ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಮಾಧ್ಯಮ ಮತ್ತು ಬದುಕಿನ ಆಯ್ಕೆಗಳು

Last Updated 18 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬಿಜಾಪುರದಲ್ಲಿ ನಡೆದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ, ಸಮ್ಮೇಳನಾಧ್ಯಕ್ಷರು ಶಿಕ್ಷಣದ ಭಾಷಾ ಮಾಧ್ಯಮಕ್ಕೂ ಬದುಕಿನಲ್ಲಿ ಓರ್ವ ವ್ಯಕ್ತಿ ಪಡೆಯುವ ಯಶಸ್ಸಿಗೂ ನಡುವೆ ಇರುವ ಸಂಬಂಧವನ್ನು ಕುರಿತು ಸ್ಪಷ್ಟವಾದ ಚಿತ್ರಣ ಮೂಡಬೇಕಾದರೆ ವಾಸ್ತವ ಅಂಕಿಅಂಶ ಆಧರಿತ ಅಧ್ಯಯನದ ಅವಶ್ಯಕತೆಯಿದೆ ಎಂದು ಹೇಳಿರುವುದು ಶಿಕ್ಷಣ ಕ್ಷೇತ್ರವನ್ನು ಬಹು ದಿನಗಳಿಂದ ಕಾಡುತ್ತಿರುವ ಪ್ರಶ್ನೆಯೊಂದನ್ನು ಪುನಃ ನಮ್ಮ ಮುಂದೆ ತೆರೆದಿಟ್ಟಿದೆ.

ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರಿಗೆ ಹೆಚ್ಚಿನ ಆದಾಯ ತರುವ ಮತ್ತು ಸಾಮಾಜಿಕ ಸ್ಥಾನವನ್ನು ಹೆಚ್ಚಿಸುವ ಉದ್ಯೋಗಗಳು ದೊರೆಯುತ್ತವೆ. ಅದೇ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದವರಿಗೆ ಸೀಮಿತ ಉದ್ಯೋಗಾವಕಾಶಗಳಿರುತ್ತವೆ ಎಂಬ ಭಾವನೆ ಇಂದು ಅನೇಕ ಜನರ ಮನಸ್ಸಿನಲ್ಲಿದೆ.

ಈ ಕಾರಣಕ್ಕಾಗಿಯೇ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳಿಗೆ ಎಷ್ಟು ಹಣವನ್ನಾದರೂ ನೀಡಿ ತಮ್ಮ ಮಕ್ಕಳನ್ನು ಕಳುಹಿಸಲು ಸಿದ್ಧರಿರುವ ತಂದೆ-ತಾಯಿಗಳು ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಉಚಿತವಾಗಿ ಶಿಕ್ಷಣ ನೀಡಿದರೂ ಕಳುಹಿಸಲು ತಯಾರಿಲ್ಲ ಎಂಬ ಸಮ್ಮೇಳನಾಧ್ಯಕ್ಷರ ಮಾತುಗಳು ಮಾತೃಭಾಷೆ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ನಡುವೆ ದಿನೇ ದಿನೇ ಹೆಚ್ಚುತ್ತಿರುವ ಅಂತರಕ್ಕೆ ಕನ್ನಡಿ ಹಿಡಿದಂತಿದೆ.

ಆಂಗ್ಲ  ಮಾಧ್ಯಮ ಶಿಕ್ಷಣದಿಂದಲೇ ಬದುಕಿನ ಏಳಿಗೆ ಸಾಧ್ಯ ಎಂಬುದು ಸತ್ಯವೋ ಮಿಥ್ಯೆಯೋ ಎಂದು ಅರಿಯಬೇಕಾದರೆ 2000ದಿಂದ 2011ರವರೆಗಿನ ಅವಧಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರಗಳೆರಡರಲ್ಲೂ ಯಶಸ್ವಿಯಾಗಿರುವಂಥ ವ್ಯಕ್ತಿಗಳು ಯಾವ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ ಎಂಬುದನ್ನು ಅಂಕಿ -ಅಂಶಗಳ ಆಧಾರದ ಮೇಲೆ ಪರಿಶೀಲಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮೀಕ್ಷೆಯೊಂದನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಆಯೋಗವೊಂದನ್ನು ರಚಿಸಬೇಕೆಂಬ ಸಲಹೆಯನ್ನು ಸಮ್ಮೇಳನಾಧ್ಯಕ್ಷರು ನೀಡಿದ್ದಾರೆ.

ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆಲ್ಲ ಉದ್ಯೋಗ ದೊರೆತಿದೆಯೇ ಎಂಬ ಪ್ರಶ್ನೆಯನ್ನು ಎತ್ತಿರುವ ಸಮ್ಮೇಳನಾಧ್ಯಕ್ಷರು, ತಮ್ಮ ಅಭಿಪ್ರಾಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆದವರು ಹೆಚ್ಚಿನ ಯಶಸ್ಸನ್ನು ಪಡೆದಿದ್ದಾರೆ ಎಂದು ಹೇಳುವುದರ ಮೂಲಕ ಸರ್ಕಾರಿ ಮತ್ತು ಖಾಸಗಿ ವ್ಯವಸ್ಥೆಗಳಲ್ಲಿ ಉನ್ನತ ಉದ್ಯೋಗಗಳಲ್ಲಿರುವವರ ಶೈಕ್ಷಣಿಕ ಹಿನ್ನೆಲೆಯನ್ನು ಪರಿಶೀಲಿಸುವ ಅಗತ್ಯವನ್ನು ನಮ್ಮ ಮುಂದಿಟ್ಟಿದ್ದಾರೆ.

ಶಿಕ್ಷಣ ಮಾಧ್ಯಮವಾಗಿ ಮಾತೃಭಾಷೆ ಹೆಚ್ಚು ಸೂಕ್ತವೋ ಅಥವಾ ಇಂಗ್ಲಿಷ್ ಹೆಚ್ಚು ಉಪಯುಕ್ತವೋ ಎನ್ನುವ ವಾದ-ವಿವಾದಗಳಲ್ಲಿ ನಾವು ಒಂದು ಮುಖ್ಯವಾದ ವಿಷಯವನ್ನು ಮರೆತು ಬಿಟ್ಟಿದ್ದೇವೇನೋ ಎನಿಸುತ್ತಿದೆ.

ಇಂದು ಸರ್ಕಾರಿ ಸ್ವಾಮ್ಯದಲ್ಲಿರುವ ಕಚೇರಿಗಳು, ಸಂಶೋಧನಾ ಸಂಸ್ಥೆಗಳು ವಿಶ್ವವಿದ್ಯಾಲಯಗಳು ಮತ್ತು ಇತರ ಉದ್ಯೋಗಗಳಲ್ಲಿ ಉನ್ನತ ಶ್ರೇಣಿಯ ಹುದ್ದೆಗಳಲ್ಲಿರುವಂಥವರು ಮತ್ತು ಖಾಸಗಿ ಉದ್ದಿಮೆಗಳ ನಾಯಕತ್ವವನ್ನು ವಹಿಸಿಕೊಂಡು ಅವುಗಳನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ದವರು - ಈ ಎರಡು ವರ್ಗಗಳಲ್ಲೂ ಗ್ರಾಮೀಣ ಹಿನ್ನೆಲೆಯಿಂದ ಬಂದು, ತಮ್ಮ ಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪಡೆದಂಥ ಅನೇಕರು ನಮ್ಮ ನಡುವೆ ಇದ್ದಾರೆ.

ಇವರಲ್ಲಿ ಅನೇಕರ ವೃತ್ತಿ ಸಂಪರ್ಕಗಳು, ಸಾಧನೆಗಳು ರಾಜ್ಯದ ಹಾಗೂ ರಾಷ್ಟ್ರದ ಎಲ್ಲೆಗಳನ್ನು ದಾಟಿ ಜಗತ್ತಿನ ನಾನಾ ಭಾಗಗಳಲ್ಲಿ ಹರಡಿವೆ. ಇದನ್ನು ಸಾಧಿಸಲು ಇವರಿಗೆ ಹೇಗೆ ಸಾಧ್ಯವಾಯಿತು? ಯಾವ ಹಂತದಲ್ಲಿ ಇವರು ಇಂಗ್ಲಿಷ್ ಭಾಷೆಯನ್ನು ಕಲಿತರು ಅಥವಾ ಪ್ರಾವೀಣ್ಯವನ್ನು ಪಡೆದರು?

ಇಂದು ತಮ್ಮ ನಾಯಕತ್ವದಲ್ಲಿರುವ ಸಂಸ್ಥೆಗಳಲ್ಲಿ ಖಾಲಿ ಸ್ಥಾನಗಳನ್ನು ತುಂಬುವ ನಿರ್ಧಾರಗಳನ್ನು ತೆಗೆದುಕೊಳ್ಳುವಂಥ ಸಂದರ್ಭಗಳು ಬಂದಾಗ ಅವರ ಒಲವುಗಳು ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದವರತ್ತ ಹೋಗುತ್ತವೆಯೋ ಅಥವಾ ಆಂಗ್ಲಭಾಷೆಯಲ್ಲಿ ತಮ್ಮ ಇಡೀ ಶಿಕ್ಷಣವನ್ನು ಪಡೆದವರನ್ನು ಇವರು ಆಯ್ಕೆ ಮಾಡುತ್ತಾರೋ?- ಹೀಗೆ ಪ್ರಶ್ನೆಗಳ ಸುರುಳಿಗಳೇ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಆದರೆ ಅವುಗಳಿಗೆಲ್ಲಾ ಸಾರ್ವತ್ರಿಕ ಸ್ವೀಕೃತಿಯನ್ನು ಪಡೆಯುವಂಥ ಉತ್ತರಗಳನ್ನು ನೀಡುವುದು ಮಾತ್ರ ಅಷ್ಟು ಸುಲಭದ ಕೆಲಸವಲ್ಲ.

ಮೊದಲಿಗೆ, ತಮ್ಮ ಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪಡೆದಂಥ ಅನೇಕರಿಗೆ ತಮ್ಮ ವೃತ್ತಿ ಜೀವನದಲ್ಲಿ ಮೇಲ್ಮುಖ ಚಲನೆಯನ್ನು ಸಾಧಿಸಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ. ಪ್ರೌಢಶಾಲೆಗಳಿಗೆ ಅಥವಾ ಕಾಲೇಜಿನ ಮೆಟ್ಟಿಲೇರುವವರೆಗೆ ತಮ್ಮ ಮಾತೃಭಾಷೆಯಲ್ಲಿಯೇ ವ್ಯಾಸಂಗ ಮಾಡಿದವರು ಇದ್ದಕ್ಕಿದ್ದ ಹಾಗೆ ಇಂಗ್ಲಿಷ್ ಕಲಿತು ಬಿಟ್ಟರೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಯಾವುದೇ ಭಾಷೆಯ ಮೇಲೆ ಹಿಡಿತವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಈ ಹೊತ್ತು ಉನ್ನತ ಹುದ್ದೆಗಳಲ್ಲಿರುವ ಅನೇಕರು ಓದಿದ ಕಾಲಘಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು  ಹಾಗೂ ವಿಶ್ವವಿದ್ಯಾಲಯಗಳ ಸಂಖ್ಯೆಯೇ ಕಡಿಮೆ ಇದ್ದುದರಿಂದಲೂ, ಈ ಸಂಸ್ಥೆಗಳಲ್ಲಿ ಬಹುಪಾಲಿನವು ಆಂಗ್ಲ ಮಾಧ್ಯಮದಲ್ಲೇ ಶಿಕ್ಷಣವನ್ನು ನೀಡುತ್ತಿದ್ದುದರಿಂದಲೂ ಅವರಿಗೆ ಆ ಭಾಷೆಯ ಕಲಿಕೆ ಅಗತ್ಯವೂ, ಅನಿವಾರ್ಯವೂ ಆಗಿತ್ತು. ಅಷ್ಟೇ ಅಲ್ಲ ಬದುಕಿನಲ್ಲಿ ಸಫಲತೆಯನ್ನು ಪಡೆಯಲು ಈಗಿರುವಷ್ಟು ಆಯ್ಕೆಗಳೂ ಆಗಿನ ಕಾಲದಲ್ಲಿರಲಿಲ್ಲ. ಆದ್ದರಿಂದ ವೈಯಕ್ತಿಕ ಮಟ್ಟದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾದರೆ, ಆಂಗ್ಲ ಮಾಧ್ಯಮದಲ್ಲಿ ಅವರು ಪರಿಣತಿ ಅಥವಾ ತರಬೇತಿಯನ್ನು ಪಡೆಯಲೇಬೇಕಿತ್ತು.

ಇಂಗ್ಲಿಷ್ ಭಾಷೆ ಮತ್ತು ಅದರಲ್ಲಿ ಪಡೆದ ಜ್ಞಾನಗಳೆರಡನ್ನೂ ಬಳಸಿಕೊಂಡು, ಅವರಲ್ಲನೇಕರು ತಮ್ಮ ವೃತ್ತಿ ಜೀವನದಲ್ಲಿ ಮೇಲೇರುತ್ತಾ ಹೋದರು. ಹಾಗೆಂದ ಮಾತ್ರಕ್ಕೆ ಇಂಗ್ಲಿಷ್‌ನಿಂದ ಮಾತ್ರ ಬದುಕಿನಲ್ಲಿ ಯಶಸ್ಸು ಗಳಿಸುವುದು ಸಾಧ್ಯವೆಂಬುದು ಇದರ ಅರ್ಥವಲ್ಲ. ಆದರೆ ಆ ಭಾಷೆಯ ಅರಿವು ಮತ್ತು ಬಳಕೆಯಿಂದ ಹಿರಿಯ ತಲೆಮಾರು ಎಂದು ಹೇಳಬಹುದಾದ ಅನೇಕರು ತಮ್ಮ ವೃತ್ತಿ ಬದುಕಿನಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ.

ಹೆಚ್ಚು ಕಡಿಮೆ ಒಂದೇ ಜಾಡಿನಲ್ಲಿ ಮುಂದುವರೆಯುತ್ತಿದ್ದ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸುವಂಥ ಬೆಳವಣಿಗೆಗಳು 2000-2011ರವರೆಗಿನ ಒಂದು ದಶಕದಲ್ಲಿ ಸಂಭವಿಸಿದವು. ಅವುಗಳಲ್ಲಿ ಪ್ರಮುಖವಾದಂಥ ಒಂದು ಬದಲಾವಣೆಯೆಂದರೆ ಈ ವ್ಯವಸ್ಥೆಯೊಳಗೆ ಖಾಸಗಿ ವಲಯದ ಪ್ರವೇಶ ಮತ್ತು ಅದರ ಪರಿಣಾಮವಾಗಿ ಸಂಭವಿಸಿದ ಶಿಕ್ಷಣದ ಉದ್ಯಮೀಕರಣ. ಅದುವರೆಗೂ ಜ್ಞಾನಾರ್ಜನೆ ಮತ್ತು ಅವರವರು ಗಳಿಸಿದ ಡಿಗ್ರಿಗಳನ್ನಷ್ಟೇ ಕೇಂದ್ರೀಕರಿಸುತ್ತಿದ್ದ ಉದ್ಯೋಗ ಕ್ಷೇತ್ರದಲ್ಲಿ ನಾವು ಕಂಡು ಕೇಳದ ಹೊಸ ಹೊಸ ಅವಕಾಶಗಳು ಸೃಷ್ಟಿಯಾದವು. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳೆರಡರ ವ್ಯಾಪ್ತಿಯೂ ಕಣ್ಣು ಕೋರೈಸುವಂಥ ರೀತಿಯಲ್ಲಿ ವಿಸ್ತೃತವಾದಾಗ ಸಹಜವಾಗಿಯೇ ಜನರ ಆಕಾಂಕ್ಷೆಗಳೂ ಗರಿಗೆದರಿದವು.

ಹೊಸ ಶತಮಾನದ ಆರಂಭ ಕಾಲದಲ್ಲಿಯೇ ನಮ್ಮನ್ನು ಆವರಿಸಿಕೊಂಡ ಅವಕಾಶಗಳ ಮಹಾಪೂರವನ್ನು ನಿಭಾಯಿಸಬೇಕಾದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಾದ್ದು ಅವಶ್ಯಕವೆನಿಸಿತು. ಈ ನಿಟ್ಟಿನಲ್ಲಿ ಇಂಗ್ಲಿಷ್ ಭಾಷೆಯ ಜ್ಞಾನ ಅವಶ್ಯವಷ್ಟೇ ಅಲ್ಲ ಅನಿವಾರ್ಯವೂ ಆಯಿತು. ಹಾಗೆ ನೋಡಿದರೆ ಈ ಹೊಸ ಅವಕಾಶಗಳನ್ನರಸಲು ಅಗತ್ಯವಾದ ಜ್ಞಾನ ಬಹುಮಟ್ಟಿಗೆ ಲಭ್ಯವಾಗಿದ್ದೂ ಇಂಗ್ಲಿಷ್‌ನಲ್ಲೇ.

ಆದ್ದರಿಂದಲೇ ಆ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವ ತುಡಿತ ಹೆಚ್ಚಾದದ್ದು. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಖಾಸಗಿ ಶಿಕ್ಷಣ ವಲಯ ದೇಶದಾದ್ಯಂತ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದ್ದೇ ಅಲ್ಲದೆ, ಅಂಥ ಶಾಲೆಗಳ ಹೆಚ್ಚಳವನ್ನು ಜನರಿಂದ ಇಂಗ್ಲಿಷ್ ಶಿಕ್ಷಣಕ್ಕೆ ಹೆಚ್ಚಿದ ಬೇಡಿಕೆಗೆ ಇದು ತನ್ನ ಸ್ಪಂದನವೇನೋ ಎಂಬಂತೆ ಸಮರ್ಥನೆಯನ್ನು ಬೇರೆ ನೀಡಿತು. ಕರ್ನಾಟಕವೂ ಈ ಪರಿಸ್ಥಿತಿಗೆ ಹೊರತಾಗಿರಲಿಲ್ಲ.

ಇಂದಿಗೂ ನಮ್ಮ ರಾಜ್ಯದಲ್ಲೆ ಅಧಿಕ ಸಂಖ್ಯೆಯಲ್ಲಿರುವುದು ಕನ್ನಡ ಮಾಧ್ಯಮ ಶಾಲೆಗಳೇ. ಆದರೆ ವರ್ಷದಿಂದ ವರ್ಷಕ್ಕೆ ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಎರಡು ಪಟ್ಟು ಹೆಚ್ಚಾಗಿದ್ದು, 2007-08ರಲ್ಲಿ 4,467 ರಷ್ಟಿದ್ದ ಇಂಗ್ಲಿಷ್ ಶಾಲೆಗಳು ಕಳೆದ ಶೈಕ್ಷಣಿಕ ವರ್ಷದ ಅಂತ್ಯದ ವೇಳೆಗೆ 9,874ರಷ್ಟಾಗಿದ್ದವು. ಇದೇ ಅವಧಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆಯಲ್ಲಿ ಇಳಿಮುಖವಾಗತೊಡಗಿದ್ದೂ ನಿಜ.

ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಂಡು ಅವುಗಳನ್ನು ಪ್ರೋತ್ಸಾಹಿಸುವುದಕ್ಕೆ ತನ್ನ ಬದ್ಧತೆಯನ್ನು ಪದೇ ಪದೇ ಸರ್ಕಾರ ಘೋಷಿಸುತ್ತಿದ್ದರೂ ಆಂಗ್ಲ ಮಾಧ್ಯಮ ಶಾಲೆಗಳ ಹೆಚ್ಚಳವನ್ನು ಮಾತ್ರ ತಡೆಯಲಾಗುತ್ತಿಲ್ಲ. ಮಾಧ್ಯಮ ವರದಿಯೊಂದರ ಪ್ರಕಾರ 2008ರಿಂದ ರಾಜ್ಯದಲ್ಲಿ ಹೊಸದಾಗಿ ತೆರೆಯಲಾಗಿರುವ 606 ಶಾಲೆಗಳಲ್ಲಿ ಕೇವಲ 23 ಶಾಲೆಗಳು ಮಾತ್ರ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುತ್ತಿರುವಂಥವು.

ಈ ವರದಿಯ ಪ್ರಕಾರ ಭಾರತದ ಐ.ಟಿ. ರಾಜಧಾನಿಯೆಂದೇ ಪ್ರಖ್ಯಾತವಾಗಿರುವ ಬೆಂಗಳೂರಿನಲ್ಲಂತೂ ಕಳೆದೆರಡು ವರ್ಷಗಳಲ್ಲಿ ಒಂದೇ ಒಂದು ಕನ್ನಡ ಮಾಧ್ಯಮ ಶಾಲೆಯೂ ತೆರೆದಿಲ್ಲ. ರಾಜ್ಯದ ಬೇರೆ ಬೇರೆ ನಗರಗಳಲ್ಲೂ ಕನ್ನಡ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದವರಿಗೆ ಮಾತ್ರ ಮೇಲ್ಮುಖ ಸಾಮಾಜಿಕ ಚಲನೆಗೆ ಅವಕಾಶವಿದೆ ಎಂಬ ನಂಬಿಕೆ ದಿನೇ ದಿನೇ ಜನಮಾನಸದಲ್ಲಿ ಭದ್ರವಾಗಿ ಬೇರೂರುತ್ತಿರುವುದರಿಂದಲೇ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ನಗರಗಳಲ್ಲಷ್ಟೇ ಅಲ್ಲ, ಹಳ್ಳಿ ಹಳ್ಳಿಗಳಲ್ಲೂ ಅಂತರರಾಷ್ಟ್ರೀಯ ಶಾಲೆ ಎಂಬ ಶೀರ್ಷಿಕೆಯಡಿ ತಲೆಯೆತ್ತುತ್ತಿವೆ.

2009ರಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆಂಗ್ಲ ಮಾಧ್ಯಮ ಶಾಲೆಗಳನ್ನು ಮುಚ್ಚಲಾಗದೆಂಬ ಆದೇಶವನ್ನು ಹೊರಡಿಸಿದ ಮೇಲಂತೂ ಖಾಸಗಿ ಶಿಕ್ಷಣ ವಲಯಕ್ಕೆ ಹೊಸ ಹುರುಪು ಮೂಡಿತು. ಸರ್ಕಾರದ ಅನುಮತಿಯೇ ಇಲ್ಲದೆ  ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದ್ದ ಖಾಸಗಿ ಸಂಸ್ಥೆಗಳಿಗೆ ಹಾಗೂ ಆ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಅವರ ಉಜ್ವಲ ಭವಿಷ್ಯದ ಕನಸು ಕಾಣುತ್ತಿದ್ದ ಪೋಷಕರಿಗೆ ಹೊರೆ ಇಳಿಸಿಕೊಂಡ ಅನುಭವವಾಯಿತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಸಮಕಾಲೀನ ಭಾರತೀಯ ಸಮಾಜ ಹಾಗೂ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಮಾತೃಭಾಷಾ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ನಾವು ವಿಶ್ಲೇಷಣೆಗೆ ಒಳಪಡಿಸಿದಾಗ ಇದು ಬರೀ ಭಾವನಾತ್ಮಕ ಅಥವಾ ವ್ಯಾವಹಾರಿಕ ದೃಷ್ಟಿಯಿಂದ ಮಾತ್ರ ಚರ್ಚೆಗೆ ಒಳಪಡುವಂಥ ವಿಷಯವಲ್ಲ ಎಂಬುದು ಅರಿವಾಗುತ್ತದೆ. ಪ್ರಾರಂಭಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಬೇಕು ಎಂಬುದರ ಬಗ್ಗೆ ಯಾವ ವಿವಾದವೂ ಇಲ್ಲ.

ಕಲಿಕೆಯಲ್ಲಿ ಆಸಕ್ತಿ ಬೆಳೆಯಬೇಕಾದರೆ ಬೋಧನೆಯ ಭಾಷೆ ಸುಲಭ ಗ್ರಾಹ್ಯವಾಗಬೇಕು ಎನ್ನುವುದೂ ನಿಜ. ಆದರೆ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಒಗ್ಗಿಕೊಂಡು ಮೇಲ್ಮುಖ ಸಾಮಾಜಿಕ ಆರ್ಥಿಕ ಚಲನೆಯನ್ನು ಸಾಧಿಸಲು ಎಲ್ಲರಿಗೂ ಸಮಾನ ಅವಕಾಶಗಳಿರಬೇಕು. ಮಾತೃಭಾಷೆಯಲ್ಲಿಯೇ ಕಲಿಕೆ ಪ್ರಾರಂಭವಾದರೂ ಪ್ರಾಥಮಿಕ ಹಂತದಲ್ಲಿಯೇ ಆಕರ್ಷಕವಾದ ಮತ್ತು ಸರಳವಾದ ವಿಧಾನಗಳನ್ನು ಉಪಯೋಗಿಸಿ ಮಕ್ಕಳಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸುವ ಕೆಲಸ ಪ್ರಾರಂಭವಾಗಬೇಕು.

ಏಕೆಂದರೆ ಈಗಾಗಲೇ ಶ್ರೇಣೀಕೃತವಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಆಂಗ್ಲ ಮಾಧ್ಯಮ ಮತ್ತು ಮಾತೃಭಾಷಾ ಮಾಧ್ಯಮಗಳಲ್ಲಿ ಶಿಕ್ಷಣವನ್ನು ಪಡೆದವರು ಎಂಬ ಮತ್ತೆರಡು ವರ್ಗಗಳು  ಸೃಷ್ಟಿಯಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾಷಾ ಮಾಧ್ಯಮವನ್ನು ಕುರಿತಂತೆ ಸಮಗ್ರ ಹಾಗೂ ಬಹುಮುಖಿ ದೃಷ್ಟಿಕೋನದಿಂದ ಚರ್ಚೆಗಳು ಮತ್ತು ಅಧ್ಯಯನಗಳು ಈಗಲಾದರೂ ನಡೆಯುವಂತಾಗಲಿ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT