ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವುಕ ಆಂದೋಲನಗಳು ಉಳಿಯುವುದು ಕಷ್ಟ

Last Updated 6 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಅಣ್ಣಾ ಹಜಾರೆ ಮತ್ತು ತಂಡದವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡು, ರಾಜಕೀಯ ಪಕ್ಷ ಕಟ್ಟುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅವರು ದಿಢೀರನೆ ಈ ಘೋಷಣೆ ಮಾಡಿದ್ದರೂ ಕಳೆದ ಆರೆಂಟು ತಿಂಗಳುಗಳಿಂದ ನಡೆಯುತ್ತಿದ್ದ ಬೆಳವಣಿಗೆಗಳನ್ನು ಗಮನಿಸಿದವರಿಗೆ ಅದೊಂದು ದೊಡ್ಡದಾದ, ಆದರೆ ದಿಕ್ಕುತಪ್ಪಿದ ಕಾರ್ಯತಂತ್ರದ ಫಲಶ್ರುತಿ ಎಂದೇ ಅನಿಸುತ್ತದೆ.
 
ಅದೇನೇ ಇರಲಿ ಅದು ದೇಶದ ಜನರಲ್ಲಿ ವಿಭಿನ್ನ ಭಾವನೆಗಳನ್ನಂತೂ ಉಂಟು ಮಾಡಿದೆ. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗಿಯಾದ ಒಬ್ಬ ವ್ಯಕ್ತಿಯಾಗಿ ನನಗೆ, ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಈ ವಿಷಯವನ್ನು ಹೆಚ್ಚು ವಿಶ್ಲೇಷಣೆಗೆ ಒಳಪಡಿಸಬೇಕಾದ ಅಗತ್ಯವಿದೆ ಎಂದು ಅನಿಸುತ್ತದೆ.

ಸಮಂಜಸವಾದ ಹಲವಾರು ಸಾಮಾಜಿಕ ಚಳವಳಿಗಳು ಒಮ್ಮೆ ರಾಜಕೀಕರಣಗೊಳ್ಳುತ್ತಿದ್ದಂತೆಯೇ ಅಪ್ರಸ್ತುತ ಮತ್ತು ದುರ್ಬಲವಾಗಿದ್ದನ್ನು ದೇಶ ಕಂಡಿದೆ. ಉದಾಹರಣೆಗೆ ನಮ್ಮ ಕರ್ನಾಟಕದಲ್ಲೇ ಸಾವಿರಾರು ದುರ್ಬಲ ಜನರಿಗೆ ಧ್ವನಿ ನೀಡಿದ ಎರಡು ವಿಶೇಷ ಆಂದೋಲನಗಳು ಘಟಿಸಿವೆ. ಅದು ದಲಿತ ಚಳವಳಿಯೇ ಇರಬಹುದು ಅಥವಾ ರೈತ ಚಳವಳಿಯೇ ಆಗಿರಬಹುದು. ಇವೆರಡರಲ್ಲೂ ಪ್ರತಿಯೊಬ್ಬರಿಗೂ ಬದಲಾವಣೆಯ ಆಶಾಕಿರಣ ಕಂಡಿತ್ತು.

ಆದರೆ ಸಮಾಜದ ಮುಖ್ಯಧಾರೆಗೆ ಬೇಡವಾಗಿದ್ದ ಮತ್ತು ಅದಕ್ಕೆ ಆಸಕ್ತಿಯೂ ಇಲ್ಲದಾಗಿದ್ದ ಬದಲಾವಣೆ ಅದಾಗಿತ್ತು ಎಂಬುದು ಬೇರೆ ಮಾತು. ಇಷ್ಟರ ಹೊರತಾಗಿಯೂ ಈ ಆಂದೋಲನಗಳು ಸಾಕಷ್ಟು ಸಂಚಲನವನ್ನೇ ಸೃಷ್ಟಿಸಿದವಲ್ಲದೆ, ತಾವು ಪ್ರತಿನಿಧಿಸುತ್ತಿದ್ದ ಜನಸಮುದಾಯದ ಧ್ವನಿ ಎಂಬಂತಹ ವಾತಾವರಣ ನಿರ್ಮಿಸಿದವು.
 
ಆದರೆ ದುರದೃಷ್ಟವಶಾತ್ ಯಾವುದು ಒಂದು ಸಾಮಾಜಿಕ ಸ್ಪಂದನಶೀಲ ಎಂಬ ರೀತಿಯಲ್ಲಿ ಆರಂಭವಾಯಿತೋ ಅದೇ ಕಾಲಕ್ರಮೇಣ ರಾಜಕೀಕರಣಗೊಂಡು ತನ್ನ ಹೊಳಪು ಕಳೆದುಕೊಂಡಿತು. ಈ ಆಂದೋಲನಗಳು ಮತ್ತು ಅಣ್ಣಾ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಂದರ್ಭಗಳು ಭಿನ್ನವಾಗಿರಬಹುದು. ಆದರೂ ಅಣ್ಣಾ ಚಳವಳಿ ಆರಂಭದಲ್ಲಿ ಗಳಿಸಿದ ಜನಬೆಂಬಲವನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕಾಗುತ್ತದೆ.

ವ್ಯವಸ್ಥೆಯಿಂದ ಭ್ರಮನಿರಸನಗೊಂಡಿದ್ದ ಅಪಾರ ಸಂಖ್ಯೆಯ ಜನಸಾಮಾನ್ಯರು, ಅಣ್ಣಾ ಜಾದೂ ಮಾಡಿ ವ್ಯವಸ್ಥೆಯಲ್ಲಿ ಬದಲಾವಣೆ ತಂದುಬಿಡುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಈ ಚಳವಳಿಗೆ ಧುಮುಕಿದರು. ಇವರಲ್ಲಿ ಹಲವರು ಸಹನೆಯಿಲ್ಲದ ಯುವಜನರಾಗಿದ್ದರು, ನಗರ ಕೇಂದ್ರಿತರಾದ ಮತ್ತು ಸಾಮಾಜಿಕ ಪ್ರಕ್ರಿಯೆಯ ಅರಿವಿಲ್ಲದೆ, ತಾವು ಹೇರುತ್ತಿರುವ ಒತ್ತಡದಿಂದ ಬದಲಾವಣೆ ಆಗಿಬಿಡುತ್ತದೆ ಎಂದು ಭ್ರಮಿಸಿದ್ದ ಮಧ್ಯಮ ವರ್ಗದವರಾಗಿದ್ದರು.

ಹೀಗೆ ಬೇಸತ್ತು `ಬದಲಾವಣೆಯ ಜಾದೂ~ಗಾಗಿ ಕಾಯುತ್ತಿದ್ದವರಿಗೆಲ್ಲಾ ತಮ್ಮ ಭ್ರಮನಿರಸನವನ್ನು ಹೊರಹಾಕಲು ಮತ್ತು ನಾಳಿನ ಬಗ್ಗೆ ಭರವಸೆ ಇಟ್ಟುಕೊಳ್ಳಲು ಅಣ್ಣಾ ಸೂಕ್ತ ವೇದಿಕೆಯನ್ನು ಒದಗಿಸಿಕೊಟ್ಟರು. ಆದರೆ ಇಂತಹ ಭಾವುಕ ಆಂದೋಲನಗಳು ಉಳಿಯುವುದು ಕಷ್ಟ ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳಲು ಬಯಸುವ ಈ ವ್ಯವಸ್ಥೆ ಅಷ್ಟು ಸುಲಭವಾಗಿ ಬದಲಾವಣೆ ಆಗಲು ಬಿಡದು ಎಂಬುದರ ಅರಿವು ಅವರಿಗೆ ಇರಲಿಲ್ಲ.

ಅಲ್ಲದೆ ಭ್ರಷ್ಟಾಚಾರವನ್ನು ಧ್ವನಿ ಇಲ್ಲದೆ, ಮೂಕಪ್ರೇಕ್ಷಕರಂತೆ ಅನುಭವಿಸುತ್ತಿರುವ ಗ್ರಾಮೀಣ ಮತ್ತು ಬಡಜನರ ಬೆಂಬಲವೇನೂ ಅಣ್ಣಾ ಆಂದೋಲನಕ್ಕೆ ಇರಲಿಲ್ಲ. ಇನ್ನು ಮಾಧ್ಯಮಗಳ ವಿಷಯಕ್ಕೆ ಬಂದರೆ, ತಮ್ಮ ಓದುಗರು ಹಾಗೂ ಪ್ರೇಕ್ಷಕರು ಎಷ್ಟರಮಟ್ಟಿಗೆ ಈ ಹೋರಾಟದಲ್ಲಿ ಭಾಗಿಯಾಗಿದ್ದರೋ ಅದಕ್ಕೆ ನೇರವಾದ ಅನುಪಾತದಲ್ಲಿ ಮಾಧ್ಯಮಗಳು ಈ ಆಂದೋಲನವನ್ನು ಬೆಂಬಲಿಸಿದವು. ಯಾವಾಗ ತಮ್ಮ ಗ್ರಾಹಕರು ಅಥವಾ ಓದುಗರು ಚಳವಳಿಯಲ್ಲಿ ಆಸಕ್ತಿ ಕಳೆದುಕೊಂಡದ್ದು ತಿಳಿಯಿತೋ ಆಗ ಅವೂ ಕೂಡ ಆವರೆಗೆ ಹಗಲಿರುಳೂ ತಾವು ನೀಡುತ್ತಿದ್ದ ಪ್ರಚಾರದಿಂದ ಹಿಂದೆ ಸರಿದವು.

ನಿಜವಾಗಲೂ ಈ ಆಂದೋಲನದಲ್ಲಿ ಭಾಗಿಯಾಗುವ ರೀತಿಯಲ್ಲಿ ಮಾಧ್ಯಮಗಳೇ ಜನರನ್ನು ಬಡಿದೆಬ್ಬಿಸಿದವೋ ಅಥವಾ ಕೆರಳಿದ ಜನರೇ ಈ ಚಳವಳಿಯಲ್ಲಿ ಪಾಲ್ಗೊಳ್ಳಲು ಮಾಧ್ಯಮಗಳಿಗೆ ಅವಕಾಶ ಮಾಡಿಕೊಟ್ಟರೋ ಎಂಬ ಜಿಜ್ಞಾಸೆ ಚರ್ಚೆಗೊಳಪಡಿಸಬೇಕಾದ ವಿಷಯ. ಒಟ್ಟಾರೆ ವಾಸ್ತವ ಏನೆಂದರೆ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಚಾರ ಕಡಿಮೆಯಾಗಿದ್ದು, ಲಂಚದ ವಿರುದ್ಧ ಹೋರಾಡಬೇಕೆಂಬ ಸಂಕಲ್ಪವನ್ನು ಮುಖ್ಯಧಾರೆಯ ಚಿಂತನೆಯಿಂದ ಬೇರ್ಪಡಿಸಿತು.

ಪಳಗಿದ ರಾಜಕಾರಣಿಗಳನ್ನು ಹೊಂದಿರುವ ಸರ್ಕಾರ ಊಹೆಗೆ ತಕ್ಕಂತೆಯೇ ಪ್ರತಿಕ್ರಿಯಿಸಿತು. ಯಾವುದೇ ಒಬ್ಬ ಸ್ವಾರ್ಥ ಹಾಗೂ ಚಾಣಾಕ್ಷ ರಾಜಕಾರಣಿ ತನ್ನ ಜೀವನಾಡಿಯನ್ನು ತಾನಾಗೇ ಕಿತ್ತುಕೊಂಡು ರಾಜಕೀಯ ಆತ್ಮಹತ್ಯೆಯನ್ನು ಯಾಕೆ ತಾನೇ ಮಾಡಿಕೊಳ್ಳುತ್ತಾನೆ? ಹಾಗೆಂದರೆ ಎಲ್ಲ ರಾಜಕಾರಣಿಗಳೂ ಭ್ರಷ್ಟರು ಎಂದರ್ಥವಲ್ಲ.
 
ಆದರೆ ನಾನು ಮಾತನಾಡಿಸಿರುವ ಬಹುತೇಕ ರಾಜಕಾರಣಿಗಳು, ನೇರವಾಗಿ ಇದ್ದರೆ ಚುನಾವಣಾ ರಾಜಕೀಯದಲ್ಲಿ ಬದುಕುಳಿಯುವುದು ಕಷ್ಟ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಈ ಚಳವಳಿಯ ವಿರುದ್ಧ ಹೋರಾಡಬೇಕೆಂದರೆ ತಮ್ಮ ಎದುರಾಳಿಯನ್ನು ದುರ್ಬಲಗೊಳಿಸುವುದೇ ಉತ್ತಮ ಮಾರ್ಗ ಎಂಬುದು ಈ ಅನುಭವಿ ಪುರುಷ ಮತ್ತು ಮಹಿಳೆಯರಿಗೆ ಚೆನ್ನಾಗಿಯೇ ತಿಳಿದಿದೆ.

ಅದಕ್ಕೆ ತಕ್ಕ ಆಟವನ್ನೇ ಅವರು ಆಡಿದರು. `ರಾಜಕೀಯ~ ಎಂಬುದು ತಮ್ಮ ಆಟದ ಮೈದಾನ ಇದ್ದಂತೆ, ಹೀಗಾಗಿ ಅಣ್ಣಾ ಅವರನ್ನು ಸೋಲಿಸಬೇಕಾದರೆ ತಮಗೆ ಅತ್ಯಂತ ಚಿರಪರಿಚಿತವಾದ ಈ ಕ್ಷೇತ್ರಕ್ಕೇ ಅವರು ಧುಮುಕುವಂತೆ ಮಾಡಬೇಕು ಎಂಬ ಅರಿವು ಅವರಿಗೆ ಚೆನ್ನಾಗಿಯೇ ಇತ್ತು.

ಹೀಗಾಗಿ ಕಳೆದ ಕೆಲ ತಿಂಗಳುಗಳಿಂದ ಎಲ್ಲ ರಾಜಕೀಯ ಪಕ್ಷಗಳ ಬಹುತೇಕ ರಾಜಕಾರಣಿಗಳು ರಾಜಕೀಯ ಕ್ಷೇತ್ರಕ್ಕೆ ಧುಮುಕುವಂತೆ ಮಾಡಲು ಅಣ್ಣಾ ತಂಡಕ್ಕೆ ಗಾಳ ಹಾಕುತ್ತಲೇ ಇದ್ದರು. ಅಣ್ಣಾ ಮತ್ತು ಅವರ ಸಹಚರರು ಅವರಿಗೆ ನಿರಾಸೆ ಉಂಟು ಮಾಡದೆ ಈ ಗಾಳಕ್ಕೆ ಬಿದ್ದರು.

ಈ ಕ್ಷಣದಿಂದಲೇ ತಮ್ಮನ್ನು ರಾಜಕಾರಣಿ ಎಂದು ಭಾವಿಸಿಕೊಂಡು ಅದರಂತೆ ವರ್ತಿಸಲು ಬೇಕಾದ ಕುಟಿಲ ರಾಜಕಾರಣದ ಕೌಶಲ ತಮಗಿಲ್ಲ ಎಂಬುದನ್ನು ಅಣ್ಣಾ ತಂಡ ಅರ್ಥ ಮಾಡಿಕೊಳ್ಳಬೇಕು. ಕನಿಷ್ಠ ತನ್ನ ಚಳವಳಿಯಲ್ಲಿ ಹೆಚ್ಚುತ್ತಿರುವ ರಾಜಕೀಯವನ್ನು ನಿರ್ವಹಿಸಿಕೊಳ್ಳುವ ಸಾಮರ್ಥ್ಯವೂ ಈಗ ಅದಕ್ಕಿಲ್ಲ. ಹಲವಾರು ಮಂದಿ ಬೆಂಬಲ ವಾಪಸ್ ಪಡೆದುಕೊಂಡು ಅವರಿಂದ ದೂರವಾಗಿದ್ದಾರೆ.

ಚಾಣಾಕ್ಷ ರಾಜಕಾರಣಿಗಳ ಹೋರಾಟವನ್ನು, ಪಳಗಿದ ಚಳವಳಿಗಾರರ ಕ್ಷೇತ್ರವನ್ನಾಗಿ ಮಾಡುವುದಕ್ಕೆ ಪೂರಕವಾಗಿ ಅವರು ಕೌಶಲ ಬೆಳೆಸಿಕೊಳ್ಳಬೇಕಾಗಿದೆ.

ಜನಸಮುದಾಯವನ್ನು ಒಗ್ಗೂಡಿಸುವುದೇ ಬೇರೆ, ರಾಜಕೀಯವೇ ಬೇರೆ. ಜನರ ಆಶೋತ್ತರಗಳನ್ನು ಅರ್ಥ ಮಾಡಿಕೊಂಡು ಅದನ್ನು ಬಳಸಿಕೊಳ್ಳುವಂತಹ ಚಾಣಾಕ್ಷತನ, ದೀರ್ಘವಾದ ಮತ್ತು ಗಟ್ಟಿಯಾದ ಆಂದೋಲನಕ್ಕಾಗಿ ಅಗತ್ಯವಿರುವ ಆರ್ಥಿಕ ನೆಲೆಗಟ್ಟು ರೂಪಿಸಿಕೊಳ್ಳುವುದು, ರಾಜಿ ಸೂತ್ರ, ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಸಿದ್ಧರಾಗಬೇಕಾದ ಅಗತ್ಯ ಈಗ ಅವರಿಗಿದೆ.
 
ಮುಂದೊಂದು ದಿನ ಇದನ್ನೆಲ್ಲಾ ಹೊಂದುವ ಸಾಮರ್ಥ್ಯ ಅಣ್ಣಾ ತಂಡಕ್ಕೆ ಬರಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಇದನ್ನೆಲ್ಲಾ ಮಾಡುವುದು ಕಷ್ಟವಾಗಬಹುದು. ತಮ್ಮನ್ನು ಸರಿಗಟ್ಟಬಲ್ಲ ರಾಜಕೀಯ ಸಂಪನ್ಮೂಲ ಅಥವಾ ಸಾಮರ್ಥ್ಯ ಅಣ್ಣಾ ತಂಡಕ್ಕಿಲ್ಲ ಎಂಬುದು ನಮ್ಮ ರಾಜಕಾರಣಿಗಳಿಗೆ ಚೆನ್ನಾಗಿಯೇ ತಿಳಿದಿದೆ. ಇದು ಅವರಿಗೆ ಒಂದು ಸೀಮಾರೇಖೆಯನ್ನು ಕೊಟ್ಟಿರುವುದಷ್ಟೇ ಅಲ್ಲ ಈ ಹೋರಾಟವನ್ನು ತಮ್ಮದೇ ರೀತಿಯಲ್ಲಿ ಎದುರಿಸಲು ಸೂಕ್ತ ವೇದಿಕೆಯನ್ನೂ ಒದಗಿಸಿಕೊಟ್ಟಿದೆ.
 
ಈ ಬೆಳವಣಿಗೆಯಿಂದ ತಮಗೆ ಅನುಕೂಲಕರವಾದ ಸ್ಥಿತಿಯೇ ಸೃಷ್ಟಿಯಾಗುವುದರಿಂದ ಚುನಾವಣೆಯಲ್ಲಿ ಅಣ್ಣಾ ತಂಡವನ್ನು ಮಣಿಸಬಹುದು ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ. ಆದರೆ ಇಂತಹ ಒಂದು ಸೋಲು ಬೆರಳೆಣಿಕೆಯಷ್ಟಿರುವ ಈ ಸಾಹಸಿಗರದೋ ಅಥವಾ ದೇಶದಾದ್ಯಂತ ಇರುವ ನೂರಾರು ಕಾರ್ಯಕರ್ತರದೋ ಅಲ್ಲ.
 
ಬದಲಿಗೆ ಇದು ಇಡೀ ದೇಶಕ್ಕೇ ಆಗುವ ಸೋಲು. ಮತ್ತೆ ಇನ್ನೆಂದಿಗೂ ಅಂತಹ ಅವಕಾಶ ತಾನೇತಾನಾಗಿ ಸೃಷ್ಟಿಯಾಗದೇ ಇರಬಹುದು. ಆಗ ಬರೀ ಈ ಚಳವಳಿಯಷ್ಟೇ ಅಲ್ಲ ಇತರ ಎಲ್ಲ ಸಾಮಾಜಿಕ ಚಳವಳಿಗಳೂ ಕಷ್ಟ ಎದುರಿಸಬೇಕಾಗುತ್ತದೆ. ಕಾರ್ಯಕರ್ತರ ಬೇಡಿಕೆಗಳಿಗೆ ಪ್ರತಿಕ್ರಿಯಿಸುವ ಬದಲು ಅವರನ್ನು ಉಪೇಕ್ಷಿಸಿ ದುರ್ಬಲಗೊಳಿಸುವ ಮೂಲಕ, ತಾವು ಸುರಕ್ಷಿತವಾಗಿ ಇರಬಹುದು ಎಂಬುದನ್ನು ಸರ್ಕಾರ ಮತ್ತು ನಮ್ಮ ರಾಜಕಾರಣಿಗಳು ಬಹುಬೇಗನೇ ಅರಿಯುತ್ತಾರೆ.

ಇದು ನಿಜವಾಗಲೂ ಹಲವಾರು ಯಶಸ್ವಿ ಹೋರಾಟಗಳನ್ನು ನಡೆಸಿರುವ ಕಾರ್ಯಕರ್ತರಿಗೆ ಅಶುಭ ಸೂಚಕವೇ ಹೌದು. ಒಮ್ಮೆ ಅಣ್ಣಾ ತಂಡ ಚುನಾವಣಾ ವೈಫಲ್ಯ ಅನುಭವಿಸಿದರೆ ಆಗ ನಮ್ಮ ರಾಜಕಾರಣಿಗಳು `ಭ್ರಷ್ಟಾಚಾರ ವಿರೋಧಿ ಆಂದೋಲನ~ಕ್ಕೆ ಜನಸಾಮಾನ್ಯರ ಬೆಂಬಲ ಇಲ್ಲ ಎಂಬ ತಮ್ಮ ಊಹೆಯನ್ನು ತಡಮಾಡದೇ ಪ್ರಚುರಪಡಿಸಲು ಆರಂಭಿಸುತ್ತಾರೆ.
 
ವ್ಯವಸ್ಥೆ ಎಷ್ಟರಮಟ್ಟಿಗೆ ಹದಗೆಟ್ಟು ಹೋಗಿದೆಯೆಂದರೆ `ಜನಸಾಮಾನ್ಯರು~ ಎಂದು ಕರೆಸಿಕೊಳ್ಳುವ ಬಹುತೇಕರು ಪ್ರತಿ ಬಾರಿಯೂ ಕೋಟಿಗಟ್ಟಲೆ ಹಣ ಖರ್ಚಾಗುತ್ತಿರುವ `ಚುನಾವಣಾ ಭ್ರಷ್ಟಾಚಾರ~ದ ಅವಿಭಾಜ್ಯ ಅಂಗವೇ ಆಗಿಹೋಗಿದ್ದಾರೆ. ಈ ಭ್ರಷ್ಟ ಪ್ರಕ್ರಿಯೆಯಿಂದ ಹೊರಗುಳಿದಿರುವ ಕೆಲವೇ ಮಂದಿ, ಎಲ್ಲ ರಾಜಕಾರಣಿಗಳನ್ನೂ ಭ್ರಷ್ಟರೆಂಬಂತೆಯೇ ಕಾಣುತ್ತಾರೆ ಮತ್ತು ಅಣ್ಣಾ ಅವರ ರಾಜಕೀಯ ಪಕ್ಷದ ಸದಸ್ಯರನ್ನೂ ಅದೇ ದೃಷ್ಟಿಯಿಂದ ನೋಡಲಾರಂಭಿಸುತ್ತಾರೆ. ಆದ್ದರಿಂದ ಅಣ್ಣಾ ಅವರ ಉದ್ದೇಶ ನಿಸ್ಪೃಹ ಆಗಿರಬಹುದಾದರೂ ಅಂತಹದ್ದೊಂದು ಕ್ರಮಕ್ಕೆ ಇದು ಸಕಾಲವಂತೂ ಅಲ್ಲ.

ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ `ಭ್ರಷ್ಟಾಚಾರ ವಿರೋಧಿ ಭಾರತ ಸಂಘಟನೆ~ಯ ಸದಸ್ಯರು ಸರಿಯಾಗಿ ಯೋಜಿಸಿ ಕಾರ್ಯತಂತ್ರ ರೂಪಿಸಬೇಕಾದ ಅಗತ್ಯ ಇತ್ತು. ದೇಶದಾದ್ಯಂತ ಕಾರ್ಯಕರ್ತರು ಮತ್ತು ಸಂಘಟನೆಗಳನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮ ಉದ್ದೇಶವನ್ನು ಸರಿಯಾಗಿ ಈಡೇರಿಸಿಕೊಳ್ಳಲು ಸಾಧ್ಯವಿತ್ತು.
 
ಎಲ್ಲ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ವಿರುದ್ಧ ವಿಷ ಕಾರುವ ಬದಲು, ವ್ಯವಸ್ಥೆಯಲ್ಲಿರುವ ಉತ್ತಮ ವ್ಯಕ್ತಿಗಳನ್ನು ತೊಡಗಿಸಿಕೊಳ್ಳಲು ಯತ್ನಿಸಿ, ಮುಂದೆ ತಮ್ಮ ಪರ ನಿಲ್ಲಬಹುದಾದ ಮಿತ್ರಕೂಟವನ್ನು ಅವರು ಕಟ್ಟಿಕೊಳ್ಳಬಹುದಿತ್ತು.
 
ಸಂಸತ್ತಿನೊಡನೆ ಭಾಗಿಯಾಗುವುದು ಎಂದರೆ `ಸಂಸತ್ತನ್ನು ಪ್ರವೇಶಿಸಬೇಕು~ ಎಂದರ್ಥವಲ್ಲ. ಅಣ್ಣಾ ತಂಡ ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸಬೇಕು. ಸಂಸತ್ತಿನಲ್ಲಿ ಬದಲಾವಣೆ ತಂದು ಪ್ರಬಲ ಲೋಕಪಾಲ ಮಸೂದೆ ಜಾರಿಗೊಳಿಸಲು ಅಗತ್ಯವಾದ ಸ್ಥಾನಗಳನ್ನು ತಾವು ಯಾವ ರೀತಿ ಪಡೆಯಲು ಸಾಧ್ಯ ಎಂಬುದನ್ನು ತಂಡ ತರ್ಕಬದ್ಧವಾಗಿ ಹೇಗೆ ಸಮರ್ಥಿಸಿಕೊಳ್ಳುತ್ತದೆ?

ಕೇವಲ ಎರಡು ಅಥವಾ ಮೂರು ಸ್ಥಾನ ಗಳಿಸಿದರೆ ಅವರು ನಗೆಪಾಟಲಿಗೀಡಾಗುವುದು ಮಾತ್ರವಲ್ಲ ಚಳವಳಿಯನ್ನು ಹಲವು ದಶಕಗಳಷ್ಟು ಹಿಂದಕ್ಕೆ ಎಳೆದುಕೊಂಡು ಹೋದಂತಾಗುತ್ತದೆ. ಹಲವು ದಶಕಗಳ ಪರಿಶ್ರಮದಿಂದ ಕಟ್ಟಿರುವುದನ್ನು ವಿಶಾಲ ದೃಷ್ಟಿಕೋನದಿಂದ ನೋಡಲೊಪ್ಪದ ಸ್ವಾರ್ಥ ಪ್ರತಿಷ್ಠೆಗಾಗಿ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ.
 
ಅಣ್ಣಾ ಮತ್ತು ತಂಡ ಖಾಸಗಿಯಾಗಿ ಹಾಗೂ ಸಾಮೂಹಿಕವಾಗಿ ದೇಶವನ್ನು ಸಂಚರಿಸಿ ಸಮಾನಮನಸ್ಕ ವ್ಯಕ್ತಿಗಳು- ಗುಂಪುಗಳೊಂದಿಗೆ ತೊಡಗಿಸಿಕೊಂಡಿದ್ದರೆ ಅದು ಅವರ ಉದ್ದೇಶಕ್ಕೆ ಪೂರಕವಾಗಿ ಇರುತ್ತಿತ್ತು. 2014ರ ಚುನಾವಣೆಯಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕ ವಾತಾವರಣ ನಿರ್ಮಿಸಲು ಅನುವಾಗುವಂತೆ ರಾಜಕೀಯ ವ್ಯವಸ್ಥೆಯ ಮೇಲೆ ಒತ್ತಡ ಹೇರುವ ಪ್ರಬಲ ನಾಗರಿಕ ತಂಡವೊಂದನ್ನು ಅವರು ಕಟ್ಟಬಹುದಿತ್ತು. ಆಗಲೂ ವ್ಯವಸ್ಥೆ ಪ್ರತಿಕ್ರಿಯಿಸದಿದ್ದರೆ ದೇಶದ ಭಾವನೆಗಳು ಹಾಗೂ ರಾಜಕೀಯ ವ್ಯವಸ್ಥೆ ಬಗ್ಗೆ ಭ್ರಮನಿರಸನಗೊಂಡ ಸಾಮಾನ್ಯ ಜನರ ಬೆಂಬಲದೊಂದಿಗೆ ರಾಜಕೀಯ ಕಣಕ್ಕೆ ಇಳಿಯಲು ಅಣ್ಣಾ ತಂಡಕ್ಕೆ ಆಗ ಸಕಾಲವಾಗುತ್ತಿತ್ತು. ಇದರಿಂದ ಬದಲಾವಣೆ ತರಲು ಅಗತ್ಯವಾದ ವ್ಯಾಪಕ ಬೆಂಬಲವನ್ನು ಅವರು ಕಾಣಬಹುದಿತ್ತು.

ಈಗ ಅಣ್ಣಾ ತಂಡ ತಮ್ಮ ತಪ್ಪುಗಳಿಂದ ಪಾಠ ಕಲಿಯಬೇಕು, ಮನ್ನಣೆ ಮತ್ತು ಟಿ.ವಿ ಸಮಯದ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೆ ಸಮಾನಮನಸ್ಕ ನಾಗರಿಕರ ಮೈತ್ರಿಕೂಟ ಕಟ್ಟುವತ್ತ ಗಮನ ಕೇಂದ್ರೀಕರಿಸಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನೇ ಪ್ರಮುಖ ಗುರಿಯಾಗಿಸಿಕೊಳ್ಳಬೇಕು. ಸಾಮಾನ್ಯ ರಾಜಕಾರಣಿಗಳ ದೃಷ್ಟಿಕೋನ ಹಾಗೂ ಅಸ್ತಿತ್ವದ ಉಳಿವಿಗಾಗಿ ದಿನನಿತ್ಯ ಅವರು ಎದುರಿಸುವ ಒತ್ತಡಗಳನ್ನು ಅರ್ಥ ಮಾಡಿಕೊಳ್ಳಲು ಅವರು ಹಿಂಜರಿಯಬಾರದು.
 
ವಿಶಾಲ ದೃಷ್ಟಿಕೋನ ಹೊಂದಿ ಇಂದಿನ ವಾಸ್ತವಕ್ಕೆ ತಕ್ಕಂತೆ ಕೆಲಸ ಮಾಡುವುದನ್ನು ರೂಢಿಸಿಕೊಂಡರೆ ಮಾತ್ರ ನಾವು ಯಾವುದಾದರೂ ಬದಲಾವಣೆಯನ್ನು ತರಲು ಸಾಧ್ಯ.
ತಾವೆಷ್ಟು ತಾಳಿಕೊಳ್ಳಬಹುದೋ ಆ ಪ್ರಮಾಣದಲ್ಲಿ ಮಾತ್ರ ಜನ ನಷ್ಟವನ್ನು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಸಹ ಅಣ್ಣಾ ತಂಡ ಅರ್ಥ ಮಾಡಿಕೊಳ್ಳಬೇಕು. ಈವರೆಗೂ ತಾವು ಸಂಪೂರ್ಣವಾಗಿ ಗ್ರಹಿಸಿರದ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಸಾಮಾಜಿಕ ಸಂಪನ್ಮೂಲವನ್ನು ಸೃಷ್ಟಿಸಿಕೊಳ್ಳಬೇಕು.

ಇಲ್ಲದಿದ್ದರೆ ನಮ್ಮಲ್ಲಿ ಬಹುತೇಕರಿಗೆ ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಅಂತಹ ಸಾಮಾಜಿಕ ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ಅವರು ತಮ್ಮನ್ನೇ ತಾವು ದೂಷಿಸಿಕೊಳ್ಳಬೇಕಾಗುತ್ತದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT