ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಣ ಮುಗಿದಿದೆ, ಪ್ರಶ್ನೆಗಳು ಉಳಿದಿವೆ

Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ
ನೋಟು ರದ್ದತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಯೂ ಹೇಳದ ವಿಚಾರಗಳು...
 
*
ಭಾಷಣ ಮುಗಿದಿದೆ. ಯಾವುದೂ ಸ್ಪಷ್ಟವಾಗುತ್ತಿಲ್ಲ. ಯಾರಿಗೂ ಸ್ಪಷ್ಟತೆ ಇದ್ದಂತೆ ತೋರುವುದೂ ಇಲ್ಲ. ನೋಟು ರದ್ದತಿಗೆ ಐವತ್ತು ದಿನಗಳಾದ ಸಂದರ್ಭ ಪ್ರಧಾನ ಮಂತ್ರಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣ, ಇರುವ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
 
ನೋಟು ರದ್ದತಿ ಘೋಷಣೆ ಆದಂದಿನಿಂದಲೂ  ಎಲ್ಲವೂ ಎರಡು ರೀತಿಯ ಅತಿರೇಕಗಳಲ್ಲಿ ಕಳೆದು ಹೋದವು. ಈಗಿನ ಪ್ರಧಾನ ಮಂತ್ರಿ ಏನೇ ಮಾಡಲಿ ಅದನ್ನು ವಿರೋಧಿಸಿಯೇ ಸಿದ್ಧ ಎನ್ನುವವರು ಒಂದೆಡೆ. ಇನ್ನೊಂದೆಡೆ ಈ ಪ್ರಧಾನಿ ಏನು ಮಾಡಿದರೂ ದೇಶದ ಒಳಿತಿಗಾಗಿಯೇ ಮಾಡುತ್ತಾರೆ ಮತ್ತು ಆ ಕಾರಣಕ್ಕೆ ಅವರು ಮಾಡಿದ್ದೆಲ್ಲವನ್ನೂ ತುಟಿ ಪಿಟಿಕ್ಕೆನ್ನದೆ ಒಪ್ಪಿಕೊಳ್ಳಬೇಕು ಎನ್ನುವವರು. ಮೊದಲೇ ನೋಟು ರದ್ದತಿ ಇತ್ಯಾದಿ ಅರ್ಥಶಾಸ್ತ್ರದ ವಿಷಯಗಳು ತೀರಾ ಕ್ಲಿಷ್ಟಕರ. ಅದರ ಜತೆಗೆ ಈ ರೀತಿಯ ರಾಜಕೀಯ ನೆಲೆಯ ವಿರೋಧ ಮತ್ತು ಭಾವನಾತ್ಮಕ ನೆಲೆಯ ಬೆಂಬಲ ಸೇರಿಬಿಟ್ಟರೆ ಮತ್ತೆ ಏನೂ ಹೇಳಬೇಕಿಲ್ಲ. ನಿಜಕ್ಕೂ ಆದದ್ದೇನು, ಆಗುತ್ತಿರುವುದೇನು ಎನ್ನುವುದು ಯಾರಿಗೂ ತಿಳಿಯಲು ಸಾಧ್ಯವಿಲ್ಲ. ಕಳೆದ  ಐವತ್ತು ದಿನಗಳಲ್ಲಿ ಆದದ್ದು ಇದು. ಏನಾಗುತ್ತಿದೆ ಎಂದು ನೋಟು ರದ್ದತಿ ಮಾಡಿದ ಸರ್ಕಾರವೂ ಸೇರಿದಂತೆ ಯಾರಿಗೂ ತಿಳಿಯುತ್ತಿರಲಿಲ್ಲ. ಈಗಲಾದರೂ ತಿಳಿದಿದೆ ಎನ್ನುವ ಭರವಸೆ ಹುಟ್ಟುತ್ತಿಲ್ಲ.
 
ಈ ಮಧ್ಯೆ ವಿಷಯತಜ್ಞರು ಎನ್ನುವವರು ಗೊಂದಲವನ್ನು ತಿಳಿಗೊಳಿಸುವ ಬದಲು ಮತ್ತೂ ಹೆಚ್ಚಿಸಿದರು. ಸರ್ಕಾರ ಕೈಗೊಂಡ ಈ ಅಭೂತಪೂರ್ವ ಕ್ರಮ ಸರಿ ಎ೦ದು ವಾದಿಸಿದ ತಜ್ಞರ ಬಳಿ, ಯಾಕೆ ಸರಿ ಎನ್ನುವುದಕ್ಕೆ ಶಾಸ್ತ್ರೀಯವಾದ ಸಮರ್ಥನೆ ಇರಲಿಲ್ಲ. ಅದು ತಪ್ಪು ಎಂದವರು, ಯಾಕೆ ತಪ್ಪು ಎಂದು ಸರಿಯಾಗಿ ವಾದ ಮಂಡಿಸಲಿಲ್ಲ. ಅರ್ಥಶಾಸ್ತ್ರೀಯ ನೆಲೆಯಲ್ಲಿ ಇದು ಎಷ್ಟು ಸಂಕೀರ್ಣವಾದ ವಿಷಯ ಎಂದರೆ ಅರ್ಥಶಾಸ್ತ್ರಜ್ಞರಾದ ಎಲ್ಲರೂ  ಇದರ ಬಗ್ಗೆ ಕರಾರುವಾಕ್ಕಾಗಿ ಮಾತನಾಡಲು ಸಮರ್ಥರಾಗುವುದಿಲ್ಲ. ಅರ್ಥಶಾಸ್ತ್ರದಲ್ಲಿ ಹಣಕಾಸು ಅರ್ಥಶಾಸ್ತ್ರ (monetary economics)  ಎನ್ನುವ ಒಂದು ಪ್ರತ್ಯೇಕ ವಿಭಾಗವಿದೆ. ಅದರಲ್ಲಿ ಪರಿಣತಿ ಪಡೆದವರಷ್ಟೇ ನೋಟು ರದ್ದತಿಯ ವಿಚಾರದ ಸಾಧಕ-ಭಾದಕಗಳನ್ನು  ಸ್ವಲ್ಪಮಟ್ಟಿಗೆ ತಿಳಿಹೇಳಲು ಸಾಧ್ಯ. ಅದರಲ್ಲೂ ಭಾರತದಲ್ಲಿ ಈ ವಿಷಯದ ಬಗ್ಗೆ ತಿಳಿಹೇಳಲು ಕೇವಲ ಹಣಕಾಸು ಅರ್ಥಶಾಸ್ತ್ರದ ತಾತ್ವಿಕ ಆಳ-ಅಗಲ ಅಷ್ಟೇ ತಿಳಿದರೆ ಸಾಲುವುದಿಲ್ಲ. ಈ ತತ್ವಗಳನ್ನು ಈ ದೇಶದ ಅತಿಕ್ಲಿಷ್ಟ ಅರ್ಥವ್ಯವಸ್ಥೆಗೆ ಅಳವಡಿಸಿಕೊಂಡು ಅರ್ಥ ಮಾಡಿಕೊಳ್ಳುವಷ್ಟು ಭಾರತೀಯ ಜ್ಞಾನವೂ ಅವರಿಗೆ ಬೇಕಾಗುತ್ತದೆ.
 
ಅಂತಹವರ ಸಂಖ್ಯೆ ದೇಶದಲ್ಲಿ ಕಡಿಮೆ ಇದೆಯೋ ಅಥವಾ ಇದ್ದವರು ಇದರ ಬಗ್ಗೆ ಮಾತನಾಡಲು ಬಯಸಲಿಲ್ಲವೋ ತಿಳಿಯದು. ಹಣಕಾಸು ಅರ್ಥಶಾಸ್ತ್ರಜ್ಞರ ಬದಲು ಮಾಧ್ಯಮಗಳಲ್ಲಿ, ಟಿವಿ ಚರ್ಚೆಗಳಲ್ಲಿ ಲೆಕ್ಕಪರಿಶೋಧಕರು ಕಾಣಿಸಿಕೊಂಡರು. ಅವರ ಜತೆ ಪತ್ರಕರ್ತರು, ರಾಜಕಾರಣಿಗಳು ಧ್ವನಿಗೂಡಿಸಿದರು. ಯಾರು ಏನು ಹೇಳಿದರು, ಯಾರು ಏನು ಕೇಳಿದರು ಎಂದು ಯಾರಿಗೂ ತಿಳಿಯಲಿಲ್ಲ. ಬರಬರುತ್ತಾ ಯಾರಿಗೂ ಏನೂ ತಿಳಿಯಬೇಕಾಗಿಯೂ ಇರಲಿಲ್ಲ. ಒಮ್ಮೆ ಬ್ಯಾಂಕಿಂಗ್ ವ್ಯವಸ್ಥೆ ಸಹಜ ಸ್ಥಿತಿಗೆ  ಮರಳಿ, ತಮ್ಮ ಹಣವನ್ನು ಯಾವುದೇ ನಿರ್ಬಂಧ ಇಲ್ಲದೆ ಬ್ಯಾ೦ಕ್ ಕೌಂಟರ್‌ಗಳಿಂದ ಮತ್ತು ಎಟಿಎಂಗಳಿ೦ದ ಪಡೆಯುವಂತಹ ಸ್ಥಿತಿ ಬಂದರೆ ಸಾಕಾಗಿತ್ತು. 2016ರ  ಕೊನೆಯ ದಿನ ಪ್ರಧಾನ ಮಂತ್ರಿಯವರ ಭಾಷಣಕ್ಕೆ ದೇಶಕ್ಕೆ ದೇಶವೇ ಕಾದು ಕುಳಿತದ್ದು ಈ ಹಿನ್ನೆಲೆಯಲ್ಲಿ.
 
ಐವತ್ತು ದಿನಗಳಲ್ಲಿ ಇವೆಲ್ಲವೂ ಸರಿ ಹೋಗುತ್ತದೆ ಅಂತ ಪ್ರಧಾನಿ ಹೇಳಿದ್ದರು. ಅವಧಿ ಮುಗಿದಿದೆ. ಎಲ್ಲವೂ ಸರಿ ಹೋಗಿಲ್ಲ. ಸಹಜ ಸ್ಥಿತಿ ಮರಳಲಿಲ್ಲ. ಟಿವಿಯಲ್ಲಿ ಕಾಣಿಸಿಕೊಂಡ ಪ್ರಧಾನಿ ತಾವೇ ವಿಧಿಸಿದ ಗಡುವಿನ ಬಗ್ಗೆ ಚಕಾರ ಎತ್ತಲಿಲ್ಲ. ಯಾವಾಗ ಎಲ್ಲವೂ ಸರಿ ಹೋಗಬಹುದು ಎಂದು ಒಂದು ಸಣ್ಣ ಸೂಚನೆಯನ್ನೂ ಕೊಡಲಿಲ್ಲ. ಬದಲಿಗೆ ಹೊಸ ಹೊಸ  ಭರವಸೆಗಳನ್ನು ನೀಡಿದರು. ಅವರಿಗೆ ಅಷ್ಟು ನೀಡುತ್ತೇವೆ ಎಂದರು. ಇವರಿಗೆ ಇಷ್ಟು ನೀಡುತ್ತೇವೆ ಎಂದರು. ಗರ್ಭಿಣಿಯರಿಗೆ ಒಂದಷ್ಟು ಸಾವಿರ, ರೈತರಿಗೆ ಒಂದಷ್ಟು ಲಕ್ಷ, ಕೈಗಾರಿಕೆಗಳಿಗೆ ಒಂದಷ್ಟು ಕೋಟಿ ಎಂದು ಬಜೆಟ್ ಭಾಷಣದ ರೀತಿ ಮಾತನಾಡಿದರು. 
 
ಈ ಎಲ್ಲಾ ಕೊಡುಗೆಗಳ ಪರಿಣಾಮವಾಗಿ ನೋಟು ರದ್ದತಿಯಿಂದ  ಭಾರಿ ಹೊಡೆತ ಅನುಭವಿಸಿದ ಗ್ರಾಮೀಣ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು ಅರ್ಥಶಾಸ್ತ್ರಜ್ಞರು ಈಗ ಹೇಳುತ್ತಿದ್ದಾರೆ. ಅಂದರೆ ಗ್ರಾಮೀಣ ಆರ್ಥಿಕತೆಗೆ ಏಟು ಬಿದ್ದಿದೆ ಎಂದು ಅವರಾದರೂ ಒಪ್ಪಿಕೊಂಡ ಹಾಗಾಯಿತು. ಆದರೆ ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದೇ ಬೇರೆ. ಅವರ ಪ್ರಕಾರ ನೋಟು ರದ್ದತಿಯಾದ ನಂತರದ ದಿನಗಳಲ್ಲಿ ಕೃಷಿ ರಂಗಕ್ಕೆ ಎಳ್ಳಷ್ಟೂ ತೊಂದರೆಯಾಗಿಲ್ಲ, ಬದಲಿಗೆ ಕೃಷಿ ಚಟುವಟಿಕೆಗಳು ಈ ಅವಧಿಯಲ್ಲಿ ಹೆಚ್ಚಿವೆ. ಈ ಅವಧಿಯಲ್ಲಿ  ಹಿಂಗಾರು ಬಿತ್ತನೆಯ ಪ್ರಮಾಣ ಹೆಚ್ಚಿದೆಯಂತೆ. ಈ ಅವಧಿಯಲ್ಲಿ ರೈತರು ರಸಗೊಬ್ಬರವನ್ನು ಎಂದಿಗಿಂತ ಹೆಚ್ಚು ಖರೀದಿಸಿದ್ದಾರ೦ತೆ.  ಅದಕ್ಕೆ ಪೂರಕವಾದ ಅಂಕಿ ಅಂಶಗಳನ್ನೂ ಅವರು ನೀಡಿದರು. ಇದನ್ನೇ ವಿತ್ತ ಸಚಿವರು ಎರಡು ದಿನಗಳ ಹಿಂದೆ ಹೇಳಿದ್ದರು. ಹಾಗಾದರೆ ನೋಟು ರದ್ದತಿಯಿಂದ ಗ್ರಾಮೀಣರಿಗೆ, ಕೃಷಿಕರಿಗೆ ತೊಂದರೆ ಆಗುವುದು ಬಿಡಿ, ವಾಸ್ತವದಲ್ಲಿ ಅವರ ಪರಿಸ್ಥಿತಿ ಸುಧಾರಿಸಿದೆ ಎಂದು ಅವರು ಹೇಳುತ್ತಿದ್ದಾರೆ.  ಮಾತ್ರವಲ್ಲ. ಕೆಲವು ರಾಜ್ಯಗಳಲ್ಲಿ ಬರ ಇದೆ. ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಬರದ ಪರಿಸ್ಥಿತಿ ತೀವ್ರವಾಗಿದೆ.  ಹಿಂಗಾರು ಮಳೆ ಆಶ್ರಯಿಸಿರುವ ತಮಿಳುನಾಡಿನಲ್ಲಿ  1876ರ ನಂತರದ ಅತಿಕಡಿಮೆ ವಾರ್ಷಿಕ ಮಳೆ ಈ ವರ್ಷ ಈ ತನಕ  ದಾಖಲಾಗಿದೆ. ಅಂದರೆ ಬರಗಾಲವಿದ್ದೂ, ನೋಟು ರದ್ದತಿಯ ಹೊರತಾಗಿಯೂ ದೇಶದಲ್ಲಿ ಬಿತ್ತನೆಯ ಪ್ರಮಾಣ ಹೆಚ್ಚಾಗಿದೆ, ರಸಗೊಬ್ಬರಗಳ ಖರೀದಿ ಹೆಚ್ಚಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಟಿವಿಯಲ್ಲಿ ಕಾಣಿಸಿಕೊಳ್ಳುವ ರೈತ ನಾಯಕರು ಬೇರೆಯೇ ಕತೆ ಹೇಳುತ್ತಿದ್ದಾರೆ. ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎನ್ನುವುದು ನಮ್ಮ ನಮ್ಮ ಅನುಭವಕ್ಕೆ ಬಿಟ್ಟ ವಿಚಾರ.
 
ಪ್ರಧಾನಿಯವರ ಭಾಷಣ ಕೇಳಿದರೆ ಅದು ನೋಟು ರದ್ದತಿಯ ನಂತರ ಆದ ಬೆಳವಣಿಗೆಗಳು ಜನರಲ್ಲಿ ಮೂಡಿಸಿದ ಪ್ರಶ್ನೆಗಳಿಗೆ ಉತ್ತರ ಹೇಳುವುದಕ್ಕಿಂತ ಹೆಚ್ಚು ದೇಶದ ಗಮನವನ್ನು ಇನ್ನೆತ್ತಲೋ ಸೆಳೆಯುವ ರೀತಿಯಲ್ಲಿತ್ತು. ನೋಟು ರದ್ದತಿಯಾದ ನಂತರದ ಐವತ್ತು ದಿನಗಳಲ್ಲಿ ಹಲವಾರು ಬೆಳವಣಿಗೆಗಳಾದವು. ಎಲ್ಲವೂ ಸರ್ಕಾರ ಎಣಿಸಿದಂತೆ ಆಗಲಿಲ್ಲ. ಕಪ್ಪು ಹಣ ಹೊಸ ನೋಟಿಗೆ ಪರಿವರ್ತನೆ ಆಗಿ, ವ್ಯವಸ್ಥೆಯಲ್ಲಿ ಇದ್ದ ಹಳೆ ನೋಟುಗಳೆಲ್ಲಾ ಹೆಚ್ಚು ಕಡಿಮೆ ಬ್ಯಾಂಕಿನಲ್ಲಿ ಜಮೆ ಆಗಿವೆ. ಸಂಪೂರ್ಣ ಅಂಕಿ ಅಂಶಗಳು ಇನ್ನೂ ಲಭ್ಯ ಇಲ್ಲ. ಅದ್ಯಾಕೋ ರಿಸರ್ವ್  ಬ್ಯಾಂಕ್ ಈ ಅಂಕಿ ಅಂಶಗಳನ್ನು ಕೆಲದಿನಗಳಿಂದ ನೀಡುತ್ತಿಲ್ಲ. ಅದನ್ನು ಹೆಚ್ಚು ದಿನ ಅಡಗಿಸಿಡಲಾಗದು. ಇಂದಲ್ಲ ನಾಳೆ ಈ ಅಂಕಿ ಅಂಶಗಳು ಹೊರ ಬರಲೇಬೇಕು. ಈ ತನಕ ಲಭ್ಯ ಇರುವ ಅಂಕಿ ಅಂಶಗಳ ಪ್ರಕಾರ ಬಹುತೇಕ ಹಳೆ ನೋಟುಗಳು ಬ್ಯಾಂಕುಗಳಲ್ಲಿ ಜಮೆ ಆಗಿವೆ. ಅಂದರೆ ಸುಮಾರು ₹ 4 ಲಕ್ಷ ಕೋಟಿಯಷ್ಟಿದೆ  ಎಂದು ಅಂದಾಜಿಸಲಾದ ಕಪ್ಪು ಹಣವನ್ನು ನೋಟುಗಳ ರದ್ದತಿಯ ಮೂಲಕ ಮಟ್ಟ ಹಾಕಬಹುದು ಎಂದುಕೊಂಡದ್ದು ಈಗ ಸಾಧ್ಯವಾಗುವ ಹಾಗೆ ಕಾಣುತ್ತಿಲ್ಲ. ಅಲ್ಪ ಪ್ರಮಾಣದ ಕಪ್ಪುಹಣವನ್ನು ಮಟ್ಟ ಹಾಕುವುದು ಸಾಧ್ಯ ಆಗಬಹುದು. ಅಷ್ಟರ ಮಟ್ಟಿಗಾದರೂ ಸರ್ಕಾರದ ಕ್ರಮ ಯಶಸ್ವೀ ಅಂತ ಕೆಲವರು ಹೇಳುತ್ತಿದ್ದಾರೆ. ಆದರೆ ಆ ಸಣ್ಣ ಯಶಸ್ಸಿಗೆ ಇಡೀ ವ್ಯವಸ್ಥೆ ಅನುಭವಿಸುತ್ತಿರುವ ಮತ್ತು ಅನುಭವಿಸಲಿರುವ ನಷ್ಟಗಳ ಲೆಕ್ಕಾಚಾರ ಹಾಕಿದರೆ ಸರ್ಕಾರದ ಕ್ರಮವನ್ನು ಯಾರೂ ಸಮರ್ಥಿಸಲು ಬಹುಶಃ ಸಾಧ್ಯವಾಗದು. ಪ್ರಧಾನಿಯವರ ಭಾಷಣ ಈ ಸತ್ಯಕ್ಕೆ ಜನರನ್ನು ಸಿದ್ಧಪಡಿಸಲು ಪೂರಕವಾಗಿ ಹೆಣೆದಂತಿತ್ತು. ಆದುದರಿಂದಲೇ ‘ಎಷ್ಟು ಹಣ ಸಂಗ್ರಹವಾಯಿತು ಎನ್ನುವ ಅಂಕಿ ಅಂಶಗಳು ಇನ್ನೂ ನಮ್ಮ ಬಳಿ ಇಲ್ಲ’ ಎನ್ನುತ್ತಲೇ ಹೊಸ ಹೊಸ ಕೊಡುಗೆಗಳ ಘೋಷಣೆ ನಡೆದಿದೆ.
 
ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗುತ್ತಿದ್ದಂತೆಯೇ ಹೊಸ ಹೊಸ ತಂತ್ರಗಳನ್ನು ಹೆಣೆದು ಜನರನ್ನು ಸುಮ್ಮನಾಗಿಸುವುದು ಅನಿವಾರ್ಯವಾಗುತ್ತದೆ. ಭಾಷಣದಲ್ಲಿ ಪ್ರಧಾನಮಂತ್ರಿ ಹೊಸ ಅಂಕಿ-ಅಂಶವೊಂದನ್ನು ಜನರ ಮುಂದಿಟ್ಟರು.  ಇಡೀ ದೇಶದಲ್ಲಿ 24 ಲಕ್ಷ ಜನ ಮಾತ್ರ ತಮಗೆ ವಾರ್ಷಿಕ ₹ 10 ಲಕ್ಷಕ್ಕಿಂತ ಹೆಚ್ಚಿನ ವರಮಾನ ಇದೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ತಿಳಿಸಿ ‘ಇದನ್ನು ಕಂಡು ನೀವು ನಗಬಹುದು ಅಥವಾ ನಿಮಗೆ ಕೋಪ ಬರಬಹುದು’ ಎಂದರು. ಹೀಗೆ ಹೇಳುವುದರ ಮೂಲಕ ನೋಟು ರದ್ದತಿಗೆ ಹೊಸದೊಂದು ಗುರಿಯನ್ನು ಅವರು ಪ್ರಸ್ತಾಪಿಸಿದ್ದಾರೆ. ಅದು ₹ 10 ಲಕ್ಷಕ್ಕಿಂತ ಹೆಚ್ಚು ವರಮಾನ ಘೋಷಣೆ ಮಾಡುವವರ ಸಂಖ್ಯೆ ಹೆಚ್ಚಾಗುವಂತೆ ಮಾಡಿ ಅವರಿಂದ ನಿಗದಿತ ಆದಾಯ ತೆರಿಗೆ ಸಂಗ್ರಹಿಸುವುದು. ಅದು ಒಳ್ಳೆಯ ಗುರಿಯೇನೋ ಹೌದು. ಆದರೆ ಈಗ ಇದನ್ನೇ ಇನ್ನೊಂದು ದೃಷ್ಟಿಯಲ್ಲಿ ನೋಡೋಣ. ದೇಶದಲ್ಲಿ ಬಹುತೇಕ ಜನ ತಮ್ಮ ವರಮಾನಕ್ಕೆ ಸಂಬಂಧಿಸಿ ಸುಳ್ಳು ಹೇಳಿ ಸರ್ಕಾರವನ್ನು ವಂಚಿಸಿದ್ದರೆ ಅದು ಆದಾಯ ತೆರಿಗೆ ಇಲಾಖೆಯ ವೈಫಲ್ಯದಿಂದ ಆದದ್ದು. ಅಂದರೆ ಆದಾಯ ತೆರಿಗೆ ಇಲಾಖೆಯ ವೈಫಲ್ಯಕ್ಕೆ ನೋಟು ರದ್ದತಿಯ ಮದ್ದು. 
 
ನೋಟು ರದ್ದತಿಯ ಬಳಿಕ ದೇಶದಾದ್ಯಂತ ನಡೆದ ತೆರಿಗೆ ದಾಳಿಗಳ ಹಿನ್ನೆಲೆಯಲ್ಲೂ ನಾವು ಇದನ್ನೇ ಕಂಡದ್ದು.  ಕೇವಲ ಐವತ್ತು ದಿನಗಳ ಅವಧಿಯಲ್ಲಿ ಇಷ್ಟೊಂದು ಪ್ರಮಾಣದ ಅಕ್ರಮ ಸಂಪತ್ತು ಯಾವತ್ತೂ ಪತ್ತೆ ಆಗಿರಲಿಲ್ಲ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಅದು ಸತ್ಯ ಇರಬಹುದು. ಆದರೆ ಈ ದಾಳಿ ನಡೆಸುವುದಕ್ಕೂ, ನೋಟುಗಳ ರದ್ದತಿಗೂ ಏನೇನೂ ಸಂಬಂಧ ಇರಲಿಲ್ಲ. ಕರ್ನಾಟಕದಂತಹ ರಾಜ್ಯದಲ್ಲಿ ಲೋಕಾಯುಕ್ತದಂತಹ ಸಣ್ಣ ಸಂಸ್ಥೆ ಅದು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಮಾಡಿದ್ದನ್ನೇ ಇನ್ನೊಂದು ರೀತಿಯಲ್ಲಿ ಇನ್ನೊಂದು ಕಾರಣಕ್ಕೆ ದೇಶವ್ಯಾಪಿಯಾಗಿ ಆದಾಯ ತೆರಿಗೆ ಇಲಾಖೆ ಮಾಡಿದ್ದು. ಈ ದಾಳಿಗಳನ್ನು ನೋಟು ರದ್ದತಿ ಮಾಡುವುದಕ್ಕೆ ಮೊದಲೇ ಆದಾಯ ತೆರಿಗೆ ಇಲಾಖೆ ನಡೆಸಬಹುದಿತ್ತು. ಬಹುಶಃ ಕಾಲಕಾಲಕ್ಕೆ ಹಾಗೆ ಮಾಡಿದ್ದಾರೆ ನೋಟು ರದ್ದತಿಯಂತಹ ದೊಡ್ಡ ಮಟ್ಟದ ಕ್ರಮದ ಅಗತ್ಯವೇ ಬೀಳುತ್ತಿರಲಿಲ್ಲವೇನೋ? ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಇಷ್ಟೊಂದು ಪ್ರಮಾಣದ ಹಣ ಯಾವತ್ತೂ ಹರಿದು ಬಂದಿಲ್ಲ. ಈಗ ಆಗಿದೆ. ಇದು ನೋಟು ರದ್ದತಿಯ ದೊಡ್ಡ ಲಾಭ ಎಂದು ಸರ್ಕಾರ ಹೇಳುತ್ತಿದೆ. ಆದರೆ ಒಮ್ಮೆ ಬ್ಯಾಂಕಿನಲ್ಲಿರುವ ಹಣ ಪಡೆಯಲು ಇರುವ ನಿರ್ಬಂಧಗಳೆಲ್ಲಾ ಹೊರಟುಹೋದ ನಂತರ ಎಷ್ಟು ಹಣ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಉಳಿಯುತ್ತದೆ ಎನ್ನುವುದು ಗೊತ್ತಿಲ್ಲ. ನೋಟು ರದ್ದತಿಯಿಂದ ಈಗಾಗಲೇ ಆಗಿದೆ ಮತ್ತು ಇನ್ನೂ ಆಗಲಿದೆ ಎಂದು ಸರ್ಕಾರ ಹೇಳುವ ಯಾವ ಪರಿಣಾಮದ ಬಗ್ಗೆ ಕೂಡ ಸ್ಪಷ್ಟತೆ ಮೂಡುತ್ತಿಲ್ಲ,  ಭರವಸೆ ಹುಟ್ಟುತ್ತಿಲ್ಲ. ಪ್ರಧಾನಿಯವರ ಮೇಲೆ ಜನರಿಗೆ ಇರುವ ನಂಬಿಕೆ ಮಾತ್ರದಿಂದಲೇ ಸರ್ಕಾರ ಎಲ್ಲವನ್ನೂ ನಿಭಾಯಿಸುತ್ತಿದೆ. 
 
ನೋಟು ರದ್ದತಿ ಆತುರದ ಕ್ರಮ ಎನ್ನುವ ಕೆಲ ಅರ್ಥಶಾಸ್ತ್ರಜ್ಞರ ಅಭಿಮತ ದಿನದಿಂದ ದಿನಕ್ಕೆ ಹೆಚ್ಚು ಸತ್ಯವಾಗಿ ಕಾಣುತ್ತದೆ. ಪ್ರಧಾನಿಯವರ ಶಬ್ದಾಡಂಬರದ ಭಾಷಣದ ನಂತರ ಈ ಆತಂಕ ಇನ್ನೂ ಹೆಚ್ಚಿದೆ. ಇದನ್ನು ಸುಳ್ಳಾಗುವಂತೆ ಮಾಡಲು ಹೋಗಿ ಸರ್ಕಾರ ಇನ್ನೇನೋ ಎಡವಟ್ಟುಗಳನ್ನು ಮಾಡದೆ, ಈಗಾಗಲೇ ಕೈಗೊಂಡ ಕ್ರಮದ ಪರಿಣಾಮಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಪ್ರಧಾನಿಯವರೇ ಹಿಂದೊಮ್ಮೆ ಹೇಳಿದ ಕಡಿಮೆ ಸರ್ಕಾರ ಹೆಚ್ಚು ಆಡಳಿತ (minimum government maximum governance) ಎಂಬ ಘೋಷಣೆಗೆ ಅರ್ಥ ಬಂದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT