಭಿಪ್ರಾಯವಾಗಿತ್ತು. ಪುರಾವೆಯ ಕೊರತೆ ಇರುವುದರಿಂದ ಭಾರತೀಯರು ಜನಾಂಗೀಯ ದ್ವೇಷಿಗಳು ಹೌದೋ ಅಲ್ಲವೋ ಎನ್ನುವುದನ್ನು ನಾನು ಹೇಳಲಾರೆ.
 
ನಾನು ಜನಾಂಗೀಯ ದ್ವೇಷಿಯಲ್ಲ ಎಂಬುದನ್ನು ಮಾತ್ರ ಸ್ಪಷ್ಟವಾಗಿ ಹೇಳಬಲ್ಲೆ. ಆದರೆ, ಸತ್ಯಶೋಧದಲ್ಲಿ ಈ ಮಾದರಿಯ ಗಾತ್ರ ವೈಜ್ಞಾನಿಕವಾಗಿ ಸಮರ್ಥಿಸುವಷ್ಟು ದೊಡ್ಡ ಪ್ರಮಾಣದಲ್ಲಿಲ್ಲ.
 
ಒಂದುವೇಳೆ, ದೆಹಲಿ ಅಥವಾ ಬೆಂಗಳೂರಿನಲ್ಲಿರುವ ಆಫ್ರಿಕನ್‌ ನಾನಾಗಿದ್ದರೆ, ನೂರಾರು ಭಾರತೀಯರು ನನ್ನ ಜತೆಗೆ ವ್ಯವಹರಿಸುವ ರೀತಿಯನ್ನು ನೋಡಿ, ಖಚಿತ ಅಭಿಪ್ರಾಯಕ್ಕೆ ಬರುತ್ತಿದ್ದೆ.
 
ಭಾರತೀಯರಲ್ಲಿ ಜನಾಂಗೀಯ ದ್ವೇಷಿಗಳು ಇದ್ದಾರೆಯೇ, ಕಪ್ಪು ವರ್ಣೀಯರನ್ನು ಅವರು ದ್ವೇಷಿಸುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿರುವ ಆಫ್ರಿಕನ್ನರ ಅನುಭವವನ್ನೇ ಕೇಳಬೇಕು. ಯಾವ ಉತ್ತರ ಸಿಗಬಹುದು ಎನ್ನುವುದು ಬಹುತೇಕರಿಗೆ ಗೊತ್ತಿದೆ ಎಂಬುದು ನನ್ನ ಊಹೆ.
 
ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆಯಲ್ಲಿ ನನ್ನ ಜತೆ ಕೆಲಸ ಮಾಡಿದ್ದ ಸಹೋದ್ಯೋಗಿಯೊಬ್ಬರು, ಈಗ ಬೇರೊಂದು ಸಂಸ್ಥೆಗೆ ಕೆಲಸ ಮಾಡುತ್ತಿದ್ದು ಕೆಲವು ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿದ್ದಾರೆ. ಅಂದಹಾಗೆ, ಆಕೆಯೊಬ್ಬ ಆಫ್ರಿಕನ್‌.
 
ಆದರೆ, ಅವರ ಚರ್ಮದ ಬಣ್ಣ, ಮುಖದ ಲಕ್ಷಣ ಭಾರತೀಯರಿಗಿಂತ ಹೆಚ್ಚಿನ ವ್ಯತ್ಯಾಸ ಏನಿಲ್ಲ. ಇದರಿಂದ ದೆಹಲಿಯ ಬೀದಿಗಳಲ್ಲಿ ಭಾರತೀಯಳಂತೆಯೇ ಸುತ್ತಾಡಲು ಅವರಿಗೆ ಸಾಧ್ಯವಾಗಿತ್ತು. ಕೆಲವು ದಿನಗಳ ನಂತರ ಆಕೆ ಆಫ್ರಿಕನ್‌ ಮಹಿಳೆಯರಂತೆ ಧಿರಿಸು ತೊಡಲು ಆರಂಭಿಸಿದರು.
 
ಅಲ್ಲದೆ, ತಲೆಗೂದಲನ್ನು ಅಲ್ಲಿನ ವಾಡಿಕೆಯಂತೆ ಗುಂಗುರು–ಗುಂಗುರಾಗಿ ಹೆಣೆದುಕೊಂಡರು. ಏಕೆಂದರೆ, ಅವರಿಗೆ ತನ್ನ ಅಸ್ಮಿತೆಯನ್ನು ಮುಚ್ಚಿಡುವ ಮನಸ್ಸಿರಲಿಲ್ಲ. ಆಗ ವರ್ಣಭೇದದ ಅನುಭವವನ್ನು ಅವರು ಚೆನ್ನಾಗಿ ಅನುಭವಿಸಬೇಕಾಯಿತು.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT