ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಮನಸ್ಸುಗಳ ನಡುವೆ ಕೆಲಸದ ಕಷ್ಟ-ಸುಖ

Last Updated 10 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ತಿಪಟೂರು ವಿಭಾಗದಲ್ಲಿಯೂ ರಾಜಕೀಯ ಜೋರಾಗಿತ್ತು. ಒಂದು ಗುಂಪು ಜನತಾ ಪಕ್ಷದಿಂದ ಕಾಂಗ್ರೆಸ್ ಸೇರಿದ್ದ ಟಿ.ಎಂ. ಮಂಜುನಾಥ್ ಕಡೆಯದ್ದು. ಇನ್ನೊಂದು ಹಾಲಿ ಶಾಸಕ ಶಿವಪ್ಪನವರದ್ದು. ಅವರು ಕೂಡ ಅದೇ ಪಕ್ಷದವರೇ. ಸಂಸದ ಲಕ್ಕಪ್ಪ, ಶಿವಪ್ಪ ಜೊತೆಯಾಗಿಯೇ ಇದ್ದರು.

ಗುಂಡೂರಾಯರು ಮುಖ್ಯಮಂತ್ರಿ ಆಗಿದ್ದ ಕಾಲವದು. ಶಾಸಕರ ಸ್ವಂತ ಊರಾದ ಸೂಗೂರಿನಲ್ಲಿ ಆಸ್ಪತ್ರೆ, ಶಾಲೆಯ ಕಟ್ಟಡ ಉದ್ಘಾಟನೆ ಮಾಡುವ ಸಮಾರಂಭ ನಿಗದಿಯಾಯಿತು. ಒಂದೇ ಪಕ್ಷಕ್ಕೆ ಸೇರಿದ್ದ ಎರಡು ಬಣಗಳ ನಡುವೆಯೇ ತೀವ್ರ ಭಿನ್ನಾಭಿಪ್ರಾಯ ಇತ್ತು. ಮುಖ್ಯಮಂತ್ರಿಯನ್ನು ಶಾಲಾ ಕಟ್ಟಡ ಉದ್ಘಾಟನೆ ಮಾಡಲು ಬರಲು ಬಿಡುವುದಿಲ್ಲ ಎಂದು ಒಂದು ಗುಂಪು ಪಟ್ಟು ಹಿಡಿಯಿತು.

ಆ ವಿಷಯ ಮುಖ್ಯಮಂತ್ರಿಗೂ ಗೊತ್ತಾಗಿ, ಡಿಐಜಿವರೆಗೆ ಮುಟ್ಟಿತು. ಆಗ ಡಿಐಜಿ ಆಗಿದ್ದ ರಘುರಾಮನ್ ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡರು. ಮುಖ್ಯಮಂತ್ರಿ ಶಾಲಾ ಕಟ್ಟಡ ಉದ್ಘಾಟಿಸಲು ಬಂದರೆ ಏನಾದರೂ ತೊಂದರೆ ಆಗಬಹುದೇ ಎಂದು ವಿಚಾರಿಸಿದರು. ಪರಿಸ್ಥಿತಿಯ ಅರಿವು ಇದ್ದ ನಾನು, `ಎರಡು ಬಣಗಳ ನಡುವೆ ಒಡಕು ಇರುವುದೇನೋ ನಿಜ.

ಆದರೆ ಮುಖ್ಯಮಂತ್ರಿ ಬಂದರೆ ಅವರಿಗೆ ಏನೂ ತೊಂದರೆ ಆಗದಂತೆ ನಿಭಾಯಿಸಬಲ್ಲೆವು. ಒಬ್ಬ ಮುಖ್ಯಮಂತ್ರಿ ತಾವೇ ಇಷ್ಟಪಟ್ಟು ಒಳ್ಳೆಯ ಕೆಲಸಕ್ಕೆ ಬರುವಾಗ ಅವರಿಗೆ ಸೂಕ್ತ ರಕ್ಷಣೆ ಕೊಡದೇ ಇದ್ದರೆ ನಮ್ಮ ಇಲಾಖೆ ಇದ್ದೂ ಪ್ರಯೋಜನವಿಲ್ಲ' ಎಂದು ಹೇಳಿದೆ. `ಅಲ್ಲಿ ಏನಾದರೂ ಸಮಸ್ಯೆಯಾದರೆ ಅದಕ್ಕೆ ನೀನೇ ಜವಾಬ್ದಾರ' ಎಂದು ಡಿಐಜಿ ನನ್ನನ್ನು ಎಚ್ಚರಿಸಿದರು. ಸಹಾಯಕ್ಕಾಗಿ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಎರಡು ತುಕಡಿಗಳನ್ನೂ ಕಳುಹಿಸಿಕೊಟ್ಟರು.

ಹಿಂದೆ ಟಿ.ಎಂ. ಮಂಜುನಾಥ್ ಜನತಾ ಪಕ್ಷದಲ್ಲಿದ್ದರು. ಆಗ ಇಂದಿರಾಗಾಂಧಿ ತಿಪಟೂರಿಗೆ ಭೇಟಿ ನೀಡಿ, ಸಾರ್ವಜನಿಕ ಭಾಷಣ ಮಾಡಿದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿತ್ತು. ಕೆ.ವಿ.ಆರ್. ಟ್ಯಾಗೋರ್ ಡಿಎಸ್‌ಪಿ ಆಗಿದ್ದ ದಿನಮಾನ ಅದು. ಅವರು ಗುರುತಿಸಿದ ಆ ಪ್ರಕರಣದ ಆರೋಪಿಗಳಲ್ಲಿ ಮಂಜುನಾಥ್ ಹಾಗೂ ಅವರ ಸಂಗಡಿಗರು ಪ್ರಮುಖ ಆರೋಪಿಗಳಾಗಿದ್ದರು. ನಮ್ಮ ಸುದೈವವೋ ಏನೋ, ಮುಖ್ಯಮಂತ್ರಿ ಗುಂಡೂರಾಯರು ಸೂಗೂರಿಗೆ ಬರಬೇಕಿದ್ದ ದಿನವೇ ಆ ಪ್ರಕರಣದ ವಿಚಾರಣೆಗಾಗಿ ಮಂಜುನಾಥ್ ಹಾಗೂ ಸಂಗಡಿಗರು ಕೋರ್ಟ್‌ಗೆ ಹಾಜರಾಗಬೇಕಿತ್ತು. ಹಾಲಿ ಶಾಸಕರ ಪರವಾಗಿ ಇದ್ದ ವಕೀಲರೇ ತಲೆ ಓಡಿಸಿ ಅದೇ ದಿನವೇ ವಿಚಾರಣೆ ನಡೆಯುವಂತೆ ಮಾಡಿದ್ದರೆಂಬುದು ಆಮೇಲೆ ಗೊತ್ತಾಯಿತು.

1980ರಲ್ಲಿ ವೀರೇಂದ್ರ ಪಾಟೀಲರ ಜೊತೆಗೆ ಮಂಜುನಾಥ್ ಕೂಡ ಕಾಂಗ್ರೆಸ್ ಸೇರಿದರು. ಆನಂತರವೂ ಅದೇ ಪಕ್ಷಕ್ಕೆ ಸೇರಿದ್ದ ಸ್ಥಳೀಯ ನಾಯಕರ ಜೊತೆ ಅವರ ಸಂಬಂಧವೇನೂ ಸುಧಾರಿಸಲಿಲ್ಲ.

ಮುಖ್ಯಮಂತ್ರಿ ಸೂಗೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸಬಹುದು ಎಂಬ ಕಾರಣಕ್ಕೆ ನಾವು ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡೆವು. ಪತ್ರ ಬರೆದು ತುಮಕೂರಿನಿಂದ ನಾಲ್ಕೈದು ವೈದ್ಯರನ್ನು ಕರೆಸಿ, ಅಕಸ್ಮಾತ್ ಮುಗ್ಧ ಜನರಿಗೆ ಗಾಯಗಳಾದರೆ ತಕ್ಷಣವೇ ಚಿಕಿತ್ಸೆ ಕೊಡಿಸಬೇಕೆಂದು ವ್ಯವಸ್ಥೆ ಮಾಡಿದೆವು. ಮರಣೋತ್ತರ ಪರೀಕ್ಷೆ ಮಾಡುವ ಪರಿಸ್ಥಿತಿ ಬಂದರೂ ಬರಬಹುದು ಎಂದು ಅದಕ್ಕಾಗಿಯೇ ಇಬ್ಬರು ವೈದ್ಯರನ್ನು ವಿಶೇಷವಾಗಿ ಅನುಮತಿ ಪಡೆದು, ಕರೆಸಿಕೊಂಡೆವು.

ನಾವು ಇಷ್ಟೆಲ್ಲಾ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವ ವಿಷಯ ಗೊತ್ತಾದ ಮೇಲೆ ಸಮಾರಂಭಕ್ಕೆ ಅಡ್ಡಿ ಉಂಟುಮಾಡಲು ಹುನ್ನಾರ ಮಾಡುತ್ತಿದ್ದ ಅನೇಕರ ಜಂಘಾಬಲ ಉಡುಗಿಹೋಯಿತು. ಅದು ನಮ್ಮ ಕರ್ತವ್ಯವಾಗಿತ್ತಷ್ಟೆ. ಆಸ್ಪತ್ರೆ, ಶಾಲೆ ಕಟ್ಟಡಗಳನ್ನು ಉದ್ಘಾಟಿಸಲು ಮುಖ್ಯಮಂತ್ರಿ ಹೆಲಿಕಾಪ್ಟರ್‌ನಲ್ಲಿ ಬಂದರು. ಕಟ್ಟಡಗಳನ್ನು ಉದ್ಘಾಟಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ನಿರಾತಂಕವಾಗಿ ಮಾತನಾಡಿದರು. ಕಿಂಚಿತ್ ತೊಂದರೆಯೂ ಇಲ್ಲದೆ ಸಮಾರಂಭ ಸುಗಮವಾಗಿ ನಡೆಯಿತು. ತಿಪಟೂರು ಉಪ ವಿಭಾಗದ ಪೊಲೀಸರ ಕೆಲಸಕ್ಕೆ ಶ್ಲಾಘನೆಯೂ ವ್ಯಕ್ತವಾಯಿತು. ನಮಗೆಲ್ಲಾ ಅದು ಹೆಮ್ಮೆಯ ಸಂಗತಿ.
                                                                   ****
ಕಮ್ಯುನಿಸ್ಟ್ ಪಕ್ಷಗಳು, ಕಾರ್ಮಿಕ ಸಂಘಟನೆಗಳು ಬಲವಾಗಿದ್ದ ಕಾಲವೂ ಅದಾಗಿತ್ತು. ಜನವರಿ 20, 1982ರಲ್ಲಿ ಆ ಸಂಘಟನೆಗಳೆಲ್ಲಾ ಭಾರತ್ ಬಂದ್‌ಗೆ ಕರೆಕೊಟ್ಟವು. ಅಂದು ಎಲ್ಲಾ ಕೈಗಾರಿಕೆ, ಕಾರ್ಖಾನೆಗಳ ಕಾರ್ಯ ಸ್ಥಗಿತಗೊಳ್ಳಬೇಕು ಎಂದು ಎಚ್ಚರಿಸಿದ್ದವು. ನಾನು ಕೆಲಸ ಮಾಡುತ್ತಿದ್ದ ಪೊಲೀಸ್ ಉಪ ವಿಭಾಗದ ವ್ಯಾಪ್ತಿಯಲ್ಲಿ ಇದ್ದದ್ದು ಒಂದೇ ಕಾರ್ಖಾನೆ; ಅಮ್ಮಸಂದ್ರದ ಮೈಸೂರು ಸಿಮೆಂಟ್ ಫ್ಯಾಕ್ಟರಿ. ಅಲ್ಲಿ ಕಾರ್ಮಿಕ ಸಂಘಟನೆ ಬಹಳ ಶಕ್ತವಾಗಿತ್ತು. ಬಿ.ಡಿ. ನಾಣಯ್ಯ ಎಂಬ ಕೊಡಗು ಮೂಲದವರು. ಆಗ ಅಲ್ಲಿ ಉಪಾಧ್ಯಕ್ಷರಾಗಿದ್ದರು. ಅವರ ಜೊತೆ ಸಮಾಲೋಚನೆ ನಡೆಸಿ, ಆ ದಿನ ಏನೂ ತೊಂದರೆಯಾಗದಂತೆ ಕಾರ್ಖಾನೆಯ ಕೆಲಸಗಳನ್ನು ಹೇಗೆ ನಿರ್ವಹಿಸಬೇಕು ಎಂದು ಒಂದು ಯೋಜನೆಯನ್ನು ನಾವೆಲ್ಲಾ ರೂಪಿಸಿದೆವು.

ಸಿಮೆಂಟ್ ಫ್ಯಾಕ್ಟರಿಯಲ್ಲಿ ಅಗತ್ಯ ಸೇವೆಯ ವ್ಯಾಪ್ತಿಗೆ ಒಳಪಟ್ಟಿದ್ದ ಸುಮಾರು 120 ಕಾರ್ಮಿಕರಿದ್ದರು. ಒಂದು ದಿನದ ಮಟ್ಟಿಗೆ ಅವರೆಲ್ಲರಿಗೆ `ಆಫೀಸರ್'ಗಳಾಗಿ ಬಡ್ತಿ ನೀಡಿದೆವು. ಹಾಗೆ ಮಾಡಿದಾಗ ಅವರು ಕಾರ್ಮಿಕ ಸಂಘಟನೆಯಿಂದ ಅಧಿಕೃತವಾಗಿ ಹೊರಗೆ ಉಳಿದಂತೆ. ಆಫೀಸರ್ ಆದವರು ಕಾರ್ಮಿಕ ಸಂಘಟನೆಯ ಸದಸ್ಯರಾಗಲು ನಿಯಮಾವಳಿಗಳ ಪ್ರಕಾರ ಸಾಧ್ಯವಿಲ್ಲ.

ಹಾಗೆ ಬಡ್ತಿ ಕೊಟ್ಟ ಕಾರ್ಮಿಕರನ್ನು ಹಿಂದಿನ ರಾತ್ರಿಯೇ ಕಾರ್ಮಿಕ ಸಂಘಟನೆಯ ನಾಯಕರಿಂದ ದೂರ ಇರುವಂತೆ ಕಾರ್ಖಾನೆಯಲ್ಲೇ ಉಳಿಸಿದೆವು. ರಾತ್ರಿಯೆಲ್ಲಾ ಅಲ್ಲೇ ಕ್ಯಾಂಪ್ ಮಾಡಿದ್ದ ನಾವು, ಬೆಳಿಗ್ಗೆ ಬಂದ್ ಯಶಸ್ವಿಗೊಳಿಸಲು ಬಂದ ಕಾರ್ಮಿಕ ಮುಖಂಡರನ್ನು ಬಂಧಿಸಿದೆವು. ಒಳಗೆ ಹಿಂದಿನ ದಿನ ರಾತ್ರಿಯಿಂದಲೇ ಇದ್ದ, ಒಂದು ದಿನದ ಮಟ್ಟಿಗೆ ಬಡ್ತಿ ಪಡೆದ ಕಾರ್ಮಿಕರಿಂದ ಆವತ್ತು ಕೆಲಸ ನಡೆಯಿತು. ಬಹುಶಃ ಆ ದಿನ ಇಡೀ ದೇಶದಲ್ಲಿ ಬಂದ್ ನಡುವೆಯೂ ಎಂದಿನಂತೆ ಉತ್ಪಾದನೆ ಮಾಡಲು ಸಾಧ್ಯವಾದ ಏಕೈಕ ಫ್ಯಾಕ್ಟರಿ ಅದು.

ಮೈಸೂರು ಸಿಮೆಂಟ್ಸ್ ಬಿರ್ಲಾ ಸಮೂಹದ ಕಂಪೆನಿ. ಆಗ ಅದರ ಅಧ್ಯಕ್ಷರಾಗಿದ್ದವರು ಘನಶಾಮ್ ದಾಸ್ ಬಿರ್ಲಾ (ಜಿ.ಡಿ. ಬಿರ್ಲಾ). ಅವರ ಒಡೆತನದಲ್ಲಿ ಹಲವು ಕಂಪೆನಿಗಳಿದ್ದವು. ಅವರು ವಿಶ್ವದ ಯಾವುದೇ ಮೂಲೆಯಲ್ಲಿ ಇರಲಿ, ಟೆಲೆಕ್ಸ್ ಮೂಲಕ ಪ್ರತಿದಿನ ಎಲ್ಲಾ ಫ್ಯಾಕ್ಟರಿಗಳ ಆಯಾ ದಿನದ ಉತ್ಪಾದನೆಯ ವಿವರ ಪಟ್ಟಿ ತಲುಪುತ್ತಿತ್ತು. ಯಾವ್ಯಾವ ಫ್ಯಾಕ್ಟರಿಯ ಉತ್ಪಾದನೆ ಎಷ್ಟು ಎಂಬುದನ್ನು ಅವರು ಇದ್ದಲ್ಲಿಯೇ ತಿಳಿದುಕೊಳ್ಳುತ್ತಿದ್ದರು.

ಭಾರತ್ ಬಂದ್ ನಡೆದ ಆ ದಿನ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದ್ದರು. ಎಂದಿನಂತೆ ಟೆಲೆಕ್ಸ್ ಮೂಲಕ ದೇಶದ ಎಲ್ಲಾ ಫ್ಯಾಕ್ಟರಿಗಳ ದಿನದ ಉತ್ಪಾದನೆಯ ಯಾದಿ ಅವರಿಗೆ ತಲುಪಿತು. ಬಂದ್ ಇದ್ದದ್ದರಿಂದ ಪಟ್ಟಿಯ ಉದ್ದಕ್ಕೂ `ಉತ್ಪಾದನೆಯಿಲ್ಲ' ಎಂಬ ಒಕ್ಕಣಿಕೆಗಳೇ ಇದ್ದವು. ಆದರೆ, ಒಂದು ಫ್ಯಾಕ್ಟರಿಯಲ್ಲಿ ಮಾತ್ರ ಎಂದಿನಂತೆ ಉತ್ಪಾದನೆ ನಡೆದದ್ದು ಅವರ ಕಣ್ಣಿಗೆ ಬಿತ್ತು. ಅದು ಅಮ್ಮಸಂದ್ರದ ಮೈಸೂರು ಸಿಮೆಂಟ್ ಫ್ಯಾಕ್ಟರಿ. ಆ ದಿನ ಆ ಫ್ಯಾಕ್ಟರಿ ಹೊರತುಪಡಿಸಿ ಬಿರ್ಲಾ ಸಮೂಹದ ಯಾವ ಫ್ಯಾಕ್ಟರಿಯಲ್ಲೂ ಉತ್ಪಾದನೆ ಆಗಿರಲಿಲ್ಲ. ಅಲ್ಲಿ ಮಾತ್ರ ಅದು ಸಾಧ್ಯವಾದದ್ದು ಹೇಗೆ ಎಂದು ಮೆಂಡೋಲಿಯಾ ಎಂಬ ಬಿರ್ಲಾ ಸಮೂಹದ ನಿರ್ದೇಶಕರನ್ನು ಅವರು ಕೇಳಿದರು. ಮೈಸೂರು ಸಿಮೆಂಟ್ಸ್ ಅಧ್ಯಕ್ಷರಲ್ಲಿ ಪರಿಸ್ಥಿತಿಯ ಸಂಪೂರ್ಣ ವಿವರವನ್ನು ಕೇಳಿದ ಮೆಂಡೋಲಿಯಾ, ಬಿರ್ಲಾ ಅವರಿಗೆ ವಿಷಯ ಮುಟ್ಟಿಸಿದರು.

`ಒಬ್ಬ ತರುಣ ಐಪಿಎಸ್ ಅಧಿಕಾರಿಯ ಜಾಗ್ರತೆ, ಯೋಚನೆಯಿಂದ ಇದು ಸಾಧ್ಯವಾಯಿತು' ಎಂದು ಮೆಂಡೋಲಿಯಾ ಹೇಳಿದರಂತೆ. ನನಗೆ ಈ ವಿಚಾರ ಗೊತ್ತಾದದ್ದು ಒಂದು ತಿಂಗಳು ತಡವಾಗಿ.

ಜಿ.ಡಿ. ಬಿರ್ಲಾ ಅವರು ನನಗೆ ವೈಯಕ್ತಿಕ ಶ್ಲಾಘನೆ ಪತ್ರ ಕಳುಹಿಸಿಕೊಟ್ಟರು. ಅಂದು ಮೊದಲು ಅವರಿಗೆ ನಾನು ಪರಿಚಿತನಾದದ್ದು. ಇಂದಿಗೂ ಬಿರ್ಲಾ ಸಮೂಹದವರ ಜೊತೆ ನನ್ನ ಬಾಂಧವ್ಯ ಚೆನ್ನಾಗಿದೆ. ಕಲ್ಯಾಣನಿಧಿಗೆ ಹಣ ಸಂಗ್ರಹಿಸಲೆಂದು ತುಮಕೂರು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ನಾವೆಲ್ಲಾ ನಟ ರಾಜ್‌ಕುಮಾರ್ ಅವರನ್ನು ಕರೆಸಿ, ಒಂದು ಕಾರ್ಯಕ್ರಮ ಮಾಡಿದೆವು. ಅದಕ್ಕೆ ಐದು ಸಾವಿರ ರೂಪಾಯಿ ಧನ ಸಹಾಯ ನೀಡುವಂತೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕೇಳಿಕೊಂಡಾಗ, ಬಿರ್ಲಾ ಸಮೂಹದವರು ಕೃತಜ್ಞತಾ ಭಾವದಿಂದ ಒಂದೂಕಾಲು ಲಕ್ಷ ರೂಪಾಯಿ ಕೊಟ್ಟರು. ಪೊಲೀಸರಾಗಿ ನಾವು ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಸಮಾಜದ ಹಿತದೃಷ್ಟಿಯಿಂದ ಇನ್ನಷ್ಟು ಒಳಿತಾಗುತ್ತದೆ ಎಂಬುದಕ್ಕೆ ಇದು ಉದಾಹರಣೆಯಷ್ಟೆ.

ಮುಂದಿನ ವಾರ
ಕೋಮುಗಲಭೆ ಒಡ್ಡುವ ಸವಾಲುಗಳು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT